ಮಾನನಷ್ಟ ಪ್ರಕರಣದಲ್ಲಿ ಧೋನಿ ಎತ್ತಿರುವ ಪ್ರಶ್ನೆಗಳನ್ನು ವಿರೋಧಿಸಿ ಮದ್ರಾಸ್ ಹೈಕೋರ್ಟ್ ಕದ ತಟ್ಟಿದ ಝೀ ಮೀಡಿಯಾ

ಚೆನ್ನೈ: ಝೀ ಮೀಡಿಯಾ (Zee Media) ವಿರುದ್ಧ ಮಾಜಿ ಕ್ರಿಕೆಟಿಗ ಎಂ ಎಸ್ ಧೋನಿ (MS Dhoni) ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಎತ್ತಿರುವ ಪ್ರಶ್ನೆಗಳನ್ನು ವಿರೋಧಿಸಿ ಮಾಧ್ಯಮ ಸಂಸ್ಥೆ ಮದ್ರಾಸ್ ಹೈಕೋರ್ಟ್ (Madras HC) ಕದ ತಟ್ಟಿದೆ.
ಧೋನಿ ಅವರು 2014 ನಡೆದ ಐಪಿಎಲ್‌ನಲ್ಲಿ (IPL) ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ ಅದೇ ವರ್ಷ ಧೋನಿ ಅವರು ಝೀ ಮೀಡಿಯಾ ಮತ್ತು ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಝೀ ಮೀಡಿಯಾ ಮತ್ತು ಕುಮಾರ್ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದ್ದರು.
ನಂತರ ಧೋನಿ ಹೈಕೋರ್ಟ್ ಕದ ತಟ್ಟಿ ಝೀ ಮೀಡಿಯಾಗೆ 17 ಪ್ರಶ್ನೆಗಳನ್ನು ಕೇಳಲು ಅನುಮತಿಸುವಂತೆ ಕೋರಿದ್ದರಲ್ಲದೆ ಸಂಸ್ಥೆ ನೀಡಿದ್ದ ಲಿಖಿತ ಹೇಳಿಕೆ ನಿರ್ದಿಷ್ಟ ಉತ್ತರಗಳನ್ನು ಹೊಂದಿರಲಿಲ್ಲ ಎಂದಿದ್ದರು. ಜುಲೈ ತಿಂಗಳಿನಲ್ಲಿ ಜಸ್ಟಿಸ್ ಎ ಎ ನಕ್ಕೀರನ್ ಅವರ ಪೀಠವು ಧೋನಿ ಮನವಿಯನ್ನು ಪುರಸ್ಕರಿಸಿತ್ತು. ಆದರೆ ಈ ಆದೇಶವನ್ನು ಬದಿಗೆ ಸರಿಸಬೇಕೆಂಬ ಅಪೀಲಿನೊಂದಿಗೆ ಝೀ ಮೀಡಿಯಾ ನ್ಯಾಯಾಲಯದ ಮೊರೆ ಹೋಗಿದ್ದರೂ ಅದನ್ನು ನವೆಂಬರ್ 11 ರಂದು ನ್ಯಾಯಾಲಯ ತಳ್ಳಿ ಹಾಕಿತ್ತು.
ಈ ನಡುವೆ ನವೆಂಬರಿನಲ್ಲಿ ಧೋನಿ ಅವರು ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರಲ್ಲದೆ ಕುಮಾರ್ ಅವರು ಸುಪ್ರೀಂ ಕೋರ್ಟ್ ಹಾಗೂ ಮದ್ರಾಸ್ ಹೈಕೋರ್ಟ್ ವಿರುದ್ಧದ ಹೇಳಿಕೆಗಳನ್ನು ಸಲ್ಲಿಸಿದ್ದರೆಂದು ದೂರಿದ್ದರು.
ಈ ಪ್ರಕರಣದಲ್ಲಿ ಬುಧವಾರ ಯಾವುದೇ ಮಧ್ಯಂತರ ಆದೇಶ ಹೊರಡಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಎಲ್ಲಿ ಚುನಾವಣೆ ಇರುತ್ತದೋ ಅಲ್ಲಿಗೆ ಮೋದಿಗಿಂತ ಮೊದಲೇ ತನಿಖಾ ಸಂಸ್ಥೆಗಳು ತಲುಪುತ್ತವೆ: ಕವಿತಾ ವಾಗ್ದಾಳಿ







