ಬಿಜೆಪಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆಯೇ?

ಭಾಗ-2
ತನ್ನ ಹಿಂದುತ್ವ ಪ್ರೊಜೆಕ್ಟ್, ಗೋರಕ್ಷಣೆ, ರಾಮ ಮಂದಿರ ನಿರ್ಮಾಣ, ರಾಷ್ಟ್ರೀಯ ಪೌರತ್ವ ದಾಖಲಾತಿ ಇತ್ಯಾದಿಗಳು ನಿರೀಕ್ಷಿತ ಫಲನೀಡದ ಕಾರಣದಿಂದಾಗಿ ಸಂಘಪರಿವಾರವು ಈಗ ಕಾಶ್ಮೀರ, ‘ಭಯೋತ್ಪಾದನೆ’ ಮತ್ತು ಪಾಕಿಸ್ತಾನವನ್ನು ತನ್ನ ಗಮನದ ಕೇಂದ್ರ ಬಿಂದುವಾಗಿ ಮಾಡಿಕೊಂಡಿದೆ ಅನಿಸುತ್ತದೆ. ಆದರೆ ಬಿಜೆಪಿ ಇಲ್ಲಿ ಕೂಡ ತನ್ನನ್ನು ತಾನೇ ಕಟ್ಟಿಹಾಕಿಕೊಂಡಿದೆ: ಕಾಶ್ಮೀರದೊಳಗಡೆಯೇ, ಬಿಜೆಪಿ ಆಡಳಿತವು ರಾಜ್ಯವನ್ನು ದಿನೇ ದಿನೇ ಹೆಚ್ಚುತ್ತಿರುವ ಹಿಂಸೆಯ ಸುಳಿಗೆ ತಳ್ಳಿದೆ.
ನಿಜ ಹೇಳಬೇಕೆಂದರೆ, ಬಾಲಕೋಟ್ ದಾಳಿಯ ಬಳಿಕ ಬಿಜೆಪಿಯು ಕಾಶ್ಮೀರದಲ್ಲಿ ನಡೆಯುವ ಪ್ರತಿಯೊಂದು ದೊಡ್ಡ ದಾಳಿಯ ಬಳಿಕ ಸೇನಾದಾಳಿಗಳನ್ನು ನಡೆಸಲೇಬೇಕಾದಂತಹ ಅನಿವಾರ್ಯ ಸ್ಥಿತಿಗೆ ತನ್ನನ್ನು ತಾನೇ ತಂದುಕೊಂಡಿದೆ. ಆದರೆ ಇಸ್ರೇಲ್ ಮತ್ತು ಅಮೆರಿಕದ ಸೇನಾದಾಳಿಗಳ ಅನುಭವಗಳು ತೋರಿಸಿಕೊಟ್ಟಿರುವಂತೆ, ಅಂತಹ ದಾಳಿಗಳಿಂದ, ದಾಳಿಗೆ ಗುರಿಯಾದ ಸಂಘಟನೆಗಳ ಮೇಲೆ ಯಾವ ದೊಡ್ಡ ಪರಿಣಾಮವೂ ಆಗುವುದಿಲ್ಲ.
ಇದರಲ್ಲಿ ವಿಶೇಷವೇನೂ ಇಲ್ಲ. ವಿಶ್ವದಾದ್ಯಂತ ಪ್ರತಿಯೊಂದು ಫ್ಯಾಶಿಸ್ಟ್ ಪಕ್ಷ ಮತ್ತು ಬಹು ಮತದ (ಮೆಜಾರಿಟೆೇರಿಯನ್) ರಾಜಕಾರಣ ಇಂತಹದೇ ದಾರಿಯಲ್ಲಿ ಸಾಗಿದೆ. ಈ ರಾಜಕಾರಣ ಮಾಡುವ ಸಂಘಟನೆಗಳು ಮತ್ತು ನಾಯಕರು ಇತರರನ್ನು ದಮನಿಸಲು ತಮ್ಮ ಹಿಂಬಾಲಕರಿಗೆ ಅಧಿಕಾರ ಮತ್ತು ಭದ್ರತೆ ನೀಡುವ ಭರವಸೆ ನೀಡುತ್ತಾರೆ. ಆದರೆ ಅಧಿಕಾರಕ್ಕೆ ಬಂದನಂತರ ತಾವೇ ಸೃಷ್ಟಿಸಿದ್ದ ಅಥವಾ ಸೃಷ್ಟಿಸುವ ಘರ್ಷಣೆೆಗಳನ್ನು ನಿಭಾಯಿಸಲಾಗದೆ, ಇನ್ನಷ್ಟು ಅಭದ್ರತೆ, ಅಸ್ಥಿರತೆ ಹಾಗೂ ತಿಕ್ಕಾಟವನ್ನು ಸೃಷ್ಟಿಸಿ ಅಂತಿಮವಾಗಿ ಅವರೇ ಕುಸಿದು ಬೀಳುತ್ತಾರೆ.
ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ
ಈ ತರಹದ ರಾಜಕಾರಣ ತಾನು ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾದಾಗ, ಆಶ್ವಾಸನೆಗಳನ್ನು ಈಡೇರಿಸಬಲ್ಲ ‘ನಿಜವಾದ’ ನಾಯಕನಿಗಾಗಿ, ನಾಯಕತ್ವಕ್ಕಾಗಿ ಸಂಘಟನೆಯ ಒಳಗಡೆಯೇ ಹುಡುಕಾಟ ಆರಂಭವಾಗುತ್ತದೆ. ಇದು ನಮ್ಮ ದೇಶದಲ್ಲಿ ಈಗಾಗಲೇ ಘಟಿಸುತ್ತಿದೆ. ಉದಾಹರಣೆಗೆ ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಎರಡು ಅತ್ಯಂತ ಪ್ರಮುಖ ವ್ಯಕ್ತಿಗಳಾಗಿರುವ ಮೋದಿ ಮತ್ತು ಶಾ ಬಳಿಕ ಆದಿತ್ಯನಾಥ್ ಮತ್ತು ಸಾಧ್ವಿ ಪ್ರಜ್ಞಾ ಠಾಕೂರ್ ಮುನ್ನೆಲೆಗೆ ಬಂದಿರುವುದು ಖಂಡಿತ ವಾಗಿಯೂ ಒಂದು ಆಕಸ್ಮಿಕವಲ್ಲ. ಈ ಇಬ್ಬರೂ ಕೂಡ ಹೊರಗಿನವರು ಮತ್ತು ಆರೆಸ್ಸೆಸ್‌ನ ಭಾಗವಾಗಿ ಇದ್ದವರಲ್ಲ ಎಂಬುದು ಗಮನಾರ್ಹ.
ಠಾಕೂರ್‌ರವರ ಪ್ರಕರಣ ವಿಶೇಷವಾಗಿ ಗಮನಿಸಬೇಕಾದದ್ದು, ಆರೆಸ್ಸೆಸ್ ತನ್ನ ಸಂಘಟನೆಯಲ್ಲಿ ಐವತ್ತು ಲಕ್ಷ ಸದಸ್ಯರಿದ್ದಾರೆ ಎಂದು ಹೇಳಿಕೊಳ್ಳುತ್ತದೆ. ಆದರೆ ಸ್ವತಃ ತನ್ನ ಕ್ಯಾಡರ್‌ನ ಒಬ್ಬರನ್ನು ಕೊಲೆಮಾಡಿದ್ದಕ್ಕಾಗಿ ಮೊದಲ ಬಾರಿ ಬಂಧಿಸಲ್ಪಟ್ಟ ಮತ್ತು ಆರೆಸ್ಸೆಸ್ ಹೇಳುವ ಪ್ರಕಾರವೇ, ಅದರ ನಾಯಕರನ್ನು ಕೊಲೆಮಾಡಲು ಪ್ರಯತ್ನಿಸುತ್ತಿದ್ದರು ಎನ್ನುವ ಓರ್ವ ಮಹಿಳೆಯನ್ನು ಮುಂದಕ್ಕೆ ತರುವುದಕ್ಕಾಗಿ, ಪ್ರಮೋಟ್ ಮಾಡುವುದಕ್ಕಾಗಿ ಆರೆಸ್ಸೆಸ್ ಆ ಎಲ್ಲ ಐವತ್ತು ಲಕ್ಷ ಸದಸ್ಯರನ್ನು ಉಪೇಕ್ಷಿಸಿದೆ. ಇದು ಸಣ್ಣ ಸಂಗತಿಯಲ್ಲ. ಭವಿಷ್ಯದ ಹಿಂದೂ ಸಮಾಜಕ್ಕೆ ಇದು ಮಾದರಿ ನಾಯಕತ್ವವಲ್ಲ. ಯಾಕೆಂದರೆ ಇದು ಹಿಂದುತ್ವ ಚಳವಳಿಗೇ ‘ಮಾದರಿ’ಯಲ್ಲ. ಮುರಿಯುವ ಪ್ರಕ್ರಿಯೆ ಸಂಘಟನೆಯ ಒಳಗೆ ಈಗಾಗಲೇ ಆರಂಭವಾಗಿದೆ.
ವಿರೋಧ ಶಕ್ತಿಗಳ ಉದಯ
ಈ ಚುನಾವಣೆಯಲ್ಲಿ ಎಲ್ಲ ವಿರೋಧ ಪಕ್ಷಗಳು ಮೈತ್ರಿಗಾಗಿ ಒಟ್ಟಾಗಿಲ್ಲ. ಅಲ್ಲದೆ ಚುನಾವಣಾ ರಾಜಕೀಯವೇ ಸರ್ವಸ್ವವಲ್ಲ. ಏನು ಹೇಳಿದರೂ, ಆರೆಸ್ಸೆಸ್ ಇಂದು ಭಾರತದ ರಾಜಕಾರಣದಲ್ಲಿ ಪ್ರಬಲವಾಗಿದೆ. ಯಾಕೆಂದರೆ ಆರು ದಶಕಗಳ ಕಾಲ ಆರು ಚುನಾವಣೆಗಳಿಗೆ ಸಂಬಂಧವೇ ಇಲ್ಲದಂತಹ ಕೆಲಸದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿ ಕೆಲಸ ಮಾಡಿದೆ. ಈ ಅರ್ಥದಲ್ಲಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರತೀಯ ಸಮಾಜ ಮತ್ತು ರಾಜಕಾರಣದಲ್ಲಿ ವಿರೋಧ ಪಕ್ಷಗಳ ನಡುವೆ ಕೆಲವೊಮ್ಮೆ ಅಭೂತ ಪೂರ್ವವಾದ ಸಂಬಂಧಗಳು ಏರ್ಪಟ್ಟಿರುವುದು ತುಂಬಾ ಮಹತ್ವಪೂರ್ಣವಾಗಿದೆ.
ಉದಾಹರಣೆಗೆ 2014ರಿಂದ ಕಳೆದ ಐದು ವರ್ಷಗಳಲ್ಲಿ, ರಾಷ್ಟ್ರಮಟ್ಟದಲ್ಲಿ ಖ್ಯಾತರಾದ ಸಾಹಿತಿಗಳು, ಲೇಖಕರು ಪ್ರಶಸ್ತಿ ಹಿಂದಿರುಗಿಸುವುದನ್ನು(ಅವಾರ್ಡ್ ವಾಪ್ಸಿ) ನಾವು ಕಂಡಿದ್ದೇವೆ. ಈ ಹಿಂದೆ ಎಂದೂ ನಡೆದಿರದಿದ್ದ ವಿದ್ಯಮಾನ ಇದು. ಹಾಗೆಯೇ ಈಗಾಗಲೇ ಹೇಳಿರುವಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ(ಜೆಎನ್‌ಯು) ಕೆಲವು ವಿದ್ಯಾರ್ಥಿಗಳು ದಿಢೀರನೆ ರಾಷ್ಟ್ರ ಮಟ್ಟದ ವ್ಯಕ್ತಿಗಳಾಗಿ, ಹೀರೋಗಳಾಗಿ ಮಿಂಚಿದರು; ಜಮೀನು ಮತ್ತು ದಲಿತರ ಹಕ್ಕುಗಳ ಬಗ್ಗೆ ಒಂದೇ ಉಸಿರಿನಲ್ಲಿ ಮಾತನಾಡುವ ಗುಜರಾತಿನ ಓರ್ವ ದಲಿತ ನಾಯಕನೊಂದಿಗೆ ಅವರು ಮೈತ್ರಿ ಮಾಡಿಕೊಂಡರು. ಈಗ ಅವರು ಸಿನೆಮಾ ನಟರ, ಲೇಖಕರ, ಮೀಡಿಯಾದ ಬೆಂಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರಿಗೆ ಈಗ ಸಿಕ್ಕಿರುವ ಸಾಮಾಜಿಕ ಬೆಂಬಲವು ಮೋದಿಯನ್ನು ಹೊರತುಪಡಿಸಿದರೆ ಇತರ ಹೆಚ್ಚಿನ ಬಿಜೆಪಿ ನಾಯಕರಿಗೆ ದೊರೆತ ಬೆಂಬಲಕ್ಕಿಂತ ಮಿಗಿಲಾದ ಬೆಂಬಲವಾಗಿದೆ.
ಅದೇ ರೀತಿಯಾಗಿ? ಒಂದರ ಮೇಲೆ ಒಂದರಂತೆ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿರುವುದನ್ನು ನಾವು ಕಂಡಿದ್ದೇವೆ. ದಲಿತ ನಾಯಕರು ಮುಸ್ಲಿಂ-ದಲಿತ ಮೈತ್ರಿಗಳಿಗೆ ಮುಕ್ತವಾಗಿ ಕರೆ ನೀಡುವುದನ್ನು, ಮಹಿಳಾ ಸಂಘಟನೆಗಳು ಹಿಂದೂ ಮತ್ತು ಮುಸ್ಲಿಂ -ಎರಡೂ ಧರ್ಮಗಳ ಕಂದಾಚಾರಕ್ಕೆ ಸವಾಲೊಡ್ಡುವುದನ್ನು ಮತ್ತು ಸುಪ್ರೀಂ ಕೋರ್ಟ್‌ನಿಂದ ಹಿಡಿದು ಸಿಬಿಐ, ಚುನಾವಣಾ ಆಯೋಗದವರೆಗೆ ಪ್ರತಿಯೊಂದು ಸಂಸ್ಥೆಯನ್ನೂ ಜನರು ಪ್ರಶ್ನಿಸುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಭಾರತದ ಹಾಸ್ಯ ಜಗತ್ತು ಕೂಡ ದೇಶದ ರಾಜಕಾರಣವನ್ನು ಹಾಸ್ಯಮಾಡುವುದನ್ನು ಕಾಣುತ್ತಿದ್ದೇವೆ. ಮಾಧ್ಯಮ ಲೋಕದಲ್ಲಿ ಹತ್ತರಲ್ಲಿ ಒಂಬತ್ತು ತಮ್ಮನ್ನು ತಾವೇ ಮಾರಿಕೊಂಡಿದೆಯಾದರೂ ಮಾಧ್ಯಮದಲ್ಲಿರುವ ವ್ಯಕ್ತಿಗಳು ತಮ್ಮದೇ ಆದ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಮೋದಿ-ಸಿಂಗ್ ಬ್ರಿಗೇಡ್ ಈ ಚುನಾವಣೆಗಳಲ್ಲಿ ಗೆದ್ದರೂ ಅಥವಾ ಸೋತರೂ ದೇಶದ ಜನತೆಗೆ ಇವರ ಬಗ್ಗೆ ಭ್ರಮನಿರಸನವಾಗುವುದಂತೂ ನಿಸ್ಸಂಶಯ. ಮೆಜಾರಿಟೇರಿಯನ್ ರಾಜಕೀಯವನ್ನು ವಿರೋಧಿಸುವವರಿಗೆ ಇದು ಭರವಸೆ ಹಾಗೂ ತುರ್ತಿನ ಒಂದು ಸಂಗತಿ.
(ಶಂಕರ್‌ಗೋಪಾಲಕೃಷ್ಣನ್ ಓರ್ವ ಸಂಶೋಧಕ ಮತ್ತು ಅರಣ್ಯ ಹಕ್ಕುಗಳು, ನೈಸರ್ಗಿಕ ಸಂಪನ್ಮೂಲ, ರಾಜಕಾರಣ ಹಾಗೂ ಕೋಮುವಾದದ ಕುರಿತು ಕೆಲಸ ಮಾಡಿರುವ ಓರ್ವ ಕಾರ್ಯಕರ್ತ)
ಕೃಪೆ: thewire