ಪ್ರಕೃತಿಯೊಂದಿಗೆ ಲೀನವಾದ ಶರಣರು
ಜಾಗತಿಕ ತಾಪಮಾನ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎಂದು ವಿಜ್ಞಾನಿಗಳ ಅಭಿಮತ. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವಾಮಾನ ವಿದ್ಯಮಾನಗಳ (ಉದಾಹರಣೆಗೆ ತಾಪಮಾನ, ಮಳೆ ಮತ್ತು ಬಿರುಗಾಳಿಗಳು) ಮತ್ತು ಸಂಬಂಧಿತ ಪ್ರಭಾವಗಳಿಂದ ವಿವರವಾದ ಅವಲೋಕನಗಳನ್ನು ಸಂಗ್ರಹಿಸಿದ್ದಾರೆ.
‘ಸಿಕಾ’ ಕಾವ್ಯನಾಮದ ಡಾ. ಕಾವ್ಯಶ್ರೀ ಮಹಾಗಾಂವಕರ ಕಲ್ಯಾಣ ಕರ್ನಾಟಕದ ಗಡಿನಾಡು ಬೀದರಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಪರಿವಾರದ ಮಗಳು. ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ. ಕಲಬುರಗಿಯ ‘ಶರಣಬಸವ ವಿಶ್ವವಿದ್ಯಾಲಯ’ ದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ. ಪ್ರೇಮ ಕಾವ್ಯ, ಒಳ್ಕಲ್ಲ ಒಡಲು ಇವರ ಪ್ರಕಟಿತ ಕಾದಂಬರಿ. ಬೆಳಕಿನೆಡೆಗೆ, ಪ್ರಳಯದಲ್ಲೊಂದು ಪ್ರಣತಿ, ಆಮೆ ಮೇಲೊಂದಾನೆ ಇವರ ಪ್ರಕಟಿತ ಕಥಾ ಸಂಕಲನ. 20ಕ್ಕೂ ಅಧಿಕ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. ಶರಣ ಸಾಹಿತ್ಯಕ್ಕೂ ಪರಿಸರಕ್ಕೂ ಇರುವ ಅವಿನಾಭಾವ ನಂಟನ್ನು ಇಲ್ಲಿ ದಾಖಲಿಸಿದ್ದಾರೆ.
ಆಧುನಿಕ ಜೀವನ ಶೈಲಿಯನ್ನು ಮೆಲುಕು ಹಾಕುತ್ತ, ಅಂತರಂಗಕ್ಕೆ ಪ್ರಶ್ನೆಗಳ ರವಾನಿಸುತ್ತ ಸಾಗಿದರೆ, ಮನುಷ್ಯ ಮತ್ತು ಪ್ರಕೃತಿ ಎರಡು ಭಿನ್ನ ಆಯಾಮಗಳಾಗಿ ಕಾಣುತ್ತವೆ. ಇದು ಅವಾಸ್ತವ ಎನಿಸಬಹುದು, ಆದರೂ ಪ್ರಸ್ತುತ ಬದುಕಿನ ವಾಸ್ತವ ನೆಲೆಯಾಗಿದೆ. ವಿಜ್ಞಾನ, ತಂತ್ರಜ್ಞಾನಗಳಿಂದ ಅತ್ಯಂತ ಮುಂದುವರಿದ ಮಾನವನ ಅಭಿವೃದ್ಧಿಗೊಂಡ ಜೀವನದ ವ್ಯಂಗ್ಯವೂ ಹೌದು. ಪ್ರಕೃತಿ ಒಳಗೊಂಡ ಅನೇಕ ತತ್ವಗಳಿಂದಲೇ ಮನುಷ್ಯನ ನಿರ್ಮಾಣವಾಗಿರುವ ಸತ್ಯವು ಮರೆವಿನಂಚಿಗೆ ಹೋದ ಭ್ರಮೆಗೊಳಗಾಗಿದೆ. ಆ ಮರೆವು ಭವಿಷ್ಯದಲ್ಲಿ ಇಡೀ ಮನುಕುಲವನ್ನೇ ಅಳಿವಿನಂಚಿಗೆ ತಳ್ಳುವ ಅಪಾಯದಲ್ಲಿದೆ. ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವ ತುರ್ತು ಇಂದಿನದಾಗಿದೆ. ಪ್ರಸ್ತುತದಲ್ಲಿ ಬಳಸುತ್ತಿರುವ ವೈಜ್ಞಾನಿಕ, ತಾಂತ್ರಿಕ ಉಪಕರಣಗಳು ಮಾನವರನ್ನು ಆವರಿಸಿ ನಿಸರ್ಗ ದೂರಾಗುತ್ತಿರುವ ಅಪಾಯಗಳನ್ನು ಗ್ರಹಿಸುವುದು ಸೂಕ್ತ. ಮನುಷ್ಯ ಮತ್ತು ಪ್ರಕೃತಿ ಒಂದೇ ಎನ್ನುವ ಭಾವವನ್ನು ಪರಿಭಾವಿಸಿಕೊಳ್ಳ ಬೇಕಾದ ಸಮಯವಿದು. ಶರಣರಂತೆ ಮನಸ್ಸು ಆರ್ದ್ರಗೊಳ್ಳದ ಹೊರತು ಪ್ರಕೃತಿ ತತ್ವಗಳು ಜೀರ್ಣವಾಗುವುದು ಕಷ್ಟಸಾಧ್ಯ.
‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು’
ಬಸವಣ್ಣನ ವಚನದ ಸಾಲು ಇಂದಿನ ಭೂಮಿಯ ತಾಪಮಾನದ ಹಿನ್ನೆಲೆಯಲ್ಲಿ ಅರುಹಿದಂತಿದೆ. ಇಂದು ಪ್ರಚಲಿತವಾಗಿರುವ ಪರಿಸರ ಹಾಗೂ ಪ್ರಜ್ಞೆ ಶಬ್ದಗಳು, ವೈಜ್ಞಾನಿಕವಾದ ಹೊಸ ಅನ್ವೇಷಣೆಯಿಂದ ಹುಟ್ಟಿಕೊಂಡವು. ವಿಶ್ವವ್ಯಾಪಿಯಾಗಿ ಹೇಳಲಾಗುವ ‘ಗ್ಲೋಬಲ್ ವಾರ್ಮಿಂಗ್’ ಅನ್ನು ವಿಜ್ಞಾನಿಗಳು ಸಂಶೋಧನೆಯ ಮೂಲಕ ಕಂಡುಕೊಂಡ ಆವಿಷ್ಕಾರ. ಅದುವೇ ‘ಜಾಗತಿಕ ತಾಪಮಾನ’. ಇಂದಿನ ‘ಪರಿಸರ ವಿಜ್ಞಾನ’ ಮತ್ತು ‘ಪರಿಸರ ಪ್ರಜ್ಞೆ’, ಅಂದು ಹನ್ನೆರಡನೇ ಶತಮಾನದಲ್ಲಿ ಪರಿಸರವೇ ಪ್ರಕೃತಿಯಾಗಿ, ಶರಣರ ಬದುಕನ್ನು ವ್ಯಾಪಿಸಿಕೊಂಡಿತ್ತು.
ವಿಜ್ಞಾನಲೋಕದಲ್ಲಿ ಮತ್ತೆ ಮತ್ತೆ ನಡೆಯುತ್ತಿರುವ ಪ್ರಯೋಗಗಳ ಫಲಿತಾಂಶ ಇಂದು ನಮ್ಮ ಮುಂದಿದೆ. ಭೂಮಿಯ ವಾತಾವರಣ ಮತ್ತು ಸಸ್ಯ ಜೀವನದ ಮೇಲೆ ಇಂಗಾಲದ ಡೈಆಕ್ಸೆ ಡ್‌ನ, ಹೆಚ್ಚುತ್ತಿರುವ ಸಾಂದ್ರತೆಯ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಭೂಮಿಯ ಹವಾಮಾನವನ್ನು ಮಾರ್ಪಡಿಸುವಲ್ಲಿ ಹಸಿರುಮನೆ ಅನಿಲಗಳ ಪಾತ್ರದ ಮಹತ್ವವನ್ನು ಜನಜನಿತಗೊಳಿಸಲಾಯಿತು. ಜಾಗತಿಕ ತಾಪಮಾನ ಏರಿಕೆ, ಸರಾಸರಿ ಗಾಳಿಯನ್ನು ಹೆಚ್ಚಿಸುವ ವಿದ್ಯಮಾನ, ಕಳೆದ ಒಂದರಿಂದ ಎರಡು ಶತಮಾನಗಳಲ್ಲಿ ಏರಿಕೆಯಾಗಿದೆ ಎಂದು ವಿಜ್ಞಾನಿಗಳ ಅಭಿಮತ. ಭೂಮಿಯ ಹವಾಮಾನವನ್ನು ಅವರು ಇಪ್ಪತ್ತನೇ ಶತಮಾನದ ಮಧ್ಯಭಾಗದಿಂದ ವಿವಿಧ ಹವಾಮಾನ ವಿದ್ಯಮಾನಗಳ (ಉದಾಹರಣೆಗೆ ತಾಪಮಾನ, ಮಳೆ ಮತ್ತು ಬಿರುಗಾಳಿಗಳು) ಮತ್ತು ಸಂಬಂಧಿತ ಪ್ರಭಾವಗಳಿಂದ ವಿವರವಾದ ಅವಲೋಕನಗಳನ್ನು ಸಂಗ್ರಹಿಸಿದ್ದಾರೆ. ಹವಾಮಾನ (ಉದಾಹರಣೆಗೆ ಸಾಗರದ ಪ್ರವಾಹಗಳು ಮತ್ತು ವಾತಾವರಣದ ರಾಸಾಯನಿಕ ಸಂಯೋಜನೆ) ಈ ಡೇಟಾ ಭೂವೈಜ್ಞಾನಿಕ ಸಮಯದ ಆರಂಭದಿಂದಲೂ ಭೂಮಿಯ ಹವಾಮಾನವು ಬಹುತೇಕ ಎಲ್ಲಾ ಕಾಲಾವಧಿಯಲ್ಲಿ ಬದಲಾಗಿದೆ ಎಂದು ಸೂಚಿಸುತ್ತದೆ. ಹಾಗೆಯೇ ಕನಿಷ್ಠ ಕೈಗಾರಿಕಾ ಕ್ರಾಂತಿಯ ಆರಂಭದಿಂದಲೂ ಮಾನವ ಚಟುವಟಿಕೆಗಳು ಇಂದಿನ ವೇಗ ಮತ್ತು ವ್ಯಾಪ್ತಿಯ ಮೇಲೆ ಬೆಳೆಯುತ್ತಿರುವ ಪ್ರಭಾವವನ್ನು ಹೊಂದಿವೆ. ಅದರ ಪರಿಣಾಮವಾಗಿ ಈ ಹವಾಮಾನ ಬದಲಾವಣೆಯನ್ನು ಎದುರಿಸಬೇಕಾಗಿದೆ. ಜಾಗತಿಕ ತಾಪಮಾನ ನಿಯಂತ್ರಿಸಲು ಮೂಡಿಸುವ ಅರಿವು ‘ಪರಿಸರ ಪ್ರಜ್ಞೆ’. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಪ್ರಕೃತಿ ಸಂರಕ್ಷಣೆಯೇ ಮನುಷ್ಯನಿಗಿರಬೇಕಾದ ಪರಿಸರ ಪ್ರಜ್ಞೆ. ಅಂದರೆ ಮನುಕುಲದ ಸುತ್ತಲೂ ಆವರಿಸಿರುವ ಪ್ರಕೃತಿ. ನಿಸರ್ಗದಲ್ಲಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಎಲ್ಲವೂ ಕೂಡಿದ ಒಟ್ಟು ಅಂಶವೇ ಪ್ರಕೃತಿ.
ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಕೃತಿ ಶಬ್ದದ ಹಿನ್ನೆಲೆಯಲ್ಲಿ ಗ್ರಹಿಸುವ ಪ್ರಯತ್ನವಿದು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವಿರುವ ಅನೇಕ ವಚನಗಳು ಲಭಿಸುತ್ತವೆ. ಅವುಗಳ ವಿಭಿನ್ನ ಆಯಾಮಗಳು ಕಾಣಸಿಗುತ್ತವೆ. ಶರಣರ ಚಿಂತನಾ ಕ್ರಮದಲ್ಲಿ ‘ಪ್ರಜ್ಞೆ’ ಎನ್ನುವುದು ಮನುಷ್ಯನಲ್ಲಿ ಆಂತರಿಕವಾಗಿ ನಡೆಯುವ ಕ್ರಿಯೆ. ಒಳಗಿನ ಮನೋಲೋಕದಲ್ಲಿ ಹೌದು ಎನಿಸಿದರೆ ಮಾತ್ರ ‘ಅರಿವು’ ಮೂಡಿ, ಪ್ರಜ್ಞೆ ಜಾಗೃತವಾಗುತ್ತದೆ. ಆದ್ದರಿಂದ ಪ್ರಜ್ಞೆ ಎನ್ನುವುದು ಅಂತರಂಗದಲ್ಲಿ ನಡೆದು ನೆಲೆಗೊಳ್ಳಬೇಕಾದ ಪ್ರಕ್ರಿಯೆ. ‘ಪರಿಸರ’ ಮನುಷ್ಯನ ಸುತ್ತಮುತ್ತಲಿನ ಹೊರಲೋಕ. ಬಾಹ್ಯವಾಗಿ ಕಂಡು ಬರುವಂತಹವು. ಒಂದು ಅಂತರಂಗದ ಅರಿವು ಆದರೆ, ಇನ್ನೊಂದು ಅರಿವಿನ ಮೇಲೆ ಪ್ರಭಾವ ಬೀರುವಂತಹದ್ದು. ಅವು ನಿಸರ್ಗದ ಪಂಚತತ್ವಗಳಾದ ಭೂಮಿ, ಆಕಾಶ, ಅಗ್ನಿ, ವಾಯು, ಜಲ. ಒಟ್ಟಾರೆ ಹೇಳುವುದಾದರೆ ಸೃಷ್ಟಿ, ನಿಸರ್ಗ, ಪ್ರಕೃತಿ ಎಂದು ಭಿನ್ನಭಿನ್ನವಾಗಿ ಕರೆಯಬಹುದು.
ಶರಣರು ತಮ್ಮ ವಚನಗಳಲ್ಲಿ ಪ್ರಮುಖವಾಗಿ ಹೇಳಿದ್ದೇನೆಂದರೆ, ಮೊದಲು ಮನಸ್ಸು ಶುದ್ಧ ಮಾಡಿಕೊಂಡು, ನಂತರ ಪರಿಸರ ಸ್ವಚ್ಛವಾಗಿಡಬೇಕು.
ಬಸವಣ್ಣ ಸರಳವಾದ ಏಳು ಬೇಡಗಳನ್ನು ಉಲ್ಲೇಖಿಸುತ್ತ ಮಹತ್ವದ ಸಂದೇಶವನ್ನು ರವಾನಿಸಿರುವುದು ವಿಶೇಷ. ಈ ವಚನದಲ್ಲಿ ಮನುಷ್ಯನ ಆಂತರ್ಯದ ಶುಚಿತ್ವ ಬಾಹ್ಯ ಶುಚಿತ್ವಕ್ಕೆ ದಾರಿಯಾಗುವ ಪರಿಯ ಸೂಕ್ಷ್ಮತೆ ಗಮನೀಯ.
‘ಕಲಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ’.
ಇದೇ ಮಾತನ್ನು ಕೃಷಿ ಕಾಯಕದ ಮುದ್ದಣನ ವಚನದಲ್ಲೂ ಕಾಣುತ್ತೇವೆ.
‘ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಬಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ’
ತನ್ನ ವ್ಯವಸಾಯದ ಕೆಲಸದಲ್ಲಿ ಭೂಮಿಯನ್ನು ಹದಗೊಳಿಸಿದಂತೆ, ಮೊದಲು ದೇಹವನ್ನೂ ಹದಗೊಳಿಸಬೇಕೆನ್ನುವ ಮಾತಿದೆ. ಅಂಗ ಮತ್ತು ಲಿಂಗದ ಸಾಮರಸ್ಯವಿದ್ದರೆ, ಫಲ ಸಿಗುವುದರೊಂದಿಗೆ, ವಿಶ್ವಾಸ ಮೂಡಿ, ಸುಖ ಲಭಿಸುತ್ತದೆನ್ನುವ ವಿಚಾರ ಮುದ್ದಣನದು.
ಹೀಗೆ ಮನಸ್ಸು ಶುಭ್ರವಾದ ಬಳಿಕ ಬಾಹ್ಯದಲ್ಲಿರುವ ಭೂಮಿ, ಆಕಾಶ, ಅಗ್ನಿ, ವಾಯು, ಜಲ ಪಂಚಭೂತಗಳನ್ನು ಶುದ್ಧವಾಗಿಡಲು ಮುಂದಾಗಬೇಕಾಗುತ್ತದೆ. ಇದನ್ನು ಜನಪದೀಯರು ತ್ರಿಪದಿಯಲ್ಲಿ ಋಣಾತ್ಮಕವಾಗಿ ಹೇಳಿರುವುದನ್ನು ಗಮನಿಸಬಹುದು.
‘ಹೊತ್ತಾರೆ ಎದ್ದು ಯಾರ್‌ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯ
ಎದ್ದೊಂದು ಗಳಿಗೆ ನೆನದೇನ’
ಈ ಭೂಮಿಯನ್ನು ತಾಯಿಯೆಂದು ಆರಾಧಿಸುವ ಜನಪದೀಯರಲ್ಲಿರುವುದು ಪ್ರಕೃತಿ ಭಕ್ತಿ. ಇದನ್ನೇ ಶರಣ ಚೆನ್ನಬಸವಣ್ಣ ಹೇಳುವ ರೀತಿ ಹೀಗಿದೆ,
‘ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ
ನಾ ನೋಡುತಿಹ ಆಕಾಶದ ಚಂದ್ರಸೂರ್ಯರ
ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ
ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ
ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ
ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ’
ಈ ಪ್ರಕೃತಿ ಮನುಷ್ಯನಿಗೆ ‘ಕೊಡುವ ಕೈ’ ಇದ್ದಂತೆ. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಜೀವನ ಸಾಗಿಸಲು ಬೇಕಾದುದೆಲ್ಲವನ್ನೂ ಪ್ರಕೃತಿಯಿಂದಲೇ ಪಡೆದುಕೊಳ್ಳುತ್ತಾನೆ. ಮೇಲೆ ಉಲ್ಲೇಖಿಸಿದ ಚೆನ್ನಬಸವಣ್ಣನ ವಚನದಲ್ಲೂ ಅದೇ ಆಶಯವಿದೆ. ಭೂಮಿ ನೀಡಿ ನೀಡಿ ಭಕ್ತನಾಗಿರುವ ಪರಿಯನ್ನು ಕಾಣುತ್ತೇವೆ. ಅದರಂತೆಯೇ ನಾವೂ ಭಕ್ತಿ ಭಾವನೆಯಿಂದ ಭೂಮಿಯನ್ನು ಪೂಜಿಸಬೇಕು, ಆರಾಧಿಸಬೇಕು ಎನ್ನುವ ಭಾವವಿದೆ. ಆಕಾಶದಲ್ಲಿರುವ ಸೂರ್ಯ ಚಂದ್ರರು, ಬೇಸಾಯಕ್ಕೆ ಬಳಸುವ ನೀರು, ಬೆಳೆದ ಬೆಳೆ ಕೊಳ್ಳುವ ಬಗೆ, ಎಲ್ಲವನ್ನೂ ಭಕ್ತಿಯಿಂದ ಗೌರವಿಸುವ ಗುಣ ವೇದ್ಯವಾಗುತ್ತದೆ. ಭಕ್ತಿಭಾವ, ಆರಾಧನೆ ಎಂದರೆ ಸಂರಕ್ಷಣೆ ಎಂದೇ ಅರ್ಥ.
ಇದೇ ಅಂಶವನ್ನು ಅಕ್ಕನ ವಚನದಲ್ಲಿ ವೈಯಕ್ತಿಕ ನೆಲೆಯ ಆಶಯದೊಂದಿಗೆ ಗ್ರಹಿಸಬಹುದು.
‘ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡು ಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಅವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಅವು ನೀಡಿ ಭಕ್ತರಾದವು
ಇನ್ನು ಬೇಡಿದೆನಾದರೆ
ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ’
ಮನುಷ್ಯನ ದೇಹಕ್ಕೆ ಜೀವಂತವಿರುವ ತನಕ ಹಸಿವು, ನೀರಡಿಕೆ ತಪ್ಪುವುದಿಲ್ಲ. ಹಸಿವಿನ ತಾಪ, ದಾಹ ತಾಳಿಕೊಳ್ಳಲು ಅಸಾಧ್ಯವೆನಿಸುತ್ತದೆ. ಆಗ ಗಿಡ ಮರಗಳನ್ನು ಬೇಡಿ, ಅವುಗಳ ಫಲಗಳ ಪಡೆದು ಹೊಟ್ಟೆ ತುಂಬಿಸಿಕೊಳ್ಳುವ ಪ್ರಮೇಯ ಮನುಷ್ಯನದು. ಅವು ಭಕ್ತಿಭಾವದಿಂದ ಲಿಂಗಕ್ಕೆಂದು ನೀಡಿ ಭಕ್ತರಾದರೆ, ತಾನು ಬೇಡಿ ಭವಿಯಾದೆನು ಎನಿಸಿದಾಗ ಆಣೆ ಮಾಡಿ ಬೇಡುವುದಿಲ್ಲವೆಂದು ಅಕ್ಕ ನಿರ್ಧರಿಸುತ್ತಾಳೆ.
ಪ್ರಕೃತಿಯಿಂದ ಪಡೆದ ನಾವು ಭವಿ ಎನ್ನುವ ಭಾವನೆ ಅಕ್ಕನಲ್ಲಿದ್ದರೆ, ಜೇಡರ ದಾಸಿಮಯ್ಯ ಸಕಲವೂ ಪ್ರಕೃತಿಗೇ ಅರ್ಪಿತ ಎನ್ನುವ ಭಾವ ತಳೆಯುತ್ತ ಹೀಗೆ ಹೇಳುತ್ತಾನೆ,
‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥಾ’
ಅಕ್ಕ ತನ್ನಂತೆಯೇ ಈ ಪ್ರಕೃತಿಯೂ ಜೀವಾತ್ಮವಿರುವ, ಜೀವಸತ್ವ ಹೊಂದಿದೆ ಎನ್ನುವ ಕಳಕಳಿಯ ಭಾವ ಹೊಂದಿದವಳು. ಅದಕ್ಕಾಗಿ ತನ್ನ ಚೆನ್ನಮಲ್ಲಿಕಾರ್ಜುನನ ಹುಡುಕಾಟದಲ್ಲಿ ತನ್ನ ಸುತ್ತಮುತ್ತಲು ಆವರಿಸಿರುವ ಇಡೀ ಪ್ರಕೃತಿಯ ಮೊರೆ ಹೋಗುತ್ತಾಳೆ. ವನದಲ್ಲಿರುವ ಪಶು, ಪಕ್ಷಿ, ಗಿಡ, ಮರಗಳನ್ನು ಕರುಳು ಬಗೆದು ನಿವೇದಿಸಿಕೊಳ್ಳುತ್ತಾಳೆ. ಇದು ಮೇಲ್ನೋಟಕ್ಕೆ ಬಾಹ್ಯ ಹುಡುಕಾಟವೆನಿಸಿದರೂ, ಅದರೊಳಗಿನ ಆಂತರಿಕ ಹುಡುಕಾಟವನ್ನೂ ಗಮನಿಸಬಹುದು.
‘ಅಳಿಸಂಕುಲವೆ ಮಾಮರವೆ
ಬೆಳುದಿಂಗಳೆ ಕೋಗಿಲೆಯೆ
ನಿಮ್ಮನೆಲ್ಲರನೂ ಒಂದ ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ
ಕಂಡಡೆ ಕರೆದು ತೋರಿರೆ’
ಮಧುವಿಗಾಗಿ ಹಾರುತ್ತ, ಝೇಂಕರಿಸುತ್ತ ಸುತ್ತುತ್ತಿರುವ ದುಂಬಿಗಳನ್ನು, ಮಾವಿನ ಮರವನ್ನು, ಜೀವಜಗತ್ತಿಗೆ ಬೆಳಕು ಕೊಡುವ ಚಂದಿರನನ್ನು, ಮಧುರವಾಗಿ ಹಾಡುವ ಕೋಗಿಲೆಯನ್ನು ಬೇಡುತ್ತಾಳೆ. ಇದೇ ಭಾವವಿರುವ ಇನ್ನೊಂದು ವಚನದಲ್ಲಿ ‘ನೀವು ಕಾಣಿರೆ?’ ಎಂದು ಪ್ರತಿ ಸಾಲಿನಲ್ಲೂ ಪುನರುಕ್ತಿಯಾಗಿ ಕೇಳುತ್ತಾಳೆ. ಅಲ್ಲಿಯ ಕಾವ್ಯ ಸೌಂದರ್ಯವನ್ನು ಕೆಳಗಿನ ವಚನದಲ್ಲಿ ಕಾಣಬಹುದು. ಅಂತ್ಯದಲ್ಲಿ ‘ನೀವು ಹೇಳಿರೇ’ ಎಂದು ಆಗ್ರಹಿಸುವ ಧಾಟಿ ಅಪ್ಯಾಯಮಾನ.
‘ಚಿಲಿಮಿಲಿಯೆಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೇ?
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ, ನೀವು ಕಾಣಿರೇ?
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಕೊಳನ ತಡಿಯೊಳಗಾಡುವ ಹಂಸಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ, ನೀವು ಕಾಣಿರೆ, ನೀವು ಕಾಣಿರೇ?
ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಿಹನೆಂದು ನೀವು ಹೇಳಿರೇ’
ಅಕ್ಕ ತನ್ನ ವಚನಗಳಲ್ಲಿ ಪ್ರತಿಮೆ ಮತ್ತು ರೂಪಕಗಳನ್ನಾಗಿ ಪ್ರಕೃತಿಯಲ್ಲಿರುವ ಪಕ್ಷಿ ಮತ್ತು ಪ್ರಾಣಿಗಳನ್ನು ಬಳಸುತ್ತಾಳೆ. ವಾಸ್ತವದ ನೆಲೆಯಲ್ಲಿ ಅವುಗಳಿಗೆ ಸ್ಪಂದಿಸುವ ಶಕ್ತಿ ಇಲ್ಲವೆಂದು ಗೊತ್ತಿದ್ದರೂ ತನ್ನ ಸಂಗಾತಿಗಳಾಗಿರಲಿ ಎಂದು ಬಯಸುತ್ತಾಳೆ. ನಮ್ಮ ಮನದ ಇಂಗಿತ ಮತ್ತು ದುಗುಡವನ್ನು ಮನುಷ್ಯರೊಂದಿಗೆ ಹೇಳಿಕೊಂಡರೆ ಸೂಕ್ತ ಸ್ಪಂದನೆ ಸಿಗದೆ ದುರುಪಯೋಗವಾಗುವ ಅಪಾಯವೇ ಹೆಚ್ಚು. ಆದ್ದರಿಂದ ಮನುಷ್ಯರಿಗಿಂತ ಪ್ರಾಣಿ, ಪಕ್ಷಿಗಳು ವಿಶ್ವಾಸಾರ್ಹವು, ಹಾಗೆಯೇ ಪ್ರಕೃತಿ ಹೆಚ್ಚು ಅಪ್ಯಾಯಮಾನವೆಂದು ಭಾವಿಸುತ್ತಾಳೆ. ಆಕೆಯ ಒಂಟಿ ಪಯಣಕ್ಕೆ ಯಾವುದೇ ರೀತಿಯ ಅಪಾಯ ಪ್ರಕೃತಿಯಿಂದ ಆಗುವುದಿಲ್ಲ ಎಂಬ ಅಕ್ಕನ ವಿಶ್ವಾಸದಲ್ಲಿ ಭಾವಸ್ಪಂದನೆಯ ತೀವ್ರತೆಯೂ ಇದೆ. ಅಕ್ಕನಿಗೆ ಸದಾ ಚೆನ್ನಮಲ್ಲಿಕಾರ್ಜುನನನ್ನು ಪಡೆಯುವ ಮಹತ್ವಾಕಾಂಕ್ಷೆ. ತನ್ನ ಜೀವಾತ್ಮವನ್ನು ಪರಮಾತ್ಮನಲ್ಲಿ ಕಾಣುವ ಬಯಕೆಯ ಕನಸು ಕಂಡವಳು. ಅದಕ್ಕಾಗಿ ಒಬ್ಬಂಟಿಯಾಗಿ ಪ್ರಕೃತಿಯೊಂದಿಗೆ ಪಯಣ ಬೆಳೆಸಿರುವುದು ವಿಶೇಷ. ಅವಳಲ್ಲಿ ಹುಡುಕಾಟದ ತೀವ್ರತೆ, ದೃಢ ಸಂಕಲ್ಪ, ಆತ್ಮ ವಿಶ್ವಾಸ ಎಲ್ಲವೂ ಇದೆ. ಆ ಕಾರಣಕ್ಕಾಗಿಯೇ ತಾನಂದುಕೊಂಡ ಗಮ್ಯವನ್ನು ತಲುಪುತ್ತಾಳೆ.
ವ್ಯಕ್ತಿ ಅತ್ಯಂತ ಸೂಕ್ಷ್ಮಜೀವಿ, ಭಾವಜೀವಿ, ಪ್ರಕೃತಿ ಪ್ರೇಮಿಯಾಗಿ, ಅಂತಿಮವಾಗಿ ವಾಸ್ತವವಾದಿಯಾದಲ್ಲಿ ಅದ್ಭುತ ಪ್ರತಿಮೆಗಳನ್ನು ಬಳಸಬಹುದು. ಹಾಗೆ ಗಮನಿಸುವಾಗ ಅಲ್ಲಮನ ಈ ವಚನ ಅರ್ಥಪೂರ್ಣ.
‘ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ ಸಂಬಂಧವಯ್ಯಾ?
ಬೆಟ್ಟದ ಮೇಲಣ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ?
ಗುಹೇಶ್ವರಲಿಂಗಕೆಯೂ ಎಮಗೂ
ಎತ್ತಣಿಂದೆತ್ತ ಸಂಬಂಧವಯ್ಯಾ?’
ಪ್ರಕೃತಿಯಲ್ಲಿ ಮಾವು ಮತ್ತು ಕೋಗಿಲೆ, ನೆಲ್ಲಿಕಾಯಿ ಮತ್ತು ಉಪ್ಪು, ಆತ್ಮ ಮತ್ತು ಪರಮಾತ್ಮ, ಇವುಗಳ ಸಂಬಂಧವನ್ನು ಅಲ್ಲಮನು ಬಹಳ ಕೌತುಕದಿಂದ ಕಾಣುತ್ತಾನೆ. ವಸಂತ ಋತುವಿನಲ್ಲಿ ಬರುವ ಫಲ ಮಾವಿಗೂ, ಕೋಗಿಲೆಯ ಸಂತಸದ ಕುಹೂ ಕುಹೂ ಕೂಗಿಗೂ ಇರುವ ಅವಿನಾಭಾವ ಸಖ್ಯವನ್ನು ಮನಗಾಣಿಸುತ್ತಾನೆ. ಹಾಗೆಯೇ ಎಲ್ಲೋ ಗುಡ್ಡ, ಬೆಟ್ಟದಲ್ಲಿ ಬೆಳೆಯುವ ನೆಲ್ಲಿಕಾಯಿಗೂ, ಸಮುದ್ರದ ಜಲದಲ್ಲಿ ಸಂಸ್ಕರಣೆಗೂ ಮುನ್ನ ಅಡಗಿರುವ ಉಪ್ಪಿಗೂ ಇರುವ ರುಚಿಯ ನಂಟನ್ನು ಆಶ್ಚರ್ಯದಿಂದ ಕಾಣುತ್ತಾನೆ. ಅಲ್ಲಮ ಹೇಳುವಂತೆ ಇವುಗಳೆಲ್ಲಾ ಎಲ್ಲೆಲ್ಲೋ ದೂರವಿರಬಹುದು. ಆದರೆ ಎಲ್ಲವೂ ಒಂದಕ್ಕೊಂದು ಹತ್ತಿರವಾಗಿವೆ. ಅದು ಕಣ್ಣಿಗೆ ಕಾಣದೆ, ಶಬ್ದಗಳಲ್ಲಿ ಸೆರೆ ಹಿಡಿಯಲು ಸಾಧ್ಯವಾಗದೆ, ಕಣ್ಣಿಗೆ ಕಾಣುವಂತೆ ಸಂಬಂಧ ಗೋಚರಿಸದೆ ಇರಬಹುದು. ಸುಪ್ತವಾಗಿ ಅಡಗಿರುವ ಆ ಸಂಬಂಧವನ್ನು ಗ್ರಹಿಸುವುದು, ಕಂಡುಕೊಳ್ಳುವುದು, ನಮ್ಮ ಸೂಕ್ಷ್ಮತೆಗೆ ಬಿಟ್ಟಿದ್ದು. ಮನುಷ್ಯನೊಳಗೆ ಸೂಕ್ಷ್ಮ ಸಂವೇದನೆಗಳು ಇದ್ದಾಗ ಮಾತ್ರ ಆತ್ಮ ಮತ್ತು ಪರಮಾತ್ಮನ ಪ್ರಜ್ಞೆ ಮೂಡಲು ಸಾಧ್ಯ. ಅದೇ ಮನುಷ್ಯನಿಗೆ ಮತ್ತು ಗುಹೇಶ್ವರನಿಗೆ ಇರುವ ಅವಿನಾಭಾವ ಸಂಬಂಧ. ಅದೇ ಅರಿವಿನ ಪಥ.
ಸೃಷ್ಟಿಯ ಆರಂಭದಿಂದಲೂ ಪ್ರಕೃತಿ ತನ್ನ ಕೊಡುಗೆಯನ್ನು ಮನುಕುಲಕ್ಕೆ ಹೇರಳವಾಗಿ ನೀಡುತ್ತಲೇ ಬಂದಿದೆ. ಅದರೊಳಗಿನ ವಿಸ್ಮಯವನ್ನು ಅಕ್ಕ ಕೌತುಕದಿಂದ ಕಾಣುತ್ತಾಳೆ. ಅದನ್ನೇ ಒಂದೊಂದಾಗಿ ಪ್ರಶ್ನಿಸುತ್ತ ಚೆನ್ನಮಲ್ಲಿಕಾರ್ಜುನನ ಪರಿಯನ್ನು ಆವಿಷ್ಕರಿಸುತ್ತಾಳೆ.
‘ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೇ ನೆಲ ಒಂದೇ ಆಕಾಶ ಒಂದೇ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ!’
ಪ್ರಕೃತಿಯಲ್ಲಿ ಅಡಗಿಕೊಂಡಿರುವ ರುಚಿಯ ಅನಾವರಣದ ವಿಸ್ಮಯ ಅಕ್ಕನಿಗೆ ಕುತೂಹಲಕಾರಿ. ಆ ಚೆನ್ನಮಲ್ಲಿಕಾರ್ಜುನ ದೇವನೇ ಈ ವಿಶೇಷ, ವಿಭಿನ್ನತೆಗೆ ಕಾರಣವೆಂದು ಪರಿಭಾವಿಸುತ್ತಾಳೆ. ಎಲ್ಲವೂ ನೀರು, ಭೂಮಿ, ಆಕಾಶ, ಗಾಳಿ, ಬೆಳಕನ್ನೇ ಅವಲಂಬಿಸಿದ್ದರೂ ವಿವಿಧ ರೂಪದಲ್ಲಿ ಹಣ್ಣು, ಹೂವು ಹೊರಹೊಮ್ಮುವುದು. ಅದೇ ರೀತಿ ಈ ಜಗತ್ತಿನಲ್ಲಿರುವ ಎಲ್ಲಾ ಜೀವ ರಾಶಿಗಳು ಬದುಕು ಸಾಗಿಸುತ್ತಿದ್ದರೂ, ಎಲ್ಲರ ಮಧ್ಯೆ ಅವನ ರೀತಿಯೇ ಬೇರೆ ಎಂದು ವಿಶೇಷವಾಗಿ ಕಾಣುವ ಮನಸ್ಸು ಅಕ್ಕನದು. ಹೀಗೆ ಅಕ್ಕ ಪ್ರಕೃತಿಯ ವೈವಿಧ್ಯತೆ ಮತ್ತು ವೈಶಿಷ್ಟ್ಯಗಳಲ್ಲಿಯೇ ತನ್ನ ಇಷ್ಟದೈವ ಚೆನ್ನಮಲ್ಲಿಕಾರ್ಜುನನನ್ನು ಕಾಣುವಳು. ಹಾಗೆಯೇ ಅಲ್ಲಿಯ ದೃಷ್ಟಾಂತಗಳ ಮೂಲಕ ಅವನ ಇರುವನ್ನು ಚಿತ್ರಿಸುವಳು. ಇದು ಮೇಲ್ನೋಟಕ್ಕೆ ಚೆನ್ನಮಲ್ಲಿಕಾರ್ಜುನನನ್ನು ದರ್ಶಿಸುತ್ತದೆ. ಆದರೂ ನಿಸರ್ಗದ ವಿಸ್ಮಯ ಅರಿಯುವ ಪರಿ ಇದಾಗಿದೆ. ಪ್ರಕೃತಿ ಕೊಟ್ಟ ಸುಂದರ ಕಾಣಿಕೆಗಳನ್ನು ಅಷ್ಟೇ ಪ್ರಜ್ಞಾಪೂರ್ವಕವಾಗಿ ಗ್ರಹಿಸುವ, ಅನುಭವಿಸುವ ಉತ್ಸಾಹ ಇದರಲ್ಲಿದೆ.
ಶರಣ ದಸರಯ್ಯ ತನ್ನ ಅನೇಕ ವಚನಗಳಲ್ಲಿ ಮನುಷ್ಯಜೀವಿಯಂತೆ ಪಶು, ಪಕ್ಷಿಗಳೂ ಸೂಕ್ಷ್ಮ ಜೀವಿಗಳು. ಅದೇರೀತಿ ಸಸ್ಯಗಳಲ್ಲಿಯೂ ಜೀವವಿದೆಯೆಂದು ಈ ವಚನದಲ್ಲಿ ನಿರೂಪಿಸಿದ್ದಾನೆ.
‘ಸರ್ವಮಯ ನಿನ್ನ ಬಿಂದುವಾದಲ್ಲಿ
ಆವುದನಹುದೆಂಬೆ, ಆವುದನಲ್ಲಾಯೆಂಬೆ?
ಸರ್ವಚೇತನ ನಿನ್ನ ತಂತ್ರಗಳಿಂದ ಆಡುವವಾಗಿ
ಇನ್ನಾವುದ ಕಾಯುವೆ, ಇನ್ನಾವುದ ಕೊಲುವೆ?
ತರುಲತೆ ಸ್ಥಾವರ ಜೀವಂಗಳೆಲ್ಲಾ
ನಿನ್ನ ಕಾರುಣ್ಯದಿಂದೊಗೆದವು.
ಆರ ಹರಿದು ಇನ್ನಾರಿಗೆ ಅರ್ಪಿಸುವೆ?
ತೊಟ್ಟು ಬಿಡುವನ್ನಕ್ಕ ನೀ ತೊಟ್ಟುಬಿಟ್ಟ ಮತ್ತೆ
ನೀ ಬಿಟ್ಟರೆಂದು ಎತ್ತಿ ಪೂಜಿಸುತಿರ್ದೆ
ದಸರೇಶ್ವರನೆಂದು’
ಈ ವಚನದಲ್ಲಿ ಹಸಿರು ಗಿಡ, ಅವುಗಳ ಎಲೆ, ಅಲ್ಲೇ ಅರಳುವ ಹೂವುಗಳು, ಎಲ್ಲವೂ ಆ ಸೃಷ್ಟಿಯ ಕೃಪೆಯಿಂದ ಲಭಿಸಿದಂತವು. ಅವುಗಳಿಗೂ ಜೀವ ಚೈತನ್ಯವಿರುವುದರಿಂದ ಗಿಡದಿಂದೇ ಕಿತ್ತು ಪಡೆದರೆ ಜೀವಹಾನಿ ಮಾಡಿದಂತೆ ಎಂದು ಭಾವಿಸುತ್ತಾನೆ. ಕಾಯುವವನು ತಾನಲ್ಲ, ಕೊಲ್ಲುವವನು ತಾನಲ್ಲ, ಆದ್ದರಿಂದ ತಾನಾಗಿಯೇ ಉದುರಿದ ಹೂಗಳನ್ನು ಮಾತ್ರ ಪೂಜೆಗೆ ಬಳಸುವುದಾಗಿ ನಿವೇದಿಸಿಕೊಳ್ಳುತ್ತಾನೆ. ಪ್ರಕೃತಿಯೆಡೆಗೆ ಶರಣರು ತೋರಿದ ಅಪಾರ ಕಾಳಜಿ, ಭಕ್ತಿ, ರಕ್ಷಣೆಯ ಪ್ರತೀಕವಾಗಿ ಬಿಂಬಿಸಲಾಗಿದೆ.
ಶರಣರು ಪ್ರಕೃತಿ ವಿಕೋಪಗಳನ್ನು ವಿಭಿನ್ನ ದೃಷ್ಟಿಯಿಂದ ನೋಡುವ ಪರಿ ಅನನ್ಯ. ಈ ಸೃಷ್ಟಿ ಸಹಜವಾಗಿ ಎಷ್ಟು ಸುಂದರವಾಗಿ ಕಾಣುತ್ತದೊ, ಅಷ್ಟೇ ಸಹಜವಾಗಿ ಅಲ್ಲೋಲ ಕಲ್ಲೋಲಗಳೂ ಘಟಿಸುತ್ತವೆ. ಉದಾಹರಣೆಗೆ ಭೂಕಂಪ, ಸುನಾಮಿ, ಅತಿವೃಷ್ಟಿ, ಸುಂಟರಗಾಳಿ ಮುಂತಾದವು. ಇಂತಹ ವಿಕೋಪದ ಸಂದರ್ಭವನ್ನು ಮನುಷ್ಯ ಹೇಗೆ ಧೈರ್ಯದಿಂದ ಎದುರಿಸಬೇಕು ಎನ್ನುವುದನ್ನು ಅಲ್ಲಮಪ್ರಭುಗಳ ಈ ವಚನ ನಿರೂಪಿಸುತ್ತದೆ.
‘ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು
ಜಲಪ್ರಳಯವಾದಲ್ಲಿ ವಾಯುವಿನಂತಿರಬೇಕು ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್ಪ್ರಳಯವಾದಲ್ಲಿ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು’
ಪ್ರಕೃತಿ, ಮನುಷ್ಯ ಹಾಗೂ ಮನುಷ್ಯನ ಅಸ್ತಿತ್ವ ಅರಿತುಕೊಂಡ ಮೇಲೆ, ಹುಟ್ಟು-ಸಾವು ಇದರ ವಾಸ್ತವಿಕ ನೆಲೆ ತಿಳಿಯುವುದು ಅವಶ್ಯಕ. ಅದೇ ಬದುಕಿನ ಅಂತಿಮ ಸತ್ಯ. ಹುಟ್ಟಿನೊಂದಿಗೇ ಹುಟ್ಟುವ ಸಾವು, ಅದನ್ನು ಗೆಲ್ಲುವ ರೀತಿಯನ್ನು ಅಲ್ಲಮನ ಮೇಲಿನ ವಚನ ಅನಾವರಣಗೊಳಿಸುತ್ತದೆ. ನಮ್ಮ ಬದುಕಿನಲ್ಲಿ ಕಷ್ಟಗಳು ಯಾವ ರೂಪದಲ್ಲಾದರೂ ಬರಬಹುದು. ಅದನ್ನು ಊಹೆ ಮಾಡಲು ಸಾಧ್ಯವಾಗುವುದಿಲ್ಲ. ಅವು ಮುನ್ಸೂಚನೆ ಇಲ್ಲದೆ ಬಂದು, ಮೈ ಮೇಲೆ ಎರಗಿ ಬಿಡುತ್ತವೆ. ಆಗ ಆತ್ಮವಿಶ್ವಾಸದಿಂದ ಆಲೋಚಿಸುತ್ತ, ಕೆಂಡದ ಮಳೆಯಾದರೆ, ಸ್ವತಃ ನೀರಾಗಬೇಕು. ಜಲಪ್ರಳಯವಾದರೆ, ವಾಯುವಿನ ಸ್ವರೂಪ ಪಡೆಯಬೇಕು. ಬಿರುಗಾಳಿ ಬೀಸಿದರೆ ಆಕಾಶದಲ್ಲಿ ತೇಲಬೇಕು. ಇಡೀ ಬ್ರಹ್ಮಾಂಡವೇ ಆಪತ್ತಿನಲ್ಲಿದ್ದರೆ ಸಂತೋಷದಿಂದ ತನ್ನ ತಾ ಬಿಟ್ಟು ಮೈ ಮರೆಯಬೇಕು. ಇಡೀ ಜಗತ್ತೇ ಪ್ರಳಯದಲ್ಲಿ ತೊಳೆದುಕೊಂಡು ಹೋಗುತ್ತಿದ್ದರೆ, ಮನುಷ್ಯನಾದವನು ಆ ಪರಿಸ್ಥಿತಿಗನುಗುಣವಾಗಿ ತನ್ನ ಪ್ರಾಣವನ್ನು ಬಿಡಲು ನಿರ್ಧರಿಸಬೇಕು. ಆ ನಿರ್ಧಾರದಲ್ಲಿ ಧೈರ್ಯ ತುಂಬಿರಬೇಕೆ ಹೊರತು ಯಾವುದೇ ಅನುಮಾನ, ವಿಷಾದಗಳಿರಬಾರದು. ಮನುಷ್ಯ ತನ್ನ ಜೀವನದ ನೆಲೆಯನ್ನು ಅರಿವಿನ ಪಥದ ಮೂಲಕ, ಪ್ರಕೃತಿಯ ಸಹಾಯದಿಂದ ಅರಿಯುವ ಪ್ರಯತ್ನ ಮಾಡಿದರೆ, ಆಗ ಬದುಕಿನ ರಹಸ್ಯ ವಿಸ್ಮಯಕಾರಿಯಾಗಿ ಉಳಿಯುವುದಿಲ್ಲ.
ಅಕ್ಕನ ಈ ವಚನದ ಉದಾಹರಣೆ ಮಾನವ ಮತ್ತು ಪ್ರಕೃತಿ ಎರಡೂ ಬೇರೆ ಬೇರೆ ಅಲ್ಲವೇ ಅಲ್ಲ ಎಂದು ನಿರೂಪಿಸುತ್ತದೆ.
‘ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ
ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ’
ಈ ಸೃಷ್ಟಿಯು ಪಂಚಭೂತಗಳಿಂದ ಕೂಡಿರುವ ಸತ್ಯದೊಂದಿಗೆ ತೆರೆದುಕೊಳ್ಳುತ್ತ, ಬದುಕಿನ ವ್ಯಾಖ್ಯಾನವನ್ನು ಅಕ್ಕ ಅರುಹುತ್ತಾಳೆ. ಪೃಥ್ವಿ, ಅಪ್ಪು, ತೇಜ, ವಾಯು ಮತ್ತು ಆಕಾಶ ಇವು ಪಂಚಭೂತಗಳು. ಅಂದರೆ ಮಣ್ಣು, ನೀರು, ಅಗ್ನಿ, ಬೆಳಕು ಮತ್ತು ಆಕಾಶ. ಮನುಷ್ಯನಲ್ಲಿರುವ ಪಂಚೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ. ಇದೇ ವಿವರಣೆಯನ್ನು ಗಮನದಲ್ಲಿಟ್ಟುಕೊಂಡು, ಸಮೀಕರಿಸಿದ ವಚನವಿದು. ಸೃಷ್ಟಿ ತತ್ವಗಳಾದ ಪಂಚಭೂತಗಳು ಮತ್ತು ಮನುಷ್ಯನ ಒಳಗಿರುವ ಪಂಚೇಂದ್ರಿಯಗಳು, ಎರಡೂ ಒಂದೇ ಎನ್ನುವ ಭಾವ ತಳೆದಾಗ ಮೇಲಿನ ವಚನ ಹೆಚ್ಚುಹೆಚ್ಚು ಅರ್ಥಗರ್ಭಿತವಾಗಿ ಮನದಾಳಕ್ಕಿಳಿಯುತ್ತದೆ.
ಇಂತಹ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಅರಿವು ಮತ್ತು ಪ್ರಜ್ಞೆಯ ಹಿನ್ನೆಲೆಯಲ್ಲಿ ಕಂಡುಕೊಂಡು, ಮನುಷ್ಯನ ಅಸ್ತಿತ್ವವನ್ನು ಪರಾಮರ್ಶಿಸುವುದು ಸೂಕ್ತ. ಪಂಚಭೂತಗಳಿಂದ ಕೂಡಿದ ಈ ಜಗತ್ತಿನೊಂದಿಗೆ, ಪಂಚೇಂದ್ರಿಯಗಳಿಂದ ಕೂಡಿದ ಮಾನವ ಲೀನವಾಗುತ್ತಾನೆಂದು ಹೇಳುವುದೇ ಈ ವಚನದ ಮೂಲ ಆಶಯವಾಗಿದೆ. ಒಟ್ಟಾರೆ ಬಸವಾದಿ ಶರಣರು ಇಡೀ ಬ್ರಹ್ಮಾಂಡದ ಅಸ್ತಿತ್ವ, ಅದರ ಪರಿಕಲ್ಪನೆ, ಪ್ರಕೃತಿ ಪ್ರಜ್ಞೆ, ಆಂತರಿಕ ಅರಿವು ಇಟ್ಟುಕೊಂಡೇ ವಿಶಿಷ್ಟ ಜೀವನ ಸಾಗಿಸಿದರು. ಬಸವಣ್ಣ ಹೇಳುವಂತೆ, ‘ವಿಶ್ವವೇ ನನ್ನ ಮನೆ ಮಾನವ ಜನಾಂಗವೇ ನನ್ನ ಕುಟುಂಬ’ ಎನ್ನುವ ವಿಶಾಲ ಮನೋಭಾವ ಪ್ರತಿಯೊಬ್ಬ ಶರಣರಲ್ಲೂ ಇದ್ದುದರಿಂದಲೇ, ಇಡೀ ಸೃಷ್ಟಿಯನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಹೃದಯ ವೈಶಾಲ್ಯ ಅವರಲ್ಲಿತ್ತು. ಇಂದು ನಾವು ಹೇಳುವ ‘ಗ್ಲೋಬಲೈಸೇಷನ್’ ಪರಿಕಲ್ಪನೆ ಅಂದು ಕಂಡ ಕನಸಾಗಿದೆ. ಇಡೀ ಮನುಕುಲಕ್ಕೇ ಮಾದರಿಯಾದ ವಚನ ಸಾಹಿತ್ಯದ ಸತ್ವ ಮತ್ತು ಶಕ್ತಿ ಇಂದಿಗೂ ಪ್ರಸ್ತುತ.