ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ
ರಾಷ್ಟ್ರಕವಿ ಕುವೆಂಪುರವರು ಸ್ವಾತಂತ್ರ್ಯ ಪೂರ್ವದಲ್ಲಿ ಯುವಜನತೆಯನ್ನುದ್ದೇಶಿಸಿ ಮಾಡಿದ ವಿಚಾರೋಪನ್ಯಾಸ
ಭಾಗ-2
ಇಂತಹ ದಿವ್ಯ ‘ದರ್ಶನ’ದ ಪ್ರಾಪ್ತಿಗಾಗಿ ನಮಗೆ ಬೇಕಾಗುವ ಧೀರ, ಸ್ವತಂತ್ರ, ಉದಾರ ಪ್ರತಿಭಾಪುನ್ವಾದ ಬಿದ್ದಿಯನ್ನೇ ನಾನು ‘ನಿರಂಕುಶಮತಿ’ ಎಂದು ಕರೆದಿದ್ದೇನೆ. ಆದ್ದರಿಂದ ತಮ್ಮ ಮತ್ತು ಜಗತ್ತಿನ ಶ್ರೇಯಸ್ಸನ್ನು ಕೋರುವ ಯುವಕರೆಲ್ಲರೂ ‘ನಿರಂಕುಶಮತಿ’ಗಳಾಗಬೇಕು.
‘ನಿರಂಕುಶಮತಿ’ಗಳಾಗಬೇಕಾದರೆ ದಾಸ್ಯಬುದ್ಧಿ ತೊಲಗಬೇಕು’ ದಾಸ್ಯಬುದ್ದಿ ತೊಲಗಬೇಕಾದರೆ ಸ್ವತಂತ್ರವಾಗಿ ಜೀವಿಸಲು ಪ್ರಯತ್ನಿಸಬೇಕು; ಎಂದರೆ ಸ್ವಾವಲಂಬನ ಬೇಕು; ಎಂದರೆ ಇನ್ನೊಬ್ಬರ ಕೈ ಹಾರೈಸಿ ಹೊಟ್ಟೆ ಹೊರೆಯುವುದು ತಪ್ಪಬೇಕು. ಮುಚ್ಚುಮರೆಯಿಲ್ಲದೆ ಬಿಚ್ಚಿ ಹೇಳುವುದಾದರೆ, ಸಂಪತ್ತು ಬೇಕು, ಹಣಬೇಕು; ಉದ್ಯೋಗ ಬೇಕು. ಮಿತ್ರರೇ, ನಾನು ಒಪ್ಪಿಕೊಳ್ಳುತ್ತೇನೆ, ಈ ಸಮಸ್ಯೆ ನಿಜವಾಗಿಯೂ ಕಗ್ಗಂಟಾಗಿದೆ. ಆ ಸಮಸ್ಯೆಯನ್ನು ಪರಿಹರಿಸಲೆಂದೇ ದೇಶದ ನಾಯಕರೆಲ್ಲರೂ ಕಷ್ಟಪಡುತ್ತಿದ್ದಾರೆ. ಆಶಾಬುದ್ಧಿಯಿಂದ ಅವರ ಉದ್ಯಮದಲ್ಲಿ ನಾವೂ ಭಾಗಿಗಳಾಗಿ ಇಂದಿನ ತಪಸ್ಸು ಮುಂದಿನ ಸತ್ಫಲಕ್ಕೆ ಮಾರ್ಗವೆಂದು ಶ್ರದ್ಧೆಯಿಂದ ಮುಂದುವರಿಯಬೇಕಾಗಿದೆ. ಸಮಸ್ಯೆಯ ಅಗಾಧತೆ ನಮ್ಮ ಮುಂದಿರುವ ಸಾಹಸದ ಆಳ ಅಗಲಗಳನ್ನು ಸೂಚಿಸುತ್ತದೆ.
ಆದರೂ ಪಾರಾಗಲೂ ಕೆಲವು ಸೂಚನೆಗಳನ್ನು ಕೊಡಬಹುದು. ಹೀಗೆಯೇ ಮಾಡಿ ಎಂದು ಇತಿವಿಧಿಗಳನ್ನು ಸೂಚಿಸುವುದು ಕಷ್ಟಸಾಧ್ಯವಾದರೂ ಹೀಗೆ ಮಾಡದಿದ್ದರೆ ಒಂದಿಷ್ಟು ಲೇಸಾಗಬಹುದೆಂದು ನೇತಿವಿಧಾನವನ್ನಾದರೂ ಹೇಳಲು ಸಾಧ್ಯ.
ಕೃತವಿದ್ಯರಾದ ಯುವಕರು ನಾಗರಿಕತೆಯ ಮೆರುಗಿಗೆ ಮನಸೋತು ಪಟ್ಟಣಗಳನ್ನು ಸೇರುತ್ತಿದ್ದಾರೆ. ಅಲ್ಲಿಯೂ ಕೂಡ ಅವರು ಕೈಗೊಳ್ಳುವ ವೃತ್ತಿ ಸ್ವಲ್ಪ ಹೆಚ್ಚು ಕಡಿಮೆ ‘ಉತ್ಪತ್ತಿಕಾರಕ’ವಾಗಿರುವುದಿಲ್ಲ; ‘ಸಂಗ್ರಹಕಾರಕ’ವಾಗಿರುತ್ತದೆ. ಹಾಗೆ ಮಾಡುವುದರಿಂದ ಹಲಕೆಲವರಿಗೆ ಅವರವರ ಮಟ್ಟಿಗೆ ನೆಮ್ಮದಿಯಾಗಬಹುದು. ಆದರೆ ಎಲ್ಲರೂ ಎಷ್ಟು ಕಾಲ ತಾನೆ ಸಂಪತ್ತನ್ನು ಸೃಷ್ಟಿಸದೆ ಸಂಗ್ರಹಿಸುತ್ತಲೇ ಹೋಗಲಾಗುತ್ತದೆ. ಆದ್ದರಿಂದ ಮೇಧಾವಿಗಳಾದ ಯುವಕರು ತಮಗೆ ನವನಾಗರಿಕತೆಯ ಮಾಯಾಸ್ಮಿತರುಚಿ ದೊರಕಿಕೊಳ್ಳದಿದ್ದರೂ ಚಿಂತೆಯಿಲ್ಲ ಎಂದುಕೊಂಡು, ಗ್ರಾಮಗಳಲ್ಲಿಯೇ ನಿಂತು ಜನರ ಆಧ್ಯಾತ್ಮಿಕ ಅಜ್ಞಾನವನ್ನೂ ಅಧಿದೈವಿಕ ವೌಢ್ಯವನ್ನೂ ಅಧಿ ಭೌತಿಕ ಕಷ್ಟನಷ್ಟಗಳನ್ನೂ ಪರಿಹರಿಸಲು ಪ್ರಯತ್ನಿಸುವ ತಪಸ್ಸನ್ನು ಕೈಕೊಳ್ಳಬೇಕು.
ಮತದ ಹೆಸರಿನಲ್ಲಿ, ಸಮಾಜದ ಕಟ್ಟುಕಟ್ಟಳೆಗಳ ಹೆಸರಿನಲ್ಲಿ, ದೆವ್ವ ಪಿಶಾಚಿ ಗ್ರಹಗಳ ಹೆಸರಿನಲ್ಲಿ, ಮಾಮೂಲುಗಳ ಹೆಸರಿನಲ್ಲಿ ದುರ್ವ್ಯಯವಾಗುತ್ತಿರುವ ಸಂಪತ್ತನ್ನು ತಡೆಗಟ್ಟಿ, ಅದನ್ನು ಹೆಚ್ಚು ಆವಶ್ಯಕವಾಗಿರುವ ಮತ್ತು ಹೆಚ್ಚು ಉಪಯೋಗಕರವಾಗಿರುವ ಜೀವನ ಪಥದಲ್ಲಿ ವಿನಿಯೋಗಿಸುವಂತೆ ಮಾಡಬೇಕು.
ಯುವಕರು ವೇಷಭೂಷಣ ಅತಿ ಷೋಕಿಗೆ ಹೋಗದೆ ಸರಳ ಸಾಧಾರಣವಾಗಿದ್ದರೆ ಸ್ವಲ್ಪವಾದರೂ ಉಳಿತಾಯವಾಗುತ್ತದೆ. ಅಲ್ಲದೆ ಷೋಕಿ ಮಾಡಲೆಂದು ಮದುವೆ ಮಾಡಿಕೊಂಡು ಮಾವಂದಿರ ಮೂಲಧನಕ್ಕೆ ಬಾಯಿ ಬಾಯಿ ಬಿಡುವುದೂ ತಪ್ಪುತ್ತದೆ.
ಯುವಕರು ಸಂಪಾದನೆ ಮಾಡುವ ಸಾಮರ್ಥ್ಯವನ್ನು ಪಡೆಯುವ ಮೊದಲೆ ಮದುವೆ ಮಾಡಿಕೊಂಡಲ್ಲಿ ಒಡನೆಯೆ ಚತುಷ್ಪಾದಿಯಾಗುತ್ತಾನೆ. ಅವನ ಸ್ವತಂತ್ರ ಬುದ್ಧಿ, ನಿರಂಕುಶಮತಿ ಎಲ್ಲವೂ ಮಣ್ಣುಗೂಡುತ್ತದೆ. ಅವರಿವರ ಕೈ ಹಾರೈಸಿ, ನಾಲ್ಕು ಕಾಸು ಸಂಪಾದನೆಗಾಗಿ ಅವರಿವರನ್ನು ಓಲಗಿಸಿ, ಅಧಿಕಾರಿಗಳ ಅಥವಾ ಸಾಹುಕಾರರ ಕಾಲಬಳಿ ಮೂಲಗಿಸಿ, ತನ್ನಲ್ಲಿರುವ ದಿವ್ಯಾತ್ಮವನ್ನು ಸಂಪೂರ್ಣವಾಗಿ ಅವಮಾನಪಡಿಸುತ್ತಾನೆ. ಆತನ ತಾರುಣ್ಯದ ‘ದರ್ಶನ’ ಜ್ಯೋತಿ ಸಾಂಸಾರಿಕ ಜೀವನದ ದಾಸ್ಯದಲ್ಲಿ ಕೋಟಲೆಯಲ್ಲಿ, ಕಷ್ಟದಲ್ಲಿ ಧೂಳಿಧೂಮಗಳಲ್ಲಿ ನಂದಿಹೋಗುತ್ತದೆ ಅಥವಾ ನಂದಿಹೋಗುವಷ್ಟರ ಮಟ್ಟಿಗೆ ಮಾಸಿಹೋಗುತ್ತದೆ. ಕಡೆಕಡೆಗೆ ಆನೀತಿ ಕೂಡ ಹೀನವಾಗಿ ತೋರುವುದಿಲ್ಲ. ಅವನ ಔದಾರ್ಯದ ವಲಯ ಬರಬರುತ್ತಾ ಕಿರಿದಾಗಿ, ಕಡೆಗೆ ತಾನು, ತನ್ನ ಹೆಂಡತಿ, ತನ್ನ ಮಗು ಮೂವರನ್ನು ಮಾತ್ರ ಸುತ್ತುವರಿಯುತ್ತದೆ. ಅವರಿಗಾಗಿ ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ. ಹಾಗಾಗುವವರು ದೇಶದ ಪ್ರಗತಿಗೆ ಕಂಟಕಪ್ರಾಯರಾಗುತ್ತಾರೆ. ಆದ್ದರಿಂದ, ಮಿತ್ರರೇ, ನಿಮ್ಮ ಕಾಲ ಮೇಲೆ ನೀವು ನೆಮ್ಮದಿಯಾಗಿ ನಿಲ್ಲುವ ಶಕ್ತಿ ಬರುವ ಮೊದಲು ಮದುವೆಯಾಗಬೇಡಿ; ಆತ್ಮಕ್ಕೆ ಅಗೌರವವನ್ನೂ ಮನಸ್ಸಿಗೆ ಯಾತನೆಯನ್ನೂ ದೇಶಕ್ಕೆ ಹಾನಿಯನ್ನೂ ತರಬೇಡಿ.
ಅದಕ್ಕೆ ಬದಲು ವೈವಾಹಿಕ ಜೀವನವನ್ನು ಸಾಂಗವಾಗಿ ನಡೆಸಲು ತಕ್ಕ ಸಂಪತ್ತೂ ಸಾಮರ್ಥ್ಯವೂ ಲಭಿಸುವ ತನಕ ಬ್ರಹ್ಮಚಾರಿಯಾಗಿದ್ದುಕೊಂಡು ದೇಶಕ್ಕೆ ಹಿತಕರವಾದ ಕಾರ್ಯಗಳನ್ನು ಮಾಡುತ್ತಿರಬಹುದು. ಭೀಷ್ಮನು ಬ್ರಹ್ಮಚಾರಿಯಾಗಿದ್ದನು. ಹನುಮಂತನು ಬ್ರಹ್ಮಚಾರಿಯಾಗಿದ್ದನು. ಅವರು ಮಹತ್ಕಾರ್ಯಗಳನ್ನು ಸಾಧಿಸಿದರು. ಇಂದಿನ ಮನಶಾಸ್ತ್ರವೂ ಕೂಡ ಬ್ರಹ್ಮಚರ್ಯದಿಂದ ತೇಜಸ್ಸು ಓಜಸ್ಸುಗಳೂ ದರ್ಪ ಬಲ ಅಧಿಕಾರಿಗಳೂ ಲಭಿಸುತ್ತವೆ ಎಂದು ಹೇಳಿತ್ತಿದೆ. ‘‘ನಾಯಮಾತ್ಮಾ ಬಲಹೀನೇನ ಲಭ್ಯಃ’’
ದೇಶವು ಸರ್ವತೋಮುಖ ಎಚ್ಚರಗೊಳ್ಳುತ್ತಿರುವ ಕಾಲವಿದು. ಎಲ್ಲೆಲ್ಲಿಯೂ ಎಲ್ಲ ಶಾಖೆಗಳಲ್ಲಿಯೂ ಕೆಲಸಗಾರರು ಬೇಕಾಗಿದ್ದಾರೆ. ಸಂಘಬದ್ಧರಾಗಿಯೊ, ಸಂಸ್ಥೆಗಳಿಗೆ ಸದಸ್ಯರಾಗಿಯೊ ಅಥವಾ ವ್ಯಕ್ತಿಶಃವಾಗಿಯೊ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಆ ಕಾರ್ಯಗಳ ರೀತಿ ನೀತಿ ವಲಯ ವಿಸ್ತಾರಗಳನ್ನು ಯಾರೊಬ್ಬರೂ ನಿಷ್ಕರ್ಷಿಸಿ ಹೇಳಲಾರರು. ಆಯಾ ಸನ್ನಿವೇಶಕ್ಕೆ ತಕ್ಕಂತೆ ಅವರವರ ಮನೋಧರ್ಮ ಆತ್ಮಾನುಭವ ಅಭಿರುಚಿ ಉದ್ದೇಶಗಳಿಗೆ ತಕ್ಕಂತೆ ಕಾರ್ಯಾರಂಭ ಮಾಡಬೇಕು. ಮೈಸೂರು ಪಟ್ಟಣದಲ್ಲಿರುವ ಯುವಕರು ಕೈಕೊಳ್ಳಬೇಕಾಗಿರುವ ಕಾರ್ಯದ ಸ್ವಭಾವ ರೀತಿ ನೀತಿ ವಲಯಗಳು ಶ್ರೀರಂಗಪಟ್ಟಣಕ್ಕೆ ಹೊಂದದಿರಬಹುದು; ಶ್ರೀರಂಗಪಟ್ಟಣಕ್ಕೆ ಹೊಂದುವ ಕಾರ್ಯಗಳು ಪಕ್ಕದ ಹಳ್ಳಿಗೆ ಹೊಂದದಿರಬಹುದು. ಹಳ್ಳಿಗಳಲ್ಲಿ ನೈರ್ಮಲ್ಯ ವಿದ್ಯಾಪ್ರಚಾರಗಳು ಬೇಕಾಗುವಂತೆ ಪಟ್ಟಣಗಳಲ್ಲಿ ಬಹುಶಃ ಅನೌದಾರ್ಯ ಮತಭ್ರಾಂತಿಗಳನ್ನು ಪರಿಹಾರ ಮಾಡುವ ಭೋಧಪ್ರದ ಕಾರ್ಯಗಳು ಬೇಕಾಗಬಹುದು. ಆದ್ದರಿಂದ ಮಿತ್ರರೇ, ನೂತನ ಭಾರತರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಗೌರವಪೂರ್ಣವಾದ ಸ್ಥಾನವಿದೆ; ಪ್ರತಿಯೊಬ್ಬರ ಸಾಹಸಕ್ಕೂ ಅವಕಾಶವಿದೆ.
ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಹೇಳಿ ಮುಂದುವರಿಯಬೇಕಾಗಿದೆ. ನಮ್ಮಲ್ಲಿ ಅನೇಕರು ಸದ್ಯಃಫಲಾಕಾಂಕ್ಷಿಗಳು. ದೀರ್ಘಕಾಲದ ಸಾಧನೆ ಮಾಡುವ ತಾಳ್ಮೆಯಿಲ್ಲ. ಗೀತೆಯಲ್ಲಿ ಶ್ರೀ ಕೃಷ್ಣನು ‘‘ಪಾರ್ಥ, ನೇವೇಹ ನಾಮುತ್ರ ವಿನಾಶಸ್ತಸ್ತ್ಯ ವಿದ್ಯತೇ ನಹಿ ಕಲ್ಯಾಣಕೃತ್ ಕಶ್ಚಿದ್ದುರ್ಗತಿಂ ತಾತ ಗಚ್ಛತಿ’’ (6-40) ‘‘ಪೃಥಾನಂದನನೇ, ಇಹದಲ್ಲಿಯಾಗಲಿ ಪರದಲ್ಲಿಯಾಗಲಿ ಅವನಿಗೆ ವಿನಾಶವಿಲ್ಲ. ಎಳ್ಳನಿತಾದರೂ ಆಗಲಿ ಒಳ್ಳೆಯದನ್ನು ಮಾಡಿದವನಿಗೆ ದುರ್ಗತಿಯಿಲ್ಲ’’ ಎಂದು ಆಘೋಷಿಸಿದ್ದಾನೆ. ಮಹಾಫಲಕ್ಕೆ ಹೆಚ್ಚು ಕಾಲವೂ ಹೆಚ್ಚು ಸಾಧನೆಯೂ ಬೇಕಾಗುತ್ತದೆ. ಆದ್ದರಿಂದ ಅಲ್ಪಕಾಲದಲ್ಲಿ ಫಲ ಲಭಿಸದಿದ್ದರೆ ಹತಾಶರಾಗದೆ ಮುಂದುವರಿಯುವ ಉಕ್ಕಿನಂತಹ ಚಿತ್ತದಾರ್ಢ್ಯವನ್ನು ನಾವು ಸಂಪಾದಿಸಬೇಕು. ನಮ್ಮ ಉತ್ಸಾಹ ಹುಲ್ಲಿನ ಬೆಂಕಿಯಾಗಬಾರದು; ಕಲ್ಲಿದ್ದಲ ಕಾವಾಗಬೇಕು.
ಸದ್ಯಃಫಲಾಕಾಂಕ್ಷೆಗಿಂತಲೂ ಕೀರ್ತಿಮೋಹದಿಂದ ಹೆಚ್ಚು ಅನಾಹುತವಾಗುತ್ತದೆ! ‘ಕೀರ್ತಿ ಮಹಾಪುರುಷರಲ್ಲಿರುವ ಕಟ್ಟಕಡೆಯ ದೌರ್ಬಲ್ಯ’ ಎಂಬುದಾಗಿ ಒಂದು ಸುಭಾಷಿತವಿದೆ. ಮಹಾಪುರುಷರಾದವರೇ ಈ ಯಶೋಲೋಭಕ್ಕೊಳಗಾದ ಮೇಲೆ ಸಾಮಾನ್ಯರ ಗತಿಯೇನು? ಆದರೂ ಮಹಾಪುರುಷರಲ್ಲಿರುವ ದೌರ್ಬಲ್ಯವನ್ನು ಸಾಮಾನ್ಯರೂ ಪೋಷಿಸಬೇಕೆಂಬ ನಿಯಮವಿಲ್ಲ. ಮಹಾಪುರುಷರಿಗೆ ಬಂದೊದಗುವ ಕೀರ್ತಿಯ ಪ್ರಭಾವದಿಂದಲೇ ಅದರ ಲೋಭವನ್ನು ಗೆಲ್ಲಲು ಅವರಿಂದ ಸಾಧ್ಯವಾಗಿರಬಹುದು. ನಮಗೆ ಅದರ ಅಭಾವವೇ ಅದರ ಲೋಭದಿಂದ ಪಾರಾಗಲು ಸಹಾಯವಾಗುತ್ತದೆ. ಮಂದಿಯ ಕೈಚಪ್ಪಾಳೆ, ವೃತ್ತಪತ್ರಿಕೆಗಳ ಅಗ್ಗದ ಸ್ತುತಿ, ಬಿರುದು ಬಾವಲಿಗಳ ವ್ಯಾಮೋಹ ಇವುಗಳಿಗೆ ವಶನಾಗದೆ, ತಾನು ಹಿಡಿದ ಕೆಲಸವನ್ನು ಪಟ್ಟುಹಿಡಿದು ನಿಃಶಬ್ದವಾಗಿ ಮಾಡುವಾತನೇ ನಿಜವಾದ ಕರ್ಮಯೋಗಿ. ಸ್ವಾಮಿ ವಿವೇಕಾನಂದರು ಒಂದು ಕಡೆ ಈ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಸಾವಿರಾರು ಜನರು ಸುತ್ತಲೂ ನೆರೆದು ಕರತಾಡನ ಮಾಡುವಾಗ, ಜಯಘೋಷದಿಂದ ಹುರಿದುಂಬಿಸುವಾಗ ಸ್ಮಾರಕ ಸ್ತೂಪಗಳೂ ಜೀವನ ಚರಿತ್ರೆಗಳೂ ತನ್ನನ್ನೂ ಕೊಂಡಾಡುತ್ತವೆ ಎಂದು ಗೊತ್ತಾದಾಗ, ತನ್ನ ಮರಣವೇ ತನ್ನ ಯಶೋದುಂದುಭಿಯನ್ನು ಮೊಳಗುತ್ತದೆಂದು ತಿಳಿದಾಗ, ಯಾವ ಹೇಡಿ ತಾನೇ ಮುಂದುವರಿದು ರಣರಂಗದಲ್ಲಿ ಮಡಿಯಲಾರ? ಯಾವ ಕ್ರಿಮಿ ತಾನೆ ಸಾಹಸಿಯಾಗಲಾರದು? ಆದರೆ ಕೀರ್ತಿಯ ಕಿರಣ ಮಾತ್ರವೂ ಪ್ರಕಾಶಿಸದಿರುವಾಗ, ಪ್ರಶಂಸೆ ಮಾಡುವವರಾಗಲಿ ಹುರಿದುಂಬಿಸುವವರಾಗಲಿ ಒಬ್ಬರೂ ಇಲ್ಲದಿರುವಾಗ, ಬಹುಕಾಲದ ಪ್ರಯತ್ನದಿಂದಲೂ ಕಾರ್ಯಸಿದ್ಧಿಯಾಗದಿರುವಾಗ ದೃಢಚಿತ್ತನಾಗಿ ಶ್ರದ್ಧಾನ್ವಿತನಾಗಿ, ವೌನಿಯಾಗಿ, ಹಲ್ಲು ಕಚ್ಚಿಕೊಂಡು, ಹಣೆಸುಕ್ಕಿಕೊಂಡು, ಬೆವರು ಸುರಿಸುತ್ತಾ, ನಸುಬಾಗಿ, ಕಟ್ಟಕಡೆಯ ಕಲ್ಯಾಣದಲ್ಲಿ ನೆಚ್ಚಿಟ್ಟುಕೊಂಡು, ಈಶ್ವರನನ್ನು ನೆನೆದು ಕರ್ಮಪರ್ವತವನ್ನೇರುವವನೇ ಮಹಾತಪಸ್ವಿ, ಅವನಿಗಿಂತಲೂ ಹೆಚ್ಚಾದ ವಿಭೂತಿಗಳಿನ್ನಿಲ್ಲ. ಅವನ ಹೆಸರು ಪತ್ರಿಕೆಗಳಿಗೆ ಗೊತ್ತಿಲ್ಲದಿರಬಹುದು; ಆದರೆ ಈಶ್ವರನ ದೃಷ್ಟಿಯಲ್ಲಿ ಅವನು ಅಗ್ರಗಣ್ಯನಾಗುತ್ತಾನೆ.
ಆದ್ದರಿಂದ ಪ್ರತಿಯೊಬ್ಬ ಯುವಕನೂ ಅಂತಿಮದ ಅನಂತ ಕಲ್ಯಾಣದಲ್ಲಿ ಶ್ರದ್ಧೆಯಿಟ್ಟು ಕಾರ್ಯರಂಗಕ್ಕಿಳಿಯಬೇಕು. ತಾನು ರಂಗಕ್ಕಿಳಿದೊಡನೆಯೇ ಜಗತ್ತು ಉದ್ಧಾರವಾಗುತ್ತದೆ ಎಂದಾಗಲಿ, ಲೋಕಲೋಚನವಲಯಕ್ಕೆ ತಾನು ಕೇಂದ್ರವಾಗುತ್ತೇನೆಂದಾಗಲಿ, ಶಾಂತಿಸ್ಥಾಪನೆಗಾಗಿ ಕೊಡುವ ನೊಬೆಲ್ ಬಹುಮಾನ ತನಗೇ ಬರುತ್ತದೆ ಎಂದಾಗಲಿ ಹೊಂಗನಸುಗಳನ್ನು ಆಕಾಶಗೋಪುರಗಳನ್ನು ಕಟ್ಟಿಕೊಳ್ಳಬಾರದು.
ಇನ್ನು ನನಗೆ ಅತ್ಯಂತ ಪ್ರಿಯತಮವಾದ ಒಂದೆರಡು ವಿಷಯಗಳನ್ನು ಕುರಿತು ಪ್ರಸ್ತಾಪಿಸಿ ಉಪನ್ಯಾಸವನ್ನು ಕೊನೆಗಾಣಿಸುತ್ತೇನೆ. ಆ ವಿಷಯಗಳು ನಿಮ್ಮೆಲ್ಲರಿಗೂ ಕೂಡ ಪ್ರಿಯವಾಗಿರುತ್ತವೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ.
ಯುವಕರು ಕೈಕೊಳ್ಳಬೇಕಾಗಿರುವ ಅನೇಕ ಉದ್ಯಮಗಳಲ್ಲಿ ಭಾಷೆಯ ಅಭ್ಯುದಯವೂ, ಸಾಹಿತ್ಯ ನಿರ್ಮಾಣ ಮತ್ತು ಪ್ರಚಾರಗಳೂ ಗಣ್ಯವಾಗಿವೆ. ಹಿಂದಿ, ಲ್ಯಾಟಿನ್, ಗ್ರೀಕ್, ಸಂಸ್ಕೃತ, ತೆಲುಗುಗಳನ್ನಲ್ಲ ನಾನು ಹೇಳುತ್ತಿರುವುದು: ಕನ್ನಡ ಭಾಷೆ; ಕನ್ನಡ ಸಾಹಿತ್ಯ! ನಮ್ಮ ಮಾತೃಭಾಷೆ ಮತ್ತು ಅದರ ಸಾಹಿತ್ಯ!
ಜನಜೀವನವನ್ನು ಎಚ್ಚರಿಸುವ ತೂರ್ಯಧ್ವನಿ ಸಾಹಿತ್ಯದಿಂದ ಬರುತ್ತದೆ. ಸಾಹಿತ್ಯ ಜನಜೀವನದ ಇಂದಿನ ಸ್ಥಿತಿಯನ್ನು ವರ್ಣಿಸಿ ಮುಂದಿನ ಗತಿಯನ್ನು ನಿರ್ಣಯಿಸುತ್ತದೆ. ಕೃತವಿದ್ಯರಾದ ಯುವಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಬರೆದು ಓದಿ, ಮತ್ತೆ ಮತ್ತೆ ಹೇಳಿ ಹೇಳಿ, ಜನರ ಹೃದಯಗಳಲ್ಲಿ ಕಿಡಿಗಳನ್ನು ಬಿತ್ತಬೇಕು. ಈಗಾಗಲೆ ನಮ್ಮ ನಾಡಿನ ಜೀವನ ಕೃತ್ತಿಕಾ ದೀಪೋತ್ಸವದಂತೆ ಸಾವಿರಾರು ಸೊಡರ್ಮಾಲೆಗಳಾಗಿ ಉರಿಯುತ್ತಿರುವ ಮನೋಹರ ಭವ್ಯ ದೃಶ್ಯ ಕಂಗೊಳಿಸುತ್ತಿದೆ. ಎಲ್ಲೆಲ್ಲಿಯೂ ಕರ್ನಾಟ ಕ ಸಂಘಗಳೇಳುತ್ತಿವೆ; ಕನ್ನಡದ ಪುನರುಜ್ಜೀವನಕ್ಕಾಗಿಯೂ ಉದ್ಧಾರಕ್ಕಾಗಿಯೂ ದೀಕ್ಷೆ ತೊಟ್ಟು ಸೊಂಟಕಟ್ಟಿ ಕಂಕಣಬದ್ಧರಾಗಿರುವ ಅನೇಕ ಪ್ರತಿಭಾಸಂಪನ್ನರಾದ ಮಹನೀಯರು ಕರ್ನಾಟಕದಲ್ಲೆಲ್ಲ ಸಂಚರಿಸಿ ಹಣತೆಗಳನ್ನು ಹೊತ್ತಿಸುತ್ತಿದ್ದಾರೆ: ಕೇಂದ್ರ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತು ತನ್ನ ಕೈಯಲ್ಲಾದ ಮಟ್ಟಿಗೆ, ಹುರುಪಿನಿಂದ ಕಾರ್ಯ ಸಾಧನೆ ಮಾಡುತ್ತಿದೆ; ವಿದ್ಯಾಭ್ಯಾಸದ ಇಲಾಖೆ ಕನ್ನಡದಲ್ಲಿಯೆ ಪಾಠ ಹೇಳುವ ಏರ್ಪಾಡು ಮಾಡುತ್ತಿದೆ; ವಿಶ್ವ ವಿದ್ಯಾನಿಲಯ ಕನ್ನಡ ಗ್ರಂಥ ಪ್ರಕಟನೆಗಳಿಂದ ತನ್ನ ಭಾಗದ ತೈಲವನ್ನು ಹೊಯ್ದು ಉರಿಯನ್ನು ಪೋಷಿಸುತ್ತಿದೆ. ಇಂತಹ ಮಹಾ ಸಾಹಿತ್ಯ ದೀಪೋತ್ಸವದಲ್ಲಿ ನಾವೆಲ್ಲರೂ ಉತ್ಸಾಹದಿಂದ ಭಾಗಿಗಳಾಗದಿದ್ದರೆ ಅದು ನಮ್ಮೆದೆಯ ಕಗ್ಗವಿಯ ಗಾಢಾಂಧಕಾರವನ್ನು ಮಾತ್ರ ಸೂಚಿಸುತ್ತದೆ. ಇಲ್ಲಿ ನೆರೆದಿರುವವರಲ್ಲಿ ಯಾರ ಹೃದಯದಲ್ಲಿಯೂ ಅಂತಹ ಕಗ್ಗತ್ತಲಿಲ್ಲವೆಂದು ನಾನು ದೃಢವಾಗಿ ನಂಬುತ್ತೇನೆ.