ಕೇರಳದಲ್ಲಿ ಎರಡು ಶಂಕಿತ ನಿಫಾ ಪ್ರಕರಣಗಳು ಪತ್ತೆ: 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ
ಸಾಂದರ್ಭಿಕ ಚಿತ್ರ (PTI)
ತಿರುವನಂತಪುರಂ: ಇಬ್ಬರು ರೋಗಿಗಳಲ್ಲಿ ಶಂಕಿತ ನಿಫಾ ವೈರಸ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ, ಮೂರು ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಕೋಝಿಕ್ಕೋಡ್ ಹಾಗೂ ಮಲಪ್ಪುರಂನ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದೈನಂದಿನ ಪರೀಕ್ಷೆಗಳನ್ನು ನಡೆಸುವಾಗ ಈ ಸಂಭವನೀಯ ಪ್ರಕರಣಗಳು ಪತ್ತೆಯಾಗಿದ್ದು, ಈ ಕುರಿತು ಕೋಝಿಕ್ಕೋಡ್, ಮಲಪ್ಪುರಂ ಹಾಗೂ ಪಾಲಕ್ಕಾಡ್ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ನೀಡಲಾಗಿದೆ.
ಸೋಂಕನ್ನು ಖಚಿತಪಡಿಸಿಕೊಳ್ಳಲು ರೋಗಿಗಳ ರಕ್ತದ ಮಾದರಿಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿದೆ ಎಂದು ಶುಕ್ರವಾರ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿಯ ಮೌಲ್ಯಮಾಪನ ನಡೆಸಲು ತುರ್ತು ಸಭೆಯನ್ನು ನಡೆಸಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಬಾಧಿತ ಜಿಲ್ಲೆಗಳಲ್ಲಿ ಶಿಷ್ಟಾಚಾರಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
“ನಾವು ನಿಫಾ ಸೋಂಕಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮಗಳನ್ನು ಬಲಪಡಿಸಿದ್ದೇವೆ’” ಎಂದು ಅವರು ತಿಳಿಸಿದ್ದಾರೆ.
“ಸಂಪರ್ಕಿತರ ಪತ್ತೆ, ರೋಗಲಕ್ಷಣಗಳ ಮೇಲೆ ನಿಗಾವಣೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತಿ ಜಿಲ್ಲೆಯಲ್ಲೂ ತಲಾ 26 ವಿಶೇಷ ತಂಡಗಳನ್ನು ರಚಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ನಿಫಾ ಸೋಂಕಿನ ಬಗ್ಗೆ ಜಾಗೃತರಾಗಿರುವಂತೆ ಜನರಿಗೆ ಸಲಹೆ ನೀಡಿರುವ ಆರೋಗ್ಯ ಇಲಾಖೆ, ಸಾರ್ವಜನಿಕರಿಗೆ ನೆರವು ಒದಗಿಸಲು ಸಹಾಯವಾಣಿಗಳನ್ನೂ ಸ್ಥಾಪಿಸಿದೆ. ಎಲ್ಲ ಮೂರು ಜಿಲ್ಲೆಗಳಲ್ಲೂ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ನಿಫಾ ಸೋಂಕಿನ ರೋಗ ಲಕ್ಷಣಗಳು ಹಾಗೂ ಸೋಂಕು ನಿರೋಧಕ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಧ್ವನಿವರ್ಧಕಗಳು ಹಾಗೂ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ.
ನಿಫಾ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯ ಮೇಲೆ ನಿಗಾ ವಹಿಸಲು ಶುಕ್ರವಾರ ಸಂಜೆ ಉನ್ನತ ಮಟ್ಟದ ಪರಾಮರ್ಶೆ ಸಭೆಯನ್ನು ಆಯೋಜಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕೇರಳದಲ್ಲಿ 2018 ಹಾಗೂ 2021ರಲ್ಲೂ ನಿಫಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದವು. ಈ ವೇಳೆ ಸಾಕಷ್ಟು ಸಾವುನೋವುಗಳು ಸಂಭವಿಸಿ, ಬೃಹತ್ ಪ್ರಮಾಣದ ಸೋಂಕು ನಿರ್ಬಂಧ ಪ್ರಯತ್ನಗಳೂ ಜಾರಿಗೊಂಡಿದ್ದವು.