ಸೂಕ್ತ ತಂತ್ರಜ್ಞಾನಕ್ಕಾಗಿ ಕಾಯುತ್ತಿರುವ ಬಡವರ ಮರ ಬಿದಿರು
ಚೀನಾದ ನಂತರ ಭಾರತ ಅತೀಹೆಚ್ಚು ಬಿದಿರು ಬೆಳೆಯುವ ದೇಶವಾಗಿದೆ. ಬೆಳೆಯುವ ಪ್ರದೇಶದ ವಿಸ್ತೀರ್ಣವನ್ನು ಪರಿಗಣಿಸಿದರೆ ಭಾರತದಲ್ಲಿ ಚೀನಾಕ್ಕಿಂತ ಅಧಿಕ ವಿಸ್ತಾರದಲ್ಲಿ ಬಿದಿರು ಬೆಳೆಯಲಾಗುತ್ತಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಶೇ.83ರಷ್ಟು ಬಿದಿರು ಉತ್ಪನ್ನಗಳನ್ನು ಪೂರೈಸುತ್ತಿದೆ.
ಭಾರತದಲ್ಲಿ ಸುಮಾರು 14 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯಲಾಗುತ್ತಿದ್ದರೂ ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ಪಾಲು ಕೇವಲ 4.5 ಬಿಲಿಯನ್ ಡಾಲರ್ ಅಷ್ಟೇ ಆಗಿದೆ. ಇದೇ ವೇಳೆ, ಚೀನಾದಲ್ಲಿ ಕೇವಲ ಆರು ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯಲಾಗುತ್ತಿದೆ.
ಬಿದಿರು ಬೆಳೆಯುವಲ್ಲಿ ಚೀನಾದ ಜಿಗಿತವನ್ನು ಗಮನಿಸಿದ ಅಂತರ್‌ರಾಷ್ಟ್ರೀಯ ಬಿದಿರು ಮತ್ತು ಬೆತ್ತದ ಜಾಲದ ಮುಖ್ಯಕಚೇರಿಯನ್ನು ಕೆಲವು ವರ್ಷಗಳ ಹಿಂದೆ ದಿಲ್ಲಿಯಿಂದ ಬೀಜಿಂಗ್‌ಗೆ ಸ್ಥಳಾಂತರಿಸಲಾಯಿತು. ಜಗತ್ತಿನ 44 ದೇಶಗಳಲ್ಲಿ ಬಿದಿರನ್ನು ಬೆಳೆಸಲಾಗುತ್ತಿದ್ದರೂ ಚೀನಾ, ಭಾರತ ಮತ್ತು ಮ್ಯಾನ್ಮಾರ್ ಈ ಮೂರು ದೇಶಗಳು ಒಟ್ಟಾರೆ ಬಿದಿರು ಬೆಳೆಯ ಶೇ.80 ಪಾಲನ್ನು ಹೊಂದಿದೆ. ಬಿದಿರು ಹುಲ್ಲಿನ ಕುಟುಂಬಕ್ಕೆ ಸೇರಿದ ಸಸ್ಯವಾದರೂ ಅದನ್ನು ಕಟ್ಟಿಗೆ ಹುಲ್ಲು ಎಂದು ಪರಿಗಣಿಸಲಾಗುತ್ತದೆ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಹಲವು ಮರಗಳಿಂದ ಪಡೆಯಲಾಗುವ ದಿಮ್ಮಿಗಳಿಗಿಂತ ಹೆಚ್ಚು ಗಟ್ಟಿಯಾಗಿರುತ್ತದೆ. ವಾಸ್ತವದಲ್ಲಿ, ಪ್ರಮಾಣ ಮತ್ತು ಗಟ್ಟಿತನ ಅನುಪಾತವನ್ನು ಗಣನೆಗೆ ತೆಗೆದುಕೊಂಡರೆ ಬಿದಿರು ಸ್ಟೀಲನ್ನೂ ಮೀರಿಸುತ್ತದೆ. ಇದೇ ಕಾರಣದಿಂದ ಚೀನಾ ತನ್ನ ಗಾಳಿಯಂತ್ರಗಳಲ್ಲಿ ಬಿದಿರಿನ ರೆಕ್ಕೆಗಳನ್ನು ಅಳವಡಿಸಿದೆ. ಆಮೂಲಕ ಸ್ಟೀಲ್‌ಗಿಂತ ಶೇ.14 ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ.
ಬಿದಿರು ಛಿದ್ರಗೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿರುವ ಕಾರಣದಿಂದ ಚೀನಾ ಅದನ್ನು ಸುರಂಗಗಳಿಗೆ ಮತ್ತು ಪೈಪ್‌ಗಳಿಗೆ ವಸ್ತುವಾಗಿ ಬಳಸುತ್ತದೆ (ಅಗತ್ಯ ರಸಾಯನಿಕಗಳನ್ನು ಬಳಸಿದ ನಂತರ). ಇದನ್ನು ಮಧ್ಯ ಏಶ್ಯಾದ್ಯಂತ ನಿರ್ಮಾಣಗೊಳ್ಳುತ್ತಿರುವ ವನ್ ಬೆಲ್ಟ್, ವನ್ ರೋಡ್‌ನಲ್ಲಿ ಕಾಣಬಹುದಾಗಿದೆ.
ಬಿದಿರಿನ ಶೀಘ್ರ ಬೆಳೆಯುವ ಗುಣದಿಂದ ಅದನ್ನು ನಗದು ಬೆಳೆ ಎಂದು ಪರಿಗಣಿಸಲಾಗುತ್ತದೆ. ಬಿದಿರಿನ ಕೆಲವೊಂದು ವಿಧಗಳು ಆರಂಭಿಕ ಹಂತದಲ್ಲಿ 24 ಗಂಟೆಯಲ್ಲಿ ಒಂದು ಮೀಟರ್‌ನಷ್ಟು ಬೆಳೆದ ಉದಾಹರಣೆಗಳು ಇವೆ. ನಾಲ್ಕೈದು ವರ್ಷಗಳಲ್ಲಿ ಬಿದಿರು 40ರಿಂದ 60 ಅಡಿ ಎತ್ತರ ಬೆಳೆಯಬಲ್ಲುದು. ಅದರ ಸ್ಥಿತಿಸ್ಥಾಪಕ ಗುಣದಿಂದಾಗಿ ಜೋರಾದ ಗಾಳಿಯನ್ನೂ ತಡೆಯುವ ಶಕ್ತಿ ಬಿದಿರಿಗಿದೆ.
ಇವೆಲ್ಲದರ ಹೊರತಾಗಿ, ಬಿದಿರು ಬೆಳೆಯುವುದರಿಂದ ಪರಿಸರಕ್ಕೂ ಅಗಾಧವಾದ ಲಾಭವಿದೆ. ಬಿದಿರು ಶೇ.35 ಅಧಿಕ ಆಮ್ಲಜನಕ ಉತ್ಪಾದಿಸುತ್ತದೆ. ಜಪಾನ್‌ನಲ್ಲಿ ನಡೆಸಲಾದ ಸಂಶೋಧನೆಯಲ್ಲಿ ಬಿದಿರು ವಾರ್ಷಿಕ ಪ್ರತಿ ಹೆಕ್ಟೇರ್‌ಗೆ 12 ಟನ್ ಇಂಗಾಲದ ಡೈಆಕ್ಸೈಡ್ ಹೀರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಗಾಳಿಯನ್ನು ಶುದ್ಧೀಕರಿಸುವಲ್ಲಿ ಬಿದಿರಿನ ಪಾತ್ರ ಎಲ್ಲರಿಗೂ ತಿಳಿದಿದ್ದರೂ ಅದನ್ನು ಬೆಳೆಯುವವರು ಮಾತ್ರ ಬಿದಿರಿನ ಆರ್ಥಿಕ ಉಪಯೋಗಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.
ಹಾಗಾಗಿ, ವೌಲ್ಯ ಸರಪಳಿಯಲ್ಲಿ ಬಿದಿರಿನ ಪಾತ್ರವನ್ನು ಹೆಚ್ಚಿಸುವುದು ವಿಜ್ಞಾನಿಗಳಿಗೆ ಬಹಳ ಸವಾಲಿನ ಕೆಲಸವಾಗಿದೆ. ಬೆಂಗಳೂರು ಮೂಲದ ಬಿದಿರನ್ನು ಬಿಲ್ಡರ್‌ಗಳು, ವಿನ್ಯಾಸಗಾರರು ಮತ್ತು ಶಿಲ್ಪಕಲೆಗಾರರ ಅಂದಾಜಿನಂತೆ ಬೆಳೆಸಲು ಸೂಕ್ತ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಲಾಗಿದೆ.
ಕಳೆದ ಐವತ್ತು ವರ್ಷಗಳಿಂದ ನಡೆಯುವ ಸಂಶೋಧನೆಗಳ ಮತ್ತು ತಂತ್ರಜ್ಞಾನದ ವರ್ಗಾವಣೆಯ ಫಲವಾಗಿ ಬೆಂಗಳೂರು ಮತ್ತು ತ್ರಿಪುರಾ ಮುಂತಾದ ಬಹಳ ದೂರದ ರಾಜ್ಯಗಳಲ್ಲೂ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳು ತಲೆಯೆತ್ತಿವೆ. ಆದರೆ ತ್ರಿಪುರಾ ಹೊರತಾಗಿ ಇತರ ಈಶಾನ್ಯ ರಾಜ್ಯಗಳಲ್ಲಿ ಕೈಗಾರೀಕರಣ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆಯದಿರುವ ಕಾರಣ ಈ ರಾಜ್ಯಗಳಲ್ಲಿ ಬಿದಿರು ಉದ್ಯಮಕ್ಕೆ ಚಾಲನೆ ನೀಡುವುದೂ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಇಕ್ಯಾ ಮತ್ತು ವಾಲ್ಮಾರ್ಟ್‌ನಂತಹ ಸಂಸ್ಥೆಗಳು ಭಾರತದಲ್ಲಿ ಶಾಪಿಂಗ್ ಮಾಲ್‌ಗಳನ್ನು ತೆರೆದಿದ್ದು ಇಲ್ಲಿಂದಲೇ ಬಿದಿರು ಉತ್ಪನ್ನಗಳನ್ನು ಖರೀದಿಸುವ ಆಸಕ್ತಿಯನ್ನು ತೋರಿಸಿವೆ. ಆದರೆ ಅವರ ಬೇಡಿಕೆಗನುಗುಣವಾಗಿ ಉತ್ಪನ್ನಗಳನ್ನು ಒದಗಿಸುವ ಪೂರೈಕೆದಾರರು ಸದ್ಯ ಭಾರತೀಯ ವಲಯದಿಂದ ಬಹಳ ದೂರವಿದ್ದಾರೆ.
ಬಿದಿರಿನ ಜೊತೆ ಈಶಾನ್ಯ ರಾಜ್ಯಗಳಿಗಿರುವ ಸಮೀಪದ ಸಂಬಂಧದ ದೃಷ್ಟಿಯಿಂದ 2006ರಲ್ಲಿ ರಾಷ್ಟ್ರೀಯ ಬಿದಿರು ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ 950 ಬಿಲಿಯನ್ ಡಾಲರ್ ವೌಲ್ಯದ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.27 ಪಾಲನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಲಾಯಿತು. ಇದರಲ್ಲಿ ಬಿದಿರಿನ ಕೃಷಿ ಮತ್ತು ಪ್ರಚಾರದಲ್ಲಿ ಯಶಸ್ಸು ಕಂಡರೂ ಬೆಳೆಗಾರರು ಮತ್ತು ಕೈಗಾರಿಕೆಯ ಮಧ್ಯೆ ಸಂಬಂಧ ಕಲ್ಪಿಸುವಲ್ಲಿ ವಿಫಲವಾಯಿತು.
2015ರ ವೇಳೆಗೆ ನಿಗದಿಪಡಿಸಲಾಗಿದ್ದ ಗುರಿಯನ್ನು ತಲುಪುವಲ್ಲಿ ಈ ಯೋಜನೆ ವಿಫಲವಾಯಿತು ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಪಾಲು 4.5 ಬಿಲಿಯನ್ ಡಾಲರ್‌ಗೆ ಸೀಮಿತವಾಗಿ ಉಳಿಯಿತು.
2018ರಲ್ಲಿ ಸಮರ್ಥನೀಯ ಕೃಷಿಯ ರಾಷ್ಟ್ರೀಯ ಯೋಜನೆಯಡಿ ಉಪಯೋಜನೆಯಾಗಿ ಎರಡನೇ ರಾಷ್ಟ್ರೀಯ ಬಿದಿರು ಯೋಜನೆಗೆ ಚಾಲನೆ ನೀಡಲಾಯಿತು. 1,290 ಕೋಟಿ ರೂ. ನಿಗದಿಪಡಿಸಲಾಗಿದ್ದ ಈ ಯೋಜನೆಯಲ್ಲಿ ಸದ್ಯ ಭಾರತದ ಬಿದಿರು ಉತ್ಪಾದನೆ ಪ್ರತಿ ಹೆಕ್ಟೇರ್‌ಗೆ 3ರಿಂದ 6 ಟನ್‌ಗೆ ಏರಿಸುವತ್ತ ಗಮನಹರಿಸಲಾಯಿತು.
ಭಾರತದಲ್ಲಿ ಬೆಳೆಯುವ ಒಟ್ಟಾರೆ ಬಿದಿರಿನಲ್ಲಿ ಶೇ.65 ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಮಧ್ಯ ಪ್ರದೇಶ, ಛತ್ತೀಸ್‌ಗಡ, ಕೇರಳ ಮತ್ತು ಕರ್ನಾಟಕದಲ್ಲಿ ಕ್ರಮವಾಗಿ 11,8,7 ಮತ್ತು 5.5 ಶೇಕಡಾ ಬಿದಿರು ಉತ್ಪಾದಿಸಲಾಗುತ್ತದೆ.
ವಾಸಸ್ಥಳದ ನಿರ್ಮಾಣವಾಗಲಿ, ಗೃಹೋಪಯೋಗಿಯಾಗಲಿ ಅಥವಾ ಆಹಾರದ ರೂಪದಲ್ಲೇ ಆಗಲಿ ಬಿದಿರು ಈಶಾನ್ಯ ಭಾರತದ ಏಳು ರಾಜ್ಯಗಳ ಜೀವನದ ಸಂಸ್ಕೃತಿ ಮತ್ತು ಬದುಕಿನಲ್ಲಿ ಹಾಸುಹೊಕ್ಕಿದೆ. ಈ ರಾಜ್ಯಗಳಲ್ಲಿ ತಯಾರಿಸಲಾಗುವ ವೈವಿಧ್ಯಮಯ ಕರಕುಶಲ ವಸ್ತುಗಳಲ್ಲಿ ಬಳಸಲಾಗುವ ಮುಖ್ಯ ವಸ್ತು ಬಿದಿರಾಗಿದೆ. ಉತ್ತರ ಭಾರತದಾದ್ಯಂತದ ಗ್ರಾಮೀಣ ಭಾಗದ ಮನೆಗಳಲ್ಲಿ ಕಾಣಸಿಗುವ ಅನೇಕ ವಸ್ತುಗಳನ್ನು ಬಿದಿರಿನಿಂದ ತಯಾರಿಸಲಾಗಿರುತ್ತದೆ. ದೇಶಾದ್ಯಂತ ಬಳಸಲಾಗುವ ಗೃಹೋಪಯೋಗಿ ಏಣಿಗಳು ಮತ್ತು ಕುರ್ಚಿಗಳು ಬಹುತೇಕ ಬಿದಿರಿನಿಂದ ತಯಾರಿಸಲ್ಪಟ್ಟಿರುತ್ತವೆ. ಕಡಿಮೆ ತೂಕ, ಪರಿಸರಸ್ನೇಹಿ, ಭಾರ ಹೊರುವ ಮತ್ತು ಭೂಕಂಪನಿರೋಧಕ ಗುಣಗಳಿಂದಾಗಿ ಬಿದಿರು ಇತರ ಮರದ ವಸ್ತುಗಳಿಗೆ ಪರ್ಯಾಯವಾಗಿ ಬಳಸುವ ಸವಿಸ್ತಾರ ಅವಕಾಶವನ್ನು ಒದಗಿಸುತ್ತದೆ. ಒಂದು ಪ್ರತಿಫಲದಾಯಕ ಅರಣ್ಯಕೃಷಿ ಬೆಳೆಯಾಗಿ ಬಿದಿರು ಭಾರತದ ಒಳಗೆ ಮತ್ತು ಹೊರಗೆ ವೌಲ್ಯ ಸರಪಳಿ ಜಾಲದ ನಿರ್ಮಾಣದ ಪೂರ್ವಸೂಚಕವಾಗಿದೆ. ಫೆಬ್ರವರಿ 9ರಿಂದ 12ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬಿದಿರಿನ ವಸ್ತುಗಳ ಅಂತರ್‌ರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಬಿದಿರಿನಿಂದ ತಯಾರಿಸಿದ ವಸ್ತುಗಳ ಪ್ರೋತ್ಸಾಹ ಮತ್ತು ಎರಡನೇ ರಾಷ್ಟ್ರೀಯ ಬಿದಿರು ಯೋಜನೆಯನ್ನು ಯಶಸ್ವಿಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.