ದಿಲ್ಲಿ ಗಲಭೆ: ಖುಲಾಸೆಗೊಂಡ 97 ಪ್ರಕರಣಗಳ ಪೈಕಿ 17ರಲ್ಲಿ ‘ಕಲ್ಪಿತ’ ಸಾಕ್ಷ್ಯಗಳನ್ನು ಬೆಟ್ಟು ಮಾಡಿದ ನ್ಯಾಯಾಲಯಗಳು
ಪೋಲಿಸರಿಗೆ ತೀವ್ರ ತರಾಟೆ
File Photo: PTI
ಹೊಸದಿಲ್ಲಿ: ದಿಲ್ಲಿ ಗಲಭೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೋಲಿಸ್ ತನಿಖೆಯಲ್ಲಿನ ಗಂಭೀರ ನ್ಯೂನತೆಗಳನ್ನು ನ್ಯಾಯಾಲಯಗಳು ಪದೇ ಪದೇ ಪ್ರಶ್ನಿಸಿವೆ. ಖುಲಾಸೆಗೊಂಡಿರುವ 97 ಪ್ರಕರಣಗಳ ಪೈಕಿ 93 ಪ್ರಕರಣಗಳ ದಾಖಲೆಗಳು indianexpress.com ಸುದ್ದಿಸಂಸ್ಥೆಗೆ ಲಭ್ಯವಾಗಿವೆ. ಈ ಪೈಕಿ ಕನಿಷ್ಠ 17 ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಗಳು, ಕಾಲ್ಪನಿಕ ಸಾಕ್ಷ್ಯಗಳು, ಪೋಲಿಸರ ನಿರ್ದೇಶನ/ಆದೇಶದ ಮೇರೆಗೆ ನೀಡಲಾದ ಹೇಳಿಕೆಗಳಂತಹ ಅಕ್ರಮಗಳನ್ನು ನ್ಯಾಯಾಲಯಗಳು ಬಹಿರಂಗಗೊಳಿಸಿವೆ. ನ್ಯಾಯಾಲಯಗಳ ಆದೇಶಗಳಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ತನಿಖಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ತೀವ್ರ ಹಾನಿಯನ್ನುಂಟು ಮಾಡಿವೆ.
ಪೋಲಿಸರ ಸೂಚನೆ/ಆದೇಶದ ಮೇರೆಗೆ ಬರೆಯಲಾದ ದೂರುಗಳು; ‘ಕಾಲ್ಪನಿಕ ಸಾಕ್ಷಿಗಳು’; ಕಲ್ಪಿತ ಸಾಕ್ಷ್ಯಗಳು; ತನಿಖಾಧಿಕಾರಿಯಿಂದ ‘ಹೆಚ್ಚುವರಿ ಅಂಶಗಳು’ ಸೇರಿಸಲ್ಪಟ್ಟ ಸಾಕ್ಷಿಗಳ ಹೇಳಿಕೆಗಳು; ಘಟನಾ ಸ್ಥಳದಲ್ಲಿ ಆರೋಪಿಯನ್ನು ನೋಡಿರುವುದಾಗಿ ಪೋಲಿಸ್ ಕಾನ್‌ಸ್ಟೇಬಲ್ ಓರ್ವನ ‘ಕೃತಕ ಪ್ರತಿಪಾದನೆ; ‘ಅನುಮಾನಗಳ ಮೋಡ ಕವಿದಿರುವ’ ಆರೋಪಿಗಳ ಗುರುತಿಸುವಿಕೆ; ಮತ್ತು ಆರೋಪಿಗಳ ಮೇಲೆ ‘ಹೊರಿಸಲಾದ’ ಪ್ರಕರಣಗಳು. ಇದು ಹೀಗೆಯೇ ಮುಂದುವರಿಯುತ್ತದೆ.
ದಂಗೆ, ಬೆಂಕಿ ಹಚ್ಚುವಿಕೆ ಮತ್ತು ಕಾನೂನುಬಾಹಿರವಾಗಿ ಗುಂಪು ಸೇರುವಿಕೆ ಆರೋಪಗಳಲ್ಲಿ ಪೋಲಿಸರು ದಾಖಲಿಸಿದ 695 ಪ್ರಕರಣಗಳ ಪೈಕಿ ಆಗಸ್ಟ್ 2025ರ ಅಂತ್ಯದವರೆಗೆ 116ರಲ್ಲಿ ತೀರ್ಪುಗಳನ್ನು ಪ್ರಕಟಿಸಲಾಗಿದೆ ಎನ್ನುವುದನ್ನು ದಾಖಲೆಗಳು ತೋರಿಸಿವೆ. ಈ ಪೈಕಿ 97 ಪ್ರಕರಣಗಳು ಖುಲಾಸೆಯಲ್ಲಿ ಅಂತ್ಯಗೊಂಡಿದ್ದರೆ 19 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಇದನ್ನು ಪರಿಗಣಿಸಿ:
►ಕನಿಷ್ಠ 12 ಪ್ರಕರಣಗಳಲ್ಲಿ ಪೋಲಿಸರು ‘ಕೃತಕ ’ಸಾಕ್ಷಿಗಳನ್ನು ಅಥವಾ ‘ಕಲ್ಪಿತ’ ಎಂದು ತೋರುವ ಪುರಾವೆಗಳನ್ನು ಪೋಲಿಸರು ಪ್ರಸ್ತುತ ಪಡಿಸಿದ್ದನ್ನು ನ್ಯಾಯಾಲಯಗಳು ಕಂಡುಕೊಂಡಿವೆ.
►ಕನಿಷ್ಠ ಎರಡು ಪ್ರಕರಣಗಳಲ್ಲಿ ಸಾಕ್ಷಿಗಳು ತಮ್ಮ ಹೇಳಿಕೆಗಳು ತಮ್ಮ ಸ್ವಂತದ್ದಲ್ಲ, ಬದಲಾಗಿ ಪೋಲಿಸರು ತಮ್ಮಿಂದ ಹಾಗೆ ಹೇಳಿಸಿದ್ದರು ಎಂದು ನ್ಯಾಯಾಲಯಗಳಲ್ಲಿ ಸಾಕ್ಷ್ಯ ನುಡಿದಿದ್ದಾರೆ.
►ಇತರ ಹಲವಾರು ಪ್ರಕರಣಗಳಲ್ಲಿ ತನಿಖೆಗಳು ನ್ಯಾಯವನ್ನು ಖಚಿತಪಡಿಸುವ ಬದಲು ಪ್ರಕರಣವನ್ನು ಸರಳವಾಗಿ ಮುಕ್ತಾಯಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ನ್ಯಾಯಾಲಯಗಳು ತೀರ್ಮಾನಿಸಿವೆ. ಒಂದು ಪ್ರಕರಣದಲ್ಲಿ ದಾಖಲೆಗಳ ತಿರುಚುವಿಕೆಯನ್ನೂ ನ್ಯಾಯಾಧೀಶರೋರ್ವರು ಬೆಟ್ಟು ಮಾಡಿದ್ದಾರೆ.
ನ್ಯೂಉಸ್ಮಾನ್‌ಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯ ಆರು ಆರೋಪಿಗಳನ್ನು ಕಳೆದ ತಿಂಗಳು ಖುಲಾಸೆಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ ಸಿಂಗ್ ಅವರು, ತನಿಖಾಧಿಕಾರಿ ಸುಳ್ಳು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಮತ್ತು ಇದು ಆರೋಪಿಗಳ ಹಕ್ಕುಗಳ ಗಂಭೀರ ಉಲ್ಲಂಘನೆಗೆ ಕಾರಣವಾಗಿದೆ. ಬಹುಶಃ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ತೋರಿಸಲು ಮಾತ್ರ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಇಂತಹ ಪ್ರಕರಣಗಳು ತನಿಖಾ ಪ್ರಕ್ರಿಯೆಯಲ್ಲಿ ಮತ್ತು ಕಾನೂನಿನ ಆಡಳಿತದಲ್ಲಿ ಜನರ ವಿಶ್ವಾಸವನ್ನು ಕುಗ್ಗಿಸುತ್ತವೆ ಎಂದು ತನ್ನ ಆದೇಶದಲ್ಲಿ ಚಾಟಿ ಬೀಸಿದ್ದಾರೆ.
ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆಗಳ ಸಂದರ್ಭದಲ್ಲಿ ಸಂಭವಿಸಿದ್ದ ಗಲಭೆಗಳಲ್ಲಿ ಕನಿಷ್ಠ 53 ಜನರು ಮೃತಪಟ್ಟಿದ್ದರು ಮತ್ತು 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ನ್ಯಾಯಾಲಯ ದಾಖಲೆಗಳ ಪ್ರಕಾರ ಸುಳ್ಳುಸಾಕ್ಷ್ಯಗಳನ್ನು ಸೃಷ್ಟಿಸಿದ್ದ 17 ಪ್ರಕರಣಗಳನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಈ ಎಲ್ಲ ಪ್ರಕರಣಗಳಲ್ಲಿ ಕರ್ಕರಡೂಮಾ ನ್ಯಾಯಾಲಯಗಳ ನ್ಯಾಯಾಧೀಶರು ವ್ಯಾಪಕ ಅಕ್ರಮಗಳನ್ನು ಎತ್ತಿ ತೋರಿಸಿದ್ದಾರೆ.