ಜಗತ್ತಿನ ಗರಿಷ್ಠ ಮಾಲಿನ್ಯವಿರುವ 50 ನಗರಗಳಲ್ಲಿ 39 ನಗರಗಳು ಭಾರತದಲ್ಲಿ: ವರದಿ

ಹೊಸದಿಲ್ಲಿ: ಭಾರತ ಕಳೆದ ವರ್ಷ ಜಗತ್ತಿನ ಆರನೇ ಹೆಚ್ಚು ಮಾಲಿನ್ಯಯುಕ್ತ ದೇಶವಾಗಿತ್ತು. 2021 ರಲ್ಲಿ ಭಾರತ ಜಗತ್ತಿನ ದೇಶಗಳ ಪೈಕಿ 5ನೇ ಸ್ಥಾನದಲ್ಲಿತ್ತು. ದೇಶದಲ್ಲಿ ಪಿಎಂ 2.5 ಹಂತವು 53.3 ಮೈಕ್ರೀಗ್ರಾಮ್ಸ್/ಕ್ಯೂಬಿಕ್ ಮೀಟರ್‌ಗೆ ಇಳಿಕೆಯಾಗಿದೆ. ಆದರೆ ಇದು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ ಹತ್ತು ಪಟ್ಟಿಗಿಂತಲೂ ಹೆಚ್ಚಾಗಿದೆ.
ಈ ಮಾಲಿನ್ಯಕ್ಕೆ ಸಂಬಂಧಿಸಿದ ರ್ಯಾಂಕಿಂಗ್ ಪಟ್ಟಿಯನ್ನು ಸ್ವಿಝರ್ಲ್ಯಾಂಡ್ ಸಂಶ್ಥೆ ಐಕ್ಯೂಏರ್ ತನ್ನ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ ತಿಳಿಸಿದೆ. ವರದಿ ಇಂದು ಬಿಡುಗಡೆಗೊಂಡಿದೆ.
ಜಗತ್ತಿನ 131 ದೇಶಗಳಿಂದ ಡೇಟಾವನ್ನು 30,000ಕ್ಕೂ ಅಧಿಕ ಮಾನಿಟರ್‌ಗಳ ಮೂಲಕ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಗರಿಷ್ಠ ಮಾಲಿನ್ಯ ಹೊಂದಿದ ದೇಶ ಚಾಡ್ ಆಗಿದ್ದರೆ ನಂತರದ ಸ್ಥಾನಗಳಲ್ಲಿ ಇರಾಕ್, ಪಾಕಿಸ್ತಾನ, ಬಹರೈನ್, ಬಾಂಗ್ಲಾದೇಶ, ಬುರ್ಕಿನಾ ಫಾಸೊ, ಕುವೈತ್ ಹಾಗೂ ಭಾರತವಿದ್ದು ಒಂಬತ್ತನೇ ಸ್ಥಾನದಲ್ಲಿ ಈಜಿಪ್ಟ್ ಹಾಗೂ ಹತ್ತನೇ ಸ್ಥಾನದಲ್ಲಿ ತಜಿಕಿಸ್ತಾನ್ ಇದೆ.
ಗರಿಷ್ಠ ಮಾಲಿನ್ಯ ಹೊಂದಿದ ಜಗತ್ತಿನ 50 ನಗರಗಳ ಪೈಕಿ 39 ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳಿದೆ. ಮೆಟ್ರೋಗಳ ಪೈಕಿ ಗರಿಷ್ಠ ಮಾಲಿನ್ಯ ಪಟ್ಟಿಯಲ್ಲಿ ದಿಲ್ಲಿ 4ನೇ ಸ್ಥಾನದಲ್ಲಿದ್ದರೆ ಕೊಲ್ಕತ್ತಾ 99ನೇ ಸ್ಥಾನದಲ್ಲಿ, ಮುಂಬೈ 137ನೇ ಸ್ಥಾನದಲ್ಲಿವೆ. ಹೈದರಾಬಾದ್ 199ನೇ ಸ್ಥಾನದಲ್ಲಿದ್ದರೆ, ಬೆಂಗಳೂರು 440ನೇ, ಚೆನ್ನೈ 662ನೇ ಸ್ಥಾನದಲ್ಲಿವೆ.
ಗರಿಷ್ಠ ಮಾಲಿನ್ಯವಿರುವ 100 ನಗರಗಳ ಪೈಕಿ 72 ನಗರಗಳು ದಕ್ಷಿಣ ಏಷ್ಯಾದಲ್ಲಿವೆ. ಗರಿಷ್ಠ ಮಾಲಿನ್ಯವಿರುವ ಮೊದಲ ಹತ್ತು ನಗರಗಳ ಪಟ್ಟಿಯಲ್ಲಿ ಆರು ನಗರಗಳು ಭಾರತದ್ದಾಗಿದ್ದರೆ, ಟಾಪ್ 20 ಯಲ್ಲಿ 14, ಟಾಪ್ 50 ರಲ್ಲಿ 39, ಟಾಪ್ 100 ರಲ್ಲಿ 65 ನಗರಗಳು ಭಾರತದಲ್ಲಿವೆ. ದಿಲ್ಲಿ ಹಾಗೂ ಹೊಸದಿಲ್ಲಿ ಗರಿಷ್ಠ ಮಾಲಿನ್ಯ ಹೊಂದಿದ 100 ನಗರಗಳ ಪೈಕಿ ಇವೆ.
ಗರಿಷ್ಠ ಮಾಲಿನ್ಯವಿರುವ ಜಗತ್ತಿನ ಮೊದಲ 20 ನಗರಗಳ ಪೈಕಿ ರಾಜಸ್ಥಾನದ ಭಿವಾಡಿ 3ನೇ ಸ್ಥಾನದಲ್ಲಿ, ದಿಲ್ಲಿ ನಾಲ್ಕನೇ ಸ್ಥಾನದಲ್ಲಿ, ಬಿಹಾರದ ಧರ್ಬಾಂಗ ಆರನೇ ಸ್ಥಾನದಲ್ಲಿ, ಬಿಹಾರದ ಅಸೋಪುರ್ ಏಳನೇ ಸ್ಥಾನದಲ್ಲಿ ಹೊಸದಿಲ್ಲಿ ಒಂಬತ್ತನೇ ಸ್ಥಾನದಲ್ಲಿ, ಬಿಹಾರದ ಪಾಟ್ನಾ 10ನೇ ಸ್ಥಾನದಲ್ಲಿ, ಉತ್ತರ ಪ್ರದೇಶದ ಗಝಿಯಾಬಾದ್ 11ನೇ, ಹರ್ಯಾಣಾದ ಧರುಹೇರಾ 12ನೇ ಸ್ಥಾನದಲ್ಲಿ, ಉತ್ತರ ಪ್ರದೇಶದ ಮುಝಫ್ಫರನಗರ್ 15ನೇ ಸ್ಥಾನದಲ್ಲಿ, ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾ 17ನೇ ಸ್ಥಾನದಲ್ಲಿ, ಹರ್ಯಾಣಾದ ಬಹಾದುರ್‌ಘರ್ ಮತ್ತು ಫರೀದಾಬಾದ್ 18ನೇ ಮತ್ತು 19ನೇ ಸ್ಥಾನದಲ್ಲಿ ಮತ್ತು ಬಿಹಾರದ ಮುಝಫ್ಫರಪುರ್ 20ನೇ ಸ್ಥಾನದಲ್ಲಿವೆ.
ಇದನ್ನೂ ಓದಿ: ವಿವಿಗಳಲ್ಲಿ ಬೋಧಿಸಲ್ಪಡಲಿದೆ ‘ವಿಶ್ವಗುರು’ ರಾಜತಾಂತ್ರಿಕತೆ: ವರದಿ







