ದೇವರಕಾಡನ್ನು ಹುಡುಕುತ್ತಾ
ಆನೆ ಸಾಕಲು ಹೊರಟು ಸುದ್ದಿಯಾದ ಲೇಖಕಿ ಸಹನಾ ಕಾಂತಬೈಲು ಕೃಷಿ ಬದುಕಿನಲ್ಲಿ ಬರಹಗಳ ಫಸಲು ತೆಗೆಯುತ್ತಿರುವವರು. ಮೂಲತಃ ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದವರು. ಕತೆ, ಕವನ, ಪ್ರಬಂಧಗಳಿಗಾಗಿ ಗುರುತಿಸಲ್ಪಟ್ಟಿರುವ ಇವರು 60ಕ್ಕೂ ಮಿಕ್ಕಿ ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಬರೆದಿದ್ದಾರೆ. ಕವಿತೆಯ ಮೂಲಕ ಬರಹವನ್ನಾರಂಭಿಸಿದ ಸಹನಾ ತಮ್ಮ, ಸ್ವಾನುಭವ, ಪ್ರಾಮಾಣಿಕ, ದಿಟ್ಟ ಬರಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತರು. ಅವರ ‘ಆನೆ ಸಾಕಲು ಹೊರಟವಳು’ ಕೃತಿಗೆ ಅಜೂರ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ ದೊರಕಿದೆ. ಈ ಕೃತಿ ಒಟ್ಟು ನಾಲ್ಕು ಮುದ್ರಣಗಳನ್ನು ಕಂಡಿದೆ. ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ . ಶಿವಮೊಗ್ಗ ಕರ್ನಾಟಕ ಸಂಘದ ಹಾ. ಮಾ. ನಾಯಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ ಸೇರಿದಂತೆ ಇವರ ಕೃತಿಗಳಿಗೆ ಹಲವು ಗೌರವಗಳು ಸಂದಿವೆ. ದೇವರ ಕಾಡಿನಲ್ಲಿ ದೇವರನ್ನು ಹುಡುಕುವ ಪ್ರಯತ್ನವೊಂದನ್ನು ಈ ಬರಹದಲ್ಲಿ ಮಾಡಿದ್ದಾರೆ.
ಪುಸ್ತಕದಲ್ಲಿ ಇರುವುದನ್ನು ಓದಿದರೆ ಪ್ರಯೋಜನವಿಲ್ಲ. ಸ್ವತಃ ನೋಡಿ ತಿಳಿದುಕೊಳ್ಳಬೇಕು ಎಂಬ ತುಡಿತ ನನಗೆ ಉಂಟಾಯಿತು. ಕೊಡಗಿನಲ್ಲಿ ದೇವರಕಾಡು ಎಲ್ಲಿದೆ ಎಂದು ಹುಡುಕಲು ಶುರುಮಾಡಿದೆ. ‘ಮಡಿಕೇರಿ ಸಮೀಪ ಕಾಟಕೇರಿ ಎಂಬ ಊರಲ್ಲಿ ದೇವರಕಾಡು ಇದೆ. ರಸ್ತೆ ಬದಿಯಲ್ಲೇ ಇರುವುದರಿಂದ ಹೋಗಿ ನೋಡುವುದು ಸುಲಭ’ ಎಂದರು ಒಬ್ಬರು. ನನಗೆ ಇಷ್ಟು ಮಾಹಿತಿ ಸಾಕಿತ್ತು. ನಾನು ಮಧ್ಯಾಹ್ನ ಸುಮಾರು 12 ಗಂಟೆಯಷ್ಟು ಹೊತ್ತಿಗೆ ನಮ್ಮೂರಿನಿಂದ ಕಾಟಕೇರಿಯಾಗಿ ಹೋಗುವ ಮೈಸೂರು ಬಸ್ಸು ಹತ್ತಿದೆ.
ಕೊಡಗು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ‘ದೇವರಕಾಡು’ ಎಂಬ ಕಾಡು ಇದೆ. ಕೊಡಗಿನಲ್ಲಿ ಒಟ್ಟು 1,214 ದೇವರಕಾಡುಗಳಿವೆ ಎಂಬ ಸುದ್ದಿಯನ್ನು ಈಚೆಗೆ ಪತ್ರಿಕೆಯೊಂದರಲ್ಲಿ ಓದಿದೆ. ನಾನು ಮದುವೆಯಾಗಿ ಕೊಡಗಿಗೆ ಬಂದು 35 ವರ್ಷಗಳಾಗಿವೆ. ದೇವರಕಾಡು ಎಂದು ಹೆಸರು ಕೇಳಿದ್ದು ಬಿಟ್ಟರೆ ಅದು ಕೊಡಗಿನಲ್ಲಿ ಎಲ್ಲಿದೆ? ನಾನೂ ಕಾಡಿನ ಮಧ್ಯೆಯೇ ವಾಸವಾಗಿರುವುದು. ಆದರೆ ನಮ್ಮ ಕಾಡನ್ನು ಯಾಕೆ ದೇವರಕಾಡೆಂದು ಕರೆಯುವುದಿಲ್ಲ? ದೇವರಕಾಡಿನ ಐತಿಹ್ಯವೇನು ಎಂದು ನನಗೆ ಕೊಡಗಿನವಳಾದರೂ ಗೊತ್ತಿರಲಿಲ್ಲ. ಎಲ್ಲಾ ಕಾಡುಗಳು ಯಾಕೆ ದೇವರಕಾಡು ಆಗುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ‘ದೇವರಕಾಡಿನ ಬಗ್ಗೆ ಅರಣ್ಯ ಇಲಾಖೆ ಪ್ರಕಟಿಸಿದ ಒಂದು ಇಂಗ್ಲಿಷ್ ಪುಸ್ತಕ ಇದೆ’ ಎಂಬ ಮಾಹಿತಿ ಯಾರಿಂದಲೋ ಸಿಕ್ಕಿತು. ಮನೆಯಿಂದ 15 ಕಿ.ಮೀ. ದೂರದ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋಗಿ ಕೇಳಿದರೆ, ‘ಆ ಪುಸ್ತಕ ಇಲ್ಲಿ ಇಲ್ಲ. ಮಡಿಕೇರಿಯ ಅರಣ್ಯಭವನದಲ್ಲಿ ಇದೆ. ತರಿಸಿಕೊಡುತ್ತೇವೆ’ ಎಂದು ಹೇಳಿದರೇ ವಿನಾ ತರಿಸಿಕೊಡಲಿಲ್ಲ. ಮಡಿಕೇರಿ ಅರಣ್ಯಭವನಕ್ಕೆ ಹೋಗಿ ಕೇಳಿದಾಗ ಅವರು, ‘ಲೈಬ್ರರಿಯಲ್ಲಿ ಇದೆ. ಹುಡುಕಬೇಕಷ್ಟೆ. ಹುಡುಕಿ ಇಡುತ್ತೇವೆ. ಇನ್ನೊಮ್ಮೆ ಬನ್ನಿ’ ಎಂದರು.
ಎಲ್ಲರಲ್ಲೂ ಈ ಬಗ್ಗೆ ವಿಚಾರಿಸುವುದೇ ನನ್ನ ಕೆಲಸವಾಯಿತು. ನಮ್ಮೂರಿನ ಒಬ್ಬರು ಹಿರಿಯರು, ‘ಕೊಡಗಿನ ದೇವಕಾಡಿನ ವಿಶ್ಲೇಷಣೆ ಎಂಬ ಒಂದು ಪುಸ್ತಕ ಕೊಡವ ಸಾಹಿತ್ಯ ಅಕಾಡಮಿಯಿಂದ ಪ್ರಕಟವಾಗಿದೆ. ಅದರಲ್ಲಿ ಮಾಹಿತಿ ಸಿಗಬಹುದು’ ಎಂದರು. ಅದರಂತೆ ನಾನು ಮಡಿಕೇರಿಯಲ್ಲಿರುವ ಕೊಡವ ಸಾಹಿತ್ಯ ಅಕಾಡಮಿಗೆ ಹೋಗಿ ಪುಸ್ತಕ ಖರೀದಿಸಿ ತಂದು ಓದಲುತೊಡಗಿದೆ.
ಕೊಡಗು ಕಾಡುಗಳಿಂದ ಕೂಡಿದ ಜಿಲ್ಲೆ. ಕಾಡಿನಲ್ಲಿ ಹುಟ್ಟಿ ಬೆಳೆದು ವಿಕಾಸ ಹೊಂದಿದ ಮಾನವನಿಗೆ ಕಾಡಿನ ಮಹತ್ವದ ಅರಿವಿತ್ತು. ಕಾಡನ್ನು ನಾಶಪಡಿಸಿದರೆ ಹುಲಿ, ಚಿರತೆ, ಕಾಡುಹಂದಿ, ಆನೆ, ಕಾಡೆಮ್ಮೆ ಮುಂತಾದ ಕಾಡುಪ್ರಾಣಿಗಳು ನಾಡಿಗೆ ದಾಳಿಯಿಟ್ಟು ಕಾಡುತ್ತವೆಯೆಂಬ ಭೀತಿ ನಮ್ಮ ಪೂರ್ವಜರಿಗಿತ್ತು. ಇದನ್ನರಿತ ಪೂರ್ವಜರು ಅರಣ್ಯಪ್ರದೇಶಗಳನ್ನು ದೇವರ ಹೆಸರಿನಲ್ಲಿ ಪೂಜಿಸಿ ಸಂರಕ್ಷಿಸುವ ಸಂಪ್ರದಾಯವನ್ನು ಜಾರಿಗೆ ತಂದರು. ಕೊಡಗಿನ ಹೆಚ್ಚಿನ ಗ್ರಾಮದಲ್ಲಿಯೂ ಸ್ವಲ್ಪ ಜಾಗವನ್ನು ಇದು ದೇವರಿಗೆ ಸೇರಿದ ಕಾಡೆಂದು ಮತ್ತು ಇಲ್ಲಿ ಮರಗಳನ್ನು ಕಡಿಯುವಂತಿಲ್ಲ, ಸೌದೆಯನ್ನು ತೆಗೆಯುವಂತಿಲ್ಲ, ಹಸುಗಳನ್ನು ಮೇಯಿಸುವಂತಿಲ್ಲ, ದೇವರ ಕಾಡಿನೊಳಗೆ ಯಾರೂ ಪ್ರವೇಶಿಸುವಂತಿಲ್ಲ ಹೀಗೆ ಹಲವಾರು ಷರತ್ತುಗಳನ್ನು, ನಿರ್ಬಂಧ ಮತ್ತು ನಿಯಮಗಳನ್ನು ಮಾಡಿದ್ದರು. ಇವೆಲ್ಲವನ್ನು ಪಾಲಿಸದೆ ಹೋದರೆ ಕಾಡಿನಲ್ಲಿರುವ ದೇವರು ಮನೆಯವರಿಗೂ, ಊರಿಗೂ ತೊಂದರೆ ಉಂಟುಮಾಡುತ್ತಾನೆಂದು ಭಯ ಪಡಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಅತೀ ಹೆಚ್ಚು ಕಾಡುಗಳಿದ್ದರೂ ಮುಂದೆ ಕಾಡುಗಳು ನಾಶವಾಗಿಬಿಡಬಹುದು ಎಂದು ದೇವರ ಹೆಸರಿನಲ್ಲಾದರೂ ಕಾಡುಗಳು ಉಳಿಯಲಿ ಎಂಬ ಮನೋಭಾವದಿಂದ ಜನರಲ್ಲಿ ಭಯಭಕ್ತಿಯನ್ನು ತಂದು, ಎಲ್ಲಾ ಕಾಲದಲ್ಲೂ ದೇವರಕಾಡನ್ನು ಪೂಜಿಸಿ ಸಂರಕ್ಷಿಸುವ ವ್ಯವಸ್ಥೆಯನ್ನು ಇಲ್ಲಿನ ಹಿರಿಯರು ರೂಪಿಸಿದರು. ಈಗಲೂ ಕೊಡಗಿನಲ್ಲಿ ದೇವರಕಾಡುಗಳು ಹಾಗೆಯೇ ಉಳಿದಿವೆ. ದೇವರಕಾಡಿನಲ್ಲಿ ನಿಗದಿ ಪಡಿಸಿದ ದಿನದಲ್ಲಿ ದೊಡ್ಡ ಹಬ್ಬ ನಡೆಯುತ್ತದೆ. ಹಬ್ಬಗಳಲ್ಲಿ ದೇವರಕಾಡಿಗೆ ಹೋಗಿ ದೇವರನ್ನು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ ಮತ್ತು ಅವರದೇ ಆದ ಹಾಡು, ನ್ಯತ್ಯಗಳನ್ನು ನಡೆಸುತ್ತಾರೆ. ದೇವರಕಾಡು ಕೊಡಗಿನ ಗ್ರಾಮದ ಧಾರ್ಮಿಕ ಕೇಂದ್ರ ಮಾತ್ರ ಅಲ್ಲ ಗ್ರಾಮದ ಒಗ್ಗಟ್ಟನ್ನು, ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿದೆ. ಕೊಡಗಿನ ಎಲ್ಲ ಮೂಲನಿವಾಸಿಗಳಿಗೂ ಇಲ್ಲಿ ಸ್ಥಾನ ಇದೆ, ಜವಾಬ್ದಾರಿ ಇದೆ. ದೇವರಕಾಡು ಯಾರೊಬ್ಬನ ಆಸ್ತಿಯೂ ಅಲ್ಲ. ಅದು ಗ್ರಾಮದ ಆಸ್ತಿ. ಈಗ ಅದು ಅರಣ್ಯ ಇಲಾಖೆಯ ಕೈಕೆಳಗೆ ಇದೆ. ಹೀಗೆ ಅನೇಕ ವಿಷಯಗಳು ಆ ಪುಸ್ತಕದಿಂದ ನನಗೆ ಸಿಕ್ಕಿತು.
ಪುಸ್ತಕದಲ್ಲಿ ಇರುವುದನ್ನು ಓದಿದರೆ ಪ್ರಯೋಜನವಿಲ್ಲ. ಸ್ವತಃ ನೋಡಿ ತಿಳಿದುಕೊಳ್ಳಬೇಕು ಎಂಬ ತುಡಿತ ನನಗೆ ಉಂಟಾಯಿತು. ಕೊಡಗಿನಲ್ಲಿ ದೇವರಕಾಡು ಎಲ್ಲಿದೆ ಎಂದು ಹುಡುಕಲು ಶುರುಮಾಡಿದೆ. ‘ಮಡಿಕೇರಿ ಸಮೀಪ ಕಾಟಕೇರಿ ಎಂಬ ಊರಲ್ಲಿ ದೇವರಕಾಡು ಇದೆ. ರಸ್ತೆ ಬದಿಯಲ್ಲೇ ಇರುವುದರಿಂದ ಹೋಗಿ ನೋಡುವುದು ಸುಲಭ’ ಎಂದರು ಒಬ್ಬರು. ನನಗೆ ಇಷ್ಟು ಮಾಹಿತಿ ಸಾಕಿತ್ತು. ನಾನು ಮಧ್ಯಾಹ್ನ ಸುಮಾರು 12 ಗಂಟೆಯಷ್ಟು ಹೊತ್ತಿಗೆ ನಮ್ಮೂರಿನಿಂದ ಕಾಟಕೇರಿಯಾಗಿ ಹೋಗುವ ಮೈಸೂರು ಬಸ್ಸು ಹತ್ತಿದೆ. ಟಿಕೆಟ್ ಪಡಕೊಳ್ಳುವಾಗ ಗೊತ್ತಾಯಿತು ಕಾಟಕೇರಿಯಲ್ಲಿ ಬಸ್ಸನ್ನು ನಿಲ್ಲಿಸುವುದಿಲ್ಲ. ಮಡಿಕೇರಿಯಲ್ಲೇ ನಿಲ್ಲಿಸುವುದು ಎಂದು. ಕಾಟಕೇರಿಯಿಂದ ಮಡಿಕೇರಿಗೆ ಆರು ಕಿ.ಮೀ. ದೂರ. ನಾನು ಮಡಿಕೇರಿಯಲ್ಲಿ ಬಸ್ಸಿನಿಂದ ಇಳಿದು ಕಾಟಕೇರಿಗೆ ಹೋಗಲು ವಾಹನಕ್ಕೆ ಕಾಯುತ್ತ ನಿಂತಿರುವಾಗ ಒಂದು ಜೀಪು ಬಂತು. ಅದು ಕಾಟಕೇರಿಗೆ ಹೋಗುತ್ತದೆ ಎಂದು ಗೊತ್ತಾಗಿ ಅದರಲ್ಲಿ ಹತ್ತಿದೆ. ಅದು ಬಾಡಿಗೆ ಜೀಪಲ್ಲ. ಅದರಲ್ಲಿ ಗಂಡ-ಹೆಂಡತಿಯಷ್ಟೇ ಇದ್ದರು. ‘ನಾನು ಕಾಟಕೇರಿಯಲ್ಲಿರುವ ದೇವರಕಾಡನ್ನು ನೋಡಲು ಹೋಗುತ್ತಿದ್ದೇನೆ. ಕಾಟಕೇರಿಯಲ್ಲಿ ಅದು ಎಲ್ಲಿದೆಯೆಂದು ನಿಮಗೆ ಗೊತ್ತಾ’ ಎಂದು ಅವರಲ್ಲಿ ಕೇಳಿದೆ. ಅದಕ್ಕವರು ಹೇಳಿದರು, ‘ಅಪ್ಪೇಂದ್ರಿಯಪ್ಪ ದೇವರಕಾಡು ಎಂದು ಅದನ್ನು ಕರೆಯುತ್ತಾರೆ. ಅಲ್ಲಿ ಅಪ್ಪೇಂದ್ರಿಯಪ್ಪ ದೇವಸ್ಥಾನ ಇದೆ. ಅದಕ್ಕೆ ಪೂಜೆ ಮಾಡುವ ಭಟ್ಟರ ಮನೆ ಅಲ್ಲೇ ಸಮೀಪ ಇದೆ. ಅವರಲ್ಲಿ ಕೇಳಿದರೆ ಅವರು ದೇವರಕಾಡಿನ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ಮೊದಲು ಭಟ್ಟರ ಮನೆಗೆ ಹೋಗಿ. ಆಮೇಲೆ ದೇವರಕಾಡಿಗೆ ಹೋಗಿ. ಅಲ್ಲಿಗೆ ಹೋಗಲು ವಾಹನಗಳಿಲ್ಲ. ನೀವು 2 ಕಿ.ಮೀ.ನಷ್ಟು ನಡೆಯಬೇಕಾಗುತ್ತದೆ. ದಾರಿಯಲ್ಲಿ ಕಾಟಿಗಳು ಸಿಕ್ಕರೂ ಸಿಗಬಹುದು. ಎಚ್ಚರ’ ಎಂದರು. ನಾನು ನನ್ನ ಮನೆಯಿಂದ ಪೇಟೆಗೆ ಹೋಗಬೇಕಾದರೆ ಆನೆ ನಡೆಯುವ ದಾರಿಯಲ್ಲಿ 8 ಕಿ.ಮೀ. ನಡೆಯುವವಳಿಗೆ 2 ಕಿ.ಮೀ. ನಡೆಯುವುದೇನು ಮಹಾ ಎಂದುಕೊಂಡು ಜೀಪು ಇಳಿದು ಅವರು ತೋರಿಸಿದ ದಾರಿಯಲ್ಲಿ ನಡೆಯತೊಡಗಿದೆ.
ದಟ್ಟ ಕಾಡಿನ ಹಾದಿ ಅದು. ಮನುಷ್ಯರ ಸುಳಿವಿಲ್ಲ. ಒಂದೂ ಮನೆಯಿಲ್ಲ. ಹಾಗೇ ಮುಂದೆ ಸಾಗುತ್ತಿದ್ದಾಗ ಒಂದು ಸ್ಕೂಟಿ ಬಂತು. ಅದನ್ನು ನಿಲ್ಲಿಸಿ ಕೇಳಿದೆ, ‘ಅಪ್ಪೇಂದ್ರಿಯಪ್ಪ ದೇವಸ್ಥಾನಕ್ಕೆ ಪೂಜೆ ಮಾಡುವ ಭಟ್ಟರ ಮನೆ ಎಲ್ಲಿ ಬರುತ್ತದೆ?’ ಆ ಸವಾರ ಹೇಳಿದ, ‘ಇಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗುವಾಗ ಮಾರ್ಗದಿಂದ ಎಡಕ್ಕೆ ಕೆಳಗೆ ಇಳಿಯುವ ಒಂದು ರಸ್ತೆ ಕಾಣುತ್ತದೆ. ಅದರಲ್ಲಿ ಸಾಗಿದರೆ ಭಟ್ಟರ ಮನೆ ಸಿಗುತ್ತದೆ’. ನಾನು ನಡೆಯುತ್ತಾ ಹೋಗುತ್ತಿರಬೇಕಾದರೆ ಒಂದು ಕಡೆ ಎಡಗಡೆಗೆ ಇಳಿಯುವ ರಸ್ತೆ ಕಾಣಿಸಿತು. ಅದರಲ್ಲೇ ಇಳಿಯುತ್ತಾ ಹೋದೆ. ಹೋದಷ್ಟೂ ಮುಗಿಯದ ರಸ್ತೆ. ಇಲ್ಲಿ ಕಾಡುಗಳಿಲ್ಲ ಬದಲಾಗಿ ರಸ್ತೆಯ ಎರಡು ಬದಿಯಲ್ಲೂ ಕಾಫಿ ತೋಟ. ನಡೆದೂ ನಡೆದೂ ಆಯಾಸವಾಯಿತು. ಕೊನೆಗೂ ರಸ್ತೆ ಅಂತ್ಯ ಕಂಡಿತು. ಅಲ್ಲಿ ಒಂದೇ ಒಂದು ಮನೆಯಿರಲಿಲ್ಲ. ಮೇಲೆ ನೋಡಿದರೂ ಬೆಟ್ಟ. ಕೆಳಗೆ ನೋಡಿದರೂ ಬೆಟ್ಟ. ಬೆಟ್ಟದಲ್ಲಿ ಹಣ್ಣು ತುಂಬಿದ ಕಾಫಿ ಗಿಡಗಳ ನಡುನಡುವೆ ದೊಡ್ಡ ದೊಡ್ಡ ಮರಗಳು. ಎಲ್ಲಿಯೆಂದು ಭಟ್ಟರ ಮನೆ ಹುಡುಕುವುದು ಎಂದು ನಾನು ಚಿಂತಾಕ್ರಾಂತಳಾಗಿ ಯೋಚಿಸುತ್ತಿರುವಾಗ ಬೆಟ್ಟದ ಮೇಲ್ಭಾಗದಲ್ಲಿ ಹೆಣ್ಣು ಧ್ವನಿಗಳು ಮಾತಾಡುತ್ತಿರುವುದು ಕೇಳಿಸಿತು. ಕೇಳಿಸಿದ್ದಷ್ಟೆ ಕಾಣುತ್ತಿರಲಿಲ್ಲ. ನಾನು ಅಲ್ಲಿಗೆ ಹೋಗುವ ಪ್ರಯತ್ನ ಮಾಡಿದೆ. ಆ ಬೆಟ್ಟ ಎಷ್ಟು ಇಳಿಜಾರಾಗಿತ್ತೆಂದರೆ ನನಗೆ ಅದನ್ನು ಏರಲು ಸಾಧ್ಯವಾಗಲಿಲ್ಲ. ಕಾಫಿ ಕೊಯ್ಯುವವರು ಹೇಗೆ ಈ ಬೆಟ್ಟ ಹತ್ತಿ ಕಾಫಿ ಕೊಯ್ಯುತ್ತಾರಪ್ಪಾ ಎಂಬ ಪ್ರಶ್ನೆ ಮನದಲ್ಲಿ ಮೂಡಿತು. ನಾನು ನಿಂತಲ್ಲಿಂದಲೇ ‘ಕೂ’ ಎಂದು ಕೂಗು ಹಾಕಿದೆ. ಆ ಕಡೆಯಿಂದ ‘ಓ! ಯಾರೂ? ಕಾಫಿ ಕೊಯ್ಯಲು ಬಂದವರಾ’ ಎಂದು ಕೇಳಿದರು. ‘ನನಗೆ ಇಲ್ಲಿ ಇರುವ ಭಟ್ಟರ ಮನೆಗೆ ಹೋಗಬೇಕು. ದಾರಿ ಯಾವುದು? ಹೇಗೆ ಸಾಗಬೇಕು’ ಎಂದು ಕೇಳಿದೆ. ‘ಬಂದ ದಾರಿಯಲ್ಲೇ ಹಿಂದಿರುಗಿ. ಮಾರ್ಗದಲ್ಲೇ ಮುಂದುವರಿಯಿರಿ. ಚೂರು ಮುಂದೆ ಹೋದಾಗ ಎಡಕ್ಕೆ ಕೆಳಗೆ ಇಳಿಯುವ ರಸ್ತೆ ಕಾಣುತ್ತದೆ. ಅದರಲ್ಲಿ ಹೋದರೆ ಭಟ್ಟರ ಮನೆ ಸಿಗುತ್ತದೆ’ ಎಂದರು. ನಾನು ತಿರುಗಿ ಹಿಂದೆ ಬಂದ ಮಾರ್ಗದಲ್ಲೇ ಮುಂದುವರಿದೆ. ಆಗ ನನ್ನೆದುರು ಸುಮಾರು 50ರ ಆಸುಪಾಸಿನ ಹೆಂಗಸೊಬ್ಬಳು ನಡೆದು ಬರುತ್ತಿರುವುದು ಕಾಣಿಸಿತು. ನನ್ನನ್ನು ನೋಡಿ ಅವಳು ಮಾತಿಗೆ ತೊಡಗಿದಳು. ಅವಳು ಬೆಟ್ಟದ ತುದಿಯಲ್ಲಿರುವ ಅವಳ ತೋಟಕ್ಕೆ ನೀರು ಹಾಯಿಸಲು ಹೋದವಳಂತೆ. 2018ರ ಕೊಡಗು ಭೂಕುಸಿತದಲ್ಲಿ ಅವಳ ಭಾವ, ಭಾವನ ಮೂವರು ಗಂಡುಮಕ್ಕಳು ನೆಲಸಮಾಧಿ ಆಗಿದ್ದರಂತೆ. ಅಲ್ಲಿದ್ದ ಎಲ್ಲರ ಮನೆಯೂ ಕೊಚ್ಚಿಹೋಗಿತ್ತಂತೆ. ಸರಕಾರ ಅಲ್ಲೇ ಸ್ವಲ್ಪ ಮುಂದಕ್ಕೆ ಅವರಿಗೆಲ್ಲ ಸಾಲಲ್ಲಿ ಮನೆ ಕಟ್ಟಿಸಿ ಕೊಟ್ಟಿದೆಯಂತೆ. ಒಟ್ಟು 80 ಮನೆ ಇದೆಯಂತೆ. ಆದರೆ ಅವಳಿಗೆ ಅಲ್ಲಿ ಇರುವುದು ಬೇಡವಂತೆ. ಯಾಕೆಂದರೆ ಅವಳು ಮೊದಲು ಇದ್ದದ್ದು ಒಂಟಿ ಮನೆಯಲ್ಲಂತೆ. ಈಗ ಹತ್ತಿರ ಹತ್ತಿರ ಮನೆಯಂತೆ. ಎಷ್ಟು ಹತ್ತಿರವೆಂದರೆ ಒಂದು ಮನೆಯಲ್ಲಿ ಬೇಯಿಸಿದ ಅಡುಗೆಯ ಪರಿಮಳ ಪಕ್ಕದ ಮನೆಯವರ ಮೂಗಿಗೂ ಬಡಿಯುತ್ತದಂತೆ. ಮನೆಯಲ್ಲಿ ಪಿಸಪಿಸನೆ ಮಾತಾಡಿದರೂ ಪಕ್ಕದ ಮನೆಯವರಿಗೆ ಕೇಳಿಸುತ್ತದಂತೆ.
ಮಾತಾಡುತ್ತಾ ಅವಳು ‘ಈಗ ಇರುವ ಮನೆಯಲ್ಲಿ ಚೂರೂ ಸಾತಂತ್ರ್ಯವೇ ಇಲ್ಲ’ ಎಂದು ವ್ಯಥೆ ಪಟ್ಟಳು. ‘ಮೊದಲಿದ್ದ ಜಾಗದಲ್ಲೇ ಮನೆ ಕಟ್ಟಿಸಿಕೊಡಲು ಸಂಬಂಧಪಟ್ಟವರಿಗೆ ಹೇಳಬೇಕಿತ್ತು’ ಎಂದೆ ನಾನು. ‘ಹೇಳಿದೆವು. ಆದರೆ ಅಲ್ಲಿ ಮನೆ ಕಟ್ಟಲು ಸರಕಾರದ ಪರ್ಮಿಶನ್ ಇಲ್ಲ. ಮುಂದೆಯೂ ಬೆಟ್ಟ ಕುಸಿಯುವ ಸಾಧ್ಯತೆ ಇದೆಯಂತೆ. ನಾವು ನಮ್ಮ ತೋಟವನ್ನಷ್ಟೇ ಇಟ್ಟುಕೊಳ್ಳಬಹುದು’ ಎಂದಳು. ನನಗೆ ಸರಕಾರ ಸಾಲಲ್ಲಿ ಕಟ್ಟಿಸಿದ ಅವರ ಮನೆಯನ್ನೆಲ್ಲ ನೋಡುವ ಬಯಕೆಯಾಯಿತು. ಆದರೆ ಅವಳ ಜೊತೆ ಮನೆ ನೋಡಲು ಹೋದರೆ ನಾನು ಬಂದ ಕೆಲಸ ಆಗಬೇಕಲ್ಲ? ‘ನಾನು ದೇವರಕಾಡು ನೋಡಲು ಬಂದಿದ್ದೇನೆ. ದೇವರಕಾಡಿನ ದೇವರಿಗೆ ಪೂಜೆ ಮಾಡುವ ಭಟ್ಟರ ಮನೆಗೆ ಮೊದಲು ಹೋಗಬೇಕು. ಭಟ್ಟರ ಮನೆ ಎಲ್ಲಿದೆ?’ ಎಂದು ಕೇಳಿದೆ. ಅವಳು ಅಲ್ಲೇ ಎಡಗಡೆಗೆ ಕೆಳಗೆ ಇಳಿದು ಹೋಗುವ ದಾರಿ ಕಡೆ ಕೈ ತೋರಿಸಿ, ‘ಇದೇ ದಾರಿಯಲ್ಲಿ ಮುಂದುವರಿದರೆ ಭಟ್ಟರ ಮನೆ ಸಿಗುತ್ತದೆ. ಅಲ್ಲಿ ಎರಡು ದೈತ್ಯ ನಾಯಿಗಳಿವೆ. ಕಚ್ಚುವ ನಾಯಿಯನ್ನು ಗೂಡಲ್ಲಿ ಹಾಕುತ್ತಾರೆ. ಇನ್ನೊಂದು ಹೊರಗೆ ಅಡ್ಡಾಡಿಕೊಂಡು ಇರುತ್ತದೆ. ಯಾವುದಕ್ಕೂ ಕೋಲು ಹಿಡಿದುಕೊಂಡು ಹೋಗಿ. ನಾನು ನಿಮ್ಮ ಜೊತೆ ಬರುತ್ತಿದ್ದೆ. ಆದರೆ ನನಗೆ ನಾಯಿಯ ಹೆದರಿಕೆ’ ಎಂದಳು. ವಾಸ್ತವ ಏನೆಂದರೆ ಅಲ್ಲಿ ಮಾರ್ಗದಿಂದ ಎರಡು ಕಡೆ ಎಡಗಡೆಗೆ ಇಳಿದು ಹೋಗುವ ರಸ್ತೆ ಇತ್ತು. ಮೊದಲು ಸಿಗುವ ರಸ್ತೆ ಬಿಟ್ಟು ಎರಡನೆಯ ಸಾರಿ ಸಿಗುವ ಎಡಗಡೆಗೆ ಇಳಿಯುವ ರಸ್ತೆಯಲ್ಲಿ ಹೋಗಬೇಕಿತ್ತು. ಸ್ಕೂಟಿ ಸವಾರ ಕೊಟ್ಟ ಮಾಹಿತಿ ತಪ್ಪೋ ಅಥವಾ ನಾನು ಗ್ರಹಿಸಿದ್ದು ತಪ್ಪೋ ಗೊತ್ತಾಗಲಿಲ್ಲ. ಈಗಲಾದರೂ ದಾರಿ ಸಿಕ್ಕಿತಲ್ಲ ಎಂದು ಅಂದುಕೊಂಡು ನಾನು ಅಲ್ಲಿ ಬಿದ್ದಿರುವ ಸಣ್ಣ ಕೋಲನ್ನು ಹಿಡಿದೆ. ‘ಓ ಇದು ಸಾಲುವುದಿಲ್ಲ. ದೊಡ್ಡ ಕೋಲನ್ನು ಹಿಡಿದುಕೊಳ್ಳಿ’ ಎಂದು ಹೇಳಿದಳು. ನಾನು ಗಿಡದ ದೊಡ್ಡ ಗೆಲ್ಲೊಂದನ್ನು ಮುರಿದು ಸೊಪ್ಪನ್ನೆಲ್ಲ ಸವರಿ, ಕೋಲು ಮಾಡಿ ನಡೆಯುತ್ತಾ ಹೋದೆ. ಹಳೆಕಾಲದ ಸಣ್ಣ ಹಂಚಿನ ಮನೆಯೆದುರು ನಿಂತೆ. ನನ್ನ ಸೊಂಟದೆತ್ತರದ ನಾಯಿ ನನ್ನತ್ತಲೇ ಬಂತು. ಇದ್ದ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಕೋಲು ಮೇಲೆತ್ತಿ ‘ಭಟ್ರೇ’ ಎಂದು ಕರೆದೆ. 40ರ ಆಸುಪಾಸಿನ ತರುಣರೊಬ್ಬರು ಹೊರಗೆ ಬಂದು ಏನು ಬೇಕು ಎಂದು ಕೇಳಿದರು. ನಾನು ಬಂದ ಉದ್ದೇಶ ಹೇಳಿದೆ. ಅವರು ದೇವರಕಾಡಿನ ದೇವರಿಗೆ ಪೂಜೆ ಮಾಡುವ ಅರ್ಚಕರಾಗಿದ್ದರು. ಅಷ್ಟರಲ್ಲಿ ವಯಸ್ಸಾದ ಹೆಂಗಸೊಬ್ಬರು ಬಂದು ‘ಮಜ್ಜಿಗೆ ಬೇಕಾ’ ಎಂದು ವಿಚಾರಿಸಿದರು. ನಾನು ‘ಬೇಕು’ ಎಂದೆ. ಅವರು ಅರ್ಚಕರ ತಾಯಿ ಎಂಬುದು ಗೊತ್ತಾಯಿತು. ಮಜ್ಜಿಗೆ ಕುಡಿಯುತ್ತಿರಬೇಕಾದರೆ ‘ನಿಮಗೆ ಊಟ ಆಗಿದಾ?’ ಕೇಳಿದರು. ಹೊಟ್ಟೆ ಹಸಿವೆಯಿಂದ ಚುರುಗುಟ್ಟುತ್ತಿತ್ತು. ‘ಆಗಿಲ್ಲ’ ಹೇಳಿದೆ. ‘ಹಾಗಾದರೆ ಮೊದಲು ಊಟ ಮಾಡಿ. ನಂತರ ಮಾತನಾಡೋಣ’ ಎನ್ನುತ್ತಾ ನಾನು ಇರುವಲ್ಲಿಗೇ ಒಂದು ಕುರ್ಚಿ ತಂದು ಕೊಟ್ಟರು. ಅರ್ಚಕರ ಹತ್ತಿರ ಅನ್ನ ಬಡಿಸಲು ಹೇಳಿದರು. ಅವರು ಒಂದು ಬಟ್ಟಲು ತುಂಬ ಗೋಪುರದಂತೆ ಅನ್ನ ಹಾಕಿ ತಂದರು. ‘ಅಷ್ಟು ಬೇಡ. ಅದರ ಅರ್ಧ ಸಾಕು’ ಎಂದೆ. ಅವರು ಅದರ ಕಾಲುಭಾಗ ಮಾತ್ರ ತೆಗೆದು ‘ಇಷ್ಟು ಊಟ ಮಾಡಬಹುದು’ ಎಂದರು. ಅದರ ಮೇಲೆ ಬೂದುಗುಂಬಳದ ಮಜ್ಜಿಗೆ ಹುಳಿ ಸುರಿದರು. ಉಪ್ಪಿನಕಾಯಿ ನೆಂಜಿಕೊಳ್ಳಲು ಕೊಡುತ್ತಾರೇನೋ ಎಂದು ಕಾದೆ. ಕೇಳಲು ಸಂಕೋಚವಾಯಿತು. ನಾನು ಊಟ ಮಾಡಲು ಶುರು ಮಾಡಿದೆ. ಮಜ್ಜಿಗೆಹುಳಿ ಬಹಳ ರುಚಿಯಾಗಿತ್ತು. ಕೊನೆಗೂ ಉಪ್ಪಿನಕಾಯಿ ಬರಲಿಲ್ಲ. ಭಟ್ಟರ ಮನೆಯಲ್ಲಿ ಉಪ್ಪಿನಕಾಯಿ ಏಕೆ ಇರಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ.
ಊಟದ ನಂತರ ಅವರು ದೇವರಕಾಡಿನ ಆಚಾರವಿಚಾರದ ಬಗ್ಗೆ ಮಾತಾಡಿದರು. ‘ನಾನು ದೇವರಕಾಡಿನ ದೇವರಿಗೆ ಪ್ರತೀ ತಿಂಗಳು ಸಂಕ್ರಾಂತಿಯ ನಂತರ ಬರುವ ಮಂಗಳವಾರದಂದು ಪೂಜೆ ಮಾಡಲು ಮಾತ್ರ ಹೋಗುವುದು. ಆಮೇಲೆ ಹೋಗುವುದಿಲ್ಲ. ನಾನು ದಾರಿ ಹೇಳುತ್ತೇನೆ. ನೀವು ಹೋಗಿ ನೋಡಿ’ ಎಂದು ಹೇಳಿದರು. ‘ಅದು ಹಳೆ ದೇವಸ್ಥಾನವಾ?’ ನಾನು ಕೇಳಿದೆ. ‘ಹೌದು. ಅದು ಬಹಳ ಪುರಾತನ ದೇವಸ್ಥಾನ. ಅಲ್ಲಿ ಇರುವ ದೇವರ ಹೆಸರು ಅಪ್ಪೇಂದ್ರಿಯಪ್ಪ. ಅಪ್ಪೇಂದ್ರಿಯಪ್ಪ ಎಂದರೆ ಈಶ್ವರ. ಹಿಂದೆ ಈಶ್ವರ ಬೇಟೆಯಾಡುತ್ತ ಈ ಕಾಡಿಗೆ ಬಂದು ಇಲ್ಲೇ ನೆಲೆ ನಿಂತನಂತೆ. ಈ ಗುಡಿಯನ್ನು ಕಟ್ಟಿಸಿದ್ದು ಕೊಡಗಿನ ದೊರೆ ಚಿಕ್ಕವೀರರಾಜೇಂದ್ರ ಎಂದು ಹೇಳುತ್ತಾರೆ. ಅವನು ರಾತ್ರಿಬೆಳಗಾಗುವುದರೊಳಗೆ ಇದನ್ನು ಕಟ್ಟಿಸಿದನಂತೆ. ದೇವಸ್ಥಾನದ ಜೀರ್ಣೋದ್ಧಾರ ಆಗಿಲ್ಲ. ಅದು ಇದ್ದ ಹಾಗೆಯೇ ಇದೆ. ಅದಕ್ಕೆ ಜಾತ್ರೆ ಸಮಯದಲ್ಲಿ ಸುಣ್ಣಬಣ್ಣ ಕೊಡಲಾಗುತ್ತದೆ. ಅದು ಬಿಟ್ಟರೆ ಬೇರೆ ಏನೂ ನವೀಕರಣ ಮಾಡಲಿಲ್ಲ. ಅಪ್ಪೇಂದ್ರಿಯಪ್ಪ ದೇವಸ್ಥಾನದ ಎದುರು ಇರುವ ರಸ್ತೆಯಲ್ಲಿ ಸಾಗಿದರೆ ಅಪ್ಪೇಂದ್ರಿಯಪ್ಪ ದೇವರಕಾಡು ಸಿಗುತ್ತದೆ. ಈ ದೇವರಕಾಡಿನ ತುದಿಯಲ್ಲಿ ಭದ್ರಕಾಳಿ ಗುಡಿ ಇದೆ. ಅಲ್ಲಿಗೆ ಯಾರೂ ಹೋಗುವ ಹಾಗೆ ಇಲ್ಲ. ಹೆಂಗಸರು ಯಾವತ್ತೂ ಹೋಗಬಾರದು. ನಾನೂ (ಅರ್ಚಕರೂ) ಹೋಗಲಿಕ್ಕೆ ಇಲ್ಲ. ಎರಡು ವರ್ಷಕ್ಕೊಮ್ಮೆ ಆಗುವ ಜಾತ್ರಾ ಸಮಯದಲ್ಲಿ ಇಲ್ಲಿನ ಮೂಲನಿವಾಸಿಗಳು ಮಾತ್ರ ಹೋಗುತ್ತಾರೆ. ಅಂದು ಮೂಲನಿವಾಸಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಭದ್ರಕಾಳಿ ದೇವಿಯ ಪೂಜೆ ಮಾಡಿ ಗುಡಿಯ ಒಳಗೆ ಇರುವ ಜಿಂಕೆಯ ಕೊಂಬನ್ನು ಧರಿಸಿ ನೃತ್ಯ ಮಾಡುತ್ತ ಅಪ್ಪೇಂದ್ರಿಯಪ್ಪ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿಯೂ ನರ್ತನ ಮಾಡುತ್ತಾರೆ. ಇಲ್ಲಿ ನಡೆಯುವ ನೃತ್ಯವನ್ನು ಸಾರ್ವಜನಿಕರು ವೀಕ್ಷಿಸಬಹುದು. ನೃತ್ಯ ಮುಗಿದ ಮೇಲೆ ಜಿಂಕೆಕೊಂಬುಗಳನ್ನು ಮತ್ತೆ ಭದ್ರಕಾಳಿ ಗುಡಿಯಲ್ಲೇ ಇರಿಸಲಾಗುತ್ತದೆ’ ಎಂದರು ಹಾಗೂ ಮನೆ ಮೇಲೆ ಹಾದು ಹೋಗುವ ದೇವಸ್ಥಾನದ ದಾರಿಯನ್ನು ತೋರಿಸಿದರು.
ನಾನು ದೇವರಕಾಡಿನ ದೇವರಾದ ಅಪ್ಪೇಂದ್ರಿಯಪ್ಪನ ದರ್ಶನ ಪಡೆಯಲು ಭಟ್ಟರು ಸೂಚಿಸಿದ ರಸ್ತೆಯಲ್ಲಿ ಸಾಗಿದೆ. ಭಟ್ಟರ ಮನೆಯಿಂದ ಕಾಲು ಕಿ.ಮೀ.ನಷ್ಟು ನಡೆದರೆ ಈ ದೇವರ ಗುಡಿ ಸಿಗುತ್ತದೆ. ಒಬ್ಬನೇ ಒಳ ಹೋಗಬಹುದಾದಷ್ಟು ಅವಕಾಶವಿರುವ ಸಪೂರಕ್ಕೆ ಎತ್ತರವಾಗಿ ಇರುವ ಮಣ್ಣಿನ ದೇವಸ್ಥಾನ ಅದು. ದೇವಸ್ಥಾನದ ನಾಲ್ಕು ಸುತ್ತಲೂ ಗೋಡೆಯ ಮೇಲೆ ಗಂಡುಹೆಣ್ಣಿನ, ಆನೆ, ಹುಲಿ, ಕಾಡುಹಂದಿ ಮುಂತಾದ ವನ್ಯಪ್ರಾಣಿಗಳ ಚಿತ್ರವನ್ನು ತುಂಬ ಕಲಾತ್ಮಕವಾಗಿ ಬಿಡಿಸಲಾಗಿದೆ. ದೇವಸ್ಥಾನದ ಪ್ರಾಕಾರದಲ್ಲಿ ಪ್ರಾಣಿಗಳ ಮಣ್ಣಿನ ಪ್ರತಿಕೃತಿಗಳೂ ಇದ್ದವು. ಬೀಗ ಹಾಕಿದ್ದರಿಂದ ಅಪ್ಪೇಂದ್ರಿಯಪ್ಪನ ದರ್ಶನವಾಗಲಿಲ್ಲ. ಹೊರಗಿನಿಂದಲೇ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದೆ. ದೇವರಕಾಡು ಹುಡುಕುತ್ತಾ ದೇವಸ್ಥಾನದ ಎದುರು ಇರುವ ದಾರಿಯಲ್ಲಿ ನಡೆಯುತ್ತ ಸಾಗಿದಾಗ ಒಂದು ಕಡೆ ಕಾಡಿನ ಬದಿಯಲ್ಲಿ ದೊಡ್ಡ ಕಬ್ಬಿಣದ ಗೇಟು ಕಂಡಿತು. ಗೇಟಿನ ಮೇಲ್ಭಾಗದಲ್ಲಿ ಕಮಾನಿನಾಕಾರದಲ್ಲಿ ‘ಅಪ್ಪೇಂದ್ರಿಯಪ್ಪ ದೇವರಕಾಡು’ ಎಂದು ಬರೆದಿತ್ತು. ನಾನು ಹುಡುಕುತ್ತಿದ್ದ ದೇವರಕಾಡು ಕಣ್ಣಮುಂದೆಯೇ ಬಂದು ನಿಂತಿತ್ತು. ಸಂತಸದಿಂದ ಕುಣಿದಾಡುವಂತಾಯಿತು. ಗೇಟು ತೆರೆದೇ ಇತ್ತು. ಒಳಗೆ ಕಾಲಿಟ್ಟೆ. ಸೊಳ್ಳೆಯೂ ಒಳ ಹೋಗಲು ಸಾಧ್ಯವಿಲ್ಲದಂತಹ ಕಾಡು ಅದು. ಮೇಲೇರಲು ದಾರಿಯೇ ಇರಲಿಲ್ಲ. ದಾರಿ ಮಾಡಿಕೊಂಡು ಮೇಲೇರಲು ಸಾಧ್ಯವೂ ಇರಲಿಲ್ಲ. ಇನ್ನು ನಾನು ಮನೆದಾರಿ ಹಿಡಿಯುವುದೇ ಸರಿ ಎಂದು ಮಾರ್ಗಕ್ಕೆ ಕಾಲಿಟ್ಟೆ. ಊರಿನವರೊಬ್ಬರು ಅದೇ ದಾರಿಯಾಗಿ ತಮ್ಮ ಮನೆಗೆ ಹೋಗುತ್ತಿದ್ದವರು ನನ್ನಲ್ಲಿ, ‘ನೀವು ಇಲ್ಲಿಗೆ ಒಬ್ಬರೇ ಬಂದಿರಾ? ಇಲ್ಲಿ ಕಾಟಿಗಳಿವೆ. ಈ ತೆರೆದ ಗೇಟಿನಿಂದಲೇ ಅವು ಕೆಳಗೆ ಇಳಿದು ಬರುತ್ತವೆ, ಹುಷಾರು’ ಎಂದರು.
ಆಗಲೇ ಗಂಟೆ ಐದೂವರೆಯಾಗಿತ್ತು. ಇನ್ನು 2 ಕಿ.ಮೀ. ನಡೆಯಬೇಕು. ಕಾಟಕೇರಿಯಲ್ಲಿ ನನ್ನೂರಿಗೆ ಹೋಗುವ ಬಸ್ಸು ನಿಲ್ಲಿಸುವುದಿಲ್ಲ. ಅಪರಿಚಿತ ಪರಿಸರ. ಕತ್ತಲೆ ಬೇರೆ ಆಗುತ್ತಿದೆ. ಊರು ಸೇರುವುದು ಹೇಗೋ ಎಂದು ಚಿಂತಿಸುತ್ತ ಆತುರಾತುರವಾಗಿ ನಡೆಯತೊಡಗಿದೆ. ಹಿಂದಿನಿಂದ ಒಂದು ಕಾರು ಬಂದು ನನ್ನೆದುರು ನಿಂತಿತು. ನಾನು ಹಿಂದೆಮುಂದೆ ನೋಡದೆ ‘ಕಾಟಕೇರಿ ಮೈನ್‌ರೋಡ್’ ಎನ್ನುತ್ತ ಕಾರು ಹತ್ತಿದೆ. ಹತ್ತಿಯೇನೋ ಬಿಟ್ಟೆ. ಕಾಟಿಯ ಭಯ ಆಗದವಳಿಗೆ ಈಗ ಒಳಗಿರುವವರನ್ನು ನೋಡಿ ಭಯವಾಗತೊಡಗಿತು. ಅವರೆಲ್ಲರೂ ಯುವಕರು. ಒಬ್ಬನ ಬಾಯಿಂದ ಸಿಗರೇಟ್ ವಾಸನೆ ಬರುತ್ತಿತ್ತು. ಇನ್ನೊಬ್ಬ ಹೆಂಡದ ಅಮಲಿನಲ್ಲಿದ್ದ. ಸ್ವಲ್ಪ ಸರಿ ಇದ್ದದ್ದು ಡ್ರೈವರ್ ಮಾತ್ರ. ನನಗೆ ಎದೆ ಹೊಡೆದುಕೊಳ್ಳತೊಡಗಿತು. ಅಪ್ಪೇಂದ್ರಿಯಪ್ಪ ದೇವರೇ ಕಾಪಾಡು ಎಂದು ಮನದಲ್ಲೇ ಪ್ರಾರ್ಥಿಸಿದೆ. ‘ನಾವು ಮಡಿಕೇರಿಗೆ ಹೋಗುವವರು. ಇಲ್ಲಿ ಕಟ್ಟಡ ಕಟ್ಟುವ ಕೆಲಸಕ್ಕೆ ಬಂದಿದ್ದೇವೆ’ ಎಂದರು. ನನಗೆ ಚೂರು ಧೈರ್ಯ ಬಂದು ‘ನಾನು ಪತ್ರಕರ್ತೆ. ಪತ್ರಿಕೆಯೊಂದಕ್ಕೆ ದೇವರಕಾಡಿನ ವರದಿ ಮಾಡಲು ಬಂದಿದ್ದೇನೆ. ಕಾಟಕೇರಿಯಲ್ಲಿ ನಮ್ಮೂರಿಗೆ ಹೋಗುವ ಬಸ್ಸುಗಳು ನಿಲ್ಲುವುದಿಲ್ಲ. ನಾನೂ ಮಡಿಕೇರಿಗೆ ಬರುತ್ತೇನೆ’ ಎಂದೆ. ನಾನು ರೈತಮಹಿಳೆ ಎಂದರೆ ನನ್ನನ್ನು ಮೋಸಗೊಳಿಸುವವರು ಇರುತ್ತಾರೆ. ಪತ್ರಕರ್ತೆ ಎಂದರೆ ಹೆದರುತ್ತಾರೆ ಎಂಬುದು ನಾನು ಅನುಭವದಿಂದ ಕಂಡುಕೊಂಡ ಸತ್ಯ. ಈಗಲೂ ಹಾಗೆಯೇ ಆಯಿತು. ಅವರು ಮುಂದೆ ಮಾತು ಬೆಳೆಸದೆ ಸುಮ್ಮನಿದ್ದರು. ನನ್ನನ್ನು ಮಡಿಕೇರಿ ಬಸ್‌ಸ್ಟ್ಯಾಂಡ್‌ನಲ್ಲಿ ಇಳಿಸಿ ಹೊರಟುಹೋದರು.
ಆರೂವರೆ ಗಂಟೆಗೆೆ ಮಂಗಳೂರಿಗೆ ಹೋಗುವ ಬಸ್ ಬಂತು. ಅದರಲ್ಲಿ ಹತ್ತಿ ಕಲ್ಲುಗುಂಡಿಯಲ್ಲಿ ಇಳಿದು ಮಬ್ಬುಗತ್ತಲಿನಲ್ಲಿ ನನ್ನ ಮನೆ ಕಡೆಗೆ ಸಾಗುತ್ತಿರುವಾಗ ಕಲ್ಲು ಹೊತ್ತ ಒಂದು ಲಾರಿ ಊರ ಕಡೆಗೆ ಹೋಗುತ್ತಿರುವುದು ಕಾಣಿಸಿತು. ಇದನ್ನು ಬಿಟ್ಟರೆ ಮನೆಗೆ ಹೋಗುವ ಬೇರೆ ವಾಹನ ಸಿಗುವುದಿಲ್ಲ ಎಂದು ನಾನು ಅದನ್ನು ಏರಿ ದೇವರಕಾಡಿನ ದೇವರನ್ನು ನೆನೆಯುತ್ತಾ ಮನೆ ಸೇರಿದೆ.