ಕೇರಳ | ಆರೆಸ್ಸೆಸ್ ನ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನಕ್ಕೆ ಒತ್ತಾಯ; ಪರಿಸರ ದಿನಾಚರಣೆ ಕಾರ್ಯಕ್ರಮ ಸ್ಥಳಾಂತರ
Photo | Special Arrangement \ newindianexpress.com
ತಿರುವನಂತಪುರ : ಆರೆಸ್ಸೆಸ್ ಶಾಖೆಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸುವಂತೆ ರಾಜಭವನದ ಅಧಿಕಾರಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೇರಳ ಕೃಷಿ ಇಲಾಖೆ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ರಾಜ್ಯ ಸಚಿವಾಲಯದ ಒಳಗಿರುವ ದರ್ಬಾರ್ ಹಾಲ್ ಗೆ ಸ್ಥಳಾಂತರಿಸಿತು.
ರಾಜ್ಯ ಸರಕಾರ ಭಾರತ ಮಾತೆಗೆ ಗೌರವ ನೀಡುತ್ತದೆ. ಆದರೆ, ಆರೆಸ್ಸೆಸ್ ಶಾಖೆಗಳಲ್ಲಿ ಸಾಮಾನ್ಯವಾಗಿ ಬಳಸುವ ಭಾವಚಿತ್ರವನ್ನು ರಾಜಭವನದಲ್ಲಿ ಅಧಿಕೃತ ಕಾರ್ಯಕ್ರಮದಲ್ಲಿ ಬಳಸುವುದು ಅಸಾಂವಿಧಾನಿಕ ಎಂದು ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ಹೇಳಿದ್ದಾರೆ.
‘‘ಕಾರ್ಯಕ್ರಮದ ಕಾರ್ಯಸೂಚಿಯನ್ನು ರಾಜಭವನ ಸಿದ್ಧಪಡಿಸಿತು. ನಾವು ಅದನ್ನು ಸ್ವೀಕರಿಸಿದ್ದೆವು. ಆದರೆ, ನಿನ್ನೆ ಸಂಜೆ ಅವರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸುವ ಹೊಸ ಕಾರ್ಯಕ್ರಮವನ್ನು ಸೇರಿಸಿದರು. ಇದು ಸಂವಿಧಾನದ ನಿಯಮಗಳಿಗೆ ವಿರುದ್ಧವಾಗಿದೆ. ಈ ಭಾವಚಿತ್ರವನ್ನು ಆರೆಸ್ಸೆಸ್ ವ್ಯಾಪಕವಾಗಿ ಬಳಸುತ್ತದೆ’’ ಎಂದು ಪ್ರಸಾದ್ ಹೇಳಿದ್ದಾರೆ.
ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲರು ಇರುವ ರಾಜ ಭವನದಲ್ಲಿ ನಿರ್ದಿಷ್ಟ ಸಂಘಟನೆ ವಿಶೇಷವಾಗಿ ಬಳಸುವ ಭಾವಚಿತ್ರವನ್ನು ಬಳಸಬಾರದು. ಆದುದರಿಂದ ನಾವು ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದೆವು. ಕಾರ್ಯಕ್ರಮವನ್ನು ಸಚಿವಾಲಯದ ಒಳಗಿರುವ ದರ್ಬಾರ್ ಹಾಲ್ ನಲ್ಲಿ ನಡೆಸಿದೆವು ಎಂದು ಪ್ರಸಾದ್ ಹೇಳಿದ್ದಾರೆ.