ಉತ್ತರ ಪ್ರದೇಶದಲ್ಲಿ ಯುವ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಇಳಿಕೆ: CMIE

ಹೊಸದಿಲ್ಲಿ: ಅಖಿಲ ಭಾರತ ಮಟ್ಟದಲ್ಲಿನ ನಿರುದ್ಯೋಗ ಪ್ರಮಾಣವಾದ ಶೇ. 7.1ಕ್ಕೆ ಹೋಲಿಸಿದರೆ, ಉತ್ತರ ಪ್ರದೇಶದಲ್ಲಿನ (Uttar Pradesh) ನಿರುದ್ಯೋಗ ಪ್ರಮಾಣ ಶೇ. 4.2ರಷ್ಟಿದ್ದು, ಇದು ಸಾಕಷ್ಟು ಕಡಿಮೆ ಪ್ರಮಾಣದ್ದಾಗಿದೆ. ಆದರೆ, ಈ ಅಂಕಿ-ಸಂಖ್ಯೆಗಳನ್ನು ಮಾತ್ರ ಗಮನಿಸಿದರೆ ವಾಸ್ತವ ಉದ್ಯೋಗ ಚಿತ್ರಣದಿಂದ ವಿಮುಖವಾಗುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣದಲ್ಲಿನ ಒಟ್ಟಾರೆ ಇಳಿಕೆ ಹಾಗೂ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯನ್ನು ಗಣನೆಗೆ ತೆಗೆದುಕೊಂಡಾಗ, ಮುಖ್ಯವಾಗಿ 20-24 ವರ್ಷ ವಯಸ್ಸಿನ ಗುಂಪನ್ನು ಗಣನೆಗೆ ತೆಗೆದುಕೊಂಡಾಗ ಈ ಚಿತ್ರಣವು ಅಷ್ಟು ಸಮಾಧಾನಕರವಾಗಿಲ್ಲ ಎಂದು thewire.in ವರದಿ ಮಾಡಿದೆ.
ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (CMIE)ದ ದತ್ತಾಂಶದ ಪ್ರಕಾರ, ಉತ್ತರ ಪ್ರದೇಶದಲ್ಲಿ ಯುವ ಉದ್ಯೋಗಿಗಳ ಪಾಲ್ಗೊಳ್ಳುವಿಕೆ ಪ್ರಮಾಣ ಶೇ. 41.2ರಷ್ಟಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ್ದರಿಂದಾಗಿ ಮೇ-ಆಗಸ್ಟ್, 2020ರ ಅವಧಿಯಲ್ಲಿ ಈ ಪ್ರಮಾಣ ತೀವ್ರ ಕುಸಿತ ಆಗಿ ಶೇ. 31.3ಕ್ಕೆ ಇಳಿಕೆಯಾಗಿತ್ತು. ಇದಾದ ನಂತರ ಮೇ-ಆಗಸ್ಟ್, 2021ರ ಅವಧಿಯಲ್ಲಿ ಶೇ. 27, ಮೇ-ಆಗಸ್ಟ್, 2022ರ ಅವಧಿಯಲ್ಲಿ ಶೇ. 22.5 ಹಾಗೂ ಇತ್ತೀಚಿನ ದತ್ತಾಂಶದ ಪ್ರಕಾರ, ಸೆಪ್ಟೆಂಬರ್-ಡಿಸೆಂಬರ್, 2022ರ ಅವಧಿಯಲ್ಲಿ ಶೇ. 22.4ಕ್ಕೆ ಇಳಿಕೆಯಾಗಿದೆ. ಈ ಇಳಿಕೆ ಪ್ರವೃತ್ತಿಯು ಕೋವಿಡ್-19 ನಿರ್ಬಂಧಗಳನ್ನು ತೆರವುಗೊಳಿಸಿ ಹಲವು ದಿನಗಳೇ ಕಳೆದಿದ್ದರೂ, ಈಗಲೂ ಮುಂದುವರಿದಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಹೇಳಲಾಗಿದೆ.
ಈ ಕುರಿತು ಬರೆದಿರುವ ಭಾರತೀಯ ಆರ್ಥಿಕತೆ ಮೇಲುಸ್ತುವಾರಿ ಕೇಂದ್ರದ ಮಹೇಶ್ ವ್ಯಾಸ್, "ಉತ್ತರ ಪ್ರದೇಶದಲ್ಲಿನ 20-24 ವರ್ಷ ವಯಸ್ಸಿನ ಯುವ ಉದ್ಯೋಗಿಗಳ ಪ್ರಮಾಣ ಗಂಭೀರವಾಗಿ ಇಳಿಕೆಯಾಗಿದೆ" ಎಂದು ಹೇಳಿದ್ದಾರೆ. "ಉದ್ಯೋಗ ಹೊಂದಿರುವ ದುಡಿಯುವ ವಯಸ್ಸಿನ ಗುಂಪಿನ ಒಟ್ಟಾರೆ ಪ್ರಮಾಣದಲ್ಲಿನ ಉದ್ಯೋಗ ದರದ ಕುಸಿತವು ಆತಂಕಕಾರಿ ಬೆಳವಣಿಗೆಯಾಗಿದ್ದು, ರಾಜ್ಯದಲ್ಲಿ ಯುವಕರಿಗೆ ಉದ್ಯೋಗಾವಕಾಶ ಇಲ್ಲದ ಸ್ಥಿತಿಯ ಸಂಕೇತವಾಗಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಉದ್ಯೋಗ ದರ ಕುಸಿತದ ಪೈಕಿ ಪುರುಷರ ಪ್ರಮಾಣವೇ ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಧಿಕವಾಗಿದೆ ಎಂದೂ ಭಾರತೀಯ ಆರ್ಥಿಕತೆ ಮೇಲುಸ್ತುವಾರಿ ಕೇಂದ್ರದ ದತ್ತಾಂಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ರಾಜ್ಯಪಾಲರಿಗೆ ಉಡುಗೊರೆಯಾಗಿ ನೀಡಿದ ತಂದೆ!







