-

ವಚನ ಚಳವಳಿ - ಒಳಗೊಳ್ಳುವಿಕೆ

-

ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು ಕನ್ನಡಕ್ಕೆ ಅನುವಾದಿಸಿದವರು. ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು, ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ..

ಎಸ್. ನಟರಾಜ ಬೂದಾಳು

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?

ಊರೊಳಗಳ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ?

ಎಲ್ಲಿ ನೋಡಿದಡೆ ಬಯಲೊಂದೆ;

ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ

ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ - ಬೊಂತಾದೇವಿ

ಬೊಂತಾದೇವಿಯ ಈ ವಚನ ಒಳಗು-ಹೊರಗು ಎನ್ನುವುದೇ ಒಂದು ಪೊಳ್ಳುಕಲ್ಪನೆ ಎನ್ನುತ್ತಿದೆ. ಬಯಲು ಉಂಟೇ ಹೊರತು ಹೊರಗಿನ ಬಯಲು ಒಳಗಿನ ಬಯಲು ಎಂದು ಇರುವುದಿಲ್ಲ. ಒಳಗೊಳ್ಳುವಿಕೆಯ ಮಾತೂ ಅಷ್ಟೆ. ವಚನಕಾರರು, ಶರಣರು, ಬೌದ್ಧ, ಜೈನ, ನಾಥ, ಅಚಲ, ಅವಧೂತ, ಅದ್ವಯ, ಮತ್ತು ಅನೇಕ ದೇಸಿ ಅನುಭಾವೀ ದಾರ್ಶನಿಕ ಧಾರೆಗಳು ಹೊರಗಿಟ್ಟಿದ್ದ ಯಾರ್ಯಾರನ್ನು ಒಳಗೊಂಡವು ಎನ್ನುವುದನ್ನು ಕುರಿತು ವಿದ್ವಾಂಸರು ಮಾತನಾಡಿದ್ದಾರೆ. ಎರಡು ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಒಂದು ಹಾಗೆ ಹೊರಗಿಟ್ಟಿದ್ದು ಯಾರನ್ನು, ಹೊರಗಿಟ್ಟವರು ಯಾರು? ಹೊರಗಿಟ್ಟಿದ್ದು ಏಕೆ? ಎನ್ನುವುದು. ಇನ್ನೊಂದು ಹಾಗೆ ಹೊರಗಿಟ್ಟ ಎಲ್ಲರನ್ನೂ ವಚನಕಾರರು ಒಳಗೊಂಡರೆ? ಎನ್ನುವುದು ಮತ್ತೊಂದು. ಸ್ವತಃ ವಚನಕಾರರನ್ನೆ ಹೊರಗೆ ಓಡಿಸಿದರಲ್ಲವೆ? ಹಾಗೆ ಓಡಿಸಿದ್ದಕ್ಕೆ ಕಾರಣಗಳೇನು ರಹಸ್ಯ ಸಂಗತಿಗಳಲ್ಲ.

ಯಾರ್ಯಾರನ್ನು ಹೊರಗೆ ನಿಲ್ಲಿಸಿದ್ದರು?

ಅಸ್ಪಶ್ಯರನ್ನು, ಕೆಳಜಾತಿಗಳ ಶೂದ್ರರನ್ನು, ಎಲ್ಲ ಜಾತಿಗಳ ಹೆಣ್ಣುಮಕ್ಕಳನ್ನು, ಕೆಳ ಹಂತದ ಶ್ರಮಿಕ ಕಸಬುದಾರರನ್ನು, ಅನಕ್ಷರಸ್ಥರನ್ನು, ಮೈಲಿಗೆ ಎಂದು ಪರಿಗಣಿಸಿದವರನ್ನು ಮತ್ತು ಶೂದ್ರರನ್ನು- ಹೊರಗಿಡಲಾಗಿತ್ತು. ಈ ಹೊರಗಿಡುವುದರಲ್ಲೂ ಶ್ರೇಣೀಕರಣ ಇತ್ತು ಎಂಬುದಂತೂ ಪ್ರಶ್ನಾತೀತ ಸತ್ಯವಾಗಿತ್ತು. ಹೀಗೆ ಹೊರಗಿಡಲು ಆಧರಿಸಿದ್ದು ಕಾಲ್ಪನಿಕ, ಸುಳ್ಳು ಪೊಳ್ಳು ಕತೆ ಪುರಾಣಗಳನ್ನು ಎನ್ನುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಇವರನ್ನು ವಚನ ಚಳವಳಿ ಒಳಗೊಂಡ ಪರಿ ಎಂಥದ್ದು ಎನ್ನುವುದು ಈ ಲೇಖನದ ಉದ್ದೇಶ.

ಶೂದ್ರಧರ್ಮ ಮತ್ತು ವೈದಿಕ ಧರ್ಮ ಈ ಎರಡನ್ನೂ ಸೇರಿಕೊಂಡಿರುವ ಧಾರ್ಮಿಕ ವ್ಯವಸ್ಥೆಯನ್ನು ಯಾವ ಹೆಸರಿನಿಂದಲಾದರೂ ಕರೆದರೂ ಸರಿಯೆ  ಈ ಎರಡೂ ಆವರಣಗಳು ಅಸ್ಪಶ್ಯರನ್ನು ಸಾವಿರಾರು ವರ್ಷಗಳಿಂದ ಹೊರಗಿಟ್ಟಿದ್ದಾರೆ ಎನ್ನುವುದಂತೂ ನಿಶ್ಚಿತ. ವರ್ಣಗಳಿಂದಾಚೆಗೆ, ಗುಡಿಗಳಿಂದಾಚೆಗೆ, ಊರಿನಿಂದಾಚೆಗೆ, ಕೇರಿಯಿಂದಾಚೆಗೆ, ಕೆರೆಕಟ್ಟೆಗಳಿಂದಾಚೆಗೆ, ಮನೆ-ಮನಸ್ಸುಗಳಿಂದಾಚೆಗೆ, ವೃತ್ತಿಗಳಿಂದಾಚೆಗೆ, ಎಲ್ಲ ರೀತಿಯ ಮನುಷ್ಯ ಸಂಬಂಧಗಳಾಚೆಗೆ ಹೊರಗೆ ನಿಲ್ಲಿಸಿದ್ದು ನಿಜ.

ವೈದಿಕರು ಮತ್ತು ಶೂದ್ರರು ಸೇರಿಯೇ ಅಸ್ಪಶ್ಯರನ್ನು ಹಾಗೆ ನಡೆಸಿಕೊಂಡಿದ್ದಾರೆ. ಅವರನ್ನು ಒಳಗೊಳ್ಳುವ ಮಾತನ್ನು ಆಧುನಿಕ ಸಂದರ್ಭದಲ್ಲಿ ಪ್ರಜಾಸತ್ತೆ ಮತ್ತು ಸಂವಿಧಾನ ಆಡಿದರೆ ಅಂತಹ ಮಾತನ್ನು ಮತ್ತೆ ಕೇಳಲು ವಚನಕಾರರ ಬಳಿಗೆ ಹೋಗಬೇಕು. ನಮ್ಮ ಎಲ್ಲ ಶ್ರಮಣ ಧಾರೆಗಳಲ್ಲಿಯೂ ಅವರನ್ನು ಒಳಗೊಳ್ಳುವ ಮಾತು ಕೇಳುತ್ತದೆ. ಗಮನಿಸಿ ಈ ಒಳಗೊಳ್ಳುವಿಕೆ ಕಂಡುಬರುವುದು ದೇಸಿ ಅನುಭಾವಿ ಪಂಥಗಳು ಮತ್ತು ಶ್ರಮಣ ಧಾರೆಗಳಲ್ಲಿ ಮಾತ್ರ. ಶ್ರಮಣಧಾರೆಗಳಲ್ಲಿ ಒಂದಾದ ವಚನಧರ್ಮವು ಹೊರಗಿಟ್ಟ ಅಸ್ಪಶ್ಯರನ್ನು ಒಳಗೊಳ್ಳುವ ಮಾತನಾಡಿದ್ದು ಶ್ರಮಣಧಾರೆಗಳ ಭಾಗವಾಗಿಯೂ ಹೌದು ಸ್ವತಃ ವಚನಕಾರರ ನಿಲುವೂ ಹೌದು. ಹಾಗಾದರೆ ಶರಣರ ಈ ಒಳಗೊಳ್ಳುವಿಕೆ ಮುಕ್ತವಾದದ್ದೆ ಷರತ್ತುಗಳಿಗೆ ಒಳಪಟ್ಟದ್ದೆ? ಎನ್ನುವ ಪ್ರಶ್ನೆಯನ್ನೂ ಒಳಗೊಳ್ಳಬೇಕಾಗುತ್ತದೆ.

ಯಾಕೆಂದರೆ ಇಡಿಯಾಗಿ ಭಾರತೀಯ ನೋಟಕ್ರಮದಲ್ಲೆ ಇಂತಹ ವಿಸ್ಮತಿಯ ದೋಷಗಳಿವೆ. ಭಾರತೀಯ ನೋಟಕ್ರಮದಲ್ಲಿ ಎರಡು ಧಾರೆಗಳಿವೆ. ಒಂದು ಲೋಕವನ್ನು ಇಲ್ಲಿ ಉಂಟಾಗುವ ಸಂಬಂಧಗಳಿಂದ ಆಗುತ್ತಿರುವಂಥದ್ದು ಎಂದರೆ ಮತ್ತೊಂದು ಇಲ್ಲ, ಇಲ್ಲಿ ಇರುವುದೆಲ್ಲ ಇದಕ್ಕೆ ಸಂಬಂಧಿಸಿಲ್ಲದ ಮತ್ತೊಂದರಿಂದ ನಿರ್ದೇಶಿತವಾದದ್ದು ಎನ್ನುವುದು. ಒಂದು ಕಾರ‌್ಯ ಕಾರಣ ಸಂಬಂಧದ ಸಂದರ್ಭಬಂದಿಯಾದ ನೋಟಕ್ರಮವಾದರೆ ಇನ್ನೊಂದು ಸಂದರ್ಭಮುಕ್ತವಾದ ಅವೈಜ್ಞಾನಿಕ ನೋಟಕ್ರಮ. ವಚನಕಾರರಿಗೆ ಬರೋಣ.

ಹೊರಗಿಟ್ಟವರನ್ನು ಒಳಗೊಳ್ಳುವುದು ಹೇಗೆ? ಇದು ಶರಣರಿಗೆ ಎದುರಾದ ಸವಾಲು. ಒಳಗಿರುವವರನ್ನು ಹೊರಗೆ ಕಳಿಸುವುದು ಹೇಗೆ? ಎನ್ನುವುದನ್ನು ಇದಿರಾದವರ ಚರಿತ್ರೆಯೂ ನಮ್ಮ ನಡುವೆ ಇದೆ. ಒಳಗೊಳ್ಳುವುದು ಹೇಗೆ? ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಯಾವ ಯಾವ ಕಾರಣಕ್ಕೆ ಯಾರ್ಯಾರನ್ನು, ಯಾವುದು ಯಾವುದನ್ನು, ಎಷ್ಟೆಷ್ಟು ಹೊರಗಿಡಲಾಗಿದೆ? ಎಂಬ ಪ್ರಶ್ನೆಯನ್ನು ಇದಿರಾಗದೆ ಉತ್ತರ ದೊರಕದು. ಈ ಪ್ರಶ್ನೆಯನ್ನು ಗಂಭೀರವಾದ ತಾತ್ವಿಕ ಪ್ರಶ್ನೆಯನ್ನಾಗಿ ನೋಡಬೇಕಾದ ಅಗತ್ಯವಿಲ್ಲ.

ಸರಳವಾಗಿಯೇ ವಿವರಿಸಿಕೊಳ್ಳಬಹುದು. ಆಶ್ಚರ್ಯವೆಂದರೆ ಈ ಒಳ-ಹೊರಗಿಗೆ ನಿಜವಾದ ಕಾರಣಗಳೇ ಇಲ್ಲ. ಎಲ್ಲ ಪೊಳ್ಳು ಕಾಲ್ಪನಿಕ ನಿರ್ಣಯಗಳನ್ನೇ ಬಳಸಿ ಇದನ್ನು ಸಾಧಿಸಿಕೊಳ್ಳಲಾಗಿದೆ. ಅದೊಂದು ದೊಡ್ಡ ಪಟ್ಟಿ. ಕೆಲವು ಮೂರ್ತ ಸಂಗತಿಗಳಾದರೆ ಇನ್ನು ಕೆಲವು ಅಮೂರ್ತ ಕಲ್ಪನೆಗಳು.

ವಚನ  ಇದನ್ನು ಚಳವಳಿ ಎಂದು ಕೆಲವರು ಕರೆದರೆ, ಕೆಲವರು ಬೇರೆಯದೇ ಧರ್ಮ ಎನ್ನುತ್ತಾರೆ. ಇನ್ನು ಕೆಲವರು ಎಲ್ಲ ಜಾತಿಗಳ ಬಿಡುಗಡೆಯ ಮಾರ್ಗ ಎಂದು ಒಂದು ಕಾಲಕ್ಕೆ ನಂಬಿದ್ದರು, ಇನ್ನು ಕೆಲವರು ಇದು ಶ್ರೇಷ್ಠ ಜಾತಿ ಎಂದು ನಂಬಿದ್ದಾರೆ (ಅಂತಹವರಿಗೆ ಅವರನ್ನು ಶ್ರೇಷ್ಠವಾಗಿಸಲು ಕನಿಷ್ಠ ಜಾತಿಗಳು ಬೇಕೇಬೇಕು), ಇನ್ನು ಕೆಲವರಿಗೆ ವಚನಗಳು ನಮ್ಮ ನಡುವಿನ ತಾರತಮ್ಯಗಳನ್ನು ಪ್ರತಿರೋಧಿಸಲು ಒದಗಿ ಬರುವ ಉದಾಹರಣೆಗಳಾಗಿವೆ, ಮತ್ತೂ ಕೆಲವರಿಗೆ ಇದು ಏಕಾಕಿಯಾಗಿ ಒಂದೇ ಸಾರಿ ಅವತರಿಸಿದ ಧರ್ಮವಾಗಿದ್ದು ಎಲ್ಲಿಂದಲೋ ಬಂದು ಅವತರಿಸಿದ್ದೆಂದು ಅವರು ನಂಬುತ್ತಾರೆ. ನಮ್ಮ ಓದುಗಳು ಹೇಗೇ ಇರಲಿ, ಸಾಮಾಜಿಕ ಅಪಮಾನವನ್ನುಂಡ ದೊಡ್ಡ ಸಮೂಹ ಬಸವಣ್ಣನವರ ಬೆನ್ನಿಗಿದೆ. ಅದನ್ನು ನಿವಾರಿಸುವ ಜವಾಬ್ದಾರಿಯನ್ನು ಬಸವಣ್ಣನವರು ಸ್ವೀಕರಿಸಿದ್ದಾರೆ.

ಗೋತ್ರ ನಾಮವ ಬೆಸಗೊಂಡಡೆ

ಮಾತು ನೂಕದೆ ಸುಮ್ಮನಿದ್ದಿರೇನಯ್ಯಾ?

ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?

ಗೋತ್ರನಾಮ, ಮಾದಾರ ಚೆನ್ನಯ್ಯ

ಡೋಹರ ಕಕ್ಕಯ್ಯನೆಂಬುದೇನು ಕೂಡಲ ಸಂಗಯ್ಯಾ

ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ!

ದೇವಾ ನೀನೊಲಿದವನ ಸ್ವಾಮೀ ನೀ ಹಿಡಿದವನ ಕುಲವೇನೋ!

ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ

ನಿಮ್ಮಿಂದಧಿಕ ಕೂಡಲಸಂಗಮದೇವಾ

ಬಸವಣ್ಣನವರ ಈ ವಚನಗಳನ್ನು ಪ್ರಶ್ನಾತೀತವಾಗಿ ಓದಲಾಗದು. ಇವುಗಳ ಹಿಂದಿನ ಆದರ್ಶದ ಸಂಭ್ರಮದಲ್ಲಿ ಕಳೆದುಕೊಳ್ಳದೆ ಉಳಿಸಿಕೊಳ್ಳಬೇಕಾದ ಎಚ್ಚರವೊಂದು ಇದೆ ಎಂದು ನನಗನ್ನಿಸುತ್ತದೆ. ಗೋತ್ರದ ಹೆಸರಿನಲ್ಲಿ ಹಿರೀಕರನ್ನು, ಪರಂಪರೆಯನ್ನು ಕಂಡುಕೊಳ್ಳುವುದರಲ್ಲಿ ಒಂದು ತಿರುವು ಮುರುವನ್ನು ಬಸವಣ್ಣ ಮುಂದಿಡುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಚೆನ್ನಾಗಿಯೇ ಇದೆ.

ಆದರೆ ಇಲ್ಲಿ ಮನುಷ್ಯನ ಶ್ರೇಷ್ಠತೆ ತೀರ್ಮಾನವಾಗುತ್ತಿರುವುದು ಹುಟ್ಟಿನ ಮೂಲಕ, ಪರಂಪರೆಯ ಮೂಲಕವೇ ಹೊರತು ಕೇವಲ ಮನುಷ್ಯನಾಗಿ ಅಲ್ಲ. ಸಾಧನೆಯ ಮೂಲಕವೂ ಅಲ್ಲ. ಒಂದು ವಚನ ಶ್ರೇಷ್ಠತೆಗಾಗಿ ಹುಟ್ಟಿನ ಮೂಲದ ಕಡೆಗೆ ಕೈಮಾಡಿದರೆ ಇನ್ನೊಂದು ದೈವದ ಕಡೆಗೆ ಕೈಮಾಡುತ್ತಿದೆ. ಇದನ್ನು ಕುರಿತ ಅಲ್ಲಮಪ್ರಭುವಿನ ನಿಲುವು ತುಂಬಾ ಎತ್ತರದಲ್ಲಿದೆ. ಅದು ಈ ಹೊತ್ತಿನ ನಿಲುವಾಗಬೇಕಿದೆ.

ಜಾತಿ ಜಂಗಮ ಒಂದು ಕೋಟಾನುಕೋಟಿ

ನೀತಿ ಜಂಗಮ ಒಂದು ಕೋಟಾನುಕೋಟಿ

ಸಿದ್ಧ ಜಂಗಮ ಒಂದು ಕೋಟಾನುಕೋಟಿ

ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ

ವಚನ ಒಂದು ಸಂವಿಧಾನ. ಒಂದು ಜೀವನ ವಿಧಾನ. ಹಾಗಾಗಿ ಕಲ್ಯಾಣದ ಬಾಗಿಲಿಗೆ ಎಲ್ಲರೂ ಹೋಗಬಹುದು ಎನ್ನುವುದು ಒಂದು ವಿಶ್ವಾಸ. ಹಾಗೆ ಹೋದವರನ್ನೆಲ್ಲ ಕಲ್ಯಾಣ ಒಳಗು ಮಾಡಿಕೊಂಡಿತ್ತೆ? ಈಗಲಾದರೂ ಅದು ಸಾಧ್ಯವಾಗಿದೆಯೆ? ಎಂಬ ಪ್ರಶ್ನೆಗಳು ಇದ್ದೇ ಇವೆ. ಆದರೂ ಅಂತಹ ಒಂದು ಆಶಯವನ್ನು ಅದು ಹುಟ್ಟುಹಾಕಿದ್ದು ನಿಜ. ಕಲ್ಯಾಣದ ಬಾಗಿಲಿಗೆ ತಾತ್ವಿಕವಾಗಿ ಎಲ್ಲ ಶೂದ್ರಜಾತಿಗಳ, ದಲಿತ ಜಾತಿಗಳ ಜನ ಹೋಗಿ ನಿಂತಿದ್ದಂತೂ ನಿಜ. ಅದು ಒಳಗು ಮಾಡಿಕೊಂಡಿತೆ? ಎನ್ನುವುದು ಪರಿಶೀಲಿಸಬೇಕಾದ ಸಂಗತಿ.

ಅಂತಹ ಒಂದು ಸಂವಿಧಾನ ಅಥವಾ ಸಂವಿಧಾನಗಳು ಇದ್ದ ಮಾತ್ರಕ್ಕೆ ನಾವು ಅದನ್ನು ಓದುತ್ತೇವೆ ಎಂದೇನಿಲ್ಲ. ಓದಿದರೂ ಪಾಲಿಸುತ್ತೇವೆ ಎಂಬುದೂ ಇಲ್ಲ. ಸಂವಿಧಾನವನ್ನು ಒಪ್ಪಿಕೊಂಡೂ ಅದನ್ನು ಅನ್ವಯಿಸಿಕೊಳ್ಳದೆ ಬದುಕುವ ವಿಧಾನಗಳ ಶೋಧನೆ ದಿನ ನಿತ್ಯ ನಡೆಯುತ್ತಲೇ ಇದೆ. ರಾಜಕೀಯ ಸಂವಿಧಾನವೂ ಇದಕ್ಕೆ ಹೊರತಲ್ಲ. ಸಾಂಸ್ಕೃತಿಕ ಸಂವಿಧಾನ ಎನ್ನಬಹುದಾದ ವಚನಗಳೂ ಹೊರತಲ್ಲ. ವಚನಗಳ ನಿಜ ಆಶಯಗಳನ್ನು ಒಳಗೊಳ್ಳದೆ ಕೇವಲ ಓದಿಗೆ ಸೀಮಿತಗೊಳಿಸಿಕೊಳ್ಳುವ, ರಾಜಕೀಯ ಸಂವಿಧಾನವನ್ನು ಬದುಕಿನ ವಿಧಾನವನ್ನಾಗಿಸಿಕೊಳ್ಳದೆ ಅದರ ಆಶಯಗಳನ್ನು ಒಳಗೊಳ್ಳದ ಹಾಗೆ ಮಾಡುತ್ತಿರುವವರು ಯಾರು? ಇಂತಹ ವೈರುಧ್ಯಕ್ಕೆ ನಾವೇಕೆ ಪಕ್ಕಾಗಿದ್ದೇವೆ? ಇತ್ಯಾದಿ ಅನೇಕ ಪ್ರಶ್ನೆಗಳು ನಮ್ಮೆದುರಿಗೆ ಇವೆ.

ಕಲ್ಯಾಣವೆಂದರೆ ವಚನಧರ್ಮವನ್ನು ಒಪ್ಪಿದವರನ್ನು ಒಳಗೆ ಕರೆದ ಆವರಣ. ಗಮನಿಸಿ ಕೆಲವು ಕಡೆ ಭಕ್ತರ ಧನ ಬೇಕು, ಅವರು ಬೆಳೆದ ದವಸ ಬೇಕು, ಅವರ ಹಾಡು ಬೇಕು, ಸಂಗೀತ ಬೇಕು, ಆದರೆ ನೀಡಿದ ಮನುಷ್ಯ ಬೇಡ. ಹಾಗೆ ಹೊರಗೆ ನಿಲ್ಲಿಸಲ್ಪಟ್ಟವರು ಯಾರು ಎಂದು ಗಮನಿಸಿ. ಅವರೆಲ್ಲ ಒಂದು ಧರ್ಮದ ಸಮಾನ ಮನುಷ್ಯರೆ? ಸಮಾನ ಹಿಂದೂಗಳೆಂದು ಗುರುತಿಸಿದ್ದಾರಾ? ವ್ಯಕ್ತಿಯನ್ನು ಮೊದಲು ಯಾವ ಜಾತಿ ಎಂದು ಗುರುತಿಸಿ ಅದನ್ನು ಒಪ್ಪಿಕೊಂಡ ಮೇಲಷ್ಟೆ ಧರ್ಮದ ಪ್ರಶ್ನೆ. ಮೊದಲನೆಯದಕ್ಕೆ ನಾವು ಒಪ್ಪಿಗೆ ಕೊಟ್ಟ ಮೇಲೆ ನಮ್ಮನ್ನು ಮುಟ್ಟಬಹುದೆ ಮುಟ್ಟಬಾರದೆ ಒಳಗೆ ಬಿಡಬಹುದೆ ಅಥವಾ ಹೊರಗೆ ನಿಲ್ಲಿಸಬೇಕೆ ಎಂಬುದರ ತೀರ್ಮಾನ.

ಹೊರಗೆ ನಿಂತವರನ್ನು ಕರೆದು ಮಾತನಾಡಿಸಿದ್ದು ನಿಜವಾಗಿ ವಚನ ಚಳವಳಿಯ ಘನತೆಯ ಪ್ರತೀಕ. ಹಾಗೆಂದ ಮಾತ್ರಕ್ಕೆ ಅವರು ಪ್ರತಿಪಾದಿಸಿದ ತಾತ್ವಿಕ ನಿಲುವುಗಳಿಗೂ ಮಾನ್ಯತೆ ದೊರಕಿತೆ? ಎನ್ನುವುದು ಕೂಡ ಅಷ್ಟೇ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ. ಮಾದಾರ ಚೆನ್ನಯ್ಯ, ಹೊಲೇರ ಹೊನ್ನಪ್ಪ, ಅಂಬಿಗರ ಚೌಡಯ್ಯ, ವಡ್ಡರ ಸಿದ್ಧರಾಮ, ಒಕ್ಕಲಿಗರ ಮುದ್ದಣ್ಣ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಗಾಣಿಗರ ದಾಸಯ್ಯ, ಕುರುಬರ ಬೀರಯ್ಯ, ದೊಂಬರ ಕ್ಯಾತಯ್ಯ, ಹಗ್ಗ ನುಲಿಯೋ ಚಂದಯ್ಯ, ಹೆಂಡದ ಮಾರಿತಂದೆ, ಕನ್ನದ ಮಾರಿತಂದೆ ಇವರ ತಾತ್ವಿಕತೆಗೆ ಕಲ್ಯಾಣದೊಳಕ್ಕೆ ಪ್ರವೇಶ ಸಿಕ್ಕಿತೆ? ಸಿಕ್ಕಿದ್ದರೆ ಮಂಟೇದಲ್ಲಮ ಗುರುವು ಕಲ್ಯಾಣವನ್ನು ತೊರೆದು ಮಾದರ ಕೇರಿಗೆ ತಾನೂ ಹೋದುದಲ್ಲದೆ, ಬಸವಣ್ಣ ನೀಲಾಂಬಿಕೆಯರನ್ನು ಕರೆತರಬೇಕಿತ್ತೆ? ಈ ಕೆಳಜಾತಿಯ ವಚನಕಾರರನ್ನು ತತ್ವಶಾಸ್ತ್ರದ ಪ್ರಧಾನಧಾರೆಗಳಾಗಲೀ ಕಿರುಧಾರೆಗಳಾಗಲೀ ಅಷ್ಟೇ ಏಕೆ ಸ್ವತ: ವಚನ ಪಂಥಿಗಳೇ ತಿರುಗಿ ನೋಡುವುದಿಲ್ಲ.

ಸಂಪಾದನಾಕಾರರು ಅಲ್ಲಮನನ್ನು ಕೇಂದ್ರದಲ್ಲಿರಿಸಿಕೊಂಡು ಸಂಪಾದನೆಯನ್ನು ಓದನ್ನು ನಡೆಸಿದರೂ ನಂತರದಲ್ಲಿ ಲಿಂಗಾಯತ ನಡೆಯಲ್ಲಿ ಆಚಾರದಲ್ಲಿ ಉಳಿದ ಶರಣರೆಂದರೆ ಬಸವಣ್ಣ, ಚೆನ್ನ ಬಸವಣ್ಣ ಮತ್ತು ಸಿದ್ದಾರಾಮ ಮಾತ್ರ. ಅಲ್ಲಮನಾಗಲೀ, ಅಕ್ಕನಾಗಲೀ, ಮಾದಾರ ಧೂಳಯ್ಯನಾಗಲೀ, ಹಡಪದ ಅಪ್ಪಣ್ಣನಾಗಲೀ ಇಲ್ಲ. ಅವರೆಲ್ಲ ಕೇವಲ ವಿಚಾರದಲ್ಲಿ ಇದ್ದಾರೆ ಎನ್ನಲಡ್ಡಿಯಿಲ್ಲ. ಅಂದರೆ ಎಲ್ಲ ಕೆಳಜಾತಿಯ ವಚನಕಾರರನ್ನು ವಿಚಾರಕ್ಕೆ ಮಾತ್ರ ಒಳಗೊಂಡು ಆಚಾರದಿಂದ ಹೊರಗೇ ಇರಿಸಲಾಗಿದೆ.

ವಚನಗಳ ಓದಿನ ಹೊಸ ಸಾಧ್ಯತೆಗಳು ಈಗ ಮುನ್ನೆಲೆಗೆ ಬರುತ್ತಿವೆ. ಈ ತಲೆಬರಹದಲ್ಲಿ ಸೂಚಿತವಾಗಿರುವ ಕೆಲವು ಸಂಗತಿಗಳನ್ನು ಮೊದಲು ವಿವರಿಸಿಕೊಳ್ಳಬೇಕಾದ ಅಗತ್ಯವಿದೆ. ಮೊದಲನೆಯದಾಗಿ ವಚನ ಎಂಬುದು ಇಡಿಯಾಗಿ ಒಂದು ತತ್ವಪ್ರಸ್ಥಾನವಲ್ಲ. ಅದು ಅನೇಕ ಚಿಂತನಾಧಾರೆಗಳ ಸಂಗಮಭೂಮಿ. ಹಾಗಾಗಿ ವಚನಕಾರರ ಆನುಭಾವಿಕ ನೆಲೆಗಳನ್ನು ಏಕಾಕಾರಿಯಾಗಿ ನೋಡಲು ಸಾಧ್ಯವಿಲ್ಲ. ಎಲ್ಲ ವಚನಕಾರರದ್ದೂ ತಾತ್ವಿಕವಾಗಿ ಒಂದೇ ದಿಕ್ಕಿನ ಚಲನೆ ಅಲ್ಲ. ಅವರಲ್ಲಿ ಅನೇಕ ಸಮಾನ ಅಂಶಗಳಿರುವುದು ನಿಜ.

ಅಂತಹ ಕೆಲವು ಸಾಮಾನ್ಯ ಅಂಶಗಳನ್ನು ಗುರುತಿಸಿದ ಮಾತ್ರಕ್ಕೆ ಇಡಿಯಾಗಿ ವಚನ ಚಳವಳಿಯನ್ನು ತಾತ್ವಿಕತೆಯ ದೃಷ್ಟಿಯಿಂದ ಒಂದು ಪ್ರಸ್ಥಾನ ಎನ್ನಲಾಗದು. ಅಲ್ಲಿ ಅನೇಕ ಚಿಂತನಾಧಾರೆಗಳ ಮುಂದುವರಿಕೆ ಇದೆ.

ಬೌದ್ಧ, ಜೈನ, ನಾಥ, ಸಿದ್ಧ, ಆಜೀವಿಕ, ಅಚಲ ಸಹಜಯಾನ ಮುಂತಾದ ಶ್ರಮಣಧಾರೆ ಗಳು ಮುಂದಿಟ್ಟ ಈ ಪರಿಕಲ್ಪನೆಗಳ ಅನುಸಂಧಾನದಲ್ಲಿ ವಚನಕಾರರು ಕಟ್ಟಿ ಬದುಕಿನ ವಚನಗಳನ್ನು ಅವುಗಳ ನೆರವಿಲ್ಲದೆ ನಡೆಸುವ ಓದನ್ನು ಸರಿಯೆಂದು ಭಾವಿಸಲಾಗದು. ಈಗ ವಚನಗಳನ್ನು ಓದಲು ಬಳಸುತ್ತಿರುವ ವೀರಶೈವ/ಲಿಂಗಾಯತವೂ ಓದಿನ ಒಂದು ಮಾದರಿಯಾಗಿದೆ. ಅದನ್ನು ಕೂಡ ನಮ್ಮ ಇಂದಿನ ಓದಿಗೆ ಬಳಸಿಕೊಳ್ಳಬಹುದು.

ವಚನಕಾರರ ಈ ಒಳಗೊಳ್ಳುವಿಕೆಗೆ ಅವರು ಅನ್ವಯಿಸಿಕೊಂಡ ತಾತ್ವಿಕ ಪರಿಕಲ್ಪನೆಗಳು ಯಾವುವು?

ವಚನಕಾರರು ಅನೇಕ ಪಾಂಥಿಕ ಮೂಲಗಳಿಂದ ತಮ್ಮ ತಾತ್ವಿಕತೆಯನ್ನು ಕಟ್ಟಿಕೊಂಡವರು. ಅವರೆಲ್ಲ ಪ್ರಧಾನವಾಗಿ ಸಿದ್ಧ ಪರಂಪರೆಯವರು. ಬೌದ್ಧ, ನಾಥ, ಶಾಕ್ತ, ಶೈವ, ಆಜೀವಿಕ ಮೂಲಗಳಿಂದ ರೂಪುಗೊಂಡ ಸಿದ್ಧ ಪಂಥವು ಅಖಿಲ ಭಾರತದ ವ್ಯಾಪ್ತಿಯುಳ್ಳದ್ದು. ಹಾಗಾಗಿ ವಚನವನ್ನು ಈ ಅಖಿಲಭಾರತೀಯ ಪರಿಪ್ರೇಕ್ಷ್ಯದಲ್ಲಿಟ್ಟು ನೋಡುವುದು ಸರಿಯಾದುದೆಂದು ನನ್ನ ಅನಿಸಿಕೆ. ಈ ದೃಷ್ಟಿಯಿಂದ ವಚನಗಳ ಓದಿಗೆ ಒದಗಿಸಿಕೊಳ್ಳಬಹುದಾದ ಪರಿಕಲ್ಪನೆಗಳೆಂದು ಕೆಲವನ್ನು ಗುರುತಿಸಿಕೊಳ್ಳಬಹುದು.

ದೈವಮಾರ್ಗವನ್ನು ನಿರಾಕರಿಸಿದ ಗುರುಮಾರ್ಗ, ದ್ವೈತಾದ್ವೈತಗಳನ್ನು ನಿರಾಕರಿಸಿದ ಬಯಲು ಅಥವಾ ಶೂನ್ಯತೆ, ವೇದ ಶಾಸ್ತ್ರ ಪುರಾಣಗಳನ್ನು ನಿರಾಕರಿಸಿದ ಪ್ರಮಾಣ ನಿರಾಕರಣೆ, ವರ್ಣಾಶ್ರಮ, ಜಾತಿ ವ್ಯವಸ್ಥೆಗಳನ್ನು ವಿಧಿಸುವ ಮನುಸ್ಮತಿ ಮುಂತಾದ ವೈದಿಕ ಹಿಂದೂ ಧರ್ಮವನ್ನು ನಿರಾಕರಿಸಿದ ಶರಣ ಧರ್ಮ, ಮುಟ್ಟು ಮೈಲಿಗೆ ಶುದ್ಧಾಶುದ್ಧಗಳನ್ನು ನಿರಾಕರಿಸಿದ ನಿಸರ್ಗ ಸಾಮರಸ್ಯ, ದೈವ-ಭಕ್ತನೆಂಬ ತರತಮವನ್ನು ನಿರಾಕರಿಸಿದ ಲಿಂಗಾಂಗ ಸಾಮರಸ್ಯ, ನಿತ್ಯನಾರಕೀ ತತ್ವವನ್ನು ನಿರಾಕರಿಸಿದ ಸರ್ವಮುಕ್ತಿ ಸಾಧ್ಯತೆ, ಹರಿಸರ್ವೋತ್ತಮ ತತ್ವವನ್ನು ನಿರಾಕರಿಸಿದ ಸರ್ವ ಮಂಗಲ (ಶಿವ) ತತ್ವ, ಪಂಚಾಂಗವನ್ನು ನಿರಾಕರಿಸಿದ ಕಾಲದೇಶ ನಿರಾಕರಣೆ, ವ್ಯಕ್ತಿರೂಪದ ಗುರುವನ್ನು ನಿರಾಕರಿಸಿದ ಅರಿವೇ ಗುರು, ಅಕ್ಷರ ಮಾತ್ರ ಜ್ಞಾನವೆಂಬುದನ್ನು ನಿರಾಕರಿಸಿದ ಶ್ರಮ ಕಸುಬು ಕೌಶಲಗಳು ಜ್ಞಾನದ ಮಾಧ್ಯಮಗಳೆಂಬ ನಿಲುವು, ತಾನು-ಇದಿರಿನ ನಿರಸನ, ಮನೋನಿರಸನ-ಅಮನಸ್ಕ-ಮನೋಲಯ ಅಥವಾ ಭಾವದಗ್ಧ ಸ್ಥಿತಿ, ಕುರುಹಿನ ನಿರಾಕರಣೆ, ಕುರುಹನ್ನು ಹಿಡಿದು ಕುರುಹ ದಾಟುವುದು, ಪ್ರಕ್ರಿಯಾ ಮೀಮಾಂಸೆ, ಮುಂತಾದ ಪರಿಕಲ್ಪನೆಗಳು ವಚನದ ಓದಿಗೆ ಒದಗಿಬರುತ್ತವೆ. ಬೌದ್ಧ, ಜೈನ, ನಾಥ, ಸಿದ್ಧ, ಆಜೀವಿಕ, ಸಹಜಯಾನ ಮುಂತಾದ ದೇಸಿ ಶ್ರಮಣಧಾರೆಗಳು ಮುಂದಿಟ್ಟ ಈ ಪರಿಕಲ್ಪನೆಗಳ ಅನುಸಂಧಾನದಲ್ಲಿ ವಚನಕಾರರು ಕಟ್ಟಿ ಬದುಕಿನ ವಚನಗಳನ್ನು ಅವುಗಳ ನೆರವಿಲ್ಲದೆ ನಡೆಸುವ ಓದನ್ನು ಸರಿಯೆಂದು ಭಾವಿಸಲಾಗದು.

ಒಳಗೊಳ್ಳುವಿಕೆಗೆ ಒಂದು ಪೂರ್ವಶರತ್ತಿದೆ. ನಾನೂ ಅದರ ಭಾಗವಾದರೆ ಮಾತ್ರ ಒಳಗೊಳ್ಳುವ ಪ್ರಶ್ನೆಯೇ ಹೊರತು, ನಾನು ಅದರ ಜೊತೆಗಿಲ್ಲ ಎಂದಾಗ ಒಳಗೊಳ್ಳುವ ಮಾತು ಇರಲು ಸಾಧ್ಯವಿಲ್ಲ. ಭಾರತೀಯ ಬದುಕಿನ ಕ್ರಮದಲ್ಲಿಯೇ ಈ ಎರಡೂ ಧಾರೆಗಳಿವೆ. ಒಂದು ಲೋಕ ಸಮಸ್ತವೂ ಮತ್ತೆಲ್ಲದರ ಜೊತೆ ಇರಲಷ್ಟೇ ಸಾಧ್ಯ ಎನ್ನುವುದು. ಇದನ್ನು ಸಂದರ್ಭಬಂದಿಯಾದ ನೋಟಕ್ರಮ, ಗ್ರಹಿಕಾಕ್ರಮ ಎನ್ನುವುದು. ಅಂದರೆ ಲೋಕಸಮಸ್ತವೂ ಸಂಬಂಧದಲ್ಲಿ ಮಾತ್ರ ಉಂಟಾಗುತ್ತದೆ. ಸಂಬಂಧ ತುಂಡರಿಸಿಕೊಂಡರೆ ಯಾವುದೂ ಇರಲ್ಲ ಎನ್ನುವುದು.

ಇನ್ನೊಂದು ಲೋಕ ಸಂಬಂಧದಲ್ಲಿ ಉಂಟಾಗುವುದಿಲ್ಲ; ಅದನ್ನು ಉಂಟುಮಾಡಿ ನಿಯಂತ್ರಿಸುವ ಮತ್ತೊಂದಿದೆ. ಅದು ನಿರ್ಣಯಿಸಿದಂತೆ ಎಲ್ಲ ಆಗುತ್ತೆ. ಇಲ್ಲಿನ ತಾರತಮ್ಯಕ್ಕೆಲ್ಲ ಅದು ಹೊಣೆ. ನಾವಲ್ಲ ಎನ್ನುವುದು. ಇದನ್ನು ಸಂದರ್ಭಮುಕ್ತ ನೋಟಕ್ರಮ ಅಥವಾ ಗ್ರಹಿಕಾ ಕ್ರಮ ಎನ್ನುತ್ತಾರೆ. ಲೋಕ ಎಲ್ಲವೂ ಸಂಬಂಧದಲ್ಲಿ ಮಾತ್ರ ಇರುತ್ತೆ ಎನ್ನುವವರಿಗೆ ಮಾತ್ರ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವೇ ಹೊರತು, ಸಂದರ್ಭಮುಕ್ತವಾಗಿ ಲೋಕವನ್ನು ನೋಡುವವರಿಗೆ ಒಳಗೊಳ್ಳುವ ಅಗತ್ಯವೂ ಇಲ್ಲ; ಅದನ್ನು ಅವರು ಮಾಡುವುದೂ ಇಲ್ಲ.

ವಚನ ಚಳವಳಿಯನ್ನು ಈಗ ಒಳಗುಮಾಡಿಕೊಳ್ಳುತ್ತಿರುವ ಪರಿ ಹೇಗಿದೆ?

1.  ಹೊರಗಿನ ದೇವಾಲಯವನ್ನು ನಿರಾಕರಿಸಿ ದೇಹವೇ ದೇಗುಲವೆಂದ ವಚನಕಾರರು ಮತ್ತು ದೇವಾಲಯಗಳು ಎರಡೂ ಇರಲಿ ಎನ್ನುವುದು

2.  ಅಸ್ಪಶ್ಯತೆಯನ್ನು ನಿರಾಕರಿಸಿ ನುಡಿದ ಬದುಕಿದ ವಚನಕಾರರೂ ಇರಲಿ ಅಸ್ಪಶ್ಯತೆಯೂ ಇರಲಿ ಎನ್ನುವುದು

3.  ವರ್ಣಾಶ್ರಮ ಧರ್ಮವನ್ನು ನಿರಾಕರಿಸಿದ ವಚನಕಾರರೂ ಇರಲಿ ವರ್ಣಾಶ್ರಮ ಧರ್ಮವೂ ಇರಲಿ ಎನ್ನುವುದು

4. ಮುಟ್ಟುಮೈಲಿಗೆಯನ್ನು ತಿರಸ್ಕರಿಸಿದ ವಚನಕಾರರೂ ಇರಲಿ ಮುಟ್ಟುಮೈಲಿಗೆಯ ಆಚರಣೆಗಳೂ ಇರಲಿ

5.  ಜಾತಿ ತಾರತಮ್ಯವನ್ನು ನಿರಾಕರಿಸಿದ ವಚನಕಾರರೂ ಇರಲಿ ತಾರತಮ್ಯದ ಆಚರಣೆಯ ಜಾತಿಯೂ ಇರಲಿ

6.  ವೇದ ಪ್ರಮಾಣವನ್ನು ನಿರಾಕರಿಸಿದ ವಚನಕಾರರೂ ಇರಲಿ ವೇದ ಪ್ರಮಾಣವೂ ಇರಲಿ

7. ಪುರೋಹಿತಶಾಹಿಯನ್ನು, ಪೂಜಾರಿಯನ್ನು ತಿರಸ್ಕರಿಸಿದ ವಚನಕಾರರೂ ಇರಲಿ ಪುರೋಹಿತಶಾಹಿಯ ಯಜಮಾನಿಕೆಯೂ ಇರಲಿ

8.  ಕಸುಬು ಕಾಯಕ ಸಮಾನತೆಯನ್ನು ಮುಂದಿಟ್ಟ ವಚನಕಾರರೂ ಇರಲಿ ಕಾಯಕ ತಾರತಮ್ಯವೂ ಇರಲಿ

9.   ದೈವಮಾರ್ಗಕ್ಕಿಂತ ಗುರುಮಾರ್ಗ ಶ್ರೇಷ್ಠವೆಂದ ವಚನಕಾರರೂ ಇರಲಿ ದೈವಮಾರ್ಗದ ಶ್ರೇಷ್ಠತೆಯೂ ಇರಲಿ

ಈ ಪಟ್ಟಿ ಇಲ್ಲಿಗೇ ಮುಗಿಯಬೇಕಿಲ್ಲ. ವಚನಗಳ ಓದು ನಿಂತಿಲ್ಲ. ಬದುಕುವುದು ನಿಂತಿದೆ. ಅವುಗಳನ್ನು ಓದುವ ಹೊಸ ಓದುಗಳು ಚಾಲ್ತಿಗೆ ಬಂದಿವೆ. ಕೇವಲ ವಾಗದ್ವೈತಕ್ಕೆ ಯಾವ ಸಮಸ್ಯೆಯೂ ಇದಿರಾಗುವುದಿಲ್ಲ.

ವಚನ ಒಂದು ಸಂವಿಧಾನ. ಒಂದು ಜೀವನ ವಿಧಾನ. ಹಾಗಾಗಿ ಕಲ್ಯಾಣದ ಬಾಗಿಲಿಗೆ ಎಲ್ಲರೂ ಹೋಗಬಹುದು ಎನ್ನುವುದು ಒಂದು ವಿಶ್ವಾಸ. ಹಾಗೆ ಹೋದವರನ್ನೆಲ್ಲ ಕಲ್ಯಾಣ ಒಳಗು ಮಾಡಿಕೊಂಡಿತ್ತೆ? ಈಗಲಾದರೂ ಅದು ಸಾಧ್ಯವಾಗಿದೆಯೆ? ಎಂಬ ಪ್ರಶ್ನೆಗಳು ಇದ್ದೇ ಇವೆ. ಆದರೂ ಅಂತಹ ಒಂದು ಆಶಯವನ್ನು ಅದು ಹುಟ್ಟುಹಾಕಿದ್ದು ನಿಜ. ಕಲ್ಯಾಣದ ಬಾಗಿಲಿಗೆ ತಾತ್ವಿಕವಾಗಿ ಎಲ್ಲ ಶೂದ್ರಜಾತಿಗಳ, ದಲಿತ ಜಾತಿಗಳ ಜನ ಹೋಗಿ ನಿಂತಿದ್ದಂತೂ ನಿಜ. ಅದು ಒಳಗು ಮಾಡಿಕೊಂಡಿತೆ? ಎನ್ನುವುದು ಪರಿಶೀಲಿಸಬೇಕಾದ ಸಂಗತಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top