ಜನಾಂಗವೊಂದನ್ನು ನಿರಾಯುಧಗೊಳಿಸುವುದು ದೇಶದ ಕತ್ತು ಹಿಚುಕಿದಂತೆ
‘ಈ ಹೊತ್ತಿನ ಭರತ ಖಂಡ ಹಿಂದೂಸ್ಥಾನ, ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗೆ ಪಾಕಿಸ್ತಾನ-ಬಾಂಗ್ಲಾ ದೇಶ ಕೊಟ್ಟಾಗಿದೆ. ಇಲ್ಲಿರಬೇಕಾದವರು ಹಿಂದೂಗಳು ಮಾತ್ರ!’ ಎಂದು ಹಾದಿಬೀದಿಯಲ್ಲಿ ಅರಚಾಡುವ ಪರಿ ಭಯಾನಕವಾದುದಾಗಿದೆ. ಇವರಿಗೆ ರವೀಂದ್ರ ನಾಥ ಟಾಗೋರ್, ಬುದ್ಧ-ಬಸವಣ್ಣ, ಕನಕ-ನಾರಾಯಣಗುರು, ಪಂಪ-ಕುವೆಂಪು ಬೋಧಿಸಿದ್ದ ಸೌಹಾರ್ದ ಭಾರತ, ಸಾಮರಸ್ಯ ಭಾರತ ಬೇಕಿಲ್ಲ. ‘ಶ್ರೇಷ್ಠ ವ್ಯಸನಿಗಳ ಜಾತಿ ಭಾರತ’ ಬೇಕಿದೆ. ಅದಕ್ಕಾಗಿ ಏನೆಲ್ಲಾ ತಂತ್ರ-ಕುತಂತ್ರಗಳನ್ನು ರಾಜಾರೋಷವಾಗಿ ಮಾಡಲು ಬೀದಿಗೆ ಇಳಿದಿದ್ದಾರೆ. ಪಾರ್ಲಿಮೆಂಟ್‌ನಲ್ಲೂ ಅಗತ್ಯವಿರುವ ಕಾನೂನು-ಕಟ್ಟಳೆ ಮಾಡುವತ್ತಲೂ ಹೊರಟಿರುವುದನ್ನು ಕಂಡಾಗ, ಇವರು ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಭಯಾತಂಕಗಳು ಎದೆಯೊಳಗೆ ಧಾಂಗುಡಿಯಿಡುತ್ತಿವೆ.
ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ. ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ‘ಪ್ರಪಾತ’, ‘ನನ್ನ ನೆಲ ನನ್ನ ಜನ’, ‘ಕಪ್ಪು ನ್ಯಾಯ’, ‘ದಡ’, ‘ನೆಲೆ’, ‘ಗರ’, ‘ಮಹಾನದಿ’, ‘ಮಾಯಾನಗರಿಯಲ್ಲಿ ಮಾಯಾಶಿಲ್ಪಿ’, ‘ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು’, ‘ಸವೆಯದ ಹಾದಿ’, ‘ಎದೆಯಾಳ’, ‘ಬೆಂಕಿ ಮತ್ತು ಬೆಳಕು’ ಇವರ ಪ್ರಮುಖ ಕೃತಿಗಳು. ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. ರೂಪಲೇಖ, ಲಂಕೇಶ್ ಪತ್ರಿಕೆ, ನಮ್ಮನಾಡು, ಅಭಿಮಾನಿ, ಅರಗಿಣಿ, ಈ ಸಂಜೆ, ಜಾಣಗೆರೆ ಪತ್ರಿಕೆಗಳಲ್ಲಿ ಸಹ ಸಂಪಾದಕರು, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಭರತ ಖಂಡವು ಬಹು ಕಾಲದಿಂದ ‘ಬಹುತ್ವ ಭಾರತ’ವಾಗಿಯೆ ಉಳಿದುಕೊಂಡು ಬಂದಿದೆ. ಜಾತಿ-ಮತ-ಧರ್ಮ- ಭಾಷೆ-ಸಂಸ್ಕೃತಿ-ಆಚರಣೆಗಳಲ್ಲಿ ವೈವಿಧ್ಯತೆಯನ್ನು ಹೊಂದಿದ್ದು, ಇಡೀ ವಿಶ್ವದಲ್ಲಿ ಅದಕ್ಕಾಗಿ ಪ್ರಸಿದ್ಧಿಯನ್ನು ಪಡೆದಿರುವುದು ವಿಶಿಷ್ಟ ಹೆಗ್ಗಳಿಕೆಯಾಗಿದೆ. ಇಲ್ಲಿಯ ಶಾಂತಿ-ಸಾಮರಸ್ಯ-ಐಕ್ಯ-ಭಾವೈಕ್ಯಗಳಿಗೆ ಎಲ್ಲರ ಕೊಡುಗೆ ಅಪಾರವಾಗಿದೆ. ವಿವಿಧ-ವಿಭಿನ್ನ ಜಾತಿ-ಮತ-ಭಾಷೆ-ಪರಂಪರೆಯ ದೇಶವಾಗಿದ್ದರೂ, ಇಲ್ಲಿಯ ಸೌಹಾರ್ದ ಭಾವವನ್ನು ಬೇರಾವ ದೇಶದಲ್ಲೂ ಕಾಣಲು ಸಾಧ್ಯವಿಲ್ಲವೆಂಬುದನ್ನು ವಿಶ್ವವೇ ಅರಿತುಕೊಂಡು ವಿಸ್ಮಯಗೊಂಡಿದೆ.
ಇಲ್ಲಿಯ ಕವಿ ಪುಂಗವರು, ಚಿಂತಕರು, ಸಂತರು, ಫಕೀರರು ‘ಮಾನವ ಕುಲಂ ತಾನೊಂದೆ ವಲಂ, ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಕಾಯಕವೆ ಕೈಲಾಸ, ದೇವನೊಬ್ಬ ನಾಮ ಹಲವು, ಈಶ್ವರ ಅಲ್ಲಾ ತೇರೆ ನಾಮ್, ವಿಶ್ವ ಮಾನವ ಸಂದೇಶ’ ಮುಂತಾದವನ್ನು ಹೇಳಿ ಹೋಗಿದ್ದಾರೆಯೆ ಹೊರತಾಗಿ ಜಾತಿ-ಮತ-ಧರ್ಮಗಳ ನಡುವಿನ ಭೇದಭಾವವನ್ನು ಹುಟ್ಟು ಹಾಕಿದ್ದ ಉದಾರಣೆಗಳಿಲ್ಲ. ‘ಎಲ್ಲ ಮತ-ಧರ್ಮಗಳ ಸಾರವೂ ಒಂದೆ’ ಎಂದು ಸಾರಿದ್ದನ್ನೂ ನಾವೆಲ್ಲರೂ ಮನದುಂಬಿಕೊಂಡಿದ್ದೇವೆ.
ಇದೇ ಭರತ ಖಂಡವನ್ನು ಪ್ರಪಂಚದ ಹಲವಾರು ದೇಶಗಳವರು ಆಳಿದ್ದಾರೆ. ವಿವಿಧ ಧರ್ಮದವರೂ ದೇಶವನ್ನಾಳಿದ ಇತಿಹಾಸ ನಮ್ಮೊಂದಿಗಿದೆ. ದೇಶದೊಳಗಡೆಯೆ ಸುಮಾರು 560 ಚಕ್ರವರ್ತಿ-ದೊರೆ-ಸಾಮಂತರು-ಪಾಳೇಗಾರರು ಪ್ರತ್ಯೇಕ ಸಾಮ್ರಾಜ್ಯ-ಪ್ರಾಂತ-ರಾಜ್ಯ-ಪ್ರದೇಶವನ್ನಾಳುತ್ತಿದ್ದ ಕಾಲವೂ ಇದ್ದಿತ್ತು ಎಂಬುದನ್ನು ನೆನೆದಾಗ, ಅದೆಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ-ಸಾಮರ್ಥ್ಯ ಈ ಭರತ ಭೂಮಿಯಲ್ಲಿದ್ದುದನ್ನು ಅರಿತುಕೊಂಡಿರುವ ನಾವು ಈ ಭೂಮಿಯ ಬಗ್ಗೆ ವಿಸ್ಮಯಗೊಂಡಿದ್ದೇವೆ.
ಅಂತಹ ಭರತ ಖಂಡವು ಇಲ್ಲಿಗೆ 78 ವರ್ಷಗಳ ಮುನ್ನ ದಾಸ್ಯ ವಿಮೋಚನೆಗೊಂಡು ಸ್ವತಂತ್ರಗೊಂಡಿದ್ದು ಸಾತ್ವಿಕ ಹಾಗೂ ನೈತಿಕ ಹೋರಾಟದ ಫಲವಾಗಿ ಎಂಬುದನ್ನು ಯಾರೂ ಮರೆಯಲಾಗದು. ಅಂತಹ ಹೋರಾಟಕ್ಕೆ ಕೂಡಾ 100 ವರ್ಷಗಳ ಇತಿಹಾಸವಿದೆ. ಮೊಗಲರು, ಡಚ್ಚರು, ಫ್ರೆಂಚರು, ಬ್ರಿಟಿಷರು ಮುಂತಾಗಿ ನೂರಾರು ವರ್ಷ ಕಾಲ ಆಳಿದ ನಂತರ ದೇಶ ಸ್ವತಂತ್ರಗೊಂಡು 8 ದಶಕಗಳೇ ಆಗಿವೆ. ಹೋರಾಟವು ಕೂಡಾ ಒಂದೇ ತೆರದಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಅಹಿಂಸಾ ಮಾರ್ಗ-ಹಿಂಸಾ ಮಾರ್ಗಗಳಲ್ಲಿ ಹೋರಾಟ ನಡೆದಿತ್ತು. ಹಿಂಸೆಯಿಂದ ಮಾತ್ರ ಪರಕೀಯರನ್ನು ಓಡಿಸಬಲ್ಲೆವು ಎಂದುಕೊಂಡಿದ್ದ ತೀವ್ರವಾದಿಗಳು; ಅಹಿಂಸಾ ಮಾರ್ಗದಿಂದಲೇ ಪರಕೀಯರನ್ನು ಮಣಿಸಬಹುದು ಎಂದು ಭಾವಿಸಿದ್ದ ಸೌಮ್ಯವಾದಿಗಳು ಎರಡೂ ದಿಕ್ಕಿನಿಂದ ಹೋರಾಟ ನಡೆಸಿ, ಅಂತಿಮವಾಗಿ ಅಹಿಂಸಾ ವಾದಕ್ಕೆ ಬ್ರಿಟಿಷ್ ಪ್ರಭುಗಳು ಮಣಿದಿದ್ದನ್ನು ಇತಿಹಾಸ ದಾಖಲಿಸುತ್ತದೆ.
ಇಂತಹ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪದಲ್ಲಿ ಜರುಗುತ್ತಿದ್ದಾಗಲೆ ದೇಶದೊಳಗಡೆ ಸ್ವಾತಂತ್ರ್ಯ ವಿರೋಧಿ ಶಕ್ತಿಗಳೂ ಸಕ್ರಿಯವಾಗಿದ್ದವೆಂಬುದನ್ನು ಅರಿತಾಗ ಆಘಾತವುಂಟಾಗುತ್ತದೆ. ಅವರು ಪಕ್ಕಾ ಕೋಮುವಾದಿಗಳಾಗಿ ಅದರ ಆಧಾರದ ಮೇಲೆ ದೇಶವನ್ನು ವಿಭಜಿಸಲು ಸಂಚು ಹೂಡಿದ್ದ ಷಡ್ಯಂತ್ರವನ್ನು ದೇಶೀಯರು ಎಂದಿಗೂ ಮರೆಯಲಾಗದಂತೆ ಅಚ್ಚೊತ್ತಿದೆ. ಹಿಂದುತ್ವ ವಾದವನ್ನು ಮುನ್ನೆಲೆಗೆ ತಂದಿದ್ದ ‘ಹಿಂದೂ ಮಹಾಸಭಾ’ ಒಂದೆಡೆಗಿದ್ದರೆ, ಇಸ್ಲಾಮ್ ವಾದವನ್ನು ಪ್ರತಿಪಾದಿಸುತ್ತಿದ್ದ ‘ಇಂಡಿಯನ್ ಮುಸ್ಲಿಮ್ ಲೀಗ್’ ಇನ್ನೊಂದೆಡೆಗೆ ತಮ್ಮದೇ ತರ್ಕವನ್ನು ಮಂಡಿಸುತ್ತಾ ಸ್ವಾತಂತ್ರ್ಯ ಹೋರಾಟವನ್ನು ದುರ್ಬಲಗೊಳಿಸುತ್ತಾ ಹೊರಟಿದ್ದುದು ಕರಾಳ ಇತಿಹಾಸವಾಗಿತ್ತು.
ಈ ಕೋಮುವಾದಿಗಳಿಗೆ ಸ್ವಾತಂತ್ರ್ಯಕ್ಕಿಂತ ಧರ್ಮಾಧಾರಿತ ಆಡಳಿತ ಮುಖ್ಯವಾಗಿತ್ತು. ಅಂದರೆ, ಮತ-ಧರ್ಮದ ಆಧಾರದಲ್ಲಿ ಭರತ ಖಂಡವನ್ನು ಹೋಳು ಮಾಡಿಬಿಡುವ ಹುನ್ನಾರ ಇವರ ಪ್ರಮುಖ ಅಜೆಂಡಾ ಆಗಿತ್ತು. ಅದರಲ್ಲೂ ಹಿಂದೂ ಮಹಾಸಭಾದ ಪ್ರಭೃತಿಗಳು ‘ಹಿಂದುಳಿದವರಿಗೆ, ಅಸ್ಪಶ್ಯರಿಗೆ, ದರಿದ್ರರಿಗೆ ಸ್ವಾತಂತ್ರ್ಯ ಕೊಡುವುದಾದರೆ, ಅಂತಹ ಸ್ವಾತಂತ್ರ್ಯ ಬೇಡವೇ ಬೇಡ’ ಎಂದು ಬ್ರಿಟಿಷರಿಗೆ ಆಗ್ರಹಿಸಿದ್ದು ಅಂದಿನ ಕರಾಳ ಅಧ್ಯಾಯವಾಗಿತ್ತು.
ಸಾವಿರಾರು ವರ್ಷಗಳ ಹಿಂದೆ ಇದೇ ಪುರೋಹಿತಶಾಹಿ ಪಟ್ಟಭದ್ರರು ದೇಶದ ಜನರನ್ನು ‘ವರ್ಣಾಶ್ರಮ ಧರ್ಮ’ದ ಹೆಸರಲ್ಲಿ ವಿಭಜಿಸಿದ್ದು ಕೂಡಾ ಈ ಭೂಮಿ ಮೇಲಿನ ಮೊದಲ ಭಯೋತ್ಪಾದಕ ಕೃತ್ಯವಾಗಿದೆ. ಬ್ರಹ್ಮನ ತಲೆಯಿಂದ ಹುಟ್ಟಿದ ಬ್ರಾಹ್ಮಣರು ಶ್ರೇಷ್ಠರು, ಭುಜಗಳಿಂದ ಬಂದವರು ಕ್ಷತ್ರಿಯರು, ಹೊಟ್ಟೆಯಿಂದ ಹುಟ್ಟಿದವರು ವೈಶ್ಯರು ಎಂದು ವಿಂಗಡಿಸಿದ್ದವರೇ ಪಾದದಿಂದ ಹುಟ್ಟಿದವರು ಶೂದ್ರರು-ಪಂಚಮರೆಂದು ಅಪ್ಪಣೆ ಕೊಡಿಸಿದ್ದು ಮಾನವ ಜನ್ಮದ ಚರಿತ್ರೆಯಲ್ಲಿ ಮೊದಲ ಅಪಚಾರವಾದುದಾಗಿದೆ.
ಶ್ರೇಷ್ಠರ ಸೇವೆಗೈಯುವುದೆ ಉಳಿದೆಲ್ಲರ ‘ಪರಮ ಕರ್ತವ್ಯ’ವೆಂದು ಕಟ್ಟಾಜ್ಞೆ ವಿಧಿಸಿ ಸಾವಿರಾರು ವರ್ಷ ಕಾಲ ಶೂದ್ರರು-ಪಂಚಮರನ್ನು ದೇವರು-ಧರ್ಮದ ಹೆಸರಿನಲ್ಲಿ ಹೀನಾಯವಾಗಿ ನಡೆಸಿಕೊಂಡ ಪರಿಯನ್ನು ಪೂರ್ವಿಕರು ಅನುಭವಿಸಿದ್ದಾರೆ. ಅದರ ಚಹರೆಗಳನ್ನು ಕಂದಾಚಾರ-ಮೌಢ್ಯಗಳ ರೂಪದಲ್ಲಿ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋಗಿರುವುದು ಜೀವಂತವಾಗಿ ಉಳಿದುಕೊಂಡಿವೆ. ಶ್ರೇಷ್ಠರ ನಂತರ ಬರುವ ಕ್ಷತ್ರಿಯರು-ವೈಶ್ಯರು ಕೂಡಾ ನೆಮ್ಮದಿಯಿಂದ ಜೀವನ ಸಾಗಿಸಲು ಬಿಟ್ಟಿರಲಿಲ್ಲ ಎಂಬುದನ್ನು ಚರಿತ್ರೆ ಬಿಚ್ಚಿಟ್ಟಿದೆ. ಪರದೇಶಿಗಳ ಆಡಳಿತದಲ್ಲೂ ಈ ಶ್ರೇಷ್ಠರು ಸುರಕ್ಷಿತವಾಗಿ-ಸುಖದಿಂದಿದ್ದರು ಎಂಬುದು ಕೂಡಾ ದಾಖಲಾಗಿ ಹೋಗಿದೆ.
ಅಂಥವರದ್ದೇ ಪ್ರಸ್ತುತದಲ್ಲಿ ಮೇಲುಗೈ ಆಗಿರುವುದು ದೌರ್ಭಾಗ್ಯದ ಸಂಗತಿ. ಜಾತಿ-ಮತ-ದೇವರ ಹೆಸರಲ್ಲಿ ದೇಶೀಯರಲ್ಲಿ ಮಂಕುಬೂದಿ ಎರಚಿ, ಅದರ ಅಮಲನ್ನು ಮಿದುಳಿಗೇರಿಸಿ ಅಧಿಕಾರದ ದಂಡವನ್ನು ಕೈಗೆತ್ತಿಕೊಂಡಿದ್ದು ದೇಶವು ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ‘ಜನಾಂಗ ದ್ವೇಷ’ವನ್ನು ದೇಶವ್ಯಾಪಿ ಹರಡುತ್ತಾ ಹೊರಟ ದುರುಳತನ ಸದ್ಯದಲ್ಲಿ ವಿಜೃಂಭಿಸಿದೆ. ಆಡಳಿತಗಾರರು ಮಾತೆತ್ತಿದರೆ ಮುಸ್ಲಿಮ್-ಪಾಕಿಸ್ತಾನ-ಭಯೋತ್ಪಾದನೆ ಮುಂತಾಗಿ ಎತ್ತಿ ಹೇಳುತ್ತಾ ಜನ ಸಮುದಾಯದ ಮನದಲ್ಲಿ ಜನಾಂಗೀಯ ದ್ವೇಷದ ಕಿಡಿ ಹೊತ್ತಿಸಲು ದಶಕಗಳಿಂದ ವ್ಯವಸ್ಥಿತವಾಗಿ ಪ್ರಯತ್ನಿಸಿರುವುದನ್ನು ಕಂಡು ಹೌಹಾರುವಂತಾಗಿದೆ.
‘ಈ ಹೊತ್ತಿನ ಭರತ ಖಂಡ ಹಿಂದೂಸ್ಥಾನ, ಹಿಂದೂಗಳಿಗೆ ಸೇರಿದ್ದಾಗಿದೆ. ಮುಸ್ಲಿಮರಿಗೆ ಪಾಕಿಸ್ತಾನ-ಬಾಂಗ್ಲಾ ದೇಶ ಕೊಟ್ಟಾಗಿದೆ. ಇಲ್ಲಿರಬೇಕಾದವರು ಹಿಂದೂಗಳು ಮಾತ್ರ!’ ಎಂದು ಹಾದಿಬೀದಿಯಲ್ಲಿ ಅರಚಾಡುವ ಪರಿ ಭಯಾನಕವಾದುದಾಗಿದೆ. ಇವರಿಗೆ ರವೀಂದ್ರ ನಾಥ ಟಾಗೋರ್, ಬುದ್ಧ-ಬಸವಣ್ಣ, ಕನಕ-ನಾರಾಯಣಗುರು, ಪಂಪ-ಕುವೆಂಪು ಬೋಧಿಸಿದ್ದ ಸೌಹಾರ್ದ ಭಾರತ, ಸಾಮರಸ್ಯ ಭಾರತ ಬೇಕಿಲ್ಲ. ‘ಶ್ರೇಷ್ಠ ವ್ಯಸನಿಗಳ ಜಾತಿ ಭಾರತ’ ಬೇಕಿದೆ. ಅದಕ್ಕಾಗಿ ಏನೆಲ್ಲಾ ತಂತ್ರ-ಕುತಂತ್ರಗಳನ್ನು ರಾಜಾರೋಷವಾಗಿ ಮಾಡಲು ಬೀದಿಗೆ ಇಳಿದಿದ್ದಾರೆ. ಪಾರ್ಲಿಮೆಂಟ್‌ನಲ್ಲೂ ಅಗತ್ಯವಿರುವ ಕಾನೂನು-ಕಟ್ಟಳೆ ಮಾಡುವತ್ತಲೂ ಹೊರಟಿರುವುದನ್ನು ಕಂಡಾಗ, ಇವರು ದೇಶವನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಭಯಾತಂಕಗಳು ಎದೆಯೊಳಗೆ ಧಾಂಗುಡಿಯಿಡುತ್ತಿವೆ.
ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅಧಿಕಾರ ವಹಿಸಿಕೊಂಡಾಗ ದೇಶವು ದೈನ್ಯಾವಸ್ಥೆಯಲ್ಲಿತ್ತು. ಬಡತನ-ಹಸಿವು-ಅನಕ್ಷರತೆ-ಮೌಢ್ಯಗಳ ತವರಾಗಿತ್ತು. ಅಂತಹ ದಾರಿದ್ರ್ಯ ತುಂಬಿದ್ದ ದೇಶವನ್ನು ವಿಶ್ವದಲ್ಲೆ ಅಭಿವೃದ್ಧಿ ಹೊಂದಿದ ದೇಶವಾಗಿ ರೂಪಿಸುವ ಅನಿವಾರ್ಯತೆ ಅವರ ಮುಂದೆ ಸವಾಲಾಗಿ ನಿಂತಿತ್ತು. ಮೊದಲು ದೇಶಕ್ಕೊಂದು ‘ಸರ್ವರಿಗೂ ಸಮ ಪಾಲು-ಸರ್ವರಿಗೂ ಸಮ ಬಾಳು’ ಎಂಬರ್ಥದ ‘ಸಂವಿಧಾನ’ ರೂಪುಗೊಳ್ಳಬೇಕಿತ್ತು. ಅದನ್ನು ವಿಶ್ವದ ಬಹು ದೊಡ್ಡ ಕಾನೂನು ತಜ್ಞ-ಅರ್ಥಶಾಸ್ತ್ರಜ್ಞರೆನಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ‘ಸಂವಿಧಾನ ರಚನಾ ತಂಡ’ವನ್ನು ರೂಪಿಸಿ, ಅವರಿಂದ ವಿಶ್ವದಲ್ಲೆ ಅಪೂರ್ವವೆನಿಸುವ ‘ಭಾರತ ಸಂವಿಧಾನ’ವನ್ನು ರಚಿಸುವಂತೆ ಮಾಡಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಿ, ಅದರ ಆಣತಿಯಂತೆ ದೇಶವನ್ನು ಮುನ್ನಡೆಸಲು ಅಡಿಯಿಟ್ಟಿದ್ದು ರೋಚಕ ಇತಿಹಾಸ.
ಆದ್ಯತೆಗಳ ಆಧಾರದ ಮೇಲೆ ಕೃಷಿ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಮತ್ತು ಪ್ರಗತಿ ಸಾಧಿಸಲು ಪಣ ತೊಟ್ಟಿದ್ದು ಸ್ವತಂತ್ರ ಭಾರತದ ಮಹತ್ವದ ಕ್ಷಣವಾಗಿತ್ತು. ಶೈಕ್ಷಣಿಕ-ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸುವುದು, ಕೃಷಿಯನ್ನು ಆಧುನೀಕರಣಗೊಳಿಸುವುದು, ಬೃಹತ್ ಉದ್ಯಮಗಳ ಸ್ಥಾಪನೆ ಮಾಡುವುದು, ದೇಶದೆಲ್ಲೆಡೆ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡುವುದು, ಅದಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದ್ದು ಸಾಧಾರಣ ಸಂಗತಿಯಲ್ಲ. ಅವರು ಆಳ್ವಿಕೆ ಮಾಡಿದ್ದ 17 ವರ್ಷಗಳಲ್ಲಿ ದೇಶವನ್ನು ರಕ್ಷಣಾ ಕ್ಷೇತ್ರದಿಂದ ಹಿಡಿದು ಕೃಷಿ ಕ್ಷೇತ್ರದವರೆಗೆ ಸ್ವಾವಲಂಬಿ ದೇಶವಾಗಿ ಪರಿವರ್ತಿಸಿದ್ದರು. ಅವರೆಂದೂ ಧರ್ಮ-ದೇವರ ಮುಖವಾಡ ಧರಿಸಲಿಲ್ಲ. ಧಾರ್ಮಿಕ ಆಚರಣೆಗೆ ಮುಂದಾಗಲಿಲ್ಲ. ದೇವಾಲಯಗಳ ಉದ್ಘಾಟನೆ-ಧ್ಯಾನ-ಪೂಜೆ-ತಪಸ್ಸು ಇತ್ಯಾದಿಗಳಿಗೆ ಮುಂದಾಗಲಿಲ್ಲ. ಜನರ ನೆಮ್ಮದಿಯೇ ಮುಖ್ಯ, ದೇಶದ ಅಭಿವೃದ್ಧಿಯೇ ಗುರಿ ಎಂದು ಹೊರಟು ಯಶಸ್ವಿಯಾಗಿದ್ದು ಅದ್ಭುತ ಇತಿಹಾಸವಾಗಿದೆ.
ಆದರೆ, 11 ವರ್ಷಗಳಿಂದ ದೇಶವನ್ನಾಳುತ್ತಿರುವ ನರೇಂದ್ರ ಮೋದಿಯವರು ವಿದೇಶ ಪ್ರವಾಸ, ದೇವಾಲಯಗಳ ಉದ್ಘಾಟನೆ, ಪ್ರತಿಮೆಗಳ ಸ್ಥಾಪನೆ, ಭವನಗಳ ನಿರ್ಮಾಣ, ಚುನಾವಣೆಯ ಭಾಷಣ ಇತ್ಯಾದಿಗಳಲ್ಲೆ ದಿನವಹಿ 20 ಗಂಟೆ ಕಾಲ ಮಗ್ನರಾಗಿರುತ್ತಿದ್ದಾರೆ. ಪ್ರತೀ ಭಾಷಣಗಳಲ್ಲಿ ‘ಪಾಕಿಸ್ತಾನ, ಭಯೋತ್ಪಾದನೆ, ಮುಸ್ಲಿಮರು’ ಎಂಬ ವಿಚಾರಗಳನ್ನು ಪ್ರಸ್ತಾಪ ಮಾಡದೆ ಮಾತು ಮುಗಿಸುವುದಿಲ್ಲ. ‘ಇವು ನಮ್ಮ ಶತ್ರುಗಳು’ ಎಂದು ಪರೋಕ್ಷವಾಗಿ ಹೇಳುತ್ತಾ ಜನಮನದಲ್ಲಿ ವಿಷ ಬೀಜ ಬಿತ್ತುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.
ಅವರಿಗೆ ದೇಶದ ಹಿಂದೂವಾದಿ ಸಂಘ ಪರಿವಾರ, ಧರ್ಮದ ಅಮಲೇರಿಸಿಕೊಂಡ ಧರ್ಮಾಂಧರು ಅಡಿಯಾಳುಗಳಂತೆ ಅಲ್ಪಸಂಖ್ಯಾತರ ಮೇಲೆ ಹಲ್ಲೆ-ದಾಳಿ-ದಬ್ಬಾಳಿಕೆ-ಆಸ್ತಿ ನಾಶ-ಮಸೀದಿ ನೆಲಸಮ ಇತ್ಯಾದಿ ನೀಚ ಕೃತ್ಯಗಳಲ್ಲಿ ದೇಶದಾದ್ಯಂತ ತೊಡಗಿರುವುದನ್ನು ಸರಕಾರಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಅವರನ್ನು ತಡೆಯಬೇಕಾದ, ಶಿಕ್ಷೆಗೆ ಗುರಿಪಡಿಸಬೇಕಾದ ಕಾನೂನು ವ್ಯವಸ್ಥೆ ಒಮ್ಮೊಮ್ಮೆ ಕೈಕಟ್ಟಿ ಕೂರುವ, ಇನ್ನೊಮ್ಮೆ ಕಾನೂನು ಸಂರಕ್ಷಣೆ ತನ್ನ ಕರ್ತವ್ಯವೆಂಬಂತೆ ಚುರುಕಾಗಿ, ಮತ್ತೆ ತೆಪ್ಪಗಾಗುವ ಪ್ರಯತ್ನಗಳು ವಿಚಿತ್ರವಾಗಿ ನಡೆಯುತ್ತಿವೆ. ಮುಸ್ಲಿಮ್ ಸಮುದಾಯಕ್ಕೆ ಒಳಿತು ಮಾಡುವ ಉದ್ದೇಶದಂತೆ ಬಿಂಬಿಸಲು ತಲಾಖ್, ವಕ್ಫ್ ಆಸ್ತಿಪಾಸ್ತಿಗಳ ಮುಟ್ಟುಗೋಲಿಗೆ ಕೈ ಹಾಕಿರುವ ಪ್ರಕರಣಗಳೂ ಆ ಸಮುದಾಯದಲ್ಲಿ ಅಸ್ಥಿರ ಭಾವನೆ ಮೂಡಿಸಲು ನೆರವಾಗಿವೆ.
1993ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸದಿಂದ ಹಿಡಿದು ಮಸೀದಿಗಳ ನೆಲಸಮ, ವಕ್ಫ್ ಆಸ್ತಿಗಳ ಮೇಲೆ ಕಾನೂನು ಕಣ್ಣು, ಮುಸ್ಲಿಮರ ಖಾಸಗಿ ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಜರ್ ಹರಿಸುವವರೆಗಿನ ನೂರಾರು ಪ್ರಕರಣಗಳು ಈ 32 ವರ್ಷಗಳಲ್ಲಿ ಜರುಗಿ ಹೋಗಿವೆ. ಬಾಬರಿ ಮಸೀದಿ ಧ್ವಂಸವನ್ನು ವಿರೋಧಿಸಿ ಆರಂಭವಾದ ಭಯೋತ್ಪಾದಕ ಕೃತ್ಯಗಳು ಇತ್ತೀಚೆಗಿನ ದಿಲ್ಲಿ ಕಾರ್ ಬ್ಲಾಸ್ಟ್‌ವರೆಗೆ ಘಟಿಸಿರುವುದನ್ನು ದೇಶದ ಜನತೆ ಕಂಡು ಬೆಚ್ಚಿಬೀಳುತ್ತಿದ್ದಾರೆ. ಕೆಲವು ಭಯೋತ್ಪಾದಕ ಕೃತ್ಯಗಳಿಗೆ ಪೂರ್ವ ಹಿನ್ನೆಲೆಗಳೇ ಅರ್ಥವಾಗದಂತೆ ನಿಗೂಢವಾಗಿ ಉಳಿದುಬಿಟ್ಟಿವೆ. ಸರಕಾರ ಹೇಳಿದ್ದೆ ಸತ್ಯವೆಂದು ನಂಬುವ ವಾತಾವರಣ ನಿರ್ಮಾಣವಾಗಿದೆ. ಒಂದೊಂದು ಚುನಾವಣೆ ನಡೆಯುವ ಪೂರ್ವದಲ್ಲೂ ದೇಶದೊಳಗಡೆ ಒಂದೊಂದು ಭಯೋತ್ಪಾದಕ ಕೃತ್ಯಗಳು ಸಂಭವಿಸುತ್ತಿರುವ ಸಂದರ್ಭದಲ್ಲೂ ಸತ್ಯ ತಿಳಿಯಲಾಗದೆ ಜನತೆ ವಿಷಾದದ ಕೂಪದಲ್ಲಿ ನರಳುತ್ತಿದ್ದಾರೆ.
‘ಮುಸ್ಲಿಮರನ್ನು ದೇಶದಿಂದ ಓಡಿಸಬೇಕು’ ಎಂಬ ಮಾತುಗಳು ಬಿಜೆಪಿ ನಾಯಕರ ಬಾಯಲ್ಲಿ ರಾಜಾರೋಷಾಗಿ ಹೊರ ಬೀಳುತ್ತಿವೆ. ಪ್ರಧಾನಿ ಅಂತಹದನ್ನು ಖಂಡಿಸುವುದಿಲ್ಲ. ಅಂಥವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸುವುದಿಲ್ಲ. ಒಮ್ಮೊಮ್ಮೆ ಅವರೇ ಅದಕ್ಕಿಂತ ಭಯಂಕರವಾಗಿ ಮಾತಾಡಿ ಚುನಾವಣೆ ಲಾಭ ಪಡೆದುಕೊಳ್ಳುತ್ತಾರೆ. ಅವರ ಮೇಲೆ ಚುನಾವಣಾ ಆಯೋಗ ಯಾವುದೇ ಧ್ವನಿಯೆತ್ತದೆ ತೆಪ್ಪಗಿರುತ್ತದೆ. ಇಂತಹ ಮತೀಯ-ದೈವೀಕ ವಿಚಾರಗಳಲ್ಲಿ ಪ್ರಚೋದನೆಗೈಯುವ ಪ್ರಚಾರ ಭಾಷಣದಿಂದ ಒಂದರ ನಂತರ ಮತ್ತೊಂದು ಚುನಾವಣೆಯನ್ನು ಗೆದ್ದುಕೊಳ್ಳುತ್ತಲೇ ಹೊರಟಿರುವುದು ವಿಪರ್ಯಾಸವಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರಕ್ಕೇರಲು ಬಹುಮತವೇ ಬರಲಿಲ್ಲ. ವಿಪಕ್ಷಗಳು ಆಡಳಿತ ಪಕ್ಷಕ್ಕೆ ಸವಾಲು ಹಾಕುವಂಥ ರೀತಿಯಲ್ಲಿ ಸ್ಥಾನ ಗಳಿಸಿದ್ದನ್ನು ಕಂಡ ಬಿಜೆಪಿ ತೆಲುಗು ದೇಶಂ ಮತ್ತು ಜನತಾದಳ-ಯು ನೆರವಿನಿಂದ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿಬಿಟ್ಟಿತು. ‘ಈ ಬಾರಿ ನಮಗೆ 400 ಸೀಟು ಕೊಡಿ’ ಎಂದು ಜೋರಾದ ಧ್ವನಿಯಲ್ಲೆ ಒತ್ತಾಯಿಸಿದ್ದರು. ಅವರಲ್ಲಿ ವಿಶ್ವಾಸ ಕಳೆದುಕೊಂಡಿದ್ದ ಜನತೆ ಕೇವಲ 240ಕ್ಕೆ ತಳ್ಳಿದ್ದು ಅದ್ಭುತ ಬೆಳವಣಿಗೆಯಾಗಿತ್ತು. ಇತರ ಪಕ್ಷಗಳ ಬೆಂಬಲ ಯಾಚಿಸುವಂತಾದ ಇವರು ಇನ್ನು ತೀವ್ರತರವಾದ ಆಟಾಟೋಪ ನಡೆಸಲಾರರು ಅಂದುಕೊಂಡಿದ್ದು ಕೂಡಾ ಸುಳ್ಳಾಗಿದೆ.
ಅಲ್ಲಿಂದ ಪಾಕ್ ಮತ್ತು ಮುಸ್ಲಿಮ್ ದ್ವೇಷ ಕಾರುವಿಕೆಯನ್ನು ವಿಪರೀತಕ್ಕೊಯ್ದಿದ್ದಾರೆ. ಅದರಲ್ಲೂ ಅವರ ಪಕ್ಷವೇ ಆಡಳಿತ ನಡೆಸುವ ಉತ್ತರ ಪ್ರದೇಶ, ಅಸ್ಸಾಂ ಮತ್ತಿತರ ರಾಜ್ಯಗಳಲ್ಲಿ ಮುಸ್ಲಿಮರ ಬದುಕನ್ನು ಅಸ್ಥಿರಗೊಳಿಸುವ ಕೆಲಸವನ್ನು ಸರಕಾರಿ ಪ್ರಾಯೋಜನೆಯೊಡನೆ ಮಾಡಲಾಗುತ್ತಿದೆ. ಮುಸ್ಲಿಮ್ ಸಮುದಾಯದ ಆಸ್ತಿಪಾಸ್ತಿಗಳನ್ನು ಬುಲ್ಡೋಜರ್ ಹರಿಸಿ ನಾಶಗೊಳಿಸುವ, ವಿನಾಕಾರಣ ಹಲ್ಲೆ ನಡೆಸುವ, ಅವರ ಬದುಕನ್ನೇ ಬೀದಿಪಾಲಾಗಿಸುವ ಕೃತ್ಯಗಳು ಕಾನೂನು ಭಯವಿಲ್ಲದೆ ನಡೆಸುತ್ತಾ ಹೊರಟು ಇತರ ರಾಜ್ಯಗಳ ಮೇಲೂ ದುಷ್ಟರಿಣಾಮ ಬೀರುತ್ತಿವೆ.
2024ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಿಎಎ, ಸಿಎಆರ್ ರೂಪದ ಏಕರೂಪ ಕಾನೂನು ಜಾರಿಗೊಳಿಸಲು ಮೋದಿ ನೇತೃತ್ವದ ಸರಕಾರ ಷಡ್ಯಂತ್ರ ನಡೆಸಿತ್ತು. ದೇಶಾದ್ಯಂತ ಭಾರೀ ಪ್ರಮಾಣದ ಪ್ರತಿರೋಧವೊಡ್ಡಿದ್ದನ್ನು ಕಂಡು ತುಸು ಅಳುಕಿದ್ದುಂಟು. ಕೆಲವು ಕಡೆ ಹಿಂಸಾಚಾರವೂ ನಡೆದಿದ್ದನ್ನು ಗಮನಿಸಿ ಅದರ ಅನುಷ್ಠಾನವನ್ನು ಮುಂದೂಡಿ ತಾತ್ಕಾಲಿಕ ವಿರಾಮ ನೀಡಿತ್ತು. ಆ ಹೋರಾಟದ ಹೆಸರಲ್ಲಿ ಬಂಧಿತರಾದವರಲ್ಲಿ ಕೆಲವರಿನ್ನೂ ಬಿಡುಗಡೆಯಾಗದೆ ಜೈಲಲ್ಲಿ ಕೊಳೆಯುತ್ತಿರುವ ದುರಂತ ಹಾಗೇ ಉಳಿದಿದೆ.
ಆದರಿಂದು ಎಸ್‌ಐಆರ್. ಹೆಸರಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ದಾಳಿ-ದಬ್ಬಾಳಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಬಹಳಷ್ಟು ಮುಸ್ಲಿಮ್ ಜನ ಸಮುದಾಯದ ಮತ ಹಕ್ಕನ್ನು ಪರಿಷ್ಕರಣೆ ಹೆಸರಲ್ಲಿ ಕಸಿಯುವ ತಂತ್ರಗಾರಿಕೆ ನಡೆಯುತ್ತಿದೆ. ಬಿಹಾರದಲ್ಲಿ ಎಸ್‌ಐಆರ್ ಹೆಸರಲ್ಲಿ ಲಕ್ಷಲಕ್ಷ ಸಂಖ್ಯೆಯ ಮುಸ್ಲಿಮ್ ಸಮುದಾಯದವರ ಮತ ಹಕ್ಕನ್ನು ಕಿತ್ತುಕೊಳ್ಳುವ ರಾಜಾರೋಷದ ನೀಚ ಕೃತ್ಯ ನಡೆದುಬಿಟ್ಟಿತು. ಸುಪ್ರೀಂ ಕೋರ್ಟ್ ‘ಮತ ಪಟ್ಟಿಯಿಂದ ತೆಗೆಯಲಾದ ಮತದಾರರ ಪಟ್ಟಿ ಸಲ್ಲಿಸಿ’ ಎಂದು ಹೇಳಿದ್ದರೂ, ಅವರು ಸಲ್ಲಿಸುವ ಮುನ್ನವೆ ಆಯೋಗ ಚುನಾವಣೆ ನಡೆಸಿ ಅಂದುಕೊಂಡಂತೆ ಜಯದ ಫಲಿತಾಂಶವನ್ನು ಬಿಜೆಪಿ ನಾಯಕರ ಕೈಗೆ ಕೊಟ್ಟು ಪುಣ್ಯ ಕಟ್ಟಿಕೊಂಡಿತು.
ಈಗ ಅದೇ ಎಸ್‌ಐಆರ್ ಅನ್ನು ದೇಶದ ಎಲ್ಲಾ ರಾಜ್ಯಗಳಿಗೂ ವಿಸ್ತರಿಸಲು ಚುನಾವಣೆ ಆಯೋಗ ಮುಂದಾಗಿದೆ. ಅದನ್ನು ವಿರೋಧಿಸುವ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸುವ ಗೋಜಿಗೂ ಹೋಗದೆ ಮುಗುಮ್ಮಾಗಿ ಉಳಿದಿದೆ. ‘ಮತಗಳ್ಳತನ’ದ ಕೂಗಿಗೆ ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡದ ಚು. ಆಯೋಗಕ್ಕೆ ಬಿಜೆಪಿ ಶಭಾಶ್‌ಗಿರಿಯನ್ನು ನೀಡುತ್ತಿದೆ. ಕೇಂದ್ರ ಸರಕಾರವೆ ನೇಮಿಸಿಕೊಂಡವರು ಚು.ಆಯೋಗದ ಅಧಿಕಾರ ಸ್ಥಾನದಲ್ಲಿ ಕೂತು ಸರಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಲ್ಲಿಸುತ್ತಿದ್ದಾರೆಂಬ ಗುಮಾನಿ ದೇಶದ ಜನರಲ್ಲಿ, ವಿಪಕ್ಷಗಳವರಲ್ಲಿ ಕಾಡುತ್ತಿದ್ದರೂ, ಅದನ್ನು ತಡೆಯುವ ಮಾರ್ಗ ತಿಳಿಯದೆ ಮೂಕ ಪ್ರೇಕ್ಷಕರಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
‘ಹಿಂದೂ ರಾಷ್ಟ್ರ’ ರೂಪಿಸುವ ಮಹದಾಸೆ ಹೊತ್ತು ಹೊರಟಿರುವ ಕೇಂದ್ರ ಸರಕಾರ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿರುವ ಸಂಘ ಪರಿವಾರ ತನ್ನ ಮೊದಲ ಟಾರ್ಗೆಟ್ ಆಗಿ ಮುಸ್ಲಿಮರನ್ನು ಆಯ್ದುಕೊಂಡಿದೆ. ಅವರ ಮತ ಕಸಿಯುವ ಮೂಲಕ ನಿರಾಯುಧರನ್ನಾಗಿ ಮಾಡಿಬಿಟ್ಟರೆ ಅವರ ಮೂಲಭೂತ ಹಕ್ಕು ಇನ್ನಿಲ್ಲವಾಗುವಂತೆ ಮಾಡಬಹುದೆಂದು ಆಡಳಿತಗಾರರು ಭಾವಿಸಿರುವಂತಿದೆ. ಬಹಳಷ್ಟು ಮುಸ್ಲಿಮರಿಗೆ ಮತವಿಲ್ಲದೆ ನಿರಾಯುಧರಾದ ಮೇಲೆ ಕ್ರೈಸ್ತರ ಮೇಲೆ ಇದೇ ಪ್ರಹಾರ ಮಾಡಬಹುದೆಂಬ ಲೆಕ್ಕಾಚಾರವಿಟ್ಟುಕೊಂಡಿರುವಂತಿದೆ. ಆನಂತರ ದೇಶದ ಬಹುಸಂಖ್ಯಾತ ಎಸ್‌ಸಿ/ಎಸ್‌ಟಿಗಳನ್ನು ಟಾರ್ಗೆಟ್ ಮಾಡುವ ವ್ಯವಸ್ಥಿತ ಸಂಚಿರುವುದು ಸ್ಪಷ್ಟವಾಗುತ್ತಿದೆ.
ಅಲ್ಲಿಗೆ ಅವರು ಅಂದುಕೊಂಡಿದ್ದೆಲ್ಲಾ ಯಶಸ್ವಿಯಾಗಬಲ್ಲದು. ಆಗ ‘ಸಂವಿಧಾನ’ವನ್ನು ಸುಲಭವಾಗಿ ಮೂಲೆಗೆಸೆದು ಅದರ ಜಾಗದಲ್ಲಿ ‘ಮನುಸ್ಮತಿ’ಯನ್ನು ಪ್ರತಿಷ್ಠಾಪಿಸುವ ಆಸೆಯನ್ನು ಕ್ಷಣಾರ್ಧದಲ್ಲಿ ಅನುಷ್ಠಾನಕ್ಕೆ ತರುವ ಮಹದುದ್ದೇಶ ನಿರಾತಂಕವಾಗಿ ಈಡೇರಲು ಅಡ್ಡಿಯಿಲ್ಲ ಎಂದು ವ್ಯವಸ್ಥಿತ ಯೋಜನೆ ರೂಪಿಸಿರುವುದು ಸುಸ್ಪಷ್ಟವಾಗಿರುವುದಂತೂ ಸತ್ಯ. ಅಂತಹ ದೇಶಕ್ಕೆ ಮಾರಕವಾದ ‘ಮನುಸ್ಮತಿ’ ಹೇರಿಕೆಯನ್ನು ದೇಶದ ಮಹಾಜನತೆ ಮೂಕ ಪ್ರೇಕ್ಷಕರಂತೆ ನೋಡಬೇಕಾದ ಕಾಲಘಟ್ಟ ಬಂದಲ್ಲಿ ದೇಶದ ಭವಿಷ್ಯ ಏನಾದೀತು?
ದೇಶ ವಿಭಜನೆಗೆ ಗಾಂಧೀಜಿ ಕಾರಣಕರ್ತರು ಎಂದು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಭಯಂಕರವಾಗಿ ಟೀಕಿಸುವ ಮೂಲಕ ಗಾಂಧೀಜಿಯವರನ್ನು ಜನರ ಮುಂದೆ ‘ಖಳನಾಯಕ’ರನ್ನಾಗಿಸುವ ಸಂಘ ಪರಿವಾರಿಗರು, ಅಂತಹ ವಿಭಜನೆಗೆ ತಾವೇ ಮೂಲ ಕಾರಣಕರ್ತರು ಎಂಬುದನ್ನು ಎಂದೂ ಒಪ್ಪಿಕೊಂಡಿಲ್ಲದಿರುವುದು ವಿಪರ್ಯಾಸದ ಸಂಗತಿ. ಇದೇ ಮನುವಾದಿಗಳು ಇತಿಹಾಸದ ಆ ಘಟನೆಯನ್ನು ಮರೆ ಮಾಚುವ ನೀಚತನವೂ ನಡೆದಿದೆ.
ಬ್ರಿಟಿಷರು ಭಾರತ ದೇಶವನ್ನು ಸ್ವತಂತ್ರಗೊಳಿಸಿ ಬ್ರಿಟನ್‌ಗೆ ಹಿಂದಿರುಗಲು ಸಿದ್ಧವಾಗಿರುತ್ತಾರೆ. ಆಗ ಹಿಂದೂ ಮಹಾಸಭಾ ಮತ್ತು ಇಂಡಿಯನ್ ಮುಸ್ಲಿಮ್ ಲೀಗ್‌ನಂಥ ಕೋಮುವಾದಿ ಸಂಘಟನೆಗಳು ದೇಶ ವಿಭಜನೆಗೆ ಪಟ್ಟು ಹಿಡಿದಿರುತ್ತವೆ. ದೇಶ ಸ್ವತಂತ್ರಗೊಳ್ಳುವ ಪವಿತ್ರ ಕ್ಷಣವನ್ನು ಕಾಣುವ ಹಂಬಲದಿಂದ ಗಾಂಧೀಜಿ ನೆಹರೂ-ಪಟೇಲ್ ಮತ್ತಿತರ ನಾಯಕರೊಡನೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಮದಾಲಿ ಜಿನ್ನಾ ಅವರನ್ನೂ ಕರೆಸಿಕೊಂಡು ಕಡೆಯ ಸಂಧಾನದ ಪ್ರಯತ್ನ ಮಾಡುತ್ತಾರೆ. ನೆಹರೂ, ಪಟೇಲ್ ಮತ್ತಿತರನ್ನು ಮನವೊಲಿಸಿ ದೇಶ ವಿಭಜನೆ ತಡೆಯುವ ಉದ್ದೇಶದಿಂದ ‘ಮಿಸ್ಟರ್ ಜಿನ್ನಾ, ಸಹಸ್ರಾರು ವರ್ಷಗಳಿಂದ ಭರತ ಖಂಡ ವಿದೇಶಿಗರ ಆಡಳಿತದಲ್ಲಿಯೂ ಅಖಂಡವಾಗಿಯೇ ಉಳಿದಿತ್ತು. ಈಗ ಸ್ವತಂತ್ರಗೊಂಡ ನಂತರವೂ ಅಖಂಡ ಭಾರತವಾಗಿಯೇ ಉಳಿಯಬೇಕು. ದೇಶ ವಿಭಜನೆಯಾಗುವುದು ಬೇಡ. ನೆಹರೂ-ಪಟೇಲ್ ಒಪ್ಪಿದ್ದಾರೆ. ಅದಕ್ಕಾಗಿ ಒಂದು ಕೆಲಸ ಮಾಡೋಣ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೀವೇ ಆಗಿ ಎಂಬುದು ನಮ್ಮೆಲ್ಲರ ಅಭಿಲಾಶೆಯಾಗಿದೆ!’ ಎಂದಾಗ ಜಿನ್ನಾ ಅಚ್ಚರಿಗೊಳ್ಳುತ್ತಾರೆ.
ಆದರೆ, ಅಂತಹದೊಂದು ಅಪೂರ್ವವಾದ ಅವಕಾಶವನ್ನು ತಿರಸ್ಕರಿಸುತ್ತಾ ‘ಬಾಪೂಜಿ, ಬೇಕೋ ಬೇಡವೋ, ಈಗಾಗಲೇ ಹಿಂದೂ-ಮುಸ್ಲಿಮರ ನಡುವೆ ದ್ವೇಷಾಸೂಯೆ ವಿಪರೀತಕ್ಕೆ ಹೋಗಿಬಿಟ್ಟಿದೆ. ಈ ಹಂತದಲ್ಲಿ ತೇಪೆ ಹಾಕುವುದರಿಂದ ಪ್ರಯೋಜನವಾಗದು. ದೇಶ ವಿಭಜನೆಯೇ ಸೂಕ್ತ!’ ಎಂದುಬಿಟ್ಟಾಗ ಗಾಂಧೀಜಿಯವರ ಕೈ ಕಟ್ಟಿದಂತಾಗುತ್ತದೆ. ವಿಭಜನೆಯ ಕ್ಷಣವನ್ನು ನೆನೆದು ಕಣ್ಣೀರಾಗುತ್ತಾರೆ. ಆಗ ನೆಹರೂ ಭಾರತದ ಪ್ರಥಮ ಪ್ರಧಾನಿಯಾಗುತ್ತಾರೆ. ಪಟೇಲ್ ಉಪ ಪ್ರಧಾನಿ ಮತ್ತು ಗೃಹಮಂತ್ರಿಯಾಗುತ್ತಾರೆ. ಅನಾರೋಗ್ಯದಿಂದ ನರಳುತ್ತಿದ್ದ ಪಟೇಲರು ಎರಡ್ಮೂರು ವರ್ಷಗಳಲ್ಲೇ ಇನ್ನಿಲ್ಲವಾಗುತ್ತಾರೆ. ಹಾಗೆ ವಿಭಜನೆಗೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾದ ಮಹಮದಾಲಿ ಜಿನ್ನಾರೂ ಅನಾರೋಗ್ಯ ನಿಮಿತ್ತ ಎರಡು ವರ್ಷಗಳಲ್ಲೆ ನಿಧನ ಹೊಂದುತ್ತಾರೆ.
ಇಂತಹ ಇತಿಹಾಸವನ್ನು ತಿರುಚುವ, ತಮ್ಮದೇ ಕತೆ ಹೇಳುವ ಸಂಘ ಪರಿವಾರಿಗಳು ಈ ಹೊತ್ತಿಗೂ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅತ್ತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಅಹರ್ನಿಶಿ ದುಡಿದ ಗಾಂಧೀಜಿಯನ್ನು, ಆಧುನಿಕ ಭಾರತದ ಶಿಲ್ಪಿ ನೆಹರೂರನ್ನು, ಸಮಾಜವಾದಿ ಸಿದ್ಧಾಂತದ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್‌ರನ್ನು ನಿತ್ಯ ಭಜನೆ ರೂಪದಲ್ಲಿ ವಿರೋಧಿಸುತ್ತಲೆ ಇದ್ದಾರೆ.
ಅತ್ತ ಪಾಕ್ ಮತ್ತು ಮುಸ್ಲಿಮರನ್ನು ಟೀಕಿಸುವ ನಿತ್ಯ ಕಾರ್ಯ ಮಾಡಿಕೊಂಡಿರುವವರಿಗೆ ಜಿನ್ನಾ ಅಖಂಡ ಭಾರತದ ಮೊದಲ ಪ್ರಧಾನಿಯಾಗುವುದನ್ನು ನಿರಾಕರಿಸಿದ್ದ ಉದಾರ ಭಾವದ ದೊಡ್ಡತನ ಅರ್ಥವಾಗದೆ ಉಳಿದಿರುವುದಾದರೂ ಏತಕ್ಕೆ? ಒಂದು ವೇಳೆ ಜಿನ್ನಾ ಮೊದಲ ಪ್ರಧಾನಿಯಾಗಿದ್ದರೆ ಸಹಿಸಿಕೊಳ್ಳುತ್ತಿದ್ದರೆ? ಅಷ್ಟೇ ಅಲ್ಲ, ಅಖಂಡ ಭಾರತದಲ್ಲಿ ಮುಸ್ಲಿಮರೂ ಬಹುಸಂಖ್ಯಾತರಾಗಿರುತ್ತಿದ್ದರೆ ಹಿಂದೂಗಳು ಪ್ರಧಾನಿ ಪಟ್ಟಕ್ಕೇರುವುದು ಸುಲಭವಿತ್ತೆ? ಮೋದಿಯಂತಹ ಹಿಂದುಳಿದ ವರ್ಗದವರು ಪ್ರಧಾನಿಯಾಗುವ ಕನಸು ಕಟ್ಟಲಾಗುತ್ತಿತ್ತೆ?
ಇಂಥ ವಾಸ್ತವಿಕ ಸಂಗತಿಗಳನ್ನು ಮೂಲೆಗುಂಪು ಮಾಡಿ ಅವಾಸ್ತವಿಕ ಸಂಗತಿಗಳನ್ನೇ ಮುಗ್ಧ ಭಾರತೀಯರ ತಲೆಯಲ್ಲಿ ತುಂಬುತ್ತಾ, ಮತ್ತೊಂದು ಜನಾಂಗವನ್ನು ನಿರಾಯುಧರನ್ನಾಗಿ ಮಾಡ ಹೊರಟಿರುವ ಇವರು ಭರತ ಖಂಡವನ್ನು ಐಕ್ಯ ಭಾರತವನ್ನಾಗಿ ಉಳಿಸಬಲ್ಲರೆ?