×
Ad

ಪಾವಗಡದಿಂದ ವಾಷಿಂಗ್ಟನ್ ವರೆಗೆ !

Update: 2026-02-08 13:28 IST

ಐಎಎಸ್‌ಗೆ ಸೇರುವುದು ನನ್ನ ಜೀವನವನ್ನೇ ಬದಲಾಯಿಸಿದ ಅನುಭವವಾಗಿತ್ತು. ಇಂತಹದ್ದೊಂದು ಸಾಧ್ಯವಾಗಬಹುದು ಎಂದು ನನ್ನ ಕುಟುಂಬದ ಯಾರೂ ಎಣಿಸಿರಲೇ ಇಲ್ಲ. ನನ್ನ ಹಳ್ಳಿಯಲ್ಲಿ, ಕೆಲವು ಹಿರಿಯರು ನನ್ನ ಸಾಧನೆ ಬಗ್ಗೆಯೇ ಸಂಶಯಪಟ್ಟಿದ್ದರು. ಅಂತಹ ದೊಡ್ಡ ಹುದ್ದೆ ನಮಗೆ ಹೇಗೆ ಸಿಗಲು ಸಾಧ್ಯ ಎಂದು ಅವರು ಹೇಳಿದ್ದರು. ಐಎಎಸ್ ಗೆ ಸೇರಲು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ನನ್ನ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್ ನನ್ನಲ್ಲಿ ಕೇಳಿದ್ದ. ಈ ಹುದ್ದೆ ತಹಶೀಲ್ದಾರ್ ಹುದ್ದೆಗಿಂತ ಮೇಲಿನದ್ದೇ ಅಥವಾ ಕೆಳಗಿನದ್ದೇ ಎಂದು ಕೆಲವರು ನನ್ನಲ್ಲಿ ಪ್ರಶ್ನಿಸಿದ್ದರು.

ಕವಿ ಹೃದಯದ ಲುತ್ಫುಲ್ಲಾ ಕೆ. ಅತೀಕ್ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನವರು. ಕೃಷಿ ಕುಟುಂಬದಿಂದ ಬಂದ ಇವರು, 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್ ಗೆ ಆಯ್ಕೆಯಾದವರು. ಮಂಗಳೂರಿನಲ್ಲಿಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಲೇಖಕ, ಅನುವಾದಕರಾಗಿಯೂ ಗಮನ ಸೆಳೆದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆಯಿಂದ ನಿವೃತ್ತರಾದ ಅತೀಕ್ ಅವರು ಈಗ ಬೆಂಗಳೂರು ಬಿಸಿನೆಸ್ ಕಾರಿಡಾರ್  



ಆಕಸ್ಮಿಕ ಐಎಎಸ್ ಅಧಿಕಾರಿಯ ಕಥನ

ಮೇ 2002ರಂದು ನಾನು ವಾಷಿಂಗ್ಟನ್ ಡಿ.ಸಿ.ಗೆ ಪಯಣಿಸುತ್ತಿದ್ದ ವಿಮಾನ ಇನ್ನೇನು ಡಲ್ಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ, ವಿಮಾನದ ಸಿಬ್ಬಂದಿ ವಲಸೆ ಅರ್ಜಿಯನ್ನು ತುಂಬಿಸಲು ನನ್ನ ಕೈಗಿತ್ತ. ಅದರಲ್ಲಿ ಹುಟ್ಟೂರು ಕಾಲಂನಲ್ಲಿ ಪಾವಗಡ ಎಂದು ನಮೂದಿಸಿದಾಗ, ವಾಸ್ತವಿಕತೆ ತಟ್ಟನೆ ನನ್ನನ್ನು ಎಚ್ಚರಿಸಿತು: ನಾನು ದೇವರೂ ಕಡೆಗಣಿಸಿದ ಪಾವಗಡ ಎಂಬ ಊರಿನವನು. ಬೇಸಿಗೆಯ ಉರಿ ಸೆಕೆಯನ್ನು ತಾಳಲಾರದೆ ಮನೆಯ ಹೊರಗೆ ಮಲಗುತ್ತಿದ್ದ ಮಕ್ಕಳ ಮೇಲೆ ಕತ್ತೆಕಿರುಬ ಅಥವಾ ತೋಳದ (ಯಾವುದು ಎಂದು ಯಾರಿಗೂ ಖಚಿತವಿಲ್ಲ) ದಾಳಿಗಳಿಗೆ ಆ ಊರು ಕುಖ್ಯಾತವಾಗಿತ್ತು. ಅಂತಹ ಊರಿನಿಂದ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ರಾಜಧಾನಿಗೆ ಕಾಲಿರಿಸುವುದು ನನ್ನಲ್ಲಿ ಕ್ಷಣಕಾಲ ಹೆಮ್ಮೆಯ ಭಾವನೆ ಮೂಡಿಸಿತು. ಇದು ಸುಮಾರು 25 ವರ್ಷಗಳ ಹಿಂದೆ ಎಂಬುವುದನ್ನು ನೆನಪಿಡಿ. ಅಂದು ವಿದೇಶ ಪಯಣ ಅಂದರೆ ಐಎಎಸ್ ಅಧಿಕಾರಿಗಳಿಗೂ ಸಾಮಾನ್ಯ ವಿಷಯವಾಗಿರಲಿಲ್ಲ.




 


ನಾನು ಶಿಥಿಲಾವಸ್ಥೆಯಲ್ಲಿದ್ದ ಒಂದು ಉರ್ದು ಶಾಲೆಯಲ್ಲಿ ಕಲಿತವನು. ನನ್ನ ತಂದೆಯವರೇ ಅಲ್ಲಿನ ಮುಖ್ಯೋಪಾಧ್ಯಾಯರಾಗಿದ್ದರು. ಉಪಾಧ್ಯಾಯರ ಮಗನಾಗಿರುವುದು ಸುಲಭದ ಮಾತಲ್ಲ. ನನ್ನ ನಡತೆ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಒಳ್ಳೆಯ ವಿದ್ಯಾರ್ಥಿ ಎಂಬ ಹೊಗಳಿಕೆ ನನಗೆ ಸಿಗುತ್ತಿದ್ದರೂ, ನನ್ನ ತರಗತಿಯೇನೂ ನಿಜವಾಗಿ ಉನ್ನತ ವರ್ಗದ್ದಾಗಿರಲಿಲ್ಲ. ತರಗತಿಯಲ್ಲಿದ್ದ ಎಲ್ಲ ಮಕ್ಕಳು ಅತ್ಯಂತ ಬಡತನದ ಹಿನ್ನೆಲೆಯವರು. ಅವರ ತಂದೆ ತಾಯಂದಿರು ಅಲ್ಪ ಶಿಕ್ಷಣ ಅಥವಾ ಶಿಕ್ಷಣವನ್ನೇ ಪಡೆಯದವರು. ನಾನೂ ಅವರಲ್ಲಿ ಒಬ್ಬನಾಗಿದ್ದೆ. ಆದರೆ ನನ್ನ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿತ್ತು. ಶಿಕ್ಷಕರಾಗಿದ್ದ ನನ್ನ ತಂದೆ ಬಹಳಷ್ಟನ್ನು ಸಾಧಿಸಬಲ್ಲವರಾಗಿದ್ದರು. ಆದರೆ ರೈತನ ಮಗನಾಗಿ (ಸ್ವಲ್ಪ ಜಮೀನು ಹೊಂದಿದ್ದ ನನ್ನ ಅಜ್ಜ ಅದನ್ನು ಕೌಟುಂಬಿಕ ವಿವಾದದಲ್ಲಿ ಕಳೆದುಕೊಂಡಿದ್ದರು.) ಕೆಲವೇ ವರ್ಷಗಳ ವಿದ್ಯಾಭ್ಯಾಸ ಅವರಿಗೆ ದೊರೆತಿತ್ತು. ಲೋವರ್ ಸೆಕಂಡರಿ ನಂತರ ಕಲಿಯಲು ಅವರಿಗೆ ಸಾಧ್ಯವಾಗಿರಲಿಲ್ಲ. ಅಂದಿನ ಕಾಲದಲ್ಲಿ ಲೋವರ್ ಸೆಕಂಡರಿ ಅಂದರೆ ಪದವಿ ರೀತಿಯಲ್ಲಿ ಇತ್ತು. ಲೋವರ್ ಸೆಕಂಡರಿ ಅಂದರೆ 7 ವರ್ಷಗಳ ಕಲಿಕೆ ಎಂದು ನನಗೆ ನಂತರ ಗೊತ್ತಾಯಿತು. ಆ ಬಳಿಕ ನನ್ನ ತಂದೆಯವರು ಮೈಸೂರಿಗೆ ತೆರಳಿ ಬೋಧನೆಯಲ್ಲಿ ಡಿಪ್ಲೊಮಾ ಪಡೆದರು. ಆ ಕಾಲದಲ್ಲಿ ಶಿಕ್ಷಕರ ಕೊರತೆ ಬಹಳ ಇತ್ತು. ಆಗ ತುಮಕೂರಿನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ)ಯಾಗಿ ಅಬ್ದುಲ್ ಅಝೀಝ್ ಎಂಬವರಿದ್ದರು. ನನ್ನ ತಂದೆ ಬೋಧನೆಯಲ್ಲಿ ಡಿಪ್ಲೊಮಾ ಪಡೆದಿರುವುದನ್ನು ತಿಳಿದುಕೊಂಡ ಅವರು, ತಂದೆಗೆ ಕೆಲಸ ನೀಡಿದರು ಎಂದು ನನಗೆ ಆನಂತರ ಗೊತ್ತಾಯಿತು. ನನ್ನ ತಂದೆಯವರು ಕೇವಲ ಲೋವರ್ ಸೆಕಂಡರಿ ಮಾಡಿದ್ದರೂ, ಇಂಗ್ಲಿಷ್ ಮೇಲಿನ ಅವರ ಹಿಡಿತ ನಂತರ ನನಗೆ ಆಶ್ಚರ್ಯ ಮೂಡಿಸಿತ್ತು. ನಾನು ಉರ್ದು ಮಾಧ್ಯಮದಲ್ಲಿ ಕಲಿತರೂ, ಇಂಗ್ಲಿಷ್ ಓದಲು ಮತ್ತು ಬರೆಯಲು ತಂದೆಯಿಂದ ಕಲಿತೆ. ಉರ್ದು ಕಾವ್ಯಗಳ ಕುರಿತಾದ ವಿಶೇಷ ಆಸಕ್ತಿಯನ್ನೂ ನಾನು ತಂದೆಯಿಂದಲೇ ಕಲಿತೆ.

ನನ್ನ ಇಡೀ ಐಎಎಸ್ ವೃತ್ತಿ ಬದುಕಿನಲ್ಲಿ ಉರ್ದು ಸಾಹಿತ್ಯದ ಬಗ್ಗೆ ಅದರಲ್ಲೂ ಉರ್ದು ಕಾವ್ಯದ ಮೇಲಿನ ಪ್ರೇಮ ನಿರಂತರವಾಗಿ ಮುಂದುವರಿಯಿತು. ಅದರ ಬಗ್ಗೆ ಹೆಚ್ಚಿನ ಮಾತು ನಂತರ; ಮೊದಲಿಗೆ ನಾನು ಹೇಗೆ ಐಎಎಸ್‌ಗೆ ಬಂದೆ ಎಂಬುವುದನ್ನು ನಿಮಗೆ ಹೇಳುತ್ತೇನೆ. ನಮ್ಮ ಜಮೀನು ನೋಡಿಕೊಳ್ಳುತ್ತಿದ್ದ ಅಡಪ್ಪ ಎಂಬಾತ, ನಾನು ಪಿಯುಸಿ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ. ಪಿಯುಸಿ ಪರೀಕ್ಷೆಗೆ ಇನ್ನು ಕೆಲವೇ ವಾರಗಳಿದ್ದವು. ಆದರೆ ನನ್ನ ತಂದೆ ನನ್ನನ್ನು ದನಗಳನ್ನು ಮೇಯಿಸಲು ಜಮೀನಿಗೆ ಕಳುಹಿಸಿದರು. ‘‘ಪುಸ್ತಕಗಳನ್ನು ಸಹ ತಗೊಂಡು ಹೋಗು, ದನಗಳು ಮೇಯುತ್ತಿರುವಾಗ ಓದು’’ - ಇದು ನನ್ನ ತಂದೆಯವರ ಆಜ್ಞೆಯಾಗಿತ್ತು. ಹಾಗೆ, ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಕೈಯಲ್ಲಿ ದನದ ಹಗ್ಗವನ್ನು ಹಿಡಿದುಕೊಂಡು ನಾನು ಜಮೀನಿಗೆ ಹೋಗಬೇಕಾಯಿತು. ಪರೀಕ್ಷೆಯಲ್ಲಿ ನನ್ನ ಸಾಧನೆ ಕಳಪೆಯಾಗಿತ್ತು. ಆದರೂ 1982ರ ಆ ವರ್ಷ ಕೊರಟಗೆರೆ ಜೂನಿಯರ್ ಕಾಲೇಜಿನ ಪಿಸಿಎಂಬಿ ವಿಭಾಗದಲ್ಲಿ ನಾನೇ ಟಾಪರ್ ಆಗಿದ್ದೆ. ಪಿಯುಸಿಯಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಸಿಗುವ ಆಸೆಯನ್ನು ನಾನು ಇಟ್ಟುಕೊಳ್ಳುವಂತಿರಲಿಲ್ಲ. ನನ್ನ ತಂದೆಯವರು ಕೃಷಿ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿಕರ ಮಕ್ಕಳಿಗೆ ಆದ್ಯತೆ ನೀಡುವ ಬಗ್ಗೆ ಕೆಲವು ಗೆಳೆಯರು ಅವರಿಗೆ ಹೇಳಿದ್ದರು. ಹಾಗೆ ನಾನು ತಂದೆಯವರ ಜಮೀನಿನ ಆರ್‌ಟಿಸಿ ಪ್ರತಿಯೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿದೆ. ಆದರೆ ನನಗೆ ಧಾರವಾಡ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಆ ದಿನಗಳಲ್ಲಿ 450 ಕಿ.ಮೀ ಅಂದರೆ ಬಹಳ ದೂರವಾಗಿತ್ತು. ಆದರೂ ತಂದೆ ನನ್ನನ್ನು ಹೇಗೋ ಅಲ್ಲಿಗೆ ಕಳುಹಿಸಿದರು. ಇಲ್ಲಿ ಧಾರವಾಡದಲ್ಲಿ ನಾನು ಮೊದಲ ಬಾರಿಗೆ ಐಎಎಸ್ ಬಗ್ಗೆ ಕೇಳಿದೆ. ಹಾಗೆ ನಾನು ಐಎಎಸ್ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಅದನ್ನು ನಾನು ಎಂ.ಎಸ್ಸಿ ಕಲಿಯುತ್ತಿದ್ದಾಗ ಹಾಗೂ ಆ ಬಳಿಕ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹ್ಮದಾಬಾದ್‌ನಲ್ಲಿ ಸಂಶೋಧನಾ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಬರೆದೆ. ಐಎಎಸ್ ಅಧಿಕಾರಿಯಾಗುವುದೆಂದರೇನು ಎಂಬ ಬಗ್ಗೆ ನನಗೆ ಯಾವುದೇ ಐಡಿಯಾ ಇರಲಿಲ್ಲ. ಆದರೂ ಹೇಗಾದರೂ ಮಾಡಿ ಪ್ರಯತ್ನಿಸಿ ಅದನ್ನು ಸಾಧಿಸಬೇಕು ಎಂಬ ಭಾವನೆ ನನ್ನಲ್ಲಿ ಬಲವಾಗಿತ್ತು. ನಾನು ಮೂರನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನಕ್ಕೆ ದೆಹಲಿಗೆ ಹೋದೆ. ಸಂದರ್ಶನವನ್ನು ನಾನು ಚೆನ್ನಾಗಿ ಮಾಡಿದೆ ಎಂದು ನನಗೆ ಅನಿಸಿತ್ತು. ನಾನು ಮತ್ತೆ ಅಹ್ಮದಾಬಾದ್ ಗೆ ಹಿಂದಿರುಗಿ ಕೆಲವು ತಿಂಗಳು ಕೆಲಸ ಮಾಡಿದೆ. ಈ ಅವಧಿಯಲ್ಲಿಯೇ ಫಲಿತಾಂಶ ಪ್ರಕಟವಾಯಿತು. ಪತ್ರಿಕೆಗಳಲ್ಲಿ ಪ್ರಕಟವಾದ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ಐಐಎಂನಲ್ಲಿನ ನನ್ನ ಸಹೋದ್ಯೋಗಿಯೊಬ್ಬರು ನೋಡಿದರು.




 


ಐಎಎಸ್‌ಗೆ ಸೇರುವುದು ನನ್ನ ಜೀವನವನ್ನೇ ಬದಲಾಯಿಸಿದ ಅನುಭವವಾಗಿತ್ತು. ಇಂತಹದ್ದೊಂದು ಸಾಧ್ಯವಾಗಬಹುದು ಎಂದು ನನ್ನ ಕುಟುಂಬದ ಯಾರೂ ಎಣಿಸಿರಲೇ ಇಲ್ಲ. ನನ್ನ ಹಳ್ಳಿಯಲ್ಲಿ, ಕೆಲವು ಹಿರಿಯರು ನನ್ನ ಸಾಧನೆ ಬಗ್ಗೆಯೇ ಸಂಶಯಪಟ್ಟಿದ್ದರು. ಅಂತಹ ದೊಡ್ಡ ಹುದ್ದೆ ನಮಗೆ ಹೇಗೆ ಸಿಗಲು ಸಾಧ್ಯ ಎಂದು ಅವರು ಹೇಳಿದ್ದರು. ಐಎಎಸ್ ಗೆ ಸೇರಲು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ನನ್ನ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್ ನನ್ನಲ್ಲಿ ಕೇಳಿದ್ದ. ಈ ಹುದ್ದೆ ತಹಶೀಲ್ದಾರ್ ಹುದ್ದೆಗಿಂತ ಮೇಲಿನದ್ದೇ ಅಥವಾ ಕೆಳಗಿನದ್ದೇ ಎಂದು ಕೆಲವರು ನನ್ನಲ್ಲಿ ಪ್ರಶ್ನಿಸಿದ್ದರು.

ಏನೇ ಇರಲಿ, ಒಮ್ಮೆ ಐಎಎಸ್ ಗೆ ಸೇರಿದ ಬಳಿಕ, ನಾನು ಏನೋ ಸಾಧಿಸಿದ್ದೇನೆ ಅಥವಾ ಇದ್ದಕ್ಕಿದ್ದಂತೆ ನಾನು ಶ್ರೇಷ್ಠನಾಗಿದ್ದೇನೆ ಎಂಬ ಭಾವನೆ ನನಗೆ ಬರಲಿಲ್ಲ. ನಾನು ಅತ್ಯಂತ ವಿನೀತನಾಗಿಯೇ ಇದ್ದೆ. ಮಸ್ಸೂರಿಯಲ್ಲಿರುವ ನಮ್ಮ ತರಬೇತಿ ಕೇಂದ್ರದಲ್ಲಿ ರೂಮ್ ಬಾಯ್ ನನ್ನ ಶೂಗಳನ್ನು ಪಾಲಿಶ್ ಮಾಡಲು ಬಂದಿದ್ದ. ಅದು ಆತನ ನಿತ್ಯದ ಕೆಲಸದ ಭಾಗವಾಗಿತ್ತು. ನನ್ನ ಶೂಗಳನ್ನು ಇನ್ನೊಬ್ಬರು ಪಾಲಿಶ್ ಮಾಡುವುದು ಸರಿಯಲ್ಲ ಎಂಬ ಭಾವನೆ ನನ್ನದಾಗಿತ್ತು. ನನ್ನ ಶೂ ಪಾಲಿಶ್ ಮಾಡುವುದು ಬೇಡ ಎಂದು ಅವನಿಗೆ ಹೇಳಿದೆ. ನನ್ನ ಶಾಲೆಯ ಗುರುಗಳು ಮತ್ತು ಊರಿನ ಹಿರಿಯರು ಊರಿನಲ್ಲಿ ನನ್ನನ್ನು ಸನ್ಮಾನಿಸಿದ್ದರು. ಎಲ್ಲರ ಗಮನದ ಕೇಂದ್ರ ಬಿಂದುವಾಗಿರುವುದು ಕಂಡು ನನ್ನ ಹೃದಯ ತುಂಬಿ ಬಂದಿತ್ತು. ನಾವೆಲ್ಲರೂ ಯಾವತ್ತೂ ಗುರುಗಳಿಗೆ ಹಾಗೂ ಊರಿನ ಹಿರಿಯರಿಗೆ ವಿಧೇಯ ಮತ್ತು ಆಜ್ಞಾಪಾಲಕರಾಗಿಯೇ ಇರುತ್ತಿದ್ದೆವು. ನಾನು ಐಎಎಸ್ ಆದ ಬಳಿಕವೂ ನನಗೆ ಬದಲಾಗಲು ಸಾಧ್ಯವಾಗಿಲ್ಲ. ಎಷ್ಟೆಂದರೆ, ಒಮ್ಮೆ ನನ್ನ ಗ್ರಾಮದ ಗ್ರಾಮ ಲೆಕ್ಕಿಗ ‘‘ಸಾರ್, ನೀವು ಇಷ್ಟು ಮೃದು ಮತ್ತು ಸಭ್ಯರಾಗಿದ್ದರೆ, ಐಎಎಸ್ ನಲ್ಲಿ ಹೇಗೆ ಬದುಕುಳಿಯುತ್ತೀರಿ’’ ಎಂದು ಕೇಳಿದ್ದ.




 


ಪ್ರೊಬೆಷನರಿ ಅವಧಿಯಲ್ಲಿ ನಾನು ಬಹಳಷ್ಟು ಸಾಹಿತ್ಯ ಓದಿದೆ. ಸಂಗೀತ ಕೇಳಿದೆ, ವಿಶೇಷವಾಗಿ ಇಕ್ಬಾಲ್ ಬಾನು, ಅಬಿದಾ ಪರ್ವೀನ್, ನೂರ್ ಜಹಾನ್, ಜಗಜಿತ್ ಸಿಂಗ್ ಮುಂತಾದವರು ಹಾಡಿದ ಫೈಜ್ ಅಹ್ಮದ್ ಫೈಜ್ ಮತ್ತು ಗಾಲಿಬ್ ಅವರ ಗಂಭೀರ ಉರ್ದು ಕವಿತೆಗಳನ್ನು. ಅದೇ ಸಮಯದಲ್ಲಿ, ನಾನು ಫ್ರಾಂಜ್ ಕಾಫ್ಕಾ ಅವರ ‘ದಿ ಟ್ರಯಲ್’ ಪುಸ್ತಕ ಓದಿದೆ. ಗಿರೀಶ್ ಕಾಸರವಳ್ಳಿ ಅವರ ಪ್ರಶಸ್ತಿ ವಿಜೇತ ಚಲನಚಿತ್ರ ತಬರನ ಕಥೆ ನೋಡಿದೆ. ಫೈಜ್ ಅಹ್ಮದ್ ಫೈಜ್ ಅವರ ಪ್ರಣಯ ಮತ್ತು ಕ್ರಾಂತಿಕಾರಿ ಕವಿತೆಗಳನ್ನು ಓದಿದೆ. ಇವೆಲ್ಲವೂ ನನ್ನನ್ನು ಐಎಎಸ್ ನಲ್ಲಿ ಬಹಳ ವಿಭಿನ್ನವಾಗಿಸಿದವು. ನಾನು ನನ್ನನ್ನು ಕಾಫ್ಕಾ ಅವರ ‘ಟ್ರಯಲ್’ನ ಜೋಸೆಫ್ ಕೆ. ಮತ್ತು ‘ತಬರನ ಕಥೆ’ಯ ತಬರನೊಂದಿಗೆ ಹೆಚ್ಚು ಗುರುತಿಸಿಕೊಂಡೆ. ಪಿಂಚಣಿಗಾಗಿ ತಬರ ನಡೆಸುವ ಹೋರಾಟ ನನ್ನನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿತೆಂದರೆ, ನನ್ನ ಬಳಿಗೆ ಬರುವ ಯಾವುದೇ ಅರ್ಜಿದಾರನಲ್ಲೂ ನನಗೆ ತಬರನೇ ಕಾಣುತ್ತಿದ್ದ. ಜನರು ಐಎಎಸ್ ಅಧಿಕಾರಿಗಳಿಂದ ಒಂದು ರೀತಿಯ ದೊಡ್ಡಸ್ತಿಕೆ ನಡವಳಿಕೆಯನ್ನು ನಿರೀಕ್ಷಿಸಿದರೂ, ನಾನು ಐಎಎಸ್ ಅಧಿಕಾರಿಯಾಗಿದ್ದೂ, ಈ ರೀತಿ ಜನಸಾಮಾನ್ಯರೊಂದಿಗೆ ನಿಲ್ಲುವುದು ನನಗೆ ಸಹಜವಾಗಿಯೇ ಬಂದಿತ್ತು.

ನಾನು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಯಾಣಿಸಿದಾಗ ನನಗೆ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ‘ವನ್ ಹಂಡ್ರೆಂಡ್ ಇಯರ್ ಆಫ್ ಸಾಲಿಟ್ಯೂಡ್’ ನೆನಪಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಬರಹಗಾರರು ಮತ್ತು ಕವಿಗಳೊಂದಿಗೆ ಸಮಯ ಕಳೆದೆ. ಆ ಸಮಯದಲ್ಲಿಯೇ ನಾನು ಫೈಜ್ ಅಹ್ಮದ್ ಫೈಜ್ ಅವರ ಕವಿತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಫೈಜ್ ಅವರಲ್ಲಿ ನನಗೆ ಮಾನವೀಯತೆ ಹಾಗೂ ದುರ್ಬಲರಿಗಾಗಿನ ಪ್ರೇಮ ದೊರೆಯಿತು. ಕಾರ್ಮಿಕರು, ಗುಮಾಸ್ತರು, ಪೋಸ್ಟ್ ಮ್ಯಾನ್, ರೈತರು ಮುಂತಾದವರನ್ನು ಅಭಿಸಂಬೋಧಿಸುವ ಅವರ ‘ಇಂತೆಸಾಬ್’ ಕವಿತೆ ನನಗೆ ಸ್ಫೂರ್ತಿ ನೀಡಿತು. ದಬ್ಬಾಳಿಕೆ ಮತ್ತು ಕತ್ತಲೆಯನ್ನು ಎದುರಿಸುತ್ತಿರುವ ಜನರಿಗೆ ಫೈಜ್ ಕವಿತೆ ಆಶಾಭಾವನೆ ನೀಡಿತ್ತು. ಯಾವತ್ತಾದರೂ ಭಾವನಾತ್ಮಕ ತುಮುಲಕ್ಕೆ ಒಳಗಾದಾಗ ಅಥವಾ ವ್ಯವಸ್ಥೆಯಿಂದ ಅನ್ಯಾಯವಾಗಿದೆ ಎಂದು ನಾನು ಭಾವಿಸಿದಾಗ ಫೈಜ್ ಅವರ ‘‘ನಾನು ನನ್ನ ಪ್ರಿಯತಮೆಯನ್ನು ಭೇಟಿ ಮಾಡುವಾಗ ಅವರು ದೀಪಗಳನ್ನು ಆರಿಸಬಹುದು, ಅವರು ಚಂದ್ರನನ್ನೇ ಆರಿಸಲು ಯತ್ನಿಸಲಿ’’ ಎಂಬ ಸಾಲುಗಳನ್ನು ನೆನಪಿಸಿಕೊಳ್ಳುತ್ತಿದ್ದೆ.




 


ನಮ್ಮಂತಹ ಸಮಾಜದಲ್ಲಿ ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನು ಕೆಲವೊಮ್ಮೆ ತೀರಾ ಮಾನವೀಯತೆಯನ್ನೇ ಕಳೆದುಕೊಳ್ಳುವ ಅನುಭವವಾಗಿ, ಅಥವಾ ಸಂವೇದನೆಯನ್ನು ಇಲ್ಲವಾಗಿಸುವ ಅನುಭವವಾಗಿಯೇ ಸಾಮಾನ್ಯವಾಗಿ ನೋಡಲಾಗುತ್ತದೆ. ಆದರೆ ಬಾಲ್ಯದಿಂದ ನಾನು ಪಡೆದ ಸಂಸ್ಕಾರ, ನನ್ನ ತಂದೆ ತಾಯಿಯಿಂದ ಪಡೆದುಕೊಂಡ ಶಿಕ್ಷಣ (ಅವರು ಅದನ್ನು ಯಾವತ್ತೂ ನನಗೆ ಪ್ರತ್ಯೇಕವಾಗಿ ಕಲಿಸಲು ಪ್ರಯತ್ನಿಸದಿದ್ದರೂ) ಮತ್ತು ಸಾಹಿತ್ಯ ಮತ್ತು ಕಾವ್ಯ, ಆಡಳಿತದಲ್ಲಿ ಸರಿಯಾದ ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಲುತ್ಫುಲ್ಲಾ ಕೆ. ಅತೀಕ್

contributor

Similar News

ಕಾವ್ಯ ಸಂಗಮ

ನಾಡೋಜ ಪಂಪ