ಜಾಮಿಯಾ ಹಿಂಸಾಚಾರ ಆರೋಪಿಗಳ ದೋಷಮುಕ್ತಿ ಪ್ರಶ್ನಿಸಿ ಪೊಲೀಸ್ ಅರ್ಜಿ: ಶರ್ಜೀಲ್, ಸಫೂರಾಗೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ಫೆ. 13: 2019ರ ಜಾಮಿಯಾ ನಗರ್ ಹಿಂಸಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವೊಂದು ಸಾಮಾಜಿಕ ಕಾರ್ಯಕರ್ತರಾದ ಶರ್ಜೀಲ್ ಇಮಾಮ್, ಸಫೂರಾ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ 8 ಮಂದಿಯನ್ನು ಇತ್ತೀಚೆಗೆ ದೋಷಮುಕ್ತಿಗೊಳಿಸಿದೆ. ಇದನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ದಿಲ್ಲಿ ಹೈಕೋರ್ಟ್ ಸೋಮವಾರ, ಪೊಲೀಸರ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ದೋಷಮುಕ್ತಿಗೊಂಡವರಿಗೆ ನೋಟಿಸ್ ಜಾರಿಗೊಳಿಸಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ, 2019 ಡಿಸೆಂಬರ್ 15ರಂದು ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಿಂಚಾಚಾರ ಸಂಭವಿಸಿತ್ತು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಾಗಿ ದಿಲ್ಲಿ ಪೊಲೀಸರು ವಿಶ್ವವಿದ್ಯಾನಿಲಯದ ಆವರಣದ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಅಧಿಕ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಪ್ರತಿಭಟನಕಾರರು ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಾರೆ ಮತ್ತು ಬಸ್ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬುದಾಗಿ ಆರೋಪಿಸಿರುವ ಪೊಲೀಸರು, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಫೆಬ್ರವರಿ 4ರಂದು ನ್ಯಾಯಾಧೀಶ ವರ್ಮ ಶರ್ಜೀಲ್ ಇಮಾಮ್, ಸಫೂರಾ ಝರ್ಗಾರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ 8 ಮಂದಿಯನ್ನು ದೋಷಮುಕ್ತಗೊಳಿಸಿದ್ದರು. ನಿಜವಾದ ಆರೋಪಿಗಳನ್ನು ಹಿಡಿಯಲಾಗದೆ ದಿಲ್ಲಿ ಪೊಲೀಸರು ಸಾಮಾಜಿಕ ಕಾರ್ಯಕರ್ತರನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದರು.
ಆರೋಪಿಗಳು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು, ಅವರಲ್ಲಿ ಶಸ್ತ್ರಾಸ್ತ್ರಗಳಿದ್ದವು ಅಥವಾ ಅವರು ಕಲ್ಲುಗಳನ್ನು ಎಸೆಯುತ್ತಿದ್ದರು ಎನ್ನುವುದಕ್ಕೆ ಮೇಲ್ನೋಟಕ್ಕೆ ಹೌದೆಂದು ಅನಿಸುವ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು.
ಸೋಮವಾರ ಪೊಲೀಸರು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ದಿಲ್ಲಿ ಹೈಕೋರ್ಟ್ನ ನ್ಯಾಯಾಧೀಶೆ ಸ್ವರಣಾ ಕಾಂತ ಶರ್ಮ, ಸಂಬಂಧಪಟ್ಟವರಿಗೆ ನೋಟಿಸ್ಗಳನ್ನು ಜಾರಿಗೊಳಿಸಿದರು ಹಾಗೂ ವಿಚಾರಣೆಯನ್ನು ಮಾರ್ಚ್ 16ಕ್ಕೆ ನಿಗದಿಪಡಿಸಿದರು.
ಅದೇ ವೇಳೆ, ದಿಲ್ಲಿ ಪೊಲೀಸರ ಬಗ್ಗೆ ವಿಚಾರಣಾ ನ್ಯಾಯಾಲಯ ನೀಡಿರುವ ಹೇಳಿಕೆಗಳನ್ನು ಅಳಿಸಿಹಾಕಲು ನ್ಯಾಯಾಧೀಶರು ನಿರಾಕರಿಸಿದರು. ‘‘ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ನ್ಯಾಯಾಲಯ ಮಾಡಿರುವ ಟಿಪ್ಪಣಿಗಳು ಅವರ ಮುಂದಿನ ತನಿಖೆಯ ಮೇಲಾಗಲಿ, ಯಾವುದೇ ಆರೋಪಿಯ ವಿಚಾರಣೆಯ ಮೇಲಾಗಲಿ ಪರಿಣಾಮ ಬೀರುವುದಿಲ್ಲ’’ ಎಂದು ಹೈಕೋರ್ಟ್ ಹೇಳಿತು.
ಇದನ್ನು ಓದಿ: ಪಂಡಿತರ ಕುರಿತು ಭಾಗ್ವತ್ ಹೇಳಿಕೆ ವಿವಾದದ ನಡುವೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ ಪುರಿ ಶಂಕರಾಚಾರ್ಯ







