ಅಬ್ಬರದ ಸಂಗೀತಕ್ಕೆ ಆಕ್ಷೇಪ: ಪಂಜಾಬ್ ನಲ್ಲಿ ಕೆನಡಾ ಪ್ರಜೆಯ ಥಳಿಸಿ ಹತ್ಯೆ

ಗುರುದಾಸ್‌ಪುರ: ದೊಡ್ಡ ಸದ್ದಿನ ಸಂಗೀತ ಪ್ರಸಾರ ಮಾಡದಂತೆ ಆಕ್ಷೇಪಿಸಿದ್ದಕ್ಕೆ ಕೆನಡಾ ಪ್ರಜೆಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಪಂಜಾಬ್‌ನ ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಪ್ರದೇಶದಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.
ಸಂತ್ರಸ್ತನನ್ನು ಕೆನಡಾದ ಖಾಯಂ ನಾಗರಿಕತ್ವ ಹೊಂದಿರುವ, ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಮರಳಿದ್ದ 24 ವರ್ಷ ವಯಸ್ಸಿನ ಪ್ರದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಗುರುದಾಸ್‌ಪುರ ಜಿಲ್ಲೆಯ ಘಾಝಿಕೋಟ್ ಗ್ರಾಮದಲ್ಲಿ ಜನಿಸಿದ್ದ ಆತ ಬಲ್ವಿಂದರ್ ಕೌರ್ ಎಂಬುವವರ ಏಕೈಕ ಪುತ್ರನಾಗಿದ್ದ ಎಂದು ಹೇಳಲಾಗಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಬಲ್ವಿಂದರ್ ಕೌರ್, ಪ್ರದೀಪ್ ಹಾಗೂ ಆತನ ತಂಗಿ ಕೆನಡಾದಲ್ಲಿ ವಾಸಿಸುತ್ತಿದ್ದು, ಹಚ್ಚೆ ಹಾಕುವ ಕುರಿತು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
"ಘಟನೆಯು ಸೋಮವಾರ ರಾತ್ರಿ 10.30ರ ಸುಮಾರಿಗೆ ಆರೋಪಿ ನಿರಂಜನ್ ಸಿಂಗ್ ಇತರರೊಂದಿಗೆ ವಾಹನದಲ್ಲಿ ತಿರುಗಾಡುವಾಗ ನಡೆದಿದೆ" ಎಂದು ರೂಪನಗರದ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್‌ಶೀಲ್ ಸೋನಿ ಹೇಳಿದ್ದಾರೆ.
ಘಟನೆಯ ಕುರಿತು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಮೊಹಾಲಿಯ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ, "ಘಟನೆಯ ಸಂದರ್ಭದಲ್ಲಿ ಮೃತ ಸಂತ್ರಸ್ತನು ನಿಹಾಂಗ್ ಗುಂಪಿನ ಸಮವಸ್ತ್ರವನ್ನು ಧರಿಸಿದ್ದ. ಈವರೆಗೆ ಆತನಿಗೆ ನಿಹಾಂಗ್ ಗುಂಪಿನೊಂದಿಗೆ ಸಂಪರ್ಕವಿದ್ದ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ನಾವು ಘಟನೆಯ ಎಲ್ಲ ವೈರಲ್ ವಿಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ. ಯಾವುದೇ ವದಂತಿಯನ್ನು ನಂಬದಂತೆ ಜನರಲ್ಲಿ ನಾವು ಮನವಿ ಮಾಡುತ್ತೇವೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ಜಾರಿಯಲ್ಲಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಜರ್ಮನಿಯ ವಿದೇಶಾಂಗ ಸಚಿವರಿಗೆ ಕೆಂಪು ಹಾಸು ಸ್ವಾಗತ ನೀಡದ ವಿವಾದ: ಶಿಷ್ಟಾಚಾರ ಮಾರ್ಗಸೂಚಿಗಳು ಏನು ಹೇಳುತ್ತವೆ?
Very Sad News; A Nihang Singh who came from Canada, succumbed to death in the Hola Mahalla at Anandpur Sahib. When Pradeep Singh asked some guys to behave properly & not to create ruckus they beat him to death. pic.twitter.com/zZgg5Etl2j
— Gagandeep Singh (@Gagan4344) March 7, 2023







