ನೇರ ಪ್ರವೇಶದ ಹೆಸರಲ್ಲಿ ಮೀಸಲಾತಿಗೆ ಕೇಂದ್ರದಿಂದ ಸಂಚಕಾರ
ಲೋಕಸಭಾ ಚುನಾವಣೆಯ ಗದ್ದಲದಲ್ಲಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗದಿಂದ ಅಭ್ಯರ್ಥಿಗಳ ಆಯ್ಕೆ ಕಡಿಮೆಯಾಗುತ್ತಾ ಸಾಗಿರುವುದು ಗಮನಕ್ಕೆ ಬಾರದೆ ಹೋಗಿದೆ. ಈ ವರ್ಷ ದೇಶದ ಉನ್ನತ ನಾಗರಿಕ ಸೇವಾ ಹುದ್ದೆಗೆ 759 ಜನರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯನ್ನು ಮಾಧ್ಯಮಗಳ ಓದುಗರು ಮತ್ತು ವೀಕ್ಷಕರು ಸಹಜವಾಗಿ ತೆಗೆದುಕೊಂಡಿರಬಹುದು. ಆದರೆ ಈ ಸಂಖ್ಯೆ ಸಾಮಾನ್ಯವಾಗಿ 1,100ರಿಂದ 1,200ರ ಮಧ್ಯೆಯಿರುತ್ತದೆ.
ಆಡಳಿತದ ಅತ್ಯಂತ ಮಹತ್ವದ ಸ್ಥಾನದಲ್ಲಿ ಕುಳಿತುಕೊಳ್ಳಲು ಕಠಿಣಾತಿಕಠಿಣ ಪರೀಕ್ಷೆಗಳನ್ನು ಎದುರಿಸುವ ಪ್ರತಿಭಾನ್ವಿತ ಯುವಜನತೆಯನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಯಾಕೆ ಜಿಪುಣತನ ತೋರಿಸುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವೇನೂ ಆಗದು.
ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸೇವೆಗಳ ನೇತೃತ್ವವನ್ನು ವಹಿಸಿರುವ ಕಾರಣ ನಾಗರಿಕ ಸೇವಾ ವಿಭಾಗವನ್ನು ಭಾರತದ ಲೋಹದ ರಕ್ಷಣಾ ಕವಚ ಎಂದು ಪರಿಗಣಿಸಲಾಗುತ್ತದೆ. ಈ ಅಧಿಕಾರಿಗಳನ್ನು ಅವರ ಪ್ರತಿಭೆ, ಜಾಣ್ಮೆ, ವಿಶ್ಲೇಷಣೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ತೀವ್ರ ಪರೀಕ್ಷೆಗೊಳಪಡಿಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದು ಹಳೆಯ ಸಿದ್ಧಾಂತಗಳಲ್ಲಿ ಮುಳುಗಿರುವ ಮತ್ತು ಕಾರಣ ಆಧಾರಿತ ಯೋಚನೆ ಮಾಡುವ ವ್ಯಕ್ತಿಗಳ ಬದಲಾಗಿ ಬೆಂಬಲಿಗರಿಗಾಗಿ ಎದುರು ನೋಡುವ ಗುಂಪಿಗೆ ಇಷ್ಟವಾಗುವುದಿಲ್ಲ. ಕಾನೂನಿನ ಎದುರಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣದ ಸಿದ್ಧಾಂತಗಳಿಂದ ಪ್ರೇರಿತ ಯೋಜನೆಗಳನ್ನು ರೂಪಿಸುವ ಪಕ್ಷಗಳಿಗೆ ಈ ಅಧಿಕಾರಿಗಳು ಅಡ್ಡಗೋಡೆಯಾಗುತ್ತಾರೆ.
ನಾಗರಿಕ ಸೇವೆಗಳ ಉದ್ಯೋಗಗಳಲ್ಲಿ ಸುಮಾರು ಶೇ. 50 ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿರುವ ಕಾರಣ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ, ಐತಿಹಾಸಿಕವಾಗಿ ತಾರತಮ್ಯದಿಂದಲೇ ನೋಡಿಕೊಂಡು ಬರಲಾಗುತ್ತಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗದಂತೆ ಮಾಡುವ ತನ್ನ ಯೋಜನೆ ಕಾರ್ಯರೂಪಕ್ಕೆ ಬರುವುದು ಕಷ್ಟಸಾಧ್ಯ ಎನ್ನುವುದು ತಿಳಿದಿದೆ. ಆ ಕಾರಣದಿಂದಲೇ ಎನ್‌ಡಿಎ ಸರಕಾರ ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗುವವರ ಸಂಖ್ಯೆಯಲ್ಲಿ ಇಳಿಕೆ ಮಾಡಿದ್ದು ಆ ಮೂಲಕ ಅವರ ಪ್ರವೇಶದ ಅವಕಾಶವನ್ನೇ ಕಡಿಮೆಗೊಳಿಸಿದೆ.
ಈ ವಾದವನ್ನು ವಿರೋಧಿಸುವವರೂ ಇರಬಹುದು. ಆದರೆ ಮೋದಿ ಸರಕಾರ ಆಡಳಿತಯಂತ್ರವನ್ನು ನಡೆಸುವ ಕೈಗಳನ್ನು ಯಾವ ಮೂಲದಿಂದ ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವುದನ್ನು ನೋಡುವ ಅಗತ್ಯವಿದೆ. ಈ ಸಂಖ್ಯೆಯಲ್ಲಿ ಇಳಿಕೆ ಮಾಡುವುದಕ್ಕೂ ಮೊದಲು, ಖಾಸಗಿ ಕೇತ್ರದ ಸಮರ್ಥ ಮತ್ತು ಪರಿಣತ ವ್ಯಕ್ತಿಗಳಿಗೆ ನಾಗರಿಕ ಸೇವಾ ಹುದ್ದೆಗೆ ನೇರ ಪ್ರವೇಶ ನೀಡಲಾಗುವುದು ಎಂದು ಸರಕಾರ ಘೋಷಿಸಿತ್ತು. ಇದು, ಮೀಸಲಾತಿ ವ್ಯವಸ್ಥೆಯಾಗಲೀ ಅಥವಾ ವಂಚಿತ ಸಮುದಾಯಗಳನ್ನು ತುಳಿದಿರುವ ಇತಿಹಾಸವಾಗಲೀ ಇಲ್ಲದ ಬಂಡವಾಳಶಾಹಿ ಅಮೆರಿಕದ ನಡೆಯಂತಿದೆ. ಈಗಾಗಲೇ ಖಾಸಗಿ ಕ್ಷೇತ್ರದಲ್ಲಿ ಕೈಗಾರಿಕೆ ಮತ್ತು ಸೇವೆಗಳನ್ನು ಪ್ರಮುಖವಾಗಿ ನಿರ್ವಹಿಸುತ್ತಿರುವವರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಸ್ವಾಭಾವಿಕವಾಗಿ, ಖಾಸಗಿ ಕ್ಷೇತ್ರದಿಂದ ನಾಗರಿಕ ಸೇವೆಗೆ ಆಯ್ಕೆ ಮಾಡಲ್ಪಡುವ ವ್ಯಕ್ತಿಗಳು ಮೇಲ್ವರ್ಗದ ಜಾತಿಗೆ ಸೇರಿದವರಾಗಿರುತ್ತಾರೆ. ಇದರಿಂದ ಎಸ್ಸಿ, ಎಸ್ಟಿ ಮತ್ತು ಒಬಿಸಿಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಪರಿಣಾಮಕಾರಿಯಾಗಿ ತಡೆದರೆ, ಕೇಂದ್ರ ಸರಕಾರ ಐತಿಹಾಸಿಕ ಪೂರ್ವಾಗ್ರಹಗಳನ್ನು ಅನುಭವಿಸದ ಮತ್ತು ನ್ಯಾಯ, ಸಮಾನತೆ ಮತ್ತು ಕಾನೂನಿನ ವಿಷಯಗಳಲ್ಲಿ ಸಂವೇದನೆ ಹೊಂದಿರದ ವ್ಯಕ್ತಿಗಳನ್ನು ಆ ಸ್ಥಾನಗಳಲ್ಲಿ ತುಂಬಿಸುತ್ತದೆ. ತಾನೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ಎಂದು ಪದೇಪದೇ ಹೇಳುವ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ನೇಮಕ ಮಾಡಿರುವ ಸಂಘಪರಿವಾರ ಯಾವ ಆಟ ಆಲಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.
ಸಂಪೂರ್ಣ ವಂಚಿತ ವರ್ಗಗಳನ್ನು ದುರ್ಬಲಗೊಳಿಸುವ ಸಿದ್ಧಾಂತವನ್ನು ನೇರ ಪ್ರವೇಶವೆಂಬ ಪರದೆಯಡಿ ಜಾರಿಗೆ ತರಲಾಗುತ್ತಿದೆ. ಡಾ. ಅಂಬೇಡ್ಕರ್ ಅವರ ಸಮಾನತೆಯ ಕನಸಿನಿಂದ ದೇಶ ಯುಟರ್ನ್ ಹೊಡೆಯುತ್ತಿದೆಯೇ ಎಂದು ಕೇಳುವ ಸಮಯ ಬಂದಿದೆ.