ಬೆಳ್ತಂಗಡಿ: ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಕೋಣ ದಾಳಿ

ಬೆಳ್ತಂಗಡಿ, ಆ.26: ವ್ಯಕ್ತಿಯೊಬ್ಬರ ಮೇಲೆ ಕಾಡುಕೋಣಗಳ ಹಿಂಡೊಂದು ದಾಳಿ ನಡೆಸಿದ ಘಟನೆ ಬೆಳಾಲು ಗ್ರಾಮದ ಪೆರಿಯಡ್ಕ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಲೋಕೇಶ್ ಎಂಬರು ಕಾಡುಕೋಣಗಳ ದಾಳಿಗೊಳಗಾದವರು. ಇವರು ಉಜಿರೆಯಿಂದ ಕೆಲಸ ಮುಗಿಸಿಕೊಂಡು ಸಂಜೆ 7 ಗಂಟೆ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಪೆರಿಯಡ್ಕ ಎಂಬಲ್ಲಿ ಕಾಡುಕೋಣವೊಂದು ಅಡ್ಡ ಬಂದಿದೆ. ತಕ್ಷಣ ಅವರು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ಸುಮಾರು 10ರಷ್ಟಿದ್ದ ಕಾಡುಕೋಣಗಳ ಹಿಂಡು ಇವರ ವಾಹನದತ್ತ ನುಗ್ಗಿ ಬಂದಿದೆ. ಇದನ್ನು ಗಮನಿಸಿದ ಅವರು ಮುಂದೆ ಹೋಗಲು ಪ್ರಯತ್ನಿಸಿದಾಗ ಕಾಡುಕೋಣವೊಂದು ಅವರ ಮೇಲೆ ಎರಗಿದೆ. ಇದರಿಂದ ಅವರು ವಾಹನ ಸಹಿತ ಅವರು ಸ್ವಲ್ಪ ದೂರ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಮತ್ತೊಂದು ಕಾಡು ಕೋಣವೂ ದಾಳಿಗೆ ಮುಂದಾದಾಗ ಅವರು ಅದೃಷ್ಟವಶಾತ್ ತಪ್ಪಿಸಿಕೊಂಡರೆನ್ನಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ: ಐದು ಮಂದಿ ಜೀವಂತ ದಹನ
ಕಾಡುಕೋಣ ದಾಳಿಯಿಂದ ಲೋಕೇಶ್ ಅವರ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಕಾಡುಕೋಣಗಳ ಹಾವಳಿಯಿಂದ ಕೃಷಿ ಹಾಳಾಗುತ್ತಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಪಟಾಕಿ ಅಥವಾ ಶಬ್ದ ಮಾಡಿ ಓಡಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಹಗಲು ಹೊತ್ತಿನಲ್ಲೂ ಆತ್ತಿತ್ತ ಓಡಾಡುವ ಕಾಡುಕೋಣಗಳಿಂದಾಗಿ ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲೂ ಪೋಷಕರು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಡುಕೋಣಗಳ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.