ಅಪಹರಣ ಆರೋಪದ ನಡುವೆಯೇ ನೈನಿತಾಲ್ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ ಬಿಜೆಪಿ!
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಅಪಹರಣ ಆರೋಪದ ನಡುವೆಯೇ ನೈನಿತಾಲ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಚುನಾವಣೆಯಲ್ಲಿ ಬಿಜೆಪಿಯ ದೀಪಾ ದರ್ಮ್ವಾಲ್ ಅಧ್ಯಕ್ಷರಾಗಿ ಚುನಾಯಿತರಾದರೆ, ಅವರ ಪಕ್ಷದ ಸಹೋದ್ಯೋಗಿ ದೇವಕಿ ಬಿಷ್ಟ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾ ಕಚೇರಿಯ ಪ್ರಕಾರ, 27 ಮಂದಿ ಅರ್ಹ ಸದಸ್ಯರ ಪೈಕಿ ಕೇವಲ 22 ಮಂದಿ ಸದಸ್ಯರು ಮಾತ್ರ ತಮ್ಮ ಮತ ಚಲಾಯಿಸಿದ್ದಾರೆ. ದೀಪಾ ದರ್ಮ್ವಾಲ್ ಅವರು ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಪುಷ್ಪಾ ನೇಗಿ ಎದುರು 11 ಮತಗಳನ್ನು ಗಳಿಸಿದರು. ಪರಾಜಿತ ಪುಷ್ಪಾ ನೇಗಿ 10 ಮತಗಳನ್ನು ಪಡೆಯುವ ಮೂಲಕ, ಕೇವಲ ಒಂದು ಮತದ ಅಂತರದಲ್ಲಿ ಪರಾಭವಗೊಂಡರು. ಮತ್ತೊಂದು ಮತವನ್ನು ಅನೂರ್ಜಿತವೆಂದು ಘೋಷಿಸಲಾಯಿತು.
ಆದರೆ, ಈ ಚುನಾವಣೆಯ ಬೆನ್ನಿಗೇ, ಚುನಾವಣಾ ಅಕ್ರಮದ ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷ, ತನ್ನ ಪಕ್ಷದ ಐವರು ಸದಸ್ಯರು ಮತದಾನ ಮಾಡದಂತೆ ತಡೆಯಲು, ಅವರನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದೆ.
ಈ ಸಂಬಂಧ ಕಾನೂನು ಹೋರಾಟ ನಡೆಯುತ್ತಿರುವುದರಿಂದ, ಹೆಸರೇಳಲಿಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು, “ನಮ್ಮ ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳದಂತೆ ಮಾಡಲು ಅವರನ್ನು ಅಪಹರಣ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
ಈ ನಾಪತ್ತೆ ಕುರಿತು ಕಾಂಗ್ರೆಸ್ ನಾಯಕರು ನೈನಿತಾಲ್ ಹೈಕೋರ್ಟ್ ಮೊರೆ ಹೋಗಿದ್ದಾರೆ.