×
Ad

ರೂ. 30,000 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟ ನಿತೀಶ್ ಕುಮಾರ್ | ಪ್ರಧಾನಿ ಮೋದಿಗೆ ಮೊದಲ ಅಗ್ನಿ ಪರೀಕ್ಷೆ

Update: 2024-07-09 21:22 IST

ನರೇಂದ್ರ ಮೋದಿ | PC : PTI  

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೆಯ ಅತಿ ದೊಡ್ಡ ಪಕ್ಷವಾಗಿರುವ ಸಂಯುಕ್ತ ಜನತಾ ದಳದ ಮುಖ್ಯಸ್ಥ ನಿತೀಶ್ ಕುಮಾರ್, ಬಿಹಾರದಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರದ ಬಜೆಟ್‌‌ನಿಂದ ರೂ. 30,000 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಮೈತ್ರಿ ಸರಕಾರ ಎದುರಿಸಲಿರುವ ಪ್ರಪ್ರಥಮ ಅಗ್ನಿ ಪರೀಕ್ಷೆ ಇದೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಬಿಹಾರದಿಂದ ಈ ಬೇಡಿಕೆಯನ್ನು ಸ್ವೀಕರಿಸಲಾಗಿದ್ದು, ಈ ವರ್ಷದ ಬಜೆಟ್‌ನಲ್ಲಿ ಬಿಹಾರಕ್ಕೆ ಎಷ್ಟು ಅನುದಾನ ನಿಗದಿಯಾಗಲಿದೆ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ ಎಂದು business-standard.com ವರದಿ ಮಾಡಿದೆ.

ಎನ್‌ಡಿಎ ಮೈತ್ರಿ ಸರಕಾರದ ಎರಡನೆ ಅತಿ ದೊಡ್ಡ ಪಕ್ಷವಾಗಿರುವ ತೆಲುಗು ದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ರಾಜ್ಯಕ್ಕೆ ಮುಂದಿನ ಕೆಲ ವರ್ಷಗಳಲ್ಲಿ 12 ಬಿಲಿಯನ್ ಡಾಲರ್ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು Bloomberg News ಸುದ್ದಿ ಸಂಸ್ಥೆ ಕಳೆದ ವಾರ ವರದಿ ಮಾಡಿದೆ.

ಈ ಎರಡು ಮೈತ್ರಿಪಕ್ಷಗಳ ಒಟ್ಟು ಬೇಡಿಕೆಯ ಪ್ರಮಾಣವು ವಾರ್ಷಿಕ ಆಹಾರ ಸಬ್ಸಿಡಿಗೆ ಕೇಂದ್ರ ಸರಕಾರವು ವಿನಿಯೋಗಿಸಲಾಗುತ್ತಿರುವ ರೂ.‌2.2 ಟ್ರಿಲಿಯನ್ ಮೊತ್ತದ ಅರ್ಧದಷ್ಟಾಗಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸರಕಾರದ ಸಾಲವನ್ನು ತಗ್ಗಿಸಲು ಹೊಂದಿರುವ ಗುರಿ ಹಾಗೂ ಸರಕಾರದ ಮಿತ್ರ ಪಕ್ಷಗಳ ಬೇಡಿಕೆಗಳನ್ನು ಈಡೇರಿಸಬೇಕಾದ ಅಗತ್ಯದ ನಡುವೆ ಸಮತೋಲನ ಸಾಧಿಸುವ ದಿಕ್ಕಿನಲ್ಲಿ ಅನುಭವಿಸುತ್ತಿರುವ ವಿತ್ತೀಯ ಒತ್ತಡವನ್ನು ಇದು ಸೂಚಿಸುತ್ತಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರೀಯ ಬ್ಯಾಂಕ್ ಈ ವರ್ಷ ದಾಖಲೆ ಪ್ರಮಾಣದ ಡಿವಿಡೆಂಡ್ ನೀಡಿರುವುದರಿಂದ ಹಾಗೂ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿಯ ಬಜೆಟ್‌ ಮಂಡನೆಯಲ್ಲಿ ಕೊಂಚ ಮಟ್ಟಿಗೆ ಧಾರಾಳವಾಗುವ ಅವಕಾಶ ದೊರೆಯಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News