ಜಾಗತೀಕರಣ, ಉದಾರೀಕರಣ, ಖಾಸಗೀಕರಣ! ಏನು ಮಾಯವೋ! ಏನು ಮರ್ಮವೋ!

‘‘ವಿಶ್ವವೇ ಒಂದು ಕುಟುಂಬ’’ ಎಂದು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಜನವರಿ 23ರಂದು ಮಾತನಾಡಿದ್ದಾರೆ. ಯಾರಿಗೆ ಸೇರಿದೆ ಆ ವಿಶ್ವ!, ಯಾರಿಗೆ ಅದು ಒಂದು ಕುಟುಂಬ! ಎಂದು ಅವರು ಸ್ಪಷ್ಟಪಡಿಸದಿದ್ದರೂ ನಾವಂತೂ ಸ್ಪಷ್ಟ ಪಡಿಸಿಕೊಳ್ಳಲೇಬೇಕಲ್ಲವೇ? ಅಲ್ಲಿ ಜನಸಾಮಾನ್ಯರಿಗೆ ಜಾಗವಿಲ್ಲ. ಅದು ಕೆಲವೇ ಕಾರ್ಪೊರೇಟ್‌ಗಳ ಕುಟುಂಬ ಅಂತ ಈಗಲಾದರೂ ಅರ್ಥ ಮಾಡಿಕೊಳ್ಳಬೇಡವೇ?
ಜಾಗತೀಕರಣ, ಜಗತ್ತೇ ಒಂದು ಹಳ್ಳಿ, ಗ್ಲೋಬಲೈಸೇಶನ್, ಗ್ಲೋಬಲ್ ವಿಲೇಜು, ಜಾಗತಿಕ ಅಭಿವೃದ್ಧಿ, ಉದಾರೀಕರಣ, ಖಾಸಗೀಕರಣ, ಈ ಪದಗಳೆಲ್ಲಾ ಎರಡೂವರೆ ದಶಕಗಳ ಹಿಂದೆ ಈ ದೇಶದ ಮಧ್ಯಮ ವರ್ಗದ ಒಂದು ದೊಡ್ಡ ಸಮೂಹಕ್ಕೆ ರೋಮಾಂಚನವನ್ನು ಉಂಟು ಮಾಡಿ ಭಾರೀ ಭರವಸೆಗಳನ್ನು ಮೂಡಿಸಿದ್ದಂತಹವು. ಅದರ ಜೊತೆಯಲ್ಲೇ ಹಲವು ಗಂಭೀರವಾದ ಚರ್ಚೆಗಳನ್ನೂ ಹುಟ್ಟು ಹಾಕಿತ್ತು. ಇವೆಲ್ಲಾ ಆಗಿ ಎರಡೂವರೆ ದಶಕಗಳು ಕಳೆದಿವೆ. ಈ ಮಧ್ಯೆ ಅಂತರ್ಜಾಲ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಗಳ ಅಭಿವೃದ್ಧಿಗಳನ್ನು ಭಾರಿ ಸಾಮಾಜಿಕ ಕ್ರಾಂತಿಗಳು ಎಂಬ ಮಟ್ಟದಲ್ಲಿ, ಜನಸಾಮಾನ್ಯರಿಗೆ ಭಾರೀ ಅವಕಾಶಗಳ ಸುರಿಮಳೆಯನ್ನೇ ಸುರಿಸುತ್ತವೆ ಎಂದೆಲ್ಲಾ ಬಿಂಬಿಸಲಾಗಿತ್ತು. ಆರಂಭದಲ್ಲಿ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹತ್ತು ಹಲವು ಅವಕಾಶಗಳನ್ನು ತೆರೆದಿಟ್ಟಿದ್ದು ನಿಜವೂ ಕೂಡ. ಹಾರ್ಡ್‌ವೇರ್ ಕಂಪೆನಿಗಳು, ಸಾಫ್ಟ್‌ವೇರ್ ಕಂಪೆನಿಗಳು, ಔಟ್ ಸೋರ್ಸಿಂಗ್ ಕಂಪೆನಿಗಳು, ಕಾಲ್‌ಸೆಂಟರ್‌ಗಳು, ಇಂಟರ್‌ನೆಟ್ ಕೇಂದ್ರಗಳು, ಜೈವಿಕ/ತಳಿವಿಜ್ಞಾನ ಕಂಪೆನಿಗಳು ಹೀಗೆ ಹಲವು ರೀತಿಗಳಲ್ಲಿ ಯುವ ಸಮೂಹವನ್ನು ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದ್ದವು. ನಗರ ಕೇಂದ್ರಿತ ವಿದ್ಯಾವಂತ ಯುವಸಮೂಹವಂತೂ ಸಂತೋಷ ಮತ್ತು ರೋಮಾಂಚನಗಳಿಂದ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಥಳುಕು ಬಳುಕುಗಳ ಸಂಭ್ರಮಗಳಿಗೆ ಹಲವು ವಿಧದ ಆಯಾಮಗಳನ್ನೇ ಒದಗಿಸಿತ್ತು. ಮದುವೆ ಆದರೆ ಸಾಫ್ಟ್‌ವೇರ್ ಇಂಜಿನಿಯರನ್ನೇ ಆಗೋದು ಎನ್ನುವ ಓದಿದ ಹುಡುಗಿಯರು, ಹಾಗೇನೆ ಅಳಿಯ ಸಾಫ್ಟ್‌ವೇರ್ ಇಂಜಿನಿಯರೇ ಆಗಿರಬೇಕು ಎನ್ನುವ ಹುಡುಗಿಯರ ತಂದೆತಾಯಿಗಳೂ ಇದ್ದರು. ಮೊಬೈಲು, ಸ್ಮಾರ್ಟ್‌ಫೋನ್‌ಗಳು, ಗ್ಯಾಜೆಟ್‌ಗಳು ಇತ್ಯಾದಿಗಳು ಬಂದಿದ್ದು ಕೂಡ ಜಾಗತಿಕ ಕಾರ್ಪೊರೇಟ್‌ಗಳ ಅಗತ್ಯದ ಕಾರಣದಿಂದಲೇ ಹೊರತು ಜನಸಾಮಾನ್ಯರಿಗೆ ತಂತ್ರಜ್ಞಾನ ದೊರೆಯಬೇಕೆಂದಲ್ಲ ಎನ್ನುವುದು ಈಗ ಅರ್ಥವಾಗುವಂತಹದ್ದೇ ತಾನೆ.
ಆದರೆ ಈಗಿನ ಸ್ಥಿತಿ ಬೇರೆಯೇ ಆಗಿದೆ. ಆರಂಭದಲ್ಲಿ ಇದ್ದಂತಹ ರೋಮಾಂಚನವಾಗಲೀ, ಭರವಸೆಗಳಾಗಲೀ ಈಗ ಉಳಿದಿಲ್ಲವೆನ್ನೋದು ವಾಸ್ತವ. ಇದ್ದ ಅವಕಾಶಗಳೂ ಕೂಡ ಇಲ್ಲದಾಗುತ್ತಿರುವ, ಭವಿಷ್ಯದ ಬಗ್ಗೆ ತೀವ್ರ ಆತಂಕಗಳು ಮನೆಮಾಡಿರುವ ಸಂದರ್ಭ ಇದಾಗಿದೆ. ತೀವ್ರವಾಗುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ; ವೆಚ್ಚ ಕಡಿತ, ಸಾಮರ್ಥ್ಯ ಕೊರತೆಗಳ ನೆಪಗಳಲ್ಲಿ ನೌಕರರನ್ನು ಹೊರದಬ್ಬುವುದು; ‘ಲೇಆಫ್’ಗಳೆಂದು ಹೇಳಿ ಕಂಪೆನಿಗಳನ್ನೇ ಮುಚ್ಚುವುದು, ‘ಆಟೋಮೇಷನ್’ ಎಂಬ ಮೋಹಕ ಪದದಡಿಯಲ್ಲಿ ವ್ಯಾಪಕ ರೊಬೊಟೀಕರಣಗಳು ನಡೆಯುತ್ತಿವೆ. ಇವುಗಳಿಂದಾಗಿ ಲಕ್ಷಾಂತರ ಉದ್ಯೋಗಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ನಡೆಯುತ್ತಿರುವ ವಿದ್ಯಮಾನವಾಗಿದೆ. ಇದರ ಮಧ್ಯೆ 2008ರಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿತ್ತು. ಅಮೆರಿಕ, ಯೂರೋಪು, ಜಪಾನ್ ಮೊದಲಾದ ದೇಶಗಳು ಇದರಿಂದ ಹೊರಬರಲು ಇನ್ನೂ ಪ್ರಯಾಸ ಪಡುತ್ತಿವೆ. ಹಲವು ದೇಶಗಳ ಆರ್ಥಿಕತೆಗಳು ಋಣಾತ್ಮಕ ಬೆಳವಣಿಗೆಯಲ್ಲಿವೆ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ. 2ರಷ್ಟು ಬೆಳವಣಿಗೆ ಕಾಣಿಸಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್‌ಡಮ್, ಜರ್ಮನಿಗಳಂತಹ ದೇಶಗಳು ನಿಂತಿವೆ. ಈ ದೇಶಗಳ ಮೇಲೆ ಅವಲಂಬಿತವಾಗಿರುವ ಭಾರತ ಶೇ. 9ರಷ್ಟು ಅಭಿವೃದ್ಧಿದರ ಆಗ ದಾಖಲಿಸಿತ್ತು. ಆದರೆ ಇದೀಗ ಭಾರತದ ವಾರ್ಷಿಕ ಆರ್ಥಿಕ ಅಭಿವೃದ್ಧಿದರ ಶೇ. 5ರ ಆಸುಪಾಸಿಗೆ ಇಳಿದಿದೆ. ಕೃಷಿ, ಕೈಗಾರಿಕೆ, ವ್ಯಾಪಾರ ವಹಿವಾಟುಗಳು ಇನ್ನಿಲ್ಲದಂತೆ ನೆಲ ಕಚ್ಚುತ್ತಿವೆೆ. ಉದ್ಯೋಗಾವಕಾಶಗಳು ಸೃಷ್ಟಿಯಾಗುವುದು ಹೋಗಲಿ ಇರುವ ಉದ್ಯೋಗಾವಕಾಶಗಳು ಕೂಡ ಮಾಯವಾಗುತ್ತಿವೆ. ಬಹುತೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದ ಅನೌಪಚಾರಿಕ ಹಾಗೇನೇ ಅಸಂಘಟಿತ ಕ್ಷೇತ್ರ ಇಂದು ಭಾರೀ ಹೊಡೆತಗಳನ್ನು ತಿನ್ನು ತ್ತಿದ್ದು ಅದರ ಪರಿಣಾಮ ಜನಜೀವನದ ಮೇಲೆ ಗಂಭೀರವಾಗಿದೆ. ಇದೇ ಸಂದರ್ಭಕ್ಕೇ ನೋಟು ಅಮಾನ್ಯ ಮಾಡಿದ್ದರಿಂದ ಸುಡುಬಿಸಿ ಬಾಣಲೆಯಿಂದ ಉರಿಯು ತ್ತಿರುವ ಬೆಂಕಿಗೆ ಅನ್ನೋ ಪರಿಸ್ಥಿತಿ ಜನರದ್ದು. ಜಿಎಸ್‌ಟಿ ಬೇರೆ ಹೇರಿ ಸಾಮಾನ್ಯ ಮತ್ತು ವ್ಯಾಪಾರ ವಹಿವಾಟುಗಳು ಥಂಡಾ ಆಗಿ ಕೂತಿವೆ.
ಶೇ.82ರಷ್ಟು ಜಾಗತಿಕ ಸಂಪತ್ತು ಜಗತ್ತಿನ ಶೇ. 1ರಷ್ಟು ಕಾರ್ಪೊರೇಟ್‌ಗಳ ಬಳಿ ಸಂಗ್ರಹವಾಗಿದೆ ಎಂದು ‘ಆಕ್ಸ್ ಫಾಮ್’ ಎಂಬ ಹಕ್ಕುಗಳ ಬಗೆಗಿನ ಅಂತರ್‌ರಾಷ್ಟ್ರೀಯ ಸಂಸ್ಥೆ ಬಿಡುಗಡೆಗೊಳಿಸಿದ ವಾರ್ಷಿಕ ವರದಿಯಲ್ಲಿ ಹೇಳಿದೆ. ಅದೇ ವರದಿ ಭಾರತದ ಬಗ್ಗೆ ಹೇಳುತ್ತಾ ದೇಶದಲ್ಲಿ 2017ನೇ ಸಾಲಿನಲ್ಲಿ ಉತ್ಪತ್ತಿಯಾದ ದೇಶದ ಒಟ್ಟು ಸಂಪತ್ತಿನ ಶೇ. 73ರಷ್ಟು ಕೇವಲ ಶೇ. 1ರಷ್ಟಿರುವ ಭಾರೀ ಶ್ರೀಮಂತ ಕಾರ್ಪೊರೇಟ್‌ಗಳ ಕೈಯಲ್ಲಿ ಸಂಗ್ರಹವಾಗಿದೆ ಎಂದು ಹೇಳಿದೆ. ಕಳೆದ ವರ್ಷ ಇದು ಶೇ. 58ರಷ್ಟಿತ್ತು. 2017ರಲ್ಲಿ ಶೇ. 1ರಷ್ಟಿರುವ ಭಾರೀ ಶ್ರೀಮಂತರ ಬಳಿ 20.9ಲಕ್ಷ ಕೋಟಿಗಳಷ್ಟು ಸಂಪತ್ತು ಸಂಗ್ರಹವಾಗಿದೆ. ಅಂದರೆ ಅದು ಕೇಂದ್ರ ಸರಕಾರದ 2017-18ರ ಒಟ್ಟು ಆಯವ್ಯಯದಷ್ಟು (ಬಜೆಟ್) ಎಂದೂ ಸಹ ವರದಿಯಲ್ಲಿ ಹೇಳಲಾಗಿದೆ.
ಜಾಗತೀಕರಣ ಜಾರಿಯಾದ ನಂತರದಲ್ಲಿ ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾಗಳಲ್ಲಿ ಯುದ್ಧ, ಅಂತರ್ಯುದ್ಧಗಳು ಶುರುವಾಗಿ ಈಗಲೂ ಮುಂದುವರಿಯುತ್ತಿವೆ. ಫೆಲೆಸ್ತೇನಿನ ಮೇಲಿನ ಆಕ್ರಮಣ ಈಗಲೂ ಮುಂದುವರಿಯುತ್ತಿದೆ. ಅಮೆರಿಕದ ವರ್ಲ್ಡ್‌ಟ್ರೇಡ್ ಸೆಂಟರ್‌ನ ಮೇಲೆ ದಾಳಿ ನಡೆದು, ಅದರ ನೆಪದಲ್ಲಿ ಭಯೋತ್ಪಾದನೆ ವಿರುದ್ಧ ಯುದ್ಧವನ್ನು ಘೋಷಿಸಿದ ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು ಮುಸ್ಲಿಮರ ಮೇಲೆ ಯುದ್ಧ ಮಾಡುತ್ತಾ ಬಂದವು. ಭಾರತವೂ ಅದರ ಜೊತೆಗೂಡಿತು. ಇದರ ಪರಿಣಾಮ ಅರಬ್, ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ನೈಜೀರಿಯ ಮೊದಲಾದ ಭಾಗಗಳಲ್ಲಿ ಲಕ್ಷಗಳ ಸಂಖ್ಯೆಗಳಲ್ಲಿ ಜನರ ಮಾರಣ ಹೋಮವಾಯಿತು. ಹಲವು ಸಶಸ್ತ್ರ ಬಂಡುಕೋರ ಗುಂಪುಗಳು ತಲೆ ಎತ್ತಿದವು. ಬೋಕೋ ಹರಾಮ್, ಐಸಿಸ್, ತಾಲಿಬಾನ್‌ಗಳಂತಹವು ಸಕ್ರಿಯವಾದವು ಕ್ಷಿಪಣಿದಾಳಿ, ಬಾಂಬ್ ಆಕ್ರಮಣ, ಅಪಹರಣ, ಕಗ್ಗೊಲೆ, ರಕ್ತಪಾತಗಳು ಜಗತ್ತಿನ ಹಲವೆಡೆ ದೈನಂದಿನ ವಿದ್ಯಮಾನಗಳಾದವು. ಎರಡನೇ ಮಹಾಯುದ್ಧದ ನಂತರ ಜಗತ್ತು ಕಂಡ ಅತೀ ದೊಡ್ಡ ಜನರ ವಲಸೆಗಳು, ಅಂತರ್‌ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಯಿತು. ಲಕ್ಷಾಂತರ ಜನರು ನಿರಾಶ್ರಿತರಾದರು. ಈಗಲೂ ಈ ಅವಸ್ಥೆ ಜಗತ್ತಿನ ಹಲವಾರು ಭಾಗಗಳಲ್ಲಿ ಇದೆ. ಇದರ ನಡುವೆ ಕೆಲವು ಪ್ರಮುಖ ಬೆಳವಣಿಗೆಗಳು ನಡೆದವು. ಅಮೆರಿಕದಲ್ಲಿ ವಾಲ್‌ಸ್ಟ್ರೀಟ್ ಪ್ರತಿಭಟನೆ ನಡೆಯಿತು. ಶೇ. 1ರಷ್ಟು ಜನ ಶೇ. 99ರಷ್ಟು ಜನರ ಮೇಲೆ ಅಧಿಕಾರ ಚಲಾಯಿಸುತ್ತಾ ಶೋಷಣೆ ನಡೆಸುತ್ತಿರುವ ರೀತಿಗಳನ್ನು ಭಾರೀ ಪ್ರಶ್ನೆಗೆ ಒಳಪಡಿಸಿತು. ಅರಬ್ ರಾಷ್ಟ್ರಗಳಲ್ಲಿ ‘ಅರಬ್ ಸ್ಪ್ರಿಂಗ್’ ಎಂದು ಹೆಸರು ಪಡೆದ ಪ್ರಜಾಪ್ರಭುತ್ವಕ್ಕಾಗಿನ ಚಳವಳಿ ನಡೆಯಿತು. ಇವೆೆಲ್ಲದರ ಪರಿಣಾಮ ಅಲ್ಲಿನ ರಾಜ ಪ್ರಭುತ್ವಗಳು ತಮ್ಮ ಹಿಡಿತಗಳ ಅಡಿಯಲ್ಲಿಯೇ ಚುನಾಯಿತ ಸರಕಾರಗಳನ್ನು ನೇಮಿಸುವಂತಹ ಸ್ಥಿತಿ ಏರ್ಪಟ್ಟಿತು. ಟರ್ಕಿಯಲ್ಲಿ ಜನರ ಬಂಡಾಯ ನಡೆದು ಚುನಾಯಿತ ಸರಕಾರ ಅಸ್ತಿತ್ವಕ್ಕೆ ಬಂದರೂ, ನಂತರ ಚುನಾಯಿತ ಸರಕಾರವನ್ನು ಕಿತ್ತೊಗೆದು, ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ. ಸೇನಾಡಳಿತ ಹೇರಲ್ಪಟ್ಟಿದೆ. ಐರೋಪ್ಯ ಸಂಘಟನೆಯ, ಮುಂದುವರಿದ ರಾಷ್ಟ್ರವೆಂದು ಕರೆಸಿಕೊಂಡಿದ್ದ ಗ್ರೀಸ್ ದಿವಾಳಿಯೆದ್ದು ಅದು ಆ ಸಂಘಟನೆಯನ್ನೇ ಬಾಧಿಸುತ್ತಿದೆ. ಯುನೈಟೆಡ್ ಕಿಂಗ್‌ಡಮ್ ಐರೋಪ್ಯ ಸಂಘಟನೆಯಿಂದಲೇ ಹೊರಹೋಗಲು ತೀರ್ಮಾನಿಸಿದೆ. ಇದನ್ನು ವಿರೋಧಿಸಿರುವ ಐರ್ಲೆಂಡ್ ಯುನೈಟೆಡ್ ಕಿಂಗ್ ಡಮ್‌ನಿಂದಲೇ ಪ್ರತ್ಯೇಕಗೊಳ್ಳುವುದಾಗಿ ಘೋಷಿಸಿದೆ ಅರ್ಜೆಂಟೀನ, ಬ್ರೆಝಿಲ್, ಬೊಲಿವಿಯಾ, ವೆನಿಜುಯೆಲಾ, ಈಕ್ವೆಡಾರ್, ಮೊದಲಾದ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಭಿನ್ನ ರೀತಿಯ ಎಡ ಸರಕಾರಗಳು ಚುನಾಯಿತಗೊಂಡು ಅಧಿಕಾರಕ್ಕೆ ಬಂದವು. ಅಲ್ಲಿನ ಮಾರುಕಟ್ಟೆ ಸಾಪೇಕ್ಷ ನಿಯಂತ್ರಣಕ್ಕೆ ಒಳಪಟ್ಟಿತು. ನಂತರ ಅಲ್ಲಿ ಸಾಮಾಜಿಕ ಕ್ಷೋಭೆಯಂತಹ ವಾತಾವರಣಗಳೂ ಸೃಷ್ಟಿಯಾದವು.
ಏನೆಲ್ಲಾ ಕಸರತ್ತುಗಳನ್ನು ಮಾಡಿದರೂ 2008ರ ಜಾಗತಿಕ ಆರ್ಥಿಕ ಹಿಂಜರಿತವನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಅದರಿಂದ ಇನ್ನೂ ಚೇತರಿಸಿಕೊಳ್ಳಲೂ ಆಗಿಲ್ಲ. ಜಾಗತಿಕವಾಗಿ ಹೆಚ್ಚುತ್ತಿರುವ ನಿರುದ್ಯೋಗಗಳ ಮಟ್ಟ ಭಾರಿ ಪ್ರತಿಭಟನೆಗಳಿಗೆ ಕಾರಣವಾಗುತ್ತಿವೆ. ಅಸಮಾಧಾನ, ನೋವು, ಅಭದ್ರತೆಗಳಿಂದ ಆಕ್ರೋಶಗೊಂಡಿರುವ ಯುವ ಸಮೂಹವನ್ನು ತಣಿಸಿ ಸಮಾಧಾನ ಪಡಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡಲಾಗುತ್ತಿದೆೆ. ಅಂದೆಲ್ಲಾ ಜಾಗತೀಕರಣದ ಜಪ ಹೇಳಿಕೊಟ್ಟು ಪಾಲಿಸುವಂತೆ ಮಾಡಿದವರು ಇಂದು ನಮ್ಮ ದೇಶ ನಮಗೆ, ನಮ್ಮ ದೇಶದ ಅವಕಾಶ ನಮಗೆ ಮಾತ್ರ ಎಂಬ ಮಂತ್ರ ಜಪಿಸಲು ತೊಡಗಿವೆ. ‘‘ಅಮೆರಿಕ ಮೊದಲು’’, ‘‘ಅಮೆರಿಕ ಅಮೆರಿಕನ್ನರಿಗಾಗಿ ಮಾತ್ರ’’ ಎಂದೆಲ್ಲಾ ಘೋಷಣೆಗಳನ್ನು ಮೊಳಗಿಸಲು ತೊಡಗಿದ್ದಾರೆ. ಹೊಸ ವಲಸೆ ನೀತಿ, ಹೊಸ ವೀಸಾ ನೀತಿ, ಎಂದೆಲ್ಲಾ ಹೇಳುತ್ತಾ ಹೊರಗಿನವರಿಗೆ ಜಾಗವಿಲ್ಲ, ಪೌರತ್ವವಿಲ್ಲ ಎಂದೂ ಹೇಳುತ್ತಿದ್ದಾರೆ, ಸೌದಿಯಂತಹ ಬಹುತೇಕ ಕೆಲಸ ಕಾರ್ಯಗಳಿಗೆ ಇತರ ದೇಶದ ಜನರನ್ನೇ ಅವಲಂಬಿಸುತ್ತಿದ್ದ ದೇಶಗಳೂ ಇಂದು ಇದನ್ನು ಅನುಸರಿಸತೊಡಗಿವೆ. ಇದು ಪರಿಸ್ಥಿತಿಯ ಗಂಭೀರತೆ ಏನು ಎನ್ನೋದನ್ನು ತೋರಿಸುತ್ತದೆ. ಜಾಗತಿಕ ಹಣಕಾಸು ಮೌಲ್ಯವನ್ನು ಹಿಡಿದಿಟ್ಟುಕೊಂಡಿದ್ದ ಅಮೆರಿಕದ ಡಾಲರ್ ಇಂದು ಬಲಹೀನವಾಗತೊಡಗಿದೆ. ಬದಲಿಗೆ ಐರೋಪ್ಯ ಸಂಘಟನೆಯ ‘ಯೂರೋ’ ಹಾಗೇನೆ ಈಗ ಚೀನಾದ ‘ಯುವಾನ್’ ಜಾಗತಿಕ ನಾಣ್ಯಗಳಾಗಿ ಮಾನ್ಯತೆ ಪಡೆದಿವೆ. ಇದರಲ್ಲಿ ಯುವಾನ್ ಮುಂಚೂಣಿಯಾಗಿ ನಿಲ್ಲಲು ತೊಡಗಿದೆ. ಅಂದಿನ ಅಮೆರಿಕ, ಗಲ್ಫ್ ರಾಷ್ಟ್ರಗಳು ಎಂಬ ಬಣ್ಣದ ಮಾಯಾಲೋಕಗಳು ಇಂದು ಅಭದ್ರತೆ ಆತಂಕಗಳ ಲೋಕಗಳಾಗಿ ಕಾಣಿಸತೊಡಗಿವೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಲೂನು ಒಡೆದು ಕೆಲ ವರ್ಷಗಳೇ ಆದವು. ಹಿಂದೆಲ್ಲಾ ನಮಗೆ ಕಾಣಿಸುವಂತೆ ಇರುತ್ತಿದ್ದ ಪ್ರಜಾಪ್ರಭುತ್ವ ಇಂದು ಮಾಯವಾಗುತ್ತಿರುವ ಅನುಭವವಾಗುತ್ತಿದೆ. ಜನರಿಂದ, ಜನರಿಗಾಗಿ, ಜನರೇ ಅನ್ನೋದರ ಬದಲು ನಿರಂಕುಶಾಧಿಕಾರ, ಏಕವ್ಯಕ್ತಿ ಆಡಳಿತ, ಫ್ಯಾಶಿಸ್ಟ್ ವ್ಯವಸ್ಥೆ, ಹೀಗೆ ಹಲವು ಪದಗಳು ನಮ್ಮ ನಡುವೆ ಹರಿದಾಡುತ್ತಿವೆ. ಮೊದಲ ಮಹಾಯುದ್ಧ ನಡೆದು ಕೇವಲ ಎರಡೂವರೆ ದಶಕಗಳ ಅಂತರದಲ್ಲಿಯೇ ಎರಡನೇ ಮಹಾಯುದ್ಧ ನಡೆಯುತ್ತದೆ. ಮೊದಲ ಮಹಾಯುದ್ಧದ ಸಮಯದಲ್ಲಿ ತಲೆಎತ್ತಿದ್ದ ಸಮಸ್ಯೆಗಳೇ ಎರಡನೇ ಮಹಾಯುದ್ಧಕ್ಕೂ ಕಾರಣವಾಗಿದ್ದು ಕಾಕತಾಳೀಯವೇನಲ್ಲ. ಆರಂಭವಾದ ನೆಪಗಳು ಮಾತ್ರ ಬೇರೆಯಾಗಿದ್ದವು ಅಷ್ಟೆ. ಆದರೆ ಎರಡನೇ ಮಹಾಯುದ್ಧದ ನಂತರ ವಿಶ್ವ ಸಂಸ್ಥೆ, ವಿಶ್ವಬ್ಯಾಂಕ್, ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ, ಮೊದಲಾದ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮತ್ತಷ್ಟು ಸದೃಢವಾಗಿ ಅಸ್ತಿತ್ವಕ್ಕೆ ಬಂದವು. ಈ ಸಂಸ್ಥೆಗಳೆಲ್ಲದರ ಮುಖ್ಯ ಗುರಿ ಜಾಗತಿಕ ಯುದ್ಧಗಳನ್ನು ತಡೆಯುವುದು ಹಾಗೆಯೇ ವಿಶ್ವ ಮಾರುಕಟ್ಟೆಯ ಹಿಡಿತ ಸಾಧಿಸುವುದೇ ಆಗಿದ್ದವು. ಆದರೆ ಇವುಗಳು ಕೂಡ ಅಂತರ್‌ರಾಷ್ಟ್ರೀಯ ಹಣಕಾಸು ಬಿಕ್ಕಟ್ಟುಗಳನ್ನು ತಡೆಯಲು ವಿಫಲವಾಗತೊಡಗಿದ್ದವು. ಯಾಕೆಂದರೆ 1970 ರ ಕಾಲಘಟ್ಟಕ್ಕೆ ಮತ್ತೆ ಜಾಗತಿಕ ಆರ್ಥಿಕ ಹಿಂಜರಿಕೆ ಕಾಣಿಸತೊಡಗಿ ಇದು ಸೋವಿಯತ್ ರಶ್ಯಾ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ ಗಳ ನಡುವೆ ಶೀತಲ ಸಮರಕ್ಕೂ ದಾರಿ ಮಾಡಿದವು. ಈ ಎರಡೂ ದೇಶಗಳ ಬಣಗಳು ಜಾಗತಿಕ ಅಧಿಪತ್ಯಕ್ಕಾಗಿ ತೀವ್ರ ಪೈಪೋಟಿಗೆ ಬಿದ್ದಿದ್ದವು. ಈ ಎರಡೂ ಬಣಗಳ ಮೂಲಗುಣದಲ್ಲಿ, ಅಂದರೆ ಜಾಗತಿಕ ಮಾರುಕಟ್ಟೆಯ ಹಿಡಿತ ಸಾಧಿಸುವ ವಿಚಾರದಲ್ಲಿ ವ್ಯತ್ಯಾಸಗಳೇನೂ ಇರಲಿಲ್ಲ. ಹಲವು ದೇಶಗಳು ಆರ್ಥಿಕವಾಗಿ ದಿವಾಳಿಯಾಗತೊಡಗಿದವು. ಇದರ ಭಾಗವಾಗಿಯೇ ತೊಂಬತ್ತರ ದಶಕದಲ್ಲಿ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳನ್ನು ರೂಪುಗೊಳಿಸಿ ಭಾರತದಂತಹ ದೇಶಗಳಲ್ಲಿ ಜನಪ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಅವಕಾಶಗಳ ಮಹಾಪೂರವನ್ನೇ ಸುರಿಸುತ್ತದೆ ಎಂಬ ಭ್ರಮೆಯನ್ನೂ ಬಿತ್ತಲಾಯಿತು. ಇವೆಲ್ಲವೂ ಕೂಡ ಅಂತರ್‌ರಾಷ್ಟ್ರೀಯ ಸಂಪತ್ತಿನ ಮೇಲೆ ಜಾಗತಿಕ ಶಕ್ತಿಗಳು ಹಿಡಿತ ಸಾಧಿಸುವ ಪ್ರಕ್ರಿಯೆಗಳ ಭಾಗವಾಗಿದ್ದವು ಎಂಬ ವಿಚಾರ ಬಹಳಷ್ಟು ಜನರಿಗೆ ಅಂದು ಗೊತ್ತಾಗಿರಲಿಲ್ಲ. ಅದೇ ರೀತಿ ಇವುಗಳು ಹೆಚ್ಚುತ್ತಿರುವ ಅಂತರ್‌ರಾಷ್ಟ್ರೀಯ ಪೈಪೋಟಿ ಮತ್ತು ಜಾಗತಿಕ ಬಡತನವನ್ನು ಮರೆಮಾಚಿ ಸುಲಭವಾಗಿ ಲಾಭ ಗಳಿಸುವ ತಂತ್ರಕುತಂತ್ರಗಳ ಭಾಗ ಅನ್ನೋ ವಿಚಾರ ಕೂಡ ಅಂದು ಬಹಳ ಜನರಿಗೆ ಅರ್ಥವಾಗಿರಲಿಲ್ಲ.
ಇದೆಲ್ಲದರಿಂದ ಒಂದಂತೂ ಸ್ಪಷ್ಟ. ಅದು ಅರ್ಥವಾಗಲು ಕಷ್ಟಪಡಬೇಕಿಲ್ಲ. ಜಾಗತೀಕರಣವನ್ನು ನಮ್ಮಂತಹ ದೇಶಗಳ ಮೇಲೆ ಹೇರಿದ್ದು ಜಾಗತಿಕ ಜನಸಾಮಾನ್ಯರ ಅಭಿವೃದ್ಧಿಗಂತೂ ಅಲ್ಲ. ಹಾಗಾದರೆ ಇನ್ನೇತಕ್ಕೆ ಅದನ್ನು ಹೇರಿದ್ದು ಅನ್ನೋದನ್ನು ನಾವು ವಿಶ್ಲೇಷಣೆ ಮಾಡಿಕೊಳ್ಳಬೇಕು. ಆ ಎರಡು ಮಹಾಯುದ್ಧಗಳು, ನಂತರದ ಶೀತಲ ಸಮರ, ಆನಂತರ ಸೋವಿಯತ್ ರಶ್ಯಾದ ಕುಸಿತಗಳು ಕೂಡ ಜಾಗತಿಕ ಹಣಕಾಸು ಬಿಕ್ಕಟ್ಟುಗಳಿಗೆ ಮತ್ತಷ್ಟು ಕಾರಣವಾದವು. ಇಂತಹ ಸಮಸ್ಯೆಗಳು ಮತ್ತೂ ತೀವ್ರವಾಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ.
‘‘ವಿಶ್ವವೇ ಒಂದು ಕುಟುಂಬ’’ ಎಂದು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಜನವರಿ 23ರಂದು ಮಾತನಾಡಿದ್ದಾರೆ. ಯಾರಿಗೆ ಸೇರಿದೆ ಆ ವಿಶ್ವ!, ಯಾರಿಗೆ ಅದು ಒಂದು ಕುಟುಂಬ! ಎಂದು ಅವರು ಸ್ಪಷ್ಟಪಡಿಸದಿ ದ್ದರೂ ನಾವಂತೂ ಸ್ಪಷ್ಟ ಪಡಿಸಿಕೊಳ್ಳಲೇಬೇಕಲ್ಲವೇ? ಅಲ್ಲಿ ಜನಸಾಮಾನ್ಯರಿಗೆ ಜಾಗವಿಲ್ಲ. ಅದು ಕೆಲವೇ ಕಾರ್ಪೊರೇಟ್‌ಗಳ ಕುಟುಂಬ ಅಂತ ಈಗಲಾದರೂ ಅರ್ಥ ಮಾಡಿಕೊಳ್ಳಬೇಡವೇ?