ಪ್ರತಿಭಾ ಪಲಾಯನ
ಪ್ರೊಫೆಸರ್‌ಗೆ ನಿನ್ನೆಯ ಪುರಸಭೆಯಲ್ಲಿ ನಡೆದ ಸಭೆ ಕಣ್ಣಮುಂದೆ ಬಂತು. ತಾವು ಅಡಿಗಡಿಗೆ ಹೇಳುತ್ತಿದ್ದ ವಿಚಾರ, ವಿವರಗಳೆಲ್ಲ ಬಾಲು ಜೊತೆಗಿನ ಮಾತುಗಳೇ ಆಗಿದ್ದವು. ಹಾಗೆ ಭಾಷಣ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲೇ ಕುಳಿತಿದ್ದ ಬಾಲುನ ಕಡೆಗೆ ಒಮ್ಮೆ ಕೂಡ ನೋಡುವ ಧೈರ್ಯವೇ ಬರಲಿಲ್ಲವಲ್ಲ.
ಒಳಗಿನ ಬೆಂಕಿಯನ್ನು ನೀರು ಮತ್ತು ಪ್ರೀತಿಯಿಂದ ಹದಮಾಡಿ ಅಭಿವ್ಯಕ್ತಿ ಮಾಡುವ ಕಲೆ ಅಗ್ರಹಾರ ಕೃಷ್ಣಮೂರ್ತಿಯವರಿಗೆ ಸಿದ್ಧಿಸಿದೆ. ತುಮಕೂರು ಜಿಲ್ಲೆಯಜೆಟ್ಟಿ ಅಗ್ರಹಾರದ ಕೃಷ್ಣಮೂರ್ತಿ, ಕನ್ನಡಎಂ. ಎ. ಪದವೀಧರರು. ಎಪ್ಪತ್ತರ ದಶಕದಲ್ಲಿ ಹಲವು ಲೇಖಕರನ್ನು ಬೆಳೆಸಿದ ಸಮಾಜವಾದಿ ಯುವಜನ ಸಭಾದಲ್ಲಿ ಎಂ.ಡಿ.ನಂಜುಂಡಸ್ವಾಮಿ, ಲಂಕೇಶ್, ಗೋಪಾಲಗೌಡ ರಶಿಷ್ಯರು.
ಒಂದೆರಡು ವರ್ಷ ಕಾಶಿ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿದ್ದರು. ಕೆಲವುವರ್ಷ ಆಕಾಶವಾಣಿಯಲ್ಲಿ ಹಾಗೂ ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ತುಮಕೂರುಜಿಲ್ಲೆಯ ಜಾನಪದ ಆಚರಣೆಯೊಂದನ್ನು ಅಧ್ಯಯನ ಮಾಡಿ ‘ಬೆಳ್ದಿಂಗ್ಳಪ್ಪನ ಪೂಜೆ’ ಕೃತಿ ಹಾಗೂ ‘ನೀರುಮತ್ತು ಪ್ರೀತಿ’ ಕಾದಂಬರಿ ಪ್ರಕಟಿಸಿದ್ದು, ಕಾದಂಬರಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.
ಪ್ರೊಫೆಸರ್ ರಾಮಕೃಷ್ಣಯ್ಯ ಬೆಳಗ್ಗೆ ಐದಕ್ಕೆ ಎದ್ದು ವಾಕಿಂಗ್‌ಗೆ ಸಿದ್ಧರಾಗುತ್ತಾರೆ. ಅಡಿಗೆಯವಳು ಬರೋಕು ಮುಂಚೆ ತಾವೇ ಒಂದು ದೊಡ್ಡ ಮಗ್ ಟೀ ಮಾಡ್ಕೊಂಡು, ಎರಡು ಮಾರಿ ಬಿಸ್ಕತ್ತಿನ ಜೊತೆ ಏನಾದರೂ ಓದುತ್ತಾ ತುಂಬಾ ನಿಧಾನವಾಗಿ ತಮ್ಮ ಟೀಯನ್ನು ಗುಟುಕರಿಸುತ್ತಾ ಕುಳಿತುಕೊಳ್ಳುತ್ತಾರೆ. ಅದೇ ಹೊತ್ತಿಗೆ ಅವರ ಬೆಂಗಾವಲಾಗಿ ವಾಕಿಂಗ್ ಹೋಗುವ ಸಿದ್ದೇಗೌಡ ತಾನು ರಡಿಯಾಗಿದ್ದೀನಿ ಎಂದು ತಿಳಿಸಲೋಸುಗ ಅವರ ಮುಂದೆ ಒಂದೆರಡು ಬಾರಿ ಠಳಾಯಿಸುತ್ತಾನೆ. ಪ್ರತಿದಿನ ಹಾಗೆ ಠಳಾಯಿಸುವಾಗ ಓದುತ್ತಿರುವ ಪುಸ್ತಕದಿಂದಲೊ ಅಥವಾ ಕೆಲವು ದಿನಗಳಲ್ಲಿ ಓದಲು ಸಮಯ ಸಾಲದೇ ಉಳಿದ ಯಾವುದಾದರೂ ಒಂದು ತಂಗಳು ಪತ್ರಿಕೆಯಿಂದಲೋ ತಲೆಯೆತ್ತಿ, ಅವನ ಮುಖ ನೋಡಿ ಕಿಚನ್ ಕಡೆ ಮುಖ ಮಾಡುತ್ತಾನೆ. ಅದರ ಅರ್ಥ, ‘ನಿನಗೂ ಮಾಡಿಟ್ಟಿದ್ದೀನಿ ಹೋಗಿ ಕುಡಿದು ಬಾ’ ಎಂಬುದಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವ ಸಿದ್ದೇಗೌಡ ಒಂದು ಅನನ್ಯ ಭಂಗಿಯ ಮುಖಮುದ್ರೆ ಮಾಡಿ ಕೃತಜ್ಞತೆಯನ್ನು, ನಾಚಿಕೆಯ ನಗುವನ್ನೂ ತೋರಿ ಕಿಚನ್ ಕಡೆ ಹೋಗುತ್ತಾನೆ. ಮುಚ್ಚಿಟ್ಟ ಒಂದು ಸ್ಟೀಲ್ ಲೋಟದಲ್ಲಿನ ಟೀಗೆ ಇನ್ನೊಂದು ಚಮಚ ಸಕ್ಕರೆ ಹಾಕಿಕೊಳ್ಳುವುದು ಅವನ ರೂಢಿ. ಅಲ್ಲೇ ಇರುವ ಮರದ ಸ್ಟೂಲಿನ ಮೇಲೆ ಕುಳಿತು ಆದಷ್ಟು ಬೇಗ ಟೀ ಕುಡಿದು, ಕಪ್ಪನ್ನು ತೊಳೆದಿಟ್ಟು ಇವರ ಬಳಿಗೆ ಬರುವ ವೇಳೆಗೆ ಹೆಚ್ಚು ಕಡಿಮೆ ಇವರೂ ಟೀಯೂ ಮುಗಿಸಿರುತ್ತಾರೆ. ಇವರ ಮಗ್ಗನ್ನೂ ಒಯ್ದು ಕಿಚನ್ ಸಿಂಕಿನಲ್ಲಿ ತೊಳೆದಿಟ್ಟು ಬರುತ್ತಾನೆ. ಆನಂತರವೇ ಇಬ್ಬರೂ ವಾಕಿಂಗ್ ಹೊರಡುವುದು. ಅವರು ಮುಂದೆ ಮುಂದೆ ಹೆಜ್ಜೆ ಹಾಕುತ್ತಾರೆ, ಅವರ ಹಿಂದೆ ಸಿದ್ದೇಗೌಡ. ಕ್ಯಾಂಪಸ್‌ನಲ್ಲಿ ನಡೆದಿರಬಹುದಾದ, ಇವರ ಗಮನಕ್ಕೆ ಬಾರದ ಯಾವುದಾದರೂ ಸುದ್ದಿಗಳಿದ್ದರೆ ಅಂಥವು ಸಿದ್ದೇಗೌಡನ ಮೂಲಕ ಇವರ ಕಿವಿ ಮುಟ್ಟುತ್ತಿದ್ದುದು ಇಂಥ ವಾಕಿಂಗಿನ ಪ್ರಶಸ್ತವಾದ ಮತ್ತು ಪ್ರಶಾಂತ ಸಮಯದಲ್ಲೇ. ಹಾಗೆ ಏನಾದರೂ ಹೇಳುವಂಥ ಸಂಗತಿಗಳಿದ್ದರೆ, ಸಾಮಾನ್ಯವಾಗಿ ಅವರ ಹಿಂದೆ ಹೆಜ್ಜೆ ಹಾಕುತ್ತ ನಡೆಯುವ ಸಿದ್ದೇಗೌಡ ಅವರ ಪಕ್ಕದಲ್ಲೇ ನಡೆಯುತ್ತ ಅರುಹುತ್ತಾನೆ. ಇಂಥ ದೃಶ್ಯಗಳನ್ನು ಕ್ಯಾಂಪಸ್‌ನಲ್ಲಿ ಅದೇ ಹೊತ್ತಿಗೆ ವಾಕಿಂಗ್ ಮಾಡುವ ಬೇರೆಬೇರೆ ಫ್ಯಾಕಲ್ಟಿಯ ಕೆಲವರು ಗಮನಿಸುತ್ತಾರೆ. ಅವರಲ್ಲಿ ಒಬ್ಬಿಬ್ಬರು ಸೀನಿಯರ್‌ಗಳು ಇವರಿಗೆ ಗುಡ್ ಮಾರ್ನಿಂಗ್ ಹೇಳುವುದುಂಟು. ಉಳಿದ ಜೂನಿಯರ್‌ಗಳು ಅಥವಾ ಎದುರಾಗುವ ಹಾಸ್ಟಲಿನ ಕೆಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ರಸ್ತೆಯ ಇನ್ನೊಂದು ಮಗ್ಗುಲಿಗೆ ಸರಿದು ಓರೆಗಣ್ಣಲ್ಲೇ ಇವರತ್ತ ನೋಡುತ್ತ ದಾಟಿ ಹೋಗುತ್ತಾರೆ. ಇದು ಪ್ರತಿದಿನದ ಕ್ರಮ.
ಪ್ರೊಫೆಸರರ ಪತ್ನಿ ಮಗಳ ಹೆರಿಗೆಯ ಕಾಲದಲ್ಲಿ ಜೊತೆಗಿರಲೆಂದು ಸಿಯಾಟೆಲ್‌ಗೆ ವಿಮಾನ ಹತ್ತಿದ ಮರುದಿನ ಬೆಳಗ್ಗೆಯೇ ರಾಮಕೃಷ್ಣಯ್ಯ ಟೀ ಮಾಡಿಕೊಳ್ಳುತ್ತಿದ್ದ ಕಿಚನ್‌ಗೆ ಬಂದ ಸಿದ್ದೇಗೌಡ, ‘ನೀವು ಒಂದು ಕಿತ ಹೇಳ್ಕೊಡಿ ಸಾಯೇಬ್ರೇ, ನಿಮ್ಮ ಥರಾನೇ ಮಾಡ್ಕೊಡ್ತೀನಿ’, ಅಂದಿದ್ದ. ಅದಾದ ನಂತರವೂ ಕೆಲವು ಬಾರಿ ಕೇಳಿದ್ದುಂಟು; ಆದರೂ ರಾಮಕೃಷ್ಣಯ್ಯ ಸಿದ್ದೇಗೌಡನ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿರಲಿ ಅವನು ಕಿಚನ್‌ನಲ್ಲಿ ನಿಲ್ಲುವುದಕ್ಕೂ ಬಿಡುತ್ತಿರಲಿಲ್ಲ. ಏನಾದರೂ ಸಣ್ಣಪುಟ್ಟ ಕೆಲಸದ ನೆವಹೇಳಿ ಅವನನ್ನು ಹೊರಗೆ ಕಳಿಸುತ್ತಿದ್ದರು. ಅವರಿಗೆ ತಾವು ಟೀ ಮಾಡುವ ವಿಧಾನವನ್ನು ಮತ್ತೊಬ್ಬರಿಗೆ ಕಲಿಸುವ ಅಥವಾ ತಿಳಿಸುವ ಮನಸ್ಸು ಸುತರಾಂ ಇರಲಿಲ್ಲ. ತಮ್ಮ ಹೆಂಡತಿಗೆ ವಿನಾ ಬೇರಾರಿಗೂ ಅವರು ಹೇಳಿಕೊಟ್ಟಿದ್ದೂ ಇಲ್ಲ. ನೆಂಟರಿಷ್ಟರ ಮನೆಗಳಿಗೆ ಹೋದ ಸಂದರ್ಭದಲ್ಲಿ ಕಾಫಿ, ಟೀ ಏನು ಕುಡಿತೀರಿ ಎಂದು ಅಭ್ಯಾಗತರು ಕೇಳಿದರೆ, ‘ಟೀ ಕುಡಿತೀನಿ, ನನ್ನ ಟೀ ನಾನೇ ಮಾಡ್ಕೊತೀನಿ’, ಎಂದು ಸೀದಾ ಅವರ ಅಡಿಗೆಮನೆಗೆ ನುಗ್ಗಿ ಬಿಡುತ್ತಾರೆ. ಪತ್ನಿ ಜೊತೆಯಲ್ಲಿದ್ದರೆ, ‘ನನ್ನ ಟೀ ಇವಳು ಮಾಡಿಕೊಡುತ್ತಾಳೆ’, ಅನ್ನುತ್ತಾರೆ. ಅವರ ಈ ರೂಢಿ ಹೆಚ್ಚುಕಡಿಮೆ ಅವರ ಹತ್ತಿರದ ನೆಂಟರಿಷ್ಟರಿಗೆಲ್ಲ ತಿಳಿದಿರುವಂಥದ್ದು. ಇದೇ ಪದ್ಧತಿಯನ್ನು ಅವರು ತಮ್ಮ ಕೆಲವು ಆತ್ಮೀಯ ಸ್ನೇಹಿತರ ಮನೆಗಳಿಗೆ ಹೋದಾಗಲೂ ಅನುಸರಿಸುವುದುಂಟು. ಒಬ್ಬಿಬ್ಬರು, ‘ಇದ್ಯಾವ ಸೀಮೆ ಟೀ ಮಾಡಾಟ ಇವ್ರದ್ದು. ಎಲ್ಲಿಂದ, ಯಾರಿಂದ ಕಲ್ತರೋ ದೇವರಿಗೇ ಗೊತ್ತು’, ಎಂದು ಮರೆಯಲ್ಲಿ ಮುಸಿಮುಸಿ ಮಾಡುತ್ತಿದ್ದುದುಂಟು.
ಈಗ್ಗೆ ಸುಮಾರು ಹದಿನೈದು ವರ್ಷಗಳ ಹಿಂದೆ, ‘ಇಂಡೋ ಚೈನಾ ಫ್ರೆಂಡ್‌ಶಿಪ್ ಅಸೋಸಿಯೇಶನ್’, ಚೀನಾ ದೇಶಕ್ಕೆ ಕಳಿಸಿದ್ದ ಒಂದು ನಿಯೋಗದಲ್ಲಿ ಇವರು ಒಬ್ಬ ಸದಸ್ಯರಾಗಿ ಮೂರ್ನಾಲ್ಕು ವಾರಗಳ ಕಾಲ ಬೀಜಿಂಗ್ ಮುಂತಾದ ಕೆಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡಿ ಬಂದಿದ್ದರು. ಅಲ್ಲಿನ ಟೀ ಪ್ರಮೋಶನ್ ಮಾರುಕಟ್ಟೆಗಳಲ್ಲಿ ತಮ್ಮ ಕಂಪೆನಿಗಳ ನಾನಾ ಬ್ರ್ಯಾಂಡ್‌ಗಳ, ನಾನಾ ಪರಿಮಳಗಳ ಟೀಪುಡಿಯನ್ನು ಪ್ರವಾಸಿಗರಿಗೆ ಮಾರುವ ಮುನ್ನ ತೆರೆದ ಸ್ಕರ್ಟ್ ಧರಿಸಿದ ಚೀನೀ ಮಹಿಳೆಯರು ತಾವು ಪ್ರವಾಸಿಗರಿಗಾಗಿಯೇ ಕಲಿತಿದ್ದ ಇಂಗ್ಲಿಷ್ ಭಾಷೆಯನ್ನು ಚೀನೀ ಭಾಷೆಯ ಉಚ್ಚಾರಣೆಯಲ್ಲಿ ವಿವರಿಸುತ್ತಾ ಪ್ರವಾಸಿಗರನ್ನು ತಮ್ಮ ಎದುರಿಗೇ ಕೂರಿಸಿಕೊಂಡು ಟೀ ಮಾಡಿ ಕೊಡುವುದನ್ನು ಪ್ರೊಫೆಸರ್ ರಾಮಕೃಷ್ಣಯ್ಯ ಅತೀವ ಗಮನಕೊಟ್ಟು ನೋಡಿಕೊಂಡಿದ್ದರು. ಗುಂಪು ಗುಂಪುಗಳಲ್ಲಿ ಬರುತ್ತಿದ್ದ ನೂರಾರು ಪ್ರವಾಸಿಗರೆಲ್ಲರನ್ನೂ ಸಂಭಾಳಿಸುತ್ತಾ ಚಾಕಚಕ್ಯತೆಯಿಂದ ಆ ಮಹಿಳೆಯರು ಟೀ ಮಾಡಿಕೊಡುತ್ತಿದ್ದುದು, ಅದನ್ನು ಕುಡಿಯುತ್ತಿದ್ದ ಪ್ರತಿಯೊಬ್ಬರೂ ಅಲ್ಲಿಂದ ಹೊರಡುವ ಮುನ್ನ ಟೀ ಪುಡಿಯ ಡಬ್ಬಿಗಳನ್ನು ಕೊಳ್ಳಲೇಬೇಕೆಂದು ಮನಸ್ಸು ಮಾಡುತ್ತಿದ್ದುದನ್ನು ಕಂಡು ಆಶ್ಚರ್ಯಗೊಂಡಿದ್ದರು. ಚೀನಾ ದೇಶದಲ್ಲೇ ಉಳಿದು ಟೀ ಮಾರುಕಟ್ಟೆಯಲ್ಲಿ ಒಂದು ಸಣ್ಣ ಉದ್ಯಮವನ್ನೇಕೆ ಶುರುಮಾಡಬಾರದೆಂಬ ಆಲೋಚನೆ ಕೂಡ ಆ ಗಳಿಗೆಯಲ್ಲಿ ಅವರ ತಲೆಯಲ್ಲಿ ಮಿಂಚಿನಂತೆ ಸುಳಿದು ಮಾಯವಾಗಿತ್ತು. ರಾಮಕೃಷ್ಣಯ್ಯ ಆ ಟೀವಿದ್ಯೆಯನ್ನು ಮರೆಯದೆ ಈವರೆಗೆ ಪಾಲಿಸಿಕೊಂಡು ತಮ್ಮ ಟೀಯನ್ನು ತಾವೇ ಮಾಡಿಕೊಂಡು ಕುಡಿಯುತ್ತ ಬಂದಿದ್ದಾರೆ. ಅವರ ಹೆಂಡತಿಗೆ ಬಿಟ್ಟು ಇನ್ನೊಬ್ಬರಿಗೆ ಟೀ ಮಾಡುವ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲವಷ್ಟೇ ಅಲ್ಲ, ಇದನ್ನು ಯಾರಿಗೂ ಹೇಳಿಕೊಡಕೂಡದು ಎಂದು ಹೆಂಡತಿಗೆ ತಾಕೀತನ್ನೂ ಮಾಡಿದ್ದರು.
ಹಲವಾರು ಜಾತಿಯ ಮರಗಿಡಗಳು ದಟ್ಟವಾಗಿ ಬೆಳೆದಿದ್ದ ಕ್ಯಾಂಪಸ್‌ನ ನಡುವೆಯೇ ಅವರ ಬಂಗಲೆ. ಪ್ರತಿದಿನ ವಾಕಿಂಗ್ ಮಾಡುತ್ತಿದ್ದುದೂ ಕ್ಯಾಂಪಸ್‌ನ ಒಳಗೇ. ಇಂದು ಬಂಗಲೆಯಿಂದ ಹೊರಕ್ಕೆ ಹೆಜ್ಜೆಯಿಡುವಷ್ಟರಲ್ಲೇ ಮೇನ್ ಗೇಟಿನ ವಾಚ್‌ಮನ್ ಧಾವಿಸಿ ಬಂದು ಬಾಲು ಬಂದಿರುವ ವಿಷಯ ತಿಳಿಸಿದ. ಇಷ್ಟು ಬೆಳಗ್ಗೇನೆ ಯಾಕೆ ಬಂದಿದಾನೆ, ಯಾಕೆ ಗೇಟಲ್ಲೇ ಇದಾನೆ, ಕರಕೊಂಡು ಬಾ ಅಂದರು ಪ್ರೊಫೆಸರ್. ಸಾರ್ ಅವರು ತುಂಬಾ ಜನರ ಜೊತೆ ಬಂದಿದಾರೆ, ಎಂಟ್ಹತ್ತು ಜನ ಇದಾರೆ, ಕ್ಯಾಮರಾ, ಮೈಕು ಎಲ್ಲಾ ತಂದಿದಾರೆ. ನೀವೇ ಗೇಟಿನ ಹತ್ತಿರಕ್ಕೆ ಬರಬೇಕು ಅಂತ ದಬಾಯಿಸ್ತಾ ಇದಾರೆ ಎಂದು ಗಾಬರಿಯಿಂದ ಹೇಳಿದ. ಇವರಿಗೆ ತಲೆಬುಡ ಅರ್ಥವಾಗದೆ ವೇಟಿಂಗ್ ರೂಮಿನ ಸೋಫದಲ್ಲಿ ಒಂದು ಗಳಿಗೆ ಕೂತು ಯೋಚಿಸತೊಡಗಿದರು. ಈ ಬಂಗಲೆಯೊಳಕ್ಕೆ ಯಾವ ಗಳಿಗೆಯಲ್ಲಿ ಬೇಕಾದರೂ ಬರುವ ಸ್ವಾತಂತ್ರ್ಯ ಬಾಲುಗೆ ಇದ್ದೇಯಿತ್ತು. ತಾವು ಇಲ್ಲದೇ ಇರುವಾಗಲೂ ಬಂದು ಹೋಗುವಷ್ಟು ಸಲುಗೆ ಪಡೆದಿದ್ದ ಆಸಾಮಿ. ಬಂಗಲೆಯಲ್ಲಿ ಆಗಿಂದಾಗ್ಗೆ ಏರ್ಪಾಡಾಗುತ್ತಿದ್ದ ಪಾರ್ಟಿಗಳಿಗೆ ತಡರಾತ್ರಿಗಳಲ್ಲಿ ಫೋನ್ ಕೂಡ ಮಾಡದೆ ಬಂದು ಸೇರಿಕೊಳ್ಳುತ್ತಿದ್ದ ಎಷ್ಟೋ ಸಂದರ್ಭಗಳಿದ್ದವು. ಹಾಗಿದ್ದರೂ ಇವತ್ತು ಇಷ್ಟು ಬೆಳಗ್ಗೆ ಬೆಳಗ್ಗೆ ಇವನಿಗೆ ಏನಾಗಿದೆ ಎಂದುಕೊಂಡು ಅವರಿಗೆ ಅಯೋಮಯವೆನಿಸಿತು. ಕುಳಿತಿದ್ದಲ್ಲೇ ಕೈಗಳನ್ನು ಕಟ್ಟಿಕೊಂಡು ಸ್ವಲ್ಪವೇ ಸ್ಥೂಲವಾಗಿದ್ದ ಹೊಟ್ಟೆಯಮೇಲಿಟ್ಟುಕೊಂಡು ನಿಧಾನವಾಗಿ ಎದುರಿನ ಗೋಡೆಯನ್ನು ದಿಟ್ಟಿಸತೊಡಗಿದರು. ಗೋಡೆಯ ಮೇಲೆ ಗಾಂಧೀ ಮತ್ತು ಬಸವಣ್ಣನವರ ಫೋಟೋಗಳು ತೂಗುಬಿದ್ದಿದ್ದವು. ಸ್ವಲ್ಪವೇ ಪಕ್ಕದಲ್ಲಿ ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಮಂತ್ರಿಗಳ ಫೋಟೋಗಳಿದ್ದವು. ಗೋಡೆಯ ಕಡೆ ದಿಟ್ಟಿಸುತ್ತಲೇ ಅವರು ಸಿದ್ದೇಗೌಡನನ್ನು ಕರೆದು, ಅದೇನು ಸರಿಯಾಗಿ ವಿಚಾರಿಸಿಕೊಂಡು ಅವನನ್ನು ಕರಕೊಂಡು ಬಾ ಎಂದು ಹೇಳಿ ವಾಕಿಂಗ್ ಶೂ ಬಿಚ್ಚಿಟ್ಟು ಒಳಗಡೆಗೆ ನಡೆದರು.
ಸಿದ್ದೇಗೌಡ ವಾಪಸ್ ಬರಲು ಸ್ವಲ್ಪ ಕಾಲವೇ ಹಿಡಿಯಿತು. ಆವೇಳೆಗೆ ಅಡಿಗೆಯವಳೂ ಬಂದು ಅಡಿಗೆಮನೆಯ ಹಿಂದಿನ ಬಾಗಿಲನ್ನು ತೆರೆದು ತನ್ನ ಕೆಲಸದಲ್ಲಿ ತೊಡಗಿದಳು. ಸಿದ್ದೇಗೌಡ ತನ್ನ ಕೈಯಲ್ಲಿ ಒಂದು ಬಂಡಲ್ ಸುದ್ದಿಪತ್ರಿಕೆಗಳನ್ನು ಹಿಡಿದು ಬಂದು ಅವನ್ನೆಲ್ಲ ರಾಮಕೃಷ್ಣಯ್ಯನವರ ಕೈಗೆ ಕೊಟ್ಟ.
ಮೇನ್ ಗೇಟಿನ ಬಳಿ ಬಾಲು ಬಹಳ ಆವೇಶದಿಂದ, ಕ್ರೋಧಾವಿಷ್ಟನಾಗಿ ಮಾತಾಡುತ್ತ ಹೇಳಿದ್ದ ವಿವರಗಳನ್ನೆಲ್ಲ ತನಗೆ ತಿಳಿದಂತೆ ಸಂಕ್ಷಿಪ್ತವಾಗಿ ನಿರೂಪಿಸತೊಡಗಿದ. ಹಾಗೆ ನಿರೂಪಿಸುವಾಗ ಪ್ರೊಫೆಸರರ ಬೆನ್ನಿನ ಕಡೆಗಿದ್ದ ಕಿಟಕಿಯ ಆಚೆಗೆ ಮೂಡುತ್ತಿದ್ದ ನೇಸರದ ಕಡೆಗೆ ದೃಷ್ಟಿ ನೆಟ್ಟಿದ್ದನೇ ವಿನಾ ಅಪ್ಪಿತಪ್ಪಿಯೂ ಇವರ ಮುಖ ನೋಡುತ್ತಿರಲಿಲ್ಲ. ಇವತ್ತಿನ ಕನ್ನಡ, ಇಂಗ್ಲಿಷ್ ಎಲ್ಲಾ ಪತ್ರಿಕೆಗಳಲ್ಲಿ ಮುಖಪುಟಗಳಲ್ಲೇ ಬಂದಿರುವ, ಪ್ರೊಫೆಸರ್ ರಾಮಕೃಷ್ಣಯ್ಯ ನಿನ್ನೆ ಸಂಜೆ ಪುರಭವನದಲ್ಲಿ ಮಾಡಿದ ಇಡೀ ಭಾಷಣದ ಎಲ್ಲಾ ಪಾಯಿಂಟ್‌ಗಳನ್ನು ಬಾಲು ಮೊನ್ನೆ ರಾತ್ರಿ ಬಂಗಲೆಯಲ್ಲಿ ನಡೆದ ಪಾರ್ಟಿಯಲ್ಲಿ ಹೇಳಿದ್ದನಂತೆ. ಪಾರ್ಟಿಯಲ್ಲಿ ಪ್ರೊಫೆಸರ್ ಜೊತೆಗೆ ಹಿಸ್ಟರಿ ಡಿಪಾರ್ಟಮೆಂಟ್‌ನ ಡಾ. ಶೇಖರಪ್ಪ, ಕನ್ನಡ ಡಿಪಾರ್ಟಮೆಂಟ್‌ನ ಪ್ರೊ. ನಾಗಣ್ಣ ಇನ್ನೂ ಒಂದಿಬ್ಬರೂ ಇದ್ದರಂತೆ. ರಾಮಕೃಷ್ಣಯ್ಯನವರೆ ಏನಯ್ಯಾ ಬಾಲು ಇಷ್ಟೊಂದು ವಿಷಯ ತಿಳ್ಕೊಂಡಿದೀಯಾ ಅಂತ ಫುಲ್ ಖುಷಿಯಾಗಿ ಇನ್ನೊಂದು ಸ್ಕಾಚ್ ಹಾಕಯ್ಯ ಅಂತ ಅವರೇ ಅವನ ಗ್ಲಾಸಿಗೆ ಸುರಿದರಂತೆ. ನೀನು ಅದ್ಯಾವುದೊ ಅಡ್ವರ್ಟೈಜಿಂಗ್ ಏಜನ್ಸಿಯಲ್ಲಿ ನೌಕರಿ ಮಾಡೋ ಬದ್ಲಾಗಿ ನಮ್ಮ ಯೂನಿವರ್ಸಿಟಿಯ ಯಾವುದಾದರೂ ಡಿಪಾರ್ಟಮೆಂಟ್‌ನಲ್ಲಿರಬೇಕಾಗಿತ್ತು ಕಣಯ್ಯಾ ಅಂದರಂತೆ. ಸಿದ್ದೇಗೌಡ ನಿರೂಪಿಸಿದಂತೆ, ಬಾಲುಗೆ ತುಂಬಾ ಕೋಪ ಬಂದಿರುವುದು ನಿನ್ನೆ ಪುರಭವನದ ಸಭೆಯ ಇಡೀ ಭಾಷಣದಲ್ಲಿ ತಾನು ಹೇಳಿದ್ದ ಪ್ರತಿಯೊಂದೊಂದು ಪಾಯಿಂಟನ್ನೂ ಬಿಡದೆ ಹೇಳುತ್ತಿದ್ದ ಹೊತ್ತಿನಲ್ಲಿ ತನಗೆ ಒಂದು ಸಣ್ಣ ಕ್ರೆಡಿಟ್ ಕೊಡೋದಿರಲಿ, ಅಪ್ಪಿತಪ್ಪಿಯೂ ಒಂದು ಸಲ ಕೂಡ ತನ್ನ ಕಡೆಗೆ ಕಣ್ಣೆತ್ತಿಯೂ ನೋಡದಿರುವ ಪ್ರೊಫೆಸರ್ ರಾಮಕೃಷ್ಣಯ್ಯನವರದ್ದು ಕ್ರೂರ ನಡವಳಿಕೆಯಾಗಿತ್ತಂತೆ. ಅಲ್ಲದೆ ಹೀಗೆ ಅವರು ಮಾಡುತ್ತಿರುವುದು ಇದೇ ಮೊದಲನೇ ಸಲವಲ್ಲವಂತೆ. ಈ ಹಿಂದೆಯೂ - ಆಶ್ರಮದಲ್ಲಿ ಅಡಿಗೆ ಮಾಡುವವರು ಬ್ರಾಹ್ಮಣರೇ ಆಗಿರಬೇಕನ್ನೋದನ್ನು ತೀವ್ರವಾಗಿ ಗಾಂಧೀಜಿ ವಿರೋಧಿಸಿದ ವಿಷಯವಾಗಲೀ, ಗಾಂಧೀಜಿ ತಮ್ಮನ್ನು ತಾವು ಅರ್ಧ ಹೆಣ್ಣು ಎಂದು ಕರೆದುಕೊಂಡಿದ್ದ ವಿಚಾರವಾಗಲಿ, ತಮಿಳುನಾಡಿನ ನಾನ್ ಬ್ರಾಹ್ಮಿನ್ ಮೂಮೆಂಟ್‌ನ ಹಿಸ್ಟರಿಯ ವಿಚಾರವಾಗಲಿ, ಜ್ಞಾನಿಗಳು, ತಪಸ್ವಿಗಳು ಮಾತ್ರ ಮರಗಿಡಗಳ ಪ್ರಶಾಂತ ವಾತಾವರಣಗಳಲ್ಲಿ ಚಿಂತನೆ ಮಾಡುತ್ತಾ ತಪಸ್ಸು ಮಾಡುವಂತೆಯೇ ಕುವೆಂಪು ಅವರ ನೇಗಿಲಯೋಗಿಯೂ ಉಳುತ್ತಲೇ ತಾನು ಬದುಕಿರುವ ಜಗತ್ತಿಗೆ ಅನ್ನ ಕೊಡುವ ಬಗ್ಗೆ ಚಿಂತನೆಯ ತಪಸ್ಸನ್ನು ಮಾಡುತ್ತಿರುತ್ತಾನೆ ಎಂದು ಒಂದು ಪೆಗ್ ಸ್ಕಾಚ್ ಜಾಸ್ತಿ ಏರಿಸಿದ್ದ ಗಳಿಗೆಯಲ್ಲೇ ಬಾಲು ಹೇಳಿದ್ದನ್ನು ಕೇಳಿ ರಾಮಕೃಷ್ಣಯ್ಯನವರು ದಿಗ್ಮೂಢರಾಗಿ ಎಷ್ಟೋ ಹೊತ್ತು ಮಾತೇ ಆಡಿರಲಿಲ್ಲವಂತೆ. ಇಂಥ ಇನ್ನೂ ಎಷ್ಟೋ ಸಂಗತಿಗಳನ್ನು ಬಾಲು ಅಥೆಂಟಿಕ್ ವಿವರಗಳೊಂದಿಗೆ ಹೇಳುತ್ತಿದ್ದುದನ್ನೆಲ್ಲ ಪ್ರೊಫೆಸರ್ ನಿನ್ನೆಯ ಹಾಗೆಯೇ, ಇವೆಲ್ಲ ತಮ್ಮ ದಿವ್ಯ ಬುದ್ಧಿಮತ್ತೆಯಲ್ಲಿ ಸ್ಫುರಿಸಿರುವ ವಿದ್ವತ್ ವಿಚಾರಗಳೋ ಎಂಬಂತೆ ಬೇರೆಬೇರೆ ಕಡೆಗಳಲ್ಲಿ ಭಾಷಣಗಳನ್ನು ಮಾಡುತ್ತಿದ್ದಾಗಲೆಲ್ಲ ಬಾಲುಗೆ ಸಂಕಟವಾಗುತ್ತಿತ್ತಂತೆ. ಇನ್ನುಮುಂದೆ ಇಂಥ ಚಿಂತಕರ ಸಹವಾಸವೇ ಬೇಡ ಅನಿಸಿಬಿಟ್ಟಿದೆಯಂತೆ....
ಸಿದ್ದೇಗೌಡ ನಿರೂಪಿಸುತ್ತಲೇ ಇದ್ದ....
ಪ್ರೊಫೆಸರ್‌ಗೆ ನಿನ್ನೆಯ ಪುರಸಭೆಯಲ್ಲಿ ನಡೆದ ಸಭೆ ಕಣ್ಣಮುಂದೆ ಬಂತು. ತಾವು ಅಡಿಗಡಿಗೆ ಹೇಳುತ್ತಿದ್ದ ವಿಚಾರ, ವಿವರಗಳೆಲ್ಲ ಬಾಲು ಜೊತೆಗಿನ ಮಾತುಗಳೇ ಆಗಿದ್ದವು. ಹಾಗೆ ಭಾಷಣ ಮಾಡುತ್ತಿದ್ದಾಗ ಮುಂದಿನ ಸಾಲಿನಲ್ಲೇ ಕುಳಿತಿದ್ದ ಬಾಲುನ ಕಡೆಗೆ ಒಮ್ಮೆ ಕೂಡ ನೋಡುವ ಧೈರ್ಯವೇ ಬರಲಿಲ್ಲವಲ್ಲ. ಅವನ ತಿಳುವಳಿಕೆಯ ಶ್ರೀಮಂತಿಕೆಯ ಬಗ್ಗೆ ಹೊಟ್ಟೆಕಿಚ್ಚು, ಈರ್ಷೆಯೇ ನನ್ನಲ್ಲಿದೆಯಲ್ಲವೇ? ಅವನಲ್ಲಿ ಕ್ರೋಧವುಂಟಾಗಿರುವುದು ಸಹಜವೇ ಅಲ್ಲವೇ? ಎನ್ನುವ ಭಾವನೆಗಳು ಮೂಡತೊಡಗಿದವು. ಆದರೂ ಅವರು ಅವನ್ನೆಲ್ಲ ಮನಸ್ಸಿನ ಮೂಲೆಗೆ ಸರಿಸಿ ಸಿದ್ದೇಗೌಡನ ನಿರೂಪದ ಕಡೆ ಗಮನಕೊಟ್ಟರು.
ಸಿದ್ದೇಗೌಡ ಈ ಬಾರಿ ಕಿಟಕಿಯ ನೇಸರದ ಕಡೆಯ ದೃಷ್ಟಿಯನ್ನು ಕೊಂಚ ತಗ್ಗಿಸಿ ಪ್ರೊಫೆಸರರ ಮುಖವನ್ನೇ ದಿಟ್ಟಿಸುತ್ತ ಮುಂದುವರಿಸಿದ... ಈಗ ಪ್ರೊಫೆಸರ್ ರಾಮಕೃಷ್ಣಯ್ಯನವರು ಮೇನ್ ಗೇಟಿನ ಹತ್ರ ಬಂದು, ಇಲ್ಲಿರುವ ಮೀಡಿಯಾದವರ ಮುಂದೆ ಬಹಿರಂಗವಾಗಿ ತಪ್ಪಾಯ್ತು ಅಂತ ನನ್ನ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೆ ನಾನು ಈ ಜಾಗ ಬಿಟ್ಟು ಕದಲೋದಿಲ್ಲ.... ಉಪವಾಸಕ್ಕೇ ಕುಳಿತುಬಿಡುವೆ ಎಂದು ಹೇಳುತ್ತ ಬಾಲು ಗೇಟಿನ ಮುಂದೆ ಕುಳಿತೇಬಿಟ್ಟ ಸಾರ್....
ಐದಾರು ನಿಮಿಷಗಳ ಕಾಲ ಗಾಢವಾಗಿ ಯೋಚಿಸುತ್ತಿದ್ದ ರಾಮಕೃಷ್ಣಯ್ಯ ನಿಧಾನವಾಗಿ ಎದ್ದು ವೇಟಿಂಗ್ ರೂಮಿನ ಸೋಫದಲ್ಲಿ ಕುಳಿತು ಕಳಚಿಟ್ಟಿದ್ದ ಶೂಗಳನ್ನು ಕಟ್ಟಿಕೊಂಡರು. ಸಿದ್ದೇಗೌಡ ಮೇನ್ ಗೇಟಿನ ಕಡೆಗೆ ಹೆಜ್ಜೆಹಾಕತೊಡಗಿದ. ರಾಮಕೃಷ್ಣಯ್ಯ ಉದಾಸ ಭಾವದಲ್ಲಿ, ಬಿಗಿಯೆನಿಸಿದ ಉಸಿರಾಟದಲ್ಲಿ, ನಿಧಾನವಾಗಿ ಹೆಜ್ಜೆಹಾಕುತ್ತ ಅಡಿಗೆಮನೆ ಕಡೆ ನಡೆದರು. ಅಡಿಗೆಯಾಕೆ ಗ್ಯಾಸ್ ಒಲೆಯ ಮುಂದೆ ಬೆಳಗಿನ ನಾಷ್ಟದ ತಯಾರಿಯಲ್ಲಿದ್ದಳು. ಇವರು ತೆರೆದಿದ್ದ ಅಡಿಗೆಮನೆಯ ಹಿಂಬಾಗಿನಿಂದ ಹೊರನಡೆದು ಕಾಂಪೌಂಡ್ ಗೋಡೆ ಹತ್ತಿ ಎರಡೂ ಕೈಗಳನ್ನು ಕಾಂಪೌಂಡ್ ಗೋಡೆಯ ಮೇಲೆ ಊರಿ ಆಚೆಗೆ ಜಾರಿ ಹುಲ್ಲು, ಪಾರ್ಥೇನಿಯಂ ಬೆಳೆದಿದ್ದ ನೆಲಕ್ಕೆ ಕುಳಿತರು. ಸಾವರಿಸಿಕೊಂಡು ಮೇಲೆದ್ದು ದಟ್ಟವಾಗಿ ಬೆಳೆದಿದ್ದ ಮರಗಿಡಗಳ ನಡುವೆ ಮರೆಯಾದರು.