ಪಕ್ಷದ ನೂತನ ಮುಖ್ಯಸ್ಥನಿಗಾಗಿ ಬಿಜೆಪಿಯಲ್ಲಿ ಬಿರುಸುಗೊಂಡ ಚಟುವಟಿಕೆ; ಶೀಘ್ರ ನಿರ್ಧಾರ ಸಾಧ್ಯತೆ
100 ನಾಯಕರನ್ನು ಸಂಪರ್ಕಿಸಲಾಗಿದೆ ಎಂದ ಮೂಲಗಳು
PC : NDTV
ಹೊಸದಿಲ್ಲಿ: ಬಿಹಾರ ಚುನಾವಣೆ ಘೋಷಣೆಗೂ ಮುನ್ನ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯ ಕ್ಷರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪಕ್ಷವು ಹೊಸ ನಾಯಕತ್ವದಲ್ಲಿ ಬಿಹಾರ ಚುನಾವಣೆಯನ್ನು ಎದುರಿಸಲು ಮುಂದಾಗಿದ್ದರೂ, ವಿಳಂಬಕ್ಕೆ ವಿವಿಧ ಕಾರಣಗಳಿವೆ ಎಂದು ಮೂಲಗಳು ತಿಳಿಸಿವೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.
ವ್ಯಾಪಕ ಸಮಾಲೋಚನಾ ಪ್ರಕ್ರಿಯೆ ನಡೆಸುತ್ತಿರುವುದರಿಂದ, ಈ ವಿಳಂಬವಾಗಿದೆ ಎನ್ನಲಾಗಿದೆ.
ಬಿಜೆಪಿಯ ಹಿರಿಯ ನಾಯಕರು ಹಾಗೂ ಅದರ ಸೈದ್ಧಾಂತಿಕ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು ಬಿಜೆಪಿಯ ಮುಖ್ಯಸ್ಥ ಹುದ್ದೆಗೆ ಹೆಸರು ಸೂಚಿಸುವಂತೆ 100 ಮಂದಿ ಹಿರಿಯ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮಾತುಕತೆಗಳನ್ನು ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಕೇಂದ್ರ ಸಚಿವರಲ್ಲದೆ ಬಿಜೆಪಿ ಅಥವಾ ಆರೆಸ್ಸೆಸ್ ನೊಂದಿಗೆ ಸಂಪರ್ಕ ಹೊಂದಿರುವ ಸಾಂವಿಧಾನಿಕ ಹುದ್ದೆಯಲ್ಲಿರುವವರೊಂದಿಗೂ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ. ಸೆಪ್ಟೆಂಬರ್ 9ರಂದು ಉಪ ರಾಷ್ಟ್ರಪತಿ ಚುನಾವಣೆ ನಡೆಯಲಿರುವುದು ವಿಳಂಬಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.