'ನಂದಿನಿ' ಮತ್ತು 'ಅಮುಲ್'ಗಳ ಮೇಲೆ ಅಮಿತ್ ಶಾ ದಾಳಿ!
-

ಕೆಎಂಎಫ್-ಅಮುಲ್ ಜಂಟಿ ಯೋಜನೆಯ ಮಾತುಗಳನ್ನು ಅಮಿತ್ ಶಾ ಬಾಯಿ ತಪ್ಪಿಆಡಿದ ಮಾತಲ್ಲ ಅಥವಾ ಅದರ ಹಿಂದಿರುವ ಉದ್ದೇಶ ಕೆಎಂಎಫ್‌ನ ಸಬಲೀಕರಣವೂ ಅಲ್ಲ. ಅದರ ಹಿಂದೆ ರಾಜ್ಯಮಟ್ಟದ ಸಹಕಾರಿ ಕ್ಷೇತ್ರಗಳನ್ನು ಕೇಂದ್ರದ ಸುಪರ್ದಿಗೆ ತೆಗೆದುಕೊಂಡು, ಕಾರ್ಪೊರೇಟೀಕರಿಸುವ ದೂರಗಾಮಿ ಯೋಜನೆಯಿದೆ. ಹೀಗಾಗಿ ಅಮಿತ್ ಶಾ ಅವರ ಮಾತಿನ ಒಗಟನ್ನು ಬಿಡಿಸಬೇಕೆಂದರೆ ಭಾರತದ ಸಹಕಾರಿ ಕ್ಷೇತ್ರದ ಆರ್ಥಿಕ- ಸಾಮಾಜಿಕ ಹರಹು ಹಾಗೂ ಅದು ಚುನಾವಣಾ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರವನ್ನು ಅಥರ್ಮಾಡಿಕೊಳ್ಳಬೇಕು.
ಭಾಗ-1
ಕಳೆದ ಅಕ್ಟೋಬರ್‌ನಲ್ಲಿ ತಾನೇ ಗುಜರಾತಿನ 'ಅಮುಲ್' ಹಾಗೂ ಇನ್ನಿತರ ಐದು ಹಾಲು ಒಕ್ಕೂಟಗಳ ವಿಲೀನವನ್ನು ಘೋಷಿಸಿ, ಇದೇ ಚಳಿಗಾಲದ ಅಧಿವೇಶನದಲ್ಲಿ ಬಹುರಾಜ್ಯ ಸಹಕಾರಿ ಒಕ್ಕೂಟಗಳನ್ನು (Multi State Cooperative Societies) ಕೇಂದ್ರದ ನೇರ ಉಸ್ತುವಾರಿಗೆ ತೆಗೆದುಕೊಳ್ಳುವ ಮಸೂದೆಯನ್ನು ಮಂಡಿಸಿರುವ ಕೇಂದ್ರದ ಗೃಹಮಂತ್ರಿಯೂ, ಬಿಜೆಪಿ ಸರಕಾರ ಹೊಸದಾಗಿ ಸೃಷ್ಟಿಸಿರುವ 'ಸಹಕಾರಿ ಇಲಾಖೆ'ಯ ಮಂತ್ರಿಯೂ ಆಗಿರುವ ಅಮಿತ್ ಶಾ ಅವರು ಕರ್ನಾಟಕಕ್ಕೆ ಬಂದು ಗುಜರಾತಿನ ಅಮುಲ್ ಹಾಗೂ ಕರ್ನಾಟಕದ ನಂದಿನಿ ಎರಡೂ ಒಂದಾಗಬೇಕು ಎಂದು ಮಾತಾಡಿದರೆ ಯಾರಿಗಾದರೂ ಗಾಬರಿ ಆಗದಿರುತ್ತದೆಯೇ?
ಕರ್ನಾಟಕದ ಸಹಕಾರಿ ಮಂತ್ರಿ ಸೋಮಶೇಖರ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರು ''ವಿಲೀನದ ಪ್ರಸ್ತಾಪವೇ ಇಲ್ಲ'' ಎಂದು ಹೇಳುತ್ತಿದ್ದರೂ ಅದು ''ಸದ್ಯಕ್ಕೆ ಇಲ್ಲ'' ಎಂದು ಮಾತ್ರ ಅರ್ಥಕೊಡುತ್ತಿದ್ದರೆ ಅದರ ಹೊಣೆಗಾರಿಕೆ ಬೆನ್ನು ಮೂಳೆ ಇಲ್ಲದ ಕರ್ನಾಟಕದ ಬಿಜೆಪಿ ಪಕ್ಷದ್ದೇ ವಿನಾ ವ್ಯಾಖ್ಯಾನಕಾರರದ್ದಲ್ಲ. ವಾಸ್ತವದಲ್ಲಿ ಕೆಎಂಎಫ್-ಅಮುಲ್ ಜಂಟಿ ಯೋಜನೆಯ ಮಾತುಗಳನ್ನು ಅಮಿತ್ ಶಾ ಬಾಯಿ ತಪ್ಪಿಆಡಿದ ಮಾತಲ್ಲ ಅಥವಾ ಅದರ ಹಿಂದಿರುವ ಉದ್ದೇಶ ಕೆಎಂಎಫ್‌ನ ಸಬಲೀಕರಣವೂ ಅಲ್ಲ. ಅದರ ಹಿಂದೆ ರಾಜ್ಯಮಟ್ಟದ ಸಹಕಾರಿ ಕ್ಷೇತ್ರಗಳನ್ನು ಕೇಂದ್ರದ ಸುಪರ್ದಿಗೆ ತೆಗೆದುಕೊಂಡು, ಕಾರ್ಪೊರೇಟೀಕರಿಸುವ ದೂರಗಾಮಿ ಯೋಜನೆಯಿದೆ. ಹೀಗಾಗಿ ಅಮಿತ್ ಶಾ ಅವರ ಮಾತಿನ ಒಗಟನ್ನು ಬಿಡಿಸಬೇಕೆಂದರೆ ಭಾರತದ ಸಹಕಾರಿ ಕ್ಷೇತ್ರದ ಆರ್ಥಿಕ- ಸಾಮಾಜಿಕ ಹರಹು ಹಾಗೂ ಅದು ಚುನಾವಣಾ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರವನ್ನು ಅಥರ್ಮಾಡಿಕೊಳ್ಳಬೇಕು.
ಜನರ ಸಹಕಾರಿಗಳು ಮತ್ತು ಸರಕಾರಿ ಹಾಗೂ ಸಾಹುಕಾರಿಗಳು
ಭಾರತದಲ್ಲಿ ಸಹಕಾರಿ ಕ್ಷೇತ್ರವು ಬ್ರಿಟಿಷರ ಕಾಲದಲ್ಲಿ 1904ರಿಂದಲೇ ಪ್ರಾರಂಭವಾದರೂ ಸ್ವಾತಂತ್ರ್ಯಾನಂತರದಲ್ಲಿ ಅದರ ಹರವು ಅತ್ಯಂತ ದೊಡ್ಡದಾಗಿ ವಿಸ್ತಾರಗೊಂಡಿತು. ಸಂವಿಧಾನದಲ್ಲಿ ಶೆಡ್ಯೂಲ್ 7ರ ಪ್ರಕಾರ ಸಹಕಾರಿ ಕ್ಷೇತ್ರವನ್ನು ಸಂಪೂರ್ಣವಾಗಿ ರಾಜ್ಯದ ಪಟ್ಟಿಗೆ ಸೇರಿಸಲಾಗಿದೆ. ಅಂದರೆ ರಾಜ್ಯಗಳ ಸಹಕಾರಿ ಕ್ಷೇತ್ರದಲ್ಲಿ ಕೇಂದ್ರವು ಮೂಗು ತೂರಿಸುವಂತಿಲ್ಲ. ಒಂದು ಕ್ಷೇತ್ರದಲ್ಲಿ ಸಮಾನ ಆಸಕ್ತಿಯೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಸಮಾನ ಏಳಿಗೆ ಉದ್ದೇಶದಿಂದ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳಬಹುದು ಮತ್ತು ಅದರ ಸದಸ್ಯರಿಗೆ ಸಮಾನ ಹಕ್ಕುಗಳಿರುತ್ತವೆ. ಅಂದರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಒಂದು ಶೇರಿಗೆ ಒಂದು ವೋಟು ಎಂತಾದರೆ ಇಲ್ಲಿ ಒಬ್ಬ ವ್ಯಕ್ತಿ ಎಷ್ಟೇ ಶೇರು ಇಟ್ಟುಕೊಂಡಿದ್ದರೂ ಒಬ್ಬ ವ್ಯಕ್ತಿಗೆ ಒಂದು ವೋಟು ಮಾತ್ರ ಇರುತ್ತದೆ. ಈ ಬಗೆಯ ಸಹಕಾರಿ ವ್ಯವಸ್ಥೆಯಲ್ಲಿ ಪ್ರಾಥಮಿಕ ವ್ಯವಸಾಯ ಸಂಘಗಳು, ಹಾಲು ಒಕ್ಕೂಟಗಳು, ನಿರ್ದಿಷ್ಟ ಬೆಳೆಗಾರರ ಮಾರಾಟ ಒಕ್ಕೂಟಗಳು, ಸಾಲ ಸಹಕಾರಿ ಸಂಸ್ಥೆಗಳು, ಗೊಬ್ಬರ ಉತ್ಪಾದನಾ ಮಾರುಕಟ್ಟೆ ಒಕ್ಕೂಟಗಳು, ವಸತಿ ನಿರ್ಮಾಣ ಒಕ್ಕೂಟಗಳು- ಹೀಗೆ ಇಂದು ಭಾರತದಲ್ಲಿ ಒಟ್ಟು 8.5 ಲಕ್ಷ ಸಹಕಾರಿ ಸಂಸ್ಥೆಗಳಿವೆ. ಅದು ದೇಶದ 29 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತಲುಪುತ್ತಿದೆ. ಇವೆಲ್ಲದರ ವಾರ್ಷಿಕ ವಹಿವಾಟು ರೂ. 15 ಲಕ್ಷ ಕೋಟಿಯಷ್ಟು.
ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಮತ್ತು ಪ. ಬಂಗಾಳದಂಥ ರಾಜ್ಯಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬೇರುಬಿಟ್ಟವರು ಬಹಳ ಸುಲಭವಾಗಿ ರಾಜ್ಯ ರಾಜಕಾರಣದಲ್ಲೂ ಬಲಗಳಿಸಿಕೊಂಡು ಅಧಿಕಾರಕ್ಕೆ ಬರುತ್ತಿದ್ದಾರೆ. ಗುಜರಾತ್‌ನಲ್ಲಿ ಅಮಿತ್ ಶಾ ಮತ್ತವರ ಬಿಜೆಪಿಯ ಬೆಳವಣಿಗೆ ಶುರುವಾದದ್ದೇ ಸಹಕಾರಿ ಕ್ಷೇತ್ರದಲ್ಲಿ ಅವರು ಹಿಡಿತ ಸಾಧಿಸಿದ ನಂತರ. ಅದರಲ್ಲಿ ಹಾಲು ಒಕ್ಕೂಟಗಳ ಪಾತ್ರ ಅಪರಿಮಿತವಾದದ್ದು. ಗುಜರಾತಿನ ಅಮುಲ್ ಮಾದರಿ ರೈತ ಸಹಕಾರಿ ಹಾಲು ಉತ್ಪಾದನಾ ಮತ್ತು ಮಾರುಕಟ್ಟೆ ವ್ಯವಸ್ಥೆ ಇಂದು ಹಾಲು ಕ್ಷೇತ್ರದಲ್ಲಿ ಜಗತ್ತಿನಲ್ಲೇ ಎರಡನೆಯದು. ಅದರ ಯಶಸ್ವೀ ಮಾದರಿಯನ್ನೇ ದೇಶದ ಇತರ ಬಹುಪಾಲು ರಾಜ್ಯಗಳೂ ಅನುಸರಿಸಿದವು.
ಈಗ ಕರ್ನಾಟಕದ ನಂದಿನಿಯೂ ಕೂಡ ಅಮುಲ್ ತರಹದ್ದೇ ಯಶಸ್ಸನ್ನು ಸಾಧಿಸಿದೆ. ಆದರೆ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಗಳು ಸಹಕಾರಿ ಸ್ವರೂಪದಲ್ಲಿ ನಡೆಯುತ್ತಿದ್ದರೂ ಅದು ತೃಪ್ತಿ ಪಡಿಸಬೇಕಿರುವುದು ಬಂಡವಾಳಶಾಹಿ ವ್ಯವಸ್ಥೆಯ ಉಪಭೋಗಿ ಸಂಸ್ಕೃತಿಯ ಗ್ರಾಹಕರನ್ನೇ. ಆದ್ದರಿಂದ ಕ್ರಮೇಣವಾಗಿ ಸಹಕಾರಿ ವಲಯದಲ್ಲೂ ಬಂಡವಾಳಶಾಹಿ ತಂತ್ರಗಳು ವ್ಯಾಪಕವಾಗಿ ಆವರಿಸಿಕೊಳ್ಳಲಾರಂಭಿಸಿತು. ಇದರ ಜೊತೆಗೆ ಕಳೆದ ಎರಡು-ಮೂರು ದಶಕಗಳಲ್ಲಿ ಸಹಕಾರಿ ಕ್ಷೇತ್ರದ ವ್ಯವಹಾರವಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಪೊರೇಟ್ ಕಂಪೆನಿಗಳ ಪ್ರವೇಶದೊಂದಿಗೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರಿ ಸಂಸ್ಥೆಗಳ ಅಸ್ತಿತ್ವ ಅಲುಗಾಡಲಾರಂಭಿಸಿತು. ಕೆಲವು ದಿವಾಳಿಯೇಳಲಾರಂಭಿಸಿದವು. ಇದಕ್ಕೆ ಒಂದು ಬಹುದೊಡ್ಡ ಕಾರಣ 1991ರ ನಂತರದಲ್ಲಿ ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಸರಕಾರಗಳು ಸಹಕಾರಿ ಕ್ಷೇತ್ರಕ್ಕೆ ಕೊಡುತ್ತಿದ್ದ ಪ್ರೋತ್ಸಾಹವನ್ನು ಹಂತಹಂತವಾಗಿ ಹಿಂದೆಗೆದುಕೊಂಡು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಪೊರೇಟ್ ಕಂಪೆನಿಗಳನ್ನು ಪ್ರೋತ್ಸಾಹಿಸಿದ್ದು.
97ನೇ ತಿದ್ದುಪಡಿ- ರಾಜ್ಯಗಳು ಗೆದ್ದರೂ ಗೆಲ್ಲಲಿಲ್ಲ, ಕೇಂದ್ರ ಸೋತರೂ ಸೋಲಲಿಲ್ಲ!
ಇದು ಕಾಂಗ್ರೆಸ್ ಕಾಲದಿಂದಲೇ ಪ್ರಾರಂಭವಾಗಿದ್ದರೂ, ಮೋದಿ ಸರಕಾರ ಬಂದಮೇಲೆ ಸಹಕಾರಿ ಕ್ಷೇತ್ರವನ್ನೇ ಕೇಂದ್ರದ ಸುಪರ್ದಿಗೆ ತೆಗೆದುಕೊಂಡು ಅವನ್ನು ಕಾರ್ಪೊರೇಟ್ ಕ್ಷೇತ್ರಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ಮಾಡುವ ಅಥವಾ ಸಹಕಾರಿ ಕ್ಷೇತ್ರದಲ್ಲಿ ಕಾರ್ಪೊರೇಟ್ ಪ್ರವೇಶಕ್ಕೂ ಅವಕಾಶ ಮಾಡಿಕೊಡುವ ನೀತಿಗಳನ್ನು ಪ್ರಾರಂಭಿಸಿತು. ಮೋದಿ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಮಸೂದೆಗಳಲ್ಲಿ ಕರಾರು ಕೃಷಿ ಉತ್ಪನ್ನ ವ್ಯವಸ್ಥೆಯಲ್ಲಿ ಹಾಗೂ ಉತ್ಪನ್ನ ಮಾರಾಟ ವ್ಯವಸ್ಥೆಯಲ್ಲಿ ಹೀಗೆ ರಾಜಾರೋಷವಾಗಿ ಕಾರ್ಪೊರೇಟ್ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದು ದೇಶಮಟ್ಟದಲ್ಲಿ ಸುಲಭವಾಗಿ ಆಗಬೇಕೆಂದರೆ ರಾಜ್ಯಗಳ ಪಟ್ಟಿಯಲ್ಲಿದ್ದ ಸಹಕಾರಿ ಕ್ಷೇತ್ರವನ್ನು ಕೇಂದ್ರದ ಉಸ್ತುವಾರಿಗೆ ಒಳಪಡಿಸುವುದು ಅಗತ್ಯ. ಹೀಗಾಗಿ ಮೊದಲಿಗೆ ಬಹುರಾಜ್ಯಗಳಲ್ಲಿ ವ್ಯವಹಾರ ಹೊಂದಿರುವ ಸಹಕಾರಿ ಸಂಸ್ಥೆಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಕೇಂದ್ರೀಯ ಶಾಸನ ತರುವ ಪ್ರಯತ್ನವನ್ನು ಮೊದಲು ಮಾಡಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ಅದು ಮುಂದಿಟ್ಟ ಸಂವಿಧಾನದ 97ನೇ ತಿದ್ದುಪಡಿಯು ಸಹಕಾರಿಗಳ ನಿರ್ವಹಣೆಯಲ್ಲೂ ಯೂನಿಯನ್ ಸರಕಾರ ಮಧ್ಯಪ್ರವೇಶ ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ಆದರೆ ಸಹಕಾರ ಕ್ಷೇತ್ರವು ರಾಜ್ಯಗಳ ಪಟ್ಟಿಯಲ್ಲಿದ್ದು ಸಂಸತ್ತಿಗೆ ಅದರ ಬಗ್ಗೆ ಕಾನೂನು ಮಾಡುವ ಅಧಿಕಾರವಿಲ್ಲ. ಅದು ಭಾರತದ ಫೆಡರಲ್ ಸ್ವರೂಪದ ಭಾಗವಾಗಿದೆ ಮತ್ತು ಭಾರತದ ಸಂವಿಧಾನದ ಮೂಲ ರಚನೆಯ ಭಾಗವಾಗಿದೆ.
ರಾಜ್ಯಗಳ ಪಟ್ಟಿಯಲ್ಲಿರುವ ಇಂತಹ ವಿಷಯಗಳಿಗೆ ಸಾಂವಿಧಾನಿಕ ತಿದ್ದುಪಡಿ ತರಬೇಕೆಂದರೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸಬೇಕು ಹಾಗೂ ಅದರ ಜೊತೆಗೆ ದೇಶದ ಒಟ್ಟಾರೆ ರಾಜ್ಯ ಶಾಸನ ಸಭೆಗಳಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದು ತಿದ್ದುಪಡಿ ಮಾಡಬೇಕಾಗುತ್ತದೆ. ಕಾಂಗ್ರೆಸ್ ಸರಕಾರ ಸಂಸತ್ತಿನಲ್ಲಿ ಬಹುಮತವನ್ನು ಪಡೆದುಕೊಂಡಿದ್ದರೂ ರಾಜ್ಯ ಶಾಸನ ಸಭೆಗಳ ಸಮ್ಮತಿಯನ್ನೇ ಪಡೆದುಕೊಂಡಿರಲಿಲ್ಲ. ಹೀಗಾಗಿ ಸಂಸತ್ತಿನ ಈ ಕಾಯ್ದೆ ಸಂವಿಧಾನ ಬಾಹಿರವೆಂದು ಸುಪ್ರೀಂ ಕೋರ್ಟ್ 2021ರ ಜುಲೈ 20 ರಂದು ರದ್ದುಗೊಳಿಸಿತು. ಆದರೆ ಅದೇ ಸಮಯದಲ್ಲಿ ಭಾರತದ ನಾಗರಿಕರು ಸಹಕಾರಿಯನ್ನು ರಚಿಸಿಕೊಳ್ಳುವುದು ಮೂಲಭೂತ ಹಕ್ಕೆಂಬುದನ್ನೂ ಹಾಗೂ ಬಹುರಾಜ್ಯಗಳಲ್ಲಿ ವ್ಯವಹರಿಸುವ ಸಹಕಾರಿಗಳ ಮೇಲೆ ಯೂನಿಯನ್ ಸರಕಾರದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿರುವುದು ಮತ್ತೊಂದು ವಿಷಯ.
ಮೋದಿ ಸರಕಾರ ದಮನಕಾರಿ ಫೆಡರಲಿಸಂ ಮತ್ತು ಹೊಸ 'ಸಹಕಾರಿ ಇಲಾಖೆ'
ಹೀಗೆ ಸುಪ್ರೀಂ ಕೋರ್ಟ್ ಬಹುರಾಜ್ಯ ಸಹಕಾರಿ ನಿರ್ವಹಣೆಯ ಮೇಲೆ ಕೇಂದ್ರಕ್ಕೆ ಇರುವ ಅಧಿಕಾರವನ್ನು ಮಾನ್ಯ ಮಾಡಿರುವ ಸಂದಿಯನ್ನು ಬಳಸಿಕೊಂಡು ಮೋದಿ ಸರಕಾರ 2021ರಲ್ಲಿ ಹೊಸ ಸಹಕಾರಿ ಸಚಿವಾಲಯವನ್ನು ಪ್ರಾರಂಭಿಸಿದೆ ಮತ್ತು ಅದರ ಜವಾಬ್ದಾರಿಯನ್ನು ಮೋದಿ ಸರಕಾರದ ನಂಬರ್ 2 ಆಗಿರುವ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ನೀಡಿದೆ. ಹಾಗೆ ನೋಡಿದರೆ ಗೃಹ ಇಲಾಖೆಗೂ ಮತ್ತು ಸಹಕಾರಿ ಕ್ಷೇತ್ರಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಒಲ್ಲದ ರಾಜ್ಯಗಳನ್ನು ಮಣಿಸಲೆಂದೇ ಅದರ ಜವಾಬ್ದಾರಿಯನ್ನು ಅಮಿತ್ ಶಾ ಅವರಿಗೆ ನೀಡಲಾಗಿರುವುದು ಸ್ಪಷ್ಟ ರಾಜ್ಯಗಳ ಪಟ್ಟಿಯಲ್ಲಿರುವ ಸಹಕಾರಿ ಕ್ಷೇತ್ರದ ಬಗ್ಗೆ ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಮೋದಿಯವರ ಸರಕಾರ ಸಂಸತ್ತಿನ ಇತರ ಪಕ್ಷಗಳ ಜೊತೆಗಾಗಲೀ ಅಥವಾ ರಾಜ್ಯ ಸರಕಾರಗಳ ಜೊತೆಗಾಗಲೀ ಯಾವುದೇ ಸಮಾಲೋಚನೆ ಮಾಡಿರಲಿಲ್ಲ. ಇವು ಈ ಸರಕಾರ ಎಷ್ಟು ಸಹಕಾರ ಸ್ಫೂರ್ತಿಯನ್ನು ಹೊಂದಿದೆ ಎಂಬುದನ್ನು ಎತ್ತಿ ತೋರಿಸುತ್ತವೆ!
ಇದಲ್ಲದೆ, ಮೋದಿ ಸರಕಾರವು ಪ್ರಾರಂಭದಲ್ಲಿ ಸಹಕಾರಿ ಒಕ್ಕೂಟ ತತ್ವವನ್ನು ಅನುಸರಿಸುವುದಾಗಿ ಭರವಸೆ ನೀಡಿದ್ದರೂ, ನೋಟು ನಿಷೇಧ, ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲು ಹಾಗೂ ಪರಿಹಾರದಲ್ಲಿ ನಿರಂತರ ವಂಚನೆ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಗಳ ಪಾಲಿನ ಲೆಕ್ಕಾಚಾರದಲ್ಲಿ ರಾಜ್ಯ ವಿರೋಧಿ ನಿಲುವು, ಕೋವಿಡ್ ನಿರ್ವಹಣೆ ಮತ್ತು ವ್ಯಾಕ್ಸಿನ್ ಹಂಚಿಕೆೆಗಳಲ್ಲಿ ರಾಜ್ಯಗಳ ಹಕ್ಕು ಮತ್ತು ಅಧಿಕಾರಗಳ ಅತಿಕ್ರಮಣ, ಆರ್ಟಿಕಲ್ 370ರ ರದ್ದತಿ, ಸಮವರ್ತಿ ಪಟ್ಟಿಯಲ್ಲಿದ್ದರೂ ರಾಜ್ಯಗಳ ಜೊತೆ ಸಮಾಲೋಚನೆ ಮಾಡದೆಯೇ ಏಕಪಕ್ಷೀಯವಾಗಿ ನವ ಶಿಕ್ಷಣ ನೀತಿ ನೀಟ್ ಪರೀಕ್ಷೆ ಜಾರಿ, ರಾಜ್ಯದ ಪಟ್ಟಿಯಲ್ಲಿರುವ ಕೃಷಿ ಕ್ಷೇತ್ರದ ಬಗ್ಗೆ ಮೊದಲು ಸುಗ್ರೀವಾಜ್ಞೆಯ ಮೂಲಕ ಆ ನಂತರ ಸಂಖ್ಯಾ ಬಲದ ದುರ್ಬಳಕೆ ಹಾಗೂ ಸಂಸತ್ತಿನ ರೀತಿ ರಿವಾಜುಗಳನ್ನು ಉಲ್ಲಂಘಿಸಿ ಮೂರು ಕೃಷಿ ನೀತಿಗಳನ್ನು ಜಾರಿಗೊಳಿಸಿದ್ದು, ರಾಜ್ಯಗಳ ಅಭಿಪ್ರಾಯಗಳನ್ನು ಕೇಳದೆಯೇ ಹೊಸ ಪರಿಸರ ಪರಿಣಾಮ ಅಧ್ಯಯನ ಕಾಯ್ದೆಯ ಅನುಷ್ಠಾನ, ಈಗ ರಾಜ್ಯಗಳ ಪಟ್ಟಿಯಲ್ಲಿರುವ ವಿದ್ಯುತ್ತಿನ ಬಗ್ಗೆಯೂ ಕೇಂದ್ರೀಯ ಮಸೂದೆಯನ್ನು ಮಂಡಿಸಲು ಹೊರಟಿರುವುದು...ಇವೇ ಇನ್ನಿತ್ಯಾದಿ ಕ್ರಮಗಳು ಸರಕಾರದ ದಮನಕಾರಿ ಒಕ್ಕೂಟ ನೀತಿಯನ್ನು ಸಾಬೀತುಪಡಿಸಿವೆ.
ಹೀಗಾಗಿ ಈಗ ರಚಿಸಿರುವ ಸಹಕಾರೀ ಸಚಿವಾಲಯದ ಹಿಂದೆ ಇರುವುದು ಅಧಿಕಾರ ಕೇಂದ್ರೀಕರಣ ಮತ್ತು ಕಾರ್ಪೊರೇಟ್ ಪರವಾದ, ಬಿಜೆಪಿ ಪಕ್ಷವರ್ಧನೆಯ ಸರ್ವಾಧಿಕಾರಿ ಆಸಕ್ತಿಗಳೆ ಎಂಬುದು ನಿರ್ವಿವಾದವಾಗಿದೆ.
(ನಾಳಿನ ಸಂಚಿಕೆಗೆ)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.