ಬ್ರಹ್ಮಾವರ ಹೊಳೆಯಲ್ಲಿ ದುರಂತ: ಮತ್ತೋರ್ವ ಯುವಕನ ಮೃತದೇಹ ಪತ್ತೆ

ಬ್ರಹ್ಮಾವರ, ಎ.24: ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯಾರ ಕುದ್ರು ಎಂಬಲ್ಲಿ ಎ.23ರಂದು ಸಂಜೆ ಹೊಳೆಯಿಂದ ಮಳಿ (ಕಪ್ಪೆಚಿಪ್ಪು) ಹೆಕ್ಕಲು ಹೋಗಿ ಸಂಭವಿಸಿದ ದುರಂತದಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಇಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಪತ್ತೆಯಾಗಿದೆ.
ಮೃತರನ್ನು ಶೃಂಗೇರಿಯ ಮುಹಮ್ಮದ್ ಫರಾನ್(16) ಎಂದು ಗುರುತಿಸಲಾಗಿದೆ. ಎ.23ರಂದು ರಾತ್ರಿ 9ಗಂಟೆಗೆ ಶೃಂಗೇರಿಯ ಮುಹಮ್ಮದ್ ಸುಫಾನ್ (20), ಹೂಡೆಯ ಮುಹಮ್ಮದ್ ಫೈಜಾನ್(18) ಹಾಗೂ ಮುಹಮ್ಮದ್ ಇಬಾದ್(25) ಎಂಬವರ ಮೃತದೇಹಗಳು ಪತ್ತೆಯಾಗಿದ್ದವು.
ಸಂಬಂಧಿಕರಾದ ಸಾಹಿಲ್ ಖಾದರ್, ಮಾಹೀಮ್, ಸಾಹಿಲ್, ಸುಫಾನ್, ಫೈಜಾನ್, ಇಬಾದ್ ಮತ್ತು ಫರಾನ್‌ವರೊಂದಿಗೆ ಹೊಳೆಯಿಂದ ಮಳಿ (ಕಪ್ಪೆಚಿಪ್ಪು) ಹೆಕ್ಕಲು ಹೂೂಡೆಯಿಂದ ದೋಯಲ್ಲಿ ಕಿಯಾರ ಕುದ್ರು ಎಂಬಲ್ಲಿಗೆ ಹೊಳೆಯನ್ನು ದಾಟಿ ಹೋಗಿದ್ದರು. ಕುದ್ರು ದಡದಲ್ಲಿ ದೋಣಿಯನ್ನು ನಿಲ್ಲಿಸಿ ದೋಣಿಯನ್ನು ಕಟ್ಟಿ ಎಲ್ಲರೂ ದೋಣಿಯಿಂದ ಇಳಿದು ಮಳಿಯನ್ನು ಹೆಕ್ಕುತ್ತಾ ಹೊಳೆಯ ನೀರಿನಲ್ಲಿ ಮುಂದೆ ಮುಂದೆ ಹೋಗಿದ್ದರು. ಈ ವೇಳೆ ಫಾರನ್ ಜೊತೆಯಲ್ಲಿ ಸುಫಾನ್, ಇಬಾದ್, ಫೈಜಾನ್ ನೀರಿನ ಆಳದಲ್ಲಿ ಮುಳುಗಿ ಹೋದರು. ಉಳಿದ ಮೂವರು ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಲು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು; ಓರ್ವ ನಾಪತ್ತೆ
ಕೂಡಲೇ ಈ ವಿಷಯವನ್ನು ಅಲ್ಲಿಯ ಸ್ಥಳಿಯರಿಗೆ ತಿಳಿಸಿದರು. ಬಳಿಕ ಹುಡುಕಾಟ ನಡೆಸಿದಾಗ ರಾತ್ರಿ ಮೃತದೇಹಗಳು ಪತ್ತೆಯಾದವು. ಆದರೆ ಫಾರನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು. ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಹುಡುಕಾಟ ನಡೆಸಿದಾಗ ಅದೇ ಸ್ಥಳದಲ್ಲಿ ಫರಾನ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.