ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಕಟ್ಟಡ ನೆಲಸಮಗೊಳಿಸಿದ ಅಧಿಕಾರಿಗಳು

ಜೈಪುರ್: ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ (exam paper leak) ಪ್ರಕರಣದ ಇಬ್ಬರು ಆರೋಪಿಗಳು ನಡೆಸುತ್ತಿದ್ದ ಕೋಚಿಂಗ್ ಸೆಂಟರ್ ಇದ್ದ ಕಟ್ಟಡವನ್ನು ರಾಜಸ್ಥಾನದ ಜೈಪುರ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಂದು ನೆಲಸಮಗೊಳಿಸಿದ್ದಾರೆ.
ಗೋಪಾಲಪುರ ಬೈಪಾಸ್ ರಸ್ತೆಯಲ್ಲಿರುವ ಈ ಕೋಚಿಂಗ್ ಸೆಂಟರ್ ಕಟ್ಟಡ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನ ಲೋಕಸೇವಾ ಆಯೋಗವು ಶಿಕ್ಷಕರ ನೇಮಕಾತಿ ಪರೀಕ್ಷೆಯ ಭಾಗವಾಗಿ ನಡೆಸುವ ಸಾಮಾನ್ಯ ಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯುವ ಕೆಲವೇ ಗಂಟೆಗಳ ಮೊದಲು ಉದಯಪುರ್‌ನಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು.
ಈ ಸಂಬಂಧ 46 ಅಭ್ಯರ್ಥಿಗಳು ಸೇರಿದಂತೆ 49 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ನಾಲ್ಕು ದಿನಗಳ ಹಿಂದೆ ಕೋಚಿಂಗ್ ಸೆಂಟರ್ ಮಾಲಕರಿಗೆ ನೋಟಿಸ್ ಜಾರಿಯಾಗಿದ್ದರೂ ಅವರಿಂದ ಉತ್ತರ ಬಾರದೇ ಇದ್ದುದರಿಂದ ಇಂದಿನ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಟ್‌ಬ್ಯಾಕ್ ನಿಯಮ ಸಂಬಂಧಿ ಉಲ್ಲಂಘನೆಗಳಿಗಾಗಿ ನೆಲಸಮ ಕಾರ್ಯಾಚರಣೆ ನಡೆದಿದೆ. ಈ ಐದು ಅಂತಸ್ತಿನ ಕಟ್ಟಡವು ಅಕ್ರಮವಾಗಿದ್ದು ರಸ್ತೆ ಜಾಗವನ್ನು ಅತಿಕ್ರಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿಪಕ್ಷ ಬಿಜೆಪಿ ಸ್ವಾಗತಿಸಿದೆ.
ಮಧ್ಯ ಪ್ರದೇಶ ಸರ್ಕಾರ ರಾಮನವಮಿ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದವರ ಕಟ್ಟಡಗಳನ್ನು ನೆಲಸಮಗೊಳಿಸಿದ್ದ ಕ್ರಮವನ್ನು ಕಳೆದ ವರ್ಷದ ಎಪ್ರಿಲ್ ತಿಂಗಳಿನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಿಸಿದ್ದರು.
ಇದನ್ನೂ ಓದಿ: 18 ವರ್ಷದ ಖ್ಯಾತ MMA ಸ್ಟಾರ್ ವಿಕ್ಟೋರಿಯಾ ಲೀ ನಿಧನ







