Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವೈವಿಧ್ಯ
  3. ಶೇ. 99 ಭಾರತೀಯರು v/s ಶೇ. 1...

ಶೇ. 99 ಭಾರತೀಯರು v/s ಶೇ. 1 ಕೋಮುವಾದಿಗಳು

ದೇವನೂರ ಮಹಾದೇವದೇವನೂರ ಮಹಾದೇವ11 Jan 2020 11:59 PM IST
share
ಶೇ. 99 ಭಾರತೀಯರು v/s ಶೇ. 1 ಕೋಮುವಾದಿಗಳು

ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ (ಡೌಟ್‌ಫುಲ್) ವ್ಯಕ್ತಿಯಾಗುತ್ತೇನೆ, ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್ ಶಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮೊಹೆಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ. ಏನು ಮಾಡಲಿ? ಈಗ ಮೊದಲು ಎನ್‌ಪಿಆರ್ ಬಲೆ ಹಾಕುತ್ತಾರೆ, ಇದರ ಆಧಾರದ ಮೇಲೆ ಎನ್‌ಆರ್‌ಸಿ ಮೇಲೆ ಅನುಮಾನಾಸ್ಪದ(ಡೌಟ್‌ಫುಲ್) ಮಾಡುತ್ತಾರೆ, ಆಮೇಲೆ ಈ ಅನುಮಾನಾಸ್ಪದ ‘ಡಿ’ ಗೆ ಸಿಎಎ (ಕಾ) ಎಂಬ ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ. ಕೆಟ್ಟ ಆಳ್ವಿಕೆ ಹೆಚ್ಚು ಐತಿಹಾಸಿಕ ಎಂದು ಮೋದಿ ಶಾ ಬಳಗ ಅಂದುಕೊಂಡಿದ್ದಾರೆ ಎಂದು ಕಾಣಿಸುತ್ತದೆ.

 ಭಾರತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ, ಭಾರತ ತನ್ನ ಅಂತಃಸತ್ವದ ಭವ್ಯತೆಯನ್ನು ಬೆಳಗುತ್ತದೆ ಎಂದು ಕಾಣುತ್ತದೆ. ಆ ಬೆಳಗುವಿಕೆ ಇಂದು ನಿಚ್ಚಳವಾಗಿ ಕಾಣುತ್ತಿದೆ. ಹೃದಯ, ಮೆದುಳು, ಹೊಟ್ಟೆ ತುಂಬ ಗಣಿ ಲೂಟಿ ದುಡ್ಡನ್ನೆ ತುಂಬಿಕೊಂಡ ಮದದ ಸೋಮಶೇಖರ ರೆಡ್ಡಿ ಎಂಬ ಬಿಜೆಪಿ ಶಾಸಕ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸುವವರಿಗೆ ‘‘ನೀವು ಶೇ. 20 ಇದ್ದೀರಿ, ನಾವು ಶೇ. 80 ಇದ್ದೇವೆ. ಜೋಕೆ’’ ಎಂದು ಹೇಳಿದ್ದಕ್ಕೆ ಭವ್ಯ ಎಂಬ ತರುಣಿ ಹೇಳುವುದು ಹೀಗೆ- ‘‘ರೆಡ್ಡಿ, ನೆನಪಿರಲಿ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸುವ ನಾವು ಭಾರತೀಯರು ಶೇ. 99 ಇದ್ದೇವೆ. ನೀವು ಕೋಮುವಾದಿಗಳು ಶೇ. 1 ಇದ್ದೀರಿ’’- ಈ ಮಾತಲ್ಲಿ ಭಾರತದ ಭವ್ಯತೆ ಪ್ರಕಾಶಗೊಳ್ಳುತ್ತದೆ. ಇಂದು ಸಂಘರ್ಷ ನಡೆಯುತ್ತಿರುವುದು ಶೇ. 99 We the people of India V/s ಶೇ. 1 ಕೋಮುವಾದಿ ಗ್ಯಾಂಗ್ ನಡುವೆ. ಅದು ಇದು ಅಂತ ಅಲ್ಲ, ಎಲ್ಲ ಧರ್ಮಗಳ ಒಳಗೂ ಒಂದು ತೊಟ್ಟು ಕೋಮುವಾದಿ ಮತಾಂಧತೆಯ ವಿಷವಿದ್ದು, ಅದು ಆಯಾಯ ಧರ್ಮಗಳನ್ನೇ ಸಾಯಿಸುತ್ತಿರುತ್ತದೆ.

ಹೀಗೆ ಭವ್ಯ ಥರಾನೇ ಉನ್ನತ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ಹಾಗೂ ಕಣ್ಣನ್ ಗೋಪಿನಾಥ್ ನಡೆನುಡಿ ನೋಡಿದಾಗಲೂ ಭಾರತಕ್ಕೆ ಭವಿಷ್ಯವಿದೆ ಅನ್ನಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ ಹೆಗ್ಗಣಗಳ ವಿರುದ್ಧವಾಗಿ ವಿದ್ಯಾರ್ಥಿ ಯುವಜನರ ಸ್ಫೋಟ ಕಂಡಾಗ ಈ ವಿದ್ಯಾರ್ಥಿ ಯುವಜನರ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಎಂದೂ ಅನ್ನಿಸುತ್ತದೆ.

 ಇಂದು ದೇಶದ ತುಂಬಾ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ಭೀತಿ ತುಂಬಿದೆ. ಎಷ್ಟೆಂದರೆ ಇತ್ತೀಚೆಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಲು ಬಂದಾಗ ಅಲ್ಲಿನ ಜನರು ಆ ಗಣತಿಯು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಲೆ ಇರಬೇಕೆಂದು ಭಾವಿಸಿ ಆ ಗಣತಿ ಫಾರಂಗಳನ್ನು ಹರಿದೆಸೆದು ಹಿಂದಕ್ಕೆ ಕಳಿಸಿದ್ದಾರೆ. ಅಷ್ಟೊಂದು ಭೀತಿ ಹರಡಿದೆ. ಈಗ, ನನ್ನ ಹುಟ್ಟಿದ ದಿನಾಂಕ ಕೇಳಿದರೆ ನನ್ನ ಅವ್ವ ಹೇಳಿದಂತೆ-ಅದು ಸೋಮವಾರ ಸಂಜೆ ರೈಲು ದೊಡ್ಡಕವಲಂದೆ ಸ್ಟೇಷನ್‌ನಲ್ಲಿ ನಿಂತು ಹೊರಡುವ ಸಮಯವಂತೆ. ದಿನಾಂಕ ಇರಲಿ, ಇಸವಿಯೂ ಗೊತ್ತಿಲ್ಲ. ಹೀಗಿರುವಾಗ ದಿನಾಂಕ ಹೇಗೆ ಹೇಳಲಿ? ನನ್ನ ಮೊಮ್ಮಗಳಿಗೆ ನನಗೆ ಬರ್ತ್‌ಡೇ ಇಲ್ಲ ಎಂದು ತಿಳಿದು ಅವಳು ಬೇಜಾರು ಮಾಡಿಕೊಂಡು ನನ್ನ ಹುಟ್ಟಿದ ದಿನವೇ ನಿನ್ನ ಹುಟ್ಟಿದ ದಿನ ಎಂದು ನನಗೆ ಸಮಾಧಾನ ಮಾಡಿದ್ದಾಳೆ! ನನಗೇ ಹೀಗಿರುವಾಗ, ಇನ್ನು ನಮ್ಮ ಅಪ್ಪನ ಹುಟ್ಟಿದ ದಿನಾಂಕ ಕೇಳಿದರೆ ಏನು ಹೇಳಲಿ? ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ (ಡೌಟ್‌ಫುಲ್) ವ್ಯಕ್ತಿಯಾಗುತ್ತೇನೆ, ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್ ಶಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮೊಹೆಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ. ಏನು ಮಾಡಲಿ? ಈಗ ಮೊದಲು ಎನ್‌ಪಿಆರ್ ಬಲೆ ಹಾಕುತ್ತಾರೆ, ಇದರ ಆಧಾರದ ಮೇಲೆ ಎನ್‌ಆರ್‌ಸಿ ಮೇಲೆ ಅನುಮಾನಾಸ್ಪದ(ಡೌಟ್‌ಫುಲ್) ಮಾಡುತ್ತಾರೆ, ಆಮೇಲೆ ಈ ಅನುಮಾನಾಸ್ಪದ ‘ಡಿ’ ಗೆ ಸಿಎಎ (ಕಾ) ಎಂಬ ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ. ಕೆಟ್ಟ ಆಳ್ವಿಕೆ ಹೆಚ್ಚು ಐತಿಹಾಸಿಕ ಎಂದು ಮೋದಿ ಶಾ ಬಳಗ ಅಂದುಕೊಂಡಿದ್ದಾರೆ ಎಂದು ಕಾಣಿಸುತ್ತದೆ.

ಇಂತಹವುಗಳನ್ನೆಲ್ಲಾ ಮಾಡಲು ಹೊರಟವರು ಹೇಗೆ ಮಣ್ಣು ಮುಕ್ಕಿದರು ಎಂದು ನಾವು ಅಕ್ಕಪಕ್ಕ ನೋಡಿಯಾದರೂ ಕಲಿಯಬೇಕಾಗಿದೆ. ಪತ್ರಕರ್ತ ಕೆ.ಎಸ್. ದಕ್ಷಿಣಾಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ಹೇಗೆ ಕೆಲವು ದೇಶಗಳು ತಂತಮ್ಮ ದೇಶದ ರಾಜಧರ್ಮ ಹಾಗೂ ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಏನೆಲ್ಲಾ ದುರಂತಕ್ಕೆ ತುತ್ತಾದವು ಎಂಬುದನ್ನು ವಿವರಿಸುತ್ತಾರೆ. 1956ರಲ್ಲಿ ಶ್ರೀಲಂಕಾ ‘ಸಿಂಹಳದವರಿಗೆ ಮಾತ್ರ’ ಎಂದು ಮಾಡಲು ಹೋಗಿ ಎಲ್‌ಟಿಟಿಇ ಹುಟ್ಟಿಗೆ ಕಾರಣವಾಯಿತು. ಧ್ವಂಸ, ಹಿಂಸೆ, ಸಾವು, ನೋವು ರಾಜೀವ್‌ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ಪಾಕಿಸ್ತಾನದಲ್ಲಿ ಕೂಡ ಉರ್ದು ಭಾಷೆ ಮತ್ತು ಲಿಪಿಯನ್ನು ಬೆಂಗಾಲಿ ಮುಸ್ಲಿಮರ ಮೇಲೆ ಹೇರಲು ಹೋಗಿ ಇಡೀ ರಾಷ್ಟ್ರವೇ ಹೋಳಾಯ್ತು. ಯುಗೊಸ್ಲಾವಿಯದಲ್ಲಿ ಎಂದೋ ಮುಚ್ಚಿಹೋಗಿದ್ದ ಜನಾಂಗೀಯ/ ಧಾರ್ಮಿಕ ಬಿರುಕನ್ನು ಮತ್ತೆ ಕೆದಕಲು ಹೋಗಿ ಕ್ರಿಶ್ಚಿಯನ್‌ರ ವಿರುದ್ಧ ಮುಸ್ಲಿಮರು, ಸರ್ಬರ ವಿರುದ್ಧ ಬೊಸ್ನಿಯನ್ನರು, ಕ್ರೊವೇಷಿಯನ್ನರ ವಿರುದ್ಧ ಸರ್ಬರು ಪರಸ್ಪರ ಶತ್ರುಗಳಾಗಿ ಈಗಲೂ ಅಲ್ಲಿ ಹಿಂಸೆ ತಾಂಡವವಾಡುತ್ತಿದೆ. ರುವಾಂಡಾದಲ್ಲಿ ಅಲ್ಪಸಂಖ್ಯಾತ ಟುಟ್ಸಿ ಮತ್ತು ಬಹುಸಂಖ್ಯಾತ ಹುಟು ಜನಸಮುದಾಯಗಳ ನಡುವೆ ಸರಕಾರವೇ ಬತ್ತಿ ಇಟ್ಟಿತು. ಐ.ಡಿ. ಕಾರ್ಡ್ ಕಡ್ಡಾಯ ಮಾಡುತ್ತದೆ. ಕೇವಲ ನೂರು ದಿನಗಳಲ್ಲಿ 8 ಲಕ್ಷಜನ ಹತರಾಗುತ್ತಾರೆ. ಸಾಯುವಾಗ ಒಂದೇ ಗುಂಪಿನವರು ಸಾಯುವುದಿಲ್ಲ, ಅಮಾಯಕರು ಹೆಚ್ಚು ಸಾಯುತ್ತಾರೆ. ಇದನ್ನೀಗ ಭಾರತ ಸರಕಾರ ಮಾಡಲು ಹೊರಟಿದೆ.

ಈ ರೀತಿಯಾಗುವುದು ಭಾರತಕ್ಕೆ ಬೇಕಾಗಿದೆಯೇ? ಸರಕಾರಕ್ಕೆ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ. ನನ್ನ ಪೌರತ್ವದ ಬಗ್ಗೆ ಎನ್‌ಪಿಆರ್ ಅಳತೆಗೋಲಲ್ಲಿ ಅನುಮಾನ ಬರಬಹುದು. ಆದರೆ, ಸರಕಾರವೇ ಪೌರತ್ವದ ಬೆಂಕಿ ಹಚ್ಚಿರುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೇ? ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್‌ನಲ್ಲಿ ಅಪರಾಧಿಗಳು, ಕೋಟ್ಯಧಿಪತಿಗಳು ಹೆಚ್ಚಾಗಿದ್ದು ಸಂಸತ್‌ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ. ಕಮ್ಯುನಿಸ್ಟರು ಸ್ಥಗಿತವಾಗಿದ್ದಾರೆ, ಆಮ್‌ಆದ್ಮಿ, ಸ್ವರಾಜ್ ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿ, ಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿ, ಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿ, ಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.

ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ, ಜಾತಿ ಮತ ಭೇದದ ಕಾರಣವಾಗಿ ಭಾರತವು ಹೇಗೆ ಗುಲಾಮಗಿರಿಗೆ ತುತ್ತಾಯಿತು ಎಂಬ ಸಂಗತಿಗಳನ್ನು ವಿವರಿಸಿ ಹೇಳುತ್ತ ನೀಡುವ ಎಚ್ಚರಿಕೆಯನ್ನು ನಾವಿಂದು ಕೇಳಿಸಿಕೊಳ್ಳಬೇಕಾಗಿದೆ-‘‘ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೇ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪಮಾಡಬೇಕು.’’ (ಕನ್ನಡ ಸಂಸ್ಕೃತಿ ಇಲಾಖೆಯ ಪ್ರಕಟಿತ- ಡಾ.ಬಿ.ಆರ್.ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಮೂರನೇ ಮುದ್ರಣ, ಸಂಪುಟ 13, ಪುಟ ಸಂಖ್ಯೆ 529)

ಈ ಕಾಲ ಈಗ ಬಂದಿದೆ. ಭಾರತದ ಪೌರತ್ವ ನಿರ್ಧಾರಕ್ಕೆ ಮತಧರ್ಮಗಳನ್ನೂ ಪರಿಗಣಿಸಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕುಸಿಯುವಂತೆ ಈಗ ಮಾಡಲಾಗುತ್ತಿದೆ. ಹೌದು, ಇಂದು ಭಾರತ ಎರಡನೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾಚಿಸುತ್ತಿದೆ.

ಕೊನೆಯದಾಗಿ, ಇಷ್ಟಿದ್ದೂ ಹೀಗಿದ್ದೂ ಆದರೂ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುವೆ. ನಿಮ್ಮ ಕಣ್ಗಳ ಕೆಳಗೆ ನಡೆದ ಜೆಎನ್‌ಯು ಘಟನೆಯನ್ನು ನೋಡಿ ತತ್ತರಿಸಿ ಹೋದೆ. ಗುಂಪು ಥಳಿತ ನೋಡಿದಾಗಲೂ ಈ ದೇಶದಲ್ಲಿ ರಾಜನಿಲ್ಲ(ರೂಲರ್‌ಇಲ್ಲ), ಅರಾಜಕತೆ ಇದೆ ಅನ್ನಿಸುತ್ತದೆ. ಪೊಲೀಸ್ ವ್ಯವಸ್ಥೆ ಕಳಂಕಿತವಾಗಿ ಬಿಟ್ಟಿತು. ಇನ್ನು ಮಿಲ್ಟ್ರಿಕತೆ ಏನೋ ಗೊತ್ತಿಲ್ಲ. ಇದು ಪ್ರಧಾನಿಯ ಬುಡವನ್ನೆ ಬುಡಮೇಲು ಮಾಡುತ್ತದೆ. ಮಾಂತ್ರಿಕರು ಭೂತ ಪಿಶಾಚಿಗಳನ್ನು ವಶಪಡಿಸಿಕೊಂಡು ಒಂದು ಬಾಟಲ್‌ನಲ್ಲಿ ಕೂಡಿ ಭದ್ರವಾಗಿ ಮುಚ್ಚಳ ಹಾಕಿ ಇಟ್ಟುಕೊಂಡಿರುತ್ತಾರಂತೆ. ಅವರೇನಾದರೂ ರಾಗದ್ವೇಷಕ್ಕೆ ಒಳಗಾಗಿ ಮುಚ್ಚಳ ತೆಗೆದು ಪಿಶಾಚಿಗಳನ್ನು ತನ್ನ ಹಗೆ ಮೇಲೆ ಛೂ ಬಿಟ್ಟರೆ ಅವು ಎಲ್ಲವನ್ನೂ ತಿಂದು ಹಾಕಿ ಕೊನೆಗೆ ವಶಪಡಿಸಿಕೊಂಡಿರುವ ಮಾಂತ್ರಿಕನ ಬಳಿಗೆ ಬಂದು ಮಾಂತ್ರಿಕನನ್ನೇ ತಿಂದು ಹಾಕುತ್ತವಂತೆ. ಒಬ್ಬ ರೂಲರ್ ಅಂದರೆ ಆಳ್ವಿಕೆ ನಡೆಸುವವನು, ಕೇಡಿಗನಾದರೆ ಇದು ಆಗುತ್ತಾ ಬಂದಿದೆ. ಇಂಥವರಿಗೆ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ತಾವು ಗುಹೆಯಲ್ಲಿ ಧ್ಯಾನ ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದರಿಂದ ಇದನ್ನು ಹೇಳಬೇಕಾಯಿತು, ಕ್ಷಮೆ ಇರಲಿ. ತಮ್ಮ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗುವುದಕ್ಕೆ ಕಾರಣವಾಗಿ ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು, ತಮಗೂ ಕೂಡ. ನಮಸ್ಕಾರ.

ಎನ್‌ಆರ್‌ಸಿಯಿಂದ ಉದ್ಭವಿಸಬಹುದಾದ ಒಂದು ಯಾತಾನಾಮಯವಾದ ದೃಶ್ಯವನ್ನು ನೆನಪಿಸಿಕೊಳ್ಳುವುದಕ್ಕೂ ನನಗೆ ಕಷ್ಟವಾಗುತ್ತಿದೆ. ಅದು ಮೂಲನಿವಾಸಿಗಳ ಪಾಡು. ಭಾರತದಲ್ಲಿ ಶೇ. 8ರಷ್ಟು ಜನರು ಮಾತ್ರ ಮೂಲನಿವಾಸಿಗಳು, ಉಳಿದವರೆಲ್ಲ ವಲಸೆಗಾರರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಮೂಲನಿವಾಸಿಗಳು ಈಗಲೂ ಬಹುತೇಕ ಅರಣ್ಯವಾಸಿಗಳು. ಇವರು ಅಲ್ಲೇ ಹುಟ್ಟಿ ಅಲ್ಲೇ ಮಣ್ಣಾಗುತ್ತ ಬಂದವರು. ಎನ್‌ಆರ್‌ಸಿ ಬಂದರೆ ಏನಾಗುತ್ತದೆ? ಭಾರತಕ್ಕೆ ವಲಸೆ ಬಂದವರೇ ಅಧಿಕಾರ ಹಿಡಿದು ಈಗ ಮೂಲನಿವಾಸಿಗಳಿಗೇನೆ ‘‘ನೀವು ಇಲ್ಲಿಯವರು ಎನ್ನುವುದಕ್ಕೆ ದಾಖಲೆ ತೋರಿಸಿ’’ ಎಂದು ಕೇಳುತ್ತಾರೆ. ಇದು ಎಂಥ ಶೋಚನೀಯ. ಇದಕ್ಕೆ ಮೂಲನಿವಾಸಿಗಳು ಏನು ತಾನೇ ಹೇಳಿಯಾರು? ‘‘ನೀವು ಬರುವುದಕ್ಕೂ ಮೊದಲಿನಿಂದಲೂ ಇಲ್ಲೇ ಹುಟ್ಟಿ ಇಲ್ಲೇ ಸಾಯುತ್ತಿದ್ದೀವಪ್ಪ. ಬೇಕಾದರೆ ಮರ ಕೇಳು, ಬೆಟ್ಟ ಕೇಳು, ನದಿ ಕೇಳು, ಕಾಡಲ್ಲಿರುವ ಪ್ರಾಣಿಗಳನ್ನು ಕೇಳು... ಅವಕ್ಕೆಲ್ಲಾ ನಾವು ಗೊತ್ತಿದೆ. ಇದನ್ನು ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ’’ ಎಂದು ಅರಣ್ಯರೋದನ ಮಾಡಬೇಕಾಗುತ್ತದೆ. ಇವರ ಜೊತೆಗೆ ನೆಲೆ ಇಲ್ಲದೆ ಅಲೆಯುತ್ತಿರುವ ಅಲೆಮಾರಿಗಳು, ಅತಂತ್ರರಾದ ಹಿಂದುಳಿದ ಸಮೂಹಗಳು, ದಲಿತರು, ಅಲ್ಪಸಂಖ್ಯಾತರು, ಗ್ರಾಮೀಣ ಜನತೆ ಕಣ್ಣುಬಾಯಿ ಬಿಡಬೇಕಾಗುತ್ತದೆ.

ಇದರಲ್ಲೊಂದು ಸಂಚಿನ ವಾಸನೆಯೂ ಇದ್ದಂತಿದೆ. ಮೂಲನಿವಾಸಿಗಳನ್ನು ಎನ್‌ಆರ್‌ಸಿ ನೆಪದಲ್ಲಿ ಅನುಮಾನಾಸ್ಪದ (ಡೌಟ್‌ಫುಲ್) ವ್ಯಕ್ತಿಗಳನ್ನಾಗಿ ಮಾಡಿ, ಅವರನ್ನು ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇಲ್ಲಿ ಇರಬಹುದು. ಆಗ- ಅರಣ್ಯನಾಶ, ಗಣಿಗಾರಿಕೆ ಮಾಡಿ ಭೂಮಿ ಧ್ವಂಸ ಮಾಡಲು ಕಾರ್ಪೊರೇಟ್ ಕಂಪೆನಿಗಳಿಗೆ ಹಬ್ಬವಾಗುತ್ತದೆ. ನಮ್ಮ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಸಂಸ್ಥೆ ಆಸ್ತಿಪಾಸ್ತಿಗಳನ್ನು ಖಾಸಗಿಗೆ ಮಾರಿಕೊಂಡು ಜೀವನ ದೂಡುತ್ತಿರುವ ಸರಕಾರಕ್ಕೆ ಅರಣ್ಯ, ನದಿ, ಬೆಟ್ಟ ಮಾರುವುದು ಸಹಜವೇ ಇರಬಹುದು. ಆದರೆ, ಇದರಿಂದ ದೇಶವನ್ನೆ ಖಾಸಗಿ ಕಂಪೆನಿಗಳಿಗೆ ಮಾರಿದಂತಾಗಿ ಬಿಡುತ್ತದೆ. ಆಗ, ಕಂಪೆನಿ ಸರಕಾರದ ವಿರುದ್ಧ ಹೋರಾಡಿ ದೇಶ ಸ್ವಾತಂತ್ರ್ಯ ಪಡೆಯಿತು. ಈಗ, ಆ ಪಡೆದ ಸ್ವಾತಂತ್ರ್ಯವನ್ನು ಕಂಪೆನಿಗಳಿಗೆ ಮರುಮಾರಾಟ ಮಾಡಿದಂತಾಗಿ ಬಿಡುತ್ತದೆ. ಉಳಿಗಾಲ ಉಂಟೆ ಎನ್ನುವಂತಾಗಿ ಬಿಡುತ್ತದೆ.

share
ದೇವನೂರ ಮಹಾದೇವ
ದೇವನೂರ ಮಹಾದೇವ
Next Story
X