ವಿದ್ಯಾರ್ಥಿಯ ಅಳಿಲು ಸೇವೆಯ ಬಳಿಕ ಎಚ್ಚೆತ್ತ ಮನಪಾ; ಕಂಕನಾಡಿ ಮಾರುಕಟ್ಟೆಯ ಬಳಿಯ ಗುಂಡಿ ಮುಚ್ಚಿ ಓಡಾಟಕ್ಕೆ ಅವಕಾಶ

ಮಂಗಳೂರು, ಆ.23: ನಗರದ ಕಂಕನಾಡಿಯ ಹೂವಿನ ಮಾರುಕಟ್ಟೆ ಬಳಿಯ ಮುಖ್ಯರಸ್ತೆಯ ಗುಂಡಿ ಮುಚ್ಚಲು ವಿದ್ಯಾರ್ಥಿಯ ಅಳಿಲು ಸೇವೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತವು ಎಚ್ಚೆತ್ತುಕೊಂಡಿದೆ.
ಅಂದರೆ, ಮಂಗಳವಾರ ಈ ಗುಂಡಿಯನ್ನು ಮುಚ್ಚುವ ಮೂಲಕ ವಿದ್ಯಾರ್ಥಿಯ ಸಾಮಾಜಿಕ ಕಳಕಳಿಗೆ ಪಾಲಿಕೆಯ ಆಡಳಿತವು ಸ್ಪಂದಿಸಿವೆ. ಪಾಲಿಕೆಯ ಕಾರ್ಯವೈಖರಿಯ ಬಗ್ಗೆ ಟೀಕೆ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಮನಪಾ ಈ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ.
ಕೆಲವು ದಿನಗಳ ಹಿಂದೆ ಈ ಕಾಂಕ್ರಿಟ್ ರಸ್ತೆಯಂಚಿನಲ್ಲಿ ಕಾಣಿಸಿಕೊಂಡ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದರೆ, ಪಾದಚಾರಿಗಳ ಕಾಲು ಸಿಲುಕುತ್ತಿತ್ತು. ಇದನ್ನು ದಿನನಿತ್ಯ ಗಮನಿಸುತ್ತಿದ್ದ ನಗರದ ಎಕ್ಕೂರು ಕೇಂದ್ರೀಯ ವಿದ್ಯಾಲಯದ 7ನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಅರ್ಹಾಮ್ ಕಲ್ಲುಗಳನ್ನು ಹೆಕ್ಕಿ ಗುಂಡಿ ಮುಚ್ಚಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವಾರು ಮಂದಿ ವಿದ್ಯಾರ್ಥಿಯ ಕಾರ್ಯವೈಖರಿಯನ್ನು ಮೆಚ್ಚಿದ್ದರು.
ಇದನ್ನು ಓದಿ- ಮಂಗಳೂರು : ರಸ್ತೆ ಹೊಂಡ ಮುಚ್ಚಲು ಕಲ್ಲು ಹೆಕ್ಕಿ ಹಾಕಿದ ವಿದ್ಯಾರ್ಥಿ
ಇದೀಗ ಪಾಲಿಕೆಯು ಆ ಹೊಂಡವನ್ನು ಕಲ್ಲು, ಜಲ್ಲಿ ಹುಡಿ ಹಾಕಿ ಮುಚ್ಚಿಸಿವೆ. ಆ ಮೂಲಕ ವಿದ್ಯಾರ್ಥಿಯ ಅಳಿಲುಸೇವೆ ಸಾರ್ಥಕ ಎಂಬ ಅಭಿಪ್ರಾಯ ಸಾರ್ವಜನಿಕರ ವಲಯದಿಂದ ವ್ಯಕ್ತವಾಗುತ್ತಿದೆ.