ಕಲಬುರಗಿ: ಆರೆಸ್ಸೆಸ್ ಸಮವಸ್ತ್ರದಲ್ಲಿ ಕೇಂದ್ರೀಯ ವಿವಿ ಸಹಾಯಕ ಪ್ರೊಫೆಸರ್‌ಗಳು!

ಕಲಬುರಗಿ: ಜಿಲ್ಲೆಯ ಅಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ (Central University of Karnataka (CUK)) ಮೂವರು ಸಹಾಯಕ ಪ್ರೊಫೆಸರ್‌ಗಳು ಆರೆಸ್ಸೆಸ್ (RSS) ಗಣವೇಷದಲ್ಲಿ ಕಾಣಿಸಿಕೊಂಡಿರುವುದು ವಿವಾದ ಸೃಷ್ಟಿಸಿದೆ. ಸಮಾಜದ ವಿವಿಧ ವರ್ಗಗಳಿಂದ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದು, ಕ್ಯಾಂಪಸ್ ಕೇಸರೀಕರಣವಾಗುತ್ತಿದೆ ಎಂಬ ವಿವಾದ ಭುಗಿಲೆದ್ದಿದೆ ಎಂದು deccanherald.com ವರದಿ ಮಾಡಿದೆ.
ಇಂತಹ ಚಟುವಟಿಕೆಗಳಿಂದ ಕ್ಯಾಂಪಸ್‌ನ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೆಲ ವಿದ್ಯಾರ್ಥಿಗಳು ಇತ್ತೀಚೆಗೆ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದರು. ವಿವಿಯನ್ನು ಆರೆಸ್ಸೆಸ್ ಕೇಂದ್ರವಾಗಿ ಮಾಡುವ ಮೂಲಕ ಕೆಲ ಬೋಧಕ ಸಿಬ್ಬಂದಿ ವಿಶ್ವವಿದ್ಯಾನಿಲಯವನ್ನು ರಾಜಕೀಕರಣಗೊಳಿಸುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು.
ಇದೀಗ ಸಹಾಯಕ ಪ್ರೊಫೆಸರ್‌ಗಳು ಆರೆಸ್ಸೆಸ್ ಗಣವೇಷದಲ್ಲಿರುವ ಫೋಟೊ ಮತ್ತೆ ವಿವಾದವನ್ನು ಕೆದಕಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚಿತ್ರದಲ್ಲಿರುವ ಸಹಾಯಕ ಪ್ರಾಧ್ಯಾಪಕರನ್ನು ಸಾರ್ವಜನಿಕ ಸಂಪರ್ಕ ವಿಭಾಗದ ಸಹಾಯಕ ಪ್ರೊಫೆಸರ್ ಅಲೋಕ್‌ಕುಮಾರ್ ಗೌರವ್, ಮನಃಶಾಸ್ತ್ರ ವಿಭಾಘದ ವಿಜಯೇಂದ್ರ ಪಾಂಡೆ ಮತ್ತು ಜೈವಿಕ ವಿಜ್ಞಾನ ವಿಭಾಗದ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಕ್ಯಾಂಪಸ್‌ನಲ್ಲಿ ನಡೆದ ಆರೆಸ್ಸೆಸ್ ಪಥಸಂಚಲನದ ವೇಳೆ ಈ ಚಿತ್ರ ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ ಹೇಳಿಕೆ ನೀಡಿರುವ ಸಿಯುಕೆ ರಿಜಿಸ್ಟ್ರಾರ್ ಡಾ.ಬಸವರಾಜ ಡೋಣೂರು, ಬೋಧಕ ಸಿಬ್ಬಂದಿ ಬೋಧನಾ ಚಟುವಟಿಕೆಗಳಿಗಷ್ಟೇ ಸೀಮಿತವಾಗಬೇಕು. ಇತರ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದ ಆರೋಪಿಯ ತಾಯಿಗೆ ಗುಂಡಿಕ್ಕಿದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ!







