×
Ad

ಸ್ವತಂತ್ರ ಮಾಧ್ಯಮಗಳನ್ನು ಓದುಗರೇ ಹಣ ನೀಡಿ ಬೆಳೆಸಲಿ

Update: 2026-02-08 13:13 IST

ಭಾರತದ ವಿಶ್ವಾಸಾರ್ಹ ಡಿಜಿಟಲ್ ಮ್ಯಾಗಝಿನ್ Scroll.in ಅಸ್ತಿತ್ವಕ್ಕೆ ಬಂದು ೧೨ ವರ್ಷಗಳು ತುಂಬಿದವು. ಮುಖ್ಯವಾಹಿನಿಯ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿನ ತಮ್ಮ ಪ್ರಾಥಮಿಕ ಜವಾಬ್ದಾರಿಯನ್ನು ನಿಭಾಯಿಸುವುದರಿಂದ ಹಿಂದೆ ಸರಿಯಲು ಆರಂಭಿಸಿದಾಗ ಈ ಡಿಜಿಟಲ್ ಮಾಧ್ಯಮ ೨೦೧೪ರಲ್ಲಿ ಜನ್ಮ ತಳೆಯಿತು. ಆ ಸಮಯದಲ್ಲಿ, ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಭಾರತದಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿತ್ತು. ಅದರಿಂದಾಗಿ ಸುದ್ದಿ ವಿತರಣೆಯ ವ್ಯಾಪ್ತಿಯೂ ಹಿಗ್ಗಿತು. Scroll.in ನೂತನ ಡಿಜಿಟಲ್ ಮಾಧ್ಯಮವು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಿದ್ದ ರೀತಿ ಮತ್ತು ಸ್ಪಷ್ಟವಾಗಿ ಸುದ್ದಿಯನ್ನು ಹೇಳುವ ಅದರ ಶೈಲಿಯು ಓದುಗರ ಗಮನ ಸೆಳೆಯಿತು. ಅದರ ಫಲವಾಗಿ Scroll.in ಕಡಿಮೆ ಅವಧಿಯಲ್ಲಿ ಒಂದು ಕೋಟಿ ಓದುಗರನ್ನು ತಲುಪಿತು. ಅದು ನಿಧಾನವಾಗಿ, ಕಿಕ್ಕಿರಿದ ಮಾಧ್ಯಮ ಕ್ಷೇತ್ರದಲ್ಲಿ ತನ್ನ ವಿಶಿಷ್ಠ ಸ್ಥಾನವನ್ನು ಭದ್ರಪಡಿಸುತ್ತಾ ಸಾಗಿತು ಹಾಗೂ ದೇಶದಲ್ಲಿ ದಶಕಗಳಿಂದ ಇದ್ದ ಹಲವಾರು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳನ್ನು ಹಿಂದಿಕ್ಕಿ ೬೪ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿಗಳನ್ನು ಪಡೆಯಿತು. ಈ ಸ್ವತಂತ್ರ ಮಾಧ್ಯಮವು ಹಿರಿಯ ಪತ್ರಕರ್ತ ನರೇಶ್ ಫೆರ್ನಾಂಡಿಸ್ ಅವರ ಕಲ್ಪನೆಯ ಕೂಸಾಗಿತ್ತು. ಬಹುಮುಖ ಬರಹಗಾರ ಹಾಗೂ ಸಂಪಾದಕರಾಗಿರುವ ನರೇಶ್ ಫೆರ್ನಾಂಡಿಸ್ ಭಾರತ ಮತ್ತು ಅಮೆರಿಕದ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ‘‘ನನಗೆ ಟೈಮ್ಸ್ ಆಫ್ ಇಂಡಿಯಾ, ಅಸೋಸಿಯೇಟೆಡ್ ಪ್ರೆಸ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ಔಟ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಈ ಸಂಸ್ಥೆಗಳಲ್ಲಿ ನಾನು ಕಲಿತ ನಿಷ್ಠುರತೆಯನ್ನು Scroll.in ಬಿಂಬಿಸಬೇಕು ಎನ್ನುವುದು ನನ್ನ ಬಯಕೆಯಾಗಿತ್ತು’’ ಎಂದು ‘ವಾರ್ತಾಭಾರತಿ’ಯ ೨೦೨೫ರ ವಾರ್ಷಿಕ ವಿಶೇಷ ಸಂಚಿಕೆಗೆ ನೀಡಿರುವ ಮುಕ್ತ ಸಂದರ್ಶನದಲ್ಲಿ ಅವರು ಹೇಳುತ್ತಾರೆ. ಕಳೆದ ೧೨ ವರ್ಷಗಳಲ್ಲಿ Scroll.inನ ಅಮೋಘ ಯಾನ, ಸ್ವತಂತ್ರ ಮಾಧ್ಯಮಗಳು ಚಂದಾದಾರಿಕೆ ಮಾದರಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ, ಬಲಪಂಥೀಯ ಟ್ರೋಲ್‌ಗಳು ಮತ್ತು ನಿಂದಕರು, ಪತ್ರಿಕೋದ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ಭಾರತದಲ್ಲಿ ಸ್ವತಂತ್ರ ಮಾಧ್ಯಮಗಳ ಭವಿಷ್ಯ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಅವರು ಇಲ್ಲಿ ವಿವರವಾಗಿ ಮಾತನಾಡಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ

► Scroll.in ಗೆ ೨೦೨೬ ಜನವರಿಯಲ್ಲಿ ೧೨ ವರ್ಷ ತುಂಬುತ್ತದೆ. ೨೦೧೪ರಲ್ಲಿ ಇದನ್ನು ಯಾಕೆ ಆರಂಭಿಸಿದಿರಿ ಎಂದು ಹೇಳಬಹುದೇ?

ನರೇಶ್ ಫೆರ್ನಾಂಡಿಸ್: ಪ್ರಜಾಪ್ರಭುತ್ವವೊಂದರಲ್ಲಿ ಮಾಧ್ಯಮಗಳು ಯಾವ ಪಾತ್ರವನ್ನು ವಹಿಸಬೇಕೆಂದು ನಾವೆಲ್ಲ ತುಂಬಾ ಹಿಂದಿನಿಂದ ನಂಬಿಕೊಂಡು ಬಂದಿದ್ದೇವೆಯೋ, ೨೦೧೪ರಲ್ಲಿ ಆ ಪಾತ್ರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ವಹಿಸುತ್ತಿಲ್ಲ ಎಂಬಂತೆ ಕಂಡಿತು. ಆ ಸಮಯದಲ್ಲಿ ಮಾಧ್ಯಮಗಳ ಮೇಲಿನ ಪ್ರಮುಖ ಒತ್ತಡ ಕಾರ್ಪೊರೇಟ್ ಸೆನ್ಸಾರ್‌ಶಿಪ್ ಆಗಿತ್ತು. ಬೃಹತ್ ಕಂಪೆನಿಗಳು ಸಂಪಾದಕೀಯ ಆದ್ಯತೆಗಳ ಮೇಲೆ ಪ್ರಭಾವ ಬೀರುತ್ತಿದ್ದವು ಮತ್ತು ಅವುಗಳೇ ಮಾಧ್ಯಮ ಕಾರ್ಯಸೂಚಿಯನ್ನು ರೂಪಿಸುತ್ತಿದ್ದವು. ಈ ನಡುವೆ, ಇಂಟರ್ನೆಟ್ ಹೆಚ್ಚೆಚ್ಚು ವ್ಯಾಪಕವಾಗುತ್ತಾ ಸಾಗುತ್ತಿತ್ತು. ಮುದ್ರಣ ಪತ್ರಿಕೆಗೆ ಹೋಲಿಸಿದರೆ ಡಿಜಿಟಲ್ ಪತ್ರಿಕೆಯೊಂದನ್ನು ತುಂಬಾ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾಗಿತ್ತು. ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕೆ ವಿತರಣೆಗೆ ಸಂಬಂಧಿಸಿದ ಸಾಗಾಟ ಸವಾಲುಗಳಿರಲಿಲ್ಲ. ಅದೂ ಅಲ್ಲದೆ, ಆ ವೇಳೆಗೆ, ಸ್ಥಳಕ್ಕೆ ಹೋಗಿ ವರದಿ ಮಾಡುವುದನ್ನು ಹೆಚ್ಚಿನ ಪತ್ರಿಕೆಗಳು ನಿಲ್ಲಿಸಲು ಆರಂಭಿಸಿದ್ದವು. ಅದು ಮುಂದುವರಿಯಬೇಕು ಎಂದು ನಾವು ಬಯಸಿದೆವು. ದೇಶಾದ್ಯಂತ ನಡೆಯುತ್ತಿದ್ದ ಘಟನಾವಳಿಗಳ ಸಾಕಷ್ಟು ವಿವರವಾದ ವರದಿ ಓದುಗರಿಗೆ ಸಿಗುತ್ತಿಲ್ಲ ಎಂದು ಅನಿಸುತ್ತಿತ್ತು. ಭಾರತೀಯ ಜನಜೀವನದ ಯಾವ ಕ್ಷೇತ್ರಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸುತ್ತಿದ್ದವೋ, ಅವುಗಳ ಬಗ್ಗೆ ವರದಿ ಮಾಡುವ ಪಾತ್ರವನ್ನು ನಾವು ವಹಿಸಬೇಕೆಂದು ನಿರ್ಧರಿಸಿದೆವು. ಕಾಶ್ಮೀರ, ಈಶಾನ್ಯ ಭಾರತ ಮತ್ತು ಮಧ್ಯ ಭಾರತದಂಥ ಭೌಗೋಳಿಕ ವಲಯಗಳು ಹಾಗೂ ಕಾರ್ಮಿಕ, ಸಾರ್ವಜನಿಕ ಆರೋಗ್ಯ, ಜಾತಿ ಮತ್ತು ಕೋಮು ಉದ್ವಿಗ್ನತೆ ಮುಂತಾದ ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಯಿತು. ವರದಿಗಾರಿಕೆಯಲ್ಲಿ, ರಾಜಕೀಯಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡಲು ನಾವು ಮುಂದಾದೆವು. ಚಲನಚಿತ್ರಗಳು, ಪುಸ್ತಕಗಳು ಮತ್ತು ಮಾನವ ಅನುಭವದ ವೈಚಿತ್ರ್ಯ ಮತ್ತು ರಚನಾತ್ಮಕತೆಯನ್ನು ಹಿಡಿದಿಡುವ ವಿಭಿನ್ನ ಸುದ್ದಿಗಳಿಗೆ ಆದ್ಯತೆ ನೀಡಲು ನಾವು ನಿರ್ಧರಿಸಿದೆವು. ಈ ಉದ್ದೇಶಗಳಿಗಾಗಿ, ನಮ್ಮಲ್ಲಿ ಶಕ್ತಿಶಾಲಿ ‘ಫೀಚರ್ಸ್’ ವಿಭಾಗವಿದೆ. ಕಾಲ ಸರಿದಂತೆ, ನಮ್ಮ ಬಜೆಟ್‌ಗಳು ಕಿರಿದಾಗುತ್ತಾ ಬಂದರೂ, ನಮ್ಮ ಗುರಿಗಳನ್ನು ಕಾಯ್ದುಕೊಂಡು ಬರಲು ಪ್ರಯತ್ನಿಸಿದ್ದೇವೆ. ನಮ್ಮ ವರದಿಗಾರರ ಜಾಲ ಈಗ ಹಿಂದಿನಷ್ಟು ವ್ಯಾಪಕವಾಗಿ ಇಲ್ಲದಿದ್ದರೂ ನಾವು ನಮ್ಮ ಗುರಿಗಳಿಂದ ವಿಚಲಿತರಾಗಿಲ್ಲ.

►  ೨೦೧೪ರಲ್ಲಿ Scroll.in ಆರಂಭವಾದಾಗ ಯಾವ ಸಂಪಾದಕೀಯ ಮಾನದಂಡಗಳನ್ನು ನೀವು ಹಾಕಿಕೊಂಡಿರಿ?

 ಸಂಪಾದಕೀಯ ಮಾನದಂಡಗಳನ್ನು ನಿಖರವಾಗಿ ನಿರೂಪಿಸುವುದು ಕಷ್ಟ. ಟೈಮ್ಸ್ ಆಫ್ ಇಂಡಿಯಾ, ಅಸೋಸಿಯೇಟೆಡ್ ಪ್ರೆಸ್, ಒಂದು ಟಿ.ವಿ. ಚಾನೆಲ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ಔಟ್ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವವನ್ನು ನಾನು ಹೊಂದಿದ್ದೇನೆ. ಈ ಸಂಸ್ಥೆಗಳಿಂದ ನಾನು ಕಲಿತುಕೊಂಡ ನಿಷ್ಠುರತೆಯನ್ನು Scroll.in ಬಿಂಬಿಸಬೇಕೆಂದು ನಾನು ಬಯಸಿದ್ದೆ. ಎಲ್ಲವೂ ವಿವರವಾಗಿ ವರದಿಯಾಗುವಂತೆ ನೋಡಿಕೊಳ್ಳುವುದು ನಮ್ಮ ನಿಲುವು ಆಗಿತ್ತು. ಕೇವಲ ಟೆಲಿಫೋನ್ ಸಂಭಾಷಣೆಗಳೊಂದನ್ನೇ ಅವಲಂಬಿಸುವ ಬದಲು, ವರದಿಗಾರರು ಸ್ಥಳಕ್ಕೆ ಹೋಗಿ ಘಟನೆಗಳನ್ನು ನೋಡಿದ ಜನರೊಂದಿಗೆ ನೇರವಾಗಿ ಮಾತನಾಡುವುದಕ್ಕೆ ನಾವು ಒತ್ತು ನೀಡುತ್ತಿದ್ದೆವು. ಸಾಮಾನ್ಯ ಓದುಗರಿಗೆ ಅರ್ಥವಾಗುವ ಸ್ಪಷ್ಟ ಶೈಲಿಯಲ್ಲಿ ವರದಿಗಳನ್ನು ಬರೆಯಲೂ ನಾವು ನಿರ್ಧರಿಸಿದೆವು. ಆಡಂಬರದ ಭಾಷೆಯನ್ನು ಬಿಟ್ಟೆವು ಮತ್ತು ವೃತ್ತಿಪರರು ಬಳಸುವ ಪದಗಳಿಗೆ ಸರಳ ವಿವರಣೆಗಳನ್ನು ನೀಡಿದೆವು. ನಿಮ್ಮ ಅಜ್ಜಿಗೂ ಅರ್ಥವಾಗುವಂತೆ ಸುದ್ದಿಗಳನ್ನು ಬರೆಯಬೇಕೆಂದು ನಾನು ನನ್ನ ಸಹೋದ್ಯೋಗಿಗಳಿಗೆ ಆಗಾಗ ನೆನಪಿಸುತ್ತಿದ್ದೆ. ಈ ಮೌಲ್ಯಗಳನ್ನು ನಂಬಿ ಪಾಲಿಸುವ ಪ್ರಬಲ ತಂಡವೊಂದನ್ನು ನಾವು ಕಟ್ಟಿದೆವು. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದತ್ತ ವಾಲಿದ್ದೇವೆ ಎಂಬುದಾಗಿ ಜನರು ಭಾವಿಸಬಾರದು ಎಂಬ ಕಾರಣಕ್ಕಾಗಿ ಸಂಪಾದಕೀಯ ಪುಟದಲ್ಲಿ ರಾಜಕಾರಣಿಗಳ ಲೇಖನಗಳನ್ನು ಪ್ರಕಟಿಸದಿರಲೂ ನಾವು ನಿರ್ಧರಿಸಿದೆವು. ಇದು ಆರಂಭದಿಂದಲೂ ಇರುವ ನಮ್ಮ ನಿಲುವುಗಳ ಪೈಕಿ ಒಂದಾಗಿದೆ.

►  ಅಸ್ತಿತ್ವಕ್ಕೆ ಬಂದ ಬಳಿಕ Scroll.in ಶೀಘ್ರವಾಗಿ ಜನಪ್ರಿಯವಾಯಿತು ಮತ್ತು ತನ್ನದೇ ಸ್ಥಾನವೊಂದನ್ನು ಕಂಡುಕೊಂಡಿತು. ಅದು ಅಷ್ಟು ಬೇಗ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತದೆ ಎಂಬುದಾಗಿ ನೀವು ನಿರೀಕ್ಷಿಸಿದ್ದಿರಾ?

Scroll.in ಗೆ ದೊರೆತ ಧನಾತ್ಮಕ ಪ್ರತಿಕ್ರಿಯೆಯನ್ನು ಕಂಡು ನಮಗೆ ಹಿತವಾದ ಅಚ್ಚರಿಯಾಗಿತ್ತು. ಆ ಕಾಲದಲ್ಲಿ, ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಕ್ಷಿಪ್ರವಾಗಿ ವ್ಯಾಪಿಸುತ್ತಿತ್ತು. ಹಾಗಾಗಿ, ನಮ್ಮ ಮಾಧ್ಯಮದ ಸುದ್ದಿಗಳ ವಿತರಣೆಯು ವಿಶಾಲ ವ್ಯಾಪ್ತಿಯಲ್ಲಿ ನಡೆಯಿತು. ನಾವು ಕಡಿಮೆ ಸಮಯದಲ್ಲಿ ಸುಮಾರು ಒಂದು ಕೋಟಿ ಓದುಗರನ್ನು ತಲುಪಿದೆವು. ಇದನ್ನು ಸಾಧಿಸಲು ಮುದ್ರಣ ಮಾಧ್ಯಮಕ್ಕೆ ಹಲವಾರು ವರ್ಷಗಳೇ ಬೇಕಾಗುತ್ತಿದ್ದವು. ನಾವು ಸ್ವಲ್ಪ ಅಸಾಂಪ್ರದಾಯಿಕ ವಿಧಾನವನ್ನು ಅನುಸರಿಸಿದೆವು. ದೈನಂದಿನ ವರದಿಗಾರಿಕೆಗೆ, ಪತ್ರಕರ್ತರನ್ನು ನೇಮಿಸಿಕೊಳ್ಳುವ ಬದಲು, ಯಾರ ಕೆಲಸ ನಮಗೆ ಮೆಚ್ಚುಗೆಯಾಗಿದೆಯೋ ಮತ್ತು ನಾವು ಯಾರೊಂದಿಗೆ ಕೆಲಸ ಮಾಡಲು ಬಯಸಿದ್ದೇವೆಯೋ ಅವರನ್ನು ನಾವು ಸಂಪರ್ಕಿಸಿದೆವು. ಹಾಗಾಗಿ, ರಕ್ಷಣೆ ಅಥವಾ ಗೃಹ ಸಚಿವಾಲಯ ಮುಂತಾದ ಕೆಲವೊಂದು ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ವರದಿ ಮಾಡುವ ವರದಿಗಾರರ ಕೊರತೆಯನ್ನು ನಾವು ಎದುರಿಸುತ್ತಿದ್ದೇವೆ. ಆದರೆ, ತಮಗೆ ಪ್ರಾಮಾಣಿಕ ಆಸಕ್ತಿಯುಳ್ಳ ವಿಷಯಗಳ ಬಗ್ಗೆ ಮೋಹದಿಂದ ಬರೆಯುವ ಲೇಖಕರು ನಮ್ಮಲ್ಲಿದ್ದರು. ಅವರ ಈ ಆಸಕ್ತಿಯನ್ನು ಓದುಗರು ಗುರುತಿಸಿದ್ದಾರೆ. ಜನರು ಗುರುತಿಸಿದ ನಮ್ಮ ಮೊದಲ ಮಹತ್ವದ ಕಾರ್ಯಕ್ರಮ, ಸುಪ್ರಿಯಾ ಶರ್ಮಾರ ‘ವಿಂಡೋ ಸೀಟ್’. ೨೦೧೪ರ ಚುನಾವಣಾ ಪ್ರಚಾರದ ಅವಧಿಯಲ್ಲಿ, ಅವರು ರೈಲಿನಲ್ಲಿ ಅಸ್ಸಾಮಿನಿಂದ ಕಾಶ್ಮೀರಕ್ಕೆ ಪ್ರಯಾಣಿಸಿದರು. ಈ ಪ್ರಯಾಣದ ಅವಧಿಯಲ್ಲಿ ಅವರು ಪ್ರತಿದಿನ ಒಂದು ನಿರ್ದಿಷ್ಟ ಪಟ್ಟಣದಲ್ಲಿ ಇಳಿದು ಅಲ್ಲಿನ ವರದಿಯನ್ನು ಬರೆದು ಕಳುಹಿಸಿದರು. ಅದು ಕಠಿಣ ಕ್ಷೇತ್ರ-ವರದಿಯಾಗಿತ್ತು. ಸುದ್ದಿಯನ್ನು ವಿವರಿಸುವ ಅವರ ವಿಧಾನವು ಸ್ಪಷ್ಟತೆಯಿಂದ ಕೂಡಿತ್ತು ಮತ್ತು ಓದುಗರಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ಆ ವಿಧಾನವು ನಮಗೆ ಮಾದರಿಯಾಯಿತು.




 


 ಇಂಥ ಸುದ್ದಿಗಳಿಗೆ ಆಗ ಬರವಿತ್ತೇ? ಅಥವಾ ಅವುಗಳನ್ನು ಓದುಗರು ಬಯಸುತ್ತಿದ್ದರೇ?

 ಆ ಕಾಲದಲ್ಲಿದ್ದ ಕೆಲವು ಆನ್‌ಲೈನ್ ಮಾಧ್ಯಮಗಳ ಪೈಕಿ ‘ರೆಡಿಫ್ಯೂಶನ್’ (Rediffusion) ಒಂದಾಗಿತ್ತು. ಆದರೆ, ಆಗ ಅದರ ಅವನತಿ ಆರಂಭವಾಗಿತ್ತು. ‘ಫಸ್ಟ್‌ಪೋಸ್ಟ್’ ದೊಡ್ಡ ವೆಬ್‌ಸೈಟ್ ಆಗಿತ್ತು. ಆದರೆ, ಅದು ಮುಖ್ಯವಾಗಿ ಬ್ರೇಕಿಂಗ್ ವೀವ್ಸ್ ಗೆ ಹೆಚ್ಚಿನ ಗಮನ ನೀಡಿತ್ತು. ಅಂದರೆ ಘಟನೆಗಳ ಬಗ್ಗೆ ಅದು ತಕ್ಷಣ ವಿಶ್ಲೇಷಣೆಗಳನ್ನು ನೀಡುತ್ತಿತ್ತು. ಹಾಗಾಗಿ, ಏನನ್ನು ಯೋಚಿಸಬೇಕು ಎಂಬುದನ್ನು ಓದುಗರಿಗೆ ಹೇಳುವ ಬದಲು, ಅವರಿಗೆ ವಾಸ್ತವ ಸಂಗತಿಗಳನ್ನು ಒದಗಿಸಬೇಕು ಎಂಬುದಾಗಿ ನಾವು ಭಾವಿಸಿದೆವು. ನಾವು ಅದನ್ನೇ ಮಾಡಿದೆವು.

►  ಆರಂಭದಲ್ಲಿ Scroll.in ಗೆ ಯಾರು ನೆರವು ನೀಡಿದರು ಹಾಗೂ ಈಗ ಅದಕ್ಕೆ ಯಾರು ನೆರವು ನೀಡುತ್ತಿದ್ದಾರೆ?

 ಮಾಧ್ಯಮ ಮತ್ತು ಇತರ ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಿದ್ದ ಕಂಪೆನಿಯೊಂದು ನಮ್ಮಲ್ಲಿ ಹೂಡಿಕೆ ಮಾಡಿತು. ಅದರೊಂದಿಗೆ ನಮ್ಮ ಯಾನ ಆರಂಭವಾಯಿತು. ಇಂದು ಚಂದಾ ಮತ್ತು ಜಾಹೀರಾತಿನಿಂದ ನಮಗೆ ಆದಾಯ ಬರುತ್ತಿದೆ. ಓದುಗರ ನೆರವನ್ನು ಎಷ್ಟು ಪಡೆಯಲು ಸಾಧ್ಯವೋ ಅಷ್ಟನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ.

►  ಓದುಗರ ಬೆಂಬಲ ಸಾಕಾಗುವಷ್ಟು ಇದೆಯೇ?

 ಪಕ್ಷಪಾತರಹಿತ ಸುದ್ದಿ ಬೇಕಾದರೆ, ಸ್ವತಂತ್ರ ಪತ್ರಿಕೋದ್ಯಮಕ್ಕೆ ಹಣಕಾಸು ನೆರವಿನ ಅಗತ್ಯವಿದೆ ಎನ್ನುವುದನ್ನು ಭಾರತೀಯ ಓದುಗರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಎಲ್ಲಾ ಸ್ವತಂತ್ರ ಮಾಧ್ಯಮಗಳು ಈ ವಿಷಯದಲ್ಲಿ ಸಂಕಷ್ಟವನ್ನು ಎದುರಿಸುತ್ತಿವೆ.

►  ಅಂದರೆ, ಓದುಗರು ಸುದ್ದಿಗಳಿಗಾಗಿ ಹಣ ಪಾವತಿಸಲು ಹಿಂದೆಮುಂದೆ ನೋಡುತ್ತಾರೆ ಎನ್ನುವುದು ನಿಮ್ಮ ಮಾತಿನ ಅರ್ಥವೇ?

ಇದು ಜಾಗತಿಕ ಸಮಸ್ಯೆಯಾಗಿದೆ. ಹೆಚ್ಚಿನ ಜನರು ಆನ್‌ಲೈನ್ ಸುದ್ದಿ ಉಚಿತವಾಗಿ ಸಿಗಬೇಕೆಂದು ಈಗಲೂ ನಿರೀಕ್ಷಿಸುತ್ತಾರೆ. ಆದರೆ, ಮುದ್ರಿತ ಪತ್ರಿಕೆ ಉಚಿತವಾಗಿ ಸಿಗಬೇಕೆಂದು ಅವರು ನಿರೀಕ್ಷಿಸುವುದಿಲ್ಲ.

►  ಹಾಗಾದರೆ, Scroll.in ೧೨ ವರ್ಷ ಹೇಗೆ ಬದುಕಿತು?

 ಇದೊಂದು ಏರಿಳಿತಗಳ ಪ್ರಯಾಣವಾಗಿದೆ. ಹಾಗಾಗಿಯೇ, ನಾವೀಗ ಸಣ್ಣ ಮ್ಯಾಗಝಿನ್‌ಗೆ ಹೋಲಿಸಬಹುದಾದ ಒಂದು ಸಣ್ಣ ತಂಡವಾಗಿದ್ದೇವೆ. ಆದರೆ, ಬ್ರೇಕಿಂಗ್ ಸುದ್ದಿಗಳನ್ನು ಕೊಡುವ ಸುದ್ದಿಸಂಸ್ಥೆಗಳ ವೇಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ, ಪ್ರಾಯೋಗಿಕವಾಗಿ ಯಾವ ಸುದ್ದಿಗಳನ್ನು ವರದಿ ಮಾಡಬಹುದು ಎನ್ನುವುದನ್ನು ಪ್ರತಿ ದಿನ ನಾವು ನಿರ್ಧರಿಸಬೇಕಾಗುತ್ತದೆ. ನಮ್ಮ ಓದುಗರಿಗೆ ಮಾಹಿತಿ ನೀಡುವ ನಮ್ಮ ಬದ್ಧತೆಯು ಈ ಸಂಪನ್ಮೂಲಗಳ ಎಚ್ಚರಿಕೆಯ ಬಳಕೆಯನ್ನು ಅವಲಂಬಿಸಿದೆ.

►  ಹೆಚ್ಚಿನ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಚಂದಾದಾರಿಕೆ ಮಾದರಿಯನ್ನು ಅವಲಂಬಿಸಿವೆ. ಈ ಮಾದರಿ ಯಶಸ್ವಿಯಾಗಿದೆಯೇ?

 ಅಂತಿಮವಾಗಿ, ಇದುವೇ ಏಕೈಕ ತಾಳಿಕೊಳ್ಳಬಹುದಾದ (sustainable) ಮಾದರಿ. ಈ ಮಾದರಿ ತಮ್ಮಲ್ಲಿ ಯಶಸ್ವಿಯಾಗಿದೆ ಎಂಬುದಾಗಿ ಕೆಲವು ಸ್ವತಂತ್ರ ಮಾಧ್ಯಮಗಳು ಹೇಳಿವೆ. ಚಂದಾದಾರರಾಗುವಂತೆ ಓದುಗರ ಮನವೊಲಿಸಲು ನಾವೆಲ್ಲರೂ ನಮ್ಮದೇ ಆದ ವಿಧಾನಗಳಲ್ಲಿ ಪ್ರಯತ್ನಿಸುತ್ತಿದ್ದೇವೆ. ಇಲ್ಲೊಂದು ವಿರೋಧಾಭಾಸವಿದೆ. ಮುದ್ರಣಗೊಳ್ಳುವ ಪತ್ರಿಕೆಗಳಿಗೆ ಖರ್ಚಿದೆ ಎನ್ನುವುದನ್ನು ಜನರು ಸ್ವೀಕರಿಸುತ್ತಾರೆ, ಆದರೆ, ಇಂಟರ್ನೆಟ್‌ನಲ್ಲಿ ಎಲ್ಲವೂ ಉಚಿತವಾಗಿ ಬೇಕೆಂದು ಅವರು ನಿರೀಕ್ಷಿಸುತ್ತಾರೆ. ಇಂಟರ್ನೆಟ್‌ನಲ್ಲಿ ಉನ್ನತ ಗುಣಮಟ್ಟದ ಪತ್ರಿಕೋದ್ಯಮವನ್ನು ಮಾಡುವುದು ಪತ್ರಿಕೆಯೊಂದನ್ನು ಮುದ್ರಿಸುವಷ್ಟೇ ವೆಚ್ಚದಾಯಕವಾಗಿದೆ ಎನ್ನುವುದನ್ನು ನಾವು ಜನರಿಗೆ ಮನವರಿಕೆ ಮಾಡಬೇಕಾಗಿದೆ.

►  ಈ ರೀತಿಯ ಮನವೊಲಿಕೆ ಯಶಸ್ವಿಯಾಗುತ್ತಿದೆಯೇ?

 ಅದು ನಿಧಾನವಾಗಿ ಯಶಸ್ವಿಯಾಗುತ್ತಿದೆ. ಜನರು ದಶಕಗಳ ಕಾಲ ಉಚಿತ ಆನ್‌ಲೈನ್ ವಿಷಯಗಳಿಗೆ ಒಗ್ಗಿ ಹೋಗಿದ್ದಾರೆ. ಅಭಿವೃದ್ಧಿ ಹೊಂದಿರುವ ದೇಶಗಳಲ್ಲೂ, ಹಣ ಪಾವತಿಸುವಂತೆ ಜನರ ಮನವೊಲಿಸುವಲ್ಲಿ ಮಾಧ್ಯಮ ಸಂಸ್ಥೆಗಳು ಪರದಾಡುತ್ತಿವೆ. ಇದು ಜಾಗತಿಕ ಸಮಸ್ಯೆ.

►  ಸ್ವತಂತ್ರ ಮಾಧ್ಯಮಗಳು ಸಹಯೋಗದ ಮೂಲಕ ಈ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವೇ?

 ಉದಾಹರಣೆಗೆ; ಚುನಾವಣಾ ವರದಿಗಾಗಿ ಮತ್ತು ಚುನಾವಣಾ ಬಾಂಡ್‌ಗಳ ವಿಷಯದಲ್ಲಿ The Wire, The News Minute, News Laundry ಮತ್ತು The Caravan ಜೊತೆಗೆ Scroll.in ಸಹಯೋಗ ಮಾಡಿಕೊಂಡಿತ್ತು. ಚುನಾವಣಾ ವರದಿಗಾರಿಕೆ ಮತ್ತು ಚುನಾವಣಾ ಬಾಂಡ್‌ಗಳ ತನಿಖೆ ಮುಂತಾದ ಹಲವಾರು ಮಹತ್ವದ ಸಂದರ್ಭಗಳಲ್ಲಿ ನಾವು ಸಹಯೋಗದಿಂದ ಕೆಲಸ ಮಾಡಿದ್ದೇವೆ. ಆದರೆ, ನಮ್ಮದೇ ಆದ ಸ್ಪಷ್ಟ ಗುರುತನ್ನು ಕಾಪಾಡಿಕೊಳ್ಳುವುದು ನಮಗೆಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಂದು ಮಾಧ್ಯಮಕ್ಕೂ ತನ್ನದೇ ಆದ ಗುರಿಯಿದೆ. ಇದರಿಂದ ಓದುಗರಿಗೆ ಪ್ರಯೋಜನವಿದೆ. ಸಹಯೋಗವು ಆರ್ಥಿಕತೆಗೆ ಮೂಲಭೂತ ಬದಲಾವಣೆಯನ್ನೇನೂ ತರುವುದಿಲ್ಲ. ಅಲ್ಲದೆ, ಅದು ಸ್ವಾವಲಂಬಿ ಮಾದರಿಯೊಂದನ್ನು ಸ್ವಯಂಚಾಲಿತವಾಗಿ ಸೃಷ್ಟಿಸುವುದೂ ಇಲ್ಲ. ಅಂತಿಮವಾಗಿ, ಪ್ರತಿಯೊಂದು ಸಂಸ್ಥೆಯು ತನ್ನನ್ನು ತಾನೇ ಆಧರಿಸಿಕೊಳ್ಳಬೇಕು.ಕೇವಲ ಒಂದು ಸ್ವತಂತ್ರ ಡಿಜಿಟಲ್ ಧ್ವನಿಯಿರುವ ಮಾಧ್ಯಮ ಕ್ಷೇತ್ರವು ಏಕತಾನತೆಯಿಂದ ಕೂಡಿರುತ್ತದೆ ಮತ್ತು ಅದು ಅನಾರೋಗ್ಯಕರವಾಗಿರುತ್ತದೆ. ವಿಭಿನ್ನ ಧ್ವನಿಗಳು ಇರುವುದು ಅಗತ್ಯ.

►  ಪ್ರಮುಖ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲಿ, Scroll.in ಮುಂತಾದ ಸ್ವತಂತ್ರ ಮಾಧ್ಯಮಗಳು ಸ್ಥಾಪಿತ ಮಾಧ್ಯಮಗಳನ್ನು ಹಿಂದಿಕ್ಕುತ್ತಿವೆ. ಇದು ಅವುಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆಯೇ?

ಹಾಗೆಂದು ನನಗೆ ಅನಿಸುತ್ತದೆ. ಸುಪ್ರಿಯಾ ಶರ್ಮಾ ಪತ್ರಿಕೋದ್ಯಮದಲ್ಲಿ ರಾಮನಾಥ ಗೋಯೆಂಕಾ ಶ್ರೇಷ್ಠತಾ ಪ್ರಶಸ್ತಿ ಪಡೆದ ಮೊದಲ ಡಿಜಿಟಲ್ ಪತ್ರಕರ್ತೆ. ಅದು ೧೨ ವರ್ಷಗಳ ಹಿಂದೆ. ಅಂದಿನಿಂದ, ನೀವು ಗಮನಿಸಿರುವಂತೆ, ಡಿಜಿಟಲ್ ಮತ್ತು ಸ್ವತಂತ್ರ ಮಾಧ್ಯಮಗಳು ಹೆಚ್ಚೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. Scroll.in ಈವರೆಗೆ ೬೪ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತರ ಮಾಧ್ಯಮ ಸಂಸ್ಥೆಗಳಿಗೆ ಹೋಲಿಸಿದರೆ, ಕಿರಿಯನಾಗಿರುವ ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದಕ್ಕೆ ಇದು ಕಳಪೆ ಸಾಧನೆಯೇನೂ ಅಲ್ಲ. ಆದರೆ, ಭಾರತದಲ್ಲಿ ರಾಜಕೀಯ ಮತ್ತು ಮಾಧ್ಯಮ ವ್ಯಾಖ್ಯಾನ ಎಷ್ಟು ಧ್ರುವೀಕರಣಗೊಂಡಿದೆಯೆಂದರೆ, ಈ ಪ್ರಶಸ್ತಿಗಳು ಪಕ್ಷಪಾತಪೂರಿತವಾಗಿವೆ ಎಂಬುದಾಗಿ ಟ್ರೋಲ್‌ಗಳು ಕೆಲವು ಸಲ ಹೇಳಿಕೊಳ್ಳುತ್ತಾರೆ. ಸ್ವತಂತ್ರ ಪತ್ರಿಕೋದ್ಯಮವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಹಿಂದುತ್ವ ಬೆಂಬಲಿಗರಿಗೆ ಪ್ರಶಸ್ತಿಗಳು ಮನವರಿಕೆ ಮಾಡಿಕೊಡುತ್ತವೆ ಎಂಬುದಾಗಿ ನಾನು ಭಾವಿಸುವುದಿಲ್ಲ.

►  ಬಲಪಂಥೀಯ ಮಾಧ್ಯಮಗಳು ಮತ್ತು ಟೀಕಾಕಾರರಿಂದ ಯಾವ ಸವಾಲುಗಳನ್ನು ನೀವು ಎದುರಿಸುತ್ತಿದ್ದೀರಿ?

 ಹಿಂದೆ, ಓಪ್ ಇಂಡಿಯಾ ಮುಂತಾದ ಬಲಪಂಥೀಯ ಸುಳ್ಳು-ಪ್ರಚಾರ (propaganda) ವೆಬ್‌ಸೈಟ್‌ಗಳು ನಮ್ಮ ಬಗ್ಗೆ ಪ್ರಕಟಿಸುವ ನಕಾರಾತ್ಮಕ ಲೇಖನಗಳಿಂದ ನಾನು ನೊಂದುಕೊಳ್ಳುತ್ತಿದ್ದೆ. ಈಗ ಅವುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುತ್ತಿದ್ದೇನೆ. ಆ ಲೇಖನಗಳಲ್ಲಿ ಸೈದ್ಧಾಂತಿಕ ಆಡಂಬರ ಇರುತ್ತದೆಯೇ ಹೊರತು ಮೌಲಿಕ ಟೀಕೆಗಳಿಲ್ಲ. ನಾವು ಗೌರವಿಸುವ ಜನರು ನಮ್ಮನ್ನು ಟೀಕಿಸಿದಾಗ, ನಾವು ಖಂಡಿತವಾಗಿಯೂ ಅದನ್ನು ಗಮನಿಸುತ್ತೇವೆ. ಆದರೆ, ಈ ರೀತಿಯ ನಿಂದನೆಗಳಲ್ಲಿ ಯಾವುದೇ ಸತ್ವವಿಲ್ಲ.

►  ಈಗಿನ ಸರಕಾರವನ್ನು ಟೀಕಿಸಿದ ಬಳಿಕ, ಮಾಧ್ಯಮವನ್ನು ನಡೆಸಿಕೊಂಡು ಹೋಗುವುದು ಕಷ್ಟ ಎಂದು ನಿಮಗೆ ಅನಿಸಿದೆಯೇ?

ಮಾಹಿತಿಯನ್ನು ದಿನೇ ದಿನೇ ಹೆಚ್ಚೆಚ್ಚು ನಿರ್ಬಂಧಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಪ್ರಧಾನಿಯವರು ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡುವುದಿಲ್ಲ. ನಿಯಮಿತವಾಗಿ ನಡೆಯುವ ರಾಷ್ಟ್ರೀಯ ಸಮೀಕ್ಷೆಗಳು ನಿಂತಿವೆ. ನಮ್ಮಲ್ಲಿ ಇನ್ನೂ ಪರಿಷ್ಕೃತ ಜನಗಣತಿ ಅಂಕಿಅಂಶಗಳಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಅಂಕಿಅಂಶಗಳು ದೊರೆಯದಿರುವಾಗ ಸರಕಾರದ ನಿರ್ವಹಣೆಯ ಮೌಲ್ಯಮಾಪನ ಮಾಡುವುದು ಕಷ್ಟ. ಇನ್ನೊಂದು ಕಡೆಯಿಂದ ಕಾನೂನು ಒತ್ತಡಗಳಿವೆ. ಲಾಕ್‌ಡೌನ್ ಸಂದರ್ಭದಲ್ಲಿ ವಾರಣಾಸಿಯಿಂದ ನಾನು ಮತ್ತು ಸುಪ್ರಿಯಾ ಶರ್ಮಾ ಮಾಡಿರುವ ವರದಿಗಳಿಗಾಗಿ ನಮ್ಮ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ ನಮಗೆ ಬಂಧನದಿಂದ ರಕ್ಷಣೆ ನೀಡಿದೆ. ನಮ್ಮ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

►  ನಿಮಗೆ ತುಂಬಾ ಅವಹೇಳನಕಾರಿ ಸಂದೇಶಗಳೂ ಬರುತ್ತಿರಬಹುದು...

 ಹೌದು, ತುಂಬಾ ನಿಂದನಾತ್ಮಕ ಸಂದೇಶಗಳು ಬರುತ್ತಿವೆ. ಆರಂಭಿಕ ದಿನಗಳಲ್ಲಿ ನೋವಾಗುತ್ತಿತ್ತು. ಆದರೆ ಈಗ ಅದು ದೈನಂದಿನ ಕಾರ್ಯಕ್ರಮದಂತೆ ಆಗಿದೆ. ಇಂಥ ಹೆಚ್ಚಿನ ಸಂದೇಶಗಳು ಸಾಮಾಜಿಕ ಮಾಧ್ಯಮ ಟ್ರೋಲ್‌ಗಳಿಂದ ಬರುತ್ತವೆ. ಆದರೆ, ನಾವು ದಾರಿತಪ್ಪಿದವರು ಅಥವಾ ದೇಶವಿರೋಧಿಗಳು ಎಂಬುದಾಗಿ ಆರೋಪಿಸಿ ನಮ್ಮ ‘ಓದುಗರ ಪತ್ರಗಳು’ ವಿಳಾಸಕ್ಕೂ ಸಂದೇಶಗಳು ಬರುತ್ತವೆ. ಇಂಥ ಸಂದೇಶಗಳನ್ನು ಸ್ವೀಕರಿಸುವುದು ಈಗ ನಮ್ಮ ಕೆಲಸದ ಒಂದು ಭಾಗವೇ ಆಗಿದೆ.

► ಮುಂದಿನ ಐದು ವರ್ಷಗಳಲ್ಲಿ Scroll.in ಎಲ್ಲಿರುತ್ತದೆ?

 ಆಗಲೂ ನಾವಿರುತ್ತೇವೆ, ಆಗಲೂ ಜೀವಂತವಾಗಿ ಇರುತ್ತೇವೆ, ಆಗಲೂ ನಮ್ಮ ಓದುಗರನ್ನು ಹುರಿದುಂಬಿಸುತ್ತಾ ಇರುತ್ತೇವೆ. ಆ ವೇಳೆಗೆ, ರಾಜಕೀಯ ಮತ್ತು ಆರ್ಥಿಕ ಒತ್ತಡಗಳಿಗೆ ಹೆಚ್ಚುವರಿಯಾಗಿ, ನಾವು ತಾಂತ್ರಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಪ್ರೇಕ್ಷಕರು ಏನನ್ನು ನೋಡುತ್ತಾರೋ ಅದನ್ನು ಸಾಫ್ಟ್‌ವೇರ್‌ಗಳು ಪ್ರಭಾವಿಸುತ್ತವೆ ಮತ್ತು ಕೃತಕ ಬುದ್ಧಿಮತ್ತೆಯು (AI)ಮಾಧ್ಯಮ ಬಳಕೆಯ ವಿಧಾನವನ್ನೇ ಪರಿವರ್ತಿಸುತ್ತಿದೆ. ಕೃತಕ ಬುದ್ಧಿಮತ್ತೆಯು ನಮ್ಮೆಲ್ಲರನ್ನೂ ಅಳಿಸಿ ಹಾಕಲೂಬಹುದು. ಕೃತಕ ಬುದ್ಧಿಮತ್ತೆ ಚಾಲಿತ ಬದಲಾವಣೆಗಳಿಂದಾಗಿ ಎಲ್ಲೆಡೆಯೂ ಓದುವಿಕೆ ನಶಿಸುತ್ತಿದೆ.




 


►  ಕೃತಕ ಬುದ್ಧಿಮತ್ತೆಯ ಸವಾಲನ್ನು ನೀವು ಹೇಗೆ ಎದುರಿಸುತ್ತೀರಿ?

 ಪತ್ರಿಕೋದ್ಯಮವನ್ನು ಹೇಗೆ ಮಾಡಬೇಕೆಂದು ನಾವು ಭಾವಿಸುತ್ತೇವೆಯೋ ಹಾಗೆ ಮಾಡುವುದನ್ನು ಮುಂದುವರಿಸುತ್ತೇವೆ. ಅದರಾಚೆಗೆ ನಾವು ಮಾಡುವಂಥದ್ದು ಏನೂ ಇಲ್ಲ. ಚಿಂತನಶೀಲ ಮತ್ತು ನಿಷ್ಠ ಓದುಗರು ನಮ್ಮನ್ನು ಹುಡುಕಿಕೊಂಡು ಬರುವುದನ್ನು ಮುಂದುವರಿಸುತ್ತಾರೆ ಎಂದು ನಾವು ನಂಬಬೇಕು.

►  ‘ವಾರ್ತಾಭಾರತಿ’ಗೆ ನೀವು ಯಾವ ಸಲಹೆಯನ್ನು ನೀಡಬಯಸುತ್ತೀರಿ?

 ನಾವು ನಮ್ಮ ಮಾಧ್ಯಮವನ್ನು ಆರಂಭಿಸಿದಾಗ, ಹೆಚ್ಚಿನ ಮಾಧ್ಯಮಗಳು ಎನಾಲಿಟಿಕ್ಸ್ (ಓದುಗರು ಯಾವ ಲಿಂಕ್‌ಗಳನ್ನು ಒತ್ತುತ್ತಾರೆ ಮತ್ತು ಯಾವುದಕ್ಕೆ ಲೈಕ್‌ಗಳನ್ನು ಕೊಡುತ್ತಾರೆ ಎನ್ನುವುದನ್ನು ತೋರಿಸುವ ದತ್ತಾಂಶ)ಗೆ ಹೆಚ್ಚಿನ ಒತ್ತು ನೀಡುತ್ತಿದ್ದವು. ಓದುಗರು ಬಯಸುವುದು ಇದನ್ನು ಎಂಬುದಾಗಿ ತಾವು ಭಾವಿಸಿದ ವಿಷಯಗಳಿಗೆ ಅವುಗಳು ತಮ್ಮ ಸುದ್ದಿಗಳನ್ನು ಹೊಂದಿಸಿಕೊಳ್ಳುತ್ತಿದ್ದವು. ಇದು ಓದುಗರನ್ನು ಬುದ್ಧಿವಂತರಲ್ಲ ಎಂಬುದಾಗಿ ಭಾವಿಸುವುದಾಗಿದೆ. ನಾವು ಓದುಗರು ಬುದ್ಧಿವಂತರು ಎಂಬುದಾಗಿ ನಂಬಬೇಕು. ವಿಶ್ವಾಸ ನಿರ್ಮಾಣ ಆಗುವುದು ಸ್ಥಿರ, ಪ್ರಾಮಾಣಿಕ ಪತ್ರಿಕೋದ್ಯಮದ ಮೂಲಕವೇ ಹೊರತು, ಆಯಾಯ ಕಾಲದ ಪ್ರವೃತ್ತಿಗಳ ಹಿಂದೆ ಹೋಗುವುದರಿಂದ ಅಲ್ಲ. ಶ್ರದ್ಧೆ, ಪಾರದರ್ಶಕತೆ ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ಮಾಧ್ಯಮಗಳು ಮತ್ತು ಓದುಗರ ನಡುವೆ ನಿಧಾನವಾಗಿ ವಿಶ್ವಾಸ ಬೆಳೆಯುತ್ತದೆ. ನಾವು ಪ್ರತಿ ದಿನವೂ ಉತ್ತಮ ಪತ್ರಿಕೋದ್ಯಮವನ್ನು ಮಾಡುತ್ತಿರಬೇಕು, ಅಷ್ಟೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸಂದರ್ಶನ: ಅಮೀರ್

contributor

Similar News

ಕಾವ್ಯ ಸಂಗಮ

ನಾಡೋಜ ಪಂಪ