×
Ad

ಕೋರ್ಟ್‌ಗಳಲ್ಲಿ ಕಾನೂನು ಹೋರಾಟಕ್ಕಾಗಿ ಕೇಂದ್ರಕ್ಕೆ 10 ವರ್ಷಗಳಲ್ಲಿ 400 ಕೋಟಿ ರೂ.ಗೂ ಅಧಿಕ ವೆಚ್ಚ!

Update: 2025-02-26 21:58 IST

ಸಾಂದರ್ಭಿಕ ಚಿತ್ರ | PC : Meta AI

ಹೊಸದಿಲ್ಲಿ: ಕಳೆದ 10 ವರ್ಷಗಳಲ್ಲಿ ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಕಾನೂನು ಹೋರಾಟ ನಡೆಸಲು ಕೇಂದ್ರ ಸರಕಾರವು 400 ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಿದೆಯೆಂಬುದನ್ನು ಅಧಿಕೃತ ದತ್ತಾಂಶಗಳು ತೋರಿಸಿಕೊಟ್ಟಿವೆ.

2023-24ರ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ಮೊಕದ್ದಮೆಗಳಿಗಾಗಿಯೇ 66 ಕೋಟಿ ರೂ. ವೆಚ್ಚ ಮಾಡಿದ್ದು, ಇದು ಹಿಂದಿನ ವಿತ್ತೀಯ ವರ್ಷಕ್ಕಿಂತ 9 ಕೋಟಿ ರೂ.ಗೂ ಅಧಿಕವಾಗಿದೆ.

2014-15ನೇ ಸಾಲಿನಿಂದೀಚೆಗೆ ಕೋವಿಡ್ ಸಾಂಕ್ರಾಮಿಕ ಹಾವಳಿಗೆ ಸಾಕ್ಷಿಯಾದ ಎರಡು ವಿತ್ತೀಯ ವರ್ಷಗಳನ್ನು ಹೊರತುಪಡಿಸಿದಲ್ಲಿ ಮೊಕದ್ದಮೆಗಳಿಗಾಗಿ ತಗಲಿದ ವೆಚ್ಚದಲ್ಲಿ ಸತತ ಏರಿಕೆಯಾಗಿರುವುದು ಕೇಂದ್ರ ಸರಕಾರವು ಹಾಲಿ ಬಜೆಟ್ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಮಂಡಿಸಿದ ದತ್ತಾಂಶಗಳಿಂದ ತಿಳಿದುಬಂದಿದೆ.

2014-15ನೇ ಸಾಲಿನಲ್ಲಿ ದಾವೆಗಳಿಗಾಗಿ ಕೇಂದ್ರ ಸರಕಾರಕ್ಕೆ ತಗಲಿದ ವೆಚ್ಚವು 26.64 ಕೋಟಿ ರೂ. ಇದ್ದುದು, 2015-16ನೇ ಸಾಲಿನಲ್ಲಿ ಅದು 37.43 ಕೋಟಿ ರೂ. ಆಗಿತ್ತು.

2014-15 ಹಾಗೂ 2023-24ರ ವಿತ್ತೀಯ ವರ್ಷಗಳ ನಡುವೆ ಕೇಂದ್ರ ಸರಕಾರವು ದಾವೆಗಳಿಗಾಗಿ 409 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವ್ಯಯಿಸಿತ್ತು.

ಕೇಂದ್ರ ಸರಕಾರವು ಕಕ್ಷಿದಾರನಾಗಿರುವಂತಹ ಸುಮಾರು 7 ಲಕ್ಷ ಪ್ರಕರಣಗಳು ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿವೆಯೆಂದು ಕಾನೂನು ಸಚಿವಾಲಯವು ಈ ತಿಂಗಳ ಆರಂಭದಲ್ಲಿ ರಾಜ್ಯಸಭಾದಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ಅವುಗಳ ಪೈಕಿ 1.9 ಲಕ್ಷ ಪ್ರಕರಣಗಳಲ್ಲಿ ಸ್ವತಃ ಕಾನೂನು ಸಚಿವಾಲಯವು ಕಕ್ಷಿದಾರನಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸದನಕ್ಕೆ ಮಾಹಿತಿ ನೀಡಿದ್ದರು. ನ್ಯಾಯಾಲಯದಲ್ಲಿ ದೀರ್ಘಸಮಯದಿಂದ ಬಾಕಿಯಿರುವ ಪ್ರಕರಣಗಳ ತ್ವರಿತ ಪರಿಹಾರಕ್ಕಾಗಿ ರಾಷ್ಟ್ರೀಯ ದಾವೆ ನೀತಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಶ್ರಮಿಸುತ್ತದೆಯೆಂದು ಮೇಘವಾಲ್ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News