ಕಸಾಪ ಅಧ್ಯಕ್ಷರು ಸರಕಾರದ ಗುಲಾಮರಲ್ಲ: ಕಲ್ಕುಳಿ ವಿಠಲ ಹೆಗ್ಗಡೆ
ಜಿಲ್ಲಾ ಕಸಾಪದಿಂದ ಸಿ.ಟಿ.ರವಿ ಸಚಿವನಾಗಿರುವವರೆಗೂ ಸರಕಾರದ ಹಣ ಮುಟ್ಟಿಲ್ಲ ಎಂಬ ನಿರ್ಣಯ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದಲ್ಲಿ ಶುಕ್ರವಾರ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಗಿದಿದೆ. ಆದರೆ ಅದು ಹುಟ್ಟು ಹಾಕಿರುವ ಅಲೆಗಳು ಇನ್ನೂ ಸದ್ದು ಮಾಡುತ್ತಿವೆ. ಸಾಹಿತ್ಯ ಸಮ್ಮೇಳನದ ಕುರಿತಂತೆ ಇದ್ದ ಟೀಕೆ, ಆರೋಪ, ಪ್ರತ್ಯಾರೋಪ, ವಿವಾದಗಳ ಹಿನ್ನೆಲೆಯಲ್ಲಿ, ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಕಲ್ಕುಳಿ ವಿಠಲ ಹೆಗ್ಗಡೆ ಪತ್ರಿಕೆಯ ಜೊತೆಗೆ ಮಾತನಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇದ್ದ ಗೊಂದಲವಾದರೂ ಏನು?
ಕಾರ್ಯಕಾರಿಣಿ ಸಮಿತಿ ಒಮ್ಮೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಅಂತಿಮಗೊಳಿಸಿದ ನಿರ್ಣಯಕೈಗೊಂಡ ಮೇಲೆ ಅಲ್ಲಿಗೆ ಅದು ಮುಗಿದ ಪ್ರಕ್ರಿಯೆಯಾಗುತ್ತದೆ. ಯಾರದ್ದೋ ಒತ್ತಡದಿಂದ ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದು ನಿಯಮವಾಗಿದೆ. ಮುಖ್ಯವಾಗಿ ನನ್ನನ್ನೇ ಆಯ್ಕೆ ಮಾಡಿ ಎಂದು ನಾನಂತೂ ಮನವಿ ಮಾಡಿರಲಿಲ್ಲ. ಯಾರೂ ಶಿಫಾರಸನ್ನೂ ಮಾಡಿರಲಿಲ್ಲ.ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಮ್ಮೇಳನವನ್ನು ತಡೆಯುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಅತ್ಯಂತ ಹೀನವಾದ ಕೆಲಸವಾಗಿದೆ. ಈ ಮೂಲಕ ಸಿ.ಟಿ.ರವಿ ತಾನು ಕನ್ನಡ ಭಾಷೆಯ ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಸಮ್ಮೇಳದ ಅಧ್ಯಕ್ಷರ ಆಯ್ಕೆ ಸ್ವತಂತ್ರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.
ಸಮ್ಮೇಳನ ತಡೆಯಲು ಸಂಚು ನಡೆದಿತ್ತೇ?
ವಿಠಲ್ ಹೆಗ್ಗಡೆ: ಕನ್ನಡದ ಹಬ್ಬವಾಗಿದೆ. ಅಲ್ಲಿನ ಕನ್ನಡಿಗರು, ಸಾಹಿತ್ಯಾಭಿಮಾನಿಗಳು ಸೇರಿ ಸಂಭ್ರಮಿಸುವ ಜಾತ್ರೆಯಾಗಿದೆ. ಈ ಜಾತ್ರೆ ಸಿ.ಟಿ.ರವಿ ಮತ್ತವರ ಪಟಾಲಂ ಪ್ರಾಯೋಜಕತ್ವದ ವಿರೋಧದ ನಡುವೆಯೂ ಜ.10ರಂದು ಶೃಂಗೇರಿಯಲ್ಲಿ ಅದ್ದೂರಿಯಾಗಿ ನಡೆಯಿತು. ಸಮ್ಮೇಳನದ ಗುರಿ ಜನರ ಸಂಕಷ್ಟಗಳನ್ನು ನಿರ್ಣಯಿಸುವುದಾಗಿದೆ. ಈ ನಿರ್ಣಯಗಳನ್ನು ಕೈಗೊಳ್ಳುವುದು ಜ.11ರಂದು ನಡೆಯುತ್ತಿತ್ತು. ಆದರೆ, ಸೆಕ್ಷನ್ ಇದೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟು, ಸಮ್ಮೇಳನವನ್ನು ನಡೆಯಲು ಬಿಡಬಾರದೆಂಬ ಕಾರಣಕ್ಕೆ ಕನ್ನಡದ ಕಟ್ಟಾಳುಗಳಿಗೆ ಜಿಲ್ಲಾಡಳಿತ ಇನ್ನಿಲ್ಲದ ಕಿರುಕುಳ ನೀಡಿದೆ. ಈ ಕಿರುಕುಳ ಗುರುವಾರದಂದು ಸಮಾರಂಭದ ವೇದಿಕೆ ಸಿದ್ಧಗೊಂಡ ದಿನದಿಂದಲೇ ಆರಂಭವಾಗಿತ್ತು. ಅಂದು ವೇದಿಕೆಯ ಮಂಟಪ ಕಿತ್ತುಹಾಕಲು ಪ್ರಯತ್ನ ನಡೆಸಿದ್ದು, ಕುವೆಂಪು ಮಂಟಪವನ್ನು ಕಿತ್ತು ಹಾಕಿದ್ದಾರೆ. ಪರಮೇಶ್ವರ ಭಟ್ ಅವರ ಮಹಾದ್ವಾರಕ್ಕೆ ಹಾನಿ ಮಾಡಿದ್ದಾರೆ. ಬ್ಯಾನರ್‌ಗಳನ್ನು ಕಿತ್ತು ಹಾಕಿದ್ದು, ಕನ್ನಡದ ಜಾತ್ರೆ ಯಾವುದೇ ಅಡ್ಡಿಗೆ ಜಗ್ಗುವುದಿಲ್ಲ ಎಂದು ಅರಿತು ಹತಾಶರಾದ ಕೋಮುವಾದಿಗಳು ಬಳಿಕ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್‌ಗಳನ್ನು ಹಾಕುವ ಸಂಚು ನಡೆಸಿದ್ದಾರೆ. ಹಾಗೆಂದು ಪೊಲೀಸರೇ ತಿಳಿಸಿದ್ದಾರೆ.
ಸಮ್ಮೇಳನದ ವೇಳೆ ಪೊಲೀಸರು ಸರಕಾರದ ಆಣತಿಯಂತೆ ವರ್ತಿಸಿದ್ದಾರೆಂಬ ಆರೋಪ ಕೇಳಿಬರುತ್ತಿದೆ?
ಕೋಮುವಾದಿಗಳ ಈ ವರ್ತನೆಗೆ ಪೊಲೀಸರು ಕಾರಣ. ಕಳೆದ 15 ದಿನಗಳಿಂದ ಸಮ್ಮೇಳನವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರು. ಅನಾಮಧೇಯ ಸಂಘಟನೆಗಳು ಸಮ್ಮೇಳನದ ವಿರುದ್ಧವಾಗಿ ಕರಪತ್ರಗಳನ್ನು ಹಂಚಿದ್ದರು. ಈ ಸಂಬಂಧ ತಾನು ಪೊಲೀಸರಿಗೆ ದೂರು ನೀಡಿದ್ದೆ. ಆದರೆ ಪೊಲೀಸರು ಇಂತಹವರ ಮೇಲೆ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಪೊಲೀಸರು ನನ್ನ ದೂರಿಗೆ ಸ್ಪಂದಿಸಿ ಅವರ ಮೇಲೆ ಕಾನೂನು ಕ್ರಮಕೈಗೊಂಡಿದ್ದರೆ, ಶುಕ್ರವಾರದ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳು ಆಗುತ್ತಿರಲಿಲ್ಲ. ಸಮ್ಮೇಳನ ತಡೆಯುವ ನಿಟ್ಟಿನಲ್ಲಿ ವಿರೋಧಿಗಳು ಪಟ್ಟಣ ಬಂದ್ ಮಾಡುವ ಉದ್ದೇಶ ಹೊಂದಿದ್ದರು. ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದಿದ್ದರೂ ಸಮ್ಮೇಳನದ ದಿನದಂದು ಪಟ್ಟಣ ಬಂದ್ ಮಾಡಿಸಿದ್ದರು. ಇದಕ್ಕೆ ಪೊಲೀಸರು ಕಾರಣ. ಪೊಲೀಸರು ಅನಾಮಧೇಯ ಸಂಘಟನೆಗಳ ಬಂದ್‌ಗೆ ಪರೋಕ್ಷವಾಗಿ ಸಹಕಾರ ನೀಡಿದರು.
ಸಮ್ಮೇಳನದ ದಿನದಂದೂ ಪೊಲೀಸರು ಅಂತಹ ಸಂಘಟನೆಗಳಿಗೇ ಸಹಕಾರ ನೀಡಿದರು. ಅಂದು ಸಮ್ಮೇಳನಕ್ಕೆ ಯಾವುದೇ ತೊಂದರೆಯಾಗದಂತೆ ಮಾಡುವ ಎಲ್ಲ ಅವಕಾಶಗಳಿದ್ದವು. ಪ್ರತಿಭಟನೆ ಮಾಡಲೂ ಎಲ್ಲರಿಗೂ ನಮ್ಮ ಸಂವಿಧಾನ ಅವಕಾಶ ನೀಡಿದೆ. ಆದರೆ, ಇನ್ನೊಬ್ಬರ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಪ್ರತಿರೋಧ ವ್ಯಕ್ತಪಡಿಸುವಂತೆ ಮಾಡಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದರೆ ಪೊಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಭಾವಿಸಬಹುದಿತ್ತು. ಆದರೆ, ಪೊಲೀಸರು ಸಮ್ಮೇಳನದ ಎದುರು ಸಾವಿರಾರು ಜನರಿದ್ದಲ್ಲಿಗೆ ಪ್ರತಿಭಟನಾಕಾರರನ್ನು ಬರಲು ಬಿಟ್ಟಿದ್ದಲ್ಲದೆ, ಪ್ರತಿಭಟನೆಗೂ ಅವಕಾಶ ನೀಡಿದ್ದರು. ಈ ವೇಳೆ ಅವರ ಮನವೊಲಿಸುವ ಕೆಲಸ ಮಾಡಬೇಕಿತ್ತು, ಮಿತಿಮೀರಿದಾಗ ಬಂಧಿಸಬೇಕಿತ್ತು. ಸಾವಿರಾರು ಪೊಲೀಸರು 40-45 ಮಂದಿಯನ್ನು ನಿಯಂತ್ರಿಸಲು ವಿಫಲವಾಗುತ್ತಾರೆಂದರೆ ಪೊಲೀಸರ ಉದ್ದೇಶ ಏನಾಗಿತ್ತು ಎಂಬುದು ಇದರಿಂದಲೇ ಎಲ್ಲರಿಗೂ ಅರ್ಥವಾಗುತ್ತದೆ. ಸಮ್ಮೇಳನದಲ್ಲಿ ಅತಿಥಿಗಳು, ನಾಡಿನ ಪ್ರಮುಖ ಸಾಹಿತಿಗಳು ಕನ್ನಡ ಭಾಷೆ, ಸಂಸ್ಕೃತಿ, ತುಡಿತ, ತಲ್ಲಣಗಳ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದ ವೇಳೆ ಕಿರಿಕಿರಿ ಮಾಡಲು ಪೊಲೀಸರೇ ಅನುವು ಮಾಡಿಕೊಟ್ಟು ಸಣ್ಣತನ ತೋರಿದರು. ಇದು ನನಗೆ ಅತೀವ ಬೇಸರವನ್ನುಂಟುಮಾಡಿತು.
ಬಿಜೆಪಿ, ಸಂಘಪರಿವಾರಕ್ಕೆ ವಿಠಲ್ ಹೆಗ್ಗಡೆ ಎಂದರೆ ಏಕೆ ಭಯ?
ಬಿಜೆಪಿ, ಆರೆಸ್ಸೆಸ್ ಅಭಿವೃದ್ಧಿಯಿಂದ ಮುನ್ನ್ನೆಲೆಗೆ ಬಂದಿಲ್ಲ. ಸಾಧನೆ ಏನೆಂದೂ ಹೇಳಲ್ಲ. ಅವರ ಶಕ್ತಿ ಇರುವುದೇ ಜನರ ಭಾವನಾತ್ಮಕ ವಿಚಾರಗಳಲ್ಲಿ. ಬಾಬಾ ಬುಡಾನ್‌ಗಿರಿ ಎಂಬ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ದತ್ತಪೀಠದ ಹೆಸರಿನಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ. ಇದರ ವಿರುದ್ಧ ಪ್ರಥಮವಾಗಿ ಧ್ವನಿ ಎತ್ತಿದವನು ವಿಠಲ್ ಹೆಗ್ಗಡೆ. ಬಾಬಾಬುಡಾನ್‌ಗಿರಿ ಸಾಮರಸ್ಯ ಪರಂಪರೆಗಾಗಿ ನಾವು ಸಮಾವೇಶ ಮಾಡಿದಾಗಿನಿಂದ ಸಿ.ಟಿ.ರವಿಗೆ ನನ್ನ ಮೇಲೆ ದ್ವೆಷ ಆರಂಭವಾಗಿದೆ. ಅದಿನ್ನೂ ಅವರಲ್ಲಿದೆ. ನಮ್ಮ ದಾಳಿ ವೈಯಕ್ತಿಕವಲ್ಲ, ಸೈದ್ಧಾಂತಿಕವಾದದ್ದು. ಸಂಘಪರಿವಾರದವರ ದಾಳಿ ವೈಯಕ್ತಿಕವಾಗಿರುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಎದುರಿಸಲಾಗದವರು ಭಯದಿಂದ ವೈಯಕ್ತಿಕವಾಗಿ ದಾಳಿ ಮಾಡುತ್ತಾರೆ. ನನ್ನಂತಹವರಿಗೆ ಹಣೆಪಟ್ಟಿ ಕಟ್ಟಿ ಸಮಾಜದಲ್ಲಿ ಕೆಟ್ಟವನಂತೆ ಚಿತ್ರಿಸುವ ಸಂಸ್ಕೃತಿ ಅವರದ್ದು.
ನಿಮ್ಮ ವಿರೋಧಿಗಳು ಹೇಳುವಂತೆ ನೀವು ನಕ್ಸಲರ ಬೆಂಬಲಿಗರಾ?
ಕೋಮುವಾದಿಗಳಿಗೆ ನೆಲದ ಸಂಸ್ಕೃತಿ ಪರವಾಗಿರುವ ವಿಠಲ್ ಹೆಗ್ಗಡೆಯನ್ನು ಸೈದ್ಧಾಂತಿಕವಾಗಿಯೂ, ವೈಯಕ್ತಿಕವಾಗಿಯೂ ಸೋಲಿಸಲಾಗಲಿಲ್ಲ. ಈ ಕಾರಣಕ್ಕೆ ನಕ್ಸಲೀಯನೆಂಬ ಹಣೆಪಟ್ಟಿ ಕಟ್ಟಿದರು. ಈ ಹಣೆಪಟ್ಟಿ ಆರೋಪಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳೂ ಆಧಾರ ರಹಿತ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿವೆೆ. ಆಧಾರ ರಹಿತವಾಗಿ ಆರೋಪ ಮಾಡಿದವರಿಗೆ ಇದೇ ನ್ಯಾಯಾಲಯ ಶಿಕ್ಷೆಯನ್ನೂ ನೀಡಿದೆ. ನನ್ನ ಬಲ್ಲ ಒಡನಾಡಿಗಳಿಗೂ ಇದು ಸುಳ್ಳೆಂದು ಅರ್ಥವಾಗಿದೆ. ನಾನು ನಕ್ಸಲರ ಮಾರ್ಗವನ್ನು ಯಾವತ್ತೂ ಬೆಂಬಲಿಸಿಲ್ಲ, ಬೆಂಬಲಿಸುವುದಿಲ್ಲ ಅನುಸರಿಸುವುದೂ ಇಲ್ಲ. ಯಾರದ್ದಾದರೂ ಧ್ವನಿಯನ್ನು ಹತ್ತಿಕ್ಕಬೇಕಿದ್ದರೆ ಇಂತಹ ಹಣೆಪಟ್ಟಿ ಹಚ್ಚುವುದು ಕೋಮುವಾದಿಗಳಿಗೆ ಸುಲಭವಾದ ಅಸ್ತ್ರವಾಗಿದೆ. ಯಾರಿಗಾದರು ದೇಶದ್ರೋಹಿ, ನಕ್ಸಲೀಯ ಎಂದು ಹಣೆಪಟ್ಟಿ ಕಟ್ಟಿದರೆ ಅಂತಹವರನ್ನು ಸುಲಭವಾಗಿ ಮುಗಿಸಬಹುದು. ನನ್ನ ವಿರುದ್ಧ ಕೋಮುವಾದಿಗಳ ಷಡ್ಯಂತ್ರ ಇದೇ ಆಗಿದೆ.
ಸಮ್ಮೇಳನ ಯಶಸ್ವಿಯಾಗಿದೆಯೇ?
ಜಾತಿವಾದಿಗಳು ಕೋಮುವಾದಿಗಳು ಕನ್ನಡ ಹಬ್ಬವನ್ನು ವಿರೋಧಿಸಿ ತಡೆಯುವ ನಿಟ್ಟಿನಲ್ಲಿ ಪ್ರಭುತ್ವದ ನೆರಳಿನಲ್ಲಿ ಪ್ರಯತ್ನ ಮಾಡಿದ್ದು, ಇದನ್ನು ಕನ್ನಡದ ಜನ ಮತ್ತು ಅಭಿಮಾನಿಗಳು ಸವಾಲಾಗಿ ಸ್ವೀಕರಿಸಿದರು. ಅತ್ಯಂತ ಯಶಸ್ವಿಯಾಗಿ ಸಮ್ಮೇಳನ ನಡೆಯಲು ಸಹಕಾರ ನೀಡಿದರು. ಅಭಿಮಾನದ ಮಹಾಪೂರ ಹರಿಸಿದರು. ಇದನ್ನು ಎಲ್ಲರೂ ಕಂಡಿದ್ದಾರೆ. ವೇದಿಕೆಯಿಂದಲೇ ನಾನು ಇದನ್ನು ಮನಸಾರೆ ಅನುಭವಿಸಿದ್ದೇನೆ. ಸಮ್ಮೇಳನದಲ್ಲಿ ವಿಷಯ ತಜ್ಞರು, ಸಾಹಿತಿಗಳು ಕನ್ನಡ ಭಾಷೆ, ಕನ್ನಡ ಜನರು, ಕನ್ನಡದ ತಲ್ಲಣಗಳು, ಕೋಮುವಾದ, ಕನ್ನಡ ವಿರೋಧಿಗಳು ವಿಷಯಗಳ ಬಗ್ಗೆ ಅದ್ಭುತವಾಗಿ ಮಾತನಾಡಿದ್ದಾರೆ. ಕನ್ನಡದ ಸಂಸ್ಕೃತಿ ಸಾಮರಸ್ಯದ ಸಂಸ್ಕೃತಿಯಾಗಿದೆ. ಕನ್ನಡದ ಸಂಸ್ಕೃತಿ ಪ್ರತಿಭಟನೆಗಳ ತವರಾಗಿದೆ. ಸಮ್ಮೇಳನ ಪ್ರತಿರೋಧದ ಮಧ್ಯೆಯೇ ಅಖಿಲ ಭಾರತ ಕನ್ನಡ ಸಮ್ಮೇಳನ ಮಾದರಿಯಲ್ಲಿ ಯಶಸ್ವಿಯಾಗಿದೆ ಎಂಬುದು ಕೆಲ ಮಾಧ್ಯಮಗಳು, ಜನರು ಪ್ರತಿಕ್ರಿಯಿಸಿದ್ದಾರೆ.
ಒಂದೇ ದಿನಕ್ಕೆ ಮೊಟಕುಗೊಂಡ ಬಗ್ಗೆ ನಿಮಗೆ ನಿರಾಶೆ ಆಗಿದೆಯೇ?
ಶುಕ್ರವಾರ ನಡೆದ ಸಮ್ಮೇಳನದ ಉದ್ಘಾಟನಾ ಸಮಾರಂಭದಿಂದ ವಿರೋಧಿಗಳಿಗೆ ಸೋಲಾಗಿದೆ. ಈ ಹತಾಶೆಯಿಂದ ಪ್ರತೀಕಾರವಾಗಿ ತಮ್ಮ ಸರ್ವಾಧಿಕಾರ ಮೆರೆಯುವ ಉದ್ದೇಶದಿಂದ ಪ್ರಭುತ್ವದ ಮೇಲೆ ಒತ್ತಡ ಹೇರಿ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಮಾಡಿದರು. ಸರಕಾರ ದುಡ್ಡು ಕೊಡದಿದ್ದರೂ ಜನರು ಕರೆದು ದುಡ್ಡು ಕೊಟ್ಟರು. ಕನ್ನಡದ ಮೇಲಿನ ಅಭಿಮಾನದಿಂದ ರಾಜ್ಯದ ವಿವಿಧೆಡೆಯಿಂದ ಬ್ಯಾಂಕ್ ಖಾತೆಗೆ ಹಣ ಹಾಕಿದರು. ಕೂಲಿ ಮಾಡುವವರೂ ಹಣ ಸಂಗ್ರಹಿಸಿ ಸಮ್ಮೇಳನಕ್ಕೆ ನೆರವಾಗಿದ್ದಾರೆ. ನೈಜ ಕನ್ನಡಿಗರ ದುಡ್ಡಿನಿಂದ ಸಮ್ಮೇಳನದ ಯಶಸ್ಸಿಗಾಗಿ ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಶನಿವಾರದ ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿತ್ತು. ಲಕ್ಷಾಂತರ ರೂ.ಖರ್ಚು ಮಾಡಿ ಶಾಮಿಯಾನ ಹಾಕಲಾಗಿತ್ತು. ಸಂಭ್ರಮದಲ್ಲಿ ಕವಿಗೋಷ್ಠಿ, ವಿಚಾರ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ, ಸಾಂಸ್ಕೃತಿಕ, ಸಮಾರೋಪ ಕಾರ್ಯಕ್ರಮಗಳು ಬಾಕಿ ಇದ್ದವು. ಮುಖ್ಯವಾಗಿ ನಿರ್ಣಯ ಕೈಗೊಳ್ಳುವ ಕಾರ್ಯಕ್ರಮವೂ ಇತ್ತು. ಇವೆಲ್ಲವೂ ಕನ್ನಡದ ಏಳಿಗೆಗೆ ಪೂರಕವಾದ ಕಾರ್ಯಕ್ರಮಗಳಾಗಿದ್ದವು.
ನನಗೆ ಬೇಸರವಿದೆ, ನಿರಾಶೆಯಾಗಿಲ್ಲ. ಆದರೆ, ಜಿಲ್ಲೆಯಲ್ಲಿ ತಲ್ಲಣಗಳನ್ನು ಎದುರಿಸುತ್ತಿರುವ ಜನರಿಗೆ ನಿರಾಶೆಯಾಗಿದೆ. ಜಿಲ್ಲೆಯ ಬಯಲುಸೀಮೆಯ ನೀರಿನ ಸಮಸ್ಯೆ ಬಹಳ ದೊಡ್ಡದಾಗಿದೆ. ಅಲ್ಲಿನ ಬದುಕನ್ನು ಬರ ನಾಶ ಮಾಡುತ್ತಿದೆ. ಮಲೆನಾಡಿನಲ್ಲಿ ಜನರನ್ನು ಒಕ್ಕಲೆಬ್ಬಿಸುವ ಯೋಜನೆಗಳು ಜಾರಿಯಾಗುತ್ತಿವೆ. ಭತ್ತ, ಅಡಿಕೆಯಂತಹ ಸಾಂಪ್ರದಾಯಿಕ ಕೃಷಿ ನಾಶವಾಗುತ್ತಿದೆ. ವಾಣಿಜ್ಯ ಬೆಳೆಗಳಿಗೆ ಬೆಲೆ ಇಲ್ಲ. ರಾಜ್ಯದಲ್ಲಿ ಸೌಹಾರ್ದ ಕೇಂದ್ರವಾಗಿದ್ದ ಜಿಲ್ಲೆ ಬಾಬಾಬುಡಾನ್‌ಗಿರಿ ವಿವಾದಿತ ರಾಜಕಾರಣದ ಭಾಗವಾಗುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಂಡು ಕನ್ನಡದ ಜನರ ಸಂಕಷ್ಟಗಳು, ತಲ್ಲಣಗಳನ್ನು ಸರಕಾರಕ್ಕೆ ತಿಳಿಸುವ ಕಾರ್ಯಕ್ರಮ ಆಗಬೇಕಿತ್ತು. ಇದಕ್ಕೆ ಅಡ್ಡಿ ಮಾಡಿ, ಜಿಲ್ಲೆಯ ಜನರು ಹಾಗೂ ಕನ್ನಡದ ಜನರಿಗೆ ನಿರಾಶೆ ಮಾಡಿದ್ದಾರೆ. ನಿರಾಶೆಯ ಕಾವು, ಶಾಪ ವಿರೋಧಿಗಳಿಗೆ ತಟ್ಟದಿರಲ್ಲ.
ಕಸಾಪದ ಮುಂದಿನ ನಿಲುವು?
ನಮಗೆ ತಿಳಿದು ಬಂದಂತೆ ಸ್ವಾಗತ ಸಮಿತಿಯವರು ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಸಮ್ಮೇಳನದ ಗೋಷ್ಠಿಗಳು, ನಿರ್ಣಯ ಸೇರಿದಂತೆ ಉಳಿದ ಕಾರ್ಯಕ್ರಮಗಳನ್ನು ನನ್ನ ಅಧ್ಯಕ್ಷತೆಯಲ್ಲೇ ಸೂಕ್ತ ಸ್ಥಳದಲ್ಲಿ ಬೇರೆ ದಿನಗಳಲ್ಲಿ ಮಾಡುವ ನಿರ್ಣಯ ಮಾಡಿದ್ದಾರೆ. ಎರಡನೇ ದಿನದ ಕಾರ್ಯಕ್ರಮ ಹಾಗೂ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿರ್ಣಯಕೈಗೊಳ್ಳುವ ನಿಯಮ ಪೂರ್ಣಗೊಂಡ ಬಳಿಕವೇ ಈ ಸಮ್ಮೇಳನ ಮುಗಿದಂತಾಗಲಿದೆ ಎಂಬ ತೀರ್ಮಾನಕ್ಕೆ ಕಸಾಪ ಕಾರ್ಯಕಾರಿ ಮಂಡಳಿ ಬಂದಿದೆ.
ಕಸಾಪ ಹಿಂದಿನಂತೆ ಈಗಲೂ ಸ್ವಾಯತ್ತ್ತ ಸಂಸ್ಥೆಯಾಗಿ ಉಳಿದಿದೆಯೇ?
ಜಿಲ್ಲೆಯ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ವಿರೋಧಗಳು ಕೇಳಿ ಬಂದಾಗಿನಿಂದಲೂ ದೃಢವಾದ ನಿಲುವಿಗೆ ಬದ್ಧರಾಗಿದ್ದರು. ಕೇಂದ್ರ ಕಸಾಪ ಅಧ್ಯಕ್ಷ ಮನುಬಳಿಗಾರ್ ಕೂಡ ಇಂತದ್ದೇ ನಿಲುವು ತಳೆಯಬೇಕಿತ್ತು. ಕಸಾಪ ಒಂದು ಸ್ವಾಯತ್ತ ಸಂಸ್ಥೆ, ಕಸಾಪ ಸಿ.ಟಿ.ರವಿ ಹಾಗೂ ಸರಕಾರಕ್ಕಿಂತ ದೊಡ್ಡ ಸಂಸ್ಥೆ. ಅದಕ್ಕೆ ಮೂರುವರೆ ಲಕ್ಷ ಜನ ಸದಸ್ಯರಿದ್ದಾರೆ. ಅವರಿಂದ ಗೆದ್ದು ಬಂದವರು ಮನು ಬಳಿಗಾರ್. ಅವರು ಸರಕಾರದ ಅಡಿಯಾಳಲ್ಲ. ಸರಕಾರ ಹೇಳಿದಂತೆ ಕೇಳಬೇಕಿಲ್ಲ. ಸರಕಾರ ಇರುವುದು ಕನ್ನಡದ ಅಭಿವೃದ್ಧಿಗೆ. ಕಸಾಪಕ್ಕೆ ಹಿಂದೆ ಸರಕಾರ ಅನುದಾನ ನೀಡುವ ಸಂಪ್ರದಾಯ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸರಕಾರ ಕಸಾಪಕ್ಕೆ ಸಣ್ಣ ಆರ್ಥಿಕ ನೆರವು ನೀಡುತ್ತದೆ. ಆದರೆ ಸಿ.ಟಿ.ರವಿ ಸರಕಾರ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಅನುದಾನ ನೀಡದಿದ್ದಲ್ಲಿ ಸಮ್ಮೇಳನವೇ ನಿಲ್ಲುತ್ತೆ ಎಂಬ ಭ್ರಮೆಯಲ್ಲಿದ್ದರು. ಆದರೆ ಸಿ.ಟಿ.ರವಿ ಮತ್ತವರ ಸರಕಾರ ಕೊಡುವ ಅನುದಾನಕ್ಕಿಂತ ಎರಡು ಪಟ್ಟು ಹಣವನ್ನು ಜನರೇ ಕೊಟ್ಟು ಸಮ್ಮೇಳನ ನಡೆಸಿದರು. ಇದೀಗ ಕಸಾಪ ಒಂದು ದೃಢ ನಿರ್ಣಯಕ್ಕೆ ಬಂದಿದ್ದು, ಸಿ.ಟಿ.ರವಿ ಇರೋ ತನಕ ಕಸಾಪ ಸರಕಾರಿ ಅನುದಾನ ಪಡೆಯಬಾರದೆಂಬ ನಿರ್ಣಯವನ್ನು ಕೈಗೊಂಡಿದ್ದಾರೆ.