ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷರಿಗೆ ಗೌರವಾರ್ಥ ಇಂದು ಭಾರತದಲ್ಲಿ ಶೋಕಾಚರಣೆ
Update: 2024-05-21 10:37 IST
Screengrab | PC : ANI
ಹೊಸದಿಲ್ಲಿ: ರವಿವಾರ ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರ ಗೌರವಾರ್ಥ ಇಂದು ಭಾರತ ಒಂದು ದಿನದ ರಾಷ್ಟ್ರೀಯ ಶೋಕವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ ಹಾಗೂ ಈ ಮೂಲಕ ಅಗಲಿದ ಇರಾನ್ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಗಿದೆ.
ರವಿವಾರ ನಡೆದ ದುರಂತದಲ್ಲಿ ಇರಾನ್ ಅಧ್ಯಕ್ಷರು ಮಾತ್ರವಲ್ಲದೆ ದೇಶದ ವಿದೇಶ ಸಚಿವ ಹುಸೈನ್ ಆಮಿರ್ ಅಬ್ದುಲಹಿಯಾನ್ ಮತ್ತು ಆರು ಮಂದಿ ಇತರರು ಮೃತಪಟ್ಟಿದ್ದರು.
ಅಧ್ಯಕ್ಷ ಇಬ್ರಾಹಿಂ ರಯೀಸಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇರಾನ್ ಸಂವಿಧಾನದಂತೆ ದೇಶದ ಮೊದಲ ಉಪಾಧ್ಯಕ್ಷರಾಗಿರುವ ಮುಹಮ್ಮದ್ ಮುಖ್ಬಿರ್ (69) ಅವರು ಹಂಗಾಮಿ ಅಧ್ಯಕ್ಷರ ಹುದ್ದೆಗೆ ಏರಲಿದ್ದಾರೆ.