ಪ್ರತಿ ಐದರಲ್ಲಿ ಒಂದು ಯೋಜನೆಗೆ ಬಜೆಟ್ ನಲ್ಲಿ ಹೇಳಿದ ಅರ್ಧದಷ್ಟೂ ಹಣ ಕೊಡದ ಮೋದಿ ಸರಕಾರ!
ಸರ್ಕಾರದ ಪ್ರಚಾರ ಶೋಕಿಗೂ ವಾಸ್ತವಕ್ಕೂ ದೊಡ್ಡ ಅಂತರ

Photo : reporters-collective.in
ಮೋದಿ ಸರ್ಕಾರ ಯೋಜನೆಗಳ ಹೆಸರಲ್ಲಿ ಪ್ರಚಾರ ಪಡೆಯುವ ಕೆಲಸವನ್ನಂತೂ ಚೆನ್ನಾಗಿಯೇ ಮಾಡಿತು. ಆದರೆ ಯೋಜನೆಗಳ ಕಥೆ ನಿಜವಾಗಿಯೂ ಏನಾಗಿದೆ?. ಕೇಂದ್ರ ಸರ್ಕಾರದ 906 ಯೋಜನೆಗಳಲ್ಲಿ ಹೆಚ್ಚಿನವುಗಳ ಗಾತ್ರ ಬಜೆಟ್ ನಲ್ಲಿ ಕಾಣಿಸಿದ್ದೇ ಬೇರೆ, ವಾಸ್ತವವೇ ಬೇರೆ.
ಅವುಗಳಲ್ಲಿ ಶೇ.71.9ರಷ್ಟು ಯೋಜನೆಗಳಿಗೆ ಸರ್ಕಾರ ಖರ್ಚು ಮಾಡಿದ್ದು ಬಜೆಟ್ ನಲ್ಲಿ ತೋರಿಸಿದ್ದ ಹಣದಲ್ಲಿ ಅರ್ಧಕ್ಕಿಂತಲೂ ಕಡಿಮೆ. ಪ್ರಚಾರದ ಹೋರ್ಡಿಂಗ್ ನಲ್ಲಷ್ಟೇ ಶೋಕಿ. ರಿಯಾಲಿಟಿ ಮಾತ್ರ ಜೊಳ್ಳು. ರಿಪೋರ್ಟರ್ಸ್ ಕಲೆಕ್ಟಿವ್ ಪ್ರಕಟಿಸಿರುವ ವರದಿ ಮೋದಿ ಸರ್ಕಾರದ ಈ ಅಸಲೀಯತ್ತನ್ನು ಬಯಲು ಮಾಡಿದೆ. ಬಜೆಟ್ ಘೋಷಣೆಯ ಮೂಲಕ ದೊಡ್ಡ ಸುದ್ದಿ ಮಾಡಿದ್ದ ಮೋದಿ ಸರ್ಕಾರ ತನ್ನ ಯೋಜನೆಗಳ ವಿಚಾರದಲ್ಲಿ ಮಾಡಿದ್ದೇನು ಎಂಬುದನ್ನು reporters-collective.in ನ ನವ್ಯಾ ಅಸೋಪಾ ಮತ್ತು ಶ್ರೀಗಿರೀಶ್ ಜಾಲಿಹಾಳ್ ಅವರ ವರದಿ ಒಂದೊಂದಾಗಿ ಬಿಡಿಸಿಟ್ಟಿದೆ.
2019-2020ರಿಂದ 2023-24ರವರೆಗಿನ ಐದು ವರ್ಷಗಳಲ್ಲಿ ಬಜೆಟ್ನಲ್ಲಿ ಪಟ್ಟಿ ಮಾಡಿದ್ದ 906 ಯೋಜನೆಗಳಿಗೆ ಮೋದಿ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂಬುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪರಿಶೀಲಿಸಿದೆ. 906 ಯೋಜನೆಗಳಲ್ಲಿ 651 ಯೋಜನೆಗಳಿಗೆ ಅಂದರೆ ಶೇ.71.9ರಷ್ಟು ಯೋಜನೆಗಳಿಗೆ ಸರ್ಕಾರ ತಾನು ಘೋಷಿಸಿದ್ದಕ್ಕಿಂತ ತೀರಾ ಕಡಿಮೆ ಹಣ ವಿನಿಯೋಗಿಸಿದೆ. ಪ್ರತಿ ಐದರಲ್ಲಿ ಒಂದು ಯೋಜನೆಗೆ ಸರ್ಕಾರ ಖರ್ಚು ಮಾಡಿದ್ದು ಹಂಚಿಕೆ ಮಾಡಲಾಗಿದ್ದ ಮೊತ್ತದಲ್ಲಿನ ಅರ್ಧ ಅಥವಾ ಅದಕ್ಕಿಂತ ಕಡಿಮೆ ಎಂಬುದನ್ನು ವರದಿ ಹೇಳುತ್ತಿದೆ.
2019ರ ಜುಲೈನಲ್ಲಿ ನಿರ್ಮಲಾ ಹಣಕಾಸು ಸಚಿವೆ ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಸಣ್ಣ ಅಂಗಡಿಕಾರರಿಗೆ ಪಿಂಚಣಿ ಯೋಜನೆಯನ್ನು ಪ್ರಕಟಿಸಿದರು. ಪ್ರಧಾನ ಮಂತ್ರಿ ಕರಮ್ ಯೋಗಿ ಮಾನ್ ಧನ್ ಎಂದು ಆ ಯೋಜನೆಗೆ ಮೈಲುದ್ದದ ಹೆಸರು ಕೊಡಲಾಗಿತ್ತು. ಮಾಸಿಕ 3,000 ರೂ. ಪಿಂಚಣಿ ನಿಡುವ ಯೋಜನೆಯ ಮೊದಲ ವರ್ಷದಲ್ಲಿ 750 ಕೋಟಿ ರೂ. ಒದಗಿಸುವುದಾಗಿಯೂ ಘೋಷಿಸಲಾಯಿತು. ಸಂಸತ್ತಿನಲ್ಲಿ ಅದಕ್ಕೆ ಅಬ್ಬರದ ಸ್ವಾಗತ ಸಿಕ್ಕಿತ್ತು. ಮೋದಿಯನ್ನು ಕ್ಯಾಮರಾಗಳು ಝೂಮ್ ಮಾಡಿ ತೊರಿಸಿದ್ದೂ ಆಯಿತು. ಅಷ್ಟೆ. ಅದಾದ ಮೇಲೆ ಅದರ ಕಡೆ ಯಾರ ಗಮನವೂ ಹೋಗಲಿಲ್ಲ.
ಅಬ್ಬರದೊಂದಿಗೆ ಘೋಷಿಸಿದ್ದ ಆ ಯೋಜನೆಗಾಗಿ ಮೋದಿ ಸರ್ಕಾರ ಮೊದಲ ವರ್ಷ ಖರ್ಚು ಮಾಡಿದ್ದು ಬರೀ 155.9 ಕೋಟಿ ರೂ. ಅಂದರೆ. ಘೋಷಿಸಿದ್ದರಲ್ಲಿ 594 ಕೊಟಿ ರೂ. ಖರ್ಚಾಗಲೇ ಇಲ್ಲ. ಅದರ ನಂತರದ 3 ವರ್ಷಗಳಲ್ಲಂತೂ ಆ ಯೋಜನೆಗೆ ಹಂಚಿಕೆ ಮಾಡಿದ್ದು ತಿರಾ ಅಲ್ಪ ಮೊತ್ತವಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ ಯಕಶ್ಚಿತ್ 3 ಕೋಟಿ ರೂ. ನಿಗದಿಪಡಿಸಲಾಗಿತ್ತು. ಅದರಲ್ಲೂ ಖರ್ಚಾದದ್ದು ಕೇವಲ 10 ಲಕ್ಷ ರೂ. ಎಂಬುದು ಇತ್ತೀಚಿನ ಬಜೆಟ್ ಮಾಹಿತಿ. ಐದು ವರ್ಷಗಳಲ್ಲಿ 1,133 ಕೋಟಿ ರೂ. ಖರ್ಚು ಮಾಡುವುದಾಗಿ ಘೋಷಿಸಿದ್ದ ಮೋದಿ ಸರ್ಕಾರ ವಾಸ್ತವವಾಗಿ ನಿಗದಿಪಡಿಸಿದ್ದು ಬರೀ 162 ಕೋಟಿ ರೂ. ಆಗಿತ್ತು. ಅಂದರೆ, ಘೋಷಿಸಲಾಗಿದ್ದ ಮೊತ್ತದ ಶೇ.14ರಷ್ಟು ಮಾತ್ರ. ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರ ಜನವರಿವರೆಗೆ ಈ ಯೋಜನೆಯಿಂದ ಪಿಂಚಣಿ ಪಡೆಯುತ್ತಿದ್ದವರು 50,000 ಮಂದಿ ಮಾತ್ರ. 3 ಕೋಟಿ ಎಲ್ಲಿ? 50 ಸಾವಿರ ಎಲ್ಲಿ?
2023ರ ಮಾರ್ಚ್ ನಲ್ಲಿ ಈ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಪ್ರಶ್ನೆ ಮಾಡಿತು. ಆಗ ಸರ್ಕಾರ, ಇಂಥದೇ ಹೆಸರಿನ ಮತ್ತೊಂದು ಪಿಂಚಣಿ ಯೋಜನೆಯಿರುವುದರಿಂದ ಗೊಂದಲವಾಗಿದೆ ಎಂಬ ಹೊಣೆಗೇಡಿ ಉತ್ತರ ಕೊಟ್ಟಿತ್ತು. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಎಂಬ ಮತ್ತೊಂದು ಪಿಂಚಣಿ ಯೋಜನೆಯನ್ನೇ ಜನರು ಈ ಯೋಜನೆಯೆಂದು ಭಾವಿಸಿದ್ದಾರೆ ಎಂಬುದು ಕೇಂದ್ರ ಸರ್ಕಾರದ ಸಬೂಬಾಗಿತ್ತು.
ಕರಮ್ ಯೋಗಿ ಮಾನ್ ಧನ್ ಯೋಜನೆಯನ್ನು ನಿರ್ಮಲಾ ಸೀತಾರಾಮನ್ ಘೋಷಿಸುವುದಕ್ಕೆ ನಾಲ್ಕು ತಿಂಗಳುಗಳ ಹಿಂದಷ್ಟೇ ಶ್ರಮ ಯೋಗಿ ಮಾನ್ ಧನ್ ಯೋಜನೆ ಆರಂಭವಾಗಿತ್ತು. ಆದರೆ ಸರ್ಕಾರಕ್ಕೆ ಕೇಂದ್ರದಲ್ಲಿನ ಯೋಜನೆಗಳ ಬಗ್ಗೆಯೇ ಸ್ಪಷ್ಟ ಕಲ್ಪನೆಯಿರಲಿಲ್ಲ ಎಂಬುದು ಅದರಿಂದ ಸ್ಪಷ್ಟವಾಗಿತ್ತು. ಶ್ರಮ ಯೋಗಿ ಮಾನ್ ಧನ್ ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರನ್ನು ಒಳಗೊಳ್ಳುವ ಉದ್ದೇಶದ್ದಾಗಿತ್ತಾದರೂ, ದಾಖಲೆಗಳ ಪ್ರಕಾರ ಅದೂ ವಿಫಲ ಯೋಜನೆಯಾಗಿತ್ತು. ಪ್ರಾರಂಭವಾಗಿ ಮೂರು ವರ್ಷಗಳಲ್ಲಿ 42 ಕೋಟಿ ಸಂಭಾವ್ಯ ಫಲಾನುಭವಿಗಳ ಪೈಕಿ 43 ಲಕ್ಷ ಮಂದಿಯನ್ನಷ್ಟೇ ಅದು ಹೊಂದಿತ್ತು.
ಆಮೇಲೆ ನೋಡಿದರೆ, ಅಸಂಘಟಿತ ವಲಯದ ಕಾರ್ಮಿಕರಿಗಾಗಿಯೇ 2015ರಲ್ಲಿ ಪ್ರಾರಂಭಿಸಲಾಗಿದ್ದ ಅಟಲ್ ಪಿಂಚಣಿ ಯೋಜನೆ ಎಂಬ ಒಂದು ಯೋಜನೆಯಿತ್ತು. ಅದಂತೂ ಇನ್ನೂ ಅನುಮಾನಕರ ರೀತಿಯಲ್ಲಿತ್ತು. ಬ್ಯಾಂಕ್ಗಳು ಜನರನ್ನು ಅವರ ಅನುಮತಿಯಿಲ್ಲದೆ ಬಲವಂತವಾಗಿ ಅಟಲ್ ಪಿಂಚಣಿ ಯೋಜನೆಗೆ ಸೇರಿಸುತ್ತಿರುವುದು ರಿಪೋರ್ಟರ್ಸ್ ಕಲೆಕ್ಟಿವ್ ತನಿಖೆಯಿಂದ ಬಯಲಾಗಿತ್ತು. ಯೋಜನೆ ಯಶಸ್ವಿಯಾಗಿದೆ ಎಂದು ತೋರಿಸಲು ದಾಖಲಾತಿ ಸಂಖ್ಯೆಯನ್ನು ಸರ್ಕಾರ ಕೃತಕವಾಗಿ ಹೆಚ್ಚಿಸಿರುವುದು ಟೀಕೆಗೆ ಒಳಗಾಯಿತು.

Photo : reporters-collective.in
ಪಿಂಚಣಿ ಯೋಜನೆಗಳ ಮೌಲ್ಯಮಾಪನಕ್ಕಾಗಿ ಸರ್ಕಾರ ನೇಮಿಸಿದ ಥಿಂಕ್ ಟ್ಯಾಂಕ್, ಶ್ರಮ ಯೋಗಿ ಮಾನ್ ಧನ್ ಅನ್ನು ಅಟಲ್ ಪಿಂಚಣಿ ಯೋಜನೆಯೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಿತು. ಅದರೊಂದಿಗೆ ಸರ್ಕಾರ ಕರಮ್ ಯೋಗಿ ಮಾನ್ ಧನ್ ಅನ್ನೂ ವಿಲೀನಗೊಳಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ವರದಿ ಹೇಳಿದೆ.
ಈ ಮೂರೂ ಪಿಂಚಣಿ ಯೋಜನೆಗಳು ವಿಫಲವಾಗಿರುವುದು ವಿಭಿನ್ನ ಹಂತಗಳಲ್ಲಾದರೂ, ಅವು ಅಬ್ಬರದ ಪ್ರಚಾರ ಬಯಸುವ ಮೋದಿ ಸರ್ಕಾರದ ನಡೆಯನ್ನೇ ತೋರಿಸುತ್ತವೆ. ದೊಡ್ಡದಾಗಿ ಪ್ರಚಾರದ ಧೂಳೆಬ್ಬಿಸಿ ಜನಸಾಮಾನ್ಯರ ಗಮನ ಸೆಳೆಯುವ ಸರ್ಕಾರ, ಒಮ್ಮೆ ಅವುಗಳೆಡೆಗಿನ ಗಮನ ಕಡಿಮೆಯಾಗುತ್ತಿದ್ದಂತೆಯೇ ಹಣ ಕಡಿತಗೊಳಿಸುತ್ತ ಬಂದಿದೆ.
ಯೋಜನೆಗಳ ಮೇಲಿನ ಬಜೆಟ್ ಕಡಿತಗಳನ್ನು ಗಮನಿಸಿದರೆ ದೊಡ್ಡ ಮಟ್ಟದ ಕಡಿತವಾಗಿರುವುದು ಅಭಿವೃದ್ಧಿ ಯೋಜನೆಗಳಲ್ಲಿ. ಶೇ.75ರಷ್ಟು ಅಭಿವೃದ್ಧಿ ಯೋಜನೆಗಳಿಗೆ ಒದಗಿರುವುದು ಸರಕಾರ ಭರವಸೆ ನೀಡಿದ್ದಕ್ಕಿಂತ ಕಡಿಮೆ ಹಣ. ಇದರ ನಂತರ ಹೆಚ್ಚು ಬಜೆಟ್ ಕಡಿತ ಕಂಡಿರುವ ಯೋಜನೆಗಳೆಂದರೆ, ಟ್ರ್ಯಾಕ್ ನವೀಕರಣ, ರಸ್ತೆ ನಿರ್ಮಾಣ, ನವೀಕರಿಸಬಹುದಾದ ಇಂಧನ ಗ್ರಿಡ್ನಂತಹ ಮೂಲಸೌಕರ್ಯ ಯೋಜನೆಗಳು.
ಪರಿಶೀಲಿಸಿದ ಒಟ್ಟು ಯೋಜನೆಗಳಲ್ಲಿ ಸುಮಾರು ಶೇ.73ರಷ್ಟು ಮೂಲಸೌಕರ್ಯ ಯೋಜನೆಗಳಿಗೆ ಬಜೆಟ್ನಲ್ಲಿ ಒದಗಿಸಲಾಗಿದ್ದ ಹಣವನ್ನು ಸರ್ಕಾರ ಹಿಂಪಡೆದಿರುವುದನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪತ್ತೆ ಮಾಡಿದೆ. ಬಜೆಟ್ ಕಡಿತದಲ್ಲಿ ನಂತರದ ಸ್ಥಾನಗಳಲ್ಲಿರುವುದು ರಕ್ಷಣೆ, ಉದ್ಯಮ ಮತ್ತು ಸಾರ್ವಜನಿಕ ವಲಯದ ಯೋಜನೆಗಳು.
ಇಷ್ಟಾಗಿಯೂ, ಭಾರೀ ಘನ ಕಾರ್ಯಗಳನ್ನು ಮಾಡುತ್ತಿರುವಂತೆ ಮೋದಿ ಸರ್ಕಾರ ಹೇಗೆ ಬಿಂಬಿಸಿಕೊಳುವುದು ಸಾಧ್ಯವಾಯಿತು? ವಾಸ್ತವವಾಗಿ ಅದು ಅಸ್ತಿತ್ವದಲ್ಲಿರುವ ಯೋಜನೆಗಳನ್ನೇ ಮರುಬ್ರಾಂಡ್ ಮಾಡುತ್ತಿತ್ತು. ಬೇರೆ ಹೆಸರಿಟ್ಟು ಗಮನ ಸೆಳೆಯುತ್ತಿತ್ತು. ಇಂಥ ಗಿಮಿಕ್ ಮಾಡಿ ಪ್ರಚಾರ ಪಡೆದಿದ್ದ ಮೋದಿ ಸರ್ಕಾರದ ಯೋಜನೆಗಳಲ್ಲಿ ಹೆಚ್ಚಿನವು ದಶಕಗಳಷ್ಟು ಹಳೆಯ ಯೋಜನೆಗಳಾಗಿದ್ದವು.

Photo : reporters-collective.in
ಉದಾಹರಣೆಗೆ, ಚುನಾವಣೆ ಸಮಯದಲ್ಲಿ ಮೊದಿ ಸರ್ಕಾರ ಹೆಚ್ಚು ಪ್ರಚಾರ ಕೊಟ್ಟಿದ್ದ PM AASHA ಯೋಜನೆ. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಈ ಯೋಜನೆಯಡಿ ಮೋದಿ ಸರ್ಕಾರ ಸಿಕ್ಕಾಪಟ್ಟೆ ಖರ್ಚು ಮಾಡಿದ್ದು 2019 ಮತ್ತು 2024ರ ಚುನಾವಣೆಯ ಹೊತ್ತಿನಲ್ಲಿ. ಅದರ ನಡುವೆ ಒಂದು ಬಿಡಿಗಾಸನ್ನೂ ಈ ಯೋಜನೆಗಾಗಿ ಮೋದಿ ಸರ್ಕಾರ ಹಾಕಿಲ್ಲ.
2019ರ ಚುನಾವಣೆಯಲ್ಲಂತೂ ರೈತರ ಆದಾಯ ಡಬಲ್ ಮಾಡುವ ಭರವಸೆಯಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಈ ಯೋಜನೆಯನ್ನು ಬಿಂಬಿಸಲಾಯಿತು. ಮೂಲತಃ ಯುಪಿಎ ಸರ್ಕಾರದ ಯೋಜನೆಯನ್ನು ಪಿಎಂ ಆಶಾ ಎಂದು ಬ್ರ್ಯಾಂಡ್ ಬದಲಿಸಿ ಘೋಷಿಸಲಾಗಿತ್ತು. ಆದರೆ, ರೈತರ ಆದಾಯ ಡಬಲ್ ಆಗಲಿಲ್ಲ. 2024ರ ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಆದಾಯ ಡಬಲ್ ಪ್ರಸ್ತಾವೇ ಇರಲಿಲ್ಲ. ಇಲ್ಲೊಂದು ಅಂಶವನ್ನು ಗಮನಿಸಬೇಕಿದೆ. ಐದು ವರ್ಷಗಳ ಅವಧಿಯಲ್ಲಿ ಬಹುಪಾಲು ಯೋಜನೆಗಳಲ್ಲಿ ಬಜೆಟ್ ಕಡಿತ ಮಾಡಲಾಗಿದ್ದರೂ, ಎಲ್ಲಾ 906 ಯೋಜನೆಗಳ ಒಟ್ಟು ವಾಸ್ತವಿಕ ವೆಚ್ಚ ಒಟ್ಟು ಬಜೆಟ್ ಅಂದಾಜುಗಳಿಗಿಂತ ಹೆಚ್ಚಾಗಿದೆ.
ಅಂಕಿಅಂಶಗಳು ತೋರಿಸುವಂತೆ ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಕೋವಿಡ್ ಸಂಬಂಧಿ ಯೋಜನೆಗಳ ಮೇಲಿನ ವೆಚ್ಚ ಬಜೆಟ್ ಅಂದಾಜುಗಳಿಗಿಂತ ತೀರಾ ಹೆಚ್ಚಾಗಿದೆ. ಎರಡನೆಯದಾಗಿ, ವರ್ಷಗಳಿಂದ ಹಣವನ್ನೇ ಹಾಕಿರದ ಕೆಲವು ಅಭಿವೃದ್ಧಿ ಯೋಜನೆಗಳ ಮೇಲೆ 2024ರ ಲೋಕಸಭಾ ಚುನಾವಣೆಗೆ ಮೊದಲು ಸರ್ಕಾರ ಹೆಚ್ಚು ಹಣ ಹಾಕಿದೆ.
ಪಿಂಚಣಿ ಯೋಜನೆಯ ಕಥೆ ಏನಾಗಿದೆ ಎಂಬುದನ್ನು ಕಂಡುಕೊಂಡಿರುವ ರಿಪೋರ್ಟರ್ಸ್ ಕಲೆಕ್ಟಿವ್, ಕೇಂದ್ರ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆದ ಇತರ ಕೇಂದ್ರೀಯ ಯೋಜನೆಗಳನ್ನೂ ಗಮನಿಸಿದೆ. ಯಶಸ್ಸು ಅಥವಾ ವೈಫಲ್ಯಕ್ಕೆ ಕೇಂದ್ರವೇ ಸಂಪೂರ್ಣ ಜವಾಬ್ದಾರವಾಗಿರುವ ಕೇಂದ್ರ ವಲಯದ ಯೋಜನೆಗಳಲ್ಲಿ ಸರ್ಕಾರ ಹೇಳಿದಷ್ಟು ಖರ್ಚು ಮಾಡಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ.
ಕೃಷಿ ವಲಯವನ್ನು ತೆಗೆದುಕೊಂಡರೆ, ರೈತರ ಆದಾಯ ಡಬಲ್ ಮಾಡುವುದಾಗಿ ಘೋಷಿಸಿದ್ದ ಯೋಜನೆಯಲ್ಲಿ ತೀವ್ರ ಬಜೆಟ್ ಕಡಿತ ಮತ್ತು ತೀರಾ ಕಡಿಮೆ ವೆಚ್ಚ ಗಮನಕ್ಕೆ ಬಂದಿದೆ. ಪಿಎಂ ಆಶಾ ಯೋಜನೆಯಲ್ಲಿ ಎರಡು ಚುನಾವಣೆಗಳ ಹೊತ್ತಿನಲ್ಲಿ ಖರ್ಚು ಮಾಡಿದ್ದು ಬಿಟ್ಟರೆ ಮೂರು ವರ್ಷಗಳ ಕಾಲ ಒಂದು ರೂಪಾಯಿಯನ್ನೂ ಖರ್ಚು ಮಾಡಲಿಲ್ಲ.
ಇನ್ನು, ಸಣ್ಣ ಮತ್ತು ಅತಿ ಸಣ್ಣ ರೈತರ ಪಿಂಚಣಿ ಯೋಜನೆಯಾಗಿರುವ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಲ್ಲಿ ಕೂಡ ಸರ್ಕಾರದ್ದು ಕಳಪೆ ಸಾಧನೆ ಎಂಬುದು ಬಯಲಾಗಿದೆ. 3 ಕೋಟಿ ರೈತರನ್ನು ಒಳಗೊಳ್ಳಬೇಕಿದ್ದ ಈ ಯೋಜನೆಯಡಿ 2019ರಿಂದ ದಾಖಲಾಗಿರುವವರು ಘೋಷಿತ ಗುರಿಯ ಶೇ.7.8 ರೈತರು ಮಾತ್ರ. 2023-24ರಲ್ಲಿ ಬಿಟ್ಟರೆ, ಉಳಿದೆಲ್ಲಾ ವರ್ಷಗಳಲ್ಲಿ ಈ ಯೋಜನೆಗೆ ಸರ್ಕಾರ ಬಜೆಟ್ ಹಂಚಿಕೆಗಿಂತ ಕಡಿಮೆ ಖರ್ಚು ಮಾಡಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತಿರುವುದಾಗಿ ವರದಿ ಹೇಳಿದೆ.
2020ರಲ್ಲಿ 10,000 ರೈತ ಉತ್ಪಾದಕ ಸಂಘಟನೆಗಳ ರಚನೆ ಮತ್ತು ಉತ್ತೇಜನಕ್ಕಾಗಿ ಯೋಜನೆ ಶುರು ಮಾಡಿದಾಗಿನಿಂದ ನಾಲ್ಕೂ ವರ್ಷ ಸರ್ಕಾರ ಘೋಷಿತ ಹಂಚಿಕೆಗಿಂತ ಕಡಿಮೆ ಖರ್ಚು ಮಾಡಿದೆ. ರೈತರಿಗೆ ಹೆಚ್ಚು ಚೌಕಾಶಿಗೆ ಅವಕಾಶವಿದೆ, ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಮತ್ತು ಬೆಳೆಗಳನ್ನು ಒಟ್ಟಿಗೆ ಮಾರಾಟ ಮಾಡುವ ಮೂಲಕ ಹೆಚ್ಚು ಹಣ ಗಳಿಸಲು ನೆರವಾಗಲಿದೆ ಎನ್ನಲಾಗಿದ್ದ ಯೋಜನೆಯನ್ನು ಸರ್ಕಾರವೇ ಹೀಗೆ ಹಳ್ಳ ಹಿಡಿಸಿದೆ.
ಆರೋಗ್ಯ ವಲಯವನ್ನು ಗಮನಿಸಿದರೆ, 2021ರಲ್ಲಿ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಕೇಂದ್ರ ಸರ್ಕಾರ ಪಿಎಂ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ ಅನ್ನು ಘೋಷಿಸಿತು. ಈ ಯೋಜನೆ ರಾಜ್ಯಗಳ ಸಹಭಾಗಿತ್ವದಲ್ಲಿ ನಡೆಯುತ್ತದಾದರೂ, ಕೆಲವು ಘಟಕಗಳು ಸಂಪೂರ್ಣವಾಗಿ ಕೇಂದ್ರದ ನಿರ್ವಹಣೆಗೆ ಒಳಪಡುತ್ತವೆ. 5 ವರ್ಷಗಳಲ್ಲಿ 9,339 ಕೋಟಿ ರೂ. ವೆಚ್ಚ ಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಕೇವಲ 1,373 ಕೋಟಿ ರೂ. ಅಂದರೆ ಘೋಷಿತ ಹಂಚಿಕೆಯ ಶೇ.14.7ರಷ್ಟನ್ನು ಮಾತ್ರ ಖರ್ಚು ಮಾಡಿದೆ.
ಶಿಕ್ಷಣ ವಲಯವನ್ನು ಗಮನಿಸುವುದಾದರೆ, ಬಿಜೆಪಿ ತನ್ನ 2019ರ ಚುನಾವಣಾ ಪ್ರಣಾಳಿಕೆಯಲ್ಲಿ ಶೇ.50ಕ್ಕಿಂತ ಹೆಚ್ಚು ಎಸ್ಟಿ ಸಮುದಾಯವಿರುವ ಬ್ಲಾಕ್ ಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ಸ್ಥಾಪನೆಯ ಭರವಸೆ ನೀಡಿತ್ತು. 2025-26ರ ವೇಳೆಗೆ 740 ಶಾಲೆಗಳನ್ನು ಸ್ಥಾಪಿಸುವ ಗುರಿಯಿತ್ತು. ಆದರೆ 2023ರ ಡಿಸೆಂಬರ್ ವೇಳೆಗೆ 401 ಶಾಲೆಗಳನ್ನು ಸ್ಥಾಪಿಸುವ ಮೂಲಕ ಶೇ.54ರ ಗುರಿಯನ್ನಷ್ಟೇ ಸಾಧಿಸಿದೆ.
2024ರ ಲೋಕಸಭೆ ಚುನಾವಣೆ ಹತ್ತಿರ ಬರುವವರೆಗೂ ಬಜೆಟ್ ಅಂದಾಜುಗಳು ಏರಿಕೆ ಕಾಣಲಿಲ್ಲ. 2023-2024ರಲ್ಲಿ ರೂ 5,943 ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಸಂಸತ್ ಸ್ಥಾಯಿ ಸಮಿತಿಯ ಆಕ್ಷೇಪದ ಬಳಿಕವೂ ವೆಚ್ಚ ಮಾಡಿದ್ದು ಶೇ.41.6ರಷ್ಟನ್ನು ಮಾತ್ರ.
ಇನ್ನು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಘೋಷಿಸಲಾಗಿದ್ದ ರಾಷ್ಟ್ರೀಯ ಫೆಲೋಶಿಪ್ ಯೋಜನೆಗೂ ಹಣ ಕಡಿತ ಮಾಡಲಾಯಿತು. ಇದರ ಬಗ್ಗೆ ಕೂಡ 2023ರ ಡಿಸೆಂಬರ್ ನಲ್ಲಿ ಸಂಸತ್ ಸ್ಥಾಯಿ ಸಮಿತಿ ಪ್ರಶ್ನೆ ಮಾಡಿತ್ತು. ಅಂಕಿಅಂಶಗಳ ಪ್ರಕಾರ, 2019-20ರಲ್ಲಿ ಬಜೆಟ್ನಲ್ಲಿ ಒದಗಿಸಿದ್ದರ ಶೇ.68ನ್ನು ಮಾತ್ರ ಖರ್ಚು ಮಾಡಿದ್ದರೆ, 2021-22ರಲ್ಲಿ ಅದರ ಪ್ರಮಾಣ ಶೇ.40ಕ್ಕೆ ಇಳಿದಿತ್ತು. 2018-19ಕ್ಕೆ ಹೋಲಿಸಿದರೆ 2022-23ರಲ್ಲಿ ನೀಡಲಾದ ಫೆಲೋಶಿಪ್ಗಳ ಸಂಖ್ಯೆಯಲ್ಲಿ ಶೇ.30ರಷ್ಟು ಕುಸಿತವಾಗಿದೆ.

Photo : reporters-collective.in
ಗ್ರಾಮೀಣ ಆರ್ಥಿಕತೆಯಲ್ಲಿ ಕೂಡ ಮೋದಿ ಸರ್ಕಾರದ ಶೋಕಿಗೂ ವಾಸ್ತವಕ್ಕೂ ದೊಡ್ಡ ಅಂತರವಿದೆ. ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ASPIRE ಎಂಬ ಯೋಜನೆ ಕೃಷಿ, ಗ್ರಾಮೀಣ ಉದ್ಯಮ ವಲಯಗಳಲ್ಲಿ 75,000 ನುರಿತ ಗ್ರಾಮೀಣ ಉದ್ಯಮಿಗಳಿಗೆ ನೆರವಾಗಲಿದೆ ಎಂದು ದೊಡ್ಡದಾಗಿ ಹೇಳಿಕೊಂಡಿದ್ದರು. ಮುಂದಿನ ನಾಲ್ಕು ಹಣಕಾಸು ವರ್ಷಗಳಲ್ಲಿ ಒಟ್ಟು 137 ಕೋಟಿ ರೂ. ಖರ್ಚು ಮಾಡಲಾಗುವುದು ಎಂದಿದ್ದರು. ಆದರೆ ಆ ಅವಧಿಯಲ್ಲಿ ಖರ್ಚು ಮಾಡಿದ್ದು ಕೇವಲ 31 ಕೋಟಿ ರೂ. ಅಂದರೆ ಘೋಷಿತ ಮೊತ್ತದ ಶೇ.22.7ರಷ್ಟನ್ನು ಮಾತ್ರ.
ASPIRE ಅಲ್ಲದೆ ಸಾಂಪ್ರದಾಯಿಕ ಕೈಗಾರಿಕೆಗಳನ್ನು ನವೀಕರಿಸುವ SFURTI ಯೋಜನೆ ಬಗ್ಗೆಯೂ ಅವರು ಹೇಳಿದ್ದರು. ಅದರ ಮೇಲಿನ ಖರ್ಚಿನಲ್ಲಿ 2022-23ರವರೆಗೆ ಸ್ಥಿರ ಏರಿಕೆ ಇತ್ತಾದರೂ, ಘೋಷಿತ 334 ಕೋಟಿ ರೂ.ಗಳಲ್ಲಿ ಸರ್ಕಾರ ಖರ್ಚು ಮಾಡಿರುವುದು 1.95 ಕೋಟಿ ರೂ. ಮಾತ್ರ. ಅದರ ನಂತರದ ವರ್ಷವೂ 280 ಕೋಟಿ ರೂ. ಬಜೆಟ್ ಅಂದಾಜಿಗೆ ಬದಲಾಗಿ 2.5 ಕೋಟಿ ರೂ.ಗಳನ್ನು ಮಾತ್ರ ಮೋದಿ ಸರ್ಕಾರ ಖರ್ಚು ಮಾಡಿದೆ.
ಮೂಲ ಲೇಖನದ ಲಿಂಕ್ ಇಲ್ಲಿದೆ. https://www.reporters-collective.in/trc/billboard-governance-under-modi-majority-schemes-faced-funding-squeeze
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.







