×
Ad

ಕರ್ಪೂರದ ಗಿರಿ

Update: 2026-02-08 13:23 IST

ಪತ್ರಿಕೆಗಳ ಬೆಂಗಳೂರು ಆವೃತ್ತಿ ಮಾತ್ರ ಪ್ರಕಟವಾಗುತ್ತಿದ್ದವು. ಸ್ಥಳೀಯ ಪತ್ರಿಕೆಗಳು ಮುಂಜಾನೆಯೇ ಓದಲು ಸಿಗುತ್ತಿದ್ದವು.. ರಾಜ್ಯಮಟ್ಟದ ಪತ್ರಿಕೆಗಳನ್ನು ಪಾಠ ಪ್ರವಚನ, ಲ್ಯಾಬ್ ಮುಗಿಸಿಕೊಂಡು ಸಾಯಂಕಾಲ ಓದುತ್ತಿದ್ದೆ. ಆಗಿನ ಶಾಸಕರು, ಮಂತ್ರಿಗಳ ಸುದ್ದಿಗಳು ಪದ್ಮಪ್ರಸಾದ್ ಅವರ ಸುದ್ದಿಗಳೊಡನೆ ಪೈಪೋಟಿ ಮಾಡಲು ಸಾಧ್ಯವಿರಲಿಲ್ಲ. ಆಗಿನ ಕಾಲದಲ್ಲೇ ಪದ್ಮಪ್ರಸಾದ್ ಕಲಬುರ್ಗಿ ನಗರದ ಮಹಾದಾನಿಗಳ ಸಾಲಿನಲ್ಲಿ ಸೇರಿದ್ದರು. ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ, ಉದ್ಘಾಟಕ, ಅಧ್ಯಕ್ಷ ಇತ್ಯಾದಿ ವೈವಿಧ್ಯಮಯ ಪಾತ್ರಗಳಲ್ಲಿ ಪಾಲ್ಗೊಂಡು ಸುದ್ದಿಯಲ್ಲಿ ಇರುತ್ತಿದ್ದರು. ಅಲ್ಲಿಯವರೆಗೆ ನಾನು ಅವರ ಭಾವಚಿತ್ರಗಳನ್ನು

ಪತ್ರಿಕೆಗಳಲ್ಲಿ ನೋಡಿದ್ದೆ..

ರಾಜಶೇಖರ ಹತಗುಂದಿ, ವೃತ್ತಿಯಲ್ಲಿ ಪತ್ರಕರ್ತ ಪ್ರವೃತ್ತಿಯಲ್ಲಿ ಕಥೆಗಾರ. ಅಗ್ನಿ ವಾರ ಪತ್ರಿಕೆಯ ಸಂಪಾದಕರಾಗಿ, ಜನವಾಹಿನಿಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾ ಭಾರತಿಗೆ ಅಂಕಣ ಬರೆಯುತ್ತಿದ್ದಾರೆ.. ಕಾಲ ಬೆಳದಿಂಗಳ ಸಿರಿ, ಬೆಟ್ಟಕ್ಕೆ ಚಳಿ, ಸುಖವು ಬೀದಿಯ ನೆರಳು, ಗೇಟು ದಾಟಿದ ಬಳಿಕ-ಇವರ ಕಥಾ ಸಂಕಲನಗಳು. ಬುದ್ಧನ ನಾಡಿನಲ್ಲಿ, ಬಯಲ ಹುಡಿ, ಎಡ ಹೊತ್ತಿನ-ಇವರ ಇನ್ನಿತರ ಪ್ರಕಟಿತ ಪುಸ್ತಕಗಳು. ಕರ್ನಾಟಕ ಮಾಧ್ಯಮ ಅಕಾಡಮಿಯ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪ್ರಶಸ್ತಿ, ಗುಲ್ಬರ್ಗಾ ವಿ ವಿ ಯ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಇದು ಪದ್ಮಪ್ರಸಾದನ ಕತೆ

ನಾನು ಕಂಡಿದ್ದು ಅಲ್ಪ.. ಸಾರ್ವಜನಿಕ ಬದುಕಿನಲ್ಲಿ ವದಂತಿಗಳಾಗಿ ಹರಡಿ, ಕೊನೆಗೆ ದಂತ ಕತೆಯ ಸ್ವರೂಪ ಪಡೆದ ಎಲ್ಲವೂ ಈ ಪದ್ಮಪ್ರಸಾದ ಜೀವನ ಕಥನದ ಹೂರಣ.ಪದ್ಮಪ್ರಸಾದನ ಕತೆಯಲ್ಲಿ ವಾಸ್ತವ ಮತ್ತು ಕಲ್ಪಕತೆಯ ಪ್ರಮಾಣ ನನ್ನ ಊಹೆಗೂ ನಿಲುಕಿಲ್ಲ. ನಾನು ಕಂಡ, ಕೇಳಿದ, ಪತ್ರಿಕೆಯಲ್ಲಿ ಸುದ್ದಿ ರೂಪದಲ್ಲಿ ಅಚ್ಚಾದ ಮತ್ತು ಕಲಬುರಗಿಯಂಥ ದೊಡ್ಡ ಶಹರಿನಲ್ಲಿ ಜನನಿತವಾದ ಎಲ್ಲ ಸಂಗತಿಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಹಂಸ ಕ್ಷೀರ ನ್ಯಾಯ ದಯಪಾಲಿಸುವ ಹೊಣೆ ಓದುಗರದು.

ಪದ್ಮಪ್ರಸಾದನ ಕತೆಯಲ್ಲಿನ ಕಟು ಸತ್ಯ ಗೊತ್ತಿರುವುದು ಕಥಾ ನಾಯಕನ ಅಂತ:ಸ್ಸಾಕ್ಷಿಗೆ ಮತ್ತು ದೈವ ಸ್ವರೂಪಿ ಸಾರ್ವಜನಿಕರ ಶುದ್ಧ ಆತ್ಮಗಳಿಗೆ.ಒಡಕು ಬಾಯಿ ಸತ್ಯವನ್ನು, ತಡವರಿಸುವ ನಾಲಿಗೆ ಸುಳ್ಳುಗಳನ್ನು ಹೇಳುವುದು ಕಾಲಾನುಕಾಲದಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ. ಸುಳ್ಳುಗಳಲ್ಲಿನ ಸತ್ಯ, ಸತ್ಯದೊಳಗಿನ ಅಸತ್ಯವನ್ನು ಕಾಲದ ಒರೆಗಲ್ಲು ಪತ್ತೆ ಮಾಡಿ ಅನಾವರಣಗೊಳಿಸುತ್ತಲೇ ಇದೆ.

ಮೂಗಿಗಿಂತ ಮೂಗುತಿ ಭಾರವಾಗಬಾರದು. ಈಗ ನೇರ ಕತೆಗೆ ಬರುತ್ತೇನೆ. ಸುಮಾರು ನಲುವತ್ತು ವರುಷಗಳ ಹಿಂದಿನ ಮಾತು. ನಾನು ಹತಗುಂದಿಯಲ್ಲೇ ವಾಸವಿದ್ದ ದಿನಗಳು. ಹತಗುಂದಿ ಗ್ರಾಮ ಕಲಬುರಗಿ ನಗರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಹೊಲದಲ್ಲಿ ಬೆಳೆದ ತರಕಾರಿಯನ್ನು ಕಲಬುರಗಿ ಸೂಪರ್ ಮಾರ್ಕೆಟ್ ಗೆ ತಂದು ಹರಾಜು ಮೂಲಕ ಮಾರುವುದು ಆಗಿನ ಪದ್ಧತಿಯಾಗಿತ್ತು.. ಈಗಿನಂತೆ ರೈತ ಬೆಳೆದ ತರಕಾರಿಯನ್ನು ನೇರ ಗ್ರಾಹಕರಿಗೆ ತಲುಪಿಸುವ ಮಾರುಕಟ್ಟೆ ವ್ಯವಸ್ಥೆ ಆಗ ಇರಲಿಲ್ಲ. ಹೊಲದಲ್ಲಿ ಬೆಳೆಯುವ ಚವಳಿಕಾಯಿ, ಬೆಂಡಿಕಾಯಿಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಮಾರಲು ಕಲಬುರಗಿಗೆ ಬರುತ್ತಿದ್ದೆ.ಹತಗುಂದಿಯಿಂದ ಕಲಬುರಗಿಗೆ ಈಗಿನಂತೆ ನೇರ ಬಸ್ಸುಗಳು ಇರಲಿಲ್ಲ. ಹತಗುಂದಿಯಿಂದ ಪಟ್ಟಣ ಪಾಟಿಯವರೆಗೆ ತರಕಾರಿ ತುಂಬಿದ ಗೋಣಿ ಚೀಲವನ್ನು ತಲೆ ಮೇಲೆ ಹೊತ್ತುಕೊಂಡು ಬರುತ್ತಿದ್ದೆ. ಪಟ್ಟಣ ಪಾಟಿಯಿಂದ ಕೆಂಪು ಬಸ್ಸು ಹತ್ತಿದರೆ ಕಲಬುರಗಿಯ ಶಹಾಬಜಾರ್ ನಾಕಾದ ಬಳಿ ಇಳಿಸುತ್ತಿತ್ತು. ಶಹಾ ಬಜಾರ್ ನಾಕಾದಿಂದ ಸೂಪರ್ ಮಾರ್ಕೆಟ್ ಗೆ ಬರಲು ಸೈಕಲ್ ರಿಕ್ಷಾದವರು ಒಪ್ಪುತ್ತಿರಲಿಲ್ಲ. ಒಂದೊಮ್ಮೆ ಒಪ್ಪಿಕೊಂಡರೂ ಸಿಕ್ಕಾಪಟ್ಟೆ ಬಾಡಿಗೆ ಕೇಳುತ್ತಿದ್ದರು. ಹಣ ಉಳಿಸಲು ನಾನು ಶಹಾ ಬಜಾರ್ ನಾಕಾದಿಂದ ಮದನ್ -ಪ್ರಕಾಶ ಟಾಕೀಸ್ ವರೆಗೆ ಮಾತ್ರ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದೆ. ಬಹಮನಿ ಸುಲ್ತಾನರ ಕೋಟೆ ಎದುರಿಗಿನ ರಸ್ತೆ ಈ ಎರಡು ಟಾಕೀಸ್ ನಡುವೆ ಹಾಯ್ದು ಹೋದ ರಸ್ತೆಗೆ ಕೂಡುತ್ತಿತ್ತು. ಕೋಟೆ ಎದುರಿನ ರಸ್ತೆಯಲ್ಲಿ ಹಾದು ಸೂಪರ್ ಮಾರ್ಕೆಟ್ ಗೆ ಹೋಗಬಹುದಾಗಿತ್ತು.. ಆದರೆ ಆ ರಸ್ತೆಯಲ್ಲಿ ಸಿಂಧಿಖಾನಿ ಇರುವುದರಿಂದ, ಹಾಡಹಗಲೇ ಕುಡಿದವರು ತೂರಾಡುತ್ತ ಅಡ್ಡಡ್ಡ ಬರುತ್ತಿದ್ದರು.. ಅನಿವಾರ್ಯವಾಗಿ ನಾನು ತರಕಾರಿಯ ಗೋಣಿ ಚೀಲವನ್ನು ಮದನ್ - ಪ್ರಕಾಶ ಟಾಕೀಸ್ ಮಧ್ಯದ ರಸ್ತೆಯಲ್ಲಿ ಇಳಿದು ಪುಟ್ಟ ಗಲ್ಲಿಯ ಮೂಲಕ ಹಾಯ್ದು ಸೂಪರ್ ಮಾರ್ಕೆಟ್ ತಲುಪುತ್ತಿದ್ದೆ. ಆ ಎರಡೂ ಚಿತ್ರಮಂದಿರಗಳಿಗಿಂತ ಹೆಚ್ಚು ಜನಸಂದಣಿ ಆ ಪುಟ್ಟ ಗಲ್ಲಿಯಲ್ಲಿ ಜಮಾಯಿಸಿರುತ್ತಿತ್ತು. ಭಾರವಾದ ತರಕಾರಿಯ ಚೀಲ ಹೊತ್ತು ಆ ಗಲ್ಲಿಯ ದಟ್ಟ ಜನಸಂದಣಿಯಿಂದ ಪಾರಾಗಲು ಹರಸಾಹಸ ಪಡಬೇಕಾಗಿತ್ತು. ಯಾಕಾಗಿ ಆ ದಟ್ಟ ಜನಸಂದಣಿ ಎಂಬುದು ಎಷ್ಟೋ ವರ್ಷಗಳ ಕಾಲ ನನಗೆ ಅರ್ಥವೇ ಆಗಿರಲಿಲ್ಲ.




 


ದಟ್ಟ ಜನಸಂದಣಿ ಇರುವ ಆ ಇಕ್ಕಟ್ಟಿನ ರಸ್ತೆಯ ಅಕ್ಕ ಪಕ್ಕ ಅಂಗಡಿ ಮುಂಗಟ್ಟುಗಳಿದ್ದರೂ ಶೆಟರ್ ಹಾಕಿರುತ್ತಿದ್ದರು. ಆದರೂ ಜನ ಒಳ ಹೊರಗೆ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದರು. ಯಾವುದೋ ರಹಸ್ಯ ಭೇದಿಸಲು ಕಾಯುತ್ತಿರುವ ಹಾಗೆ ಜನ ಸೇರಿಕೊಳ್ಳುತ್ತಿದ್ದರು.ಆ ಪುಟ್ಟ ಗಲ್ಲಿಯ ಇಕ್ಕೆಲದಲ್ಲೂ ಪದ್ಮಪ್ರಸಾದ್ ಅವರಿಗೆ ಸೇರಿದ ಅಂಗಡಿ ಮುಂಗಟ್ಟುಗಳು ಇದ್ದವು ಎನ್ನುವುದು ಎಷ್ಟೋ ವರ್ಷಗಳ ನಂತರ ನನಗೆ ಗೊತ್ತಾಯಿತು. ಅಷ್ಟು ಮಾತ್ರವಲ್ಲ ಆ ಪದ್ಮಪ್ರಸಾದ್ ಯಾರು ಎನ್ನುವುದು ಆಗ ನನಗೆ ತಿಳಿದಿರಲಿಲ್ಲ. ಇಕ್ಕಟ್ಟಿನ ರಸ್ತೆಯ ಆ ಪುಟ್ಟ ಗಲ್ಲಿಯಲ್ಲಿ ಅಪಾರ ಪ್ರಮಾಣದ ಜನಸಂದಣಿ ಇದ್ದರೂ ಹತ್ತಿರದಲ್ಲೇ ಇದ್ದ ಮದನ್ ಮತ್ತು ಪ್ರಕಾಶ ಟಾಕೀಸ್ ಗಳು ನೊಣ ಹೊಡೆಯುತ್ತಿದ್ದವು. ಅಪರೂಪಕ್ಕೆ ಡಾ. ರಾಜ್‌ಕುಮಾರ್, ಅಮಿತಾಬ್ ಬಚ್ಚನ್ ಸಿನೆಮಾಗಳು ಇದ್ದಾಗ ಮಾತ್ರ ಆ ಎರಡೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿರುತ್ತಿದ್ದವು. ಆ ಎರಡೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದಾಗಲೂ ಆ ಪುಟ್ಟ ಗಲ್ಲಿಯ ಜನಸಂದಣಿ ಮಾತ್ರ ಕರಗುತ್ತಿರಲಿಲ್ಲ.ಅಂದ ಹಾಗೆ ಆ ಪುಟ್ಟ ಗಲ್ಲಿಯ ಕಿರಿದಾದ ಹಾದಿಗೆ ಮಹಾವೀರ ರಸ್ತೆ ಎಂದು ನಾಮಕರಣ ಮಾಡಿದ್ದರು. ಆ ರಸ್ತೆಯಲ್ಲಿ ಮಹಾವೀರ ಮಂದಿರವಾಗಲಿ, ಅವರ ಮೂರ್ತಿಯಾಗಲಿ ಯಾವುದೂ ಇರಲಿಲ್ಲ.

ಆ ಪುಟ್ಟ ಗಲ್ಲಿಯ ಜನಸಂದಣಿಯನ್ನು ಭಾರದ ತರಕಾರಿ ಚೀಲ ಹೊತ್ತು ದಾಟಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ನನ್ನ ಪುಟ್ಟ ಹೆಗಲು ಅಸಹಕಾರ ತೋರುತ್ತಿತ್ತು. ಪಟ್ಟು ಬಿಡದೆ ಕಾಲು ಹೆಜ್ಜೆ ಹಾಕುತ್ತಿತ್ತು. ಅತೀವ ಯಾತನೆ ಅನುಭವಿಸುತ್ತಾ ಆ ಪುಟ್ಟ ಗಲ್ಲಿ ದಾಟಿ ಸೂಪರ್ ಮಾರ್ಕೆಟ್ ತಲುಪುತ್ತಿದ್ದೆ. ತರಕಾರಿ ಹರಾಜಿನಲ್ಲಿ ಮಾರಾಟವಾಗಿ ನಾಲ್ಕು ಕಾಸು ಕೈಗೆ ಬಂದಾಗ ಖುಷಿಯಾಗುತ್ತಿತ್ತು. ಕಿರಿದಾದ ರಸ್ತೆಯ ದಟ್ಟ ಜನಸಂದಣಿಯ ಆ ಪುಟ್ಟ ಗಲ್ಲಿ ದಾಟುವ ಸಂಕಟವನ್ನು ನೂರಾರು ಬಾರಿ ಅನುಭವಿಸಿದ್ದೇನೆ. ಪ್ರತಿಬಾರಿ ಅಪ್ಪನನ್ನು ಶಪಿಸುತ್ತಿದ್ದೆ. ಆದರೆ ಕಾಸು ಎಣಿಸುವಾಗ ಮನೆಯ ಯಜಮಾನಿಕೆಯ ಗತ್ತು ಮೈ ಮನದಲ್ಲಿ ಮಿಂಚಿನಂತೆ ಸಂಚಾರವಾಗಿ ನಿರಾಳ ಭಾವ ಅನುಭವಿಸುತ್ತಿದ್ದೆ.

ಎಸ್.ಎಸ್.ಎಲ್.ಸಿ ಮುಗಿಸಿ ಕಲಬುರಗಿಗೆ ಓದಲು ಬಂದಾಗ ಪದ್ಮಪ್ರಸಾದ್ ಬೆಳೆಯುತ್ತ ಹೋದ. ಎಸ್.ಬಿ. ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿ. ಯು. ಸಿ ಗೆ ಪ್ರವೇಶ ಪಡೆದಾಗ ಹೊಸ ಜಗತ್ತಿನ ಪರಿಚಯವಾಗತೊಡಗಿತು. ಕಾಲೇಜಿನ ಗ್ರಂಥಾಲಯದಲ್ಲಿ ಎಲ್ಲ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆಗಳು ಓದಲು ಸಿಗುತ್ತಿದ್ದವು. ಕನ್ನಡದ ಅತ್ಯುತ್ತಮ ಪುಸ್ತಕಗಳು ಆ ಗ್ರಂಥಾಲಯದಲ್ಲಿ ಲಭ್ಯವಿದ್ದವು. ಒಂದು ಬದಿಯ ಪುಸ್ತಕ ಕಪಾಟಿನ ಮೇಲೆ ‘ಮಹಾದಾನಿ’ ಪದ್ಮಪ್ರಸಾದ್ ಕೊಡುಗೆ ಎಂದು ದಪ್ಪಕ್ಷರದಲ್ಲಿ ಬರೆದ ಬೋರ್ಡ್ ನೇತಾಡುತ್ತಿತ್ತು. ಸ್ಥಳೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಹೆಚ್ಚು ಕಮ್ಮಿ ಪ್ರತೀ ದಿನ ಪದ್ಮಪ್ರಸಾದ್ ಅವರ ಫೋಟೋ ಸಹಿತ ಸುದ್ದಿಗಳು ಪ್ರಕಟವಾಗುತ್ತಿದ್ದವು. ಕುಷ್ಠ ರೋಗಿಗಳ ಕಾಲೋನಿಯಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್, ಅನ್ನದಾನ, ಬಟ್ಟೆ - ಹೊದಿಕೆ ಹಂಚಿಕೆ, ಕೊಳೆಗೇರಿ ಮಕ್ಕಳಿಗೆ ಉಚಿತ ಪುಸ್ತಕ, ನೋಟ್ ಬುಕ್ ಮತ್ತು ಸಮವಸ್ತ್ರ ಹಂಚಿಕೆ ಇತ್ಯಾದಿ ಸುದ್ದಿಗಳು ಕಾಣಿಸಿಕೊಳ್ಳುತ್ತಿದ್ದವು.

ಆಗ ಪತ್ರಿಕೆಗಳ ಬೆಂಗಳೂರು ಆವೃತ್ತಿ ಮಾತ್ರ ಪ್ರಕಟವಾಗುತ್ತಿದ್ದವು. ಸ್ಥಳೀಯ ಪತ್ರಿಕೆಗಳು ಮುಂಜಾನೆಯೇ ಓದಲು ಸಿಗುತ್ತಿದ್ದವು. ರಾಜ್ಯಮಟ್ಟದ ಪತ್ರಿಕೆಗಳನ್ನು ಪಾಠ ಪ್ರವಚನ, ಲ್ಯಾಬ್ ಮುಗಿಸಿಕೊಂಡು ಸಾಯಂಕಾಲ ಓದುತ್ತಿದ್ದೆ. ಆಗಿನ ಶಾಸಕರು, ಮಂತ್ರಿಗಳ ಸುದ್ದಿಗಳು ಪದ್ಮಪ್ರಸಾದ್ ಅವರ ಸುದ್ದಿಗಳೊಡನೆ ಪೈಪೋಟಿ ಮಾಡಲು ಸಾಧ್ಯವಿರಲಿಲ್ಲ. ಆಗಿನ ಕಾಲದಲ್ಲೇ ಪದ್ಮಪ್ರಸಾದ್ ಕಲಬುರಗಿ ನಗರದ ಮಹಾದಾನಿಗಳ ಸಾಲಿನಲ್ಲಿ ಸೇರಿದ್ದರು. ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ, ಉದ್ಘಾಟಕ, ಅಧ್ಯಕ್ಷ ಇತ್ಯಾದಿ ವೈವಿಧ್ಯಮಯ ಪಾತ್ರಗಳಲ್ಲಿ ಪಾಲ್ಗೊಂಡು ಸುದ್ದಿಯಲ್ಲಿ ಇರುತ್ತಿದ್ದರು. ಅಲ್ಲಿಯವರೆಗೆ ನಾನು ಅವರ ಭಾವಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದ್ದೆ. ಇಂಥ ಮಹಾ ದಾನಿಗಳ ಕೃಪೆ ನನ್ನ ಮೇಲೂ ಬೀಳಬಾರದೇ ಅಂದುಕೊಂಡಿದ್ದೆ. ಅವರನ್ನು ಹತ್ತಿರದಿಂದ ನೋಡಬೇಕು, ಮಾತನಾಡಿಸಬೇಕು ಅಂತ ಅನಿಸುತ್ತಿತ್ತು. ಪತ್ರಿಕೆಗಳಲ್ಲಿನ ಅವರ ಸುದ್ದಿಗಳ ಮಹಾಪೂರದಿಂದಾಗಿ ಪದ್ಮಪ್ರಸಾದ್ ಎಂಬ ಮಹದಾನಿ ಮಾತ್ರ ನನ್ನ ಮನ:ಪಟಲದ ಮೇಲೆ ಖಾಯಂ ಆಗಿ ನೆಲೆ ನಿಂತರು.

ನಮ್ಮ ಕಾಲೇಜಿನ ವಾರ್ಷಿಕೋತ್ಸವದ ಉದ್ಘಾಟನೆಗೆಂದು ಪದ್ಮಪ್ರಸಾದ್ ಅವರನ್ನು ಕರೆಸಿದ್ದರು. ಆಮಂತ್ರಣ ಪತ್ರ ಪ್ರಕಟವಾದ ದಿನದಿಂದ ಅವರನ್ನು ನೋಡಬೇಕೆಂಬ ಹಂಬಲ, ತುಡಿತ ತೀವ್ರಗೊಳ್ಳುತ್ತಿತ್ತು. ಹಂಬಲ ಮತ್ತಷ್ಟು ಬಲಗೊಳ್ಳುವ ಮೊದಲೇ ಆ ದಿನ ಬಂದೇ ಬಿಡ್ತು.ಕಾರ್ಯಕ್ರಮ ಆರಂಭವಾಗುವ ಮೊದಲೇ ಹೆಂಡತಿ ಸಮೇತ ಪದ್ಮಪ್ರಸಾದ್ ಅವರು ಪದ್ಮಿನಿ ಪ್ರೀಮಿಯರ್ ಕಾರಿನಿಂದ ಇಳಿದರು. ಪ್ರಾಂಶುಪಾಲರು ಮತ್ತು ಇನ್ನಿತರ ಸಿಬ್ಬಂದಿ ಅವರನ್ನು ಆದರದಿಂದ ಸ್ವಾಗತಿಸಿದರು. ನಮಗೆ ಬಯೋಲೋಜಿ ಕಲಿಸುತ್ತಿದ್ದ ಶಾಂತಿನಾಥ್ ಸರ್ ಪದ್ಮಪ್ರಸಾದ್ ದಂಪತಿಯ ಕಾಲಿಗೆರಗಿ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಾದ ನಮಗೆ ಅವರನ್ನು ಹತ್ತಿರದಿಂದ ನೋಡುವ, ಕಾಲು ಮುಟ್ಟಿ ನಮಸ್ಕಾರ ಮಾಡುವ ಅವಕಾಶ ದೊರೆಯಲಿಲ್ಲ. ಆದರೆ ನಾನು ಮಾತ್ರ ಅವರನ್ನು ಹತ್ತಿರದಿಂದ ಕಣ್ಣು ತುಂಬಿಸಿಕೊಳ್ಳುವ ಹಂಬಲದಿಂದ ವಿದ್ಯಾರ್ಥಿಗಳಿಗೆ ನಿಗದಿಯಾಗಿರುವ ಸ್ಥಳದಲ್ಲಿ ಮೊದಲ ಸಾಲಿನಲ್ಲಿ ಕೂತೆ. ವೇದಿಕೆ ಕಾರ್ಯಕ್ರಮ ಶುರುವಾಯಿತು. ಕನ್ನಡ ಕಲಿಸುವ ಸಿದ್ದಲಿಂಗಪ್ಪ ಸರ್ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಮಹಾದಾನಿ ಪದ್ಮಪ್ರಸಾದ್ ದಂಪತಿಯನ್ನು ವೇದಿಕೆಗೆ ಆಹ್ವಾನಿಸಿದರು. ‘ಮಹಾದಾನಿ’ ಪದ್ಮಪ್ರಸಾದ್ ಮತ್ತು ಮಹಾಸಾದ್ವಿ ಪದ್ಮಾವತಿ ಅಮ್ಮನವರು ವೇದಿಕೆಯನ್ನು ಅಲಂಕರಿಸಬೇಕು ಎಂಬ ಸಿದ್ದಲಿಂಗಪ್ಪ ಸರ್ ಅವರ ಆವೇಶಭರಿತ ಅಹ್ವಾನದೊಂದಿಗೆ ಚಪ್ಪಾಳೆ ಸೇರಿ ಸಂಭ್ರಮ ನೂರುಪಟ್ಟು ಹೆಚ್ಚಾಯಿತು. ಸಾಕ್ಷಾತ್ ಶಿವ ಪಾರ್ವತಿಯರಂತೆ ಪದ್ಮಪ್ರಸಾದ್ ಮತ್ತು ಪದ್ಮಾವತಿ ದಂಪತಿ ಕೈಜೋಡಿಸಿ ವಂದಿಸುತ್ತಾ ನಗುಮೊಗದಿ ವೇದಿಕೆಯ ಕುರ್ಚಿಯಲ್ಲಿ ಆಸೀನರಾದರು. ಪದ್ಮಪ್ರಸಾದ್ ಅವರ ಪಕ್ಕದಲ್ಲಿ ಆಡಳಿತ ಮಂಡಳಿಯ ಸದಸ್ಯ ಶಂಕರರಾವ್ ದೇಶಮುಖರು ಕೂತಿದ್ದರು. ದೇಶಮುಖರು ಪದ್ಮಾವತಿಯವರನ್ನೇ ದಿಟ್ಟಿಸಿ ನೋಡುತ್ತಿದ್ದರು. ನೀಳ ಮೂಗು, ಅಗಲವಾದ ಹಣೆ, ಆ ಹಣೆಯ ಮೇಲೆ ಕುಂಕುಮ, ಕಿವಿಯ ತುದಿಯಲ್ಲಿ ಜೋತು ಬಿದ್ದ ಬಂಗಾರದ ಓಲೆ, ಶುಭ್ರ ಬಿಳಿ ಧೋತರ, ಅದಕ್ಕೊಪ್ಪುವ ತಿಳಿ ಕಾವಿಯ ನೆಹರೂ ಶರ್ಟ್ ಪೋಷಾಕಿನಲ್ಲಿ ಪದ್ಮಪ್ರಸಾದ್ ಇಂದ್ರ ಲೋಕದ ದೇವೇಂದ್ರನಂತೆ ಕಾಣುತ್ತಿದ್ದರು. ಅವರ ಹೆಂಡತಿ ಪದ್ಮಾವತಿಯವರು ಅತಿ ಸುಂದರಿ. ನಮ್ಮೂರಲ್ಲಿ ಅಂಥ ಹೆಣ್ಣುಮಗಳನ್ನೇ ನಾನು ನೋಡಿರಲಿಲ್ಲ. ಮುಖ ಸೌಂದರ್ಯ ಮತ್ತು ದೇಹದ ನಿಲುವಿಗೆ ಹೊಂದುವ ಸೀರೆ, ಕುಪ್ಪಸ ಪದ್ಮಾವತಿಯವರ ಆಕರ್ಷಣೆ ಹೆಚ್ಚಿಸಿದ್ದವು. ಸಿನೆಮಾ ನಟಿಯರಿಗೂ ಮೀರಿದ ಸೌಂದರ್ಯ ಹೊತ್ತಿದ್ದ ಪದ್ಮಾವತಿ ಅಮ್ಮನವರ ನಗುಮೊಗ, ಲವಲವಿಕೆ ನೋಡಿದರೆ ಸುಂದರ ಗೊಂಬೆ ಕೂಡಿಸಿದ್ದಾರೆ ಎಂಬ ಭಾವ ಮೂಡುತ್ತಿತ್ತು. ಆ ಸುಂದರ ದಂಪತಿಯನ್ನು ಶಾಂತಿನಾಥ ಸರ್ ಅವರು ಅತಿ ಸುಂದರವಾಗಿ ಹೊಗಳಿ ಪರಿಚಯಿಸಿದರು. ನಿರೂಪಣೆ ಮಾಡುತ್ತಿದ್ದ ಸಿದ್ದಲಿಂಗಪ್ಪ ಸರ್ ಮತ್ತು ಶಾಂತಿನಾಥ ಸರ್ ಹೊಗಳುವ ಸ್ಪರ್ಧೆಯಲ್ಲಿ ಪೈಪೋಟಿಗೆ ಬಿದ್ದಿದ್ದರು. ‘ಭೂಲೋಕದಲ್ಲಿ ಸಾಕ್ಷಾತ್ ದೇವರಂತೆ ಬದುಕುತ್ತಿರುವ ಪದ್ಮಪ್ರಸಾದ್ ದಂಪತಿಗಳು ನಮ್ಮ ವರ್ಣನೆಗೆ ಮೀರಿದವರು’ ಎಂದು ಹೇಳಿ ಕನ್ನಡದ ಮೇಷ್ಟ್ರು ಸಿದ್ದಲಿಂಗಪ್ಪ ಸರ್ ಹೊಗಳಿಕೆಗೆ ವಿರಾಮ ಹೇಳಿದರು. ನನ್ನ ಊರಲ್ಲಿ ಬೈಯುವ, ದರ್ಪ ತೋರುವ, ಅಪಮಾನಿಸುವ ಶ್ರೀಮಂತ ದಂಪತಿಯನ್ನು ನೋಡಿದ್ದೆ. ಅಪರೂಪಕ್ಕೆ ಅಲ್ಲೊಬ್ಬರು ಇಲ್ಲೊಬ್ಬರು ಒಳ್ಳೆಯವರು ಇದ್ದರು. ಆದರೆ ಬಡತನವನ್ನು, ಬಡವರನ್ನು ನಿಕೃಷ್ಟವಾಗಿ ಕಂಡವರೇ ಹೆಚ್ಚಾಗಿದ್ದರು.

ಪದ್ಮಪ್ರಸಾದ್ ದಂಪತಿಯ ಶಿಸ್ತು ಸಂಯಮ, ನಯ ನಾಜೂಕು ಘನ ಗಾಂಭೀರ್ಯ ಕಂಡು ಮನುಷ್ಯ ರೂಪದ ದೇವರಂತೆ ಭಾಸವಾದರು. ಅವರ ದಾನ ಧರ್ಮದ ಸುದ್ದಿಗಳು ನೆನಪಿಸಿಕೊಂಡು ಪದ್ಮಪ್ರಸಾದ್ ದಂಪತಿಗಳನ್ನು ಆರಾಧಿಸಲು ಶುರು ಮಾಡಿಕೊಂಡೆ. ಅವತ್ತು ನನಗೆ ನಿರಾಸೆ ಮೂಡಿಸಿದ್ದು: ಪದ್ಮಪ್ರಸಾದ್ ಅವರ ಆಶೀರ್ವಚನದಂತಿರುವ ಅನಾಕರ್ಷಕ ಭಾಷಣ. ತಮ್ಮ ದಾನ ಧರ್ಮದ ಬಗ್ಗೆಯೇ ಹೆಚ್ಚು ಹೇಳಿಕೊಂಡರು. ನೀವೂ ಮಹಾದಾನಿಗಳಾಗಬೇಕೆಂದು ಕರೆ ಕೊಟ್ಟರು. ಫೀಸು ಕಟ್ಟಲು, ಪುಸ್ತಕ ಖರೀದಿಸಲು ಪರದಾಡುವ ನಾವು ಮಹಾದಾನಿಯಾಗುವುದು ಹೇಗೆ ಎಂಬ ಚಿಂತೆ ಕಾಡತೊಡಗಿತ್ತು. ಆದರೆ ಮಹಾದಾನಿ ಬಿರುದು ಹೊತ್ತ ಪದ್ಮಪ್ರಸಾದ್ ನನ್ನೊಳಗೆ ಬೆಳೆಯುತ್ತಲೇ ಹೋದರು.

ಮುಂದೆ ನಾನು ಎಂ. ಎ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಉಪಸಂಪಾದಕ ನೌಕರಿಗೆ ಸೇರಿಕೊಂಡೆ. ಇಬ್ಬರು ಮೊಳೆ ಜೋಡಿಸುವವರು ಬಿಟ್ಟರೆ ವರದಿಗಾರಿಕೆಯಿಂದ ಹಿಡಿದು ಇಡೀ ಪತ್ರಿಕೆ ರೂಪಿಸುವ ಹೊಣೆ ನನ್ನದಾಗಿತ್ತು.ಸಂಬಳ ಕಡಿಮೆಯಿದ್ದರೂ ಬರವಣಿಗೆಯ ಚಟ ತೀರಿಸಿಕೊಳ್ಳಲು ಸದವಕಾಶ ಎಂದು ಭಾವಿಸಿ ಆ ಪತ್ರಿಕೆಯಲ್ಲೇ ನೆಲೆ ನಿಂತೆ. ಆ ಪತ್ರಿಕೆ ಸೇರಿ ವರದಿಗಾರಿಕೆ ಆರಂಭಿಸಿದ ಮೇಲೆ ಜಗತ್ತಿನ ಹಲವು ಮುಖಗಳು ಪರಿಚಯವಾದವು. ಆ ಪತ್ರಿಕೆ ಸೇರದೆ ಬ್ಯಾಂಕ್ ಅಥವಾ ಇನ್ನಿತರ ಇಲಾಖೆಯ ನೌಕರಿಗೆ ಸೇರಿದ್ದರೆ ಈ ಅನುಭವದಿಂದ ವಂಚಿತವಾಗುತ್ತಿದ್ದೆ. ಬದುಕಿಗೆ ಹಲವು ಬಣ್ಣಗಳಿವೆ ಎಂಬ ಸತ್ಯವನ್ನೇ ಒಪ್ಪಿಕೊಳ್ಳುವ ಮನಸ್ಥಿತಿ ಕಳೆದುಕೊಳ್ಳುತ್ತಿದ್ದೆ. ಪತ್ರಿಕೆಗೆ ಸೇರಿದ ಮೇಲೆಯೂ ಮಹಾದಾನಿ ಪದ್ಮಪ್ರಸಾದ್ ಅವರ ದಾನ ಧರ್ಮ, ಸಮಾಜ ಸೇವೆ, ಸಾಮೂಹಿಕ ವಿವಾಹ ಇತ್ಯಾದಿ ಸುದ್ದಿಗಳನ್ನು ಬರೆದಿದ್ದೇನೆ. ಅವರಿಗೆ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ದೊರೆತ ಸುದ್ದಿಗಳನ್ನು ಅತ್ಯಂತ ಸಂಭ್ರಮದಿಂದ ಪ್ರಕಟಿಸಿದ್ದೇನೆ.

ಒಂದು ದಿನ ಜಿಲ್ಲೆಗೆ ಹೊಸದಾಗಿ ಬಂದ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಆ ಸುದ್ದಿ ಓದಿ ನಾನು ಕ್ಷಣ ಕಾಲ ಸ್ತಂಭೀಭೂತನಾದೆ. ಒಮ್ಮೆ ಮತ್ತೊಮ್ಮೆ, ಮಗದೊಮ್ಮೆ ಹೀಗೆ ಐದಾರು ಸಲ ಓದಿದೆ. ಆರಂಭದಲ್ಲಿ ಪೊಲೀಸ್ ಇಲಾಖೆಯ ಮೇಲೆಯೇ ಅನುಮಾನ ಬಂತು. ಪೊಲೀಸ್ ಇಲಾಖೆಯ ಪ್ರಕಟಣೆ ಹೊರಬಿದ್ದ ದಿನ ಪತ್ರಿಕೆಯ ಮಾಲಕರು ದಿಲ್ಲಿಗೆ ಹೋಗಿದ್ದರು. ಪತ್ರಿಕೆಯ ಮಾಲಕರಿಗೆ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ಸುದ್ದಿಯ ಹೊಣೆಗಾರಿಕೆ ನನ್ನದೇ ಆಗಿತ್ತು. ಆ ಸುದ್ದಿ ನೋಡಿ ಆತ್ಮ ಸಾಕ್ಷಿ ಕಲಕಿತು. ಅಂತೂ ಇಂತೂ ಧೈರ್ಯ ಮಾಡಿ ಪೊಲೀಸ್ ಇಲಾಖೆಯವರು ಕೊಟ್ಟ ಸುದ್ದಿ ಪ್ರಕಟಿಸಿದೆ. ಆ ವಿಷಯ ವ್ಯಕ್ತಿಗತವಾಗಿ ನನಗೆ ಬಹಳ ನೋವನ್ನುಂಟು ಮಾಡಿತ್ತು. ಆತ್ಮ ಸಾಕ್ಷಿಗೂ ಮಿಗಿಲಾದ ಸಿದ್ದಾಂತ ಇನ್ನೊಂದಿಲ್ಲ ಎಂಬ ಸರಳ ಸತ್ಯ ಆರಿತಿದ್ದೆ. ಆ ಸುದ್ದಿಯ ಸಾರಾಂಶ ಇಷ್ಟೇ ಇತ್ತು. ಮದನ್ - ಪ್ರಕಾಶ ಟಾಕೀಸ್ ಬಳಿಯಿರುವ ಕಿರಿದಾದ ರಸ್ತೆಯ ಆ ಪುಟ್ಟ ಗಲ್ಲಿಯ ಅಂಗಡಿ ಮುಂಗಟ್ಟುಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಏಳೆಂಟು ಕಡೆ ಬ್ಲೂ ಫಿಲಂ ಪ್ರದರ್ಶಿಸುವುದನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿ ಅದರ ಯಜಮಾನ ಪದ್ಮಪ್ರಸಾದ್ ಮೇಲೆ ಪ್ರಕರಣ ದಾಖಲಿಸಿದ್ದರು. ಮರುದಿನದ ಎಲ್ಲಾ ಪತ್ರಿಕೆಗಳ ಮೇಲೆ ಕಣ್ಣಾಡಿಸಿದೆ. ಯಾವ ಪತ್ರಿಕೆಯಲ್ಲೂ ಪದ್ಮಪ್ರಸಾದ್ ಅವರ ಇನ್ನೊಂದು ಮುಖ ಪರಿಚಯಿಸುವ ಸುದ್ದಿ ಪ್ರಕಟವಾಗಿರಲಿಲ್ಲ. ಸುದ್ದಿ ಪ್ರಕಟಿಸಿದ ನನಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕಿದರು. ವಿಷಯ ಪತ್ರಿಕೆಯ ಮಾಲಕರಿಗೆ ತಿಳಿಸಿದೆ. ಒಂದು ಸ್ಪಷ್ಟೀಕರಣ ಪ್ರಕಟಿಸಲು ಸೂಚಿಸಿದರು.

ಆಮೇಲೆ ತಿಳಿದುಕೊಳ್ಳುವ ಕುತೂಹಲಕ್ಕೆ ಅವರಿವರ ಬಳಿ ಹೋಗಿ ಕಿವಿಗೊಟ್ಟು ಪದ್ಮಪ್ರಸಾದ್ ಕುರಿತ ಮಾಹಿತಿ ಸಂಗ್ರಹಿಸಿದೆ. ಮತ್ತಷ್ಟು ಭಯಾನಕ ಸತ್ಯಗಳು ಗಮನಕ್ಕೆ ಬಂದವು. ಎಲ್ಲ ರಾಜಕೀಯ ಪಕ್ಷಗಳಿಗೆ ಬೇಕಾಗಿದ್ದ ಪದ್ಮಪ್ರಸಾದ್ ನಗರದ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ವ್ಯಕ್ತಿ ಎಂಬುದು ತಿಳಿಯಿತು. ಮಂತ್ರಿ, ಶಾಸಕರು ಮತ್ತು ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ತಲೆ ಹಿಡಿಯುತ್ತಾನೆ. ಸ್ವತಃ ಹೆಂಡತಿಯ ತಂಗಿಯನ್ನು ಮಂತ್ರಿಯೊಬ್ಬರ ಬಳಿ ಕಳುಹಿಸಿದ್ದನು ಎಂದು ಕೆಲವರು ವೀಕ್ಷಕ ವಿವರಣೆ ನೀಡಿದರು.

ಮಹಾದಾನಿ ಪದ್ಮಪ್ರಸಾದ್ ಅವರ ಹೆಣ್ಣು ಬಾಕತನಕ್ಕೆ ಬೇಸತ್ತು ಪದ್ಮಾವತಿ ಅಮ್ಮನವರು ಮೂರು ಬಾರಿ ಆತ್ಮ ಅತ್ಯೆಗೆ ಯತ್ನಿಸಿದ್ದರು ಎಂಬುದು ಗುಸುಗುಸು, ಪಿಸಿ ಪಿಸಿಯಲ್ಲಿ ತಿಳಿದು ಬಂತು. ಪದ್ಮಪ್ರಸಾದ್ ಅವರ ಇಬ್ಬರು ತಮ್ಮಂದಿರು ಸಾತ್ವಿಕ ಬದುಕು ನಡೆಸುತ್ತಿದ್ದಾರೆ. ಪದ್ಮಾವತಿ ಅಮ್ಮನವರ ಒಳ್ಳೆಯತನವೇ ಆತನನ್ನು ಕಾಪಾಡಿದೆ ಎಂದು ವೇದಾಂತ ಹೇಳಿದರು.ಪದ್ಮಪ್ರಸಾದ್ ಕೊರೋನಾ ಕಾಲದಲ್ಲಿ ಸಾವಿನ ಮನೆ ಪ್ರವೇಶಿಸಿ ಹೊರಬಂದರು. ಹಿರಿಯರು ಮಾಡಿದ ಪುಣ್ಯ ಕಾಪಾಡಿತು ಎಂದು ಕೆಲವರು ವ್ಯಾಖ್ಯಾನಿಸಿದರು. ಕಳೆದ ತಿಂಗಳು ನಾನು ಕಲಬುರಗಿಗೆ ಹೋದಾಗ ಹುಮನಾಬಾದ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಆ ಅಪಘಾತದಲ್ಲಿ ಪದ್ಮಪ್ರಸಾದ್ ತೀವ್ರ ಗಾಯಗೊಂಡಿದ್ದರು. ಅವರನ್ನು ಬದುಕಿಸಲು ಹೈದ್ರಾಬಾದ್ ಆಸ್ಪತ್ರೆಯೊಂದರ ತಜ್ಞ ವೈದ್ಯರು ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹಿರಿಯರ ಪುಣ್ಯವು ನೆರವಿಗೆ ಬರಲಿಲ್ಲ.ಪದ್ಮಪ್ರಸಾದ್ ಅವರ ಸಾವಿನ ಸುದ್ದಿಗಳು ವಿಜೃಂಬಿಸಿದವು.. ಗಣ್ಯರು ಕಂಬನಿ ಮಿಡಿದರು. ಮಹಾದಾನಿಯ ನಿರ್ಗಮನಕ್ಕೆ ಬಂಧು ಬಾಂಧವರು ನಾಲ್ಕು ದಿನ ಶೋಕಿಸಿದರು. ಪದ್ಮಾವತಮ್ಮನವರ ಕಣ್ಣ ಹನಿಗಳು ಬತ್ತಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News

ಕಾವ್ಯ ಸಂಗಮ

ನಾಡೋಜ ಪಂಪ