ಹಾವೇರಿಯಿಂದ ಚಿತ್ರದುರ್ಗ ಮುರುಘಾ ಮಠಕ್ಕೆ ವಾಪಸ್ ಆದ ಡಾ.ಶಿವಮೂರ್ತಿ ಶರಣರು
ಕಾನೂನನ್ನು ಗೌರವಿಸುತ್ತೇನೆ. ಯಾವುದೇ ಪಲಾಯನವಾದವಿಲ್ಲ: ಸ್ವಾಮೀಜಿ

ಚಿತ್ರದುರ್ಗ, ಆ.29: ಹಾವೇರಿಗೆ ತೆರಳಿದ್ದ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಡಾ.ಶಿವಮೂರ್ತಿ ಮುರುಘಾ ಶರಣರು ಪೊಲೀಸರ ಸೂಚನೆಯ ಹಿನ್ನೆಲೆಯಲ್ಲಿ ಮಠಕ್ಕೆ ವಾಪಸ್ ಆಗಿದ್ದಾರೆ.
ಮಠದ ಹಾಸ್ಟೆಲ್ ನಲ್ಲಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶರಣರನ್ನು ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ಹಾವೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಅವರನ್ನು ಹಾವೇರಿ ಪೊಲೀಸರು ಬಂಕಾಪುರದ ಬಳಿ ತಡೆದು ಚಿತ್ರದುರ್ಗಕ್ಕೆ ಮರಳುವಂತೆ ಸೂಚಿಸಿದ್ದರು. ಅದರಂತೆ ಡಾ.ಶಿವಮೂರ್ತಿ ಶರಣರು ಮಠಕ್ಕೆ ವಾಪಸ್ ಆಗಿದ್ದಾರೆ.
ಈ ವೇಳೆ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದ ಶರಣರು, ಇಂತಹ ಪಿತೂರಿ ಹೊಸದೇನಲ್ಲ. 15 ವರ್ಷಗಳಿಂದ ನಡೆಯುತ್ತಿದೆ.ಈ ಮೊದಲು ಒಳಗಡೆಯೇ ಪಿತೂರಿ ನಡೆಯುತ್ತಿತ್ತು. ಇದೀಗ ಹೊರಗಡೆ ನಡೆಯುತ್ತಿದೆ. ತಾನು ಈ ನೆಲದ ಕಾನೂನನ್ನು ಗೌರವಿಸುತ್ತೇನೆ. ಯಾವುದೇ ಕಾರಣಕ್ಕೂ ಪಲಾಯನವಾದವಿಲ್ಲ. ನಿಮ್ಮೆಲ್ಲರ ಧೈರ್ಯದಿಂದ ಎಲ್ಲವನ್ನು ಎದುರಿಸಿ ಆರೋಪಗಳಿಂದ ಮುಕ್ತನಾಗಲಿದ್ದೇನೆ. ಯಾರೂ ಆತಂಕಿತರಾಗಬೇಡಿ ಎಂದು ಹೇಳಿದ್ದಾರೆ.
ಮಠದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯರಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಮೈಸೂರಿನ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮುರುಘಾ ಮಠದ ಸ್ವಾಮೀಜಿಯನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆಂಬುದು ಸುಳ್ಳು: ಮಠದಿಂದ ಸ್ಪಷ್ಟನೆ







