ಇದು 'ಇಂಡಿಯಾ', 'ಹಿಂದಿಯಾ' ಅಲ್ಲ: ತಮಿಳುನಾಡು ಸಿಎಂ ಸ್ಟಾಲಿನ್

ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈ: ಹಿಂದಿ ಅಧಿಕೃತ ಭಾಷೆಯಾಗಿ ಇಡೀ ರಾಷ್ಟ್ರವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸುತ್ತದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್(Tamil Nadu CM M K Stalin), ದೇಶವು 'ಇಂಡಿಯಾ' ಆಗಿಯೇ ಉಳಿಯುತ್ತದೆ ಮತ್ತು “ಹಿಂದಿಯಾ” ಆಗಿ ಅಲ್ಲ ಎಂದು ಹೇಳಿದರು. ಅಲ್ಲದೆ 8 ನೇ ಪರಿಚ್ಛೇದದ ಅಡಿಯಲ್ಲಿ ಹಿಂದಿಗೆ ಮಹತ್ವ ನೀಡಿದಂತೆ ದೇಶದ ಎಲ್ಲಾ ಭಾಷೆಗಳಿಗೆ ಮಹತ್ವವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಂವಿಧಾನದ 8 ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳನ್ನು ದೇಶದ ಅಧಿಕೃತ ಭಾಷೆಗಳಾಗಿ ಘೋಷಿಸಿದ ನಂತರ ಸೆಪ್ಟೆಂಬರ್ 14 ರಂದು ಆಚರಿಸಲಾಗುವ 'ಹಿಂದಿ ದಿವಸ್' ಅನ್ನು 'ಭಾರತೀಯ ಭಾಷಾ ದಿನ' ಎಂದು ಮರುನಾಮಕರಣ ಮಾಡಬೇಕೆಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.
“ಇದು ಇಂಡಿಯಾ, 'ಹಿಂದಿಯಾ' ಅಲ್ಲ. ತಮಿಳು ಸೇರಿದಂತೆ ಭಾರತೀಯ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಸ್ಟಾಲಿನ್ ಆಗ್ರಹಿಸಿದ್ದಾರೆ.
(ಭಾರತದ) ಸಂಸ್ಕೃತಿ ಮತ್ತು ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹಿಂದಿಯನ್ನು ಕಲಿಯಬೇಕು ಎಂದು ಹೇಳುವುದು ವಿವಿಧ ಭಾಷೆಗಳನ್ನು ಮಾತನಾಡುವ ಜನರನ್ನು ಒಳಗೊಂಡಿರುವ ಭಾರತದ ವೈವಿಧ್ಯತೆಯ ಏಕತೆ ತತ್ವಕ್ಕೆ ವಿರುದ್ಧವಾಗಿದೆ. ಭಾರತದ ಸಂಸ್ಕೃತಿ ಮತ್ತು ಇತಿಹಾಸ ಹಿಂದಿಯಲ್ಲಿ ಅಡಗಿಲ್ಲ. ತಮಿಳಿನ ನೇತೃತ್ವದ ದ್ರಾವಿಡ ಭಾಷಾ ಕುಟುಂಬವು ಇಂದಿನ ಭಾರತ ಮತ್ತು ಅದರಾಚೆಗೂ ಹರಡಿದೆ ಎಂದು ಇತಿಹಾಸಕಾರರು ಸೂಚಿಸಿದ್ದಾರೆ, " ಎಂದು ಸ್ಟಾಲಿನ್ ಹೇಳಿದ್ದಾರೆ.
ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಭಾರತದ ಇತಿಹಾಸವನ್ನು ದೇಶದ ದಕ್ಷಿಣ ಭಾಗದಿಂದ "ಮತ್ತೆ ಬರೆಯಬೇಕು" ಎಂದು ಇತಿಹಾಸಕಾರರು ಮತ್ತು ಸಂಶೋಧಕರು ಬಯಸುತ್ತಾರೆ ಎಂದು ಸ್ಟಾಲಿನ್ ಹೇಳಿದರು. ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ತಮಿಳು ಮತ್ತು ಇತರ ಭಾಷೆಗಳನ್ನು ಮುಂದಿಟ್ಟುಕೊಂಡು ಹಿಂದಿಯನ್ನು "ರಾಷ್ಟ್ರೀಯ ಭಾಷೆ" ಎಂದು ಪ್ರತಿಪಾದಿಸುವ ದಿಲ್ಲಿ ಆಡಳಿತ ನಡೆಸುತ್ತಿರುವವರ "ಪ್ರಾಬಲ್ಯ" ಧೋರಣೆಯ ಪ್ರತಿಬಿಂಬವಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.
1965 ರ ಹಿಂದಿ ವಿರೋಧಿ ಆಂದೋಲನವನ್ನು ಉಲ್ಲೇಖಿಸಿದ ಸ್ಟಾಲಿನ್, "ನಮ್ಮ ಶ್ರೀಮಂತ ತಮಿಳು ಭಾಷೆಯನ್ನು ರಕ್ಷಿಸಲು ತಮಿಳುನಾಡು ಜೀವಗಳನ್ನು ತ್ಯಾಗ ಮಾಡಿದ ಇತಿಹಾಸವನ್ನು ಹೊಂದಿದೆ" ಎಂದು ಹೇಳಿದರು. ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ ಮತ್ತು ಅದೊಂದೇ ಅಧಿಕೃತ ಭಾಷೆಯೂ ಅಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. “ಹಿಂದಿ ಭಾರತದ ಆಡಳಿತ ಭಾಷೆ. ಇಂಗ್ಲಿಷ್ ಕೂಡ ಆಡಳಿತ ಭಾಷೆಯಾಗಿದೆ,'' ಎಂದು ಅವರು ಹೇಳಿದರು.
ಇದನ್ನೂ ಓದಿ: ಹಿಂದಿ ದೇಶದ ಎಲ್ಲ ಭಾಷೆಗಳ ಸ್ನೇಹಿತ: ಅಮಿತ್ ಶಾ







