×
Ad

ಘಾಝಿಯಾಬಾದ್ | ಬಾಂಗ್ಲಾದೇಶಿಗರು ಎಂದು ಆರೋಪಿಸಿ, ಸ್ಥಳೀಯರ ಗುಡಿಸಲುಗಳಿಗೆ ಬೆಂಕಿಯಿಟ್ಟ ಸಂಘಪರಿವಾರದ ಕಾರ್ಯಕರ್ತರು!

Update: 2024-08-10 20:33 IST

PC : X 

ಘಾಝಿಯಾಬಾದ್: ಬಾಂಗ್ಲಾದೇಶಿಗರು ಎಂದು ಆರೋಪಿಸಿ, ಘಾಝಿಯಾಬಾದ್ ನ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಮೇಲೆ ಹಿಂದೂ ರಕ್ಷಾ ದಳದ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಈ ಗುಂಪು, ಅವರನ್ನೆಲ್ಲ ದೊಣ್ಣೆಗಳಿಂದ ಥಳಿಸಿ, ಅವರ ಗುಡಿಸಲುಗಳನ್ನು ಧ್ವಂಸಗೊಳಿಸಿದೆ. ಇದಾದ ನಂತರ, ಅವರಿಗೆ ಸಂಬಂಧಿಸಿದ ವಸ್ತುಗಳಿಗೆ ಬೆಂಕಿ ಹಚ್ಚಿದೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿನ ಹಿಂದೂ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಬೇಕು ಎಂದು ಭಾರತ ಸರಕಾರಕ್ಕೆ ಹಿಂದೂ ರಕ್ಷಾ ದಳ 24 ಗಂಟೆಗಳ ಗಡುವು ನೀಡಿದ ನಂತರ ಘಾಝಿಯಾಬಾದ್ ನ ಕೊಳೆಗೇರಿಗಳ ನಿವಾಸಿಗಳ ಮೇಲೆ ಈ ದಾಳಿ ನಡೆದಿದೆ.

ಶನಿವಾರ ಮಧ್ಯಾಹ್ನ ಹಿಂದೂ ರಕ್ಷಾ ದಳ ಕಾರ್ಯಕರ್ತರು ಕವಿನಗರ್ ನಲ್ಲಿರುವ ಕೊಳೆಗೇರಿ ನಿವಾಸಿಗಳನ್ನು ಗುರಿಯಾಗಿಸಿ, ಕೆಲವು ಗುಡಿಸಲುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅಲ್ಲಿಂದ ಜನರನ್ನು ತೆರವುಗೊಳಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯಲ್ಲಿ ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷ ಭೂಪೇಂದ್ರ ಚೌಧರಿ ಹಾಗೂ ಇನ್ನಿತರ 15-20 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಎಫ್‌ ಐ ಆರ್‌ ಪ್ರಕಾರ ಚೌಧರಿ ಮತ್ತು ಆತನ ಸಹಚರರು ಕೊಳೆಗೇರಿ ನಿವಾಸಿಗಳ ಮೇಲೆ ಹಲ್ಲೆ ನಡೆಸಿ ಅವರ ಆಸ್ತಿಯನ್ನು ನಾಶಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕೊಳಗೇರಿಯಲ್ಲಿದ್ದ ನಿವಾಸಿಗಳು ಬಾಂಗ್ಲಾದೇಶದವರಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಜನರು ಉತ್ತರ ಪ್ರದೇಶದ ಶಹಜಹಾನ್‌ಪುರದವರು ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಳಗೇರಿ ನಿವಾಸಿಗಳ ಮೇಲಿನ ಹಲ್ಲೆಗೆ ಚೌಧರಿ ಕುಮ್ಮಕ್ಕು ನೀಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಆಗಸ್ಟ್ 7 ರಂದು ವೀಡಿಯೊ ಬಿಡುಗಡೆ ಮಾಡಿದ ಚೌಧರಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ವರದಿಯಾದ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಭಾರತದಲ್ಲಿ ಬಾಂಗ್ಲಾದೇಶಿಯರ ವಿರುದ್ಧ ಇದೇ ರೀತಿಯ ದೌರ್ಜನ್ಯ ಮಾಡುವ ಬೆದರಿಕೆ ಹಾಕಿದ್ದನು. ಬಾಂಗ್ಲಾದ ಪರಿಸ್ಥಿತಿಯ ಬಗ್ಗೆ ಜಾಗತಿಕ ಮೌನವನ್ನು ಖಂಡಿಸಿದ ಚೌಧರಿ, ಹಿಂಸಾಚಾರ ಮುಂದುವರಿದರೆ ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶಿಯರನ್ನು ಗುರಿಯಿಟ್ಟು ಹಲ್ಲೆ ಮಾಡುತ್ತೇವೆ ಎಂದು ವೀಡಿಯೋದಲ್ಲಿ ಹೇಳಿದ್ದನು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News