ಬ್ರಹ್ಮಶ್ರೀ ನಾರಾಯಣಗುರುಗಳಿಗೆ ರಾಜ್ಯ ಸರಕಾರದಿಂದ ಮತ್ತೊಮ್ಮೆ ಅವಮಾನ: ರಮಾನಾಥ ರೈ

ಮಂಗಳೂರು, ಸೆ.12: ರಾಜ್ಯ ಬಿಜೆಪಿ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಈಗಾಗಲೇ ಹಲವು ಬಾರಿ ಅವಮಾನ ಮಾಡಿದ್ದು, ಇದೀಗ ಗುರುಗಳ ಜನ್ಮ ದಿನವನ್ನು ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಜಿಲ್ಲೆಗೆ ಸೀಮಿತಗೊಳಿಸಿ ಮತ್ತೊಮ್ಮೆ ಅವಮಾನ ಮಾಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೇಶದ ಮಹಾನ್ ದಾರ್ಶನಿಕರಲ್ಲಿ ಒಬ್ಬರಾದ ನಾರಾಯಣಗುರುಗಳ ಜನ್ಮದಿನವನ್ನು ರಾಜ್ಯದ ಕೇಂದ್ರ ಸ್ಥಾನದಲ್ಲಿ ಮುಖ್ಯಮಂತ್ರಿ ಉಪಸ್ಥಿತಿಯಲ್ಲಿ ಮಾಡಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದು, ಆ ಕಾರ್ಯಕ್ರಮದಲ್ಲಿಯೂ ಗುರುಗಳ ಹೆಸರನ್ನು ಕನಿಷ್ಠ ಪ್ರಸ್ತಾಪಿಸುವ ಕಾರ್ಯವನ್ನೂ ಮಾಡಿಲ್ಲ. ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಯೂ ಭಾಗವಹಿಸಿಲ್ಲ ಎಂದು ಅವರು ಆಕ್ಷೇಪಿಸಿದರು.
ಇದನ್ನೂ ಓದಿ: ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮಗಳ ಕೂಪವಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಂಟ್ವಾಳದಲ್ಲಿ ನಾರಾಯಣ ಗುರುಗಳ ಜ್ಞಾನ ಮಂದಿರ ಉದ್ಘಾಟನೆಯ ವೇಳೆ ನಾರಾಯಣ ಗುರುಗಳ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನಾಗಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಸಿದ್ದರಾಮಯ್ಯ ಅವಧಿಯಲ್ಲಿ ಅವರ ಉಪಸ್ಥಿತಿಯಲ್ಲಿ ಆಚರಣೆಯೂ ನಡೆದಿದೆ. ಆದರೆ ಬಳಿಕ ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವಾಗಲೂ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಅವಮಾನ ಮಾಡಿದ್ದಾರೆ. ದಾರ್ಶನಿಕರ ಜಯಂತಿಯನ್ನು ಜನರಿರುವ ಕಡೆ ರಾಜ್ಯಮಟ್ಟದ ಕಾರ್ಯಕ್ರಮವಾಗಿ ಮಾಡುವುದಾದರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಾಡಬಹುದಿತ್ತು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ನಿರಾಕರಣೆ, ರಾಜ್ಯದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಿಂದ ನಾರಾಯಣಗುರುಗಳ ವಿಷಯವನ್ನು ಕೈಬಿಡುವುದು ಸೇರಿದಂತೆ ಬಿಜೆಪಿ ಸರಕಾರ ನಾರಾಯಣ ಗುರುಗಳಿಗೆ ಸರಣಿ ಅಪಚಾರವೆಸಗಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲಕ ವರ್ಗದ ಪರ ಹೋರಾಟದ ಮಾಡಿದ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನ ಇದಾಗಿದ್ದು, ರಾಜ್ಯ ಸರಕಾರದ ನಡೆಯನ್ನು ಸಮರ್ಥನೆ ಮಾಡಿರುವುದು ಕೂಡಾ ಅವರಿಗೆ ಮಾಡಿರುವ ಅವಮಾನ ಎಂದು ರಮಾನಾಥ ರೈ ಹೇಳಿದರು.
ಸರಕಾರದ ಈ ನಡೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕರಾವಳಿ ಭಾಗ ನಾರಾಯಣ ಗುರುಗಳ ಬಹುದೊಡ್ಡ ಬೆಂಬಲಿಗರನ್ನು ಹೊಂದಿರುವ ಪ್ರದೇಶ. ರಾಜ್ಯ ಸರಕಾರ ರಾಜಕೀಯ ಉದ್ದೇಶಕ್ಕಾಗಿ ಕಾರ್ಯಕ್ರಮ ಮಾಡಿ ದಾರ್ಶನಿಕರನ್ನು ಜಿಲ್ಲೆಗೆ ಸೀಮಿತಗೊಳಿಸಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್, ಸಲೀಂ, ಪ್ರಕಾಶ್ ಸಾಲ್ಯಾನ್, ಶಾಹುಲ್ ಹಮೀದ್, ಪ್ರತಿಭಾ ಕುಳಾಯಿ, ಶುಭೋದಯ ಆಳ್ವ, ಯೋಗೀಶ್, ಶಬೀರ್ ಸಿದ್ದಕಟ್ಟೆ, ಸುರೇಂದ್ರ ಕಂಬಳಿ, ಭರತೇಶ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ನಾನು ಚೌಕೀದಾರ, ಫಕೀರ ಎಂದು ಹೇಳಿಕೊಂಡಿಲ್ಲ!
ರಾಹುಲ್ ಗಾಂಧಿ ಅವರು ಮೋತಿಲಾಲ್‌ರ ಅಗರ್ಭ ಶ್ರೀಮಂತರ ಕುಟುಂಬದಿಂದ ಬಂದವರು. ಅವರು ನಾನು ಚೌಕೀದಾರ, ಫಕೀರ ಎಂದು ಹೇಳಿಲ್ಲ. ಹಾಗೆಂದು ಹೇಳಿಕೊಂಡವರೇ ಲಕ್ಷಾಂತರ ರೂ. ಮೌಲ್ಯದ ಧಿರಿಸು ಧರಿಸುತ್ತಾರೆ. ವಿಜಯೇಂದ್ರ ಹಾಕುವ ಬೆಲ್ಟಿನ ಬೆಲೆ 60,000 ಮೌಲ್ಯದ್ದೆಂದು ಹೇಳುತ್ತಿದ್ದಾರೆ. ಅದೆಲ್ಲವನ್ನೂ ಬಿಟ್ಟು ರಾಹುಲ್ ಗಾಂಧಿ ಶರ್ಟ್‌ನ ಬಗ್ಗೆ ಮಾತನಾಡುತ್ತಾರೆ ಎಂದು ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.










