×
Ad

ಯೆಮೆನ್‌ನಲ್ಲಿ ಗಲ್ಲುಶಿಕ್ಷೆ ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷಾ ರಕ್ಷಣೆಗೆ ಅಂತಿಮ ಯತ್ನ: ಸೋಮವಾರ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ವಿಚಾರಣೆ

Update: 2025-07-13 20:19 IST

Photo | indianexpress

ಹೊಸದಿಲ್ಲಿ: ಯೆಮನ್‌ ನಲ್ಲಿ ಕೊಲೆ ಆರೋಪದಲ್ಲಿ ಜು.16ರಂದು ಗಲ್ಲಿಗೇರಿಸಲ್ಪಡುವ ಸಾಧ್ಯತೆಯಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾರನ್ನು ಉಳಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಡೆಸಲಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಅರ್ಜಿಯ ವಿಚಾರಣೆಯನ್ನು ನಡೆಸುವ ಸಾಧ್ಯತೆಯಿದೆ.

ಜು.10ರಂದು ತುರ್ತು ವಿಚಾರಣೆಗಾಗಿ ವಿಷಯವನ್ನು ಉಲ್ಲೇಖಿಸಿದ್ದ ವಕೀಲ ಸುಭಾಷಚಂದ್ರನ್ ಕೆ.ಆರ್.ಅವರು,ಆದಷ್ಟು ಶೀಘ್ರ ರಾಜತಾಂತ್ರಿಕ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.

ಶರಿಯಾ ಕಾನೂನಿನಡಿ ಮೃತನ ಕುಟುಂಬಕ್ಕೆ ‘ಬ್ಲಡ್ ಮನಿ(ಕೊಲೆಗೆ ಪರಿಹಾರ)’ ಪಾವತಿಸುವುದನ್ನು ಪರಿಶೀಲಿಸಬಹುದು ಎಂದು ಅವರು ನಿವೇದಿಸಿಕೊಂಡಿದ್ದರು. ಪರಿಹಾರವನ್ನು ಪಾವತಿಸಿದರೆ ಮೃತನ ಕುಟುಂಬವು ನಿಮಿಷಾ ಪ್ರಿಯಾರನ್ನು ಕ್ಷಮಿಸಲು ಒಪ್ಪಿಕೊಳ್ಳಬಹುದು ಎಂದು ಅವರು ಹೇಳಿದ್ದರು.

ಅರ್ಜಿಯನ್ನು ಅಟಾರ್ನಿ ಜನರಲ್‌ಗೆ ತಲುಪಿಸುವಂತೆ ಸೂಚಿಸಿದ್ದ ಪೀಠವು, ಪ್ರಕರಣದಲ್ಲಿ ಅವರ ನೆರವು ಕೋರಿತ್ತು.

ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ನಿಮಿಷಾ ಪ್ರಿಯಾ 2017ರಲ್ಲಿ ತನ್ನ ಯೆಮೆನ್ ವ್ಯವಹಾರ ಪಾಲುದಾರನನ್ನು ಕೊಲೆ ಮಾಡಿದ್ದಕ್ಕಾಗಿ 2020ರಲ್ಲಿ ಮರಣದಂಡನೆಗೆ ಗುರಿಯಾಗಿದ್ದಾರೆ. ಅವರ ಅಂತಿಮ ಮೇಲ್ಮನವಿಯನ್ನು 2023ರಲ್ಲಿ ತಿರಸ್ಕರಿಸಲಾಗಿತ್ತು. ಆಕೆ ಪ್ರಸ್ತುತ ಯೆಮೆನ್ ರಾಜಧಾನಿ ಸನಾದಲ್ಲಿಯ ಜೈಲಿನಲ್ಲಿದ್ದಾರೆ.

ನಿಮಿಷಾ ಪ್ರಿಯಾಗೆ ಕಾನೂನು ಬೆಂಬಲ ಒದಗಿಸುತ್ತಿರುವ ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್ ಈ ಅರ್ಜಿಯನ್ನು ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News