×
Ad

ಫ್ಯಾಶಿಸಂ ಮತ್ತು ಬುದ್ಧಿಜೀವಿಬರಹಗಾರರು

Update: 2026-02-08 12:34 IST

ವಸಂತ ಬನ್ನಾಡಿ ಬರಹಗಳೆಂದರೆ ವಸಂತ ಕಾಲದ ಹಕ್ಕಿ ಇಂಚರಗಳಲ್ಲ. ಅವುಗಳು ವರ್ತಮಾನದ ಮುಖವಾಡಗಳನ್ನು ಹರಿಯುವ ಕೂರಂಬುಗಳು. ಇವರು ಮೂಲತಃ ಉಡುಪಿ ಜಿಲ್ಲೆಯ ಕೋಟಸ ಮೀಪದ ಬನ್ನಾಡಿಯವರು. ರಂಗಭೂಮಿಯ ಮೂಲಕವೇ ಇವರು ವರ್ತಮಾನಕ್ಕೆ ಸ್ಪಂದಿಸುತ್ತಾ ಬಂದವರು. ನಲ್ವತ್ತಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮೂರು ನಾಟಕಗಳನ್ನು ಅನುವಾದಿಸಿದ್ದಾರೆ. ಐದು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಬೆಕ್ಟ್ ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಸಮಾಜ ವಿಜ್ಞಾನ ಪತ್ರಿಕೆ ‘ಅರಿವು ಬರಹ’ದ ಸಂಪಾದಕರಲ್ಲಿ ಒಬ್ಬರು. ಇವರ ‘ಕಡಲ ಧ್ಯಾನ’ಕ್ಕಾಗಿ ಶಾ. ಬಾಲುರಾವ್ ಟ್ರಸ್ಟ್ ವತಿಯಿಂದ ಬಿಎಂಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪುತಿನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರ ಸಾಧನೆಗೆ ಸಂದಿವೆ. ಕೇಂದ್ರ ಸರಕಾರದ ಸಿಎಎ-ಎನ್‌ಆರ್‌ಸಿಗೆ ಪ್ರತಿರೋಧ ತೋರಿ ನಾಟಕ ಅಕಾಡಮಿ ಪ್ರಶಸ್ತಿಯನ್ನು 2019ರಲ್ಲಿ ಇವರು ಮರಳಿಸಿದ್ದಾರೆ.ಫ್ಯಾಶಿಸಂ ವಿರುದ್ಧದ ಹೋರಾಟದಲ್ಲಿ ಬುದ್ಧಿಜೀವಿ ಬರಹಗಾರರ ಪಾತ್ರದಬಗ್ಗೆ ಇಲ್ಲಿ ಬರೆದಿದ್ದಾರೆ.

ಒಬ್ಬ ಲೇಖಕ ಫ್ಯಾಶಿಸ್ಟ್ ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿರುವ ಒಂದು ಪಕ್ಷದ ಜೊತೆ ನೇರವಾಗಿ ಕಾಣಿಸಿಕೊಳ್ಳಬಹುದೆ? ಅದರ ವಕ್ತಾರರ ಜೊತೆ ವೇದಿಕೆ ಹಂಚಿಕೊಳ್ಳಬಹುದೆ? ಅಂತಹ ಎಲ್ಲ ಲಕ್ಷಣಗಳೂ ಈಚೆಗೆ ಕಾಣಿಸಿಕೊಳ್ಳುತ್ತಿವೆ. ಸಮಯ ಸಂದರ್ಭ ಬಂದಾಗ, ಸಹನೀಯ ಎನಿಸುವ ಪಕ್ಷವೊಂದರಿಂದ ಸ್ಥಾನಮಾನ ಪಡೆಯುವುದು ತಪ್ಪಲ್ಲ ಎಂಬ ವಾತಾವರಣ, ಹೆಚ್ಚಿನ ಅವಕಾಶ ದೊರೆಯುವುದಾದರೆ ಫ್ಯಾಶಿಸ್ಟರ ಜೊತೆಗೆ ಸೇರಿಕೊಳ್ಳುವುದು ತಪ್ಪೇ ಅಲ್ಲ ಎಂಬ ನಿರ್ಲಜ್ಜತನಕ್ಕೆ ದಾರಿ ಮಾಡಿಕೊಟ್ಟಂತಿದೆ. ಬರಹಗಾರನೊಬ್ಬ ಭ್ರಷ್ಟ ಬುದ್ಧಿಜೀವಿಯಾಗಿ ಬದಲಾಗಿರುವ ಬಿಕ್ಕಟ್ಟಿನ ಕಾಲ ಇದು.

ನಮ್ಮಲ್ಲಿ ಬರಹಗಾರರೆಂದರೆ ಕಥೆ, ಕವಿತೆ, ಕಾದಂಬರಿ ಬರೆಯುವವರು. ಇವರನ್ನು ಬುದ್ಧಿಜೀವಿಗಳು ಎನ್ನಬಹುದೆ? ಇಟಲಿಯ ಚಿಂತಕ ಅಂಟೋನಿಯೊ ಗ್ರಾಮ್ಶಿಯ ಪ್ರಕಾರ ಪ್ರತಿಯೊಬ್ಬರೂ ಬುದ್ಧಿಜೀವಿಗಳೇ. ಈ ಅರ್ಥದಲ್ಲಿ ಬರಹಗಾರ ಕೂಡ ಬುದ್ಧಿಜೀವಿಯೇ. ಗ್ರಾಮ್ಶಿ ಮುಂದುವರಿದು ಎರಡು ಬಗೆಯ ಬುದ್ಧಿಜೀವಿಗಳನ್ನು ಗುರುತಿಸುತ್ತಾನೆ. ಜೀವಂತ ಅಥವಾ ಸಾವಯವ ಬುದ್ಧಿಜೀವಿಗಳು ಮತ್ತು ಸಾಂಪ್ರದಾಯಿಕ ಅಥವಾ ಪರಂಪರಾಗತ ಬುದ್ಧಿಜೀವಿಗಳು. ತನ್ನ ತಜ್ಞತೆಯಿಂದ ಬಂಡವಾಳಶಾಹಿಗೆ ಪೂರಕವಾಗಿ ಕೆಲಸ ಮಾಡುತ್ತಲೇ ಅದನ್ನು ಎದುರು ಹಾಕಿಕೊಳ್ಳಲೂ ತಯಾರಿರುವವನು ಜೀವಂತ ಬುದ್ಧಿಜೀವಿ. ಬಂಡವಾಳಶಾಹಿಯ ಏಳಿಗೆಗೆ ದುಡಿಯುವವನಾದ್ದರಿಂದ, ಕ್ರಾಂತಿಕಾರಿ ವರ್ಗ, ತನ್ನ ಪರವಾಗಿ ವರ್ತಿಸಿದರೂ ಆತನನ್ನು ಅನುಮಾನದಿಂದ ನೋಡುತ್ತದೆ. ಇತ್ತ ಬಂಡವಾಳಶಾಹಿ ವರ್ಗ ಕೂಡ ಆತ ಯಾವ ಹೊತ್ತಿಗೂ ತನ್ನ ವಿರುದ್ಧ ತಿರುಗಿ ಬೀಳಬಹುದಾದ್ದರಿಂದ ಅವನನ್ನು ವಿಶ್ವಾಸಾರ್ಹ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ. ಆದ್ದರಿಂದ ಜೀವಂತ ಬುದ್ಧಿಜೀವಿ ಯಾವತ್ತೂ ಒಂಟಿ. ಸಾಂಪ್ರದಾಯಿಕ ಬುದ್ಧಿಜೀವಿಗಳು ತಮ್ಮ ಬಗ್ಗೆಯೇ ತಾವು ಅತೀವ ಹೆಮ್ಮೆ ಹೊಂದಿರುತ್ತಾರೆ. ಸಮಾಜ ಇವರನ್ನು ಗೌರವಿಸುತ್ತದೆ. ಸರಕಾರ ಇವರಿಗೆ ಗಣ್ಯ ಸ್ಥಾನಮಾನ ನೀಡುತ್ತದೆ. ತನ್ನ ಆದರ್ಶ ನಿಲುವು ಮತ್ತು ಸಾಹಿತ್ಯ ಶ್ರೇಷ್ಠತೆಯ ಮೂಲಕ, ಸಮಾಜದಲ್ಲಿ ತಾನೊಂದು ಸ್ಥಾನಮಾನ ಗಳಿಸಿಕೊಂಡಿದ್ದೇನೆ ಎಂದು ಅವನು ಭಾವಿಸುತ್ತಾನೆ. ತನ್ನಿಷ್ಟದಂತೆ ಬರೆಯುವುದರ ಮೂಲಕ, ತಾನು ಸರ್ವತಂತ್ರ ಸ್ವತಂತ್ರ ಎಂದೂ ಆತ ಅಂದುಕೊಳ್ಳುತ್ತಾನೆ. ಕನ್ನಡದ ಬಹುತೇಕ ಬುದ್ಧಿಜೀವಿ ಬರಹಗಾರರನ್ನು ಈ ಗುಂಪಿಗೆ ಸೇರಿಸಬಹುದು. ಅವರು ಸರ್ವತಂತ್ರರು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂಬುದು ಬೇರೆ ವಿಷಯ. ಬೌದ್ಧಿಕ ಚಟುವಟಿಕೆ ಪ್ರತ್ಯೇಕ ಸಂಗತಿ ಏನೂ ಅಲ್ಲವಲ್ಲ. ಬೂರ್ಜ್ವಾ ವರ್ಗದ ಮನ್ನಣೆಗೆ ಹಾತೊರೆಯುವ ಪೆಟ್ಟಿ ಬೂರ್ಜ್ವಾ ಸಂಸ್ಕೃತಿಯ ಭಾಗ ಆತ.

 

ಯಾವುದೇ ಸಾಮಾಜಿಕ, ರಾಜಕೀಯ ತಲ್ಲಣಗಳಿಗೂ ಸ್ಪಂದಿಸದೇ ಇರುವುದಕ್ಕೆ, ಆತನ ವರ್ಗಪ್ರಜ್ಞೆಯೇ ಕಾರಣ. ಕನ್ನಡದ ಬಹುತೇಕ ಬರಹಗಾರರು ಈ ಗುಂಪಿಗೆ ಸೇರಿದವರು. ಯಾವ ಸರಕಾರ ಬಂದರೂ ಏನೇ ತಳಮಳ ಸಂಭವಿಸಿದರೂ ಅವರು ನಿರ್ಲಿಪ್ತರು. ಹೆಚ್ಚೆಂದರೆ ಸಣ್ಣ ಪ್ರತಿರೋಧ ತೋರಿಯಾರು. ಇದೊಂದು ಸಹಜ ದಾರಿ ಎಂಬಂತಾಗಿ ಬಿಟ್ಟಿದೆ. ಇದೀಗ ಮೂರನೆಯ ಬುದ್ಧಿಜೀವಿ ಗುಂಪೊಂದು ಕನ್ನಡದಲ್ಲಿ ಕಾಣಿಸಿಕೊಂಡಿದೆ. ಬಲಪಂಥೀಯ ರಾಜಕಾರಣದ ವಕ್ತಾರರಾಗಿ ಇವರು ಕಾಣಿಸಿಕೊಂಡಿದ್ದಾರೆ. ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಕೂಡ ಯಾವ ನಾಚಿಕೆಯೂ ಇಲ್ಲದೆ ಇವರು ಸಮರ್ಥಿಸಬಲ್ಲರು. ಇವರನ್ನು ಹುಸಿ ಬುದ್ಧ್ದಿ ಜೀವಿಗಳು ಎನ್ನಬಹುದು.

ಒಬ್ಬ ಲೇಖಕ ಫ್ಯಾಶಿಸ್ಟ್ ಗುಣಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿರುವ ಒಂದು ಪಕ್ಷದ ಜೊತೆ ನೇರವಾಗಿ ಕಾಣಿಸಿಕೊಳ್ಳಬಹುದೆ? ಅದರ ವಕ್ತಾರರ ಜೊತೆ ವೇದಿಕೆ ಹಂಚಿಕೊಳ್ಳಬಹುದೆ? ಅಂತಹ ಎಲ್ಲ ಲಕ್ಷಣಗಳೂ ಈಚೆಗೆ ಕಾಣಿಸಿಕೊಳ್ಳುತ್ತಿವೆ. ಸಮಯ ಸಂದರ್ಭ ಬಂದಾಗ, ಸಹನೀಯ ಎನಿಸುವ ಪಕ್ಷವೊಂದರಿಂದ ಸ್ಥಾನಮಾನ ಪಡೆಯುವುದು ತಪ್ಪಲ್ಲ ಎಂಬ ವಾತಾವರಣ, ಹೆಚ್ಚಿನ ಅವಕಾಶ ದೊರೆಯುವುದಾದರೆ ಫ್ಯಾಶಿಸ್ಟರ ಜೊತೆಗೆ ಸೇರಿಕೊಳ್ಳುವುದು ತಪ್ಪೇ ಅಲ್ಲ ಎಂಬ ನಿರ್ಲಜ್ಜತನಕ್ಕೆ ದಾರಿ ಮಾಡಿಕೊಟ್ಟಂತಿದೆ. ಬರಹಗಾರನೊಬ್ಬ ಭ್ರಷ್ಟ ಬುದ್ಧಿಜೀವಿಯಾಗಿ ಬದಲಾಗಿರುವ ಬಿಕ್ಕಟ್ಟಿನ ಕಾಲ ಇದು.

ಇಬ್ಬರು ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಅಂತ್ಯ: ಫ್ಯಾಶಿಸಂ ಅಂದರೆ ಏನು ಎಂದು ತಿಳಿದುಕೊಳ್ಳುವ ಮೊದಲು, ಜಗತ್ತು ಕಂಡ ಇಬ್ಬರು ಕ್ರೂರ ಫ್ಯಾಶಿಸ್ಟ್ ಸರ್ವಾಧಿಕಾರಿಗಳ ಕುರಿತು ತಿಳಿದುಕೊಳ್ಳುವುದು ಒಳ್ಳೆಯದು ಅನಿಸುತ್ತದೆ. ಅವರ ಅಂತ್ಯದೊಂದಿಗೆ ಎರಡನೆಯ ಮಹಾಯುದ್ಧವೂ ಮುಕ್ತಾಯಗೊಂಡದ್ದು ಚರಿತ್ರೆಯ ಮಹಾನ್ ರುದ್ರ ಘಟನೆಗಳಲ್ಲಿ ಒಂದು. ಆ ಇಬ್ಬರು ಫ್ಯಾಶಿಸ್ಟರೆಂದರೆ, ಇಟಲಿಯ ಬೆನಿಟೊ ಮುಸ್ಸೋಲಿನಿ ಮತ್ತು ಜರ್ಮನಿಯ ಅಡಾಲ್ಫ್ ಹಿಟ್ಲರ್.

ಯುದ್ಧದಲ್ಲಿ ತನಗೆ ಸೋಲು ಖಚಿತ ಎಂದು ಅರಿವಾಗುತ್ತಿದ್ದಂತೆ ಮುಸ್ಸೋಲಿನಿ 27 ಎಪ್ರಿಲ್ 1945 ರಂದು ಮಡದಿ ಕ್ಲಾರಾ ಜೊತೆಗೆ ಸ್ವಿಟ್ಸರ್‌ಲ್ಯಾಂಡ್ ಗೆ ಪರಾರಿಯಾಗಲು ಪ್ರಯತ್ನಿಸಿದ. ಹೋರಾಟಗಾರರ ಗುಂಡಿಗೆ ಬಲಿಯಾದ. ಅಷ್ಟಕ್ಕೇ ಮುಗಿಯಲಿಲ್ಲ. ರೊಚ್ಚಿಗೆದ್ದ ಜನರು ಆತನ ಶವದ ಮೇಲೆರಗಿದರು. ಮನಬಂದಂತೆ ಥಳಿಸಿದರು. ಕಾಲಿನಿಂದ ತುಳಿದರು. ತಲೆಯನ್ನು ವಿರೂಪಗೊಳಿಸಿದರು. ಇಬ್ಬರ ಶವಗಳನ್ನೂ ಮಿಲಾನ್ ನಗರದ ಚೌಕಿಯಲ್ಲಿ ತಲೆಕೆಳಗಾಗಿ ನೇತುಹಾಕಲಾಯಿತು.

 

ಹೋರಾಟವನ್ನು ಹತ್ತಿಕ್ಕಲು ಮುಸ್ಸೋಲಿನಿ ಅದೇ ಚೌಕದಲ್ಲಿ ಕೆಲವೇ ತಿಂಗಳುಗಳ ಹಿಂದೆ ಹದಿನೈದು ಮಂದಿಯನ್ನು ಗುಂಡಿಕ್ಕಿ ಕೊಂದು ನೇತುಹಾಕಿದ್ದು ಹೀಗೆ ಕ್ರೂರವಾಗಿ ಸೇಡು ತೀರಿಸಿಕೊಳ್ಳಲು ಕಾರಣವಾಗಿತ್ತು. ನೇತಾಡುತ್ತಿದ್ದ ಶವಗಳ ಮೇಲೆ ಕಲ್ಲು ತೂರುವುದನ್ನು ಜನ ನಿಲ್ಲಿಸಲೇ ಇಲ್ಲ. ಮುಸ್ಸೋಲಿನಿಯ ಇಂಥದೊಂದು ಭೀಕರ ಅಂತ್ಯದ ಸುದ್ದಿ ತಿಳಿದ ಹಿಟ್ಲರ್, ಜೀವಂತ ಸೆರೆ ಸಿಕ್ಕಿದರೆ ತನಗೂ ಅದೇ ಗತಿ ಕಾದಿದೆ ಎಂದು ತಿಳಿದು, ಅಡಗಿಕೊಂಡಿದ್ದ ಬಂಕರಿನೊಳಗೆ ತಲೆಗೆ ಗುಂಡು ಹೊಡೆದುಕೊಂಡು ಸತ್ತ.ಮುಸ್ಸೋಲಿನಿ ಸತ್ತ ಎರಡು ದಿನಗಳಲ್ಲಿಯೇ ಹಿಟ್ಲರ್‌ನ ಅಂತ್ಯವೂ ಆಗಿತ್ತು.

ಜನತೆಯ ಸ್ವಾತಂತ್ರ್ಯವನ್ನು ಕಸಿದುಕೊಂಡು ತಮಗಾಗದವರ ಹತ್ಯೆಗೆ ಕಾರಣರಾದ ಮುಸ್ಸೋಲಿನಿ ಮತ್ತು ಹಿಟ್ಲರ್ ಅಂತ್ಯದೊಂದಿಗೆ ಫ್ಯಾಶಿಸಂ ನ ಅಂತ್ಯ ಆಗಿದೆಯೇ ಎಂದರೆ ಖಂಡಿತ ಇಲ್ಲ. ಹಲವಾರು ದೇಶಗಳಲ್ಲಿ ಅದು ಹಲವು ರೂಪಗಳಲ್ಲಿ ಇವತ್ತಿಗೂ ಜೀವಂತವಿದೆ.

ಇಲ್ಲಿ ಗಮನಿಸಬೇಕಾದ ಬಹಳ ಮುಖ್ಯ ಅಂಶವೆಂದರೆ, ಬಹಳಷ್ಟು ಜನ ಮುಸ್ಸೋಲಿನಿ ಮತ್ತು ಹಿಟ್ಲರ್ ನಿರಂಕುಶ ಅಧಿಕಾರವನ್ನು ತಮ್ಮ ಮೇಲೆ ಹೇರಿದ್ದರು ಎಂದು ಅಂದುಕೊಂಡಿರಲೇ ಇಲ್ಲ. ಅವರ ಅರಾಧಕರಾಗಿದ್ದರು ಬೇರೆ. ಹಿಟ್ಲರ್‌ನ ಸಭೆಗಳಿಗೆ ಸೇರುತ್ತಿದ್ದ ಲಕ್ಷಾಂತರ ಜನರು ಮತ್ತು ಅವರ ಉನ್ಮಾದಕ್ಕಿಂತ ಬೇರೆ ಸಾಕ್ಷಿ ಬೇಕೆ? ಫ್ಯಾಶಿಸಂ ಅನ್ನು ಎದುರಿಸುವಲ್ಲಿನ ಬಹುದೊಡ್ಡ ಸವಾಲು ಇದು.

ಏನಿದು ಫ್ಯಾಶಿಸಂ?: ಫ್ಯಾಶಿಸ್ಟ್ ಪ್ರಭುತ್ವ ಮತ್ತು ಫ್ಯಾಶಿಸಂ ಎಂಬ ಪದಪ್ರಯೋಗಳನ್ನು ಈಚಿನ ವರ್ಷಗಳಲ್ಲಿ ನಾವು ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದೇವೆ. ಉದಾಹರಣೆಗೆ, ಭಾರತ ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ಫ್ಯಾಶಿಸಂ ಗುಣಲಕ್ಷಣಗಳನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಿರುವ ಪ್ರಭುತ್ವವಾಗಿ ಬೆಳೆಯುತ್ತಿದೆ ಎಂಬ ಮಾತು ಸರ್ವತ್ರ ಕೇಳಿ ಬರುತ್ತಿದೆ. ಇದು ನಿಜ ಕೂಡ.

ಆದರೆ ಹಾಗೆ ಹೇಳುವ ನಮಗೆ, ಫ್ಯಾಶಿಸಂ ಅಂದರೆ ಏನು, ಅದರ ಮೂಲ ಯಾವುದು ಎಂಬುದರ ಸ್ಪಷ್ಟ ಅರಿವಿರುವ ಹಾಗಿಲ್ಲ.ಹಾಗೆ ನೋಡಿದರೆ, ಫ್ಯಾಶಿಸಂ ಒಂದೊಂದು ದೇಶದಲ್ಲಿಯೂ ಬೇರೆ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುವುದರಿಂದ ಅದನ್ನು ಸ್ಪಷ್ಟವಾಗಿ ವ್ಯಾಖ್ಯಾನಕ್ಕೆ ಒಳಪಡಿಸಲು ಸಾಧ್ಯವಾಗುತ್ತಿಲ್ಲ.

ಕನ್ನಡದಲ್ಲಿ ಫ್ಯಾಶಿಸಂ ಗೆ ಸರಿಯಾದ ಪರ್ಯಾಯ ಪದ ಇಲ್ಲ. ಆದುದರಿಂದ ಸದ್ಯ ಅದನ್ನು ಫ್ಯಾಶಿಸಂ ಎಂದೇ ಕರೆಯಬಹುದು ಮತ್ತು ಅದರ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು.

ಫ್ಯಾಶಿಸಂ ಪದವನ್ನು ಮೊದಲು ಪ್ರಯೋಗಿಸಿದವನು ಇಟಲಿಯ ಬೆನಿಟೊ ಮುಸ್ಸೋಲಿನಿ. 1919 ರಲ್ಲಿ ಆತ ತಾನು ಕಟ್ಟಿದ ರಾಜಕೀಯ ಚಳವಳಿಗೆ ಫ್ಯಾಶಿಸಂ ಎಂದು ಕರೆದ. ರೋಮ್ ಸಾಮ್ರಾಜ್ಯದ ಶಕ್ತಿಯನ್ನು ಸೂಚಿಸುತ್ತಿದ್ದ ‘ಫ್ಯಾಶಿಸ್’ ಅನ್ನು ತನ್ನ ಸಂಕೇತವಾಗಿ ಅಳವಡಿಸಿಕೊಂಡ. ಈ ಸಂಕೇತ ಕಬ್ಬಿಣದ ಸರಳನ್ನು ಸುತ್ತಿದ ಕೊಡಲಿಯನ್ನು ಒಳಗೊಂಡಿತ್ತು. ಒಂದು ಕಬ್ಬಿಣದ ಸರಳನ್ನಾದರೆ ಸುಲಭದಲ್ಲಿ ಮುರಿಯಬಹುದು. ಆದರೆ ಹಲವು ಸರಳುಗಳನ್ನು ಒಟ್ಟಾಗಿ ಬಿಗಿದರೆ, ಅದನ್ನು ಮುರಿಯುವುದು ಕಷ್ಟ ಎಂಬ ತತ್ವವನ್ನು ಹೊರಡಿಸುತ್ತಿದ್ದ ಸಂಕೇತ ಇದು. ಅಂದರೆ ಬಲಿಷ್ಠತೆಗೆ ಒತ್ತು ಕೊಡುವಂಥದ್ದು. ಸರಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವ ಮೂಲಕ ಅದನ್ನು ಬಲಿಷ್ಠ ವ್ಯವಸ್ಥೆಯಾಗಿ ಬೆಳೆಸಬೇಕು ಎಂಬುದನ್ನು ಸಮರ್ಥಿಸುವ ಈ ಸಿದ್ಧಾಂತವನ್ನು ಮುಸ್ಸೋಲಿನಿ ಅಳವಡಿಸಿಕೊಂಡಿದ್ದ.

ಮುಸ್ಸೋಲಿನಿ ಬಳಿಕ ಅನೇಕ ದೇಶಗಳು: ಫ್ಯಾಶಿಸ್ಟ್ ಪ್ರಭುತ್ವವನ್ನು ಸ್ಥಾಪಿಸುವ ದಾರಿ ಹಿಡಿದವು. ಅವುಗಳಲ್ಲಿ ಅತಿ ಹೇಯವಾದದ್ದು ಮುಸ್ಸೋಲಿನಿಯ ಅಭಿಮಾನಿಯಾಗಿದ್ದ ಅಡಾಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಸ್ಥಾಪಿಸಿದ ನಾಝಿ ಫ್ಯಾಶಿಸ್ಟ್ ಪ್ರಭುತ್ವ. ಫ್ಯಾಶಿಸಂ ಕಂಡುಕೊಂಡ ಅತಿರೇಕದ ಮತ್ತು ಅತ್ಯಂತ ಕುರೂಪದ ವ್ಯವಸ್ಥೆ ನಾಝಿಸಂ. ಪ್ರಭುತ್ವದ ಸಂಪೂರ್ಣ ನಿಯಂತ್ರಣ ಮತ್ತು ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿದ್ದ ಫ್ಯಾಶಿಸಂ ಗೆ ಜನಾಂಗೀಯ ಶ್ರೇಷ್ಠತೆಯ ಘಾತಕ ಮತ್ತು ಮೊನಚನ್ನು ಅಳವಡಿಸಿಕೊಂಡ ಹಿಟ್ಲರ್‌ನ ನಾಝಿಸಂ, ಅಂತಿಮವಾಗಿ ಅರುವತ್ತು ಲಕ್ಷ ಯಹೂದಿಗಳ ಮಾರಣ ನರಮೇಧಕ್ಕೆ ಸಾಕ್ಷಿಯಾಯಿತು.

ಫ್ಯಾಶಿಸಂನತ್ತ ಹೆಜ್ಜೆ ಹಾಕುವ ಮೊದಲು ಮುಸ್ಸೋಲಿನಿ ಇಟಲಿಯ ಸೋಷಿಯಲಿಸ್ಟ್ ಪಾರ್ಟಿಯ ಕ್ರಾಂತಿಕಾರಿ ಎಡಪಂಥೀಯ ಬಣದ ನಾಯಕನಾಗಿದ್ದ ಎಂಬುದು ಆಶ್ಚರ್ಯ ಹುಟ್ಟಿಸುವ ವಿಷಯ. ಈ ಕ್ರಾಂತಿಕಾರಿ ಎಡಪಂಥೀಯ ಬಣ ಇಟಲಿಯ ಸೋಸೋಷಿಯಲಿಸ್ಟ್ ಪಾರ್ಟಿಯ ಒಳಗೆ ಇದ್ದ, ಲಿಬರಲ್ ಪಕ್ಷಗಳ ಜೊತೆಗೆ ವಿಷಯಾಧಾರಿತ ಹೊಂದಾಣಿಕೆಯನ್ನು ಮಾಡಿಕೊಳ್ಳುವುದರಲ್ಲಿ ನಂಬಿಕೆ ಹೊಂದಿದ್ದ ಸುಧಾರಣಾವಾದಿ ಬಣದ ನಿಲುವನ್ನು ವಿರೋಧಿಸುತ್ತಿದ್ದ ಬಣವಾಗಿತ್ತು. ಈ ಸಂದರ್ಭದಲ್ಲಿ ಮಾರ್ಕ್ಸ್ ವಾದಕ್ಕೆ ಹೊಸ ವ್ಯಾಖ್ಯಾನವನ್ನೇ ನೀಡಿದ ಗ್ರಾಮ್ಶಿ ಮತ್ತು ಮುಸ್ಸೋಲಿನಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು.1915 ರ ಹೊತ್ತಿಗೆ ಸೋಷಿಯಲಿಸ್ಟ್ ಪಾರ್ಟಿಯ ಮುಖವಾಣಿಯಾಗಿದ್ದ ‘ಅವಂತಿ’ ಯ ಸಂಪಾದಕನಾಗಿ ಮುಸ್ಸೋಲಿನಿ ಕೆಲಸ ಮಾಡುತ್ತಿದ್ದರೆ,ಗ್ರಾಮ್ಶಿ ಅದೇ ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆಯ ಲೇಖನಗಳನ್ನು ಬರೆಯುತ್ತಿದ್ದ. ಮೊದಲ ಮಹಾಯುದ್ಧದ ವೇಳೆಗೆ, ಮುಸ್ಸೋಲಿನಿಸಮಾಜವಾದದಿಂದ ಕಳಚಿಕೊಂಡು ಫ್ಯಾಶಿಸ್ಟ್ ಆಗಿ ಪರಿವರ್ತನೆಗೊಂಡ. 1928 ರಲ್ಲಿ ಪ್ರಜಾಪ್ರಭುತ್ವವನ್ನು ವಿಸರ್ಜಿಸಿ ಫ್ಯಾಶಿಸ್ಟ್ ಸರ್ವಾಧಿಕಾರವನ್ನು ಸ್ಥಾಪಿಸಿದ.

ಫ್ಯಾಶಿಸಂನ ಚಹರೆಗಳನ್ನು ಗುರುತಿಸುವುದು ಹೇಗೆ?: ಫ್ಯಾಶಿಸಂ ಧುತ್ತನೆ ಆವರಿಸುವುದಿಲ್ಲ. ಸುಲಭದಲ್ಲಿ ಕಾಣುವಷ್ಟು ದೃಗ್ಗೋಚರವೂ ಅಲ್ಲ. ಪ್ರಜಾಪ್ರಭುತ್ವದ ಒಳಗೇ ಅದನ್ನು ನಿಧಾನವಾಗಿ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ.

ಮೇಲು ನೋಟಕ್ಕೆ ಎಲ್ಲವೂ ಸಹಜವಾಗಿಯೇ ಇವೆ ಅನಿಸಿಬಿಡುತ್ತವೆ.ಫ್ಯಾಶಿಸಂ ನ ಹರಡುವಿಕೆಯನ್ನು ಈ ಕೆಳಗಿನ ಚಹರೆಗಳಲ್ಲಿ ಗುರುತಿಸಬಹುದು - ಸರ್ವಾಧಿಕಾರಿ ಪ್ರಭುತ್ವವನ್ನು ಗತವೈಭವ ಮತ್ತು ಧರ್ಮದ ಶ್ರೇಷ್ಠ ಮೌಲ್ಯಗಳ ಆಧಾರದಲ್ಲಿ ಕಟ್ಟಬೇಕು ಎಂದು ನಂಬಿಸಲಾಗುತ್ತದೆ. ಅಂತಹ ಪ್ರಭುತ್ವ ನಿರೂಪಿಸುವ ಸಮಾಜ, ಸಂಸ್ಕೃತಿ, ನೈತಿಕತೆಗಳಿಗೆ ಎಲ್ಲ ಪ್ರಜೆಗಳು ತಲೆಬಾಗಬೇಕು ಎಂದು ವಿಧಿಸಲಾಗುತ್ತದೆ. ಇಂತಹ ಸರ್ವವ್ಯಾಪಿ ಪ್ರಭುತ್ವವನ್ನು ಕಟ್ಟಲು ಒಬ್ಬ ದೈವೀಶಕ್ತಿಯುಳ್ಳ ನಾಯಕ ಮತ್ತು ಅವನ ಆಜ್ಞೆಯನ್ನು ವಿಧೇಯವಾಗಿ ಜಾರಿಗೊಳಿಸುವ ರಾಷ್ಟ್ರಪ್ರೇಮಿ ಸಂಘಟನೆಗಳು ತೀರಾ ಅವಶ್ಯಕ ಎಂದು ಸಾರಲಾಗುತ್ತದೆ. ಈ ಅಂಶಗಳನ್ನು ಭಾರತದ ಇಂದಿನ ಸನ್ನಿವೇಶದ ಜೊತೆ ಹೋಲಿಸಿ ನೋಡಿದರೆ, ಎಲ್ಲವೂ ಸ್ವಯಂ ಸ್ಪಷ್ಟವಿದೆ.

ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ: ಸರ್ವಾಧಿಕಾರಕ್ಕೆ ಸಮ್ಮತಿಯನ್ನು ಹುಟ್ಟು ಹಾಕಲು ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತದೆ. ಸಮೂಹ ಮಾಧ್ಯಮಗಳನ್ನು ಸಂಪೂರ್ಣವಾಗಿ ಪ್ರಭುತ್ವದ ಆರಾಧನೆಯಲ್ಲಿ ತೊಡಗಿಸಲಾಗುತ್ತದೆ.ದಿನದ ಇಪ್ಪತ್ತನಾಲ್ಕು ಗಂಟೆಯೂ ಸುಳ್ಳುಗಳನ್ನು ಪುನರುಚ್ಚರಿಸಲಾಗುತ್ತದೆ. ದಿನಪತ್ರಿಕೆಗಳನ್ನು ಸರಕಾರದ ಮುಖವಾಣಿಗಳನ್ನಾಗಿಸಲಾಗುತ್ತದೆ.

ಭ್ರಷ್ಟಾಚಾರ ಬಹಳ ಸಹಜವಾದುದು ಎಂಬಂತೆ ನಂಬಿಸಲಾಗುತ್ತದೆ. ಚರಿತ್ರೆಯನ್ನು ಪುನರ‌್ರಚಿಸುವ ಪ್ರಯತ್ನ ಸತತವಾಗಿ ನಡೆಯುತ್ತದೆ. ತರಗತಿಯ ಪಠ್ಯಗಳನ್ನು ತಿದ್ದಲಾಗುತ್ತದೆ. ರಾಜಕೀಯ ಹಿಂಸೆಯನ್ನು ಸಹಜವಾಗಿಸಲಾಗುತ್ತದೆ.ಕ್ರಿಮಿನಲ್ ಅನುಯಾಯಿಗಳನ್ನು ಕ್ಷಮಿಸಲಾಗುತ್ತದೆ. ಗುಪ್ತಚರ ಪೊಲೀಸ್ ಪಡೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಚುನಾವಣಾ ಫಲಿತಾಂಶಗಳನ್ನು ತಿರುಚಲಾಗುತ್ತದೆ. ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತದೆ.

ಕೋರ್ಟುಗಳು ಪ್ರಭುತ್ವದ ಆಣತಿಯ ಪ್ರಕಾರ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಅಲ್ಪಸಂಖ್ಯಾತರನ್ನು ದೇಶದ ವೈರಿಗಳು ಎಂದು ಬಿಂಬಿಸಲಾಗುತ್ತದೆ. ಅವರ ಕುರಿತು ಅಸಹನೆ ಎಲ್ಲೆಲ್ಲೂ ಹಬ್ಬುವಂತೆ ಮಾಡಲಾಗುತ್ತದೆ.ಕೋಮು ಗಲಭೆಗಳು ನಡೆಯುವಂತೆ ಪ್ರಚೋದಿಸಲಾಗುತ್ತದೆ.ಪ್ರಜೆಗಳನ್ನು ಹತ್ತಿಕ್ಕಲು ಮಿಲಿಟರಿಯನ್ನು ಉಪಯೋಗಿಸಲಾಗುತ್ತದೆ. ಅಮಾಯಕರನ್ನು ಪ್ರಭುತ್ವದ ಹಿಂಸೆಗೆ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಭಯದ ಹರಡುವಿಕೆ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸಲಾಗುತ್ತದೆ. ವಿಜ್ಞಾನವನ್ನು ಐಡಿಯಾಲಜಿ ಮೂಲಕ ಬದಿಗೆ ಸೇರಿಸಲಾಗುತ್ತದೆ. ಇದನ್ನೆಲ್ಲಾ ಬಿಡಿಬಿಡಿಯಾಗಿ ನೋಡುವ ದೇಶದ ಪ್ರಜೆಗಳಿಗೆ ಎಲ್ಲವೂ ಸಹಜವೆನಿಸಿ ಬಿಡುತ್ತದೆ. ಈಗ ಭಾರತದಲ್ಲಿ ಆಗುತ್ತಿರುವ ಹಾಗೆ. ಇದರಿಂದಾಗಿ, ದೇಶ ಚೆನ್ನಾಗಿ ನಡೆಯುತ್ತಿದೆ ಎಂಬ ಭ್ರಮೆ ಹಬ್ಬತೊಡಗುತ್ತದೆ. ಕಾಲಕಾಲಕ್ಕೆ ಚುನಾವಣೆ ನಡೆಯುತ್ತಿರುವ ಪ್ರಜಾಪ್ರಭುತ್ವ ದೇಶ ತಮ್ಮದು ಎಂದು ಜನ ಬೀಗುತ್ತಿರುತ್ತಾರೆ.ಆದರೆ ಚುನಾವಣೆಯಲ್ಲಿ ಭಾರೀ ಬಹುಮತ ಬರಲು ಫ್ಯಾಶಿಸ್ಟರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂಬುದು ಪ್ರಜೆಗಳ ಗಮನಕ್ಕೇ ಬರುವುದಿಲ್ಲ. ಅಂತಹ ಭಾರೀ ಬಹುಮತ ಬಂದ ಮೇಲೆಯೇ ಮುಸ್ಸೋಲಿನಿಸರ್ವಾಧಿಕಾರವನ್ನು ಸ್ಥಾಪಿಸಿದ್ದು.

ಫ್ಯಾಶಿಸಂ ನ ಆರ್ಥಿಕ ತಳಹದಿ: ಭಾರೀ ಬಂಡವಾಳಶಾಹಿ, ಗ್ರಾಮೀಣ ಶ್ರೀಮಂತರು ಮತ್ತು ನಗರದ ಮಧ್ಯಮ ವರ್ಗ, ಇವುಗಳ ನಡುವೆ ಒಗ್ಗಟ್ಟು ಸ್ಥಾಪಿಸಲು ಫ್ಯಾಶಿಸಂ ಪ್ರಯತ್ನಿಸುತ್ತದೆ.ಇವುಗಳಿಗೆ ಆರ್ಥಿಕ ತಳಹದಿಯನ್ನು ಒದಗಿಸುತ್ತದೆ. ನಗರಗಳ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಕಾರ್ಮಿಕ ವರ್ಗಗಳಿಂದ ಬಂದ ಜನರ ಸಂಘಟಿತ ಪಡೆಯನ್ನು ಕಟ್ಟುತ್ತದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಸರಕಾರಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುತ್ತದೆ. ಅಧಿಕಾರಕ್ಕೆ ಬರುವ ಮೊದಲು ಜನಮರುಳು ಘೋಷಣೆಗಳನ್ನು ಕೂಗುತ್ತಾ ಅಧಿಕಾರಕ್ಕೆ ಬಂದಮೇಲೆ ಬಂಡವಾಳಶಾಹಿ ಜೊತೆ ಶಾಮೀಲಾಗುತ್ತದೆ. ಪ್ರಜಾಪ್ರಭುತ್ವವನ್ನು ನಾಶಪಡಿಸಿ ಸರ್ವಾಧಿಕಾರದ ಪ್ರಭುತ್ವವನ್ನು ಜನತೆಯ ಮೇಲೆ ಹೇರುತ್ತದೆ.

ಮೇಲಿನ ಅಂಶಗಳನ್ನು ಇಂದಿನ ಭಾರತೀಯ ಸಂದರ್ಭದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಭಾರತದ ಇಂದಿನ ಪ್ರಭುತ್ವ ಬಂಡವಾಳಶಾಹಿಯ ಹಿತ ಕಾಯುವುದನ್ನೇ ತನ್ನ ಪ್ರಮುಖ ಗುರಿಯಾಗಿಸಿಕೊಂಡಿದೆ.ಹಳ್ಳಿಗಳಲ್ಲಿ ಫ್ಯೂಡಲ್ ವ್ಯವಸ್ಥೆ ಇನ್ನೂ ಜೀವಂತವಾಗಿದ್ದು,ಬಹು ಸಂಖ್ಯಾತ ಶ್ರೀಮಂತರು ಪ್ರಭುತ್ವದ ಜೊತೆಗಿದ್ದಾರೆ.ನಗರಗಳ ಅಕ್ಷರಸ್ಥ ಮಾಧ್ಯಮ ವರ್ಗಕ್ಕೆ ಫ್ಯಾಶಿಸಂ ಅಂದರೆ ಏನೆಂದೇ ಗೊತ್ತಿಲ್ಲ. ತಿಳಿದುಕೊಳ್ಳುವ ಆಸಕ್ತಿಯೂ ಇಲ್ಲ. ಅಂತಿಮವಾಗಿ ಅವರು ನಿಲ್ಲುವುದು ಫ್ಯಾಶಿಸ್ಟ್ ಶಕ್ತಿಗಳ ಜೊತೆಗೇ.

ಮಧ್ಯಮ ವರ್ಗ,ಕೆಳಮಧ್ಯಮ ವರ್ಗದ ಜೊತೆಗೆ ಕಾರ್ಮಿಕ ವರ್ಗವನ್ನೂ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಫ್ಯಾಶಿಸಂ ಪ್ರಯತ್ನಿಸುತ್ತದೆ. ಈ ವರ್ಗಗಳನ್ನು ಒಳಗೊಳ್ಳುತ್ತಿರುವ ಇಲ್ಲಿನ ಆರೆಸ್ಸೆಸ್ ಎಂಬುದು ಮುಸ್ಸೋಲಿನಿ ಕಟ್ಟಿದ ಬ್ಲಾ ್ಯಕ್ ಶರ್ಟ್ ಪಡೆಯನ್ನು ನೇರವಾಗಿ ಹೋಲುತ್ತದೆ ಎಂಬುದನ್ನು ಗಮನಿಸಬೇಕು.ಬ್ಲಾ ್ಯಕ್ ಶರ್ಟ್ ಪಡೆಯಲ್ಲಿ ಇದ್ದುದೂ ಆ ಕಾಲದ ಇಟಲಿಯ ಬಡ ಯುವಕರೇ.ಮುಸ್ಸೋಲಿನಿ ಅಧಿಕಾರಕ್ಕೆ ಬರಲು ಕಾರಣರಾದವರೇ ಈ ಬ್ಲಾ ್ಯಕ್ ಶರ್ಟ್ ಎಂಬ ಆರೆ ಸೈನಿಕ ಪಡೆ.

ಫ್ಯಾಶಿಸಂ ನ ಬೆಳವಣಿಗೆಗೆ ಬಡವರು ಸೇರಿದಂತೆ ಸಾಮಾನ್ಯ ಪ್ರಜೆಗಳ ಒಪ್ಪಿಗೆ ಪಡೆವ ಈ ವಿಚಿತ್ರ ವಿದ್ಯಮಾನವನ್ನು ಮೊದಲು ಗುರುತಿಸಿದವನೆಂದರೆ ಗ್ರಾಮ್ಶಿ. ಪ್ರಭುತ್ವದ ಯಜಮಾನಿಕೆಯನ್ನು ಒಮ್ಮೆ ಪ್ರಜೆಗಳು ಕಣ್ಣುಮುಚ್ಚಿ ಒಪ್ಪಿಕೊಂಡರೆ ಫ್ಯಾಶಿಸಂ ಸ್ಥಾಪನೆ ತೀರಾ ಸುಲಭವಾಗಿ ಬಿಡುತ್ತದೆ ಎಂದು ಅವನು ಹೇಳಿದ.ಪ್ರಸ್ತುತ ಭಾರತದಲ್ಲಿ ಆಗುತ್ತಿರುವುದೂ ಅದೇ.

ಭಾರತದ ಮಟ್ಟಿಗೆ ಈ ವಿದ್ಯಮಾನ 1990ರಿಂದ ಶುರುವಾಯಿತು. ಕಳೆದ ಹತ್ತು ವರ್ಷಗಳಿಂದ ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಗುಜರಾತ್ ಹಿಂಸಾಕಾಂಡ ಮತ್ತು ರಾಮ ಜನ್ಮ ಭೂಮಿ ಚಳವಳಿ ಜನಸಾಮಾನ್ಯರನ್ನು ಒಳಗೊಂಡ ರೀತಿಯಲ್ಲಿ ಇದನ್ನು ನೋಡಬಹುದು.

ಜೊತೆಗೆ ಖಾಸಗೀಕರಣ ಮತ್ತು ಉದಾರೀಕರಣಗಳು ಸ್ವರ್ಗವನ್ನೇ ಭೂಮಿಗೆ ತರಲಿವೆ ಎಂಬ ಭ್ರಮೆಯನ್ನು ಯುವಕರಲ್ಲಿ ಸಾರ್ವತ್ರಿಕವಾಗಿ ಹರಡಲಾಗಿದೆ.

ಬುದ್ಧಿಜೀವಿಗಳು ಏನು ಮಾಡಬಹುದು?: ಅತ್ಯಂತ ನಿರಾಶಾದಾಯಕ ಸನ್ನಿವೇಶ ಇದು.ಇಂತಹ ಸನ್ನಿವೇಶದಲ್ಲಿ ನಾವೆಲ್ಲರೂ ಸೂಕ್ಷ್ಮಜ್ಞರಾಗಿರಬೇಕು ಎಂದು ಹೇಳುವುದು ಬಹಳ ಸುಲಭ. ಹಾಗೆ ನೋಡಿದರೆ ಮುಸ್ಸೋಲಿನಿ ಮತ್ತು ಹಿಟ್ಲರ್ ಸೂಕ್ಷ್ಮಜ್ಞರೇ ಆಗಿದ್ದರು. ಆರಂಭದಲ್ಲಿ ಹೇಳಿರುವಂತೆ, ಮುಸ್ಸೋಲಿನಿ ಸೋಷಿಯಲಿಸ್ಟ್ ಪಕ್ಷದ ನಾಯಕನಾಗಿದ್ದ. ಗ್ರಾಮ್ಶಿಯ ಜೊತೆಗಿದ್ದ. ಹೇಗೆ ಬದಲಾಗಿ ಬಿಟ್ಟ! ಹಿಟ್ಲರ್ ಕೂಡ ಒಬ್ಬ ವರ್ಣ ಚಿತ್ರ ಕಲಾವಿದನಾಗಿದ್ದ.

ಬಿಥೋವನ್ ಸಂಗೀತ ಕೇಳುತ್ತಾ ಕಣ್ಣೀರು ಹಾಕುತ್ತಿದ್ದ. ಫ್ಯಾಶಿಸ್ಟರು ಕೂಡ ಆರ್ಥಿಕ, ಸಾಮಾಜಿಕ ಸಂದರ್ಭದ ಉತ್ಪನ್ನಗಳೇ ಸರಿ. ನಾಝಿ ವ್ಯವಸ್ಥೆ ಕೂಡ,ಅಂದಿನ ಚಾರಿತ್ರಿಕ ಘಟ್ಟದಲ್ಲಿ ಜರ್ಮನ್ ಬಂಡವಾಳಶಾಹಿ ವ್ಯವಸ್ಥೆ ಎದುರಿಸಿದ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಲು ಪ್ರಭುತ್ವ ನಿಯಂತ್ರಣವನ್ನು ಅನುಸರಿಸಿತು ಎಂಬ ಮಾತಿದೆ. ಈಗ ತಿರುಗಿ ನೋಡಿದರೆ, ಅವರ ಹೀನಾಯ ಅಂತ್ಯದ ಬಗ್ಗೆ ಸಂಭ್ರಮ ಪಡುವಂಥದ್ದೇನೂ ಇಲ್ಲ. ಈಗಿನ ಮುಖ್ಯವಾದ ಪ್ರಶ್ನೆಯೆಂದರೆ, ಫ್ಯಾಶಿಸಂ ಅನ್ನು ತಡೆಯುವುದು ಹೇಗೆ ಎಂಬುದು.

ಇದು ಅತ್ಯಂತ ನಿರಾಶೆಯ ಕಾಲ. ಚಾರಿತ್ರಿಕ ಬಿಕ್ಕಟ್ಟಿನ ಕಾಲ.ಫ್ಯಾಶಿಸಂ ಜನರ ಬೆಂಬಲವನ್ನು ವೇಗವಾಗಿ ಗಳಿಸಿಕೊಳ್ಳುತ್ತಿದೆ.ಮಾಧ್ಯಮಗಳು ಮತ್ತು ಹುಸಿ ಬುದ್ಧಿಜೀವಿ ಬರಹಗಾರರು ಆಗಲೇ ಗೆರೆಯ ಆಚೆ ಬದಿ ಹೋಗಿಬಿಟ್ಟಿದ್ದಾರೆ.

ಎಲ್ಲ ಬಗೆಯ ಫ್ಯಾಶಿಸ್ಟ್ ಶಕ್ತಿಗಳಿಗೆ ತಮ್ಮನ್ನು ತಾವು ಮಾರಿಕೊಂಡು ಬಿಟ್ಟಿದ್ದಾರೆ.ಉಳಿದಂತೆ,ಅಳಿದುಳಿದ ಸಾಂಪ್ರದಾಯಿಕ ಬುದ್ಧಿಜೀವಿಗಳು ವ್ಯಕ್ತಿವಾದದ ಹೆಸರಿನಲ್ಲಿ ಪ್ರಭುತ್ವ ನೀಡುವ ಸಣ್ಣಪುಟ್ಟ ಆಮಿಷಗಳಿಗೆ

ಸುಲಭದಲ್ಲಿ ಬಲಿಯಾಗುತ್ತಿದ್ದಾರೆ. ಬುದ್ಧಿಜೀವಿ ಬರಹಗಾರರ ಮಾತು ಹಾಗಿರಲಿ.ಸಮಾಜವಾದಿ ಪಕ್ಷಗಳ ಪತನ ಸಣ್ಣದೇನಲ್ಲ.ಬಂಡವಾಳದ ಸಮರ್ಥ ನಿರ್ವಹಣೆಯೇ ತಮ್ಮ ಗುರಿ ಎಂದು ಯೋಚಿಸಿದ ದಿನದಿಂದಲೇ ಸಮಾಜವಾದಿಗಳು, ಬಲಪಂಥೀಯ ಶಕ್ತಿಗಳ ವಶವರ್ತಿಯಾಗಿಬಿಟ್ಟಿದ್ದರು.

ಅದರ ಪರಿಣಾಮವಾಗಿಯೇ ಆ ಎಲ್ಲ ಪಕ್ಷಗಳು ಛಿದ್ರವಾಗಿ ಹೋದುವು.

ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕರ ಸರಕಾರದ ಅಡಿ ಈಗಿರುವುದಕ್ಕಿಂತ ಚೆನ್ನಾಗಿ ನಡೆದೀತು ಎಂದು ಯೋಚಿಸುವುದೇ ಒಂದು ವಿರೋಧಾಭಾಸ ಎಂಬುದನ್ನೂ ಕಮ್ಯುನಿಷ್ಟರು ಆದಷ್ಟು ಬೇಗ ಅರಿಯಬೇಕಾಗಿದೆ.ಇದು ಎಂಥ ಬಿಕ್ಕಟ್ಟಿನ ಕಾಲವೆಂದರೆ, ಹೋರಾಟದ ಸಂದರ್ಭದಲ್ಲಿಯೂ ಇಲ್ಲಿ ಎಲ್ಲ ಫ್ಯಾಶಿಸ್ಟ್ ವಿರೋಧಿ ಶಕ್ತಿಗಳ ನಡುವೆ ಒಮ್ಮತ ಮೂಡುವುದು ಸಾಧ್ಯವಾಗುತ್ತಿಲ್ಲ. ಆದರೂ ಇದು ನಿರಾಶೆಯಿಂದ ಕೈಕಟ್ಟಿ ಕುಳಿತುಕೊಳ್ಳುವ ಸಮಯವಲ್ಲ.

ಫ್ಯಾಶಿಸಂ ವಿರುದ್ಧದ ಹೋರಾಟ ಎಂಬುದು ಮುಖ್ಯವಾಗಿ ಒಂದು ರಾಜಕೀಯ ಪ್ರಶ್ನೆ.ಇದನ್ನು ಎಲ್ಲ ಹೋರಾಟಗಾರರೂ ಅರಿತುಕೊಳ್ಳಬೇಕಾಗಿದೆ. ಸದ್ಯದ ಸ್ಥಿತಿಯ ಸಮಗ್ರ ಅರಿವಿನಿಂದ ನಡೆಯಬೇಕಾದ ಹೋರಾಟವಿದು.

ಇದರಲ್ಲಿ ತಮ್ಮ ಪಾತ್ರವೂ ಇದೆ ಎಂಬುದನ್ನು ಬುದ್ಧಿಜೀವಿ ಬರಹಗಾರರೂ ಅರಿತುಕೊಳ್ಳಬೇಕಾಗಿದೆ. ನಿಜವಾದ ಬುದ್ಧಿಜೀವಿ ಬರಹಗಾರ ಇಂದಿನ ಈ ಸ್ಥಿತಿಯನ್ನು ಬದಲಾಯಿಸಲು ಹೋರಾಡುವ ಸಂಕಲ್ಪವನ್ನು ತೊಡಬೇಕಾಗಿದೆ. ಸುಖೀರಾಜ್ಯದ ಕಲ್ಪನೆಯೇ ಬಿಕ್ಕಟ್ಟಿಗೆ ಸಿಲುಕಿರುವಾಗ, ಫ್ಯಾಶಿಸ್ಟ್ ಪ್ರಭುತ್ವದ ಸೆರಗಿನೊಳಗೆ ಸೇರಿಕೊಳ್ಳುವ ಅವಕಾಶವಾದಿ ನಿಲುವು ಆತ್ಮಘಾತಕವೇ ಸರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಸಂತ ಬನ್ನಾಡಿ

contributor

Similar News

ಕಾವ್ಯ ಸಂಗಮ

ನಾಡೋಜ ಪಂಪ