"ಪರ್ದಾ ಭಾರತೀಯ ಸಂಸ್ಕೃತಿಯ ಭಾಗ": ಮುಸ್ಕಾನ್ ಗೆ ಬೆಂಬಲ ವ್ಯಕ್ತಪಡಿಸಿದ ಆರೆಸ್ಸೆಸ್ ನ ಮುಸ್ಲಿಮ್ ರಾಷ್ಟ್ರೀಯ ಮಂಚ್

Photo: Twitter
ಬೆಂಗಳೂರು: ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ಘಟಕ-ಮುಸ್ಲಿಂ ರಾಷ್ಟ್ರೀಯ ಮಂಚ್, ಮಂಡ್ಯದ ಕಾಲೇಜೊಂದರಲ್ಲಿ ಮಂಗಳವಾರ ಹಿಜಾಬ್ ವಿರೋಧಿಸಿ ನೂರಾರು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈಶ್ರೀರಾಂ ಘೋಷಣೆ ಕೂಗುತ್ತಾ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಎಂಬಾಕೆಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತ್ತು. ಇದೀಗ ಎಂಆರ್ಎಂ ಮುಸ್ಕಾನ್ ರನ್ನು ಬೆಂಬಲಿಸಿದೆಯಲ್ಲದೆ ಹಿಜಾಬ್ ಅಥವಾ 'ಪರ್ದಾ ' ಭಾರತೀಯ ಸಂಸ್ಕೃತಿಯ ಭಾಗ ಎಂದು ಹೇಳಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿದ ಮುಸ್ಲಿಂ ರಾಷ್ಟ್ರೀಯ ಮಂಚ್ ಇದರ ಅವಧ್ ಪ್ರಾಂತ್ ಸಂಚಾಲಕ್ ಅನಿಲ್ ಸಿಂಗ್, "ಆಕೆ ನಮ್ಮ ಸಮುದಾಯದ ಓರ್ವ ಪುತ್ರಿ ಮತ್ತು ಸಹೋದರಿ, ಈ ಬಿಕ್ಕಟ್ಟಿನ ಸಂದರ್ಭ ನಾವು ಆಕೆಯ ಜತೆಗಿದ್ದೇವೆ,'' ಎಂದಿದ್ದಾರೆ.
"ಹಿಂದು ಸಂಸ್ಕೃತಿಯು ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಸುತ್ತದೆ ಮತ್ತು ಜೈ ಶ್ರೀ ರಾಮ್ ಎಂದು ಹೇಳಿ ಹುಡುಗಿಯೊಬ್ಬಳನ್ನು ಭಯಭೀತಗೊಳಿಸಲು ಯತ್ನಿಸಿದ್ದು ತಪ್ಪು.'' ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಆ ಹುಡುಗಿಗೆ ಹಿಜಾಬ್ ಧರಿಸುವ ಸಾಂವಿಧಾನಿಕ ಸ್ವಾತಂತ್ರ್ಯವಿದೆ, ಆಕೆ ಕ್ಯಾಂಪಸ್ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿದ್ದಾಳೆಂದಾದರೆ ಸಂಸ್ಥೆಗೆ ಆಕೆಯ ವಿರುದ್ಧ ಕ್ರಮಕೈಗೊಳ್ಳುವ ಹಕ್ಕಿದೆ. ಆದರೆ ಕೇಸರಿ ಶಾಲು ಹಿಡಿದುಕೊಂಡು ಜೈ ಶ್ರೀ ರಾಮ್ ಘೋಷಣೆಯನ್ನು ವಿದ್ಯಾರ್ಥಿಗಳು ಮೊಳಗಿಸಿರುವುದು ತಪ್ಪು, ಇದು ಹಿಂದು ಧರ್ಮಕ್ಕೆ ಅವಮಾನ. ಹಿಜಾಬ್ ಅಥವಾ ಪರ್ಧಾ ಕೂಡ ಭಾರತೀಯ ಸಂಸ್ಕೃತಿಯ ಭಾಗ ಮತ್ತು ಹಿಂದು ಮಹಿಳೆಯರೂ ತಮ್ಮ ಇಚ್ಛಾನುಸಾರ ಪರ್ಧಾ ಹಾಕುತ್ತಾರೆ. ಅದೇ ಬೀಬಿ ಮುಸ್ಕಾನ್ಗೂ ಅನ್ವಯಿಸುತ್ತದೆ,'' ಎಂದು ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
"ಮುಸ್ಲಿಮರು ನಮ್ಮ ಸಹೋದರರು ಮತ್ತು ಎರಡೂ ಸಮುದಾಯಗಳ ಡಿಎನ್ಎ ಒಂದೇ ಆಗಿದೆ ಎಂದು ನಮ್ಮ ಸರಸಂಘಚಾಲಕರು ಹೇಳಿದ್ದಾರೆ. ಮುಸ್ಲಿಮರು ತಮ್ಮ ಸಹೋದರರೆಂದು ತಿಳಿಯಬೇಕೆಂದು ಹಿಂದು ಸಮುದಾಯದ ಸದಸ್ಯರಿಗೆ ಮನವಿ ಸಲ್ಲಿಸುತ್ತೇನೆ,'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 1,000 ಅಡಿ ಎತ್ತರದ ಪರ್ವತದಲ್ಲಿ ಎರಡು ದಿನ ಸಿಲುಕಿದ್ದ ಯುವಕನ ರಕ್ಷಣೆಯ ವಿಡಿಯೋಗಳು ವೈರಲ್







