×
Ad

ಎಲ್ಲಮ್ಮ : ನಂಬಿಕೆ ತಾತ್ವಿಕತೆ

Update: 2026-02-08 12:40 IST

ಎಲ್ಲಮ್ಮನನ್ನು ಪೂಜಿಸುವ ಕೆಲವು ಮುಖ್ಯವಾದ ಕ್ರಮಗಳನ್ನು ಪರಿಚಯ ಮಾಡಿಕೊಳ್ಳೋಣ. ಎಲ್ಲಮ್ಮನ ಪೂಜೆಗೆ ಸಾಮಾನ್ಯವಾಗಿ ಅತ್ಯವಶ್ಯವಾದ ವಸ್ತುಗಳಲ್ಲಿ ಕಾಯಿಪಲ್ಲೆ, ಕಾಳು ಮುಖ್ಯವಾದವು. ತರಕಾರಿಗಳಾದ ಬದನೆಕಾಯಿ ಮತ್ತು ಗೆಜ್ಜರಿ, ಎಲೆಪಲ್ಲೆಗಳಾದ ಮೆಂತೆಪಲ್ಲೆ, ಉಳ್ಳಾಗಡ್ಡೆ/ಈರುಳ್ಳಿ ಪಲ್ಲೆ ಮತ್ತು ಕಾಳು, ಅದರಲ್ಲಿಯೂ ವಿಶೇಶವಾಗಿ ಅಲಸಂದೆ ಕಾಳು ಎಲ್ಲಮ್ಮನ ಪೂಜೆಗೆ ಅತ್ಯಂತ ಮುಖ್ಯವಾಗಿ ಬೇಕಾದವು. ಇವುಗಳಿಲ್ಲದೆ ಎಲ್ಲಮ್ಮನ ಪೂಜೆ ಸಾಮಾನ್ಯವಾಗಿ ನಡೆಯುವುದಿಲ್ಲ. ಅಂದರೆ ಇವು ಎಲ್ಲಮ್ಮನ ಪೂಜೆಯಲ್ಲಿ ಕಡ್ಡಾಯವಾಗಿ ಇರಬೇಕು. ಇದು ನಿಯಮದಂತೆ ಬಳಕೆಯಲ್ಲಿದೆ. ಇದು ಎಲ್ಲಮ್ಮನ ಪೂಜೆಯಲ್ಲಿ ಮಾತ್ರವಲ್ಲದೆ ಎಲ್ಲಮ್ಮ ಪರಂಪರೆಯಲ್ಲಿಯೆ ಇವುಗಳ ಮಹತ್ವವನ್ನು ತೋರಿಸುತ್ತದೆ.

ದ್ರಾವಿಡ ದೇವ ದೇವತೆಗಳ ನೆರಳಲ್ಲಿರುವ ಗ್ರಾಮ್ಯ ಬದುಕನ್ನು ಶೋಧಿಸುತ್ತಾ ಬಂದಿರುವ ಬಸವರಾಜ ಕೋಡಗುಂಟಿ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು. ಐತಿಹಾಸಿಕ ಭಾಷಾ ವಿಜ್ಞಾನ, ಕನ್ನಡ ಭಾಷೆಯ ರಚನೆ, ಬೆಳವಣಿಗೆ ಮತ್ತು ಬಳಕೆ, ದ್ರಾವಿಡ ಭಾಷಾ ವಿಜ್ಞಾನ, ಹೈದರಾಬಾದ್ ಕರ್ನಾಟಕ, ಎಲ್ಲಮ್ಮ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 25ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮತ್ತು ಅಷ್ಟೇ ಸಂಖ್ಯೆಯ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದ ಪತ್ರಿಕೆ, ಸಂಪುಟಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

ಇಲ್ಲಿ ವಿದ್ವತ್ ವಲಯದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಎಲ್ಲಮ್ಮನ ತತ್ವ, ತಾತ್ವಿಕತೆಯ ಬಗ್ಗೆ ಬರೆಯುತ್ತಾರೆ.

‘ಎಲ್ಲಮ್ಮ’ ಎಂಬುದು ಈ ನೆಲದಲ್ಲಿ ಬಹುಕಾಲದಿಂದ ಬದುಕಿರುವ ಒಂದು ನಂಬಿಕೆ. ಇದನ್ನು ನಂಬಿಕೆ ಎಂದು ನಾನು ಕರೆಯುತ್ತಿದ್ದೇನೆ. ಇದನ್ನು ದೇವರು ಎಂದೇ ಬಹುತೇಕರು ನಂಬಿದ್ದಾರೆ ಮತ್ತು ಕರೆಯುತ್ತಿದ್ದಾರೆ. ಇದೊಂದು ಪಂಥವೊ, ಮತವೊ ಆಗಿರಬಹುದೆ? ಇನ್ನೂ ಮುಂದುವರಿದು ಆಧುನಿಕ ಕಾಲದಲ್ಲಿ ಕರೆಯುವ ‘ಧರ್ಮ’ ಆಗಿರಬಹುದೆ? ಹೀಗೆಲ್ಲ ಯೋಚನೆಗಳನ್ನು ಇಟ್ಟುಕೊಳ್ಳಬಹುದು. ಆದರೆ, ‘ನಂಬಿಕೆ’, ‘ಮತ’-‘ಪಂಥ’ ಇಲ್ಲವೆ ‘ಧರ್ಮ’ ಇವುಗಳನ್ನು ಹೇಗೆ ಗುರುತಿಸುವುದು? ಇದಕ್ಕೆ ಏನು ಮಾನದಂಡಗಳು? ಎಂಬುದು ಸಹಜ ಉತ್ತರವಿಲ್ಲದ ಪ್ರಶ್ನೆಗಳಾಗಿವೆ. ಈ ನೆಲೆಯಲ್ಲಿ ನಿಂತುಕೊಂಡು ‘ಎಲ್ಲಮ್ಮ’ನನ್ನು ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನವನ್ನು ಈ ಬರಹದಲ್ಲಿ ಮಾಡಿದ್ದೇನೆ.

ಎಲ್ಲಮ್ಮನನ್ನು ತಿಳಿದುಕೊಳ್ಳುವುದಕ್ಕೆ ಈ ಬರಹದಲ್ಲಿ ಅನುಸರಿಸಿರುವ ದಾರಿಗಳು ಹೀಗಿವೆ. 1) ಎಲ್ಲಮ್ಮನ ವ್ಯಾಪಕತೆ 2) ಎಲ್ಲಮ್ಮನ ಪಳಮೆ ಮತ್ತು 3) ಎಲ್ಲಮ್ಮನ ಬೆಳವಣಿಗೆ. ಈ ಮೂರು ಹಂತಗಳನ್ನು ಪರಸ್ಪರ ಬೆಸೆದು ನೋಡುವ ಮತ್ತು ಆ ಮೂಲಕ ಎಲ್ಲಮ್ಮ ಹೇಗೆ ಇಂದಿನ ಕರ್ನಾಟಕ ಪರಿಸರವನ್ನು ವ್ಯಾಪಕವಾಗಿ ಆವರಿಸಿಕೊಂಡಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದೆ. ಮೊದಲಿಗೆ ಎಲ್ಲಮ್ಮನ ಪಸರಿಸಿಕೊಂಡಿರುವಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸಿದೆ. ಎಲ್ಲಮ್ಮನ ಪರಿಕಲ್ಪನೆ, ಎಲ್ಲಮ್ಮನ ಪೂಜೆಗೆ ಬಳಸುವ ವಸ್ತುಗಳು ಮತ್ತು ಕ್ರಮಗಳು ಇವುಗಳನ್ನು ಪರಿಚಯಿಸಿಕೊಳ್ಳೋಣ. ಇವುಗಳು ಎಲ್ಲಮ್ಮನ ಪಳಮೆಯನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತವೆ. ಇದಕ್ಕೆ ಪೂರಕವಾಗಿ ಮೂರನೆಯ ಭಾಗದಲ್ಲಿ ಎಲ್ಲಮ್ಮನ ಬೆಳವಣಿಗೆಯ ಬಗೆಗೆ ಕೆಲವು ಮಹತ್ವದ ವಿಚಾರಗಳನ್ನು ಮಾತಾಡಿದೆ.

ಎಲ್ಲಮ್ಮನಿಗೆ ಮುಖ್ಯವಾಗಿ ಗುಡಿ ಇರುವುದಿಲ್ಲ. ಸವದತ್ತಿ ಮೊದಲಾಗಿ ಕೆಲವು ಕಡೆ ಪ್ರಸಿದ್ಧವಾದ ಎಲ್ಲಮ್ಮನ ಗುಡಿಗಳು ಇರುವುದು ನಿಜ. ಆದರೆ, ಪ್ರತಿಯೊಂದು ಗುಡಿಯೂ ತನ್ನದೆ ಆದ ಕತೆಯನ್ನು ಹೊಂದಿರುವ ಸಾಧ್ಯತೆ ಇದೆ. ಯಾವುದೊ ಸಮಯದಲ್ಲಿ ಗುಡಿಯನ್ನು ಪಡೆದುಕೊಂಡಿರುವ ಅವಕಾಶ ಇದೆ. ಆದರೆ, ಎಲ್ಲಮ್ಮ ಅದರಂತೆಯೆ ಇನ್ನೂ ಹಲವು ಹೆಣ್ಣುದೇವರುಗಳು ಗುಡಿಯನ್ನು ಹೊಂದಿಲ್ಲ. ಗುಡ್ಡದಲ್ಲಿ ಇಲ್ಲವೆ ಕೊಳ್ಳದಲ್ಲಿ ಇರುವುದು ಎಲ್ಲಮ್ಮನ ಸಹಜತೆ. ಇಂದಿಗೂ ಸವದತ್ತಿಯನ್ನು ಸಾಮಾನ್ಯರು ಗುಡ್ಡ ಇಲ್ಲವೆ ಕೊಳ್ಳ ಎಂದೇ ಕರೆಯುವುದು. ಗುಡ್ಡಕ್ಕೆ ಹೋಗಬೇಕು ಎಂಬುದೇ ಸಹಜ ಮಾತು. ಸಾಮಾನ್ಯವಾಗಿ ಗುಡ್ಡದಲ್ಲಿ ಒಂದು ಕಲ್ಲಿನಲ್ಲಿ ಎಲ್ಲಮ್ಮ ಒಡಮೂಡಿರುತ್ತದೆ. ಅಂದರೆ, ಒಂದು ಕಲ್ಲಿಗೆ ಎರಡು ‘ಕಣ್ಣುಬೊಟ್ಟು’ಗಳನ್ನು ಒತ್ತಿರಲಾಗುತ್ತದೆ. ಕೆಲವೊಮ್ಮೆ ಮೂಗುತಿಯನ್ನೂ ಇಟ್ಟಿರಲಾಗುತ್ತದೆ. ಹೆಚ್ಚಿನ ಪೂಜೆ ಮೊದಲಾದ ಚಟುವಟಿಕೆಗಳು ನಡೆಯುವ ಜಾಗದಲ್ಲಿ ತುಂಬಿದ ಕೊಡವೊಂದನ್ನು ಇಟ್ಟು ಅದಕ್ಕೆ ದಟ್ಟಿಯನ್ನು ಉಡಿಸಿ ಮೂಗುತಿಯನ್ನು ಇಡುತ್ತಾರೆ. ಇನ್ನು ಮನೆಗಳಲ್ಲಿ ಎಲ್ಲಮ್ಮನನ್ನು ಪೂಜಿಸುವಾಗ ತುಂಬಿದ ಕೊಡ ಇಲ್ಲವೆ ತುಂಬಿದ ತಂಬಿಗೆ ಇದುವೇ ದೇವರು ಆಗುತ್ತವೆ. ಇದಕ್ಕೆ ದಟ್ಟಿಯನ್ನು ಏರಿಸಲಾಗುತ್ತದೆ. ದಟ್ಟಿಯ ಬದಲು ಇಂದಿನ ಕಾಲದಲ್ಲಿ ಸೀರೆಯನ್ನು ಏರಿಸಲಾಗುತ್ತದೆ. ಇನ್ನೂ ಹಲವು ಕಡೆ ಒಂದು ಸಣ್ಣ ಕಲ್ಲಿಗೆ ನೀರನ್ನು ಚಿಮುಕಿಸಿದರೆ ಅದುವೇ ಎಲ್ಲಮ್ಮ ಆಗಿಬಿಡುತ್ತದೆ. ಹೀಗೆ ಎಲ್ಲಮ್ಮನ ಪೂಜೆ ಅತ್ಯಂತ ಸರಳವಾಗಿರುವುದನ್ನು ಗಮನಿಸಬೇಕು. ಇದು ಬಹುಮುಖ್ಯವಾದ ಅಂಶ.

 

ಇನ್ನು ಎಲ್ಲಮ್ಮನನ್ನು ಪೂಜಿಸುವ ಕೆಲವು ಮುಖ್ಯವಾದ ಕ್ರಮಗಳನ್ನು ಪರಿಚಯ ಮಾಡಿಕೊಳ್ಳೋಣ. ಎಲ್ಲಮ್ಮನ ಪೂಜೆಗೆ ಸಾಮಾನ್ಯವಾಗಿ ಅತ್ಯವಶ್ಯವಾದ ವಸ್ತುಗಳಲ್ಲಿ ಕಾಯಿಪಲ್ಲೆ, ಕಾಳು ಮುಖ್ಯವಾದವು. ತರಕಾರಿಗಳಾದ ಬದನೆಕಾಯಿ ಮತ್ತು ಗೆಜ್ಜರಿ, ಎಲೆಪಲ್ಲೆಗಳಾದ ಮೆಂತೆಪಲ್ಲೆ, ಉಳ್ಳಾಗಡ್ಡೆ/ಈರುಳ್ಳಿ ಪಲ್ಲೆ ಮತ್ತು ಕಾಳು, ಅದರಲ್ಲಿಯೂ ವಿಶೇಶವಾಗಿ ಅಲಸಂದೆ ಕಾಳು ಎಲ್ಲಮ್ಮನ ಪೂಜೆಗೆ ಅತ್ಯಂತ ಮುಖ್ಯವಾಗಿ ಬೇಕಾದವು. ಇವುಗಳಿಲ್ಲದೆ ಎಲ್ಲಮ್ಮನ ಪೂಜೆ ಸಾಮಾನ್ಯವಾಗಿ ನಡೆಯುವುದಿಲ್ಲ. ಅಂದರೆ ಇವು ಎಲ್ಲಮ್ಮನ ಪೂಜೆಯಲ್ಲಿ ಕಡ್ಡಾಯವಾಗಿ ಇರಬೇಕು. ಇದು ನಿಯಮದಂತೆ ಬಳಕೆಯಲ್ಲಿದೆ. ಇದು ಎಲ್ಲಮ್ಮನ ಪೂಜೆಯಲ್ಲಿ ಮಾತ್ರವಲ್ಲದೆ ಎಲ್ಲಮ್ಮ ಪರಂಪರೆಯಲ್ಲಿಯೆ ಇವುಗಳ ಮಹತ್ವವನ್ನು ತೋರಿಸುತ್ತದೆ.

ಎಲ್ಲಮ್ಮನ ಪೂಜೆಯಲ್ಲಿ ಇನ್ನೊಂದು ಮುಖ್ಯವಾದುದು ಬೇಟೆ. ಸಾಮಾನ್ಯವಾಗಿ ಎಲ್ಲಮ್ಮನಿಗೆ ಕುರಿಯ ಬೇಟೆಯನ್ನು ಒಪ್ಪಿಸಲಾಗುತ್ತದೆ. ಕೋಣ, ಕೋಳಿ ಇಲ್ಲವೆ ಇನ್ನಾವುದೆ ಜೀವಿಗಳನ್ನು ಎಲ್ಲಮ್ಮನಿಗೆ ಒಪ್ಪಿಸುವುದು ಸಾಮಾನ್ಯವಾಗಿ ಇಲ್ಲ. ಆದರೆ, ಕೆಲವೆಡೆ ಇದಕ್ಕೆ ಅಪವಾದಗಳು ಕಾಣಿಸಬಹುದು. ಈ ಅಪವಾದಗಳೆಲ್ಲ ಸಾಮಾನ್ಯವಾಗಿ ಯಾವುದೊ ಒಂದು ಕಾಲದಲ್ಲಿ ಆಗಿರುವ ಐತಿಹಾಸಿಕ ಕಾರಣಗಳಲ್ಲಿ ಬೆಳೆದಿರುವಂತಹವು ಆಗಿರುತ್ತವೆ. ಇಲ್ಲಿ ಬಹಳ ಗಟ್ಟಿಯಾಗಿ ಹೇಳಬೇಕಾದ ಒಂದು ಮಾತು ಎಂದರೆ, ಎಲ್ಲಮ್ಮನಿಗೆ ಕುರಿಯನ್ನು ಕೊಡುವುದು ಬೇಟೆಯಾಗಿ. ಆದರೆ, ಆಧುನಿಕ ವಿದ್ವತ್ತು ಎಲ್ಲಮ್ಮನಿಗೆ ಬಲಿ ಕೊಡಲಾಗುತ್ತದೆ ಎಂದು ಹೇಳುತ್ತದೆ. ಇದು ವಿದ್ವತ್ತಿನ ಭ್ರಮೆ. ವಿದ್ವತ್ತು ತನ್ನದೆ ಅರೆಕೊರೆಯ, ತಪ್ಪಾದ ತಿಳುವಳಿಕೆಯಲ್ಲಿ ಬೆಳೆಸಿಕೊಂಡ ಪದ. ‘ಬಲಿ’ಗೂ ‘ಬೇಟೆ’ಗೂ ಪರಸ್ಪರ ನಂಟು ಇಲ್ಲ, ಹತ್ತಿರದ ನಂಟೂ ಇಲ್ಲ. ಇವೆರಡೂ ಬಹುದೂರದಲ್ಲಿ ವಿಭಿನ್ನವಾಗಿ ನಿಲ್ಲುವಂತಹವು. ಸಾಮಾನ್ಯವಾಗಿ ಬಲಿಯನ್ನು ಕೊಡುವುದು ಮನುಷ್ಯ ಬದುಕಿನ ನೆಮ್ಮದಿಗಾಗಿ. ಆದರೆ, ಬೇಟೆ ಇದು ಮನುಷ್ಯರ ಅನ್ನ. ಇಂದಿಗೂ ಮನುಷ್ಯರ ನಡುವೆ ಅನ್ನವನ್ನು ಉಣ್ಣುವಾಗ ಮೊದಲ ತುತ್ತನ್ನು ನೆಲದಾಯಿಗೆ ಕೊಡುವ ಪದ್ಧತಿ ಇದೆ. ಹೀಗೆ ಮಾನವರು ತಾವು ಉಣ್ಣುವ ಅನ್ನದ ಮೊದಲ ತುತ್ತನ್ನು ಅನ್ನ ಕೊಟ್ಟ ಎಲ್ಲಮ್ಮನಿಗೆ ಒಪ್ಪಿಸುವುದು ಪದ್ಧತಿ. ಇದುವೆ ಆನಂತರದ ಕಾಲದಲ್ಲಿ ಆಚರಣೆಯಾಗಿ ಬೆಳೆದು ಬಂದಿದೆ.

ಇದರ ಹೊರತಾಗಿ ಇನ್ನೂ ಹಲವು ಕ್ರಮಗಳನ್ನು ಎಲ್ಲಮ್ಮನ ಪೂಜೆಯಲ್ಲಿ ನೋಡಬಹುದು. ಎಲ್ಲಮ್ಮನ ಪೂಜೆಯಲ್ಲಿ ಮುಟಿಗಿಯನ್ನು ಮಾಡಲಾಗುತ್ತದೆ. ಇದನ್ನು ಸಜ್ಜೆಯ ಹಿಟ್ಟಿನಲ್ಲಿ ಅಲಸಂದೆ ಕಾಳುಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ವಿಶೇಶವೆಂದರೆ ಇದರಲ್ಲಿ ಉಪ್ಪು, ಖಾರ ಯಾವುದನ್ನೂ ಬೆರೆಸುವುದಿಲ್ಲ. ಇದನ್ನು ಬೇಯಿಸುವುದಿಲ್ಲ ಇಲ್ಲವೆ ಸುಡುವುದಿಲ್ಲ. ಇವುಗಳನ್ನು ಕೈಯಲ್ಲೆ ನಾದಿ ತಯಾರಿಸಲಾಗುತ್ತದೆ. ಇದನ್ನು ಪೂಜೆಗೆ ಇಡಲಾಗುತ್ತದೆ.

 

ಇನ್ನು ಈ ಅಂಶಗಳನ್ನು ತುಸು ಹತ್ತಿರದಿಂದ ನೋಡುವ ಪ್ರಯತ್ನ ಮಾಡೋಣ.

ಎಲ್ಲಮ್ಮ ಮೂಲಭೂತವಾಗಿ ಒಂದು ಒಕ್ಕಲುತನದ ದೇವರು. ಒಕ್ಕಲುತನ ಮೊದಲಾದಾಗ ಮಾನವರು ಬೆಳೆಸಿಕೊಂಡ ನಂಬಿಕೆಯೇ ಎಲ್ಲಮ್ಮ. ಇನ್ನುಳಿದ ಪ್ರಾಣಿಗಳಂತೆಯೆ ತಿರುಗಾಡಿಕೊಂಡು, ಬೇಟೆಯಾಡಿಕೊಂಡು ನೀರು-ನೆರಳು ಇರುವಲ್ಲಿ ಹೊತ್ತು ಕಳೆಯುತ್ತಿದ್ದ ಮಾನವ ಪ್ರಾಣಿ ಒಂದೆಡೆ ನಿಂತು, ನಿಂತ ಜಾಗದಲ್ಲಿಯೆ ಅನ್ನವನ್ನು ಕಂಡುಕೊಂಡದ್ದೇ ಒಕ್ಕಲುತನ. ಅದಾಗಲೇ ಮಾನವ ಪ್ರಾಣಿಗೆ ಭಾಷೆ ಮತ್ತು ವಿಚಾರಿಸುವ ಕಸುವು ಬೆಳೆದಿದ್ದವು. ಇವು ಲಕ್ಷದಷ್ಟು ವರುಷಗಳ ಹಿಂದೆಯೆ ಬೆಳೆದಿವೆ. ಹಾಗೆಯೆ, ಭಾವನೆಗಳ ಅಭಿವ್ಯಕ್ತಿಯಲ್ಲಿಯೂ ಇತರ ಪ್ರಾಣಿಗಳಿಗಿಂತ ವ್ಯಾಪಕವಾದ ಬೆಳವಣಿಗೆ ಮಾನವರಲ್ಲಿ ಕಾಣಿಸುತ್ತದೆ. ಈ ಬಗೆಯ ಭಾವನೆಗಳ ಅಭಿವ್ಯಕ್ತಿಯು ಒಂದು ಕಡೆಯಾದರೆ, ಇನ್ನೊಂದೆಡೆ ಮಾನವರಿಗೆ ಮೂಲಭೂತವಾದ ಅಳುಕು, ಹೆದರಿಕೆ. ತನಗೆ ಅರಿಯದ ಪ್ರಕೃತಿಯ ಶಕ್ತಿಗಳ ಬಗೆಗಿನ ಹೆದರಿಕೆಯು ಮಾನವರಲ್ಲಿ ಸಹಜವಾಗಿ ಇದ್ದಿತು. ಇವೆರಡರ ಮಿಳಿತದಲ್ಲಿ ತನಗೆ ಒಂದೆಡೆ ನಿಂತು ತಿನ್ನುವುದಕ್ಕೆ ಅನ್ನವನ್ನು ಕೊಟ್ಟ ಕಸುವನ್ನು ಭಯದಿಂದಲೂ ಭಕ್ತಿಯಿಂದಲೂ ನೆನಪಿಸಿಕೊಂಡಿದ್ದೆ ಮಾನವ ಜಗತ್ತಿನ ಮೊದಲ ದೇವರು. ಅದುವೆ ಎಲ್ಲಮ್ಮ. ಅಂದು ಮೊದಮೊದಲು ಈ ನಂಬಿಕೆ ಬೆಳೆದಾಗ ಇವು ಮಾನವರ ಮನಸ್ಸಿನ ಭಾಗವಾಗಿ ಖಂಡಿತ ಬೆಳೆದಿರಬೇಕು. ಇಂತಹ ಸಮಯದಲ್ಲಿ ಮಾನವರೆದೆಯೊಳಗೆ ಅರಳಿದ ಕುಸುಮವೆ ನಂಬಿಕೆ. ಅದಕ್ಕೆ ಏನೆಂದು ಹೆಸರಿದ್ದಿತು ಎಂಬುದು ತಿಳಿಯದು. ಸಹಜವಾಗಿ ಅಂದು ಇದಕ್ಕೆ ಹೆಸರನ್ನಿಡಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಹೆಸರಿಡುವ ಅವಶ್ಯಕತೆಯು ಮಾನವರ ನಡುವೆ ಬೆಳೆದದ್ದು ಆನಂತರದ ಕಾಲದಲ್ಲಿ. ಹೀಗೆ ಎಲ್ಲಮ್ಮ ಮಾನವರ ನಡುವೆ ಒಂದು ನಂಬಿಕೆಯಾಗಿ ಬೆಳೆಯಿತು. ಅಂದರೆ, ಆ ಕಾಲದಲ್ಲಿ ದೇವರು ಎಂಬ ಪರಿಕಲ್ಪನೆ ಖಂಡಿತ ಇರಲಾರದು. ಹಾಗೆಯೆ, ಮತವೆಂದಾಗಲಿ, ಪಂಥವೆಂದಾಗಲಿ ಯಾವುದೇ ಪರಿಕಲ್ಪನೆ ಅಂದು ಇರಲಾರದು. ಇದಕ್ಕಾಗಿಯೆ ನಾನು ಈ ಬರಹದ ಮೊದಲಲ್ಲಿ ಎಲ್ಲಮ್ಮನನ್ನು ನಂಬಿಕೆ ಎಂದು ಕರೆದದ್ದು. ಎಲ್ಲಮ್ಮ ಒಂದು ನಂಬಿಕೆಯಾಗಿ ಬೆಳೆಯಿತು. ಆನಂತರವೂ ಅದು ನಂಬಿಕೆಯಾಗಿಯೆ ಉಳಿದುಕೊಂಡಿರುವುದನ್ನು ತುಸು ಮುಂದೆ ಮಾತನಾಡಲಾಗುವುದು.

ಒಕ್ಕಲುತನದ ಬೆಳವಣಿಗೆಗೂ ಎಲ್ಲಮ್ಮ ಎಂಬ ನಂಬಿಕೆಯ ಬೆಳವಣಿಗೆಗೂ ಪರಸ್ಪರ ಸಂಬಂಧ ಇದೆ ಎಂಬುದನ್ನು ಮೇಲೆ ಮಾತನಾಡಲಾಯಿತು. ಇದಕ್ಕೆ, ಒಕ್ಕಲುತನ ಮತ್ತು ಎಲ್ಲಮ್ಮ ಇವೆರಡೂ ಒಟ್ಟೊಟ್ಟಿಗೆ ಬೆಳೆದಿವೆ ಎನ್ನುವುದಕ್ಕೆ ಸಿಗಬಹುದಾದ ಆಧಾರಗಳನ್ನು ಸ್ವಲ್ಪ ಗಮನಿಸಬಹುದು.

ಎಲ್ಲಮ್ಮನ ಪೂಜೆಯ ಕ್ರಮ, ಪೂಜೆಗೆ ಬಳಸುವ ವಸ್ತುಗಳು ಇದಕ್ಕೆ ಬಹುಮುಖ್ಯವಾದ ಆಧಾರ. ಸಾಮಾನ್ಯವಾಗಿ ದೇವರಿಗೆ ಎಡೆ ಇಡುವಾಗ ಅಡುಗೆಯನ್ನು ಇಡುವುದು ಸಹಜ. ಆದರೆ, ಎಲ್ಲಮ್ಮನಿಗೆ ಹಸಿ ತರಕಾರಿ ಇಡಬೇಕು ಮತ್ತು ಹಸಿ ಮಾಂಸವನ್ನು ಇಡಬೇಕು. ಮುಟಿಗಿಯನ್ನು ಮಾಡಲಾಗುವುದು ಎಂದು ಮೇಲೆ ಹೇಳಿದೆ. ಈ ಮುಟಿಗಿಯನ್ನು ಕೂಡ ಸುಡುವುದಿಲ್ಲ. ಅಂದರೆ, ಅಡುಗೆಯನ್ನು ಮಾಡುವ ಪದ್ಧತಿ ಬೆಳೆಯುವುದಕ್ಕಿಂತ ಮೊದಲು ಇದು ಬೆಳೆದಿರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಉಪ್ಪಿಲ್ಲದ ಮುಟಿಗಿ ಮಾಡುವುದು ಮತ್ತೂ ಒಂದು ವಿಶೇಷ. ಉಪ್ಪನ್ನು ಸಾಮಾನ್ಯವಾಗಿ ಜಗತ್ತಿನಾದ್ಯಂತ 5-6 ಸಾವಿರ ವರುಷಗಳ ಹಿಂದೆ ಮಾನವರು ಕಂಡುಕೊಂಡರು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ದೇವರು, ಸಾಂಪ್ರದಾಯಿಕ ಆಚರಣೆಗಳು ಹೊಸ ಬೆಳವಣಿಗೆಗಳನ್ನು ಬೇಗನೆ ಒಪ್ಪಿಕೊಳ್ಳುವುದಿಲ್ಲ ಮತ್ತು ಹಳೆಯವನ್ನು ಬಹುಕಾಲ ಉಳಿಸಿಕೊಳ್ಳುತ್ತವೆ. ಹೀಗೆ ಉಪ್ಪಿಲ್ಲದ ಊಟವನ್ನು ಎಲ್ಲಮ್ಮ ಇಂದಿನವರೆಗೂ ಹಾಗೆಯೆ ಉಳಿಸಿಕೊಂಡು ಬಂದಿದೆ. ಸಮಾಜದ ಹಲವಾರು ಕಡೆ ಇಂದಿಗೂ ಒಂದು ದಿನ, ಇಲ್ಲವೆ ವರುಷದ ಇಂತಹ ದಿನ ಉಪ್ಪಿಲ್ಲದ ಊಟವನ್ನೇ ಉಣ್ಣುವ ಪದ್ಧತಿಯು ವಿವಿಧ ಸಮುದಾಯಗಳ ನಡುವೆ ಕಂಡುಬರುತ್ತದೆ. ಇದೆಲ್ಲವೂ ಮಾನವ ಉಪ್ಪನ್ನು ಕಂಡುಕೊಳ್ಳುವ ಮೊದಲೇ ಎಲ್ಲಮ್ಮ ಬೆಳೆದಿದ್ದಿತು ಮತ್ತು ಆನಂತರ ಬೆಳೆದ ಉಪ್ಪನ್ನು ಎಲ್ಲಮ್ಮ ಇನ್ನೂ ಒಪ್ಪದೆ ಹೊರಗೆ ಇಟ್ಟುಕೊಂಡಿದೆ ಎಂಬುದನ್ನು ಹೇಳುತ್ತದೆ.

ಇದರೊಟ್ಟಿಗೆ ಎಲ್ಲಮ್ಮನಿಗೆ ಬೆತ್ತಲೆ ಪೂಜೆ ಮಾಡುವುದನ್ನೂ ಇಲ್ಲಿ ಮಾತಾಡಬೇಕು. ಎಲ್ಲಮ್ಮ ಎಂಬ ನಂಬಿಕೆ ಬೆಳೆದಾಗ ಮಾನವ ಪ್ರಾಣಿ ಬಟ್ಟೆ ಉಡುವುದನ್ನು ಇನ್ನೂ ಕಲಿತಿರಲಿಲ್ಲ. ಹತ್ತಿಯ ತಿಳುವಳಿಕೆ, ಹತ್ತಿಯನ್ನು ಸಂಸ್ಕರಿಸುವ ಕ್ರಮ ಬಹುಹಿಂದೆಯೆ ಬೆಳೆದಿವೆಯಾದರೂ ಮಾನವರು ಸಹಜವಾಗಿ ಬಟ್ಟೆಯನ್ನು ಉಡುವುದನ್ನು ಮೊದಲು ಮಾಡಿದ್ದು ತೀರಾ ಇತ್ತೀಚೆಗೆ. ಕನಗನಹಳ್ಳಿಯಲ್ಲಿ ಸಾಮಾನ್ಯ ಶಕೆ 200 ಕಾಲದ ಅಂದರೆ ಇಂದಿಗೆ ಸುಮಾರು 1800 ವರುಷಗಳ ಹಿಂದಿನ ಶಿಲ್ಪಗಳಲ್ಲಿ ಹೆಂಗಸರು ಬಟ್ಟೆ ಇಲ್ಲದೆ ಚಿತ್ರಿತವಾಗಿರುವುದನ್ನು ನೋಡಬಹುದು. ಆದರೆ ಎಲ್ಲಮ್ಮ ಕಡಿಮೆ ಎಂದರೂ 5-6 ಸಾವಿರ ವರುಷಗಳ ಹಿಂದೆಯೆ ಬೆಳೆದಿರುವ ನಂಬಿಕೆ. ಅಂದರೆ, ಬಟ್ಟೆ ಇಲ್ಲದೆ ಇರುವುದು ಎಲ್ಲಮ್ಮ ಬೆಳೆದ ಕಾಲದ ಸಂಕೇತವಾಗಿ ಇಂದಿಗೂ ಉಳಿದುಕೊಂಡು ಬಂದಿದೆ. ಆನಂತರ ಬಟ್ಟೆ ಉಡುವುದು ಸಾಮಾನ್ಯವಾದ ಮೇಲೆ ಎಲ್ಲಮ್ಮನಿಗೆ ಬಿಡುವಾಗ ಮಾಡುವ ಪೂಜೆಯ ಪ್ರಕ್ರಮಗಳನ್ನು ಬೇವಿನ ಎಲೆಯನ್ನು ಸುತ್ತಿಕೊಂಡು ಮಾಡಲಾಗುವುದು. ಇದಕ್ಕೆ ‘ಉಟಿಗಿ’ ಎಂದು ಕರೆಯಲಾಗುವುದು. ವಾಸ್ತವದಲ್ಲಿ ಈ ಪದ ಹುಟ್ಟುವಾಗಿನ ಬಟ್ಟೆ ಎಂಬ ತಿರುಳನ್ನೇ ಹೊಂದಿದೆ. ಅಂದರೆ, ಹುಟ್ಟುವಾಗ ಇದ್ದ ಬಟ್ಟೆ. ಅಂದರೆ ಬೆತ್ತಲೆ. ಇದೂ ಕೂಡ ಎಲ್ಲಮ್ಮ ಬಹು ಪ್ರಾಚೀನವಾದುದು ಎಂಬುದನ್ನು ಒತ್ತಿ ಹೇಳುತ್ತದೆ. ಆನಂತರ ಮಾನವರಲ್ಲಿ ಬಟ್ಟೆ ಉಡುವುದು ಮೊದಲಾಯಿತು. ಆದರೆ, ಸಹಜವಾಗಿ ಬಟ್ಟೆ ಉಡುವುದು ಮೊದಲಾದಾಗ ಒಂದು ತುಂಡು ಬಟ್ಟೆ ಉಡುವುದು ಬೆಳೆದಿರುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಒಂದು ತುಂಡು ಬಟ್ಟೆಯಲ್ಲಿ ಇರುವವರು ಸಾಮಾನ್ಯವಾಗಿ ಕಾಣಿಸುತ್ತಾರೆ. ಆಗ ಗಂಡು ಹೆಣ್ಣು ಎಂಬ ಸಾಮಾಜಿಕ ಭಿನ್ನತೆ ಇರಲಿಲ್ಲ. ಹಾಗಾಗಿ, ಇತಿಹಾಸದಲ್ಲಿ ಗಂಡಸರೂ ಹೆಂಗಸರೂ ಉಡುವ ಬಟ್ಟೆಗಳಲ್ಲಿ ಭಿನ್ನತೆ ಇರಲಿಲ್ಲ ಮತ್ತು ಇಬ್ಬರೂ ಉಡುವುದು ಸೀರೆ ಎಂಬ ಒಂದು ಹೆಸರನ್ನೆ ಪಡೆದಿದ್ದಿತು. ಹೀಗೆ ತುಂಡು ಬಟ್ಟೆಯನ್ನು ಉಡುವ ಪದ್ಧತಿ ಬೆಳೆದಾಗ ಇದೂ ಕಾಲಕ್ರಮೇಣ ಎಲ್ಲಮ್ಮನ ಪರಂಪರೆಯಲ್ಲಿ ಸೇರಿಕೊಳ್ಳುತ್ತದೆ. ಇದಕ್ಕೆ ದಟ್ಟಿ ಎಂದು ಕರೆಯಲಾಗುತ್ತದೆ. ದಟ್ಟಿ ಎನ್ನುವುದು ಸಣ್ಣದಾದ ಬಟ್ಟೆ. ಇದನ್ನು ಸಣ್ಣದಾದ ಸೀರೆ ಎಂದು ಬೇಕಾದರೂ ಕರೆಯಬಹುದು. ಸಾಮಾನ್ಯ ಇಂದು ಎಲ್ಲಮ್ಮನಿಗೆ ‘ಬಟ್ಟೆ ಮಾಡುವುದು’ ಎಂಬ ಆಚರಣೆ ಇದೆ. ದೇವರಿಗೆ, ನಂಬಿಕೆಗೆ ಬಟ್ಟೆಯನ್ನು ಒಪ್ಪಿಸುವುದು ಈ ಆಚರಣೆ. ಇಂದಿನ ಕಾಲದಲ್ಲಿ ಎಲ್ಲಮ್ಮನನ್ನು ಪೂಜಿಸುವವರು ದೇವರಿಗೆ ಮಾಡಿದ ಬಟ್ಟೆಯನ್ನು ಉಡುತ್ತಾರೆ ಎಂಬ ಕಾರಣಕ್ಕೆ ಸೀರೆಯನ್ನು ಮಾಡುತ್ತಾರೆ. ಆದರೂ ಎಲ್ಲಮ್ಮನ ಪೂಜೆಗೆ ದಟ್ಟಿಯನ್ನು ಮಾಡುವ ಪದ್ಧತಿ ಇನ್ನೂ ಉಳಿದಿದೆ. ಇಂದಿನ ಅಂಗಡಿಗಳಲ್ಲಿ ದಟ್ಟಿಯನ್ನು ಮಾರಾಟಕ್ಕೂ ಇಟ್ಟಿರುತ್ತಾರೆ. ದಟ್ಟಿ ಎನ್ನುವುದು ಮಾನವರು ಬಟ್ಟೆ ಉಡುವುದಕ್ಕೆ ಮೊದಲಾದಾಗ ಬೆಳೆಸಿಕೊಂಡಿರುವುದು ಎಂದು ಹೇಳುವುದಕ್ಕೆ ಯಾವುದೇ ಅನುಮಾನವಿಲ್ಲ. ಇದಕ್ಕೆ, ಕನ್ನಡ ಪದಕೋಶದಲ್ಲಿ ಇನ್ನೊಂದು ಆಧಾರವೂ ದೊರಕುತ್ತದೆ. ಉತ್ತರ ಕರ್ನಾಟಕದ ಹಲವು ಕಡೆ ಹೆಣ್ಣಮಕ್ಕಳು ನಾಲ್ಕು ವರುಷದವರಾದಾಗ ‘ನಾರಿದಟ್ಟಿ’ ಎಂಬ ಕಾರ‌್ಯಕ್ರಮವನ್ನು ಮಾಡುತ್ತಾರೆ. ಹೆಣ್ಣಿಗೆ ಬಟ್ಟೆ ಉಡಿಸುವ ಪದ್ಧತಿ ಶುರು ಮಾಡುವುದಕ್ಕೆಂದು ಈ ಹಬ್ಬವನ್ನು ಯಾವುದೊ ಒಂದು ಕಾಲದಲ್ಲಿ ಮಾನವರು ಬೆಳೆಸಿಕೊಂಡಿರಬೇಕು. ಈ ಹಬ್ಬದ ಬಗೆಗೆ ಇಲ್ಲಿ ಮಾತುಕತೆ ಅವಶ್ಯವಿಲ್ಲ. ಆದರೆ, ನಮಗಿಲ್ಲಿ ಮುಖ್ಯವಾಗುವುದು ‘ದಟ್ಟಿ’ ಎಂಬ ಪದ. ‘ನಾರಿದಟ್ಟಿ’ ಎನ್ನುವ ಪದಪುಂಜದಲ್ಲಿ ‘ದಟ್ಟಿ’ ಎಂಬ ಪದ ಇದೆ ಮತ್ತು ಇದು ಹೆಣ್ಣು ಉಟ್ಟುಕೊಳ್ಳುವುದು ಎಂಬ ಆಚರಣೆಗೆ ಅಂಟಿಕೊಂಡಿದೆ. ಇವೆಲ್ಲವೂ ಎಲ್ಲಮ್ಮ ನಂಬಿಕೆ ಬಹು ಹಳೆಯದು ಎನ್ನುವುದನ್ನು ಎತ್ತಿ ತೋರಿಸುತ್ತವೆ.

 

ಇದಕ್ಕೆ ಪೂರಕವಾಗಿ ಇನ್ನೊಂದು ಅಂಶವನ್ನೂ ಇಲ್ಲಿ ಮಾತಾಡಬಹುದು. ಎಲ್ಲಮ್ಮ ಬಹುಹಳೆಯದು ಎಂಬುದಕ್ಕೆ ಮತ್ತು ಎಲ್ಲಮ್ಮ ಒಕ್ಕಲುತನದ ಜೊತೆಗೆ ನಂಟು ಇಟ್ಟುಕೊಂಡಿರುವಂತಹದ್ದು ಎನ್ನುವುದಕ್ಕೆ ಪೂರಕವಾಗಿ ಈ ವಿಚಾರವನ್ನು ಇಲ್ಲಿ ತರಬಹುದು. ಒಕ್ಕಲುತನದಲ್ಲಿ ಹಿಂಗಾರಿ ಬೆಳೆಯು ಬೆಳೆದು ನಿಂತ ಕಾಲದಲ್ಲಿ, ಎಳ್ಳ ಅಮಾವಾಸ್ಯೆಯ ದಿನ ಹೊಲಕ್ಕೆ ಚರಗ ಇಲ್ಲವೆ ಸರಗ ಚೆಲ್ಲುವ ಒಕ್ಕಲುತನದ ಹಬ್ಬವೊಂದು ನಡೆಯುತ್ತದೆ. ಈ ಹಬ್ಬದಲ್ಲಿ ನೆಲದಾಯಿಗೆ, ಅಂದರೆ ಒಕ್ಕಲುದೇವಿಗೆ ಪೂಜೆ ಮಾಡಲು ಬಳಸುವ ವಸ್ತು ಮತ್ತು ಕ್ರಮಗಳು ಎಲ್ಲಮ್ಮನ ಪೂಜೆಗೆ ಬಳಸುವ ವಸ್ತು ಮತ್ತು ಕ್ರಮಗಳಲ್ಲಿ ಸಮಾನತೆಯನ್ನು ನೋಡಬಹುದು. ಇದು ಒಕ್ಕಲುತನದ ಬೆಳವಣಿಗೆಯೂ ಎಲ್ಲಮ್ಮನ ಬೆಳವಣಿಗೆಯೂ ಒಟ್ಟೊಟ್ಟಿಗೆ ಬಂದಿರಬಹುದು ಎಂಬುದನ್ನು ತೋರಿಸುವುದಕ್ಕೆ ಬಹುಮುಖ್ಯವಾದ ಆಧಾರ ಆಗುತ್ತದೆ.

ಹಾಗಾದರೆ, ಎಲ್ಲಮ್ಮ ಕಡಿಮೆ ಎಂದರೂ 5-6 ಸಾವಿರ ವರುಷಗಳ ಹಳೆಯ ನಂಬಿಕೆಯಾಗುತ್ತದೆ. ಇನ್ನು, ಎಲ್ಲಮ್ಮನ ಬೆಳವಣಿಗೆಯನ್ನು ತುಸುವಾಗಿ ನೋಡುವ ಪ್ರಯತ್ನ ಮಾಡಬಹುದು.

ಒಕ್ಕಲುತನ ಬೆಳೆಯುತ್ತಿದ್ದಂತೆ ದಕ್ಕನದಲ್ಲಿ ಬೇಕಾದಷ್ಟ್ಟು ನಾಗರಿಕತೆಯ ಮತ್ತು ಸಂಸ್ಕೃತಿಯ ಬೆಳವಣಿಗೆ ಆಗಿವೆ. ಇದಕ್ಕೆ ಪುರಾತತ್ವ ಅಧ್ಯಯನಗಳು ಹೆಚ್ಚಿನ ಆಧಾರಗಳನ್ನು ತೋರಿಸಿವೆ. ಇವುಗಳ ಬೆಳವಣಿಗೆಯಲ್ಲಿ ಎಲ್ಲಮ್ಮ ಕೂಡ ಬೆಳೆಯುತ್ತ ಬಂದಿದೆ. ಒಕ್ಕಲುನತದ ಜೊತೆಜೊತೆಗೆ ಎಲ್ಲಮ್ಮ ಬೆಳೆದಿರುವುದನ್ನು ಮೇಲೆ ಹೇಳಲಾಯಿತು. ಆದರೆ, ಎಲ್ಲಮ್ಮ ಮಾತ್ರವೆ ಬೆಳೆದಿದೆ ಎಂದು ತಿಳಿದುಕೊಳ್ಳಬೇಕಿಲ್ಲ. ಬದಲಿಗೆ ಹಲವಾರು ಇಂತಹ ನಂಬಿಕೆಗಳು ಬೆಳೆದಿರಲೂ ಸಾಕು. ಕಾಲಕ್ರಮೇಣ ಬಗೆಬಗೆಯ ಬೆಳವಣಿಗೆಗಳ ನಡುವೆ ಎಲ್ಲಮ್ಮ ಕೂಡ ಸಾಮಾಜಿಕ ಬೆಳವಣಿಗೆಗಳ ಜೊತೆಗೆ ಅಂಟಿಕೊಂಡು ಬೆಳೆಯಬೇಕಾಗುತ್ತದೆ. ಈ ಮೇಲೆ ಹೇಳಿ ಬಟ್ಟೆ ಉಡುವುದು ಅಂತಹದೊಂದು ಸಾಮಾಜಿಕ ಬೆಳವಣಿಗೆ. ಈ ಬೆಳವಣಿಗೆಯ ಜೊತೆಗೆ ಎಲ್ಲಮ್ಮ ಕೂಡ ಬೆಳೆದು ಬಂದಿರುವುದನ್ನು ನೋಡಬಹುದು. ಹಾಗೆಯೆ ಇನ್ನಿತರ ರಚನೆಗಳ ಜೊತೆಯಲ್ಲಿಯೂ ಎಲ್ಲಮ್ಮ ಬೆಳೆದಿದೆ.

ಸಾಮಾನ್ಯ ಶಕೆಗಿಂತ ಮೊದಲು ಉತ್ತರದಿಂದ ವಿಪರೀತ ಪಂಥಗಳು ದಕ್ಕನದ ಕಡೆಗೆ ಹರಿದು ಬರುವುದನ್ನು ಇತಿಹಾಸಕಾರರು ಬಗೆಬಗೆಯ ಹಿನ್ನೆಲೆಯಲ್ಲಿ ನೋಡಿ ಬರೆದಿದ್ದಾರೆ. ಈ ಪಂಥಗಳು ರಾಜ್ಯ ರಚನೆಯ ಜೊತೆಗೆ ಬರುವುದಕ್ಕೆ ಮೊದಲು ಮಾಡಿದ ನಂತರದಿಂದ ತೀವ್ರ ಬದಲಾವಣೆಯನ್ನು ಉಂಟುಮಾಡಿರಬೇಕು. ಸಹಜವಾಗಿ ಮೊದಲಿನಿಂದಲೂ ಈ ನೆಲಕ್ಕೆ ಹರಿದು ಬಂದ ಪಂಥಗಳು, ದೇವರುಗಳು ಈ ನೆಲದ ನಂಬಿಕೆಗಳ ಜೊತೆಗೆ ಅನುಸಂಧಾನ ಮಾಡಿಕೊಂಡಿರಬೇಕು, ಹೊಡೆದಾಟ ಮಾಡಿಕೊಂಡಿರಬೇಕು, ಪರಸ್ಪರ ಅರಿತುಕೊಂಡಿರಬೇಕು, ಹಂಚಿಕೊಂಡಿರಬೇಕು. ಈ ಎಲ್ಲ ಬೆಳವಣಿಗೆಗಳೂ ಕಾಲಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಹೀಗೆ ಬಗೆಬಗೆಯಾಗಿ ಬೆಳೆದು ಬಂದಿರಬೇಕು. ಆದರೆ, ರಾಜ್ಯರಚನೆಯು ಉತ್ತರದಿಂದ ಶಾತವಾಹನರ ಕಾಲಕ್ಕೆ ಬಂದ ನಂತರದಿಂದ ಈ ದೇವರುಗಳು, ಪಂಥಗಳು ರಾಜ್ಯದ ಜೊತೆಗೆ ಬರತೊಡಗಿದವು. ಈ ಮೊದಲಿನ ಸಹಜ ಬರುವಿಕೆಗಿಂತ ರಾಜ್ಯದ ಜೊತೆಗಿನ ನಂಟಿನೊಂದಿಗೆ ಬರುವಿಕೆ ಹೆಚ್ಚು ತೀವ್ರವಾಗಿರಲು ಸಾಧ್ಯ. ಸಮಾಜದ ಕೆನೆಪದರವು, ಅಂದರೆ ಸಮಾಜದ ಮೇಲುವರ್ಗವು ರಾಜ್ಯದ ಮತ್ತು ರಾಜರ ಮತಪಂಥಗಳ ಕಡೆಗೆ ತೀವ್ರವಾಗಿ ತಿರುಗುವುದಕ್ಕೆ ಮೊದಲಾಗುತ್ತವೆ. ಹೀಗೆ ಉತ್ತರದ ಪಂಥಗಳು ದೇಸಿಯಾಗಿಬಿಡುತ್ತವೆ, ನೆಲದೊಳಗೆ ಬೇರು ಬಿಡುತ್ತವೆ. ಇನ್ನು ಆನಂತರದ ಇವುಗಳ ನಡುವಿನ ಎದುರಾಗುವಿಕೆ, ಪೋಟಿ ಎಲ್ಲವೂ ವಿಭಿನ್ನವಾಗಿ ಬೆಳೆಯುತ್ತವೆ. ಎಲ್ಲಮ್ಮ ಎಂಬ ನಂಬಿಕೆ ಮತ್ತು ಉತ್ತರದಿಂದ ಬಂದ ಮತಪಂಥಗಳು ಪರಸ್ಪರ ಅರಿತುಕೊಳ್ಳುವ, ಹಂಚಿಕೊಳ್ಳುವ ದಾರಿಯನ್ನೂ ಹೊಡೆದಾಡಿಕೊಳ್ಳುವ, ಬೇರೆಯಾಗಿ ಕಟ್ಟಿಕೊಳ್ಳುವ ದಾರಿಯನ್ನೂ ಒಟ್ಟೊಟ್ಟಿಗೆ ಬೆಳೆಸಿಕೊಂಡವು. ಮೊದಲ ದಾರಿ ಹೆಚ್ಚಾಗಿ ತಳವರ್ಗದಲ್ಲಿ ಕಂಡುಬಂದರೆ ಎರಡನೇ ಆಯ್ಕೆ ಸಹಜವಾಗಿ ಹೆಚ್ಚಾಗಿ ಮೇಲುವರ್ಗಗಳಲ್ಲಿ ಕಂಡುಬರುತ್ತದೆ ಎಂದು ಅಂದಾಜಾಗಿ ಹೇಳಬಹುದು. ಇದನ್ನು ಇಂದಿನ ಆಧುನಿಕ ಸಂಶೋಧನೆಗಳು ಬೇರೆ ರೀತಿಯಲ್ಲಿ ಸ್ಪಷ್ಟವಾಗಿ ತೋರಿಸಿಕೊಡುತ್ತವೆ.

ಹೀಗೆ ಎಲ್ಲಮ್ಮ ಇತರ ಪಂಥಗಳ ಜೊತೆಗೆ ಜೊತೆಜೊತೆಯಾಗಿ ನಡೆಯುವ ಸಾಮಾಜಿಕ ಅವಶ್ಯಕತೆಯ, ಅನಿವಾರ್ಯತೆಯ ಕಡೆಗೆ ಬರುತ್ತದೆ. ಈ ದಾರಿಯಲ್ಲಿ ಎಲ್ಲಮ್ಮ ಸಾಕಷ್ಟನ್ನು ಇತರ ಪಂಥಗಳಿಂದ ಪಡೆದುಕೊಳ್ಳುತ್ತದೆ, ಹಾಗೆಯೆ ಕೊಡುತ್ತದೆ. ಈ ಕೊಡುತೆಗೆದುಕೊಳ್ಳುವ ಪ್ರಕ್ರಿಯೆ ಕೂಡಿ ಬದುಕುವ ಯಾವುದೇ ಎರಡು ಘಟಕಗಳಲ್ಲಿ ಅತ್ಯಂತ ಸಾಮಾನ್ಯ. ಅತಿ ಹಿಂದೆಯೆ ದಕ್ಕನಕ್ಕೆ ಬಂದಿರಬಹುದಾದ ಶಿವ ಇಲ್ಲಿಗೆ ಬಂದು ಇಬ್ಬರು ಹೆಂಡಿರನ್ನು ಕಟ್ಟಿಕೊಳ್ಳುತ್ತಾನೆ ಮತ್ತು ಇಬ್ಬರು ಹೆಣ್ಣುಮಕ್ಕಳ ತಂದೆಯೂ ಆಗುತ್ತಾನೆ. ಉತ್ತರದಲ್ಲಿ ಶಿವನಿಗೆ ಇಲ್ಲದ ಗಂಗೆ ದಕ್ಕನದಲ್ಲಿ, ಆನಂತರ ದಕ್ಷಿಣದಲ್ಲಿ ಜೊತೆಯಾಗುತ್ತಾಳೆ. ಬುದ್ಧ ಮತ್ತು ಜಿನ ಮತಗಳು ಬಂದಾಗಲೂ ಎಲ್ಲಮ್ಮ ಅತಿಯಾದ ಪ್ರಭಾವವನ್ನು ಬೀರುತ್ತಾಳೆ. ಸಂಗದೊಳಗೆ ಹೆಂಗಸಿಗೆ ಪ್ರವೇಶವನ್ನು ಬುದ್ಧನು ನಿರಾಕರಿಸಿದ್ದನು. ಸಂಗದಲ್ಲಿ ಹೆಂಗಸಿಗೆ ಪ್ರವೇಶ ಕೊಡಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಬುದ್ಧನಿಗೆ ಒದಗಿ ಬರುವುದು ದಕ್ಕನದ ಹೆಣ್ಣುನಂಬಿಕೆ ಜೊತೆಗಿನ ಅನುಸಂಧಾನದಲ್ಲಿ. ಹೀಗಾಗಿಯೆ ಉತ್ತರದಲ್ಲಿ ಬುದ್ಧ ಮತದಲ್ಲಿ ದೊಡ್ಡ ಹೆಣ್ಣು ಸಾಧಕಿಯರು ಕಾಣಿಸುವುದಿಲ್ಲ. ಆದರೆ, ದಕ್ಷಿಣದಲ್ಲಿ ತಾರಾ, ಚಾಯಾ, ಮಂಗಳಾ ಮೊದಲಾದ ಹಲವಾರು ಮಹಿಳಾ ಬುದ್ಧ ಸಾಧಕಿಯರು ಸಿಗುತ್ತಾರೆ. ಜಿನಮತದಲ್ಲಿಯೂ ಇಂತಹದೇ ಬೆಳವಣಿಗೆ ಕಾಣುತ್ತದೆ. ಉತ್ತರದಲ್ಲಿ ಜಿನಮತದಲ್ಲಿಯೂ ದೊಡ್ಡ ಸಾಧಕಿಯರು ಕಾಣಿಸುವುದಿಲ್ಲ. ಆದರೆ, ದಕ್ಷಿಣದಲ್ಲಿ ಜ್ವಾಲಾಮಾಲಿನಿ, ಪದ್ಮಾವತಿ, ತಮಿಳು, ಕೂಶ್ಮಾಂಡಿನಿ ಮೊದಲಾದವರು ಇಲ್ಲಿ ಬೆಳೆಯುತ್ತಾರೆ. ವೈದಿಕ ಮತವು ಈ ನೆಲಕ್ಕೆ ಬಂದಾಗ ಆದ ಮಹತ್ವದ ಘಟನೆಯೊಂದು ಪರಶುರಾಮ ಎಲ್ಲಮ್ಮನ ತಲೆಯನ್ನು ಕಡಿಯುವುದು. ಇದು, ದಕ್ಷಿಣದ ಹೆಣ್ಣುಸಂಸ್ಕೃತಿ ಮತ್ತು ಉತ್ತರದ ಗಂಡು ಸಂಸ್ಕೃತಿ ಇವೆರಡರ ನಡುವೆ ನಡೆಯುವ ಒಂದು ಮಹತ್ವದ ಹೋರಾಟ. ಕತೆಯ ಪ್ರಕಾರ ಈ ಜಗಳದಲ್ಲಿ ಗಂಡುಸಂಸ್ಕೃತಿಯ ಪರಶುರಾಮ ಹೆಣ್ಣುಸಂಸ್ಕೃತಿಯ ಎಲ್ಲಮ್ಮನನ್ನು ಕೊಲ್ಲುತ್ತಾನೆ. ಆದರೆ, ಗೆದ್ದು ದಕ್ಕಿಸಿಕೊಳ್ಳುವ ಕಸುವು ಇಲ್ಲದೆ ಕುಸಿಯುತ್ತಾನೆ. ಕೊನೆಗೆ ಸೀರೆ ಉಟ್ಟು ಚವುಡಿಕೆ ಹಿಡಿದು ಎಲ್ಲಮ್ಮನನ್ನು ತಾಯಿ ಎಂದು ಒಪ್ಪಿಕೊಂಡು ಹಾಡುತ್ತಾನೆ. ಸವದತ್ತಿಯಲ್ಲಿ ನಡೆದಿರಬಹುದಾದ ಈ ಮಹತ್ವದ ಘಟನೆಯ ಸಂಕೇತವಾಗಿ ಅದರೊಟ್ಟಿಗೆ ಇನ್ನೂ ಹಲವು ಜಗಳಗಳ ಕೇಂದ್ರವಾಗಿರುವ ಸವದತ್ತಿಯಲ್ಲಿ ಎಲ್ಲಮ್ಮನ ಗುಡಿ ಇದೆ. ಇಲ್ಲಿ ವೈದಿಕ, ಜಿನ, ಇಸ್ಲಾಮ್, ಶೈವ, ಹೀಗೆ ಹಲವಾರು ಮತಗಳ ದೇವರುಗಳು ನೆಲೆ ನಿಂತರೂ ಎಲ್ಲವಕ್ಕೂ ಎಲ್ಲಮ್ಮ ಕೇಂದ್ರವಾಗಿ ನಿಂತಿರುವುದು ಹೆಣ್ಣಿನ ಮಹತ್ವವನ್ನು, ಶಕ್ತಿಯನ್ನು ತೋರಿಸುತ್ತದೆ. ಇದನ್ನು ಇಸ್ಲಾಂ ಮತದಲ್ಲಿಯೂ ಕಾಣಬಹುದು. ಇಸ್ಲಾಮಿನಲ್ಲಿಯಾಗಲಿ, ಸೂಫಿಯಲ್ಲಾಗಲಿ ಹೆಂಗಸಿಗೆ ಅಷ್ಟೇನೂ ಮಹತ್ವವಿಲ್ಲ. ಆದರೆ, ದಕ್ಕನದಲ್ಲಿ ಹಲವು ಮಹಿಳಾ ಸಾಧಕಿಯರು, ಸೂಫಿಗಳು ಆಗಿ ಹೋಗುತ್ತಾರೆ. ಮಕ್ಕಾದ ಕಾಳಗದಲ್ಲಿ ಹುತಾತ್ಮರಾಗುವ ಹಸನ್-ಹುಸೇನ್ ಅವರ ತಾಯಿ ಫಾತಿಮಾಗೂ ಇಲ್ಲಿ ದರ್ಗಾ ಇದೆ ಮತ್ತು ಉರೂಸ್ ನಡೆಯುತ್ತದೆ. ಹಾಗೆಯೆ, ಕ್ರೈಸ್ತಮತದಲ್ಲಿಯೂ ಎಲ್ಲಮ್ಮನಿಗೆ ನಡೆಯುವಂತೆಯೆ ಪೂಜೆ ಮೊದಲಾದವು ಮೇರಿಯಮ್ಮನಿಗೂ ನಡೆಯುತ್ತವೆ. ಹೀಗೆ ಈ ನೆಲದ ಹೆಣ್ಣು ಇಂದಿನವರೆಗೂ ಮಿಂಚಿನ ಸೆಳೆತದಂತೆ ನೀರಜೀವದಂತೆ ಸಾಮಾನ್ಯರ ನಡುವೆ ಹರಿದಾಡುತ್ತಲೇ ಇದೆ ಮತ್ತು ತನ್ನ ಶಕ್ತಿಯನ್ನು ತೋರುತ್ತಲೇ ಇದೆ. ಎಲ್ಲಮ್ಮ ಪೊರೆವ ತಾಯಿಯಾಗಿ ತರಿವ ಶಕ್ತಿಯಾಗಿ ಚಿತ್ರಣಕ್ಕೆ ಒಳಗಾಗುವುದು ಹುಟ್ಟಿಸುವ ಮತ್ತು ಸಾಯಿಸುವ ಪ್ರಕೃತಿಯ ಎರಡು ಆತ್ಯಂತಿಕ ಶಕ್ತಿಗಳ ಪ್ರತೀಕವಾಗಿಯೆ.

ಎಲ್ಲಮ್ಮ ತಳವರ್ಗಗಳಲ್ಲಿ, ಕೆಳಜಾತಿಗಳು ಎಂದು ಕರೆಯುವ ಸಮುದಾಯಗಳಲ್ಲಿ ಕಂಡುಬರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆ ಇಲ್ಲವೆ ನಂಬಿಕೆ. ಆಧುನಿಕ ವಿದ್ವತ್ತಿನಲ್ಲಿ, ಎಲ್ಲಮ್ಮ ಒಳಗೊಂಡು ಹಲವಾರು ಸಮಾಜದ ತಳವರ್ಗಗಳಲ್ಲಿ ಕಂಡುಬರುವ ಅಂತೆಯೆ ಕೆಳಜಾತಿ ಎಂದು ಕರೆಯುವ ಸಮುದಾಯಗಳಲ್ಲಿ ಕಂಡುಬರುವ ದೇವರುಗಳು ಇನ್ನೂ ಅಧ್ಯಯನದ ಹೊರಗೆ ಇವೆ. ಎಲ್ಲಮ್ಮ, ಭಾರತೀಯ ಸಮಾಜದ ಮೇಲ್ಕೀಳಿನ ರಚನೆಯಲ್ಲಿ ತಳವರ್ಗಗಳಲ್ಲಿ, ಕೆಳಜಾತಿಗಳು ಎಂದು ಕರೆಯುವ ಸಮುದಾಯಗಳಲ್ಲಿ ಹೆಚ್ಚು ಕಾಣಿಸುತ್ತದೆಯಾದರೂ ಗಮನಿಸಬೇಕಾದ ಮಹತ್ವದ ಅಂಶವೆಂದರೆ ಎಲ್ಲಮ್ಮ ಇಂದಿನ ಸಮಾಜದ ಜಾತಿಗಳಾಚೆ, ಮತಪಂಥಗಳಾಚೆ, ‘ಧರ್ಮ’ಗಳಾಚೆ ವ್ಯಾಪಿಸಿಕೊಂಡಿದೆ. ಇದೊಂದು ಕುತೂಹಲದ ವಿಚಾರವೆನಿಸಬಹುದು. ಎಲ್ಲಮ್ಮ ತಳವರ್ಗ ಮತ್ತು ಕೆಳಜಾತಿಗಳಲ್ಲಿ ಮಾತ್ರವಲ್ಲದೆ ಮೇಲುವರ್ಗ ಮತ್ತು ಮೇಲುಜಾತಿಗಳಲ್ಲಿಯೂ ಪೂಜೆಗೆ ಒಳಗಾಗುತ್ತದೆ. ಇದು ಒಂದು ವಿಶಿಷ್ಟವಾದ ಲಕ್ಷಣ. ಇನ್ನೂ ಮುಂದುವರಿದು ಆಧುನಿಕ ಕಾಲದ ಬೇರೆ ಬೇರೆ ಧರ್ಮಗಳೆಂದು ಕರೆಸಿಕೊಳ್ಳುವ ಶೈವ, ವೈಷ್ಣ್ಣವ, ಇಸ್ಲಾಮ್, ಕ್ರಿಶ್ಚಿಯನ್ ಮೊದಲಾದ ಪಂಥಗಳನ್ನು ನಂಬಿಕೊಂಡಿರುವವರಲ್ಲಿಯೂ ಎಲ್ಲಮ್ಮ ಪೂಜೆಗೆ ಒಳಗಾಗುತ್ತಿರುವುದು ಮುಖ್ಯವಾದ ವಿಚಾರ. ಎಲ್ಲಮ್ಮನನ್ನು ಪೂಜಿಸುವ ಹಲವು ಬಗೆಗಳಿವೆ. ಹಾಗಾಗಿ, ಈ ಎಲ್ಲ ವರ್ಗ, ಜಾತಿ, ಮತ, ಧರ್ಮಗಳವರು ಒಂದೆಡೆ ಒಂದು ಜಾಗ ಇಲ್ಲವೆ ಸಮಯದಲ್ಲಿ ಪೂಜಿಸುವ ಮತ್ತು ಒಂದು ರೀತಿಯಲ್ಲಿ ಪೂಜಿಸುವ ವಿಧಾನ ಇಲ್ಲ. ಹಾಗಾಗಿ ಇತರ ದೇವರುಗಳ ಹಾಗೆ, ಇತರ ಮತಪಂಥಗಳ ಹಾಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ ಆಧುನಿಕ ಅಧ್ಯಯನಗಳ ಅವಗಣನೆಯಿಂದ ಈ ವಿಚಾರಗಳು ವಿದ್ವತ್‌ವಲಯಕ್ಕೆ ಹೆಚ್ಚು ತಿಳಿದಿಲ್ಲ. ಹೀಗೆ ವಿವಿಧ ಜಾತಿ, ಮತ-ಪಂಥಗಳವರ ನಡುವೆ ಎಲ್ಲಮ್ಮ ನೆಲೆಸಿರುವುದಕ್ಕೆ ಇರಬಹುದಾದ ಕಾರಣಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು.

ಇಂದು ನಾವು ಗುರುತಿಸುವ ಜಾತಿ, ಮತ ಮತ್ತು ಧರ್ಮ ಇವುಗಳ ಗಡಿಗಳ ಆಚೆಗೆ ಎಲ್ಲಮ್ಮ ನಿಂತು ಎಲ್ಲರಿಂದಲೂ ಪೂಜೆಗೆ ಒಳಗಾಗುವುದಕ್ಕೆ ಕಾರಣವೇ ಎಲ್ಲಮ್ಮ ಬಹು ಹಳೆಯದಾಗಿರುವುದು. ಎಲ್ಲಮ್ಮ ಎಂಬ ನಂಬಿಕೆ ಹುಟ್ಟಿದಾಗ, ಒಂದು ಹಂತದವರೆಗೆ ಬೆಳೆದಾಗ ಯಾವುದೆ ಜಾತಿ, ಮತ-ಪಂಥ, ಧರ್ಮಗಳು ಇರಲಿಲ್ಲ. ಹೊಟ್ಟೆಯ ಅನ್ನದ ಪ್ರಶ್ನೆಯೆ ಮುಖ್ಯವಾದುದಾಗಿತ್ತು. ಆನಂತರದ ಸಾಮಾಜಿಕ ಬೆಳವಣಿಗೆಗಳಲ್ಲಿ ಹಲವಾರು ನಿರಿಗೆಗಳು ಬೆಳೆದಂತೆ ಮಾನವರು ವಿವಿಧ ಕಸುಬಿನವರಾಗಿ ಒಡೆದುಕೊಂಡರು. ಕ್ರಮೇಣ, ಮತಪಂಥಗಳಾಗಿ, ಜಾತಿಯಾಗಿಯೂ ಒಡೆದುಕೊಂಡರು. ಅದರಂತೆಯೆ ‘ಧರ್ಮ‘ವಾಗಿ ಒಡೆದುಕೊಂಡರು. ಆದರೆ, ಎಲ್ಲಮ್ಮ ಸಮಾಜದ ಈ ಎಲ್ಲ ಒಡೆದುಕೊಂಡ ತೊರೆಗಳಲ್ಲಿಯೂ ಪ್ರವಹಿಸುತ್ತಲೆ ಬಂದಿತು. ಹೀಗೆ ಎಲ್ಲಮ್ಮ ಸಮಾಜದ ಎಲ್ಲ ಕಡೆ ಕಾಣಿಸುತ್ತಿದೆ.

ಎಲ್ಲಮ್ಮ ಸಮಾಜವನ್ನು ಒಂದು ಮಾಡುವ ಬಹುದೊಡ್ಡ ಕಸುವು. ಒಂದು ಜಾತಿಗೆ, ಮತಕ್ಕೆ, ಧರ್ಮಕ್ಕೆ ಅಂಟಿಕೊಳ್ಳುವ ದೇವರುಗಳಿಗೆ ವಿರುದ್ಧವಾಗಿ ಎಲ್ಲಮ್ಮ ಈ ಎಲ್ಲ ರಚನೆಗಳಲ್ಲಿ ಹರಿದಾಡುವ ಮಿಡಿತವಾಗಿದೆ.

ಇಲ್ಲಿ, ಒಂದು ಪ್ರಶ್ನೆ ಬರಬಹುದು. ಸಮಾಜದ ಎಲ್ಲ ವಲಯಗಳಲ್ಲಿ, ಸಮುದಾಯಗಳಲ್ಲಿ ಪೂಜೆಗೆ ಒಳಗಾಗುವ ಎಲ್ಲಮ್ಮನ ಅಧ್ಯಯನಗಳು ಯಾಕೆ ಇಲ್ಲ ‘ಶೈವ, ವೈದಿಕ, ಜಿನ, ಇಸ್ಲಾಮ್ ಈ ಮತಗಳಂತೆ ದೊಡ್ಡ ಪ್ರಮಾಣದ ಕಾಣುವಿಕೆ (ವಿಸಿಬಿಲಿಟಿ) ಎಲ್ಲಮ್ಮನಿಗೆ ಯಾಕೆ ಇಲ್ಲ ‘ಈ ಮೊದಲಾದ ಪ್ರಶ್ನೆಗಳು ಎದುರಾಗುತ್ತವೆ. ಈಗ ಎಲ್ಲಮ್ಮನನ್ನು ಇಲ್ಲಿ ಯಾಕೆ ನಂಬಿಕೆ ಎಂದು ಕರೆಯಲಾಗುತ್ತಿದೆ ಎನ್ನುವ ಪ್ರಶ್ನೆಯ ಕಡೆಗೆ ಬರುತ್ತಿದ್ದೇವೆ. ಎಲ್ಲಮ್ಮ ಬಲು ಜಿಗುಟುತನದ್ದು. ಎಲ್ಲಮ್ಮ ಸಾಹಿತ್ಯವನ್ನು ನೋಡಿದಾಗ ಈ ಜಿಗುಟುತನ ಕಣ್ಣಿಗೆ ಹೊಡೆಯುವಂತೆ ಕಾಣುತ್ತದೆ. ಎಲ್ಲಮ್ಮ ನಿರಂತರವಾಗಿ ರಚನೆಯ ವಿರೋಧಿ. ರಚನೆಯನ್ನು ಒಪ್ಪಿಕೊಂಡು ದಕ್ಕನಕ್ಕೆ ಬಂದ ಬೇರೆ ಬೇರೆ ಮತಗಳ ಜೊತೆ ನಿರಂತರ ಅನುಸಂಧಾನವನ್ನು ಮಾಡಿಕೊಂಡಾಗಲೂ ಎಲ್ಲಮ್ಮ ರಚನೆಯನ್ನು ಜಾಗೃತವಾಗಿ ತಿರಸ್ಕರಿಸುತ್ತಲೇ ಬಂದಿತು. ರಚನೆ ಎಂದರೆ ಶಿಲ್ಪದ ರಚನೆ ಮತ್ತು ಬರಹದ ರಚನೆ. ಈ ಎರಡೂ ರಚನೆಗಳನ್ನು ಎಲ್ಲಮ್ಮ ಒಪ್ಪಲಿಲ್ಲ ಮತ್ತು ತಿರಸ್ಕರಿಸಿತು. ಹೀಗಾಗಿಯೆ ಎಲ್ಲಮ್ಮನಿಗೆ ಗುಡಿ ಇಲ್ಲ ಮತ್ತು ಗುಡಿ ಬೇಡ ಎಂದು ಎಲ್ಲಮ್ಮ ಹೇಳುತ್ತದೆ. ಸವದತ್ತಿ ಮೊದಲಾದ ಕೇಂದ್ರಗಳಲ್ಲಿ ಇತಿಹಾಸಿಕ ಆಕಸ್ಮಿಕಗಳಲ್ಲಿ, ಎಂತಹದೊ ಬೆಳವಣಿಗೆಗಳಲ್ಲಿ ಎಲ್ಲಮ್ಮ ಗುಡಿಯನ್ನು ಕಟ್ಟಿಕೊಂಡಿದೆ. ಆದರೆ, ವಾಸ್ತವದಲ್ಲಿ ಎಲ್ಲಮ್ಮ ಬಹುತೇಕ ಗುಡಿಯನ್ನು ಕಟ್ಟಿಕೊಂಡಿಲ್ಲ. ಆದ್ದರಿಂದಲೇ ಎಲ್ಲಮ್ಮ ಇಂದಿಗೂ ಗುಡ್ಡದಲ್ಲಿ ಕಲ್ಲೊಂದಕ್ಕೆ ಒಡಮೂಡಿ ಬರುತ್ತದೆ. ಕಲ್ಲೊಂದಕ್ಕೆ ನೀರು ಚಿಮುಕಿಸಿದರೆ ಎಲ್ಲಮ್ಮ ಅಲ್ಲಿಯೆ ಅವತರಿಸಿಬಿಡುತ್ತದೆ. ಇದಕ್ಕೆ ಒಂದು ರಚನೆ ಇಲ್ಲ, ರೂಪ ಇಲ್ಲ, ಆಕಾರ ಇಲ್ಲ. ಯಾವುದೇ ರಚನೆಯ, ಎಂತಹದೆ ರೂಪದ, ಎಂತಹದೊ ಆಕಾರದ ಕಲ್ಲೂ ಎಲ್ಲಮ್ಮ ಆಗುತ್ತದೆ. ಇನ್ನು ಬರಹದ ರಚನೆಯನ್ನು ನೋಡಬಹುದು. ಎಲ್ಲಮ್ಮನಿಗೆ ಜನಪದದಲ್ಲಿ ಸಾಕಷ್ಟು ಹಾಡುಗಳು ಇವೆ. ಆದರೆ, ಜನಪದದ ಗುಣವೆ ರಚನೆಯನ್ನು ನಿರಂತರ ಮುರಿಯುವುದು. ಶಿಷ್ಟ ಬರವಣಿಗೆಯಂತೆ ವಿವಿಧ ಪ್ರತಿಷ್ಠಾಪಿತ ಮತಪಂಥಗಳ ದೇವರುಗಳ ಹಾಗೆ ಎಲ್ಲಮ್ಮನಿಗೆ ಪುರಾಣಗಳು, ಕಾವ್ಯಗಳು ಇಲ್ಲ. ಎಲ್ಲಮ್ಮನ ಕತೆಯನ್ನು ಭಿನ್ನವಿಭಿನ್ನವಾಗಿ ನಿರಂತರ ಕಟ್ಟಿಕೊಳ್ಳುವ ಮತ್ತು ಮುರಿಯುವ ರಚನಾರಹಿತ ನೆಲೆಯನ್ನೇ ಎಲ್ಲಮ್ಮ ಒಪ್ಪಿಕೊಳ್ಳುವುದು. ಎಲ್ಲಮ್ಮನ ತಲೆಯನ್ನು ಕಡಿದ ಪರಶುರಾಮನ ಕತೆಯನ್ನು ಕಟ್ಟಿಕೊಳ್ಳುವುದರ ಜೊತೆಗೆ ಪರಶುರಾಮ ಎಲ್ಲಮ್ಮನಿಗೆ ಸೋತು ಸೀರೆ ಉಟ್ಟು ಮಗನಾದ ಕತೆಯನ್ನೂ ಕಟ್ಟಿಕೊಳ್ಳುತ್ತದೆ. ಎಲ್ಲಮ್ಮನಿಗೆ ಮದುವೆ ಇಲ್ಲ, ಗಂಡನಿಲ್ಲ ಎಂಬುದನ್ನೂ ಕಟ್ಟಿಕೊಳ್ಳುವುದರ ಜೊತೆಗೆ ಎಲ್ಲಮ್ಮನ ಗಂಡನನ್ನೂ ಕಟ್ಟಿಕೊಳ್ಳುತ್ತದೆ. ಇನ್ನೂ ಮುಂದುವರಿದು ಪರಶುರಾಮ ತನ್ನ ತಾಯಿಗೆ ತನ್ನ ತಂದೆ ಯಾರು, ತೋರಿಸೆ ಎಂದು ಬಯ್ಯುವುದನ್ನೂ ಕಟ್ಟಿಕೊಳ್ಳುತ್ತದೆ. ಎಲ್ಲಮ್ಮನ ಭಕ್ತರ ಪೂಜೆಯಲ್ಲಿ ಎಲ್ಲಮ್ಮನ ಜೊತೆ ಪರಶುರಾಮನೂ ಬಂದು ಕುಳಿತುಕೊಳ್ಳುತ್ತಾನೆ. ಹೀಗೆ, ವಿವಿಧತೆಯನ್ನು ತೋರಿಸುವ ಎಲ್ಲಮ್ಮ ಸಾಹಿತ್ಯ ರಚನೆಯನ್ನು ಜಾಗ್ರತೆಯಿಂದ ತಿರಸ್ಕರಿಸುತ್ತ ಬಂದಿದೆ. ಈ ಕಾರಣದಿಂದಲೆ ಎಲ್ಲಮ್ಮ ಒಂದು ನಂಬಿಕೆ, ಅದು ಮತವಲ್ಲ, ಪಂಥವಲ್ಲ ಇನ್ನು ಅದು ‘ಧರ್ಮ’ ಎಂದಾಗುವುದು ಸಾಧ್ಯವೂ ಇಲ್ಲ.

ಹೀಗೆ, ಎಲ್ಲ ಕಡೆಯೂ ಆವರಿಸಿಕೊಂಡು ಎಲ್ಲಿಯೂ ಕಾಣದ ನಂಬಿಕೆಯೇ ಎಲ್ಲಮ್ಮ. ಇದು ಸಮಾಜವನ್ನು ತುದಿಗಳಿಂದ ಬೆಸೆಯುವ ಕೆಲಸವನ್ನು ಮಾಡುತ್ತದೆ. ನಾಡಿನ ವಿದ್ವತ್ತು ಎಲ್ಲಮ್ಮ ಅಧ್ಯಯನಕ್ಕೆ ಒತ್ತು ಕೊಟ್ಟಷ್ಟ್ಟೂ ಸಮಾಜವನ್ನು ಬೆಸೆಯುವ ಕೆಲಸದ ಕಡೆಗೆ ಗಮನ ಕೊಟ್ಟಂತಾಗುತ್ತದೆ. ಎಲ್ಲಮ್ಮ ಎಂದಕೂಡಲೇ ಅನವಶ್ಯಕವಾದ ವಿಚಾರಗಳನ್ನು ಮಾತ್ರ ಮಾತಾಡಿಕೊಂಡು ಬಂದಿರುವ ವಿದ್ವತ್‌ವಲಯ ತನ್ನ ತಾತ್ವಿಕತೆಯ ದಾರಿದ್ರ್ಯವನ್ನೇ ತೋರಿಸುತ್ತಿದೆ. ಹಾಗಾದರೆ, ಎಲ್ಲಮ್ಮನಿಗೆ ತತ್ವ ಇದೆಯೆ? ತಾತ್ವಿಕತೆ ಇದೆಯೆ? ಎಂಬ ತುಸು ಮುಂದುವರಿದ ಪ್ರಶ್ನೆಯನ್ನೂ ಇಲ್ಲಿ ಎತ್ತಿಕೊಳ್ಳಬಹುದು. ಎಲ್ಲಮ್ಮನಿಗೆ ತತ್ವವೂ ತಾತ್ವಿಕತೆಯೂ ಇದೆ. ಎಲ್ಲಮ್ಮನನ್ನು ಪ್ರತಿನಿಧಿಸುವ ಮಾತಂಗಿ ಹೊತ್ತುಕೊಳ್ಳುವ, ಎಲ್ಲಮ್ಮನನ್ನು ಪೂಜಿಸುವ ಜೋಗಮ್ಮ ಹೊತ್ತುಕೊಳ್ಳುವ ಹಡಲಿಗಿಯಂತೆಯೆ (ಪಡಲಿಗಿ, ಅಡ್ಲಿಗಿ) ಎಲ್ಲಮ್ಮನ ತತ್ವವೂ ಮುಕ್ತವಾಗಿದೆ. ಜಗದೆಲ್ಲವನ್ನೂ ತನ್ನೊಳಗೆ ತುಂಬಿಕೊಳ್ಳುವ ಕಸುವನ್ನೂ ಜಗಕ್ಕೆ ಬೇಕಾದ್ದನ್ನು ಅದರೊಳಗಿನಿಂದಲೇ ಕೊಡುವ ಕಸುವನ್ನೂ ಅದು ಹೊಂದಿದೆ. ಆ ಕಸುವನ್ನು, ತತ್ವವನ್ನು ಅರಿಯುವ ಕೆಲಸವನ್ನು ನಾವೀಗ ಮಾಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಬಸವರಾಜ ಕೋಡಗುಂಟಿ

contributor

Similar News

ಕಾವ್ಯ ಸಂಗಮ

ನಾಡೋಜ ಪಂಪ