ಮೋದಿ ಆಳ್ವಿಕೆಯಲ್ಲಿ ಹುಲುಸಾಗಿ ಬೆಳೆದ ಭ್ರಷ್ಟಾಚಾರದ ಬೆಳೆ

ಮೋದಿ ಅಳ್ವಿಕೆಯಲ್ಲಿ ಭಾರತದ ಸ್ಥಿತಿ ಹೊಸತೇನೂ ಅಲ್ಲ ಅಥವಾ ವಿಶಿಷ್ಟವೂ ಅಲ್ಲ. ಅಧಿಕಾರಕ್ಕೇರಲು ಹಂಬಲಿಸುವ ಪ್ರತಿಯೊಂದು ಸರಕಾರವು ಬಡತನವನ್ನು ಕೊನೆಗೊಳಿಸುವ ಹಾಗೂ ಸಮೃದ್ಧಿಯನ್ನು ತರುವಂತಹ ಜನಪ್ರಿಯ ಭರವಸೆಗಳನ್ನು ನೀಡುತ್ತದೆ. ಆದರೆ ಅಧಿಕಾರಕ್ಕೇರಿದ ಬಳಿಕ ಸರಕಾರವು ಭ್ರಷ್ಟಾಚಾರದ ಬೆಳೆ ತೆಗೆಯುತ್ತದೆ. ಮೋದಿ ಆಡಳಿತದಲ್ಲಿ ನಡೆದಿರುವುದು ಇದೇ ಆಗಿದೆ.
ದಿ ಹಿಂದೂ ದಿನಪತ್ರಿಕೆಯು ಪ್ರಕಟಿಸಿರುವ ಆಘಾತಕಾರಿ ವರದಿಯು, ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದ ಮಾತುಕತೆಗಳಲ್ಲಿ ಪ್ರಧಾನಿ ಕಾರ್ಯಾಲಯವು ನೇರಹಸ್ತಕ್ಷೇಪ ನಡೆಸಿತ್ತು ಎಂಬುದಕ್ಕೆ ಬಲವಾದ ಪುರಾವೆಯನ್ನು ಒದಗಿಸಿಕೊಟ್ಟಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪ್ರಧಾನಿಯವರೇ ತನ್ನ ಉನ್ನತಾಧಿಕಾರವನ್ನು ಬಳಸಿಕೊಂಡು ಖುದ್ದಾಗಿ ಭ್ರಷ್ಟಾಚಾರ ಕೃತ್ಯದ ನೇತೃತ್ವ ವಹಿಸಿದ್ದಾರೆ.
ಎನ್.ರಾಮ್ ‘ ದಿ ಹಿಂದೂ’ ಪತ್ರಿಕೆಗೆ ಬರೆದ ವರದಿಯಲ್ಲಿ ‘‘ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರ ತಡೆಗಟ್ಟುವ ಕುರಿತಾದ ಉಪವಾಕ್ಯವನ್ನು ರದ್ದುಪಡಿಸಿತ್ತು ಹಾಗೂ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ತಾನು ನಡೆಸುತ್ತಿರುವ ಮಾತುಕತೆಗಳನ್ನು ಪ್ರಧಾನಿ ಕಾರ್ಯಾಲಯವು ಕಡೆಗಣಿಸುತ್ತಿರುವುದಕ್ಕೆ ರಕ್ಷಣಾ ಸಚಿವಾಲಯವು ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತೆಂಬುದನ್ನು ಬಯಲಿಗೆಳೆದಿದೆ. ಈ ಸರಕಾರವು ಭ್ರಷ್ಟಾಚಾರ ಪೀಡಿತವಾಗಿದೆ ಹಾಗೂ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ದೇಶವನ್ನು ತಪ್ಪುದಾರಿಗೆ ಎಳೆಯುತ್ತಿದೆಯೆಂಬುದಕ್ಕೆ ಪ್ರಬಲ ಪುರಾವೆಯನ್ನು ಅದು ನೀಡಿದೆ.
ತಾನು ಭ್ರಷ್ಟಾಚಾರ ಮುಕ್ತ ಸರಕಾರವನ್ನು ನೀಡಿದ್ದೇನೆಂದು ಹೇಳಿಕೊಳ್ಳಲು ಅಷ್ಟೇ ಬಲಿಷ್ಠವಾದ ದಾಖಲೆಗಳ ಸಾಕ್ಷಾಧಾರಗಳನ್ನು ಒದಗಿಸುವ ಹೊಣೆಗಾರಿಕೆ ಬಿಜೆಪಿಗಿದೆ. ರಫೇಲ್ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕವಾಗಿ ನಿರಾಕರಿಸುವುದರಿಂದ ದೇಶಕ್ಕೆ ಮನವರಿಕೆ ಮಾಡಲು ಸಾಧ್ಯವಿಲ್ಲ. ಇಷ್ಟಕ್ಕೂ ಇದು ಸಣ್ಣ ವಿಷಯವೇನೂ ಅಲ್ಲ ಮತ್ತು ಅದನ್ನು ಚಾಪೆಯಡಿ ಮುಚ್ಚಿಡಲು ಸಾಧ್ಯವಿಲ್ಲ. ಈ ಹಗರಣದಲ್ಲಿ ದೇಶದ ಅತ್ಯುನ್ನತ ಕಾರ್ಯನಿರ್ವಹಣಾ ಕಚೇರಿಯಾದ ಪ್ರಧಾನಿ ಕಾರ್ಯಾಲಯದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ದಿ ಹಿಂದೂ ಒದಗಿಸಿರುವ ನೂತನ ಪುರಾವೆಯು, ಸುಪ್ರೀಂಕೋರ್ಟ್‌ನಿಂದ ವಿಚಾರಣೆಗೊಳಗಾಗಲು ಯೋಗ್ಯವಾದ ಪ್ರಕರಣವಾಗಿದೆ. ರಫೇಲ್ ಪ್ರಕರಣದಲ್ಲಿ ಕೇಂದ್ರ ಸರಕಾರಕ್ಕೆ ಈಗಾಗಲೇ ಕ್ಲೀನ್‌ಚಿಟ್ ನೀಡಿದ್ದ ಸುಪ್ರೀಂಕೋರ್ಟ್ ಆ ಪ್ರಕರಣದ ವಿಚಾರಣೆಯನ್ನು ಪುನಾರಂಭಿಸಬೇಕಾಗಿದೆ.
ಇದೀಗ ಈ ಹಗರಣಕ್ಕೆ ಹೊಸ ತಿರುವು ದೊರೆತಿದೆ ಹಾಗೂ ದೇಶದ ಅತ್ಯುನ್ನತ ಹುದ್ದೆಗೆ ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶ ಅತ್ಯಗತ್ಯವಾಗಿದೆ.
ರಫೇಲ್ ಒಪ್ಪಂದ ಹಗರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪುನಾರಂಭಿಸಲಿದೆಯೇ ಮತ್ತು ದೇಶವನ್ನು ಯಾರು ತಪ್ಪುದಾರಿಗೆಳೆಯುತ್ತಿದ್ದಾರೆಂಬ ಬಗ್ಗೆ ತನಿಖೆಗೆ ಆದೇಶಿಸಲಿದೆಯೇ? ಕಟಕಟೆಯಲ್ಲಿ ನಿಂತು ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಅದು ಸೂಚನೆ ನೀಡಲು ಸಾಧ್ಯವಿಲ್ಲವೇ?.ಅಥವಾ ಪ್ರಧಾನಿ ಕಾರ್ಯಾಲಯವು ಭ್ರಷ್ಟಾಚಾರದ ಕರ್ಮಕಾಂಡವನ್ನು ಒಪ್ಪಿಕೊಳ್ಳುವುದೇ?. ಒಟ್ಟಾರೆ ಇಡೀ ದೇಶಕ್ಕೆ ಇದೊಂದು ಅಗ್ನಿಪರೀಕ್ಷೆಯ ಕಾಲವಾಗಿದೆ.
ಒಂದು ವೇಳೆ ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಕುತೂಹಲಕಾರಿ ತಿಕ್ಕಾಟ ನಡೆಯುತ್ತಿದ್ದಂತೆಯೇ, ಎರಡು ಪ್ರಜಾತಾಂತ್ರಿಕ ಸಂಕೇತಗಳಲ್ಲಿ ಯಾರು ಶ್ರೇಷ್ಠ ಎಂಬ ಬಗ್ಗೆಯೂ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹಿಂದೂ ಪತ್ರಿಕೆಯ ವರದಿಯಲ್ಲಿ ಹೊಸ ವಿಷಯಗಳು ಬಹಿರಂಗಗೊಂಡ ಬಳಿಕ ಚೆಂಡು ನ್ಯಾಯಾಲಯದ ಅಂಗಳಕ್ಕೆ ಬಂದಿದೆ. ರಫೇಲ್ ಪ್ರಕರಣವನ್ನು ಯಾವ ರೀತಿ ಅದು ನಿರ್ವಹಿಸಲಿದೆಯೆಂಬುದನ್ನು ಕಾದುನೋಡಬೇಕಾಗಿದೆ.
ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಇನ್ನೂ ತಾಂಡವವಾಡುತ್ತಿದೆ ಎಂಬ ಬಗ್ಗೆ ಅಮೆರಿಕದ ಔದ್ಯಮಿಕ ಪತ್ರಿಕೆ ‘ಫೋರ್ಬ್ಸ್’ ವಿವರಣಾತ್ಮಕವಾದ ಲೇಖನವೊಂದನ್ನು ಪ್ರಕಟಿಸಿದೆ. ಐದು ವರ್ಷಗಳ ಹಿಂದೆ, ಭಾರತದ ಜನತೆ ನರೇಂದ್ರ ಮೋದಿಯವರಿಗೆ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಅವರ ಪ್ರಮುಖ ಭರವಸೆಯನ್ನು ಸಾಕಾರಗೊಳಿಸಲು ಅವಕಾಶ ನೀಡಿದ್ದರು. ಆದರೆ ಇಂದು ಮೋದಿಯ ಭರವಸೆ, ಕೇವಲ ಭರವಸೆಯಾಗಿಯೇ ಉಳಿದುಕೊಂಡಿದ್ದು ಹಾಗೂ ಭ್ರಷ್ಟಾಚಾರವು ಈಗಲೂ ಭಾರತದಲ್ಲಿ ಅದರ ಎಲ್ಲಾ ಮಾಮೂಲಿ ಜಾಗಗಳಲ್ಲಿ ವ್ಯಾಪಕವಾಗಿ ಬೀಡುಬಿಟ್ಟಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರವು ತನ್ನ ಆಡಳಿತಾವಧಿಯ ಕೊನೆಯಲ್ಲಿ ಹಲವಾರು ಭ್ರಷ್ಟಾಚಾರ ಹಗರಣಗಳಿಂದ ಕಳಂಕಿತಗೊಂಡಿತ್ತು. ಇದೀಗ ಅದೇ ಕುಖ್ಯಾತಿ ಮೋದಿ ಸರಕಾರಕ್ಕೂ ತಗಲಿಕೊಂಡಿದೆ.
ಮೋದಿ ಆಡಳಿತಕ್ಕೆ ನಡುಕವುಂಟು ಮಾಡಿರುವ ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳ ಸಾಕ್ಷಾಧಾರಗಳನ್ನು ಪತ್ರಿಕೆಯು ಉಲ್ಲೇಖಿಸಿದೆ. 36 ರಫೇಲ್ ಫೈಟರ್ ಯುದ್ಧ ವಿಮಾನಗಳ ಖರೀದಿಗೆ ಫ್ರಾನ್ಸ್ ಜೊತೆ 60 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರ ಒಪ್ಪಂದ ಅವುಗಳಲ್ಲೊಂದಾಗಿದೆ. ಕಳೆದ ವರ್ಷ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ 200 ಕೋಟಿ ರೂ. ವಂಚನೆ ಹಗರಣ ಬಯಲಿಗೆ ಬಂದಿತು. ಇವೆರಡು ಹಗರಣಗಳು ಮೋದಿ ಆಡಳಿತದಲ್ಲಿ ದೇಶದಲ್ಲಿ ಕೋಲಾಹಲವೆಬ್ಬಿಸಿದ ಹಗರಣಗಳ ಮಂಜುಗಡ್ಡೆಯ ಮೇಲಿನ ತುದಿಯಷ್ಟೇ ಆಗಿದೆ ಎಂದು ಫೋರ್ಬ್ಸ್ ವರದಿಯಲ್ಲಿ ತಿಳಿಸಿದೆ.
ಈ ಮಧ್ಯೆ, ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಸಲ್ಲಿಸಿದ ವರದಿಯು ಅತ್ಯಧಿಕ ಲಂಚಗುಳಿತನ ಹಾಗೂ ಪತ್ರಿಕಾ ಸ್ವಾತಂತ್ರದ ಘೋರ ಉಲ್ಲಂಘನೆ ನಡೆಸುವ ಏಶ್ಯ ಪೆಸಿಫಿಕ್ ಪ್ರಾಂತದ ರಾಷ್ಟ್ರಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕೂಡಾ ಸೇರಿಕೊಂಡಿದೆ ಎಂದು ತಿಳಿಸಿದೆ. ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವೆನೆಂಬ ಘೋಷಣೆಯಂದಿಗೆ ಅಧಿಕಾರಕ್ಕೇರಿದ ಮೋದಿ ಸರಕಾರದ ವೈಫಲ್ಯದ ಬಗ್ಗೆ ಬೆಳಕು ಚೆಲ್ಲುವ ಇನ್ನೊಂದು ವರದಿ ಇದಾಗಿದೆ.
ಸಿಪಿಜೆ ಪ್ರಮುಖ ರಾಜಕೀಯೇತರ, ಸ್ವತಂತ್ರ, ಸರಕಾರೇತರ ಸಂಸ್ಥೆಯಾಗಿದ್ದು, 175 ದೇಶಗಳ ಪೈಕಿ 78 ದೇಶಗಳನ್ನು ಮೋದಿ ಆಡಳಿತವು ಭ್ರಷ್ಟಾಚಾರದ ರ್ಯಾಂಕಿಂಗ್ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಈ ವಿಷಯದಲ್ಲಿ ಭಾರತದ ಇತ್ತೀಚಿನ ರ್ಯಾಂಕಿಂಗ್ 2015ರ ರ್ಯಾಂಕಿಂಗ್‌ಗಿಂತಲೂ ಅತ್ಯಂತ ಕಳಪೆಯದ್ದಾಗಿದೆ.
ಅಧಿಕಾರಕ್ಕೇರಿದ ಬಳಿಕ ಭ್ರಷ್ಟಾಚಾರವನ್ನು ನಿಯಂತ್ರಿಸಲು ನರೇಂದ್ರ ಮೋದಿ ಕೆಲವೊಂದು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರು. ಕಪ್ಪುಹಣವನ್ನು ತೊಲಗಿಸಲು ಅವರು 500 ಹಾಗೂ 1000 ರೂ.ಗಳ ನೋಟುಗಳನ್ನು ನಿಷೇಧಿಸಿದರು. ಆದರೆ ಈ ಕ್ರಮಗಳು ಯಾವುದೇ ವಾಸ್ತವಿಕವಾದ ಫಲಿತಾಂಶಗಳನ್ನು ಸಾಧಿಸುವಲ್ಲಿ ವಿಫಲವಾದವು. ಕೇಂದ್ರ ಸರಕಾರಕ್ಕೆ ಪ್ರಸಕ್ತ 41 ಕೋಟಿ ರೂ. ನಕಲಿ ಕರೆನ್ಸಿ ನೋಟುಗಳನ್ನು ಮಾತ್ರವೇ ವಶಪಡಿಸಿಕೊಳ್ಳಲು ಸಾಧ್ಯವಾಯಿತು.ಇದು ದೇಶದ ಒಟ್ಟು ಕರೆನ್ಸಿಯ 0.0027 ಭಾಗ ದಷ್ಟು ಮಾತ್ರವೇ ಆಗಿದೆ.
ಬಿಜೆಪಿ ಆಳ್ವಿಕೆಯ ಅಂತಿಮ ಘಟ್ಟದಲ್ಲಿ, ಪ್ರಧಾನಿ ಮೋದಿಯವರು ದೇಶದ ತಳಮಟ್ಟದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಹಾಗೆ ಕಾಣಿಸುತ್ತಿದೆಯಾದರೂ, ಉನ್ನತ ಸ್ಥಳಗಳಲ್ಲಿ ಅದರಲ್ಲೂ ಶ್ರೀಮಂತರಿಂದ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅವರು ಗಾಢ ವೌನ ವಹಿಸಿದ್ದಾರೆ. ರಫೇಲ್ ಹಗರಣ ಹಾಗೂ ಪಂಜಾಬ್ ನ್ಯಾಶನಲ್ ಬ್ಯಾಂಕ್ ಪ್ರಕರಣಗಳು ಈ ಪ್ರವೃತ್ತಿಗೆ ನಿದರ್ಶನಗಳಾಗಿವೆ.
ಜಿಡಿಪಿ ಬೆಳವಣಿಗೆ ದರ ಅಥವಾ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದ ಸರಕಾರ ಪ್ರಕಟಿಸುತ್ತಿರುವ ಅಂಕಿಅಂಶಗಳೇನೆ ಇರಲಿ, ಭಾರತವು ಭ್ರಷ್ಟಾಚಾರಕ್ಕೆ ಫಲವತ್ತಾದ ನೆಲವಾಗಿ ಪರಿಣಮಿಸಿದೆ. ಅರ್ಥಿಕ ಬೆಳವಣಿಗೆಯ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ಹರಡುವಲ್ಲಿ ಮೋದಿ ಸರಕಾರ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೈಬೆರಳೆಣಿಕೆಯ ಶ್ರೀಮಂತ ಉದ್ಯಮಿಗಳು ಬೆಳೆಯುವುದಕ್ಕೆ ಉತ್ತೇಜನ ನೀಡುವ ಮೂಲಕ ಸರಕಾರದ ಪರ ಒಲವಿನ ಬಂಡವಾಳಶಾಹಿವಾದವು ತಲೆಯೆತ್ತುವುದಕ್ಕೆ ಅವಕಾಶ ಮಾಡಿಕೊಟ್ಟರು.
ಒಂದು ವೇಳೆ ನಾವು ಹಿಂದಿರುಗಿ ನೋಡಿದಾಗ, ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರಕಾರವು 2014ರಲ್ಲಿ ಪರಾಕಾಷ್ಠೆಗೆ ತಲುಪಿತು. ಇದರ ಪರಿಣಾಮವಾಗಿ ಬಿಜೆಪಿ ಸರಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತಾಯಿತು. ತಾನು ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ಇತರರಿಗೂ ಭ್ರಷ್ಟಾಚಾರವೆಸಗಲು ಅನುಮತಿ ನೀಡುವುದಿಲ್ಲವೆಂದು ಹೇಳುವ ಮೂಲಕ ಪ್ರಧಾನಿ ಮೋದಿ ಕೋಟ್ಯಂತರ ಜನರ ಆಶೋತ್ತರಗಳಿಗೆ ಸಾಕ್ಷಾತ್ಕಾರಗೊಳಿಸಿದರು. ಆದರೆ ದೇಶದಿಂದ ಭ್ರಷ್ಟಾಚಾರವನ್ನು ತೊಲಗಿಸುವ ಅವರ ಭರವಸೆಯು ಬೊಮ್ಮನಹಳ್ಳಿಯ ಕಿಂದರಿಜೋಗಿಯು ತನ್ನ ಸಂಗೀತದ ಮೂಲಕ ಇಲಿಗಳನ್ನು ಮೋಡಿ ಮಾಡಿ, ಊರಿನಾಚೆಗೆ ಕೊಂಡೊಯ್ದ ಕತೆಯಂತಿದೆ. ಈ ಪ್ರಕರಣದಲ್ಲಿ ದೇಶವು ನರೇಂದ್ರ ಮೋದಿಯ ಅಚ್ಛೇದಿನ್ ಘೋಷಣೆಗೆ ಸ್ಪಂದಿಸಿ ನರೇಂದ್ರ ಮೋದಿಯವರಿಗೆ ಬಹುಮತದ ಬೆಂಬಲವನ್ನು ಘೋಷಿಸಿದೆ.
ಆದರೆ ಮೋದಿ ಆಳ್ವಿಕೆಯಲ್ಲಿ ಯಾವುದೇ ಬದಲಾವಣೆಯುಂಟಾಗಲಿಲ್ಲ. ಮೋದಿ ಆಡಳಿತದ ಬಳಿಕ ಭಾರತೀಯರ ಜೀವನಶೈಲಿಯಲ್ಲಿ ಯಾವುದಾದರೂ ಮಹತ್ವದ ಬದಲಾವಣೆಯಾಗಿದೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಿದಲ್ಲಿ ಖಂಡಿತವಾಗಿಯೂ ಅದು ನಕಾರಾತ್ಮಕತೆಯ ಫಲಿತಾಂಶವೇ ದೊರೆಯಲಿದ್ದು, ಬಹುತೇಕ ಮಂದಿ ತಮ್ಮ ಜೀವನಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂದೇ ಉತ್ತರಿಸಿಯಾರು. ಇನ್ನು ಕೆಲವರು ಮೋದಿ ಅಳ್ವಿಕೆಯಲ್ಲಿ ತಮ್ಮ ಬದುಕು ದುಸ್ತರವಾಗಿದೆಯೆಂದು ಉತ್ತರ ನೀಡಲೂ ಬಹುದು.
ಮೋದಿ ಅಳ್ವಿಕೆಯಲ್ಲಿ ಭಾರತದ ಸ್ಥಿತಿ ಹೊಸತೇನೂ ಅಲ್ಲ ಅಥವಾ ವಿಶಿಷ್ಟವೂ ಅಲ್ಲ. ಅಧಿಕಾರಕ್ಕೇರಲು ಹಂಬಲಿಸುವ ಪ್ರತಿಯೊಂದು ಸರಕಾರವು ಬಡತನವನ್ನು ಕೊನೆಗೊಳಿಸುವ ಹಾಗೂ ಸಮೃದ್ಧಿಯನ್ನು ತರುವಂತಹ ಜನಪ್ರಿಯ ಭರವಸೆಗಳನ್ನು ನೀಡುತ್ತದೆ. ಆದರೆ ಅಧಿಕಾರಕ್ಕೇರಿದ ಬಳಿಕ ಸರಕಾರವು ಭ್ರಷ್ಟಾಚಾರದ ಬೆಳೆ ತೆಗೆಯುತ್ತದೆ. ಮೋದಿ ಆಡಳಿತದಲ್ಲಿ ನಡೆದಿರುವುದು ಇದೇ ಆಗಿದೆ.
ಇದೀಗ ರಾಹುಲ್‌ನಾಯಕತ್ವದಲ್ಲಿನ ಕಾಂಗ್ರೆಸ್ ಪಕ್ಷ ಕೂಡಾ ಅದನ್ನೇ ಮಾಡುತ್ತಿದೆ. ಅಧಿಕಾರಕ್ಕೆ ಬಂದಲ್ಲಿ ದೇಶದ ಚಿತ್ರಣವನ್ನೇ ಬದಲಾಯಿಸುವೆನೆಂಬ ಕನಸನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಆ ಕನಸುಗಳು ಕೂಡಾ ತುಂಬಾ ದುಬಾರಿಯಾಗಿವೆ.
ಕಳೆದ 70 ವರ್ಷಗಳಿಂದ ಪ್ರಗತಿಯೆಡೆಗೆ ಭಾರತದ ಪ್ರವಾಸವು, ಅತ್ಯಂತ ಕಡಿಮೆ ವೇಗದ ರೈಲಿನಲ್ಲಿ ಪ್ರವಾಸ ಮಾಡಿದಂತಿದೆ. ಜನರನ್ನು ಮರಳುಗೊಳಿಸಿ ಭಾರತೀಯ ರಾಜಕಾರಣಿಗಳು ಹಾಯಾಗಿ ವಿಹರಿಸುತ್ತಿದ್ದಾರೆ. ಆದರೆ ಮೂಕಪ್ರೇಕ್ಷಕರಾಗಿರುವ ಭಾರತದ ಜನಸಾಮಾನ್ಯರು ಬದಲಾಗುತ್ತಿರುವ ಭಾರತದ ಅಪರಿಪೂರ್ಣ ಚಿತ್ರವನ್ನಷ್ಟೇ ಕಾಣುತ್ತಿದ್ದಾರೆ.
ಕೃಪೆ: countercurrents.org