ಅಕ್ರಮ ವಲಸಿಗರನ್ನು ಗಡೀಪಾರುಗೊಳಿಸುವ ಹೊಸ ಕರಡು ಕಾನೂನು ಕುರಿತು ಮಾಹಿತಿ ನೀಡಿದ ಬ್ರಿಟನ್ ಪ್ರಧಾನಿ ರಿಶಿ ಸುನಕ್

ಹೊಸದಿಲ್ಲಿ: ದೇಶ ಪ್ರವೇಶಿಸುವ ಅಕ್ರಮ ವಲಸಿಗರನ್ನು (Illegal Immigrants) ತಡೆಯುವ ಉದ್ದೇಶದ ಹೊಸ ವಿವಾದಿತ ಯೋಜನೆಯೊಂದನ್ನು ಇಂದು ಬ್ರಿಟನ್ ಪ್ರಧಾನಿ ರಿಶಿ ಸುನಕ್ (Rishi Sunak) ಅವರು ಘೋಷಿಸಿದ್ದಾರೆ ಹಾಗೂ ತಮ್ಮ ದೇಶವನ್ನು ಅಕ್ರಮವಾಗಿ ಪ್ರವೇಶಿಸುವವರಿಗೆ ಆಶ್ರಯ ಕೋರಲು ಅವಕಾಶ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ.
"ನೀವು ಅಕ್ರಮವಾಗಿ ಪ್ರವೇಶಿಸಿದರೆ ಆಶ್ರಯ ಕೋರಲು ಸಾಧ್ಯವಿಲ್ಲ. ನಮ್ಮ ಆಧುನಿಕ ಗುಲಾಮಗಿರಿ ರಕ್ಷಣೆ ನಿಯಮಗಳ ಪ್ರಯೋಜನ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಮಾನವ ಹಕ್ಕುಗಳ ವಿಚಾರ ಎತ್ತಿಕೊಂಡು ಇಲ್ಲಿ ಉಳಿಯಲು ಸಾಧ್ಯವಿಲ್ಲ," ಎಂದು ಟ್ವೀಟ್ ಒಂದರಲ್ಲಿ ಸುನಕ್ ಹೇಳಿದ್ದಾರೆ.
"ದೇಶವನ್ನು ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಿ ಸುರಕ್ಷಿತವೆಂದು ಕಂಡುಬಂದರೆ ಕೆಲವೇ ವಾರಗಳಲ್ಲಿ ಅವರನ್ನು ಅವರ ದೇಶಕ್ಕೆ ಕಳುಹಿಸಲಾಗುವುದು. ಅಥವಾ ರವಾಂಡದಂತಹ ಸುರಕ್ಷಿತ ಮೂರನೇ ದೇಶಕ್ಕೆ ಕಳುಹಿಸಲಾಗುವುದು. ಒಮ್ಮೆ ದೇಶದಿಂದ ಹೊರಹಾಕಿದ ನಂತರ ಮತ್ತೆ ನಮ್ಮ ದೇಶಕ್ಕೆ ಮರುಪ್ರವೇಶಕ್ಕೆ ನಿಮಗೆ ನಿಷೇಧ ಹೇರಲಾಗುವುದು," ಎಂದು ಸುನಕ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಅಕ್ರಮ ವಲಸೆ ಮಸೂದೆ ಎಂಬ ಈ ಕರಡು ಕಾನೂನು, ಇಂಗ್ಲಿಷ್ ಚಾನೆಲ್ ಅನ್ನು ಸಣ್ಣ ಬೋಟುಗಳಲ್ಲಿ ಹಾದು ಬರುವವರ ವಿರುದ್ಧ ಕ್ರಮಕೈಗೊಳ್ಳಲಿದೆ.
ಈ ಕರಡು ಕಾನೂನಿನ ಪ್ರಕಾರ ಆಂತರಿಕ ಸಚಿವೆ ಸುಯೆಲ್ಲಾ ಬ್ರೇವರ್‌ಮ್ಯಾನ್ ಅವಿಗೆ ದೇಶವನ್ನು ಅಕ್ರಮವಾಗಿ ಪ್ರವೇಶಿಸುವ ವಲಸಿಗರನ್ನು ಗಡೀಪಾರುಗೊಳಿಸುವ ಕಾನೂನುಬದ್ಧ ಜವಾಬ್ದಾರಿ ನೀಡಲಾಗುವುದು.
ಕಳೆದ ವರ್ಷವೊಂದರಲ್ಲಿಯೇ ವಾಯುವ್ಯ ಇಂಗ್ಲೆಂಡ್‌ನ ಕಡಲ ತೀರಗಳ ಮೂಲಕ ಸಣ್ಣ ಬೋಟುಗಳಲ್ಲಿ 45,000ಕ್ಕೂ ಅಧಿಕ ವಲಸಿಗರು ಆಗಮಿಸಿದ್ದಾರೆ. 2018 ರಿಂದೀಚೆಗೆ ಈ ಹಾದಿ ಮುಖಾಂತರ ಆಗಮಿಸುವ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವರದಿಯಾಗಿದೆ.
ಆದರೆ ಹೊಸ ಕರಡು ಕಾನೂನಿಗೆ ವಿಪಕ್ಷಗಳು ಹಾಗೂ ಹಕ್ಕು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಜರ್ಮನಿಯ ವಿದೇಶಾಂಗ ಸಚಿವರಿಗೆ ಕೆಂಪು ಹಾಸು ಸ್ವಾಗತ ನೀಡದ ವಿವಾದ: ಶಿಷ್ಟಾಚಾರ ಮಾರ್ಗಸೂಚಿಗಳು ಏನು ಹೇಳುತ್ತವೆ?