ಭವಾನಿಗೆ ಕೈ ತಪ್ಪಿದ ಹಾಸನ ಜೆಡಿಎಸ್ ಟಿಕೆಟ್: ರೇವಣ್ಣ ಪ್ರತಿಕ್ರಿಯೆ ಏನು?

ಬೆಂಗಳೂರು: ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಭವಾನಿ ರೇವಣ್ಣ ಅವರ ಕೈ ತಪ್ಪಿರುವ ಬಗ್ಗೆ ಮಾಜಿ ಸಚಿವ ಎಚ್ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ನಗರದ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಹಾಸನ ಕ್ಷೇತ್ರದಲ್ಲಿ ಭವಾನಿಯನ್ನು ಕಣಕ್ಕಿಳಿಸಬೇಕೆಂದು ಹೇಳುತ್ತಿದ್ದೆ. ಕಳೆದ 2 ವರ್ಷಗಳಿಂದ ಭವಾನಿ ನಿಲ್ಲಿಸಬೇಕೆಂದು ಚರ್ಚೆ ನಡೆಯುತ್ತಿತ್ತು. ಪ್ರೀತಂಗೌಡ 50,000 ಮತಗಳ ಅಂತರದಿಂದ ಗೆಲ್ಲುವೆ ಅಂತ ಹೇಳಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಭವಾನಿ ಕಣಕ್ಕಿಳಿಸಲು ನಿರ್ಧರಿಸಿದ್ದೆವು. ಆದರೆ ಹಾಸನದ ಶಾಸಕರು, ಕಾರ್ಯಕರ್ತರ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
'ನನಗೆ ಯಾವುದೇ ಶಾಸಕ ಸ್ಥಾನ ಮುಖ್ಯವಲ್ಲ ಎಂದು ಕಳೆದ ಒಂದು ತಿಂಗಳಿಂದ ಭವಾನಿ ರೇವಣ್ಣ ಹೇಳುತ್ತಲೇ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಹೇಳಿದ್ದನ್ನು ನಾವು ಒಪ್ಪಿಕೊಳ್ಳುತ್ತೇವೆ' ಎಂದು ಹೇಳಿದರು.
ಇದನ್ನೂ ಓದಿ: ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್‌ಪಿ ಸ್ವರೂಪ್ ಹೆಸರು ಘೋಷಿಸಿದ ಎಚ್ ಡಿಕೆ | ಭವಾನಿ ರೇವಣ್ಣಗೆ ಕೈ ತಪ್ಪಿದ ಟಿಕೆಟ್
ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ಇಂದು 49 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.