ದ್ವಿರಾಷ್ಟ್ರ ಸಿದ್ದಂತದ ಅಪರಾಧಿಗಳು
ಎಲ್ಲಾ ಹಿಂದೂ ನಾಯಕರು ದೇಶಭಕ್ತರಾಗಿರಲಿಲ್ಲ ಮತ್ತು ಅದೇ ರೀತಿ ಎಲ್ಲಾ ಮುಸ್ಲಿಮರೂ ದೇಶವಿರೋಧಿಗಳಾಗಿರಲಿಲ್ಲ. ಹೆಚ್ಚಿನ ಮುಸ್ಲಿಮ್ ವ್ಯಕ್ತಿಗಳು ಮತ್ತು ಮುಸ್ಲಿಮ್ ಸಾಮುದಾಯಿಕ ಸಂಸ್ಥೆಗಳು ಹಾಗೂ ಸಂಘಟನೆಗಳು ದ್ವಿರಾಷ್ಟ್ರ ಸಿದ್ಧಾಂತ ಮತ್ತು ಪಾಕಿಸ್ತಾನದ ಸೃಷ್ಟಿಯ ವಿರೋಧಿಗಳಾಗಿದ್ದರು. ಅವರು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಪ್ರತ್ಯೇಕತಾವಾದವನ್ನು ವಿರೋಧಿಸಿ ಹೋರಾಡಿದ್ದರು. ಈ ಹೋರಾಟದಲ್ಲಿ ಅದೆಷ್ಟೋ ಮಂದಿ ತಮ್ಮ ಪ್ರಾಣಗಳನ್ನೂ ತ್ಯಾಗ ಮಾಡಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ, ದ್ವಿರಾಷ್ಟ್ರ ಸಿದ್ಧಾಂತದ ರಾಜಕೀಯವನ್ನು ಆನುವಂಶಿಕವಾಗಿ ಪಡೆದ ಹಿಂದೂ ರಾಷ್ಟ್ರೀಯವಾದಿಗಳ ವಾರಸುದಾರರೇ ಇಂದು ಭಾರತವನ್ನು ಆಳುತ್ತಿದ್ದಾರೆ.
ಡಾ. ಶಂಸುಲ್ ಇಸ್ಲಾಮ್ ದೇಶದ ಖ್ಯಾತ ರಾಜಕೀಯ ವಿಜ್ಞಾನಿ ಹಾಗೂ ದಿಲ್ಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಅಪಾರ ಅಧ್ಯಯನ, ವಿದ್ವತ್ತು ಹಾಗೂ ಹೋರಾಡುವ ಛಲ ಇವೆಲ್ಲವೂ ಸೇರಿದರೆ ಶಂಸುಲ್ ಇಸ್ಲಾಮ್ ಸಿಗುತ್ತಾರೆ. ಭಾರತದ ರಾಷ್ಟ್ರೀಯತೆ, ಕೋಮುವಾದ ಹಾಗೂ ಬಲಪಂಥೀಯ ರಾಜಕೀಯದ ಬೆಳವಣಿಗೆಗಳ ಕುರಿತು ಅಧಿಕಾರಯುತವಾಗಿ ಬರೆಯಬಲ್ಲವರು ಹಾಗೂ ಮಾತಾಡಬಲ್ಲವರು ಡಾ. ಶಂಸುಲ್ ಇಸ್ಲಾಮ್. ಆರೆಸ್ಸೆಸ್ ನ ಉದಯ, ಉದ್ದೇಶ, ಬೆಳವಣಿಗೆ ಹಾಗೂ ಅದರ ರಾಜಕೀಯದ ಬಗ್ಗೆ ಅವರಷ್ಟು ವಿವರವಾಗಿ, ಗಾಢವಾಗಿ ತಿಳಿದುಕೊಂಡ ವಿದ್ವಾಂಸರು ತೀರಾ ವಿರಳ. ಆರೆಸ್ಸೆಸ್ ಕುರಿತು ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ದೇಶದ ಸೌಹಾರ್ದ ಪರಂಪರೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗು ದ್ವೇಷ ರಾಜಕೀಯವನ್ನು ವಿರೋಧಿಸುವ ಕೆಲಸವನ್ನು ಅವಿರತವಾಗಿ ಮಾಡಿಕೊಂಡು ಬಂದಿರುವ ಅಪರೂಪದ ವಿದ್ವಾಂಸ
- ಡಾ. ಶಂಸುಲ್ ಇಸ್ಲಾಮ್
ಭಾರತದ ಮುಸ್ಲಿಮರೆಲ್ಲಾ ಒಕ್ಕೊರಲಿನಿಂದ ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಮಂಡಿಸಿ ದೇಶದ ವಿಭಜನೆಗೆ ಕಾರಣರಾದರು ಎಂಬುದು ಹಿಂದುತ್ವವಾದಿ ದಂಡುಗಳು ಸತತ ಪ್ರಚಾರ ಮಾಡುತ್ತಿರುವ ಒಂದು ಮಹಾ ಸುಳ್ಳಾಗಿದೆ. ದೇಶದಲ್ಲಿ ಮುಸ್ಲಿಮ್ ಸಮಾಜದ ದಮನಕ್ಕಾಗಿ ಈ ಸುಳ್ಳನ್ನು ಬಳಸಲಾಗುತ್ತಿದೆ. ಮುಸ್ಲಿಮ್ ಲೀಗ್ ಎಂಬ ಪಕ್ಷವು ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ದೇಶದ ಬೇಡಿಕೆ ಮಂಡಿಸಿ 1947 ದೇಶದ ವಿಭಜನೆಗೆ ಕಾರಣವಾಯಿತು ಎಂಬುದು ನಿಜ. ಹಾಗೆಯೇ ದೇಶದ ಮುಸಲ್ಮಾನರ ಒಂದು ದೊಡ್ಡ ವರ್ಗವನ್ನು ತನ್ನ ಬೇಡಿಕೆಯ ಬೆಂಬಲಿಗರಾಗಿ ಪರಿವರ್ತಿಸುವಲ್ಲಿ ಆ ಪಕ್ಷವು ಯಶಸ್ವಿಯಾಯಿತು ಎಂಬುದರಲ್ಲೂ ಸಂಶಯವಿಲ್ಲ. ಅದೇ ವೇಳೆ, ಭಾರತೀಯ ಮುಸ್ಲಿಮರ ಒಂದು ಬೃಹತ್ ಸಮೂಹ ಮತ್ತು ಅವರ ಹಲವು ನಾಯಕರು ಮತ್ತು ಸಂಘಟನೆಗಳು ಪಾಕಿಸ್ತಾನ ಎಂಬ ಪ್ರತ್ಯೇಕ ದೇಶದ ಬೇಡಿಕೆಯನ್ನು ವಿರೋಧಿಸಿದ್ದರೆಂಬುದು ಕೂಡಾ ಅಷ್ಟೇ ಪ್ರಮುಖ ಸತ್ಯವಾಗಿದೆ. ಪ್ರಸ್ತುತ ವಿಭಜನೆ ವಿರೋಧಿ ಮುಸ್ಲಿಮರು, ಮುಸ್ಲಿಮ್ ಲೀಗ್ ಪಕ್ಷವನ್ನು ತಾತ್ವಿಕವಾಗಿ ವಿರೋಧಿಸಿದ್ದು ಮಾತ್ರವಲ್ಲದೆ, ಬೀದಿಗಳಲ್ಲೂ ಆ ಪಕ್ಷದ ವಿರುದ್ಧ ಘರ್ಷಣೆಗೆ ಇಳಿದಿದ್ದರು. ಅವರ ವಿರುದ್ಧ ಹೋರಾಟದಲ್ಲಿ ಹಲವು ಮುಸ್ಲಿಮರು ತಮ್ಮ ಜೀವಗಳನ್ನೂ ಬಲಿಯರ್ಪಿಸಿದ್ದರು. ಇಷ್ಟಾಗಿಯೂ ವಿಭಜನೆಗಾಗಿ ಎಲ್ಲ ಭಾರತೀಯ ಮುಸ್ಲಿಮರನ್ನು ಅಪರಾಧೀಕರಿಸುವ ಮುಸ್ಲಿಮ್ ವಿರೋಧಿ ರಾಜಕೀಯ ಅಪಪ್ರಚಾರ ಜಾರಿಯಲ್ಲಿದೆ. ದುರದೃಷ್ಟವಶಾತ್ ಹೆಚ್ಚಿನ ಮುಸ್ಲಿಮರಿಗೆ ಕೂಡಾ ಮುಸ್ಲಿಮ್ ಲೀಗ್ ರಾಜಕೀಯವನ್ನು ರಾಜಕೀಯವಾಗಿಯೂ, ಧಾರ್ಮಿಕವಾಗಿಯೂ, ಶಾರೀರಿಕವಾಗಿಯೂ ವಿರೋಧಿಸಿದ್ದ ತಮ್ಮ ಹಿರಿಯರ ಪರಂಪರೆಯ ಅರಿವಿಲ್ಲವಾದ್ದರಿಂದ ಸುಳ್ಳಿನ ಪ್ರಚಾರಕರಿಗೆ ತಮ್ಮ ಕಿಡಿಗೇಡಿ ಕೆಲಸ ಸುಲಭವಾಗಿ ಬಿಟ್ಟಿದೆ.
1940 ಮಾರ್ಚ್ 23 ರಂದು ಮುಸ್ಲಿಮ್ ಲೀಗ್ ಪಕ್ಷವು ತನ್ನ ಲಾಹೋರ್ ಅಧಿವೇಶನದಲ್ಲಿ ಪಾಕಿಸ್ತಾನ ಎಂಬ ಪ್ರತ್ಯೇಕ ದೇಶ ಸ್ಥಾಪಿಸಬೇಕೆಂಬ ನಿರ್ಣಯ ಕೈಗೊಂಡಿತು. ಇದಕ್ಕೆ ಉತ್ತರವಾಗಿ ವಿಭಜನೆ ವಿರೋಧಿ ಮುಸ್ಲಿಮರು ಮುಂದಿನ ತಿಂಗಳಲ್ಲೇ ದೆಹಲಿಯ ಚಾಂದಿಣಿ ಚೌಕ್ ನಲ್ಲಿ ‘ಮುಸ್ಲಿಮ್ ಆಝಾದ್ ಕಾನ್ಫರೆನ್ಸ್’ ಎಂಬ ಬೃಹತ್ ಸಮಾವೇಶವೊಂದನ್ನು ಆಯೋಜಿಸಿದರು. ಅದರಲ್ಲಿ ಭಾರತದ ಬಹುತೇಕ ಎಲ್ಲ ಭಾಗಗಳಿಂದ ಬಂದ 1,400 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಸಿಂಧ್ ಪ್ರಾಂತದ ಪ್ರಧಾನಿ ಅಲ್ಲಾ ಬಕ್ಷ್ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಜಮೀಯತುಲ್ ಉಲಮಾ, ಆಲ್ ಇಂಡಿಯಾ ಮೂಮಿನ್ ಕಾನ್ಫರೆನ್ಸ್, ಆಲ್ ಇಂಡಿಯಾ ಮಜ್ಲಿಸೆ ಅಹ್ರಾರ್, ಆಲ್ ಇಂಡಿಯಾ ಶಿಯಾ ಪಾಲಿಟಿಕಲ್ ಕಾನ್ಫರೆನ್ಸ್, ಖುದಾಯಿ ಖಿದ್ಮತ್ಗಾರ್, ಬೆಂಗಾಲ್ ಕೃಷಿಕ್ ಪ್ರೊಜಾ ಪಾರ್ಟಿ, ಆಲ್ ಇಂಡಿಯಾ ಮುಸ್ಲಿಮ್ ಪಾರ್ಲಿಮೆಂಟರಿ ಬೋರ್ಡ್, ಅಂಜುಮನೆ ವತನ್ -ಬಲೂಚಿಸ್ತಾನ್, ಆಲ್ ಇಂಡಿಯಾ ಮುಸ್ಲಿಮ್ ಮಜ್ಲಿಸ್, ಜಮೀಯ್ಯತ್ ಅಹ್ಲೆ ಹದೀಸ್ - ಹೀಗೆ ಹಲವು ಮುಂಚೂಣಿಯ ಮುಸ್ಲಿಮ್ ಸಂಘಟನೆಗಳ ಪ್ರನಿಧಿಗಳು ಪ್ರಸ್ತುತ ಸಮಾವೇಶದಲ್ಲಿ ಭಾಗವಹಿಸಿದ್ದರು.
ಬಿಹಾರ, ಸಂಯುಕ್ತ ಪ್ರಾಂತ, ಕೇಂದ್ರೀಯ ಪ್ರಾಂತ, ವಾಯವ್ಯ ಗಡಿ (ಓWಈ) ಪ್ರಾಂತ, ಮದ್ರಾಸ್, ಒರಿಸ್ಸಾ ಬೆಂಗಾಲ್, ಬಲೂಚಿಸ್ತಾನ್, ಮಲಬಾರ್, ದೆಹಲಿ, ಅಸ್ಸಾಂ, ರಾಜಸ್ಥಾನ್, ಕಾಶ್ಮೀರ್, ಹೈದರಾಬಾದ್ ಮತ್ತು ಹಲವು ರಾಜ್ಯಗಳ ಮತ್ತು ಭಾರತದ ಎಲ್ಲ ಭಾಗಗಳನ್ನು ಪ್ರನಿಧಿಸುವ ಚುನಾಯಿತ ನಿಯೋಗಗಳು ಕೂಡಾ ‘ಮುಸ್ಲಿಮ್ ಆಝಾದ್ ಕಾನ್ಫರೆನ್ಸ್’ ನ ಭಾಗವಾಗಿದ್ದವು. ಹೀಗೆ, ಪ್ರಸ್ತುತ ಸಮಾವೇಶವು ‘ಭಾರತದ ಮುಸ್ಲಿಮ್ ಬಹುಸಂಖ್ಯಾತರನ್ನು’ ಪ್ರತಿನಿಧಿಸುವ ಸಮಾವೇಶವಾಗಿತ್ತೆಂಬ ಬಗ್ಗೆ ಯಾವುದೇ ಸಂಶಯಕ್ಕೆ ಎಡೆಯೇ ಇರಲಿಲ್ಲ.
ಭಾರತದ ಮುಸ್ಲಿಮ್ ನಾಯಕರ ಪೈಕಿ ಡಾ.ಮುಕ್ತಾರ್ ಅಹ್ಮದ್ ಅನ್ಸಾರಿ ಆರಂಭದಿಂದಲೂ ಮುಸ್ಲಿಮ್ ಲೀಗ್ ನ ಕೋಮುವಾದಿ ರಾಜಕೀಯವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದರು. ಖಾನ್ ಅಬ್ದುಲ್ ಗಫ್ಫಾರ್ ಖಾನ್, ಶೌಕತುಲ್ಲಾ ಖಾನ್, ಸಯ್ಯದ್ ಅಬ್ದುಲ್ಲಾ ಬರೇಲ್ವಿ, ಶೇಕ್ ಮುಹಮ್ಮದ್ ಅಬ್ದುಲ್ಲಾ, ಎ.ಎಂ. ಖ್ವಾಜ, ಮೌಲಾನಾ ಆಝಾದ್ ಮುಂತಾದ ಗಣ್ಯರು ಮುಸ್ಲಿಮ್ ಲೀಗ್ ವಿರೋಧಿ ಅಭಿಯಾನದಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಜಂಇಯ್ಯತುಲ್ ಉಲಮಾದಂತಹ ಮುಸ್ಲಿಮ್ ಧಾರ್ಮಿಕ ವಿದ್ವಾಂಸರ ಬೃಹತ್ ಸಂಘಟನೆಗಳು ಮುಸ್ಲಿಮ್ ಲೀಗ್ ನವರ ‘ಟೂ ನೇಷನ್ ಥಿಯರಿ’ ಯನ್ನು ವಿರೋಧಿಸುವ ಮತ್ತು ಹಿಂದೂಗಳು ಹಾಗೂ ಮುಸ್ಲಿಮರು ಸಾಮರಸ್ಯದೊಂದಿಗೆ ಜೊತೆಯಾಗಿ ಬಾಳುವ ಸಂಯುಕ್ತ ಭಾರತದ ಕಲ್ಪನೆಯನ್ನು ಬೆಂಬಲಿಸುವ ಅನೇಕರು ಕಿರು ಪುಸ್ತಕಗಳನ್ನು ಉರ್ದು ಭಾಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕಟಿಸಿ ವಿತರಿಸಿದ್ದವು.
‘ಮುಸ್ಲಿಮ್ ಅಝಾದ್ ಕಾನ್ಫರೆನ್ಸ್’ ಸಮಾವೇಶದ ನೇತೃತ್ವ ವಹಿಸಿದ್ದ ಯುವ ನಾಯಕ ಅಲ್ಲಾ ಬಕ್ಷ್ ಸುಮ್ರೋ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮುಸ್ಲಿಮ್ ಲೀಗ್ ನ ‘ಪಾಕಿಸ್ತಾನ್ ರೆಸೊಲ್ಯೂಶನ್’ ಅನ್ನು ಭಾರತ ಮತ್ತು ಮುಸ್ಲಿಮರ ಪಾಲಿಗೆ ಮಾರಕ ನಿರ್ಧಾರ ಎಂದು ಘೋಷಿಸಿದರು. ಗಾಂಧೀಜಿಯವರನ್ನು ಹಿಂದೂ ರಾಷ್ಟ್ರೀಯವಾದಿಗಳು ಹತ್ಯೆ ಮಾಡುವ ಬಹಳ ಹಿಂದೆಯೇ, ಸಿಂಧ್‌ನ ಶಿಕಾರ್‌ಪುರ ಪಟ್ಟಣದಲ್ಲಿ 1943 ರ ಮೇ 14 ರಂದು ಅಲ್ಲಾ ಬಕ್ಷ್ ಅವರನ್ನು ಹತ್ಯೆ ಮಾಡಲಾಯಿತು. ಪ್ರತ್ಯೇಕತಾವಾದಿ ಮುಸ್ಲಿಮ್ ಲೀಗ್ ನವರು ನೇಮಿಸಿದ ವೃತ್ತಿಪರ ಕೊಲೆಗಡುಕರು ಈ ಕೃತ್ಯವನ್ನು ಎಸಗಿದ್ದರು. ಅಲ್ಲಾ ಬಕ್ಷ್ ಅವರು ಮುಸ್ಲಿಮ್ ಲೀಗ್ ಮತ್ತು ಅದರ ಪಾಕಿಸ್ತಾನ ಬೇಡಿಕೆಯ ವಿರೋಧಿಯಾಗಿದ್ದರು ಮತ್ತು ಏಕತೆಯ ಸಂಕೇತವಾಗಿದ್ದರು. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಹಿಂದುತ್ವದ ಯೋಜನೆಗೆ ಗಾಂಧೀಜಿಯವರು ಅತಿದೊಡ್ಡ ಅಡಚಣೆಯಾಗಿದ್ದಂತೆಯೇ, ಲೀಗ್ ನವರ ದ್ವಿರಾಷ್ಟ್ರ ಯೋಜನೆಗೆ ಅಲ್ಲಾ ಬಕ್ಷ್ ಅವರು ಅತಿ ದೊಡ್ಡ ತೊಡಕಾಗಿದ್ದರು. ಆದ್ದರಿಂದ ಅವರನ್ನು ಮುಗಿಸುವುದು ವಿಭಜನವಾದಿಗಳಿಗೆ ಅನಿವಾರ್ಯವಾಗಿತ್ತು.
ಪಾಕಿಸ್ತಾನ ವಿರೋಧಿ ಚಳವಳಿಯಲ್ಲಿ ತೊಡಗಿದ್ದ ಎಲ್ಲಾ ಪ್ರಮುಖ ಮುಸ್ಲಿಮ್ ನಾಯಕರನ್ನು ಗುರಿಯಾಗಿಸಿ ಅವರ ಮೇಲೆ ನಡೆಸುವ ಅಭಿಯಾನ ಆರಂಭವಾಯಿತು. ಅವರ ಮನೆಗಳನ್ನು ಲೂಟಿ ಮಾಡಲಾಯಿತು, ಕುಟುಂಬ ಸದಸ್ಯರ ಮೇಲೆ ದಾಳಿ ಮಾಡಲಾಯಿತು, ಅವರು ತಂಗಿದ್ದ ಅಥವಾ ಮುಸ್ಲಿಮರನ್ನುದ್ದೇಶಿಸಿ ಭಾಷಣಗಳನ್ನು ಮಾಡಿದ್ದ ಮಸೀದಿಗಳ ಮೇಲೂ ಆಕ್ರಮಣ ನಡೆಸಿ ಅವುಗಳನ್ನು ಹಾನಿಗೊಳಿಸಲಾಯಿತು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪ್ರಖ್ಯಾತ ವಿದ್ವಾಂಸ ಶೇಕುಲ್ ಇಸ್ಲಾಮ್ ಮೌಲಾನಾ ಹುಸೇನ್ ಅಹ್ಮದ್ ಮದನಿ ಅವರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದವು. ಮೌಲಾನಾ ಆಝಾದ್, ಅಹ್ರಾರ್ ನಾಯಕ ಹಬೀಬುರ‌್ರಹಮಾನ್, ಮೌಲಾನಾ ಇಸ್ಹಾಕ್ ಸಂಭಲಿ, ಹಾಫಿಝ್ ಇಬ್ರಾಹೀಮ್, ಮೌಲಾನಾ ಎಂ. ಕಾಸಿಂ ಶಹಜಹಾನ್ಪುರಿ ಮುಂತಾದ ಹಲವು ಮುಂಚೂಣಿಯ ಮುಸ್ಲಿಮ್ ವಿದ್ವಾಂಸರ ಹತ್ಯೆಗೆ ಯತ್ನಗಳು ನಡೆದವು. ಕೆಲವೆಡೆ ವಿಭಜನೆ ವಿರೋಧಿ ಉಲಮಾಗಳ ಮೇಲೆ ಖಡ್ಗಗಳಿಂದ ದಾಳಿ ನಡೆಸಿ ಅವರ ಅಂಗಾಂಗಗಳನ್ನು ಕತ್ತರಿಸಲಾಯಿತು. ಹಲವರನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ದೆಹಲಿಯಲ್ಲಿ ಜಮೀಯತುಲ್ ಉಲಮಾ ಕಚೇರಿಗೆ ಬೆಂಕಿ ಹಚ್ಚಲಾಯಿತು. ಮೂಮಿನ್ ಕಾನ್ಫರೆನ್ಸ್‌ನವರು ಆಯೋಜಿಸಿದ್ದ ವಿಭಜನೆ ವಿರೋಧಿ ಸಭೆಗಳು ದಾಳಿಯ ವಿಶೇಷ ಗುರಿಗಳಾಗಿದ್ದವು. ಅದರ ಅನೇಕ ಕಾರ್ಯಕರ್ತರನ್ನು ಕೊಲ್ಲಲಾಯಿತು. ಮುಸ್ಲಿಮ್ ಲೀಗ್ ವಿರುದ್ಧ ಮೂಮಿನ್ ಕಾನ್ಫರೆನ್ಸ್ ಸಂಘಟನೆಯು ಯುದ್ಧವನ್ನೇ ಸಾರಿ ಬಿಟ್ಟಿತು.
ದೇವ್ ಬಂದ್‌ನ ‘ದಾರುಲ್ ಮುಅಲ್ಲಿಮೀನ್’ ಸಂಸ್ಥೆಯವರು ಪ್ರಕಾಶಿಸಿರುವ ಆಸಿರ್ ಅದ್ರವಿ ಅವರ ‘ತಹೀಕೆ ಆಝಾದಿ ಔರ್ ಮುಸಲ್ಮಾನ್’ ಗ್ರಂಥದಲ್ಲಿರುವ ಮಾತುಗಳು ಗಮನಾರ್ಹವಾಗಿವೆ:
ದೇಶಾದ್ಯಂತ ಮುಸ್ಲಿಮ್ ಲೀಗ್ ಪಕ್ಷದವರು ಗೌರವಾನ್ವಿತ ರಾಷ್ಟ್ರೀಯವಾದಿ ಉಲಮಾ (ಮುಸ್ಲಿಮ್ ವಿದ್ವಾಂಸರು) ಗಳನ್ನು ಮತ್ತು ನಾಯಕರನ್ನು ಹೇಗೆ ನಡೆಸಿಕೊಂಡಿದ್ದರೆಂಬುದನ್ನು ವಿವರಿಸಲು ನೋವಾಗುತ್ತದೆ. ಅವರ ವರ್ತನೆಯು ತೀರಾ ಹೇಯ, ಕ್ರೂರ ಹಾಗೂ ಅಮಾನವೀಯವಾಗಿತ್ತು. ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ರಾಷ್ಟ್ರೀಯವಾದಿಗಳ ಸಭೆಗಳ ಮೇಲೆ ಯೋಜಿತ ದಾಳಿಗಳನ್ನು ನಡೆಸಲಾಯಿತು ಮತ್ತು ಕಲ್ಲುಗಳ ಮಳೆ ಸುರಿಸಲಾಯಿತು. ಮುಸ್ಲಿಮ್ ಲೀಗ್‌ನ ಸ್ವಯಂಸೇವಕ ಪಡೆಗಳು ರಾಷ್ಟ್ರೀಯವಾದಿ ಮುಸ್ಲಿಮರ ವಿರುದ್ಧ ಅತ್ಯುಗ್ರ ಸ್ವರೂಪದ ಹಿಂಸಾಚಾರದಲ್ಲಿ ತೊಡಗಿದ್ದವು. ರಾಷ್ಟ್ರೀಯವಾದಿ ಮುಸ್ಲಿಮರು ಪ್ರಯಾಣಿಸುತ್ತಿರುವಾಗ ದಾರಿಯಲ್ಲೇ ಅವರನ್ನು ಗುರಿಯಾಗಿಸಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು. ಎಷ್ಟೆಂದರೆ, ಅವರಿಗೆ ಪ್ರಯಾಣಿಸುವುದೇ ಕಷ್ಟಕರವಾಗಿ ಬಿಟ್ಟಿತ್ತು. ಮುಸ್ಲಿಮ್ ಲೀಗ್ ಅನ್ನು ವಿರೋಧಿಸುವವರೆಲ್ಲರೂ ಭಾರೀ ಭಯದ ವಾತಾವರಣದಲ್ಲಿ ಬದುಕಬೇಕಾಗಿತ್ತು. ಅವರ ನಾಯಕರನ್ನು ಪ್ರಶ್ನಿಸುವ ಅಥವಾ ಆಕ್ಷೇಪಿಸುವ ಧೈರ್ಯ ತೋರಿದವರೆಲ್ಲಾ ಭಯಾನಕ ಪರಿಣಾಮಗಳನ್ನು ಎದುರಿಸಬೇಕಾಗಿತ್ತು.
ಈ ಎಲ್ಲಾ ಸತ್ಯಗಳ ಹೊರತಾಗಿಯೂ, ಮುಸ್ಲಿಮರು ಮಾತ್ರ ವಿಭಜನೆಗೆ ಹೊಣೆಗಾರರಾಗಿದ್ದರೆಂದು ಮತ್ತು ಅವರೇ ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕರೆಂದು ಆರೋಪಿಸಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಶ್ರಮ ನಡೆಯುತ್ತಿದೆ. ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಮದನ್ ಮೋಹನ್ ಮಾಳವೀಯ, ಎಂ.ಎಸ್. ಆನೆ, ಬಿ.ಎಸ್. ಮೂಂಜೆ, ಎಂ.ಆರ್. ಜಯಕರ್, ಎನ್.ಸಿ. ಕೇಲ್ಕರ್, ಸ್ವಾಮಿ ಶ್ರದ್ಧಾನಂದ ಮುಂತಾದ ಪ್ರಮುಖ ಹಿಂದೂ ರಾಷ್ಟ್ರೀಯವಾದಿ ನಾಯಕರು (ಅವರಲ್ಲಿ ಕೆಲವರು ಕಾಂಗ್ರೆಸ್ ನಾಯಕರಾಗಿದ್ದರು) ಎಲ್ಲರಿಗೂ ಸಮಾನ ಸ್ಥಾನಮಾನ ವಿರುವ ಭಾರತವನ್ನು ಒಪ್ಪಿರಲಿಲ್ಲ. ಅವ್ರೆಲ್ಲಾ ಕೇವಲ ಹಿಂದುಗಳಿಗಾಗಿ ಮೀಸಲಾಗಿರುವ ಭಾರತವನ್ನು ಬಯಸಿದ್ದರು. ಭಾರತವು ಮೂಲತಃ ಹಿಂದೂ ರಾಷ್ಟ್ರವಾಗಿದ್ದು ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಇಷ್ಟಾಗಿಯೂ ಅವರೆಲ್ಲಾ ಅವರು ‘ಮಹಾನ್ ಭಾರತೀಯ ರಾಷ್ಟ್ರೀಯವಾದಿಗಳು’ ಎಂದೇ ಕರೆಸಿಕೊಂಡರು.
ಭಾರತದಲ್ಲಿ ಬಹುಸಂಖ್ಯಾತ ಸಮಾಜದ ಕೋಮುವಾದಿಗಳಿಗೆ, ತಮ್ಮ ಕೋಮುವಾದವನ್ನು ರಾಷ್ಟ್ರೀಯವಾದದ ತೆರೆಯ ಮರೆಯಲ್ಲಿ ಅಡಗಿಸಿಡುವುದಕ್ಕೆ ಅವಕಾಶವಿತ್ತು. ಮದನ್ ಮೋಹನ್ ಮಾಳವೀಯ ಅವರು ಇದಕ್ಕೆ ಅತ್ಯಂತ ಉಜ್ವಲ ಉದಾಹರಣೆಯಾಗಿದ್ದಾರೆ. ಅವರು 1909 ರಿಂದ 1918 ರ ತನಕ ಮತ್ತು 1933 ರಲ್ಲಿ, ಸಂಯುಕ್ತ ಭಾರತದ ಕಲ್ಪನೆಯನ್ನು ಪ್ರತಿಪಾದಿಸುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಅದೇ ವೇಳೆ ಅವರು 1923,1924 ಮತ್ತು 1936 ರಲ್ಲಿ ಹಿಂದೂ ಮಹಾ ಸಭಾದ ಅಧಿವೇಶನಗಳ ಅಧ್ಯಕ್ಷರೂ ಆಗಿದ್ದರು! ‘ಹಿಂದಿ, ಹಿಂದೂ, ಹಿಂದುಸ್ಥಾನ್’ ಎಂಬ ವಿಭಾಜಕ ಘೋಷಣೆ ಕೂಡಾ ಅವರದೇ ಸೃಷ್ಟಿಯಾಗಿತ್ತು. ಅವರು ಕೋಮುದ್ವೇಷವನ್ನು ಹರಡುವ ಕ್ರಿಯೆಯಲ್ಲಿ ಸಕ್ರಿಯರಾಗಿದ್ದರು ಎಂಬುದಕ್ಕೆ ಧಾರಾಳ ಪುರಾವೆಗಳಿದ್ದರೂ ಅವರನ್ನು ಭಾರತದ ಒಬ್ಬ ಮಹಾ ರಾಷ್ಟ್ರೀಯವಾದಿ ನಾಯಕ ಎಂದೇ ಗುರುತಿಸಲಾಗುತ್ತದೆ.
ಮುಸ್ಲಿಮ್ ನಾಯಕರ ಪೈಕಿ ಯಾರೆಲ್ಲ ಬಹುಧರ್ಮೀಯ ಭಾರತದಲ್ಲಿ ನಂಬಿಕೆ ಉಳ್ಳವರಾಗಿದ್ದರು ಮತ್ತು ಯಾರೆಲ್ಲಾ ಮುಸ್ಲಿಮರಿಗಾಗಿ ಪಾಕಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರವನ್ನು ಬಯಸಿದ್ದರು ಎಂದು ಪ್ರತ್ಯೇಕಿಸಿ ಗುರುತಿಸುವುದು ಸರಿ ಎಂದಾದರೆ ಈ ನಿಯಮವನ್ನು ಹಿಂದೂ ನಾಯಕರಿಗೂ ಅನ್ವಯಿಸಬೇಕಾಗುತ್ತದೆ. ನಾವು ಭಾರತೀಯ ರಾಷ್ಟ್ರೀಯತೆಯನ್ನು ಅಧ್ಯಯನ ಮಾಡುವಾಗ, ಸಾಮಾನ್ಯವಾಗಿ ಹಿಂದೂಗಳಲ್ಲಿ ಎಲ್ಲರೂ ರಾಷ್ಟ್ರೀಯವಾದಿಗಳಾಗಿದ್ದರು ಆದರೆ ಮುಸ್ಲಿಮರಲ್ಲಿ ಕೆಲವರು ಮಾತ್ರ ದೇಶಪ್ರೇಮಿಗಳಾಗಿದ್ದರು ಮತ್ತು ಉಳಿದವರೆಲ್ಲಾ ರಾಷ್ಟ್ರ ವಿರೋಧಿ ಮುಸ್ಲಿಮ್‌ಲೀಗ್‌ನೊಂದಿಗಿದ್ದರು ಎಂದು ನಮ್ಮನ್ನು ನಂಬಿಸಲಾಗುತ್ತದೆ. ಈ ಗೊಂದಲವನ್ನು ನಿವಾರಿಸಬೇಕಿದ್ದರೆ, ನಾವು ಭಾರತೀಯ ಸಂದರ್ಭದಲ್ಲಿ ರಾಷ್ಟ್ರೀಯತೆ ಅಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕಾಗುತ್ತದೆ. ಬಹುಧರ್ಮೀಯ, ಜಾತ್ಯತೀತ ರಾಷ್ಟ್ರವೇ ಭಾರತೀಯ ರಾಷ್ಟ್ರೀಯತೆ ಎಂದಾದರೆ ಈ ಕಲ್ಪನೆಯನ್ನು ನಂಬುವವರನ್ನು ಮಾತ್ರ ನೈಜ ರಾಷ್ಟ್ರೀಯವಾದಿಗಳೆಂದು ಹಾಗೂ ದೇಶಪ್ರೇಮಿಗಳೆಂದು ಗುರುತಿಸಬಹುದು. ಆದರೆ ಕೋಮುವಾದಿ ಹಿಂದೂಗಳು ಅಥವಾ ಹಿಂದೂ ರಾಷ್ಟ್ರೀಯವಾದಿ ನಾಯಕರ ಬಗ್ಗೆ ಚರ್ಚಿಸುವಾಗ ಹೆಚ್ಚಿನವರು ಈ ನೀತಿಯನ್ನು ಪಾಲಿಸುವುದಿಲ್ಲ. ಸ್ಪಷ್ಟವಾಗಿ ಬಹು ಸಂಸ್ಕೃತಿಯ ಭಾರತದ ವಿರುದ್ಧ ನಿಂತಿದ್ದವರನ್ನು ಇಂದಿಗೂ ರಾಷ್ಟ್ರೀಯವಾದದ ಸಂಕೇತಗಳಾಗಿ ಪರಿಗಣಿಸಲಾಗುತ್ತದೆ. ನಿಜವಾಗಿ ಹಿಂದೂ ರಾಷ್ಟ್ರೀಯವಾದವನ್ನು ಪ್ರತಿಪಾದಿಸುತ್ತಿದ್ದ ನಾಯಕರು ಕೂಡಾ ಮುಸ್ಲಿಮ್ ಪ್ರತ್ಯೇಕತಾವಾದವನ್ನು ಪ್ರತಿಪಾದಿಸುತ್ತಿದ್ದ ಮುಸ್ಲಿಮ್ ಲೀಗ್ ನಷ್ಟೇ ಸ್ಪಷ್ಟವಾಗಿ ರಾಷ್ಟ್ರ ವಿರೋಧಿಗಳಾಗಿದ್ದರು.
ಈ ಮಾನದಂಡದ ಪ್ರಕಾರ ಎಲ್ಲಾ ಹಿಂದೂ ನಾಯಕರು ದೇಶಭಕ್ತರಾಗಿರಲಿಲ್ಲ ಮತ್ತು ಅದೇ ರೀತಿ ಎಲ್ಲಾ ಮುಸ್ಲಿಮರೂ ದೇಶವಿರೋಧಿಗಳಾಗಿರಲಿಲ್ಲ. ಹೆಚ್ಚಿನ ಮುಸ್ಲಿಮ್ ವ್ಯಕ್ತಿಗಳು ಮತ್ತು ಮುಸ್ಲಿಮ್ ಸಾಮುದಾಯಿಕ ಸಂಸ್ಥೆಗಳು ಹಾಗೂ ಸಂಘಟನೆಗಳು ದ್ವಿರಾಷ್ಟ್ರ ಸಿದ್ಧಾಂತ ಮತ್ತು ಪಾಕಿಸ್ತಾನದ ಸೃಷ್ಟಿಯ ವಿರೋಧಿಗಳಾಗಿದ್ದರು. ಅವರು ತಮ್ಮ ಸರ್ವಸ್ವವನ್ನೂ ಪಣಕ್ಕಿಟ್ಟು ಪ್ರತ್ಯೇಕತಾವಾದವನ್ನು ವಿರೋಧಿಸಿ ಹೋರಾಡಿದ್ದರು. ಈ ಹೋರಾಟದಲ್ಲಿ ಅದೆಷ್ಟೋ ಮಂದಿ ತಮ್ಮ ಪ್ರಾಣಗಳನ್ನೂ ತ್ಯಾಗ ಮಾಡಿದ್ದರು. ಅತ್ಯಂತ ದುಃಖಕರ ಸಂಗತಿಯೆಂದರೆ, ದ್ವಿರಾಷ್ಟ್ರ ಸಿದ್ಧಾಂತದ ರಾಜಕೀಯವನ್ನು ಆನುವಂಶಿಕವಾಗಿ ಪಡೆದ ಹಿಂದೂ ರಾಷ್ಟ್ರೀಯವಾದಿಗಳ ವಾರಸುದಾರರೇ ಇಂದು ಭಾರತವನ್ನು ಆಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದೆ, ಮುಸ್ಲಿಮ್ ಲೀಗ್ ಮತ್ತು ಬ್ರಿಟಿಷ್ ಆಡಳಿತಗಾರರೊಂದಿಗೆ ಸಹಕರಿಸಿದ ಮೂಂಜೆ, ಸಾವರ್ಕರ್ ಮತ್ತು ಗೋಳ್ವಾಲ್ಕರ್ ಥರದವರ ಸಂತತಿಗಳು ಇಂದು ದೇಶದ ಚುಕ್ಕಾಣಿ ಹಿಡಿದಿದ್ದು ಭಾರತೀಯ ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಿಸುತ್ತಿವೆ.
ಇದೀಗ ಭಾರತೀಯ ಮುಸ್ಲಿಮರು, ರಾಷ್ಟ್ರವಿರೋಧಿ ಹಿಂದುತ್ವವಾದಿಗಳ ಕಡೆಯಿಂದ ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳ ಮುಂದೆ ಕ್ಷಮಾಪನಾ ಧೋರಣೆ ಅನುಸರಿಸುವ ಬದಲು, ಸುಳ್ಳಿನ ಪ್ರಚಾರಕರಿಗೆ ಸವಾಲೊಡ್ಡುವ ಕೆಲಸ ಮಾಡಬೇಕಾಗಿದೆ. ಐತಿಹಾಸಿಕ ಸತ್ಯಗಳೆಲ್ಲವೂ ತಮ್ಮ ಪರವಾಗಿವೆ ಎಂಬುದನ್ನು ಅವರು ಮನಗಾಣಬೇಕು. ಭಾರತೀಯ ಮುಸ್ಲಿಮರೆಂದರೆ ಮುಸ್ಲಿಮ್ ಲೀಗ್ ಮತ್ತು ಅದರ ದ್ವಿರಾಷ್ಟ್ರ ಸಿದ್ಧಾಂತವನ್ನು ಹಾಗೂ ಪಾಕಿಸ್ತಾನದ ಬೇಡಿಕೆಯನ್ನು ಅತ್ಯುಗ್ರವಾಗಿ ವಿರೋಧಿಸಿದ್ದ ಅದ್ಭುತ ಹೋರಾಟಗಾರರ ಸಂತತಿಗಳು. ಅವರು ಪಾಕಿಸ್ತಾನದ ರಚನೆಯನ್ನು ಎಂದೂ ಒಪ್ಪಿರಲಿಲ್ಲ. ನಿಜವಾಗಿ ಅವರು ಭಾರತವನ್ನು ವಿಭಜಿಸಲು ಬ್ರಿಟಿಷ್ ಆಡಳಿತಗಾರರು, ಮುಸ್ಲಿಮ್ ಲೀಗ್ ಮತ್ತು ಕಾಂಗ್ರೆಸ್ ನಡುವೆ ನಡೆದಿದ್ದ ಒಪ್ಪಂದದ ಅಸಹಾಯಕ ಬಲಿಪಶುಗಳಾಗಿದ್ದಾರೆ. ಭಾರತದ ವಿಭಜನೆಗೆ ಕಾಂಗ್ರೆಸ್ ಪಕ್ಷವು ತನ್ನ ಒಪ್ಪಿಗೆ ನೀಡಿದ ಬಳಿಕ ಜೂನ್ 1947 ರಲ್ಲಿ ‘ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಪ್ಫಾರ್ ಖಾನ್ ಅವರು ಗಾಂಧೀಜಿಯವರನ್ನುದ್ದೇಶಿಸಿ ನೀಡಿದ ಈ ಕೆಳಗಿನ ಹೇಳಿಕೆಯು, ಪಾಕಿಸ್ತಾನ ವಿರೋಧಿ ಮುಸ್ಲಿಮರು ಅನುಭವಿಸಿದ್ದ ವ್ಯಾಪಕ ವಿಶ್ವಾಸದ್ರೋಹದ ಭಾವನೆಯನ್ನುಪ್ರತಿಬಿಂಬಿಸುತ್ತದೆ. ಅವರು ಬರೆದ ಮಾತುಗಳು ಹೀಗಿದ್ದವು:
ನಾವು ಪಖ್ತೂನ್ ಗಳು ಸ್ವಾತಂತ್ರ್ಯಕ್ಕಾಗಿ ನಿಮ್ಮ ಜೊತೆ ನಿಂತು ಅಪಾರ ತ್ಯಾಗ ಬಲಿದಾನಗಳನ್ನು ನೀಡಿದೆವು. ಆದರೆ ನೀವು ನಮಗೆ ಮೋಸಮಾಡಿದಿರಿ ಮತ್ತು ನಮ್ಮನ್ನು ತೋಳಗಳ ಮುಂದೆ ಎಸೆದು ಬಿಟ್ಟಿರಿ......
ಇಂದು ಭಾರತವನ್ನು ಆಳುತ್ತಿರುವ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಸಂತತಿಗಳು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ ಮತ್ತು ಜಿನ್ನಾ ಅವರೊಂದಿಗೆ ಮೈತ್ರಿ ಮಾಡಿಕೊಂಡ ಪರಂಪರೆಯವರಾಗಿದ್ದಾರೆ. ಅದೇವೇಳೆ, ಭಾರತದ ಮುಸ್ಲಿಮರು ವಿಭಜನೆಯನ್ನು ಮತ್ತು ಧರ್ಮದ ಆಧಾರದಲ್ಲಿ ದೇಶವನ್ನು ವಿಂಗಡಿಸುವುದನ್ನು ಬಲವಾಗಿ ವಿರೋಧಿಸಿದವರ ಸಂತತಿಗಳಾಗಿದ್ದಾರೆ.
ಮುಸ್ಲಿಮರಿಗೆ ದೇಶವನ್ನು ವಿಭಜಿಸದಿರಲು ಬಲವಾದ ಕಾರಣವಿತ್ತು. ಖ್ಯಾತ ಕವಿ ಶಮೀಮ್ ಕರ್ಹಾನಿ ಅವರು ಬರೆದ ‘ಪಾಕಿಸ್ತಾನ್ ಚಾಹನೆ ವಾಲೋಂ ಸೆ’ (ಪಾಕಿಸ್ತಾನವನ್ನು ಬಯಸುವವರಿಗೆ) ಶೀರ್ಷಿಕೆಯ ಪಾಕಿಸ್ತಾನ ವಿರೋಧಿ ಕವಿತೆಯಿಂದ ಒಂದುಗೂಡಿದ ಪ್ರಜಾಸತ್ತಾತ್ಮಕ-ಜಾತ್ಯತೀತ ಭಾರತದ ಕಡೆಗೆ ಅವರ ಸಂಕಲ್ಪ ಮತ್ತು ಬದ್ಧತೆ ಸ್ಪಷ್ಟವಾಗಿದೆ, ಇದು ಮುಸ್ಲಿಮ್ ಲೀಗ್ ವಿರುದ್ಧ ಭಾರತೀಯ ಮುಸ್ಲಿಮರ ಗೀತೆಯಾಯಿತು. ಮುಸ್ಲಿಮ್ ಲೀಗ್ ಪಾಕಿಸ್ತಾನದ ಬೇಡಿಕೆಯನ್ನು ಧಾರ್ಮಿಕ ಯೋಜನೆಯನ್ನಾಗಿ ಪರಿವರ್ತಿಸಿದ್ದರಿಂದ, ಶಮೀಮ್ ಕರ್ಹಾನಿ ಅದೇ ಶಬ್ದಕೋಶದಲ್ಲಿ ಪ್ರತಿಕ್ರಿಯಿಸಿದರು. ಪ್ರತಿಯೊಬ್ಬ ಭಾರತೀಯ ಮುಸ್ಲಿಮ್ ಇದರ ಬಗ್ಗೆ ಹೆಮ್ಮೆ ಪಡಬೇಕು.