ವಿಕಲಚೇತನ ಉದ್ಯೋಗಿಯ ಅವಹೇಳನ: ಟೀಕೆಗಳ ಬಳಿಕ ಕ್ಷಮೆಯಾಚಿಸಿದ ಎಲಾನ್ ಮಸ್ಕ್

ಕ್ಯಾಲಿಫೋರ್ನಿಯಾ: ಟ್ವಿಟರ್‌ನ ಮಾಜಿ ಉದ್ಯೋಗಿ ಹರಲ್ದೂರ್ ತೋರ್ಲೀಫ್ಸನ್ ಅವರ ಅಂಗವೈಕಲ್ಯವನ್ನು ಹಂಗಿಸಿದ ಕಾರಣಕ್ಕೆ ಟ್ವಿಟರ್ (Twitter) ಸಿಇಒ ಎಲಾನ್ ಮಸ್ಕ್ (Elon Musk) ನಿನ್ನೆಯ ಪತ್ರಿಕೆಗಳ ಮುಖಪುಟ ಸುದ್ದಿಯಾಗಿದ್ದರು. ಹರಲ್ದೂರ್ ತೋರ್ಲೀಫ್ಸನ್ ಉದ್ಯೋಗ ಹಾಗೂ ಸಂಬಳದ ಕುರಿತು ಇಬ್ಬರ ನಡುವೆ ವಾಕ್ಸಮರದ ಕಾವೇರಿತ್ತು. ಆದರೆ, ಈಗ "ತೋರ್ಲೀಫ್ಸನ್ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ" ಎಂದು ಎಲಾನ್ ಮಸ್ಕ್ ಕ್ಷಮೆ ಯಾಚಿಸಿದ್ದಾರೆ.
ಟ್ವಿಟರ್‌ನಲ್ಲಿ 'ಹ್ಯಾಲಿ' ಎಂಬ ಹೆಸರು ಹೊಂದಿರುವ, ಐಲ್ಯಾಂಡ್ ಮೂಲದ, ಅನುವಂಶಿಕ ಸ್ನಾಯು ದೌರ್ಬಲ್ಯದ ಕಾರಣಕ್ಕೆ ಗಾಲಿ ಕುರ್ಚಿ ಬಳಸುವ ತೋರ್ಲೀಫ್ಸನ್‌ರ ಅಂಗವೈಕಲ್ಯದ ಬಗ್ಗೆ ಹಾಗೂ ಅವರಿಗೆ ಉದ್ಯೋಗ ಒದಗಿಸಬೇಕಾದ ಅಗತ್ಯತೆ ಕುರಿತು ಎಲಾನ್ ಮಸ್ಕ್ ಪ್ರಶ್ನಿಸಿದ್ದರು. ಅಲ್ಲದೆ ಮಹತ್ವದ ಮತ್ತು ಸಕ್ರಿಯ ಟ್ವಿಟರ್ ಖಾತೆ ಹೊಂದಿರುವ ತೋರ್ಲೀಫ್ಸನ್ ಶ್ರೀಮಂತರಾಗಿದ್ದು, ನನ್ನಿಂದ ಹೆಚ್ಚು ವೇತನ ಪಡೆಯಲು ಸಾರ್ವಜನಿಕವಾಗಿ ವಾಕ್ಸಮರ ನಡೆಸಿದರು ಎಂದೂ ಎಲಾನ್ ಮಸ್ಕ್ ದೂರಿದ್ದರು.
ಅದಕ್ಕೆ ಪ್ರತಿಯಾಗಿ ಹ್ಯಾಲಿ, ತಮ್ಮ ಆರೋಗ್ಯ ಸ್ಥಿತಿಯನ್ನು ವಿವರಿಸಿ, ಕೆಲವು ನಿರ್ದಿಷ್ಟ ಕೆಲಸಗಳನ್ನು ನನ್ನಿಂದ ಮಾಡಲು ಸಾಧ್ಯವಿಲ್ಲವಾದರೂ ಮಸ್ಕ್ ಸಮರ್ಥರಾಗಿದ್ದರೂ, ಶೌಚಾಲಯಕ್ಕೆ ತೆರಳುವಾಗಲೂ ಭದ್ರತಾ ಸಿಬ್ಬಂದಿಗಳೊಂದಿಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದರು.
ಹ್ಯಾಲಿ ಬೆಂಬಲಕ್ಕೆ ಧಾವಿಸಿದ್ದ ಹಲವಾರು ಮಂದಿ, ಎಲಾನ್ ಮಸ್ಕ್ ಅವರ ಪರಿಸ್ಥಿತಿಯನ್ನು ನಿಭಾಯಿಸುವ ರೀತಿ ಅಗೌರವಯುತ ಹಾಗೂ ನಿರಾಶಾದಾಯಕವಾಗಿದೆ ಎಂದು ಟೀಕಿಸಿದ್ದರು. ಎಲಾನ್ ಮಸ್ಕ್‌ರನ್ನು ಟ್ಯಾಗ್ ಮಾಡಿದ್ದ ಓರ್ವ ಬಳಕೆದಾರ, ಹ್ಯಾಲಿಯ ಉದ್ಯೋಗ ನೈತಿಕತೆಯ ಪರ ವಾದಿಸಿದ್ದರು. ಅಲ್ಲದೆ, ಐಲ್ಯಾಂಡ್‌ನ ಹ್ಯಾಲಿ ನಿಮ್ಮ ತಂಡದಲ್ಲಿರಲೇಬೇಕಾದ ಸಮರ್ಪಕ ವ್ಯಕ್ತಿ ಎಂದು ಸಲಹೆ ನೀಡಿದ್ದರು.
ಈ ಮಾತುಗಳನ್ನು ಗಣನೆಗೆ ತೆಗೆದುಕೊಂಡಿರುವ ಎಲಾನ್ ಮಸ್ಕ್, "ನಿಜ ಮತ್ತು ನಾನು ಹೇಳಿದ್ದೇನು ಎಂಬುದನ್ನು ವಿವರಿಸಲು ಹ್ಯಾಲಿಗೆ ಕರೆ ಮಾಡಿದ್ದೆ" ಎಂದು ಟ್ವೀಟ್ ಮಾಡಿದ್ದಾರೆ.
"ಅವರ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ಹ್ಯಾಲಿಯನ್ನು ಕ್ಷಮೆ ಯಾಚಿಸಲು ಬಯಸುತ್ತೇನೆ. ನಾನು ಹೇಳಿದ್ದೇನೆ ಎನ್ನಲಾಗಿರುವ ಮಾತುಗಳು ಸುಳ್ಳು ಅಥವಾ ಕೆಲವು ಸಂದರ್ಭಗಳಲ್ಲಿ ನಿಜ. ಆದರೆ, ಅವು ಅರ್ಥಪೂರ್ಣವಲ್ಲ" ಎಂದು ಹೇಳಿದ್ದಾರೆ. ಅಲ್ಲದೆ ಉದ್ಯೋಗಿಯು ಟ್ವಿಟರ್‌ನಲ್ಲೇ ಉಳಿಯುವುದನ್ನು ಪರಿಗಣಿಸಿದ್ದಾರೆ ಎಂದೂ ಬರೆದಿದ್ದಾರೆ.
ಇದನ್ನೂ ಓದಿ: ಜರ್ಮನಿಯ ವಿದೇಶಾಂಗ ಸಚಿವರಿಗೆ ಕೆಂಪು ಹಾಸು ಸ್ವಾಗತ ನೀಡದ ವಿವಾದ: ಶಿಷ್ಟಾಚಾರ ಮಾರ್ಗಸೂಚಿಗಳು ಏನು ಹೇಳುತ್ತವೆ?