ಮಂಡ್ಯ: ಕೊರೋನ ಗೆದ್ದು ಬಂದ ಪೇದೆಗೆ ಹೃದಯಸ್ಪರ್ಶಿ ಸ್ವಾಗತ

ಮಂಡ್ಯ, ಜೂ.19: ಕೆ.ಆರ್.ಪೇಟೆ ತಾಲೂಕಿನಲ್ಲಿ ಮುಂಬೈ ಕನ್ನಡಿಗರನ್ನು ಸಾಂಸ್ಥಿಕ ಹೋಂ ಕ್ವಾರಂಟೈನ್ ಮಾಡುವಲ್ಲಿ ಅಪಾರ ಶ್ರಮವಹಿಸಿ ಕೊರೋನ ಸೋಂಕಿಗೆ ಒಳಗಾಗಿ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ ಕ್ರೈಂ ವಿಭಾಗದ ಮುಖ್ಯ ಪೇದೆ ನಾಗರಾಜು ಅವರನ್ನು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಿಬ್ಬಂದಿ ಹೂಮಾಲೆ ಹಾಕಿ ಪುಷ್ಪ ವೃಷ್ಠಿ ಮಾಡಿ ಹೃದಯಸ್ಪರ್ಶಿ ಸ್ವಾಗತ ನೀಡಿದರು.
ಕೆ.ಆರ್.ಪೇಟೆ ಪಟ್ಟಣ ಪೊಲಿಸ್ ಠಾಣೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮಾತನಾಡಿ, ಪೊಲೀಸ್ ಸಿಬ್ಬಂದಿ ನಾಗರಾಜು ಅವರಂತೆ ಜನಸ್ನೇಹಿಯಾಗಬೇಕು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಬೇಕು. ಜನಸಾಮಾನ್ಯರಿಗೆ ಕೊರೋನ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದುಡಿಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಸಬ್‍ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್, ಪ್ರಬೆಷನರಿ ಎಸ್‍ಐ ನಿಖಿತ, ಎಎಸ್‍ಐಗಳಾದ ರಾಜು, ಶಿವಣ್ಣ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.