Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಗಾಂಧಿ: ಸತ್ಯದ ಶೋಧನೆ ಮತ್ತು ವೇದನೆ

ಗಾಂಧಿ: ಸತ್ಯದ ಶೋಧನೆ ಮತ್ತು ವೇದನೆ

ಡಾ. ಬಿ.ಭಾಸ್ಕರ ರಾವ್ಡಾ. ಬಿ.ಭಾಸ್ಕರ ರಾವ್7 Oct 2019 12:01 AM IST
share
ಗಾಂಧಿ: ಸತ್ಯದ ಶೋಧನೆ ಮತ್ತು ವೇದನೆ

ಸ್ವಾತಂತ್ರಾನಂತರದ ಶಾಲಾ ಪಠ್ಯ ಪುಸ್ತಕಗಳಲ್ಲಿ, 1950-60ರ ದಶಕಗಳಲ್ಲಿ, ಇಂಗ್ಲಿಷ್‌ನಲ್ಲಿ ಒಂದು ಅರ್ಜಿ ನಮೂನೆ ಇರುತ್ತಿತ್ತು. ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಇದ್ದ ಒಂದು ಪಾಠ ಅದು. ನೌಕರಿಗೆ ಅರ್ಜಿ ಹಾಕಬೇಕಾದಾಗ ಹೇಗೆ ಬರೆಯಬೇಕು? ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಅದರ ವಿಷಯ: ಗುಮಾಸ್ತ ಹುದ್ದೆಗೆ ಅರ್ಜಿ. ಬ್ರಿಟಿಷ್ ಸಾಮ್ರಾಜ್ಯದ ಭಾರತದಲ್ಲಿ ಅವರಿಗೆ ಬೇಕಾಗಿದ್ದ ಗುಮಾಸ್ತರು (ಕ್ಲರ್ಕ್)ಗಳನ್ನು ತಯಾರಿಸಲು ಬೇಕಾಗಿದ್ದ ನಮೂನೆ ಅದು. ಅದನ್ನು ಮುಕ್ತಾಯಗೊಳಿಸುವಾಗ ‘ತಮ್ಮ ವಿಧೇಯ’ (ಯುವರ್ಸ್‌ ಒಬಿಡಿಯಂಟ್ಲಿ) ಎಂದೇ ಬರೆಯಬೇಕೆಂದು ನಮಗೆ ಹೇಳಲು ನಮ್ಮ ಶಿಕ್ಷಕರು ಮರೆಯುತ್ತಿರಲಿಲ್ಲ. ಇಂದಿಗೂ ಈ‘ಯುವರ್ಸ್‌ ಒಬಿಡಿಯಂಟ್ಲಿ’ ಶಿಕ್ಷಣ ಪರಂಪರೆ ಮುಂದುವರಿದಿದೆ.

ವಿಶ್ವದ ಮಹಾನ್ ಸಾಧಕರ, ನಾಯಕರ ಬದುಕನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ; ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ‘ಯುವರ್ಸ್‌ ಒಬಿಡಿಯಂಟ್ಲಿ’ ಎನ್ನಲು ನಿರಾಕರಿಸಿದವರು. ಬುದ್ಧ, ಯೇಸುಕ್ರಿಸ್ತ, ಸಾಕ್ರಟಿಸ್, ಬಸವಣ್ಣ, ಅಬ್ರಹಾಂ ಲಿಂಕನ್, ಗಾಂಧಿ, ಅಂಬೇಡ್ಕರ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ-ಎಲ್ಲರೂ ಅಂದಂದಿನ ಸಾಮಾಜಿಕ/ಧಾರ್ಮಿಕ ವ್ಯವಸ್ಥೆಗೆ, ಪ್ರಭುತ್ವಕ್ಕೆ ‘ಯುವರ್ಸ್‌ ಒಬಿಡಿಯಂಟ್ಲಿ’ ಆಗಲು ಒಪ್ಪದವರು. ಹಾಗೇನಾದರೂ ಆದಲ್ಲಿ ತಾವು ಮಾಡಬೇಕಾದ ಲೋಕಹಿತ ಕಾಯಕಗಳನ್ನು ಮಾಡಲು ಸಾಧ್ಯವಾಗಲಾರದೆಂಬ ಕಟು ಸತ್ಯವನ್ನು ಶೋಧಿಸಿ ಕಂಡುಕೊಂಡವರು.

ಆದರೆ ಇಲ್ಲೊಂದು ವಿಪರ್ಯಾಸ ಇದೆ. ವಿಶ್ವದ ಯಾವುದೇ ಸಾಮಾಜಿಕ, ಧಾರ್ಮಿಕ ಅಥವಾ ರಾಜಕೀಯ ವ್ಯವಸ್ಥೆಯಲ್ಲಿ ತಾವು ಅಧಿಕಾರಕ್ಕೆ, ಪ್ರಭುಗಳಿಗೆ ವಿಧೇಯರಾಗಿ ಉಳಿಯದೇ ಇದ್ದಲ್ಲಿ ತಾವು ಈ ಪ್ರಪಂಚದಲ್ಲಿ ಉಳಿಯುವುದೇ ಅಸಾಧ್ಯ; ಪ್ರಭುತ್ವ ತಮ್ಮ ಮೇಲೆ ರಾಜದ್ರೋಹದ ಅಥವಾ ದೇಶದ್ರೋಹದ ಆಪಾದನೆ ಹೊರಿಸಿ ತಮಗೆ ಇಲ್ಲಿ ಉಳಿಯಲು ಬಿಡುವುದಿಲ್ಲ ಎಂಬ ಸತ್ಯವನ್ನು ಜನರು ಬಹಳ ಬೇಗನೆ ಕಂಡುಕೊಳ್ಳುತ್ತಾರೆ. ವಿಧೇಯತೆಯ ಹೊರತಾಗಿ ನೌಕರಿ, ಮಂತ್ರಿಗಿರಿ, ಸಂಸಾರ, ವ್ಯಾಪಾರ ಹಲವು ರೀತಿಯ ಮನುಷ್ಯ ಸಂಬಂಧಗಳು ಉಳಿಯಲಾರವು ಅಂತ ಎಲ್ಲರಿಗೂ ಗೊತ್ತಿರುತ್ತದೆ. ಇದು ಪ್ರಭುತ್ವಕ್ಕೂ ಗೊತ್ತಿರುತ್ತದೆ. ಆದ್ದರಿಂದಲೇ ಶತಮಾನಗಳಿಂದ ಜಾತೀಯತೆ, ಅಸ್ಪಶ್ಯತೆ, ಗುಲಾಮಗಿರಿ, ಶೋಷಣೆ ಹಲವು ರೂಪಗಳಲ್ಲಿ ಹಲವು ವರ್ಗಗಳಿಂದ ನಡೆಯುತ್ತಲೇ ಬಂದಿದೆ.

 ಪ್ರಭುತ್ವಕ್ಕೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಘಟಿತ ಧರ್ಮಕ್ಕೆ ವಿಧೇಯತೆಗಿಂತ ದೊಡ್ಡ ವೌಲ್ಯವಿಲ್ಲ. ಯಜಮಾನನಿಗೆ ವಿಧೇಯನಾಗಿರದ ನೌಕರ, ಗಂಡನಿಗೆ ವಿಧೇಯಳಾಗಿರದ ಹೆಂಡತಿ ಅಥವಾ ಹೆಂಡತಿಗೆ ವಿಧೇಯನಾಗಿರದ ಗಂಡ, ಪ್ರಧಾನಿಗೆ/ ಮುಖ್ಯಮಂತ್ರಿಗೆ ವಿಧೇಯರಾಗಿರದ ಸಚಿವರು, ಗುರುವಿಗೆ/ಶಿಕ್ಷಕನಿಗೆ ವಿಧೇಯನಾಗಿರದ ವಿದ್ಯಾರ್ಥಿ, ಮಂದಿರ ಮಸೀದಿ ಚರ್ಚ್‌ಗಳಿಗೆ ವಿಧೇಯರಾಗಿರದ ಸಿಬ್ಬಂದಿ ತಮ್ಮ ಸ್ಥಾನಮಾನ ಹುದ್ದೆಗಳನ್ನು ಕಳೆದುಕೊಂಡು ಪಡಬಾರದ ಪಾಡು ಪಡಬೇಕಾಗುತ್ತದೆ, ನಾನಾ ರೀತಿಯ ವೇದನೆ ಅನುಭವಿಸಬೇಕಾಗುತ್ತದೆ.

ಶೇಕ್ಸ್‌ಪಿಯರ್ ಮಹಾಕವಿಯ ‘ಟೇಮಿಂಗ್ ಆಫ್ ದಿ ಶ್ರೂ’ ನಾಟಕದಲ್ಲಿ, ನಾಟಕದ ಅಂತ್ಯದಲ್ಲಿ ‘ಜಗಳಗಂಟಿ’ (ಶ್ರೂ) ಕ್ಯಾಥರಿನ್‌ಗಳನ್ನು ಕಥಾ ನಾಯಕ, ಕಾಡುಪ್ರಾಣಿಯೊಂದನ್ನು ‘ಪಳಗಿಸುವ’ ಹಾಗೆ ಪಳಗಿಸಿ ತಾನು ಅವಳನ್ನು ಗಂಡನಿಗೆ ವಿಧೇಯಳಾಗಿ ಪರಿವರ್ತಿಸಿದ್ದೇನೆಂಬುದನ್ನು ಸಾಬೀತು ಪಡಿಸಿ ತೋರಿಸುತ್ತಾನೆ.

 ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವಿಧೇಯನಾಗಲು (ಡಿಸ್‌ಒಬಿಡಿಯಂಟ್) ಅಪಾರವಾದ ಧೈರ್ಯ ಮನೋಬಲ, ಛಲ, ಹಾಗೂ ಆತ್ಮಬಲ ಬೇಕಾಗುತ್ತದೆ. ಆದ್ದರಿಂದಲೇ ಸಾಮ್ರಾಜ್ಯಶಾಹಿ ಬ್ರಿಟಿಷ್ ಪ್ರಭುತ್ವದ ಮುಂದೆ ಅದರ ಜನ ವಿರೋಧಿ ಆದೇಶಗಳನ್ನು ಪಾಲಿಸಲು ತಾನು ವಿಧೇಯತೆ ತೋರಲಾರೆ ಎಂದ ಗಾಂಧಿ ವಿಶ್ವದಲ್ಲಿ ಅವಿಧೇಯತೆ ಎಂಬ ಅಸ್ತ್ರದ ಶಕ್ತಿಯನ್ನು ತೋರಿಸಿಕೊಟ್ಟ ಮೊದಲ ಸಂತ ಮುತ್ಸದ್ದಿಯಾಗುತ್ತಾರೆ.

 ಬ್ರಿಟಿಷ್ ಸರಕಾರದ ವಿರುದ್ಧ, ದೇಶದ ಸ್ವಾತಂತ್ರಕ್ಕಾಗಿ, ಗಾಂಧಿ ನಡೆಸಿದ ಸಿವಿಲ್ ಡಿಸ್‌ಒಬಿಡಿಯನ್ಸ್ ಚಳವಳಿಯನ್ನು ‘ನಾಗರಿಕ ಅಸಹಕಾರ ಚಳವಳಿ’ ಎಂದೇ ಭಾರತದ ಸ್ವಾತಂತ್ರ ಸಂಗ್ರಾಮದ ಇತಿಹಾಸದಲ್ಲಿ ದಾಖಲಿಸಲಾಗಿದೆ. ಆದರೆ ಅದು ಅಸಹಕಾರ ( ನಾನ್ ಕೊ ಆಪರೇಶನ್) ಅಲ್ಲ. ಅದು ನಿಜವಾಗಿ ನಾಗರಿಕ ಅವಿಧೇಯತೆ ಚಳವಳಿ. ಬ್ರಿಟಿಷ್ ಸರಕಾರ, ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ಎಲ್ಲ ಭಾರತೀಯರು ಸರಕಾರಕ್ಕೆ ವಿಧೇಯರಾಗಿ, ‘ಯುವರ್ಸ್‌ ಒಬಿಡಿಯಂಟ್ಲಿ’ಯಾಗಿ ನೀಡಬೇಕೆಂದು ಆದೇಶಿಸಿದಾಗ, ತಾನು ಆ ಕ್ರೂರ ತೆರಿಗೆಯನ್ನು ಸರಕಾರಕ್ಕೆ ವಿಧೇಯನಾಗಿ ನೀಡಲಾರೆ; ದೇಶದ ಜನತೆ ಕೂಡ ಅದಕ್ಕೆ ವಿಧೇಯರಾಗದೆ ತೆರಿಗೆ ನೀಡದಿರುವ ಅವಿಧೇಯತೆಯನ್ನು ತೋರಬೇಕೆಂದು ಕರೆ ನೀಡಿದವರು ಗಾಂಧಿ. ಹೀಗೆ, ಒಂದು ಪ್ರಭುತ್ವದಲ್ಲಿ ಬದುಕುವ ಸಾವಿರಾರು ಜನರು ಪ್ರಭುತ್ವದ ನ್ಯಾಯಯುತವಲ್ಲದ ಆಜ್ಞೆಗೆ ಅವಿಧೇಯತೆ ತೋರಿದಾಗ ಅಂತಹ ಅವಿಧೇಯತೆಗೆ ಎಂತಹ ಅಸಾಮಾನ್ಯ ಶಕ್ತಿ ಇರುತ್ತದೆಂಬುದನ್ನು ಜಗತ್ತಿಗೆ ಮೊತ್ತ ಮೊದಲ ಬಾರಿಗೆ ತೋರಿಸಿಕೊಟ್ಟವರು ಗಾಂಧಿ.

ಗಾಂಧಿಯವರ ಬದುಕಿನ ಹಲವು ಮಜಲುಗಳನ್ನು ಗಮನಿಸಿದರೆ ಅವರು ಕೂಡ ಅವಿಧೇಯತೆ ಎಂಬ ಒಂದು ಮಹಾ ರಾಜಕೀಯ ಅಸ್ತ್ರವನ್ನು ಬಳಸುವ ದೀರ್ಘವಾದ ಹಾದಿಯಲ್ಲಿ ವಿಧೇಯತೆಯ ನಿಲ್ದಾಣವನ್ನು ಹಾದು ಬಂದಿರುವುದು ಕಾಣಿಸುತ್ತದೆ.

1920ರ ಜೂನ್ 22ರಂದು ಲಾರ್ಡ್ ಜೇಮ್ಸ್‌ಫರ್ಡ್‌ಗೆ ಬರೆದ ಪತ್ರವನ್ನು ಮುಕ್ತಾಯಗೊಳಿಸುವಾಗ ಅದರ ಕೊನೆಯಲ್ಲಿ ಗಾಂಧಿ ‘‘ ಐಹ್ಯಾವ್ ದಿ ಆನರ್ ಟು ರಿಮೈನ್, ಯುವರ್ ಎಕ್ಸ್‌ಲೆನ್ಸಿ’ಸ್ ಒಬಿಡಿಯಂಟ್ ಸರ್ವೆಂಟ್’’ ಎಂದೇ ಬರೆಯುತ್ತಾರೆ. ನಾನು ತಮ್ಮ ವಿಧೇಯ ಎಂದಷ್ಟೆ ಹೇಳದೆ ತನ್ನನ್ನು ಪ್ರಭುತ್ವದ ವಿಧೇಯ ಸೇವಕ ಎಂದು ಕರೆದುಕೊಳ್ಳುತ್ತಾರೆ. ಆದರೆ ಅದೇ ಗಾಂಧಿ ಹನ್ನೊಂದು ವರ್ಷಗಳ ಬಳಿಕ 1931ರ ಮಾರ್ಚ್ 23ರಂದು ವೈಸರಾಯ್‌ಗೆ ಬರೆದ ಪತ್ರದಲ್ಲಿ ವೈಸರಾಯ್‌ಯನ್ನು ‘ಡಿಯರ್ ಫ್ರೆಂಡ್’ ಎಂದು ಸಂಬೋಧಿಸಿ ಆ ಪತ್ರವನ್ನು ‘ಐ ಆ್ಯಮ್ ಯುವರ್ ಸಿನ್ಸಿಯರ್ ಫ್ರೆಂಡ್’ ಎಂದು ಮುಕ್ತಾಯಗೊಳಿಸುತ್ತಾರೆ.

ಗಾಂಧಿಯನ್ನು ಅಪ್ರಸ್ತುತಗೊಳಿಸುವ ಅಮುಖ್ಯಗೊಳಿಸುವ ಪ್ರಯತ್ನಗಳು ಒಂದೆಡೆ ನಡೆಯುತ್ತಿರುವಾಗಲೇ ವಿಶ್ವದ ನಾನಾ ಭಾಗಗಳಲ್ಲಿ ಬದುಕಿನ ಹಲವು ರಂಗಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವ ಬೆಳವಣಿಗೆಗಳಾಗುತ್ತಿರುವುದು ಗಾಂಧಿಯ ಸಾರ್ವಕಾಲಿಕತೆಗೆ ಸಾಕ್ಷಿಯಾಗಿದೆ. ಆಹಾರ, ಆರೋಗ್ಯ, ಫ್ಯಾಶನ್ ಡಿಸಾನ್, ಪರಿಸರ ರಕ್ಷಣೆ ಇತ್ಯಾದಿ ಎಲ್ಲ ರಂಗಗಳಿಗೂ ಗಾಂಧಿಯವರು ತನ್ನ ಸರಳ ಬದುಕಿನಲ್ಲಿ ಆಚರಿಸಿದ ಬದುಕುವ ಕಲೆಯನ್ನು ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ.

    ಗಾಂಧಿ ನಡೆದು ತೋರಿಸಿದ ಸತ್ಯ ಹಾಗೂ ಅಹಿಂಸೆಯ ಹಾದಿ ಎಲ್ಲರೂ ಸುಲಭವಾಗಿ ನಡೆದು ಕ್ರಮಿಸಬಹುದಾದ ಹಾದಿಯಲ್ಲ. ಯಾಕೆಂದರೆ ನಿತ್ಯದ ಬದುಕಿನಲ್ಲಿ ಒಬ್ಬ ಸತ್ಯ ಹೇಳಿದಾಗ, ಪ್ರಾಮಾಣಿಕನಾದಾಗ ಹಲವರು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡವನ ಬಾಯಿಯಿಂದ ಸತ್ಯ ಹೊರಡಿಸುವುದೇ ಅವರಿಗೆ ಎದುರಾಗುವ ಶಾಶ್ವತ ಸವಾಲು. ಆತ ಸತ್ಯ ಹೇಳಿದರೆ ಆತನ ಜತೆಗಿದ್ದ ಸಹಅಪರಾಧಿಗಳು ಕೂಡ ಕಂಬಿ ಎಣಿಸಬೇಕಾಗುತ್ತದೆ. ಒಬ್ಬ ಹೇಳುವ ಒಂದು ಸತ್ಯ ಹಲವರ ಪಾಲಿಗೆ ಹಲವು ರೀತಿಗಳ ವೇದನೆಗೆ ಹಾದಿಯಾಗುವುದರಿಂದ ಜನರು ಸತ್ಯ ಹೇಳಲು ಹಿಂಜರಿಯುತ್ತಾರೆ, ಹೆದರುತ್ತಾರೆ ಕೂಡ. ರಾಜಕಾರಣದಲ್ಲಿ ಸತ್ಯ ಹೊರ ಬಂದಾಗ, ನ್ಯಾಯಾಲಯ ತನ್ನ ವಿಚಾರಣೆಯಲ್ಲಿ ಸತ್ಯ ಏನೆಂದು ಶೋಧಿಸಿ ತೀರ್ಪು ನೀಡಿದಾಗ ರಾಜಕಾರಣದ ಘಟಾನುಘಟಿಗಳು ಜೈಲಿಗೆ ಹೋಗುವುದನ್ನು ಈ ದೇಶ ಕಂಡಿದೆ. ಆದರೆ ಎಷ್ಟೋ ವೇಳೆ ಸತ್ಯವಲ್ಲದ್ದು ಕೂಡ ಪ್ರಚಾರದ ಭರದಿಂದಾಗಿ ಸತ್ಯ ಎಂದು ಮೆರೆಯುವುದನ್ನೂ ನಾವು ನೋಡುತ್ತಿರುತ್ತೇವೆ. ಹಾಗಾದರೆ ಅಂತಿಮವಾಗಿ ಸತ್ಯದ ಶೋಧನೆ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ? ದೈನಂದಿನ ಬದುಕಿನಲ್ಲಿ, ಚಿಕ್ಕ ಪುಟ್ಟವೇ ಆದರೂ, ಸುಳ್ಳುಗಳನ್ನು ಹೇಳದೆ ಬದುಕುವುದು ಸಾಧ್ಯವೇ? ಪ್ರಭುತ್ವಕ್ಕೆ ವಿಧೇಯರಾಗಿದ್ದು ಸಿಹಿಸುಳ್ಳುಗಳನ್ನು ಹೇಳುತ್ತ ಬದುಕುವುದು ಸುಲಭ ಎಂದು ಮನವರಿಕೆಯಾದ ಮೇಲೆ ಎಷ್ಟು ಮಂದಿ ತಾನೆ ಸತ್ಯ ಹೇಳುವ ತೊಂದರೆ ತೆಗೆದುಕೊಂಡಾರು? ಸತ್ಯ ಹೇಳಿ ವೇದನೆ ಅನುಭವಿಸುವ ಬದಲು ಸುಳ್ಳು ಹೇಳಿ ಸುಖ ಅನುಭವಿಸುವುದು ವಾಸಿ ಎಂಬ ತೀರ್ಮಾನಕ್ಕೆ ಬರುವ ‘ಸಜ್ಜನ’ರು ಬಹುಸಂಖ್ಯಾತರಾಗಿರುವ ಒಂದು ಸಮಾಜದಲ್ಲಿ ಸತ್ಯದ ಶೋಧನೆ ಸತ್ಯ ಶೋಧಕ ಸಮಿತಿಗಳಿಗಷ್ಟೇ ಸೀಮಿತವಾಗಿ ಉಳಿಯಲಾರದೆ?

ಇಂತಹ ಸಮಾಜದ ಎಲ್ಲ ಮಿತಿಗಳನ್ನು ಮೀರಿದ್ದರಿಂದಲೇ ಗಾಂಧಿಯನ್ನು ಜಗತ್ತು ‘ಮಹಾತ್ಮಾ’ಎಂದು ಗೌರವಿಸುತ್ತಿದೆ.

ವಿಶ್ವದ ಯಾವುದೇ ಸರ್ವಾಧಿಕಾರಿ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಗಾಂಧಿ ಅಪ್ರಸ್ತುತರಾಗದೆ ಸಾರ್ವಕಾಲಿಕ ಪ್ರಸ್ತುತರಾಗಿಯೇ ಉಳಿಯುತ್ತಾರೆ.

share
ಡಾ. ಬಿ.ಭಾಸ್ಕರ ರಾವ್
ಡಾ. ಬಿ.ಭಾಸ್ಕರ ರಾವ್
Next Story
X